-ವಾಣಿ ರಾಮದಾಸ್
ಈ ಯಾಂತ್ರಿಕ ಯುಗದಲಿ ಟೈಮಿಲ್ಲ ಮಂತ್ರ ಎಲ್ಲರ ಬಾಯಲ್ಲಿ ಜನ ಜನಿತ. ಎಲ್ಲರೂ ಓಡ್ತಾನೇ ಇರ್ತಾರೆ. ಯಾರಿಗೂ ಯಾವುದಕ್ಕೂ ವೇಳೆ ಇಲ್ಲ. ವೇಳೆ ಕಳೆದು ಹೋಗುತ್ತೋ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ, ಏನು ಗೊತ್ತಿಲ್ಲ, ಅದೇ ಗೊತ್ತಿಲ್ಲ. ಇಲ್ಲ, ಇಲ್ಲ, ಆಗೊಲ್ಲ, ಕಾಟ ಸಲ್ಲ. ಅದನ್ನು ಎಂದಾದರೊಮ್ಮೆ ಬದಿಗಿಡಿ ಸಿಗುವುದು ಸಿಹಿ ಬೆಲ್ಲ.
ಉದ್ಯೋಗಸ್ಥ ಮಹಿಳೆ ಸೂಪರ್-ಡೂಪರ್ ವುಮೆನ್. ಟೈಮ್ ಮ್ಯಾನೇಜ್‍ಮೆಂಟ್ ಅನ್ನೋದು ಅವಳಿಂದ ಕಲಿಯಬೇಕು. ಬೆಳಗಿನಿಂದ ಸಂಜೆವರೆಗೆ ದುಡಿತದ ಜೊತೆಗೆ ಎಲ್ಲರತ್ತ, ಎಲ್ಲ ಕೆಲಸಗಳತ್ತ ಗಮನ. ಮಲ್ಟಿ ಪರ್ಪಸ್ ಪರ್ಸನಾಲಿಟಿ ಮಹಿಳೆಯದು. ಚತುರ್ಭುಜೆ ಹೆಣ್ಣು-ಆಫೀಸು, ಮಕ್ಕಳು, ಪತಿ, ಮನೆ ಇವಳ ನಾಲ್ಕು ಭುಜಗಳು. ಇಷ್ಟೇ ಅಲ್ಲ ಸಿಗುವ ಲಂಚ್ ಬ್ರೇಕ್‍ನಲ್ಲಿ ಅತ್ತೆಯ ಖಾಯಿಲೆ, ನಾದಿನಿಯ ಮದುವೆ, ಮಕ್ಕಳ ಹೋಂ ವರ್ಕ್, ಗಂಡನೊಡನೆ ಆದ ಜಗಳ ಇವೆಲ್ಲ ಲಂಚ್ ಜೊತೆಯಲಿ ನಮ್ಮದೇ ಪ್ರತಿಬಿಂಬಗಳ ಜೊತೆ ಶೇರಿಂಗ್, ಶಾಪಿಂಗ್ ಇದು ದಿನ ನಿತ್ಯದ ಜೀವನ. ಇನ್ನು ಮನೆಯಲ್ಲಿರುವ ಹೆಂಗಸರಂತೂ ಎಲ್ಲರಿಗಿಂತ ಬ್ಯುಸಿ. ಬೆಳಿಗ್ಗೆ ಎದ್ದಾಗಿನಿಂದ ತಿಂಡಿ, ಟಿಫಿನ್ ಬಾಕ್ಸ್, ಮಧ್ಯಾಹ್ನದ ಅಡುಗೆ, ಇಸ್ತ್ರಿ, ಮಕ್ಕಳ ಹೋಂವರ್ಕ್, ನಡುವೆ ರಾತ್ರಿ ಅಡುಗೆ ಚಿಂತೆ. ಇಷ್ಟೆಯೇ..?
