ಗಗನಚುಕ್ಕಿ ಮತ್ತು ಭರಚುಕ್ಕಿ
-ನಳಿನಿ ಸೋಮಯಾಜಿ
ಪ್ರವಾಸ ಲೇಖನ-೧
ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ವೈಯಾರಾವಾಗಿ ಬಳಕುತ್ತಾ ಹರಿದು ಕರ್ನಾಟಕದ ಕೆಲೆವೆಡೆ ಸುಂದರ ತಾಣಗಳನ್ನು ಸೃಷ್ಟಿಸಿ ಕರ್ನಾಟಕದ ಚೆಲುವನ್ನು ಹೆಚ್ಚಿಸಿದ್ದಾಳೆ ಎಂದರೆ ಅತಿಶಯೋಕ್ತಿಯಾಗಲಾರದು. ಕೆಲೆವೆಡೆ ವಯ್ಯಾರ ತೋರಿದರೆ, ಕೆಲೆವೆಡೆ ರಭಸ, ಕೆಲೆವೆಡೆ ಶಾಂತ. ಹೀಗೆ ಹರಿಯುವ ಕಾವೇರಿಯ ಭರ ನೋಡುವುದೇ ಒಂದು ಆನಂದ.
ಕರ್ನಾಟಕದ ಈ ಜೀವ ಮಾತೆಯು ಹರಿದಲ್ಲೆಲ್ಲಾ, ಪವಿತ್ರ ಸುಂದರ ತಾಣ. ಪ್ರಕೃತಿಯೊಂದಿಗೆ ಬೆರೆತು ತನ್ನ ಚೆಲುವಿನಿಂದ ಪ್ರಕೃತಿಯ ಅಂದ ಹೆಚ್ಚಿಸಿ ಬೆಡಗಿನಿಂದ ಹರಿಯುತ್ತಾ ಜನರನ್ನು ಆಕರ್ಷಿಸುತ್ತಿದ್ದಾಳೆ ನಮ್ಮ ಕಾವೇರಿ ತಾಯಿ. ಶ್ರೀರಂಗ ಪಟ್ಟಣ , ತಲಕಾಡು ಗಗನಚುಕ್ಕಿ ಮತ್ತು ಭರಚುಕ್ಕಿ ರಂಗನತಿಟ್ಟು ಹೀಗೆ ಹಲವಾರು ಪ್ರದೇಶಗಳನ್ನು ಸ್ಪರ್ಶಿಸಿ ಅಲ್ಲಲ್ಲಿ ಸೌಂದರ್ಯ ತಾಣ ಗಳನ್ನು ಸೃಷ್ಟಿಸಿದ ಈ ಕಾವೇರಿ ಕರ್ನಾಟಕದ ಜೀವನಾಡಿಯೂ ಹೌದು.
ಕಾವೇರಿಯು ರಭಸದಿಂದ ಧುಮುಕಿ ಹರಿಯುವ ತಾಣಗಳೆ ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು.
ತಿರುಗಾಟದ ಹುಚ್ಚಿರುವ ನಮಗೆ, ಬೇರೆ ಬೇರೆ ಸ್ಥಳ ನೋಡುವ ಹವ್ಯಾಸ ಇಬ್ಬರಿಗೂ ಇರುವುದರಿಂದ ಈ ಬಾರಿ ಮೈಸೂರಿಗೆ ಹೋಗುವ ಸಂಧರ್ಭದಲ್ಲಿ ಮಂಡ್ಯ ಪ್ರದೇಶಕ್ಕೆ ಸೇರಿದ ಶಿವಸಮುದ್ರದಲ್ಲಿನ ಗಗನ ಚುಕ್ಕಿ ಮತ್ತು ಭರಚುಕ್ಕಿ ನೋಡಿ ಬರುವ ಕಾರ್ಯಕ್ರಮ ಹಾಕಿಕೊಂಡು ಹೊರಟೆವು. ಬೆಂಗಳೂರಿನಿಂದ ಹೊರಟು ಮದ್ದೂರು ಸೇರಿ ಅಲ್ಲಿಂದ ಮಳವಲ್ಲಿ ಮೂಲಕ ಸುಮಾರು 48 ಕಿ.ಮೀ. ದೂರದ ಶಿವಸಮುದ್ರ ತಲುಪಿದೆವು. ಹೋಗುವ ಮಾರ್ಗವು ಸ್ವಲ್ಪವೂ ಸರಿ ಇರದ ಕಾರಣ ನಾವು ಎಣಿಸಿದ್ದಕ್ಕಿಂತ ಹೆಚ್ಚಿನ ಸಮಯ ತಲುಪಲು ಬೇಕಾಯಿತು. ದಾರಿ ಉದ್ದಕ್ಕೂ ಹಳ್ಳಿಗಳು ಮತ್ತು ಹೊಲ, ತೋಟ ಮತ್ತು ಗದ್ದೆಗಳ ದೃಶ್ಯ ಮನಸ್ಸಿಗೆ ಮುದ ನೀಡಿದವು. ಶಿವನ ಸಮುದ್ರ ಸೇರಿ ಅಲ್ಲಿಂದ ಹತ್ತು ಕಿಲೊಮೀಟರ್ ದೂರದಲ್ಲಿ ನಮ್ಮ ಕಾವೇರಿ ನದಿ ಬೆಟ್ಟ ಕಣಿವೆಗಳ ಮೂಲಕ ಹರಿದು ಗಗನ ಚುಕ್ಕಿಯಲ್ಲಿ ರಭಸವಾಗಿ ಮೇಲಿಂದ ಧುಮುಕುತ್ತಾ ಅಲ್ಲಿಂದ ಹದಿನಾಲ್ಕು ಕಿಲೊಮೀಟರ್ ದೂರದಲ್ಲಿ ಮತ್ತೊಮ್ಮೆ ಭರಚುಕ್ಕಿಯಗಿ ಧುಮುಕುತ್ತಾಳೆ. ಕಾವೇರಿಯ ಈ ನಾಟ್ಯವನ್ನು ನಾವು ಬಣ್ಣಿಸುವುದು ಮಾತಿಗೆ ಸಿಗದ ವಿಷಯ. ಅಲ್ಲಿಗೆ ಹೋಗಿ ಆನಂದಿಸುವುದು, ಹಾಗು ಆ ದೃಶ್ಯಗಳನ್ನು ಕಣ್ಣಲ್ಲಿ ಸೆರೆಹಿಡಿಯುವುದು ಮನಸ್ಸಿಗೆ ಮತ್ತೇರಿಸುವ ಸಂಗತಿಗಳೆಂದರೆ ತಪ್ಪಾಗದೇನೊ.
ಮಳೆಗಾಲವಾದುದರಿಂದ ಹಾಗೂ ಚೆನ್ನಾಗಿ ಮಳೆ ಬಂದು ಕಾವೇರಿ ಮೈ ತುಂಬಿ ಹರಿಯುತ್ತಿದ್ದರಿಂದ ಗಗನಚುಕ್ಕಿ ಹಾಗು ಭರಚುಕ್ಕಿ ಎರಡೂ ಜಲಪಾತಗಳಲ್ಲಿ ನೀರು ತುಂಬಿದ್ದು ಕಾವೇರಿ ರುದ್ರ ನರ್ತನ ಮಾಡುತ್ತಿದ್ದಂತೆ ಕಾಣುತ್ತಿತ್ತು. ನನಗಂತೂ ಧುಮುಕುವ ನೀರನ್ನು ಎಷ್ಟು ನೋಡಿದರೂ ಇನ್ನೂ ನೋಡಬೇಕೆನ್ನುವ ತವಕ. ನಾವು ಅದೇ ದಿನ ತಲಕಾಡು ನೋಡಿ ಮೈಸೂರಿಗೆ ಹೋಗಬೇಕಾದ್ದರಿಂದ ಮನಸಿಲ್ಲದ ಮನಸ್ಸಿನಿಂದ ನಮ್ಮ ಪ್ರಯಾಣ ಮುಂದುವರೆಸಿದೆವು. ಭರಚುಕ್ಕಿಯಲ್ಲಿ ನಾವು ಮೆಟ್ಟಿಲುಗಳನ್ನು ಇಳಿದು ಹರಿಯುವ ನೀರನ್ನು ಮುಟ್ಟಬಹುದು. ಇಲ್ಲಿ ತೆಪ್ಪದ ಸಹಾಯದಿಂದ ನೀರು ಬೀಳುವ ಸ್ಥಳದ ಸಮೀಪದವರೆಗೆ ಹೋಗಬಹುದಾಗಿದೆ. ನೀರಿನ ಹತ್ತಿರ ಹೊಗದೇ ದೂರ ನಿಂತು ಆನಂದಿಸಿ ಎನ್ನುವ ಎಚ್ಚರ ಫಲಕ ಅಲ್ಲಲ್ಲಿ ಪ್ರಕಟಿಸಲಾಗಿದೆ. ಗಗನ ಚುಕ್ಕಿಯನ್ನು ಸ್ವಲ್ಪ ಮುಂದೆ ಇರುವ ದರ್ಗಾ ಕಡೆಯಿಂದಲೂ ವೀಕ್ಷಿಸಬಹುದು. ದರ್ಗಾ ಕಡೆಯಿಂದ ಹರಿಯುವ ಕಾವೇರಿ ಕಾಣುತ್ತಾಳೆ.
ಗಗನ ಚುಕ್ಕಿ ಮತ್ತು ಭರಚುಕ್ಕಿ ಕರ್ನಟಕದ ಸುಂದರ ಪ್ರವಾಸಿ ಸ್ಥಳಗಳಾಗಿದ್ದರೂ ