ನಮೂನೆಗಳು
 •    •  
srinath.jpg

                            -  ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ 

ಎಲ್ಲರ ಜೀವನದಲ್ಲೂ ಇಂತಹ ನಮೂನೆಗಳು ಇದ್ದೇ ಇರುತ್ತಾರೆ .... ಇವರುಗಳು ರೀತಿ ರಿವಾಜು ಬೇರೆ ... ಇವರ ನಡುವಳಿಕೆಯನ್ನು 'abnormal' ಅನ್ನುವ ಬದಲು 'different' ಅನ್ನಬಹುದು ... ಬಹಳ ಹಿಂದೆ ಟೀ.ವಿ ಯಲ್ಲಿ ಮೂಡಿ ಬರುತ್ತಿದ್ದ 'Ketchup' ಜಾಹೀರಾತಿನಲ್ಲಿ ಪಂಕಜ್ ಕಪೂರ್ ಹೇಳುವಂತೆ 'Its different' .... ಇರಲಿ, ನಾನು ಏನ ಹೇಳಹೊರಟಿರುವುದೆಂದರೆ ಕೆಲವು ನಮೂನೆಗಳ ನಗುವಿನ ಬಗ್ಗೆ.

ನಾನು ಕೆಲಸ ಮಾಡುತ್ತಿದ್ದ ಒಂದು ಕಂಪನಿಯಲ್ಲಿದ್ದ ಒಬ್ಬ ಸ್ವಾಗತಕಾರಿಣಿ ವಿಷಯ ಹೀಗಿದೆ. ದಿನವೂ ನಾನು ಮುಂದಿನ ಬಾಗಿಲು ತೆರೆದುಕೊಂಡು ಒಳ ಬರುತ್ತಿದ್ದಂತೆ ಡೆಸ್ಕ್ ಹಿಂದಿನ ಸುಂದರಿಯ ಕಿರುನಗು ರೆಡಿ ಇರುತ್ತಿತ್ತು. ಒಮ್ಮೆ ಹೀಗೇ ಅರ್ಜಂಟ್ ಕೆಲಸ ಇತ್ತು ಎಂದು ಸ್ವಲ್ಪ ಬೇಗ ಅಂದರೆ ಏಳೂವರೆಗೇ ಬಂದೆ. ಆಕೆ ಅಲ್ಲೇ ನಿಂತಿದ್ದಳು. ಸ್ಮೈಲೇ ಇಲ್ಲ್ರೀ ! ಏನನ್ಯಾಯ? ಮುಖ ಟ್ರಿಮ್ಮಾಗಿ ಇಸ್ತ್ರಿ ಮಾಡಿದ ಶರ್ಟಿನಂತೆ ಇತ್ತು. ಸುಕ್ಕೂ ಇಲ್ಲ, ಸ್ಮೈಲೂ ಇಲ್ಲ. ಮನೆಯಲ್ಲಿ ಯಾರ ಜೊತೆ ಏನು ಜಗಳವೋ ಏನೋ ಹೋಗಲಿ ಅಂತ ಬಿಟ್ಟ ಬಾಯನ್ನು ಮುಚ್ಚಿಕೊಂಡು ಮುಂದೆ ಹೋದೆ. ಮಾರನೆಯ ದಿನ ಯಥಾಪ್ರಕಾರ ಎಂಟು ಘಂಟೆಗೆ ಬಂದೆ. ಪ್ರಾಮಿಸ್ ಟೂತ್ ಪೇಸ್ಟಿನ ಅದೇ ಮಾಸದ ಕಿರುನಗು ರೆಡಿ ಇತ್ತು. ಅದೇ ಕ್ಷಣ ತಲೆಗೆ ಏನೋ ಹೊಳೆಯಿತು. ಅದರ ಪ್ರಕಾರ ಮುಂದಿನ ಎರಡು ದಿನ ಪರೀಕ್ಷೆ ಮಾಡಿದೆ. ನಾನಂದುಕೊಂಡದ್ದು ಸರಿಯಾಗಿತ್ತು. ಅವಳು ಸ್ಮೈಲ್ ಮಾಡುವುದು ಬೆಳಿಗ್ಗೆ ಎಂಟರಿಂದ ಸಂಜೆ ಐದೂರವರೆಗೆ ಮಾತ್ರ ಅಂತ !

 

ನಾನು ಕೆಲಸ ಮಾಡುತ್ತಿದ್ದ ಮತ್ತೊಂದು ಕಂಪನಿಯಲ್ಲಿ ಒಬ್ಬರು ಮಹಾಶಯರು ಇದ್ದರು. ಅವರ ಸ್ಮೈಲ್ ಬಹಳ ಸ್ಪೆಶಲ್ಲು. ಕೇವಲ ಅರ್ಧ ಸೆಕೆಂಡು ಮಾತ್ರ. ಅವರು ಸ್ಮೈಲ್ ಮಾಡುವಾಗ ನೀವು ಬೇರೆಲ್ಲೋ ನೋಡುತ್ತಿದ್ದಲ್ಲಿ ನಿಮಗೆ ಸ್ಮೈಲ್ ಮಿಸ್ ಆಗುವುದು ಖಂಡಿತ.

 

ಬಹಳಷ್ಟು ಸಲ ನೀವು ಗಮನಿಸಿರಬಹುದು, ಈ ವ್ಯಾಪಾರಿಗಳು ನಿಮ್ಮ ಬಳಿ ಕೆಲಸವಿದ್ದರೆ ಮಾತ್ರ ದೇಶಾವರಿ ನಗೆ ಬೀರುತ್ತಾರೆ. ಇಲ್ಲದಿದ್ದಲ್ಲಿ ನೀವ್ಯಾರೋ ಅವನ್ಯಾರೋ, ನಿಮ್ಮ ಪರಿಚಯವೇ ಇಲ್ಲವೇನೋ ಅಂಬೋ ಹಾಗೆ ಇರುತ್ತದೆ ಅವರ ವರ್ತನೆ.

 

ನಮ್ಮ ಮನೆಯ ಹತ್ತಿರ ಒಬ್ಬ ಹೂ ಮಾರುವ ಹೆಂಗಸು ಇದ್ದಳು. ನಾ ಎಲ್ಲಾದರೂ ಒಬ್ಬನೇ ಹೊರಗೆ ಹೋಗುತ್ತಿದ್ದಾಗ ಕಂಡಲ್ಲಿ, ಐವತ್ತು ಅಡಿ ದೂರದಲ್ಲೇ, ಏರ್-ಇಂಡಿಯಾ ಮಹಾರಾಜನ ಹಾಗೆ, ಶಿರ ಬಾಗಿಸಿ ನಮಸ್ಕಾರ ಮಾಡುತ್ತ, ಮುಖದ ತುಂಬ ನಗು ತುಂಬಿಕೊಂಡು "ನಮಸ್ಕಾರ ಸ್ವಾಮಿ" ಎನ್ನುತ್ತಿದ್ದಳು. ನಾಟಕೀಯವಾಗಿರುತ್ತಿದ್ದ ಆಕೆಯ ವರ್ತನೆ ಬಹಳ ಇರುಸುಮುರುಸಾಗುತ್ತಿತ್ತು. ಕೆಲವೊಮ್ಮೆ ಮನೆಗೆ ಯಾರಾದರೂ ನೆಂಟರು ಬಂದಲ್ಲಿ ಅವರ ಜೊತೆ ಹೊರಗೆ ನೆಡೆದು ಹೋಗುತ್ತಿದ್ದಾಗೆ ಈಕೆ ಎದುರಿಗೆ ಬರುತ್ತಿದ್ದಳು. ಈಗ ನನ್ನ ನೋಡಿ ವಂದಿಸಿದರೆ, ನೆಂಟರ ಮುಂದೆ ನನ್ನ ಲೆವಲ್ಲೇ ಬೇರೆ ಎಂದನಿಸಿ ನಾನು ಬಾಯಿಬಿಟ್ಟುಕೊಂಡು ರೆಡಿಯಾದರೆ.... ಬೇರೆ ಕಡೆ ಮುಖ ತಿರುಗಿಸಿಕೊಂಡು ಹಂಗೇ ಹೊರಟುಹೋಗುವುದೇ? ಪಕ್ಕದಲ್ಲೊಂದು ನಾನು ಅಂತ ಒಂದು ಪ್ರಾಣಿ ಇದೆ ಎಂದೂ ಕಾಣಿಸಿದ ಹಾಗೆ ? ಜೀವನಾನೇ ವೇಸ್ಟು ಕಣ್ರೀ !

 

ಅಮೇರಿಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಒಬ್ಬ ದೇಸೀ ಸ್ನೇಹಿತನಿದ್ದ. ಭಾರತೀಯರೊಡನೆ ಇದ್ದಾಗ ಅರಾಮಾಗಿ ನಗ್ತಾ ನಗ್ತಾ ಇರುತ್ತಿದ್ದ ಅವನು, ತಾನು ಬಿಳಿಯರೊಡನೆ ಇದ್ದಾಗ, ನಗು ಇರಲಿ, ನಾವು ಅವನಿಗೆ ಪರಿಚಯವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದ. ಈ ಪರಿಯ ವರ್ತನೆ ನನಗಂತೂ ಅರ್ಥ ಆಗೋಲ್ಲ. ಹೋಗಲಿ ಬಿಡಿ, ನನಗೆ ನೆಟ್ಟಗಿರೋ ವಿಷಯಾನೆ ಬೇಗ ಅರ್ಥ ಆಗೋಲ್ಲ.

 

ನನ್ನ ಇನ್ನೊಬ್ಬ ಸ್ನೇಹತನ ಬಗ್ಗೆ ಹೇಳಲೇಬೇಕು. ಭಾನುವಾರದಂದು ಈತನನ್ನು ಭೇಟಿಯಾದರೆ ನಿಮಗೆ ಒಂದು ಸೋಜಿಗದ ಸಂಗತಿ ಅರಿವಾಗುತ್ತದೆ. ಒಮ್ಮೆ ಹೀಗೆ ಭಾನುವಾರ ಸಂಜೆ ಅವನನ್ನು ಯಾವುದೋ ಅಂಗಡಿಯಲ್ಲಿ ಭೇಟಿಯಾದೆ. ನಾಳೆಯಿಂದ ಮತ್ತೆ ಕೆಲಸಕ್ಕೆ ಹೋಗಬೇಕಲ್ಲ ಎಂಬ Monday Syndrome ಮುಖದಲ್ಲಿ ಎದ್ದು ಕಾಣುತ್ತಿತ್ತು. ಸುಮ್ಮನೆ ಉಭಯಕುಶಲೋಪರಿ ವಿಚಾರಿಸಿದಾಗ ಅವನ ಸಪ್ಪೆ ಮುಖದ ಹಿಂದಿನ ಗೋಳು ಹೇಳಿಕೊಂಡ "ನಾಳೆಯಿಂದ ಮತ್ತೆ ಅದೇ ಜನ, ಅದೇ ಕೆಲಸ, ಸಿಕ್ಕ ಮಂದಿಗೆಲ್ಲ ಸ್ಮೈಲ್ ಕೊಡಬೇಕು. ಬೇಜಾರು" ಅಂತ !!!

 

ನಗ್ತಾ ನಗ್ತಾ ಇದ್ರೂ ಜನ ಕಾರಣ ಕೇಳ್ತಾರೆ. ಯಾರೋ ಕೇಳಿದರಂತೆ "ನೀವು ಯಾವಾಗ್ಲೂ ನಗ್ತಾ ನಗ್ತಾ ಇರ್ತೀರಲ್ಲ ಏನು ರಹಸ್ಯ" ಅಂತ. ಅದಕ್ಕೂ ಕಣ್ಣು ಹಾಕ್ತಾರಲ್ಲ ಅಂತ ಅನ್ನಿಸಿ ಅವರು ನಗುತ್ತಲೇ ಹೇಳಿದರಂತೆ "ಹೋದ ವರ್ಷ ಹುಚ್ಚು ನಾಯಿ ಕಚ್ಚಿದ್ದೇ ರಹಸ್ಯ" ಅಂತ !!

 

ದೊಡ್ಡವರು ಹೇಳ್ತಾರೆ "ನಗು ಅನ್ನುವುದು ಸಾಂಕ್ರಾಮಿಕ" ಅಂತ. ಕೆಮ್ಮು ನೆಗಡಿಯ ಹಾಗೆ .... ಅದಕ್ಕೇ ಇರಬೇಕು ಕೆಲವರು ನಗುವಾಗ ಬಾಯಿ ಮುಚ್ಚಿಕೊಂಡೇ ನಗ್ತಾರೆ... ಕೆಲವರು ಬಾಯಿಗೆ ಕೈ ಅಡ್ಡ ಇಟ್ಟುಕೊಂಡು ನಗ್ತಾರೆ !!

 

ವೈದ್ಯ ಮುಖದ ಮೇಲಿನ ಒಂದು ಸ್ಮೈಲ್ ರೋಗಿಯ ನೋವು ಅರ್ಧ ವಾಸಿ ಮಾಡುತ್ತದಂತೆ. ಆದರೆ ಲಾಯರ್’ಗಳ ಮುಖದಲ್ಲಿ ಸ್ಮೈಲ್ ಇರೋಲ್ಲವಂತೆ. ಏನು ಮಾಡೋದು ಅವರ ಕಸುಬೇ ಹಾಗೇ ಪಾಪ. ನಗ್ತಾ ನಗ್ತಾ "ಏನು ಕೊಲೆ ಕೇಸಾ?" ಅಂತಲೋ ಅಥವಾ "ಏನು ಡಿವೋರ್ಸಾ?" ಅಂತ ಕೇಳಲಿಕ್ಕೆ ಆಗುತ್ತಾ ?

 

ಮುಖದ ಮೇಲಿನ ಸಣ್ಣ ಕಿರುನಗುವಿನಿಂದ ನಿಮ್ಮ ದಿನವೇ ಅಲ್ಲ ನಿಮ್ಮನ್ನು ನೋಡುವವರ ದಿನವೂ ಅರಳುತ್ತದೆ.

 

ದೇಶದ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೇ ಇರುವುದು ಅನ್ನೋ ಹಾಗೆ ಸದಾ ಬಿಗಿದ ಮುಖ ಹೊತ್ತುಕೊಂಡಿರುವ ರಾಜಕಾರಣಿಗಳಿಗೆ ನನ್ನ ಕಿರು ಮಾತು "ಮೂಗಿಗೆ ಹತ್ತಿ ತುರುಕೋ ಮುನ್ನ ಬಾಯಿಬಿಟ್ಟು ಒಮ್ಮೆ ನಕ್ಕುಬಿಡಿ ... smile costs nothing ..."

 

 

Namaskara! Srinath

Namaskara! Srinath avare,

Chennaagi nagu barisida lEkhana barediddakke dhanyavaadagaLu!

It reminds me "naguvu sahajada dharma, nagisuvudu paradharma, naguva kELuta------MaMkutimmaa"!

Thx again,
Meena.

Syndicate

Syndicate content