ಟಾಟಾ ಪ್ರಸ್ತುತಪಡಿಸುತ್ತಿದೆ : ಏರ್ ಕಾರ್
tata air car1.jpg
 
ಅಂತ್ಯಗೊಂಡೀತೇ ತೈಲದ ಮೇಲಿನ ನಿರ್ಭರ? 
           -ಅರ್ಶದ್ ಹುಸೇನ್ ಎಂ.ಹೆಚ್, ದುಬೈ. 
ಜಗತ್ತಿನ ಆಗುಹೋಗುಗಳಲ್ಲಿ ತೈಲದ ಪಾತ್ರ ಮಹತ್ತರ. ಕಾರಣ? ಸರಕು ಸಾಗಾಣಿಕೆಗೆ ಅತ್ಯಗತ್ಯವಾದ ಇಂಧನ ದೊರೆಯುವುದು ತೈಲದಿಂದ. ತೈಲ ಮಾರಾಟದಿಂದಲೇ ಶ್ರೀಮಂತರಾಗಿರುವ ಕೊಲ್ಲಿ ರಾಷ್ಟ್ರಗಳು, ಹೇಳ ಹೊರಟರೆ ಉದ್ಗ್ರಂಥವೇ ಆಗಬಹುದು.  ಒಂದು ವೇಳೆ ತೈಲದ ಅವಲಂಬನೆಯೇ ಇಲ್ಲದಿದ್ದರೆ?  
ಒಂದು ಸುಂದರ ಕನಸು, ನನಸಾಗುವ ದಿನಗಳು ಹತ್ತಿರ ಬರುತ್ತಿವೆ. ಜಗತ್ತಿನಾದ್ಯಂತ ಹತ್ತು ಹಲವಾರು ಸಂಶೋಧನೆಗಳು ನಡೆಯುತ್ತಿವೆ.  ಸುಮಾರು ಒಂದು ವರ್ಷದ ಹಿಂದೆ ಒತ್ತಡಕ್ಕೊಳಗಾದ ಅನಿಲ (ಕಂಪ್ರೆಸ್ಡ್ ಏರ್) ಬಳಸಿ ನಡೆಯುವ ಕಾರೊಂದನ್ನು ಜರ್ಮನಿಯ ಲುಕ್ಸೆಂಬೋರ್ಗ್ ನಲ್ಲಿರುವ ಎಂ.ಡಿ.ಐ ಸಂಸ್ಥೆ ಪ್ರಸ್ತುತಪಡಿಸಿತ್ತು.  ಈ ತಂತ್ರಜ್ಞಾನವನ್ನು ಭಾರತದ ಟಾಟಾ ಸಂಸ್ಥೆ ಬಳಸುವಲ್ಲಿ ಒಲವು ತೋರಿ ೨೦೦೭ ಫೆಬ್ರವರಿಯಲ್ಲಿ ಒಟ್ಟು ಇಪ್ಪತ್ತೇಳು ಮಿಲಿಯನ್ ಡಾಲರುಗಳನ್ನು ಈ ತಂತ್ರಜ್ಞಾನದಲ್ಲಿ ಹೂಡಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಟಾಟಾ ಆಟೋಮೊಬೈಲ್ಸ್ ಈ ತಂತ್ರಜ್ಞಾನ ಹೊಂದಿದ ಕಾರಿನ ಕರಡು ಮಾದರಿಯನ್ನು ಪರಿಚಯಿಸಿದೆ. ಎಂಡಿಐ ಸಂಸ್ಥೆ ಪ್ರಸ್ತುತಪಡಿಸಿದ್ದ ಒಂದು ಮಾದರಿಯ ಪಡಿಯಚ್ಚನ್ನು ಈಗ ಭಾರತದಲ್ಲಿ ಪರಿಚಯಿಸಿರುವ ಟಾಟಾ ಸಂಸ್ಥೆಯ ಹೊಸ ಕಾರು ಯಶಸ್ವಿಯಾದರೆ ಕ್ರಾಂತಿಯನ್ನೇ ಉಂಟುಮಾಡಲಿದೆ.
ಮಿನಿಕ್ಯಾಟ್ ( MiniCAT ) ಎಂದು ಹೆಸರನ್ನಿಟ್ಟ ಈ ಕಾರಿನ ಇಂಧನ ಅಪ್ಪಟ ಗಾಳಿಯಾಗಿದೆ, ಆದರೆ ಒತ್ತಡಕ್ಕೊಳಗಾಗಿರುವ ಗಾಳಿಯ (ಕಂಪ್ರೆಸ್ಡ್ ಏರ್) ರೂಪದಲ್ಲಿ. ಆಗಸ್ಟ್ ೨೦೦೯ ರ ವೇಳೆಗೆ ಭಾರತದ ರಸ್ತೆಗಳಲ್ಲಿ ಸುಮಾರು ಆರುಸಾವಿರ ಮಿನಿಕ್ಯಾಟುಗಳನ್ನು ಓಡಿಸಲು ಟಾಟಾ ನಿರ್ಧರಿಸಿದೆ.
ಕಾರ್ಯವಿಧಾನ: ಸಾಂಪ್ರಾದಾಯಿಕ ಕಾರುಗಳ ಇಂಜಿನ್ನುಗಳಲ್ಲಿ ಇಂಧನ ಧಹನವಾದಾಗ ಎರೆಡು ಬಗೆಯ ಶಕ್ತಿಗಳು ಬಿಡುಗಡೆಯಾಗುತ್ತವೆ. ಇಂಧನ ಮತ್ತು ಗಾಳಿಯ ಮಿಶ್ರಣ ಉರಿದಾಗ ಬಿಡುಗಡೆಯಾಗುವ ಶಾಖ ಮತ್ತು ಒತ್ತಡ. ಈ ಒತ್ತಡವನ್ನು ಮಾತ್ರ ಇಂಜಿನ್ನಿನ ಪಿಸ್ಟನುಗಳು ಹಿಂದೆ ಮುಂದೆ ಚಲಿಸಿ ಕೈನೆಟಿಕ್ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಶಾಖವನ್ನು ರೇಡಿಯೇಟರುಗಳ ಮುಖಾಂತರ ತಂಪುಗೊಳಿಸಲಾಗುತ್ತದೆ. ಅಂದರೆ ಇಂಧನದ ಅರ್ಧದಷ್ಟು ಹೆಚ್ಚಿನ ಕ್ಷಮತೆ ವ್ಯರ್ಥವಾಗಿ ಹೋಗುತ್ತದೆ.  
ಇಂಧನದ ಬೆಲೆ ಕಡಿಮೆಯಿದ್ದಾಗ ಚಿಂತೆಯಿರಲಿಲ್ಲ. ಈಗ ಇಂಧನದ ಬೆಲೆ ವಿಶ್ವವ್ಯಾಪಿಯಾಗಿ ಬೆಳೆದಿರುವಾಗ ಪರ್ಯಾಯ ಇಂಧನ ಆಪತ್ಬಾಂಧವನಾಗಿ ಬಂದಿದೆ. ಏರ್ ಕಾರಿನಲ್ಲಿ ಇಂಧನದ ಬದಲು ಕಂಪ್ರೆಸ್ಡ್ ಏರ್ - ಒತ್ತಡಕ್ಕೊಳಗಾದ ಗಾಳಿಯನ್ನೇ ಪಿಸ್ಟನುಗಳ ಚಲನೆಗಾಗಿ ಬಳಸಲಾಗುತ್ತದೆ. ಪೂರ್ವವಾಗಿ ಕಂಪ್ರೆಸರ್ ಒಂದನ್ನು ಬಳಸಿ ಒತ್ತಡಕ್ಕೊಳಗಾಗಿಸಿದ ಗಾಳಿಯ ಸಿಲಿಂಡರ್ (ಅಥವಾ ಟ್ಯಾಂಕ್) ಕಾರಿಗೆ ಶಕ್ತಿಯನ್ನು ಒದಗಿಸುತ್ತದೆ.  ಮಿನಿಕ್ಯಾಟ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿ ಹೊರಬಂದಿರುವ ವಾಹನವಾಗಿದ್ದು ಎಲ್ಲೂ ವೆಲ್ಡಿಂಗ್ ಬಳಸಲಾಗಿಲ್ಲ. ಬದಲಿಗೆ ಅದರ ಫೈಬರ್ ಗ್ಲಾಸ್ ಗೋಡೆಗಳನ್ನು ಗೋಂದಿನಿಂದ ಅಂಟಿಸಲಾಗಿದೆ. ಈ ಬಂಧ ವೆಲ್ಡಿಂಗಿಗಿಂತಲೂ ಹೆಚ್ಚು ಸುದೃಢವಾಗಿದೆ ಎಂದು ಎಂಡಿಐ ಸಂಸ್ಥೆಯ ಮುಖ್ಯ ಅಭಿಯಂತರ ಗಯ್ ನೀಗ್ರೆ ಯವರು ಅಭಿಮಾನದಿಂದ ವಿವರಿಸುತ್ತಾರೆ.  ಪೂರ್ವ ಒತ್ತಡಕ್ಕೊಳಗಾದ ಅನಿಲ ಕೊಳವೆಯೊಂದರಲ್ಲಿ ಬಿಡುಗಡೆಗೊಂಡಾಗ ಹೆಚ್ಚಿನ ಒತ್ತಡದಿಂದ ಕಡೆಮೆ ಒತ್ತಡಕ್ಕೆ ಪರಿವರ್ತನೆ ಹೊಂದುವಾಗ ವಿಕಸನಗೊಳ್ಳುತ್ತದೆ. ಆಗ ಕೊಳವೆಯೊಳಗಣ ಪಿಸ್ಟನುಗಳು ಹಿಂದೆ ಮುಂದೆ ಚಲಿಸಿ ಕೈನೆಟಿಕ್  ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಈ ಶಕ್ತಿ ಕಾರನ್ನು ಚಲಿಸಲು ಉಪಯೋಗವಾಗುತ್ತದೆ. ಬರ್ನೋಲಿಯ ಸಿದ್ಧಾಂತದ ಪ್ರಕಾರ ಹೆಚ್ಚಿನ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಚಲಿಸಿದ ಅನಿಲ ಶಾಖವನ್ನು ಕಡಿಮೆಗೊಳಿಸುತ್ತದೆ. ಅಂದರೆ ಪಿಸ್ಟನುಗಳಿಗೆ ಚಾಲನೆ ಕೊಟ್ಟು ಬಂದ ಗಾಳಿ ಶೂನ್ಯಕ್ಕಿಂತ ಹದಿನೈದು ಡಿಗ್ರಿಗಳಷ್ಟು ಕೆಳಗೆ (ಮೈನಸ್ ಹದಿನೈದು ಡಿಗ್ರಿ) ತಣ್ಣಗಿರುತ್ತದೆ. ಈ ಗಾಳಿಯನ್ನು ಕಾರಿನ ಹವಾನಿಯಂತ್ರಣ (ಏರ್ ಕಂಡಿಶನಿಂಗ್) ವ್ಯವಸ್ಥೆಗಾಗಿ ಬಳಸಲಾಗಿದೆ. ಅಂದರೆ ಒಂದು ಕಲ್ಲಿನಲ್ಲಿ ಎರೆಡು ಹಕ್ಕಿ. 
ಮಿನಿಕ್ಯಾಟ್ ಉಪಯೋಗಿಸುವ ಟ್ಯಾಂಕ್ ಒಮ್ಮೆ ಭರ್ತಿ ಮಾಡಿದರೆ ಸುಮಾರು ಮುನ್ನೂರು ಕಿ.ಮೀ ದೂರ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.  ಪ್ರತಿ ಮರುಭರ್ತಿಗೆ ಸುಮಾರು ಎಂಭತ್ತೈದು ರೂಪಾಯಿ ಮಾತ್ರ ಖರ್ಚಾಗಲಿದೆ.  ಅಂದರೆ ಪ್ರತಿ ಕಿ.ಮೀಗೆ ನಾಲ್ಕಾಣೆ ದರ. ಹೊಗೆಯ ರಗಳೆಯಿಲ್ಲ, ವಾಯು ಪ್ರದೂ
ಶಣೆಯಿಲ್ಲದ ಪರಿಸರಸ್ನೇಹಿ ಕಾರು.  ಕಾರಿನ ನಿಯಂತ್ರಣಗಳನ್ನು ಮೈಕ್ರೋಕಂಟ್ರೋಲರ್ ಗಳನ್ನು ಬಳಸಿರುವುದರಿಂದ ಒಂದು ರಿಮೋಟ್ ಬಳಸಿ ಕಾರಿನ ಹೆಡ್ ಲೈಟ್, ಇಂಡಿಕೇಟರ್, ಹಾರ್ನ್ ಮೊದಲಾದ ಭಾಗಗಳನ್ನು ನಡೆಸಬಹುದಾಗಿದೆ. ಇಂಜಿನ್ನು ಪ್ರಾರಂಭಿಸಲು ಕೀ ವ್ಯವಸ್ಥೆಯನ್ನೇ ತೆಗೆದುಹಾಕಲಾಗಿದೆ. ಚಾಲಕನ ಜೇಬಿನಲ್ಲಿರುವ ಆಕ್ಸೆಸ್ ಕಾರ್ಡ್ ಕಾರಿನ ಕೀಲಿಕೈ.  ಕಾರಿನ ಅತ್ಯಧಿಕ ವೇಗ ನೂರಾಐದು ಕಿ.ಮೀ. ಪ್ರತಿ ಘಂಟೆಗೆ, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ.  ಮಧ್ಯೆ ಎಲ್ಲಿಯಾದರೂ ಟ್ಯಾಂಕ್ ಖಾಲಿಯಾದರೆ ೨೨೦ ಅಥವಾ ೩೮೦ ವೋಲ್ಟ್ ವಿದ್ಯುತ್ ಇರುವ ರೀಫಿಲ್ ಕೇಂದ್ರದ ಸಂಪರ್ಕ ಪಡೆದು ರೀಚಾರ್ಜ್ ಮಾಡಿಕೊಂಡರಾಯಿತು.  ಇದಕ್ಕೆ ಬೇಕಾಗುವ ಸಮಯ ಸುಮಾರು ಎರಡರಿಂದ ಮೂರು ನಿಮಿಷ ಅಷ್ಟೇ. ಪ್ರತಿ ರೀಚಾರ್ಜ್ ಗೆ ಬರುವ ಖರ್ಚು ಸುಮಾರು ಎಂಭತ್ತೈದು ರೂಪಾಯಿ. ಪರ್ಯಾಯವಾಗಿ ಕಾರಿನೊಂದಿಗೇ ಒಂದು ಕಂಪ್ರೆಸರ್ ಅಳವಡಿಸಲಾಗಿದೆ. ಇದನ್ನು ಉಪಯೋಗಿಸಿ ಟ್ಯಾಂಕ್ ಭರ್ತಿಮಾಡಿಕೊಳ್ಳಬಹುದಾದರೂ ನಿಧಾನವಾದ ಪ್ರಕ್ರಿಯೆ ಸುಮಾರು ಮೂರರಿಂದ ನಾಲ್ಕು ಘಂಟೆ ತೆಗೆದುಕೊಳ್ಳುತ್ತದೆ. ಹಾಗಾಗಿ ಪ್ರತಿ ಕಾರಿಗೆ ಎರಡು ಅಥವಾ ಮೂರು ಟ್ಯಾಂಕುಗಳನ್ನು ಖರೀದಿಸಿ ಮನೆಯಲ್ಲಿಯೇ ಒಂದು ಕಂಪ್ರೆಸರ್ ಮೂಲಕ ರೀಚಾರ್ಜ್ ಮಾಡಿಟ್ಟುಕೊಂಡರೆ ಆ ಎಂಭತ್ತೈದು ರೂಪಾಯಿಗಳೂ ಉಳಿತಾಯ.  
ಅಂದರೆ ಈಗಿರುವ ಪೆಟ್ರೋಲು ಸ್ಟೇಶನ್ ಗಳು ಕಂಪ್ರೆಸ್ಡ್ ಏರ್ ನೀಡುವ ಸ್ಟೇಷನ್ ಗಳಾಗಿ ಮಾರ್ಪಾಡಾಗುತ್ತವೆ.  ಇಂಜಿನ್ನು ಸರಿಸುಮಾರಾಗಿ ಆಯಿಲ್ ರಹಿತವಾಗಿ ನಡೆದರೂ ಉಳಿದ ಚಾಲನಾ ಬಿಡಿಭಾಗಗಳಿಗೆ ಆಯಿಲ್ ಅಗತ್ಯವಾಗಿ ಬೇಕಾಗಿರುವುದು ಒಂದು ಲೀಟರ್ ಸಸ್ಯಜನ್ಯ ಎಣ್ಣೆ ಮಾತ್ರ, ಅದೂ ಕೂಡಾ ಐವತ್ತು ಸಾವಿರ ಕಿಲೋಮೀಟರುಗಳಿಗೆ ಸಾಕು. 
ಕಾರಿನ ಉಳಿದ ವಿವರಗಳು ಇಂತಿವೆ:
ಶಕ್ತಿಮೂಲ: ೩೦೦ ಬಾರ್ ಒತ್ತಡದಲ್ಲಿ ಒಟ್ಟು ೯೦ ಕ್ಯುಬಿಕ್ ಮೀಟರ್ ಗಾಳಿ
ಕಾರಿನ ತೂಕ: ೭೨೦ ಕೇಜಿ
ರೀಚಾರ್ಜ್ ಸಮಯ : (ಸ್ಟೇಶನ್ನಿನಲ್ಲಿ) - ೩ ನಿಮಿಷ
                 (ಮನೆಯಲ್ಲಿ ) - ನಾಲ್ಕು ಘಂಟೆ
ಗರಿಷ್ಟ ವೇಗ : ೧೧೦ ಕಿ.ಮೀ. ಪ್ರತಿ ಘಂಟೆಗೆ
ಸಧ್ಯದ ಮಾದರಿಗೆ ಮೂರುವರೆ ಲಕ್ಷ ರೂಪಾಯಿ ಅಂದಾಜು ಬೆಲೆ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರಿನ ಜನಪ್ರಿಯತೆಯನ್ನು ಕಂಡುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದರೆ ಬೆಲೆ ಕಡಿಮೆಯಾಗಲೂಬಹುದು. ಆ ದಿನ ಬೇಗನೇ
ಬರಲಿ ಎಂದು ಆಶಿಸೋಣವಲ್ಲವೇ.
 
(ಈ ಲೇಖನದ ಕೆಲವಿಷಯಗಳನ್ನು ಇತ್ತೀಚೆಗೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಅಳವಡಿಸಿಕೊಳ್ಳಲಾಗಿದೆ)

Syndicate

Syndicate content