- ಅರ್ಶದ್ ಹುಸೈನ್ ಎಂ ಎಚ್
ದುಬೈಯಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಿರುವ ಅನೇಕ ಕನ್ನಡ ಸಂಘ ಸಂಸ್ಥೆಗಳೊಂದಿಗೆ ಕನ್ನಡಕೂಟ ಯು.ಎ.ಇ. ಸಹಾ ತನ್ನ ಅಳಿಲ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬೇಕೆಂದು ನಿಶ್ಚಯಿಸಿದ ಕೂಟದ ಸದಸ್ಯರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.
ಅಂತೆಯೇ ನವೆಂಬರ್ ೧೬ರ ಶುಕ್ರವಾರ ದುಬೈ ಕರಾಮದಿಲ್ಲಿರುವ ಕರಾಮ ಹೋಟೇಲಿನ ಉತ್ತಮ ಬೆಳಕು ಹಾಗೂ ಶ್ರವಣ ಸಾಧನಗಳಿಂದ ಸುಸಜ್ಜಿತ ಸಭಾಂಗಣದಲ್ಲಿ ರಾಜ್ಯೋತ್ಸವವು ವಿಜೃಂಭಣೆಯಿಂದ ನಡೆಯಿತು. ಸಂಜೆ ಸುಮಾರು ನಾಲ್ಕು ಘಂಟೆಯಿಂದ ತೊಡಗಿದ ಸಮಾರಂಭ ರಾತ್ರಿ ಒಂಭತ್ತುಘಂಟೆಯವರೆಗೆ ನಡೆದು ನೆರೆದಿದ್ದ ಮುನ್ನೂರಕ್ಕೂ ಹೆಚ್ಚು ಕನ್ನಡಿಗರನ್ನು ರಂಜಿಸಿತು. ಈ ಸಂದರ್ಭದಲ್ಲಿ ದುಬೈಯಲ್ಲಿ ಕನ್ನಡದ ಕಂಪನ್ನು ಹರಡಿದ ಕವಿ ಶ್ರೀ ಈರಣ್ಣ ಮೂಲಿಮನಿಯವರ ಕನ್ನಡ ಹಾಡುಗಳ ಧ್ವನಿಸುರುಳಿ ’ಹಾಡಿದೆ ಶೃಂಗಾರ ಕಾವ್ಯ’ ಬಿಡುಗಡೆ ಕಂಡಿತು. ಕಾರ್ಯಕ್ರಮದಲ್ಲಿ ನಾಲ್ಕು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅವುಗಳೆಂದರೆ - ಮಕ್ಕಳಿಗೆ ಛದ್ಮವೇಷ (ವೇಷಭೂಷಣ) ಸ್ಪರ್ಧೆ, ನೃತ್ಯ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ ಹಾಗೂ ಕನ್ನಡ ರಸಪ್ರಶ್ನೆ ಸ್ಪರ್ಧೆ. ಎಲ್ಲ ವಿಭಾಗಳಲ್ಲಿಯೂ ಸಾಕಷ್ಟು ಸ್ಪರ್ಧಿಗಳು ಸ್ಪರ್ಧಿಸಿದ್ದು ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡಿದರು. ತೀರ್ಪುಗಾರರಾಗಿ ’ಧ್ವನಿ ಪ್ರತಿಷ್ಠಾನ’ದ ಶ್ರೀ ಪ್ರಕಾಶ್ ರಾವ್ ಪಯ್ಯಾರ್, ’ಕನ್ನಡಧ್ವನಿ’ ಕನ್ನಡ ಅಂತರ್ಜಾಲ ತಾಣದ ಶ್ರೀ ಗೋಪಿನಾಥ ರಾವ್, ಹಾಗೂ ಕರ್ನಾಟಕ ಸಂಘದ ಮುಖ್ಯ ಕಾರ್ಯಕರ್ತೆ ಶ್ರೀಮತಿ ರಂಜನಿ ಸುರೇಶ್ ಅವರನ್ನು ಆಹ್ವಾನಿಸಲಾಗಿತ್ತು. ವೇಷಭೂಷಣ ಸ್ಪರ್ಧೆಯಲ್ಲಿ ಗೌಡತಿ ವೇಷದಲ್ಲಿ ಬಂದ ಕುಮಾರಿ ರೋಶನಿ ಸಾಣಿಕೊಪ್ಪ ಪ್ರಥಮ ಬಹುಮಾನ ಪಡೆದರೆ ನಡುಗುತ್ತ ನಡೆಯುವ ಮುದುಕಿಯ ವೇಷದಲ್ಲಿ ಬಂದ ಕುಮಾರಿ ಐಶ್ವರ್ಯ ಗಾಜರೆ ಎರಡನೆಯ ಬಹುಮಾನ ಪಡೆದಳು. ಕುಮಾರಿ ಸೃಷ್ಠಿ ವಾಡೇಕರ್ ಶಿವನ ಪಾತ್ರದಲ್ಲಿ ಗಮನ ಸೆಳೆದು ಮೂರನೆಯ ಬಹುಮಾನ ಪಡೆದಳು. ಇತರ ಮಕ್ಕಳ ವೇಷಭೂಷಗಳೂ ಗಮನ ಸೆಳೆಯುವಂತಿದ್ದವು. ನೃತ್ಯ ಸ್ಪರ್ಧೆಯಲ್ಲಿ ಸಹಾ ಪುಟಾಣಿಗಳು ತಮ್ಮ ಪ್ರತಿಭೆ ಮೆರೆದರು. ಕನ್ನಡ ಹಾಡುಗಳಿಗೆ ಮಾತ್ರ ಅವಕಾಶವಿದ್ದ ಸ್ಪರ್ಧೆಯಲ್ಲಿ ಸಾಕಷ್ಟು ಕಠಿಣ ಸ್ಪರ್ಧೆ ಕಂಡುಬಂದಿತು. ಕುಮಾರಿ ಐಶ್ವರ್ಯ ಗಾಜರೆ ಪ್ರಥಮ ಬಹುಮಾನ ಪಡೆದರೆ ಕುಮಾರಿ ಸೌಮ್ಯಾ ಶ್ರೀನಾಥ, ಐಶ್ವರ್ಯ ಗಾಜರೆ ಮತ್ತು ಸೃಷ್ಠಿ ವಾಡೇಕರ್ ತ್ರಯರ ಸಮೂಹನೃತ್ಯ ದ್ವಿತೀಯ ಬಹುಮಾನ ಪಡೆದರು. ಚೂಟಿಯಾದ ನೃತ್ಯ ಪ್ರದರ್ಶನ ನೀಡಿದ ಕಿಶೋರಿ ಕುಮಾರಿ ರೋಶನಿ ಸಾಣೆಕೊಪ್ಪ ತೃತೀಯ ಬಹುಮಾನ ಪಡೆದರು. ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಡಲಾಯಿತು. ಪ್ರಶ್ನೆಗಳನ್ನು ಪರದೆಯ ಮೇಲೆ ಪ್ರದರ್ಶಿಸಿ ಸುಳಿವುಗಳನ್ನು ನೀಡಿ ಉತ್ತರ ಪಡೆಯುವ ಬಗೆ ಗಮನ ಸೆಳೆಯಿತು. ಪೂರ್ವಾಭಾವಿ ಸ್ಪರ್ಧೆಯ ಮೂಲಕ ಒಂಭತ್ತು ತಂಡಗಳನ್ನು ಆರಿಸಿ ಒಟ್ಟು ನಾಲ್ಕು ಸುತ್ತುಗಳಲ್ಲಿ ಮೂವರು ವಿಜೇತರನ್ನು ನಿರ್ಧರಿಸಲಾಯಿತು. ಕುಮಾರಿ ಪ್ರೇರಣಾ ಹಾಗೂ ಶ್ರೀಕೃಷ್ಣ ತಂಡ ಮೊದಲ ಬಹುಮಾನ ಪಡೆದರೆ ಶ್ರೀಮತಿ ಜ್ಯೋತಿಲಕ್ಷ್ಮಿ ಬೆಳಗೂರು ಹಾಗೂ ಶ್ರೀ ಬೆಳಗೂರು ದಂಪತಿಗಳು ಎರೆಡನೆಯ ಬಹುಮಾನ ಪಡೆದರು. ಶ್ರೀಯುತ ಪ್ರಸಾದ್ ಹಾಗೂ ಪ್ರಶಾಂತ್ ತಂಡ ತೃತೀಯ ಬಹುಮಾನ ಪಡೆದರು. ರಸಪ್ರಶ್ನೆಯ ನಂತರ ರಾಜ್ಯೋತ್ಸವ ಆಚರಣೆಯ ಸಮಾರಂಭವು ’ಬೆಳಗುತ ಬನ್ನಿರಿ ಕನ್ನಡ ಜ್ಯೋತಿಯನು’ ಹಾಡಿನ ಮೂಲಕ ತೊಡಗಿತು. ಮುಖ್ಯ ಅತಿಥಿಗಳಾಗಿ ಡಾ. ಬಿ.ಕೆ. ಯೂಸುಫ್ ಹಾಗೂ ಶ್ರೀ ಸುರೇಶ್ ಕುಂಬ್ಳೆ ಉಪಸ್ಥಿತರಿದ್ದರು. ಡಾ. ಬಿ.ಕೆ ಯೂಸುಫ್, ಶ್ರೀ ಸುರೇಶ್ ಕುಂಬ್ಳೆ, ಶ್ರೀ ಅರುಣ ಮುತ್ತುಗದೂರ ಹಾಗೂ ಶ್ರೀ ಸದಾನ್ ದಾಸ್ ಜ್ಯೋತಿ ಬೆಳಗಿದರು. ಶ್ರೀ ಅರುಣ ಮುತ್ತುಗದೂರು ಅವರು ಸ್ವಾಗತ ಭಾಷಣ ಮಾಡಿದರು. ಶ್ರೀ ಬಸವರಾಜ ಸಾಲಿಮಠ, ಶ್ರೀ ಅನಿಲ್ ಮೆಂಡೋನ್ಸ ಹಾಗೂ ಶ್ರೀ ಮಲ್ಲಿಕಾರ್ಜುನ ಅಂಗಡಿ ಅವರು ತೀರ್ಪುಗಾರರ ಪರಿಚಯ ನೀಡಿದರು. ಶ್ರೀ ಬಸವರಾಜ ಸಾಲಿಮಠ ಅವರು ಕವಿ ಶ್ರೀ ಈರಣ್ಣ ಮೂಲಿಮನಿಯವರು ಬೆಳೆದು ಬಂದ ಬಗೆ ಹಾಗೂ ಕಿರುಪರಿಚಯ ನೀಡಿದರು. ನಂತರ ನ್ಯಾಮತಿ ವಿಶ್ವನಾಥ ಅವರು ರಚಿಸಿದ ’ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಪ್ರಹಸನ ಗಮನ ಸೆಳೆಯಿತು. ವಿಶ್ವನಾಥರೊಂದಿಗೆ ಸಹಕಲಾವಿದರಾದ ಶರಣು ಹೂಗಾರ ಹಾಗೂ ಸಂಗಡಿಗರು ಪ್ರಹಸಕ್ಕೆ ಜೀವಕಳೆ ತಂದುಕೊಟ್ಟರು. ಇಂದಿನ ದಿನಗಳಲ್ಲಿ ಕನ್ನಡಕ್ಕೆ ಸಲ್ಲಬೇಕಾದ ಮನ್ನಣೆ ಕನ್ನಡಿಗರಿಂದ ಸಿಗದೇ ಇರುತ್ತಿರುವುದು ಕನ್ನಡಿಗರು ಈ ಬಗ್ಗೆ ಯೋಚಿಸುವಂತೆ ಮಾಡಿತು. ನಂತರ ಶ್ರೀ ಬಸವರಾಜ ಸಾಲಿಮಠರು ಹಾಡಿದ -’ಬರತೀನಂದನಲ್ಲ’ ಜಾನಪದ ಗೀತೆ ಹಾಗೂ ಶರಣ ಹೂಗಾರ ಅವರ ’ಸಾಕಿದ್ನಪ ನಾನೊಂದು ಮುದ್ದು ಕೋಳೀನಾ’ ಜಾನಪದ ಗೀತೆಗಳು ಜಾನಪದ ಸೊಡಗನ್ನು ನೆನಪಿಸಿದವು. ಕುಮಾರಿ ಅಕ್ಷತಾ ಹಾಡಿದ ಜಯ ಜಯ ಕನ್ನಡ ದೇವಿಯೇ ಗೀತೆ, ಕುಮಾರಿ ಐಶ್ವರ್ಯ ಗಾಜರೆ ನೀಡಿದ ನೃತ್ಯ ಪ್ರದರ್ಶನ ಹಾಗೂ ಶ್ರೀಮಾನ್ ಗುರುರಾಜ ನೀಡಿದ ’ಅಂತಿಥ ಹೆಣ್ಣ ನಾನಲ್ಲ’ ಪ್ರದರ್ಶನಗಳು ಮನಮೋಹಕಗೊಂಡವು. ಕಡೆಯದಾಗಿ ಕುಮಾರ ಶ್ರವಣ್ ಮುತ್ತುಗದೂರು ಹಾಗೂ ರಜತ್ ವಿದ್ಯಾಧರ್ ಅವರ ನೃತ್ಯ ರೂಪಕ ಮನಸೆಳೆಯಿತು. ಕಾರ್ಯಕ್ರಮದ ವಿಶೇಷ ಅಂಗವಾಗಿ ಕವಿ ಶ್ರೀ ಈರಣ್ಣ ಮೂಲಿಮನಿ ಅವರು ರಚಿಸಿ, ಕೆಲವು ಹಾಡುಗಳಿಗೆ ಸ್ವತಃ ಗಾಯಕರಾಗಿ ಹೊರತಂದ ಕನ್ನಡ ಗೀತೆಗಳ ಧ್ವನಿಸುರುಳಿಯನ್ನು ಡಾ. ಬಿ.ಕೆ ಯೂಸುಫ್ ಉದ್ಘಾಟಿಸಿದರು. ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಅವರು ಈ ಧ್ವನಿಸುರುಳಿಯ ಬಗ್ಗೆ ಉತ್ತಮ ವಿಮರ್ಶೆ ನೀಡಿದರು. ಸಭೆಯನ್ನುದ್ದೇಶಿಸಿ ಡಾ. ಬಿ.ಕೆ.ಯೂಸುಫ್ ಸಹಾ ಕೆಲವು ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾದ ಶ್ರೀ ಸುರೇಶ್ ಕುಂಬ್ಳೆಯವರು ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಇತರ ಅತಿಥಿಗಳೂ ಕೆಲವು ಮಾತನ್ನಾಡಿ ಕಾರ್ಯಕ್ರಮಕ್ಕೆ ಕಳೆ ಕೊಟ್ಟರು. ಕಾರ್ಯಕ್ರಮದುದ್ದಕ್ಕೂ ನಿರೂಪಣೆ ನೀಡಿದವರು ಶ್ರೀಮತಿ ರಮ್ಯ ರಾಘವೇಂದ್ರ ಹಾಗೂ ಶ್ರೀಮತಿ ಭಾಗ್ಯ ಸದಾನ್ ದಾಸ್. ರಸಪ್ರಶ್ನೆ ಕಾರ್ಯಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟವರು ಶ್ರೀ ಅರ್ಶದ್ ಹುಸೇನ್ ಎಂ.ಹೆಚ್. ಹಾಗೂ ಶ್ರೀ ಮಲ್ಲಿಕಾರ್ಜುನ. ಕನ್ನಡ ಕೂಟದ ಖಜಾಂಚಿಯಾಗಿ ಶ್ರೀ ಮಂಜುನಾಥ ಹಾಗೂ ಸ್ವಾಗತಕಾರರಾಗಿ ಶ್ರೀ ವಿದ್ಯಾಧರ್ ತಮ್ಮ ಬಳುವಳಿ ನೀಡಿದರು. ಬನ್ನಿರಿ ಬನ್ನಿರಿ ಕನ್ನಡ ಜ್ಯೋತಿಯನು ಹಾಡನ್ನು ಹಾಡಿದ ಸುಮಂಗಲೆಯರು: ಶ್ರೀಮತಿ ಸುಮಾ ಅರುಣ ಮುತ್ತುಗದೂರು, ಶ್ರೀಮತಿ ಸುಮಾ ಗಾಜರೆ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಉಮಾ ವಿದ್ಯಾಧರ್, ಶ್ರೀಮತಿ ಹಾ ಶಾಂತಮ್ಮನವರು ಹಾಗೂ ಶ್ರೀಮತಿ ಸುಜಾತಾ . ಕನ್ನಡ ಕೂಟ ನಡೆದು ಬಂದ ದಾರಿ ಹಾಗೂ ಸದಸ್ಯರ ಪರಿಚಯವನ್ನು ಶ್ರೀ ಸದಾನ್ ದಾಸ್ ಪ್ರಸ್ತುತ ಪಡಿಸಿದರು. ಶ್ರೀ ಅರುಣ ಮುತ್ತುಗದೂರು ಅವರು ವಂದನಾರ್ಪಣೆ ನೀಡಿದರು. ಸ್ವಾದಿಷ್ಟ ಸಸ್ಯಾಹಾರಿ ಭೋಜನದೊಂದಿಗೆ ಕೊನೆಗೊಂಡ ಕಾರ್ಯಕ್ರಮ ಸುಲಲಿತವಾಗಿ ನಡೆದು ನೆರೆದಿದ್ದ ಕನ್ನಡಿಗರನ್ನು ರಂಜಿಸಿತು.