ಕೆಲಸದ ಮಧ್ಯೆ ಕುಳಿತು ನೋಡುವ ಹಳಸಲು ಸೀರಿಯಲ್. ಅದೇ ಅತ್ತೆ, ಸೊಸೆ ರಾಗ, ರಿಲೇಷನ್ ಮೇಕ್ ಇಲ್ಲ ಬ್ರೇಕ್-ನಮಗದು ಸೆಂಟಿಮೆಂಟಲ್ ಕೇಕ್. ಯಾಂತ್ರಿಕ ಜೀವನ ನೆನೆದರೆ..ಮತ್ತದೇ ಸಂಜೆ ಮತ್ತದೇ ಮೌನ ಮತ್ತದೇ ರಾಗ ನೆನಪಾಗುತ್ತೆ. ಅಯ್ಯೋ ಇದೇನಾ ಲೈಫ್. ಆಗ ಬಂದು ಆಕ್ರಮಿಸುತ್ತೆ ಬೋರ್. ಇನ್ನು ಟೂರ್ ಹೋಗೋಣ ಅಂದ್ರೆ ರಜಾ ಮತ್ತೆ ಹಣ ಎರಡೂ ಒಟ್ಟಿಗೆ ಬೇಕಲ್ಲಾ. ಇದು ಕಷ್ಟವಲ್ಲವೇ?
ಬ್ರೇ..........ಕ್ ಇದು ಬರೀ ಟಿ.ವಿ ಮಾಧ್ಯಮಕ್ಕೆ ಮೀಸಲಲ್ಲಾರೀ. ಈ ಜೀವನ ಜಂಜಾಟದಲೂ ಬೇಕಾಗುತ್ತೆ ಬ್ರೇಕ್. ದುಡಿತ ದೇಹಕ್ಕೊಂದೇ ಅಲ್ಲ ಮನಸ್ಸಿಗೂ ಇದೆ. ಬಸ್ಸು, ರೈಲಿನಲ್ಲಿ ಪಯಣಿಸುವಾಗ ನೆನಪಿನ ಅಂಗಳಕ್ಕೆ ಇಳಿದು ಅಂತರಂಗದತ್ತ ಒಮ್ಮೆ ಇಣುಕು ನೋಟ ಹರಿಸಿ ಅಲ್ಲಿ ಸಿಗುವುದು ಜೊಲ್ಲ ಜೇನು. ಅಂತರಗದ ತೆರೆದಂತೆ ಗೋಲಿ ಆಟ ಆಡಿದ ಗೆಳೆಯ, ಎಂಜಲು ಸೀಬೆ ತಿನ್ನಿಸಿದ ಗೆಳತಿ. ಐಸ್ ಪೈಸ್,, ಕುಂಟೆ ಬಿಲ್ಲೆ ಆಡುವಾಗ ಬಿದ್ದ ಏಟು. ಪಕ್ಕದ ಮನೆಯ ಮಾವಿನ ಕಾಯಿ ಕದ್ದದ್ದು. ಕಾಲೇಜಿನ ಲೈಫ್‍ನಲ್ಲಿ ಕ್ಲಾಸ್ ಬಂಕ್ ಹೊಡೆದು ಕದ್ದು ನೋಡಿದ ಚಿತ್ರ, ಕಂಬದ ಮರೆಯಲ್ಲಿ ನಿಂತು ಕದ್ದು ನೋಡಿದ ಹುಡುಗ. ಲಾಸ್ಟ್ ಬೆಂಚಿನಲ್ಲಿ ಕೂತು ಕಥೆ ಪುಸ್ತಕಗಳ ಓದಿದ್ದು. ಎಲ್ಲೋ ಅಡಗಿ ಕೂತು ಕೇಳಿದ ಕಾಮೆಂಟರಿ. ಎಲ್ಲರ ಕಣ್ ತಪ್ಪಿಸಿ ಬರೆದ ಪ್ರೇಮ ಪತ್ರ. ಕಂಡದ್ದೆಲ್ಲಾ ತಿಂದದ್ದು. ಒಡಹುಟ್ಟಿದವರೊಡನೆ ಕಳೆದ ರಸ ನಿಮಿಷ. ಅಬ್ಬಾ ಒಂದೇ ಎರಡೇ..ಎಲ್ಲಿ ಹೋದವು ಆ ದಿನಗಳು.. ಮತ್ತೊಮ್ಮೆ ಆ ವಸಂತ ಮರುಕಳಿಸಿ ಬರಬಾರದೇ. ಕಾಲ ಗರ್ಭದಲ್ಲಿ ಮತ್ತೆಂದೂ ಬರದಂತೆ ಮರೆಯಾಗಿ ಹೋದೆಯೇಕೇ..ಕೊಂಡೊಯ್ದಿತೇಕೆ ತನ್ನೊಡನೇ ಬೆರಕು ಕಂಗಳ, ಮುಗ್ಧ ಕನಸಿನ, ಚೆಲ್ಲಾಟದ ಸಿಹಿ ನೆನಪಾ. ಸಂಸಾರದ ಜಂಜಾಟ, ದಿನ ನಿತ್ಯದ ಯಾಂತ್ರಿಕತೆಯಲಿ, ನಗರ ಜೀವನದ ಏಕತಾನತೆಯಲ್ಲಿ ಬೇಸತ್ತ ನಾಗರೀಕರಿಗೆ ಕಾಡುತಾವ ನೆನಪಾ..ಕಾಡುತಾವಾ...
