ಮಂಗಳೂರು ಸಾಹೇಬ್ ಕಮ್ಯೂನಿಟಿ ವತಿಯಿಂದ ಇರ್ಶಾದ್ ಮೂಡಬಿದ್ರಿಯವರಿಗೆ ಸನ್ಮಾನ
710_1.jpg


ಯು ಎ ಇ ಯಲ್ಲಿ ಕರ್ನಾಟಕದ ವಿವಿಧ ಸಂಘ ಸಂಸ್ಥೆಗಳು ಚಾಲನೆಯಲ್ಲಿದ್ದರೂ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವೇದಿಕೆಯೊಂದು ಕಾಣಿಸಿಕೊಂಡದ್ದೇ ಅಪರೂಪ. ಈ ಕೊರತೆ ನಿವಾರಿಸಲು ಅನೇಕ ಮಂದಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ.

ಈ ನಡುವೆ ಜಿಲ್ಲೆಯ ಕೆಲವು ಉತ್ಸಾಹಿಗಳು ಈ ಸಾಧನೆ ಮಾಡಿಯೇ ತೀರಬೇಕೆಂಬ ಹಠತೊಟ್ಟು "ಮಂಗಳೂರು ಸಾಹೇಬ್ ಕಮ್ಯೂನಿಟಿ" ಹುಟ್ಟು ಹಾಕಿದರು. ಇವರಲ್ಲಿ ಸುಹೈಲ್ ಕುದ್ರೋಳಿ, ಸಿದ್ದೀಕ್, ಸಿರಾಜ್ ಅಹ್ಮದ್, ನೂರ್ ಅಶ್ಫಕ್, ಬರ್ಕತ್ ಅಲಿ, ಎಂ ಎಸ್ ಅಲ್ತಾಫ್, ಅಜೀ ಮುಲ್ಲಾ ಅಹ್ಮದ್ ಮುಂತಾದವರು ಪ್ರಮುಖರು. ದ ಕ ಜಿಲ್ಲೆಯ ಸಮುದಾಯದ ಪ್ರಮುಖ ಉದ್ದಿಮೆದಾರರನ್ನು ಸಂಪರ್ಕಿಸಿದಾಗ ಆರ್ಥಿಕ ಬೆಂಬಲ ಸಿಕ್ಕಿತು. ಕಳೆದ ವರ್ಷ ಇದರ ಆರಂಭವನ್ನು ಸಫಾ ಪಾರ್ಕಿನಲ್ಲಿ ಕಾರ್ಯಕ್ರಮದೊಂದಿಗೆ ನೆರವೇರಿಸಲಾಯಿತು.

ಸಮುದಾಯದ ಒಗ್ಗಟ್ಟು, ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ, ಪ್ರತಿಭಾವಂತರಿಗೆ ಪ್ರೋತ್ಸಾಹ ಹಾಗೂ ಇತರ ಧರ್ಮೀಯರೊಂದಿಗೆ ಸಾಮರಸ್ಯ ಮುಂತಾದ ಉತ್ತಮ ಧ್ಯೇಯಗಳೊಂದಿಗೆ ರೂಪಗೊಂಡ ಈ ಸಂಘಟನೆ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ.

ಮೊನ್ನೆ ಡಿಸೆಬರ್ ೨ರಂದು ಅಬುಧಾಬಿಯ ಹಿಲ್ಟನ್ ಹೊಟೆಲ್ ಸಭಾಂಗಣದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಮನರಂಜನೆ ಜೊತೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸುಮಾರು ಆರುನೂರು ಜನರ ಉಪಸ್ಥಿತಿಯಲ್ಲಿ ಮೂಡಿಬಂದ ಈ ಸುಂದರ ಕಾರ್ಯಕ್ರಮದಲ್ಲಿ ವಾರ್ತಾಭಾರತಿಯ ಸಂಪಾದಕ ಎ ಎಸ್ ಪುತ್ತಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಸಂಜೆ ಆರೂವರೆಗೆ ಆರಂಭವಾಗಿ ರಾತ್ರಿ ಹನ್ನೆರಡೂವರೆ ವರೆಗೆ ಸಾಗಿದ್ದ ಕಾರ್ಯಕ್ರಮದಲ್ಲಿ ಪರಿಚಯ, ಉಪನ್ಯಾಸ, ಕಾವ್ಯವಾಚನ, ನಗೆಹೊನಲು, ಛದ್ಮವೇಷ, ಹಾಡು, ನೃತ್ಯ, ಸನ್ಮಾನ ಇತ್ಯಾದಿ ವಿಭಿನ್ನ ಮಜಲುಗಳಿದ್ದವು.
ಯು ಎ ಇ ಯಲ್ಲಿ ಗಮನಾರ್ಹ ಸಾಧನೆ ಮಾಡಿದ ಐದು ಮಂದಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು. ಉದ್ಯಮಿ ಹಿದಾಯತುಲ್ಲ ಸಾಹೆಬ್, ಉದ್ಯಮಿ ಕೆ ಎಸ್ ನಿಸಾರ್ ಅಹಮದ್, ವೈದ್ಯಕೀಯ ಕ್ಷೇತ್ರದಲ್ಲಿ ಶಹನವಾಜ್ ಸಮಾಜ ಸೇವಕ ಜಫರುಲ್ಲ ಪಟ್ನಿ ಹಾಗೂ ಸಾಹಿತಿ ಇರ್ಶಾದ್ ಮೂಡಬಿದ್ರಿ ಇವರನ್ನು ಸನ್ಮಾನಿಸಲಾಯಿತು.

ಕನ್ನಡಧ್ವನಿಯಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಸತತವಾಗಿ ಚುಟುಕುಗಳನ್ನು ಬರೆಯುತ್ತಿರುವ ಇರ್ಶಾದ್ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು.
ಕನ್ನಡದಲ್ಲಿ ಬರೆಯುವ ಮುಸ್ಲಿಮ್ ಸಮುದಾಯದ ಕೆಲವೇ ಪ್ರತಿಭಾವಂತರಲ್ಲಿ ಇರ್ಶಾದ್ ಗುರುತಿಸಲ್ಪಟ್ಟ ಲೇಖಕ. ಈಗಾಗಲೇ "ರಗಳೆ ರಾಗಿಣಿ" ಮತ್ತು "ದುಬೈ ನೆನಪುಗಳು" ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ವಾರ್ತಾಭಾರತಿ ಕನ್ನಡ ದೈನಿಕದಲ್ಲಿಯ ಜನಪ್ರಿಯ  ಅಂಕಣಕಾರರಾಗಿದ್ದಾರೆ.

ಕರ್ನಾಟಕದ ಹಲವು ಪತ್ರಿಕೆಗಳಲ್ಲಿ ಬರೆಯುವ ಇರ್ಶಾದ್ ಅವರ ಪ್ರತಿಭೆಗೆ ಮಾನ್ಯತೆ ನೀಡಿ ಕರ್ನಾಟಕ ಸಂಘ ೨೦೦೫ರಲ್ಲಿ "ಮಯೂರ" ಪ್ರಶಸ್ತಿ ಕೊಡಮಾಡಿತ್ತು. ಇದೀಗ ಮಂಗಳೂರು ಸಾಹೇಬ್ ಕಮ್ಯೂನಿಟಿಯವರು ಸನ್ಮಾನಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಸಂತೋಷದ ಸುದ್ದಿ.
ಸನ್ಮಾನಗೊಂಡ ಇರ್ಶಾದ್ ಅವರನ್ನೂ ಹೊಸವೇದಿಕೆಯಲ್ಲಿ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ಸಂಘಟನಾಕಾರರಿಗೂ ಕನ್ನಡಧ್ವನಿ ಅಭಿನಂದನೆಗಳನ್ನು ಸಲ್ಲಿಸುತ್ತದೆ. 

( ಇಲ್ಲಿರುವ ಫೋಟೋ ಕ್ಲಿಕ್ಕಿಸಿದರೆ ಪೂರ್ಣ ಪ್ರಮಾಣದ ಫೋಟೋ ಲಭ್ಯವಾಗುತ್ತದೆ)

ಇರ್ಶಾದ್

ಇರ್ಶಾದ್ ಮೂಡಬಿದ್ರಿಯವರಿಗೆ ಹಾರ್ದಿಕ ಅಭಿನ೦ದನೆಗಳು. ಹೊಸ ವರ್ಷದಲ್ಲಿ ನಿಮ್ಮ ಪ್ರತಿಭೆಗೆ ಇನ್ನೂ ಹೆಚ್ಚಿನ ಗೌರವ ಸಿಗಲಿ.

ಮೃಣಾಲಿನಿ ಉದಯ ಕುಮಾರ್

Syndicate

Syndicate content