ಹದಿ ವಯಸ್ಕರ ಪೋಷಕತ್ವ - ೨

- ಆರ್ ಶ್ರೀನಾಗೇಶ್ 

"ಎದುರುತ್ತರ ತುಂಬಾ ಕೊಡ್ತಾನೆ, ಅಥವಾ ಕೊಡ್ತಾಳೆ." - ಇದು ಅನೇಕ ಪೋಷಕರು ಹೇಳುವ ದೂರು. ಮಕ್ಕಳು ಎದುರುತ್ತರ ಯಾಕೆ ಕೊಡ್ತಾರೆ?

ಒಂದು, ಅವರು ಬೆಳೆಯುತ್ತಿದ್ದಾರೆ ಎಂಬುದನ್ನು ಗಮನಿಸದೆ ಅವರನ್ನು ಎಳೆಯ ಮಕ್ಕಳ ಹಾಗೆ ನಡೆಸಿಕೊಳ್ಳುವುದರಿಂದ  ಅವರಿಗೆ ಸಿಟ್ಟು ಬಂದಿರಬಹುದು.

ಎರಡು, ಮೇಲಿಂದ ಮೇಲೆ ಅವರು ಕೇಳಿದ್ದು ಸಿಗದೇ ಹೋದಾಗ ಒಂದು ಹಂತದಲ್ಲಿ ಅವರಿಗೆ ಸಿಟ್ಟು ಬರಬಹುದು.

ಮೂರು, ಅವರು ಮಗುವಾಗಿದ್ದಾಗ ಅವರು ತಮ್ಮ ಮುದ್ದು ನುಡಿಗಳಲ್ಲಿ ದೊಡ್ಡವರನ್ನು ಅನುಕರಣೆ ಮಾಡಿ ಬೈಯುತ್ತಿದ್ದುದನ್ನು ಮನೆಯ ಜನ ಮೆಚ್ಚಿಕೊಂಡು ಎಷ್ಟು ಚೆನ್ನಾಗಿ ಒಳ್ಳೇ ದೊಡ್ಡವರ ತರಹಾನೆ ಬೈತಾನೆ ಗೊತ್ತ? ಅಂತ ಬಂದವರ ಮುಂದೆ ಪ್ರಶಂಸಿಸುತ್ತಾ ಹೋದರೆ ಅದು ಅಂಗೀಕೃತ ನಡವಳಿಕೆ ಎಂದು ಮಗು ಅದನ್ನೇ ಪ್ರವೃತ್ತಿಯನ್ನಗಿ ರೂಢಿಸಿಕೊಂಡಿರಬಹುದು.

ನಾಲ್ಕು, ತನ್ನ ಗೆಳೆಯ ಅಥವ ಗೆಳತಿ ತನ್ನ ಮನೆಯಲ್ಲಿ ಆಡುವುದನ್ನು ನೋಡಿ ಕಲಿತಿರಬಹುದು.

ಇದಕ್ಕೆ ಪರಿಹಾರವೇನು?

ಮೊಟ್ಟಮೊದಲನೆಯದಾಗಿ ಮಗು ಎದುರುತ್ತರ ಕೊಡುವುದು ನಮಗೆ ಒಪ್ಪಿಗೆ ಆಗುವುದಿಲ್ಲ ಎಂದು ಸ್ಪಷ್ಟ ಪಡಿಸಬೇಕು.
ಆ ನಂತರ ಮಗು ಏನನ್ನಾದರೂ ಕೇಳಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಯೋಚಿಸಿ. ಬೇಡ ಎಂದೋ ಅಥವಾ ಇಲ್ಲ ಎಂದೊ ನಿಮ್ಮ ಉತ್ತರ ಶುರುವಾಗುವುದಾದರೆ ನೀವು ನಕಾರಾತ್ಮಕ ನಡವಳಿಕೆ ತೋರಿಸುತ್ತಿದ್ದೀರಿ ಎಂದು ಅರ್ಥ. ನಿಮ್ಮ ಪ್ರತಿಕ್ರಿಯೆಯಲ್ಲಿ ಬದಲಾವಣೆ ಅಗತ್ಯವಿದೆ ಎಂಬುದನ್ನು ಮನಗಂಡು ಅದನ್ನು ನೀವು ಮಾಡಿಕೊಳ್ಳಬೇಕು.

ನಿಮ್ಮ ಮಗುವನ್ನು ತುಂಬಾ ಮುದ್ದು ಮಾಡಿ ಬೆಳೆಸಿ ಈಗ ಅದರ ಮಾತು ಸಹನೀಯ ಅಲ್ಲ ಎನಿಸುತ್ತಿದ್ದರೆ ಮುದ್ದು ಮಾಡುವುದನ್ನು ನಿಲ್ಲಿಸಬೇಕು. ಅದನ್ನು ಸ್ಪಷ್ಟಪಡಿಸಬೇಕು. ಮಗು ಎಂದು ಮುದ್ದು ಮಾಡಿದ್ದಾಯಿತು. ಈಗ ಜವಾಬ್ದಾರಿಯುತ ನಡವಳಿಕೆಯನ್ನು ನಿರೀಕ್ಷಿಸುತ್ತೀರಿ ಎಂಬುದನ್ನು ತಿಳಿಯಪಡಿಸಬೇಕು.

ಮಗುವಿನ ಮನಸ್ಸಿನಲ್ಲಿ ಇರುವ ಆತಂಕಗಳನ್ನು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.ಉತ್ತಮ ನಡವಳಿಕೆ ತೋರಿಸದಿದ್ದರೆ ಮುದ್ದು ಮಾಡುವುದಿಲ್ಲ ಎಂದು ಗೊತ್ತುಮಾಡಬೇಕು. ಕೇಳಿದ್ದುದನ್ನೆಲ್ಲ ತೆಗೆದುಕೊಡುವುದಿಲ್ಲ ಎಂದೂ ಅರ್ಥಮಾಡಿಸಬೇಕು.

ಬದಲಾವಣೆ ಇಬ್ಬರಲ್ಲಿಯೂ ಅಗಬೇಕು. ಮಕ್ಕಳು ಬದಲಾಗಬೇಕು, ನಾವು ಆಗಲು ತಯಾರಿಲ್ಲ ಎಂದರೆ ಇದು ಅವರಿಗೆ ಒಪ್ಪಿಗೆಯಾಗುವುದಿಲ್ಲ.

ಬೆಳೆಯುತ್ತಿರುವ ಮಕ್ಕಳನ್ನು ಮಿತ್ರರಂತೆ ಕಾಣಬೇಕು ಎಂದು ಧರ್ಮ ಶಾಸ್ತ್ರ ಹೇಳುತ್ತದೆ. ಅದರ ಅರ್ಥ ಎಂದರೆ ಪೋಷಕರು ಮಕ್ಕಳಿಗೆ ಮಿತ್ರರಾಗಬೇಕು.  ಹದಿ ವಯಸ್ಕರ ವೈಯುಕ್ತಿಕ ಆಸೆ ಆಕಾಂಕ್ಷೆಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಕೊಡಬೇಕು. ಮೌಲ್ಯಾಧಾರಿತ ಜೀವನ ನಡೆಸುವುದನ್ನು ಹೇಳಿಕೊಡಬೇಕು. ಅವರು ಪೋಷಕರೊಟ್ಟಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತಹ ವಾತಾವರಣ ಮನೆಯಲ್ಲಿ ನಿರ್ಮಿಸಬೇಕು.

ಆಗ ಹದಿ ವಯಸ್ಕರೊಡನೆ ಸಂಬಂಧಗಳು ಮಧುರವಾಗಿರುತ್ತವೆ.

(ಮುಂದಿನ ವಿಷಯದೊಂದಿಗೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ)

 

Syndicate

Syndicate content