ಒಂದು ರಾತ್ರಿ ದಿನದ ಟಿ.ವಿ.ಯ ಅತ್ತೆ-ಸೊಸೆ/ ಗಂಡ-ಹೆಂಡತಿ ಗೋಳು ಸೀರಿಯಲ್ ಬಿಟ್ಟು ಹೊರಬಂದು ಆಕಾಶದತ್ತ ಕತ್ತೆತ್ತಿ ನೋಡಿ. ಮಿನುಗುವ ತಾರಾಲೋಕ, ನಕ್ಷತ್ರದ ಮಿನುಗು, ಶುಕ್ಲಪಕ್ಷವಾದಲ್ಲಿ ನಗುವ ಚಂದಿರ, ಕಾಂಕ್ರೀಟ್ ಕಾಡಿನಲ್ಲೂ ಬೀಸುವ ತಂಗಾಳಿ ದಣಿದ ದೇಹ-ಮನಗಳಿಗೆ ಲವಲವಿಕೆಯ ಮೂಡಿಸುತ್ತದೆ. ನಿಮಗೆ ಇಷ್ಟವಾದ ಸಂಗೀತ, ಭಾವಗೀತೆ, ಚಿತ್ರಗೀತೆಗಳನ್ನು ಕೇಳಿ. ಆ ಹಾಡಿನ ಮಾಧುರ್ಯ ಮುದ ನೀಡೀತು, ಜೊತೆಗೆ ನೀವೂ ಗುನುಗುನಿಸಿ ಆನಂದವನು ಪಡೆಯಿರಿ. ಇನ್ನು ಬಾತ್ ರೂಂ ಸಿಂಗರ್ಸ್ ಆಗಿದ್ದರೆ ಯೋಚನೆ ಇಲ್ಲ ಬಿಡಿ. ಸ್ನಾನದ ಮಳೆ ಮೈಗೆ ಮುದ ನೀಡಿದರೆ ನಿಮ್ಮದೇ ಸಂಗೀತ ಮೇಳ ಮನಸ್ಸಿಗೆ ನೀಡುತ್ತೆ ನಿರಾಳ. ನಿಮ್ಮ ಚಿಕ್ಕಂದಿನ ಅನುಭವಗಳನ್ನು ಪತಿ, ಮಕ್ಕಳೊಡನೆ ಹಂಚಿಕೊಳ್ಳಿ. ಇದಕ್ಕೆ ಪೂರಕವಾಗಿ ತೆಗೆಯಿರಿ ಬೀರುವಿನಲಿಟ್ಟ ಭದ್ರ ಆಲ್ಬಂ. ಕಾಲೇಜಿನ ಫೋಟೋ-ಗೆಳೆಯ ಗೆಳತಿಯರ ಒಡನಾಟ, ನೀವಾಡಿದ ಆಟ. ಒಡಹುಟ್ಟಿದವರೊಡನೆ ಕಳೆದ ಕ್ಷಣಗಳು. ಮದುವೆಯಾಗಿ ಮಧುಚಂದ್ರದ ಫೋಟೋ, ಪತಿರಾಯ ತಂದಿತ್ತ ಮೊದಲ ಉಡುಗೊರೆ. ಮಗು ಹುಟ್ಟಿದ ದಿನ ತೆಗೆದ ಫೋಟೋ, ಮಗುವಿನ ಲಾಲನೆ/ಪಾಲನೆ ತುಂಟಾಟಗಳನು ಮತ್ತೆ ಮತ್ತೆ ಹಂಚಿಕೊಳ್ಳಿ. ಇದು ನೀಡುವುದು ಮನೋಲ್ಲಾಸ, ಮೊಗದಲಿ ಮಂದಹಾಸ. ನಾವು ಯಾಂತ್ರಿಕತೆಯ ಜೀವನ ಮಾಡುತ್ತಿದ್ದರೂ, ಯಂತ್ರದಂತೆ ದುಡಿದರೂ ಯಂತ್ರಗಳಲ್ಲ. ಖಂಡವಿದೆಕೋ..ಮಾಂಸವಿದೆಕೋ ಜೊತೆಗೆ ಮನಸ್ಸೂ ಇದೆ. ವಿಶ್ರಾಂತಿ ಎಂದು ರಜ ಹಾಕಬೇಕಿಲ್ಲ, ಮನೋರಂಜನೆ ಎಂದು ಹಣ ಖರ್ಚಿಸಬೇಕಿಲ್ಲ. ನಮ್ಮಲ್ಲೇ ಇರುವ ಅಂತರಂಗದಾ ಮೃದಂಗವನ್ನು ಒಂದು ನಿಮಿಷ ತಟ್ಟಿ ನೋಡಿ... ಮೃದುವಾಗಿ ನುಡಿಯುತ್ತದೆ ತಂ ತನನ ತಾನ..ತಂ ತನನ ತಾ ನ. ಎಂದು. ಮತ್ತೆ ಲವಲವಿಕೆ ಮೂಡುತ್ತದೆ. ಈ ಮೆಲಕಿನ ಸವಿ ನೆನಪುಗಳ ಸರಮಾಲೆ ಯಾಂತ್ರಿಕತೆಯಿಂದ ದಣಿದ ದೇಹ-ಮನಸ್ಸಿಗೆ ಚೇತೋಹಾರಿಯಾಗಿರುತ್ತದೆ. ಬ್ರೇ...............................ಕ್










ಅಂತರಂಗದಾ ಮೃದಂಗ
ಶೀರ್ಷಿಕೆ ಚೆನ್ನಾಗಿದೆ. ನಮ್ಮೊಳಗೇ ಹುದುಗಿರುವ ಚಿಕ್ಕ ಪುಟ್ಟ ಸಂತೋಷಗಳನ್ನು ಬಿಟ್ಟು ಹೊರಗಿನ ಸಂತೋಷಗಳನ್ನು ಹುಡುಕುವ ನಮಗೆ ಅಂತರಂಗದೊಳಕ್ಕೆ ಇಣುಕಿ ನೋಡುವಂತೆ ಪ್ರೇರೇಪಿಸಿದೆ ಲೇಖನ. ಯು.ಎ.ಇ.ಯಲ್ಲಿರುವವರಿಗೆ ದಿನನಿತ್ಯದ ತಲೆನೋವಾದ ವಿಪರೀತ ಬಾಡಿಗೆ, ಬೆಲೆಯೇರಿಕೆ ಹಾಗೂ ಕುಸಿಯುತ್ತಿರುವ ರೂಪಾಯಿ ಮೌಲ್ಯಗಳ ಝಂಜಾಟದಿಂದ ಚೇತೋಹಾರಿಯಾಗಿರಲು ಉತ್ತಮ ಮಾರ್ಗಗಳನ್ನು ಲೇಖಕಿ ವಿಷದವಾಗಿ ಹಾಗೂ ಆತ್ಮೀಯವಾಗಿ ವಿವರಿಸಿದ್ದಾರೆ. ಇವರಿಂದ ಇಂತಹ ಇನ್ನೂ ಹಲವಾರು ಲೇಖನಗಳು ಮೂಡಿಬರಲಿ.
ಧನ್ಯವಾದಗಳು.
Lekhana uttamavaagide....
Lekhana uttamavaagide.... 'manasa sarovara' chalachitra nenapige bantu .... manOvaidya 'srinath' baLi obba 'business man' rOgiyaagi baMdaaga aa vaidya aaDuva maatugaLu heegittu