ಇರುಳು ಕಂಡ ಬಾವಿಗೆ...
express.jpg

- ಅರ್ಶದ್ ಹುಸೇನ್ ಎಂ. ಹೆಚ್

ಇರುಳು ಕಂಡ ಬಾವಿಗೆ ಹಗಲಿಗೆ ಬಿದ್ದಂತೆ ಎಂಬುದೊಂದು ಕನ್ನಡದ ಗಾದೆ. ಸ್ವತಃ ಒಂದು ಅನುಭವ ಆದ ಮೇಲೆ ಗಾದೆ ಸತ್ಯವೆನಿಸಿದ್ದಂತೂ ನಿಜ. ಕಳೆದ ವರ್ಷ ಊರಿಗೆ ಹೋಗಿದ್ದಾಗ ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯವಾಗಿರಲಿಲ್ಲ. ಹಾಗಾಗಿ ಬೊಂಬಾಯಿ ಮುಖಾಂತರವೇ ಹೋಗಬೇಕಾಯ್ತು. ಹಿಂತಿರುಗಿದ ಕೆಲದಿನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಾಗಿತ್ತು. ಮುಂದಿನ ಬಾರಿ ಮಂಗಳೂರಿಗೇ ಹೋಗಬೇಕೆಂದು ಅಂದೇ ನಿಶ್ಚಯಿಸಿದೆ.

ಮೊದಲ ಇನ್ನಿಂಗ್ಸ್: ಅರೈವಲ್ ಈ ವರ್ಷದ ರಂಜಾನ್ ಹಬ್ಬಕ್ಕೆ ಎರೆಡು ತಿಂಗಳಿರುವಾಗಲೇ ದುಬೈ-ಮಂಗಳೂರು ನೇರ ವಿಮಾನ ಪ್ರಯಾಣದ ಟಿಕೇಟು ಖರೀದಿಸಿದ್ದೆ. (ಏರ್ ಇಂಡಿಯಾ ಎಕ್ಸ್ ಪ್ರೆಸ್ ಬಜೆಟ್ ಏರ್ ಲೈನ್ಸ್ ಆದುದರಿಂದ ಬುಕಿಂಗ್ ಸೌಲಭ್ಯವಿಲ್ಲ. ಏನಿದ್ದರೂ ಖರೀದಿ ಮಾತ್ರ) ಊರಿಗೆ ಫೋನು ಮಾಡಿ ವಾಹನಕ್ಕೂ ಏರ್ಪಾಡು ಮಾಡಿಟ್ಟುಕೊಂಡಿದ್ದೆ. ಕಾಯುತ್ತಿದ್ದ ದಿನ ಬಂದೇ ಬಂತು. ಲಗ್ಗೇಜು ಮೂವತ್ತು + ಎಂಟು ಕೇಜಿ ಎಂಬ ನಿರ್ಬಂಧ ವಿಧಿಸಿದ್ದರಿಂದ ಹೆಚ್ಚಿನ ವಸ್ತುಗಳನ್ನು ಕಾರ್ಗೋ ಮಾಡಿ ಕಳಿಸಿಯಾಗಿತ್ತು. ಟಿಕೇಟಿನಲ್ಲಿ ಮುದ್ರಿಸಿರುವ ಪ್ರಕಾರ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕಛೇರಿಯಲ್ಲಿ ವಿಚಾರಿಸಿದ ಪ್ರಕಾರ್ ಹ್ಯಾಂಡ್ ಬ್ಯಾಗ್ ೮ ಕೇಜಿ ಮಾತ್ರ, ಅದೂ ಡ್ಯೂಟಿ ಫ್ರೀ ಅಂಗಡಿಯಲ್ಲಿ ಖರಿದಿಸಬಹುದಾದ ವಸ್ತುಗಳ ಸಹಿತ. ಹಾಗಾಗಿ ಹೆಚ್ಚಿನ ವಸ್ತುಗಳನ್ನು ಒಯ್ಯದೇ ನಿಲ್ದಾಣ ತಲುಪಿದ್ದೆ. ಸಕಾಲಕ್ಕೆ ಚೆಕ್ ಇನ್ ಮಾಡಿಕೊಂಡು ನೀರೀಕ್ಷಣಾ ಕೊಠಡಿಯಲ್ಲಿ ಕುಳಿತೆ. ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಕೇರಳದವರು. ಪ್ರತಿಯೊಬ್ಬರೂ ತಮ್ಮ ಹ್ಯಾಂಡ್ ಬ್ಯಾಗಿನ ಹೊರತಾಗಿ ತಾವು ಹೊರಬಲ್ಲಷ್ಟು ತೂಕದ ವಸ್ತುಗಳನ್ನು ದುಬೈ ಡ್ಯೂಟಿ ಫ್ರೀ ಅಂಗಡಿಯಿಂದ ಕೊಂಡಿದ್ದರು. ಒಂದಿಬ್ಬರಲ್ಲಿ ವಿಚಾರಿಸಿದಾಗ ಬರೆಯ ಟಿಕೇಟಿನಲ್ಲಿ ಮುದ್ರಿಸಿರುವುದಷ್ಟೇ, ಎಷ್ಟು ಬೇಕಾದರೂ ಕೊಂಡೊಯ್ಯಬಹುದು ಎಂದರು. ಹಾಗಾಗಿ ನಾನೂ ಕೊಂಚ ವಸ್ತುಗಳನ್ನು ಕೊಂಡೆ. ಆದರೂ ಮನದಲ್ಲಿ ಅಳುಕು ಇದ್ದೇ ಇತ್ತು. ತನ್ನ ಮಾಮೂಲಿ ಚಾಳಿ ಬಿಡದ ಏರಿಂಡಿಯ ಬರೆಯ ಒಂದೂವರೆ ಗಂಟೆ ಕಾಯಿಸಿ ಪ್ರಯಾಣಿಕರನ್ನು ವಿಮಾನದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿತು. ಕೇರಳದವರು ಹೇಳಿದ ಪ್ರಕಾರ ನಾವು ತಂದ ಸಾಮಾನುಗಳಿಗೆ ಒಬ್ಬರೂ ಆಕ್ಷೇಪಣೆ ಎತ್ತಲಿಲ್ಲ. ಹೀಗೆಂದು ಮೊದಲೇ ಗೊತ್ತಿದ್ದಿದ್ದರೆ ಇನ್ನಷ್ಟು ವಸ್ತುಗಳನ್ನು ಕೊಳ್ಳಬಹುದಿತ್ತಲ್ಲಾ ಎಂದು ಪೇಚಾಡಿಕೊಂಡೆ. ಟಿಕೇಟಿನಲ್ಲಿ ಮುದ್ರಿಸಿದ್ದನ್ನೇ ನಿಜವೆಂದು ನಂಬಿದ್ದ ನಾನು ಕೋಣನಾಗಿದ್ದೆ. ಟಿಕೇಟಿನಲ್ಲಿ ಏನು ಬರೆದಿದ್ದಾರೆ ಎಂದು ಓದಿಯೂ ನೋಡದ ಕೇರಳದವ ಜಾಣನಾಗಿದ್ದ. ವಿಮಾನದೊಳಗಿನ ಮೇಲ್ಭಾಗದ ಅಟ್ಟಣೆಗಳೆಲ್ಲಾ ದುಬೈ ಡ್ಯೂಟಿ ಫ್ರೀ ಚೀಲಗಳಿಂದ ತುಂಬಿ ತುಳುಕುತ್ತಿತ್ತು. ನಮ್ಮ ಹ್ಯಾಂಡ್ ಬ್ಯಾಗುಗಳನ್ನು ಹೊಂದಿಸಲು ಹರಸಾಹಸ ಮಾಡಬೇಕಾಯ್ತು. ಇನ್ನೊಂದು ಮುಕ್ಕಾಲು ಘಂಟೆ ಕುಳಿತಲ್ಲೇ ಕಾಯಿಸಿ ನಂತರ ವಿಮಾನ ನೆಲ ಬಿಟ್ಟಿತು. ಮೊದಲ ಬಾರಿಗೆ ಮಂಗಳೂರು ಮುಟ್ಟುತ್ತೇನೆನ್ನುವ ಸಂತಸದಲ್ಲಿ ಸಂಸ್ಥೆ ನೀಡದ ಯಾವುದೇ ಸೌಲಭ್ಯಗಳು (ಸಂಗೀತ, ವೃತ್ತಪತ್ರಿಕೆ, ಟೀವಿ ಇತ್ಯಾದಿ) ಕೊರತೆಯೆಂದೆಣಿಸಲಿಲ್ಲ. ಜೊತೆಯಲ್ಲಿದ್ದ ಕಾಸರಗೋಡಿನವರು ಮಾತಿಗೆ ಕಂಪೆನಿ ಕೊಟ್ಟರು. ಪಕ್ಕದಲ್ಲಿ ಕುಳಿತವ ನೀರು ಬೇಕೆಂದು ಗಗನಸಖಿಗೆ ಕರೆ ನೀಡಿದ ಮುಕ್ಕಾಲು ಘಂಟೆಯ ನಂತರ ಸಿಡುಕುಮೋರೆಯೊಂದಿಗೆ ಬಂದ ಗಗನ ಸಖಿ ನೀರನ್ನು ಕುಕ್ಕಿ ಹೋಗಿದ್ದಳು. ಒಳಗೆ ಏನು ಪ್ರಮುಖ ಕೆಲಸವಿತ್ತೋ ಏನೋ. ಅವನಿಗಾದ ಗತಿ ನಮಗೂ ಆದೀತೆಂದು ಹೆದರಿ ಇನ್ನಾರೂ ನೀರು ಕೇಳುವ ಸಾಹಸ ಮಾಡಲಿಲ್ಲ. ಪ್ರಯಾಣಿಕರಲ್ಲಿ ಹೆಚ್ಚಿನವರು ನಿದ್ದೆಗೆ ಶರಣಾದ ಸುಖಜೀವಿಗಳಾದರೆ ಮಲಯಾಳಂನಲ್ಲಿ ಹರಟೆ ಕೊಚ್ಚುತ್ತಿದ್ದವರು ಉಳಿದವರು. ಎಲ್ಲೂ ಕನ್ನಡ ಕೇಳಿಬಂದ ನೆನಪಿಲ್ಲ. ಪ್ರಯಾಣಾವಧಿಯಲ್ಲಿ ಇದ್ದ ಏಕಮಾತ್ರ ಚಟುವಟಿಕೆಯೆಂದರೆ ಮದ್ಯದ ಮಾರಾಟ. ಮೂರುವರೆ ಘಂಟೆಯ ನಂತರ ಸುಖವಾಗಿ ಮಂಗಳೂರಿಗೆ ಬಂದಿಳಿದ ವಿಮಾನದಿಂದ ನೆಲಕ್ಕಿಳಿದಾಗ ಮಾತೃಭೂಮಿಗೆ ಬಂದ ಸಂತಸ. ಇಮಿಗ್ರೇಶನ್ ಸಾಲಿನಲ್ಲಿ ಕಾಯುತ್ತಿರುವಾಗ ಧ್ವನಿವರ್ಧಕದಲ್ಲಿ ದುಬೈಯಿಂದ ಬಂದ ಪ್ರಯಾಣಿಕರಲ್ಲಿ ಐವತ್ತೆಂಟು ಲಗೇಜುಗಳು ದುಬಾಯಿಯಲ್ಲಿಯೇ ಉಳಿದುಕೊಂಡಿವೆಯೆಂದೂ, ಅದನ್ನು ಮುಂದಿನ ವಿಮಾನದಲ್ಲಿ ಕಳಿಸಿಕೊಡಲಾಗುವುದೆಂದು ಸಂದೇಶ ಬಂದಿದೆಯೆಂದೂ ಲಗೇಜು ಸಿಗದ ಒಂದು ಫಾರಮ್ಮನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕೆಂದೂ ಬಿತ್ತರಿಸಲಾಯ್ತು. ಯಾವುದೋ ಕಳಪೆ ಸ್ಪೀಕರುಗಳನ್ನು ಅಳವಡಿಸಿದ್ದರೋ ಏನೋ, ಬಿತ್ತರಿಸಿದ್ದರಲ್ಲಿ ಹೆಚ್ಚಿನ ವಿಷಯ ಗಮ್ಯವಾಗದೇ ಕಸ್ಟಂಸ್ ಅಧಿಕಾರಿಗಳ ಬಳಿ ವಿಚಾರಿಸಿ ಮನದಟ್ಟು ಮಾಡಿಕೊಳ್ಳಬೇಕಾಯ್ತು. ಇಮಿಗ್ರೇಶನ್ ನಂತರ ಬೆಲ್ಟಿನಲ್ಲಿ ಬಂದಿಳಿದ ಸಾಮಾನುಗಳೆಲ್ಲಾ ಖಾಲಿಯಾದರೂ ನನ್ನ ಸಹಿತ ಐವತ್ತೆಂಟು ಪ್ರಯಾಣಿಕರ ಲಗೇಜು ಬಂದಿರಲಿಲ್ಲ. ಸಾಮಾನು ಸಿಕ್ಕವರು ಸಂತೋಷದಿಂದ ಹೊರನಡೆದರೆ ಉಳಿದವರು ಫಾರಮ್ಮು ಭರ್ತಿ ಮಾಡಲು ಹೆಣಗಾಡುತ್ತಿದ್ದೆವು. ಯಾವ ಯಾವ ವಿವರಗಳನ್ನು ಬರೆಯಬೇಕೆಂಬ ಸ್ಪಷ್ಟ ಹಾಗೂ ಸಮರ್ಪಕ ವಿವರಣೆಗಳಿಲ್ಲದೇ ಗೊಂದಲ ಸೃಷ್ಟಿಯಾಗಿತ್ತು. ಕೆಲವು ಮಹಿಳಾ ಅಧಿಕಾರಿಗಳೇ ತಾಳ್ಮೆಯಿಂದ ಪ್ರತಿ ಪ್ರಯಾಣಿಕರ ಫಾರಂ ಭರ್ತಿ ಮಾಡಿ ಒಂದು ಪ್ರತಿ ನಮಗೆ ಕೊಟ್ಟು ಕಳುಹಿಸುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು. ಅನೇಕ ಇತರ ಅಧಿಕಾರಿಗಳಿದ್ದರೂ ಈ ಫಾರಮ್ಮಿನ ಬಗ್ಗೆ ಅವರಿಗೆ ಯಾವುದೇ ತಿಳಿವಳಿಕೆ ಇಲ್ಲದಿದ್ದುದು ಅವರ ನೀಡಿದ ತರಬೇತಿಯ ಕೊರತೆ ಎದ್ದು ಕಾಣುತ್ತಿತ್ತು. ಮಹಿಳಾ ಅಧಿಕಾರಿಗಳಿದ್ದುದು ಇಬ್ಬರೇ, ಅವರಿಬ್ಬರೇ ಅಷ್ಟೂ ಜನರ ಫಾರಂಗಳನ್ನು ಭರ್ತಿ ಮಾಡಿ ಕಳಿಸಿಕೊಡುವಷ್ಟರಲ್ಲಿ ಸುಣ್ಣವಾಗಿದ್ದ ಅವರು ತಮ್ಮ ಸಂಸ್ಥೆಗೆ ನಮಗಿಂತಲೂ ಹೆಚ್ಚಿಗೇ ಬೈದಿರಬಹುದು. ಕಡೆಗೂ ಹೊರಗೆ ಬಂದಾಗ ಕಾಯುತ್ತಿದ್ದ ಮನೆಯವರು ಹಣ್ಣಾಗಿದ್ದರು. ಲಗೇಜು ಬರಲಿಲ್ಲವೆಂದು ನನಗಿಂತ ಹೆಚ್ಚು ಅವರಿಗೇ ವ್ಯಸನವಾಗಿತ್ತು. ಮರುದಿನ ಹಬ್ಬ, ಹಬ್ಬಕ್ಕೆಂದು ಕೊಂಡ ಬಟ್ಟೆ, ಉಡುಗೊರೆಗಳೆಲ್ಲಾ ಲಗೇಜಿನಲ್ಲಿಯೇ ಉಳಿದಿದೆ. ನನ್ನ ಬಟ್ಟೆಬರೆಗಳೂ ಲಗೇಜಿನಲ್ಲಿಯೇ ಇದ್ದುದರಿಂದ ಮನೆಗೆ ತಲುಪಿದ ಮೇಲೆ ಉಡುಪುಗಳಿಲ್ಲದೆ ಪರದಾಡಬೇಕಾಯ್ತು. ಮರುದಿನ ಹಬ್ಬದ ಸಂತಸದಲ್ಲಿ ಲಗ್ಗೇಜು ಇಲ್ಲದ ಕೊರತೆ ಮರೆಯಾದರೂ ಮಕ್ಕಳಿಗೆ ನೀಡಬೇಕಾದ ಉಡುಗೊರೆ ಕೊಡಲಾಗುತ್ತಿಲ್ಲವೆಂಬ ಸಂಕಟ. ಇನ್ನೊಂದೆಡೆ ಮನೆಯವರೆಲ್ಲಾ ಹಬ್ಬದ ಶುಭಾಷಯ ಹೇಳಲು ಯಾರ್‍ಯಾರೊಂದಿಗೆ ಫೋನು ಮಾಡಿ ಮಾತನಾಡಿದ್ದರೋ ಅವರೆಲ್ಲರ ಬಳಿ ಲಗೇಜು ತಲುಪಿಸದ ಏರಿ ಇಂಡಿಯಕ್ಕೆ ಮಂಗಳಾರತಿ ಎತ್ತಿದ್ದರು. ಏಕೋ ಏನೋ, ಇಷ್ಟು ತೊಂದರೆ ಅನುಭವಿಸಿದ ನನಗೆ ಬೈಯಲು ಮನಸ್ಸಾಗಲೇ ಇಲ್ಲ. ಮಂಗಳೂರಿಗೆ ವಿಮಾನ ನೇರಪ್ರಯಾಣ ಸಾಧ್ಯವಾದದ್ದು ಏರಿಂಡಿಯದಿಂದಲೇ ಎಂಬ ಭಾವನೆಯಿಂದ ಇವರು ಕೊಟ್ಟ ತೊಂದರೆಗಳೆಲ್ಲಾ ಅಷ್ಟು ಅಸಹಯನೀಯವಾಗಿರಲಿಲ್ಲ. ಹಬ್ಬದ ಮರುದಿನ ಮಂಗಳೂರಿನ ವಿಮಾನ ನಿಲ್ದಾಣದ ಲ್ಯಾಂಡ್ ಲೈನಿನಿಂದ ಮೊಬೈಲಿಗೊಂದು ಮಿಸ್ ಕಾಲು ಬಂದಿತ್ತು. ಅದೇ ಸಂಖ್ಯೆಗೆ ಫೋನು ಮಾಡಿ ವಿಚಾರಿಸಿದಾಗ ಮಂಗಳೂರು ವಿಮಾನ ನಿಲ್ದಾಣದಿಂದ ಮಾತನಾಡುತ್ತಿರುವುದೆಂದೂ, ಲಗೇಜು ಬಂದಿದೆಯಿಂದೂ, ಮರುದಿನ ಮಧ್ಯಾಹ್ನ ಒಂದೂವರೆಯಿಂದ ನಾಲ್ಕೂವರೆಯವರಿಗೆ ಬಂದು ತೆಗೆದುಕೊಳ್ಳಬಹುದೆಂದೂ ಉತ್ತರ ಸಿಕ್ಕಿತು. ಈ ಪ್ರಯಾಣಕ್ಕೆ ಏನಾದರೂ ಪರಿಹಾರ ದೊರೆಯಬಹುದೇ ಎಂದು ಕೇಳಿದ್ದಕ್ಕೆ ಒಂದು ನಿರ್ದಿಷ್ಟ ಪರಿಹಾರ ದೊರಕುತ್ತದೆ ಎಂದು ಆ ಮಹಿಳಾ ಅಧಿಕಾರಿ ತಿಳಿಸಿದರು. ಆ ಕರೆಯ ಒಂದು ರೂಪಾಯಿಯನ್ನೂ ಕೂಡಾ ಏರಿಂಡಿಯ ನಮ್ಮ ಕೈಯಿಂದಲೇ ಕಕ್ಕಿಸಿತ್ತು. ಇರಲಿ, ಮಾಹಿತಿ ಸಿಕ್ಕಿತಲ್ಲಾ, ಒಂದು ರೂಪಾಯಿಯೇನು ನೂರು ರೂಪಾಯಿಯಾದರೂ ಸರಿಯೇ. ಮರುದಿನ ನಾಲ್ಕು ಘಂಟೆ ಪ್ರಯಾಣ ಮಾಡಿ ಮಧ್ಯಾಹ್ನ ಒಂದು ಘಂಟೆಗೇ ವಿಮಾನ ನಿಲ್ದಾಣ ತಲುಪಿದೆವು. ಆಗಮನ ದ್ವಾರದಲ್ಲಿ ಇಕ್ಕಟ್ಟಾದ ಕಟಕಟೆಯ ನಡುವೆ ಇರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕಛೇರಿಯಲ್ಲಿ ವಿಚಾರಿಸಿದಾಗ ತಮಗೆ ಗೊತ್ತಿಲ್ಲವೆಂದೂ, ಇಮಿಗ್ರೇಶನ್ ವಿಭಾಗಕ್ಕೆ ವಿಚಾರಿಸಿ ಎಂದೂ ಉತ್ತರ ಸಿಕ್ಕಿತು. ಇಮಿಗ್ರೇಶನ್ ವಿಭಾಗಕ್ಕೆ ಬಂದರೆ ನಮಗೆ ಪ್ರವೇಶ ಸಾಧ್ಯವಿಲ್ಲವೆಂದು ಹೊರಗಟ್ಟಿದರು. ಮತ್ತೊಮ್ಮೆ ಫೋನು ಮಾಡಿ ವಿಚಾರಿಸಿದಾಗ ಈಗ ಸಧ್ಯಕ್ಕೆ ಕತಾರಿನಿಂದ ವಿಮಾನವೊಂದು ಬರಲಿದೆಯೆಂದೂ ಅದರ ಎಲ್ಲಾ ಪ್ರಯಾಣಿಕರು ಹೊರಹೋದಮೇಲೆ ನಮ್ಮ ಲಗೇಜುಗಳನ್ನು ಕೊಡಲಾಗುವುದು ಅಲ್ಲಿಯವರೆಗೂ ಕಾಯಿರಿ ಎಂದು ಉತ್ತರ ದೊರೆಯಿತು. ಒಂದೂವರೆಯಿಂದ ನಾಲ್ಕುವರೆಯವರೆಗೆ ಸಮಯ ನೀಡಿದವರೇ ಈಗ ಹೀಗೆನ್ನುತ್ತಿದ್ದಾರೆ. ಬರಬೇಕಿದ್ದ ಕತಾರ್ ವಿಮಾನದ ಪತ್ತೆಯಿಲ್ಲ. ಕಾಯುತ್ತಾ ನಮಗೆ ಕೊಟ್ಟಿದ್ದ ನಾಲ್ಕುವರೆಯ ಗಡುವು ಮೀರುತ್ತಾ ಬಂದಿತ್ತು. ನಮ್ಮಂತೆಯೇ ಲಗೇಜು ಕೊಂಡುಹೋಗಲು ಸುಮಾರು ಇನ್ನೂರು ಜನರು ಬಂದಿದ್ದರು. ಈಗ ಟೆಲಿಫೋನು ಮಾಡಿದರೆ ರಿಸೀವರ್ ಎತ್ತಿಡಲಾಗಿತ್ತು. ಹಿಂದಿನ ಅವಧಿಯಲ್ಲಿ ನಮ್ಮ ನಂತರ ಬಂದವರೆಲ್ಲಾ ಒಬ್ಬೊಬ್ಬರಾಗಿ ಫೋನು ಮಾಡಿ ಕಿರಿಕಿರಿ ಮಾಡಿದ್ದಿರಬಹುದು. ನಮ್ಮ ಚಿಕ್ಕಪ್ಪರಿಗೆ ಈ ನಿರ್ಲಕ್ಷ್ಯದಿಂದ ರೇಗಿಹೋಯ್ತು. ನೆಟ್ಟಗೆ ನಿಲ್ದಾಣ ವ್ಯವಸ್ಥಾಪಕರ ಕ್ಯಾಬಿನ್ನಿಗೇ ನುಗ್ಗಿದೆವು. ಇನ್ನೂರು ಜನರ ಪರವಾಗಿ ಚಿಕ್ಕಪ್ಪ ವ್ಯವಸ್ಥಾಪಕರಲ್ಲಿ ದೂರು ನೀಡಿದರು. ವ್ಯವಸ್ಥಾಪಕರು ತಮ್ಮ ವಾಕಿ ಟಾಕಿಯಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ತಕ್ಷಣ ತಮ್ಮ ಕ್ಯಾಬಿನ್ನಿಗೆ ಕಳಿಸಬೇಕೆಂದು ಆದೇಶ ನೀಡಿದರು. ಮಹಿಳಾ ಅಧಿಕಾರಿ ಮಿಸ್ ದೀಪಿಕಾ ಓಡೋಡಿ ಬಂದರು. ವ್ಯವಸ್ಥಾಪಕರು ವಿಚಾರಿಸಲಾಗಿ ಆಕೆ ನಮ್ಮನ್ನೆಲ್ಲಾ ಕಾಯಿಸುತ್ತಿರುವುದು ಸರಿಯೆಂದೂ, ಆದರೆ ಕತಾರ್ ವಿಮಾನ ಬೆಳಿಗ್ಗೆ ಬರಬೇಕಿದ್ದುದು ಬರಲಿಲ್ಲವೆಂದೂ ಅದರ ಪ್ರಯಾಣಿಕರು ಹೊರಹೋಗುವವರೆಗೂ ತಾನೇನೂ ಮಾಡಲು ಸಾಧ್ಯವಿಲ್ಲವೆಂದೂ ತನ್ನ ಅಸಹಾಯಕತೆ ತೋಡಿಕೊಂಡರು. ವ್ಯವಸ್ಥಾಪಕರು ನಮ್ಮನ್ನೆಲ್ಲಾ ಕತಾರ್ ವಿಮಾನ ಬಂದು ಪ್ರಯಾಣಿಕರು ಹೋಗುವವರೆಗೂ ತಾಳ್ಮೆಯಿಂದಿರಿ ಎಂದೂ ನಂತರ ತಾನೇ ಖುದ್ದಾಗಿ ಬಂದು ನಿಮ್ಮ ಲಗೇಜುಗಳನ್ನು ಕೊಡಿಸಿಕೊಡುತ್ತೇನೆಂದು ಆಶ್ವಾಸನೆ ನೀಡಿದರು. ಮಾಮೂಲಿಯಂತೆ ನಾಲ್ಕು ಘಂಟೆ ತಡವಾಗಿ ಬಂದ ಕತಾರ್ ವಿಮಾನದ ಪ್ರಯಾಣಿಕರೆಲ್ಲರೂ ಹೊರ ಹೋಗುವವರೆಗೆ ನಾವು ಕಾಯಬೇಕಾಯ್ತು. ಈ ವಿಮಾನ ಬರುತ್ತಿದ್ದಂತೆಯೇ ಅರ್ಧದಷ್ಟು ಪ್ರಯಾಣಿಕರ ಲಗೇಜುಗಳು ಬಂದಿಲ್ಲವೆಂದೂ ಮರುಪ್ರಯಾಣದಲ್ಲಿ ಕಳಿಸಲಾಗುವುದೆಂದೂ ಮತ್ತೊಮ್ಮೆ ಯಥಾವತ್ತಾಗಿ (ಅದೇ ಕಳಪೆ ಸ್ಪೀಕರುಗಳ ಮೂಲಕ) ಬಿತ್ತರಿಸಲಾಯ್ತು. ತೊಂದರೆ ಅನುಭವಿಸುತ್ತಿರುವುದು ನಾವು ಮಾತ್ರವಲ್ಲ, ಕತಾರ್ ನಿಂದ ಬಂದವರಿಗೂ ತೊಂದರೆ ಕಾದಿದೆ ಎಂದು ತಿಳಿದು ಅಲ್ಲಿದ್ದವರು ಅಷ್ಟೂ ಜನ ಮತ್ತೊಮ್ಮೆ ಏರ್ ಇಂಡಿಯಾಕ್ಕೆ ಬೈದರು. ಸಾಮಾನು ತರುವ ಸಹಾಯಕರು ಇದು ಮಾಮೂಲಿಯೆಂದೂ, ಇಂದಿನ ವಿಮಾನದಲ್ಲಿ ನಿನ್ನೆ ಬಿಟ್ಟ ಸಾಮಾನು ತಂದು ಇಂದಿನವರದ್ದು ಬಿಡುವುದೂ, ನಾಳೆ ಇಂದಿನವರದ್ದನ್ನು ತೆಗೆದುಕೊಂಡು ನಾಳೆಯವರದ್ದು ಬಿಡುವುದೆಂದೂ ಆಗುತ್ತಿದ್ದಿರಬಹುದೆಂದೂ ಹಾಗಾಗಿ ಪ್ರತಿದಿನ ನೂರಿನ್ನೂರು ಜನ ಲಗೇಜು ಕೊಂಡುಹೋಗಲು ಬರುತ್ತಿದ್ದಾರೆಂದು ತಮ್ಮ ಪಾಲಿನ ಸತ್ಯ ತಿಳಿಸಿದರು. ಕಾದು ಕಾದು ಬೇಸರವಾದ ಇನ್ನೂರು ಪ್ಲಸ್ ನೂರು ಜನರು ನಿಲ್ದಾಣದ ಹೊರಗಿದ್ದ ಪುಟ್ಟ ಚಹಾದಂಗಡಿಗೆ ಭರ್ಜರಿ ವ್ಯಾಪಾರ ಮಾಡಿಕೊಟ್ಟೆವು. ಸುಮಾರು ಏಳು ಘಂಟೆಗೆ ನಮ್ಮನ್ನಲ್ಲಾ ಒಳಬರಲು ಹೇಳಲಾಯ್ತು. ನಮಗಿಂತಲೂ ಹಿಂದಿನ ದಿನಗಳಲ್ಲಿ ಬಂದಿದ್ದ ಪ್ರಯಾಣಿಕರಿಗೆ ಮೊದಲು ಅವಕಾಶ ನೀಡಲಾಯ್ತು. ನಮ್ಮ ಸರದಿ ಬಂದಾಗ ಘಂಟೆ ಎಂಟಾಗಿತ್ತು. ಒಬ್ಬೊಬ್ಬರನ್ನೇ ಒಳಗೆ ಕರೆದುಕೊಂಡು ಹೋಗಿ ಲಗೇಜು ಗುರುತಿಸಿಕೊಂಡು ತರುವಂತೆ ಒಬ್ಬ ಸಹಾಯಕನೊಂದಿಗೆ ಕಳಿಸಲಾಯ್ತು. ದೊಡ್ಡ ಕಾರ್ಖಾನೆಯ ಗೋದಾಮಿನಲ್ಲಿ ಇರುವಂತೆ ಸಾವಿರಾರು ಲಗೇಜುಗಳು ಅಲ್ಲಿ ಪೇರಿಸಲ್ಪಟ್ಟಿದ್ದವು. ನಮ್ಮ ಲಗೇಜು ಹುಡುಕಿ ಹೊರ ತಂದ ಮೇಲೆ ಲಗೇಜಿನ ಮೇಲಿನ ಹಾಗೂ ನಮ್ಮ ಟಿಕೇಟಿನ ಮೇಲಿನ ಟ್ಯಾಗ್ ಸಂಖ್ಯೆ ಹಾಗೂ ಬಾರ್ ಕೋಡ್ ತಾಳೆಯಾದರೂ ಮುದ್ರಿತ ಸಂಖ್ಯೆಯನ್ನು ಕೈಬರಹದಲ್ಲಿ ಬರೆದುಕೊಂಡವ ಒಂದು ಅಂಕೆಯನ್ನು ಆಚೀಚೆ ಬರೆದುಕೊಂಡಿದ್ದ. ಈ ಲಗೇಜು ನಿಮ್ಮದಲ್ಲವೆಂದು ಅಧಿಕಾರಿ, ನನ್ನದೇ ಹೌದೆಂದು ನಾನು ಕೊಂಚ ಕಾಲ ಜಗಳ ಕಾದೆವು. ನಂತರ ಮೇಲಧಿಕಾರಿಗಳೇ ಬಂದು ಲಗೇಜಿನಲ್ಲಿರುವ ವಸ್ತುಗಳಲ್ಲಿ ನಾಲ್ಕು ವಸ್ತುಗಳನ್ನು ಮೊದಲು ಹೇಳಿ ನಂತರ ತೆರೆದು ತೋರಿಸಿದರೆ ಕೊಡುತ್ತೇವೆ ಎಂದರು. ಅಂತೆಯೇ ನಾನು ತಂದಿದ್ದ ನಾಲ್ಕಾರು ವಸ್ತುಗಳನ್ನು ಹೆಸರಿಸಿ ಸಾಮಾನು ತೆರೆದು ತೋರಿಸಿದ ಮೇಲೆ ನಮ್ಮ ಲಗೇಜು ನಮಗೆ ದಕ್ಕಿತು. ಪರಿಹಾರವೆಂದು ನಮಗೆಲ್ಲರಿಗೂ ತಲಾ ಐನೂರು ರೂಪಾಯಿಗಳನ್ನು ನೀಡಲಾಯ್ತು. ಹತ್ತಿರದ ಮಂಗಳೂರು ಕಾಸರಗೋಡಿನಿಂದ ಬಂದವರು ನೂರು ರೂಪಾಯಿ ಖರ್ಚಿಗೆ ಐನೂರು ಸಿಕ್ಕಿತೆಂದು ಸಂತೋಷದಿಂದ ಹೊರನಡೆದರೆ ಸಾವಿದರಿನ್ನೂರು ಖರ್ಚು ಮಾಡಿ ಬಂದ ನಾವು ಏಳುನೂರು ಹಾಗೂ ಒಂದು ದಿನ ಇಡೀ ನಷ್ಟವಾದ ದುಃಖದಲ್ಲಿ ಹೊರನಡೆದೆವು. ಮೂಡಬಿದಿರೆಗೆ ಬಂದು ತಲುಪಿದಾಗ ಎಲ್ಲಾ ಹೋಟೆಲುಗಳೂ ಬಂದ್. ತೆರೆದಿದ್ದ ಗೂಡಂಗಡಿಯೊಂದರಲ್ಲಿ ಬಾಳೆಹಣ್ಣು ಎಳನೀರೇ ಗತಿಯಾಯ್ತು. ನಕ್ಸಲ್ ಪೀಡಿತ ರಸ್ತೆಗಳಲ್ಲಿ ರಾತ್ರಿ ಹತ್ತು ಘಂಟೆಯ ಮೇಲೆ ಪ್ರಯಾಣಿಸುವಂತೆ ಮಾಡಿದ ಏರಿಂಡಿಯಕ್ಕೆ ಚಿಕ್ಕಪ್ಪ ಊರು ತಲುಪುವವರೆಗೂ ಬೈಯುತ್ತಲೇ ಇದ್ದರು. ಮಾರ್ಗಮಧ್ಯೆ ಇರುವ ಅರಣ್ಯ ತನಿಖಾಠಾಣೆಯಲ್ಲಿಯೂ ಏರ್ ಪೋರ್ಟಿನಿಂದ ಬರುತ್ತಿದ್ದೇವೆಂದು ಲಗೇಜು ತೋರಿಸಿ ಮುಂದುವರಿಯಬೇಕಾಯ್ತು. ಇದು ಬರೆಯ ನನ್ನೊಬ್ಬನ ಗೋಳಲ್ಲ, ಮಂಗಳೂರಿಗೆ ಬಂದ ಸರಿಸುಮಾರು ಪ್ರತಿ ಪ್ರಯಾಣದಲ್ಲಿ ತಾಪತ್ರಯ ಅನುಭವಿಸಿದವರು ಸುಮಾರು ಅರ್ಧದಷ್ಟು. ಏರಿಂಡಿಯ ಅರ್ಧ ಜನರಿಗೆ ಒಂದು ರೀತಿಯ, ಇನ್ನರ್ಧ ಜನರಿಗೆ ಇನ್ನೊಂದು ರೀತಿಯ ಸೇವೆ ಒದಗಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ. ಲಗೇಜು ಬರದವರಿಗೆ ದೂರದ ಪರಿವಿಧಿಯಿಲ್ಲದೆ ಐನೂರು ರೂಪಾಯಿಗಳ ಪರಿಹಾರ ನೀಡುತ್ತದೆ. ಮಂಗಳೂರು, ಕಾಸರಗೋಡಿನವರಿಗೆ ಸರಿ, ದೂರದವರಿಗೆ? ಶಿವಮೊಗ್ಗ ಚಿಕ್ಕಮಗಳೂರು ಚಿತ್ರದುರ್ಗ ಮೊದಲಾದ ದೂರದೂರುಗಳಿಂದ ಬರುವವರಿಗೆ? ಹಣದ ಮಾತು ಹಾಗಿರಲಿ, ಸಿಗುವ ಒಂದು ತಿಂಗಳ ರಜದ ಎರೆಡು ದಿನ ಇದಕ್ಕೆ ತೆಗೆದಿರಸಬೇಕಲ್ಲವೇ? ಪ್ರಯಾಣಿಕರ ಮನೆಯವರಿಗಾಗುವ ಮಾನಸಿಕ ಹಿಂಸೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುವ ನೋವು, ಏರುಪೇರಾಗುವ ರಜೆಯ ದಿನಗಳು, ಇದಕ್ಕೆಲ್ಲಾ ಯಾರು ಹೊಣೆ? ಸಂಸ್ಥೆ ಈ ವಿಭಾಗದ ಜವಾಬ್ದಾರಿಯನ್ನು ಮಿಸ್ ದೀಪಿಕಾ ಒಬ್ಬರ ಮೇಲೆಯೇ ಹೇರಿದ್ದರು. ತನ್ನ ಕರ್ತವ್ಯವನ್ನು ಆಕೆ ನಿರ್ವಹಿಸಿದ ರೀತಿ ಶ್ಲಾಘನೀಯ. ಆದರೆ ಒಮ್ಮೆಲೇ ಇನ್ನೂರು ಪ್ರಯಾಣಿಕರು ಬಂದರೆ ಆಕೆಯಾದರೂ ಏನು ಮಾಡಿಯಾರು? ಅದೂ ಅಲ್ಲದೆ ಅವರು ನಿಗದಿ ಪಡಿಸಿದ್ದ ವೇಳೆಗೆ ಇನ್ನೊಂದು ವಿಮಾನ ತಡವಾಗಿ ಬಂದರೆ ಮೊದಲು ಬಂದಿದ್ದ ಪ್ರಯಾಣಿಕರನ್ನು ಕಾಯಿಸದೆ ನಿರ್ವಾಹವೇನಿತ್ತು? ಆಗ ಈ ಜವಾಬ್ದಾರಿಯನ್ನು ಇನ್ನೊಬ್ಬ ಅಧಿಕಾರಿಗೆ ವಹಿಸಲಾಗುತ್ತಿರಲಿಲ್ಲವೇ? ಏರ್ ಇಂಡಿಯಾ ಎಕ್ಸ್ ಪ್ರೆಸ್ ಕಿಟಕಿಯಲ್ಲಿ ಸರಿಯಾಗಿ ಮಾಹಿತಿ ನೀಡಬಲ್ಲ ಸಿಬ್ಬಂದಿಯನ್ನು ಅಥವಾ ಇರುವ ಸಿಬ್ಬಂದಿಗೆ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗುವಂತೆ ತರಬೇತಿ ನೀಡಲು ಸಾಧ್ಯವಿಲ್ಲವೇ? ಜನನಿಬಿಡವಾದ - ಉದಾಹರಣೆಗೆ ದುಬೈ ವಿಮಾನ ನಿಲ್ದಾಣದಲ್ಲಿ ಪ್ರತಿ ಘಂಟೆಗೆ ಹಲವಾರು ವಿಮಾನಗಳು ಬರುತ್ತವೆ. ಅವರಿಗೇನಾದರೂ ಇಂತಹ ತೊಂದರೆಗಳಾದರೆ ಅವರು ಹೇಗೆ ನಿಭಾಯಿಸುತ್ತಾರೆ? ಮಂಗಳೂರಿಗೆ ಬರುವ ಬೆರಳೆಣಿಕೆಯ ವಿಮಾನಗಳನ್ನು ನಿರ್ವಹಿಸಲಸಾಧ್ಯವಾದ ಸಂಸ್ಥೆಗೆ ಈಗ ಸಧ್ಯಕ್ಕೆ ಹೆಚ್ಚಿನ ಒತ್ತಡ ಬರುತ್ತಿರುವ ಸೌದಿ ಅರೇಬಿಯಾ ಇತ್ಯಾದಿಗಳ ವಿಮಾನಗಳು ಬರತೊಡಗಿದರೆ ಹೇಗೆ ನಿಭಾಯಿಸಲು ಸಾಧ್ಯ? ಸಧ್ಯಕ್ಕೆ ಇವು ನಮ್ಮ ಎದುರು ಇರುವ ಅನುಮಾನಗಳು. ಪ್ರತಿ ಪ್ರಯಾಣದಲ್ಲಿಯೂ ಚಿಕ್ಕ ಪುಟ್ಟ ಏರುಪೇರು ಸಾಮಾನ್ಯ. ಎಲ್ಲರಿಗೂ ಇದು ಅರ್ಥವಾಗುತ್ತದೆ. ಆದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆಂಬುದು ಮುಖ್ಯ. ಕಳೆದ ಬಾರಿ ಕ್ಯಾಥೆ ಪೆಸಿಫಿಕ್ ಏರ್ ಲೈನ್ಸ್‌ನ ಪ್ರಯಾಣದಲ್ಲಿ ನಿಗದಿತ ಸಮಯಕ್ಕಿಂತ ಬರೆಯ ಹತ್ತು ನಿಮಿಷ ತಡವಾದದ್ದಕ್ಕೆ ಕ್ಯಾಪ್ಟನ್ ಕ್ಷಮೆ ಯಾಚಿಸಿದ್ದರು. ಏರಿಂಡಿಯ ಅರ್ಧರ್ಧ ದಿನ ತಡವಾದರೂ ಸೌಜನ್ಯಕ್ಕೂ ಒಂದು ಮಾತು ಹೇಳಲಿಲ್ಲ. ಲಗೇಜು ತರಲು ನಮ್ಮೊಡನೆ ಬಂದಿದ್ದ ಮುಕ್ಕಾಲಕ್ಕೂ ಹೆಚ್ಚು ಜನರು ಇನ್ನೊಮ್ಮೆ ಏರಿಂಡಿಯದಲ್ಲಿ ಬರುವುದಿಲ್ಲವೆಂದು ಶಪಥ ತೊಟ್ಟಿದ್ದರು. ಪ್ರಯಾಣಿಕನಿಗೆ ಕ್ಷೇಮವಾಗಿ ತನ್ನ ಸೊತ್ತುಗಳೊಂದಿಗೆ ಮನೆ ತಲುಪುವುದೇ ಮುಖ್ಯ. ಜಗತ್ತಿನ ಹೆಚ್ಚಿನ ವಿಮಾನ ಸಂಸ್ಥೆಗಳು ಈ ವಿಷಯಕ್ಕೆ ಒತ್ತು ನೀಡುತ್ತವೆ. ಈ ನಿಟ್ಟಿನಲ್ಲಿ ಏರಿಂಡಿಯ ಎಕ್ಸ್ ಪ್ರೆಸ್ ಸಹಾ ತನ್ನ ತಪ್ಪುಗಳನ್ನು ತಿದ್ದಿಕೊಂಡು ನಮ್ಮ ಕುಡ್ಲಕ್ಕೆ ಒಳ್ಳೆಯ ಹೆಸರು ಬರುವಲ್ಲಿ , ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯವಾಗಲು ಶ್ರಮಿಸಿದವರ ಬೆವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದರಲ್ಲಿ ಪ್ರಯತ್ನ ಮಾಡಬೇಕೆಂದು ಆಶಿಸೋಣ ಅಲ್ಲವೇ. ಮುಂದಿನ ವಾರ: ಸೆಕೆಂಡ್ ಇನ್ನಿಂಗ್ಸ್: ಡಿಪಾರ್ಚರ್.

ಲೇಖನ

ಲೇಖನ ಓದಿಸಿಕೊಂಡು ಹೋಯಿತು. :-)

ಆದರೆ ಲೇಖನದಲ್ಲಿ ಪ್ಯಾರಾಗ್ರಾಫ್ ಬ್ರೇಕ್ ಸೇರಿಸಿದರೆ ಓದಲು ಬಹಳ ಉತ್ತಮ.

Syndicate

Syndicate content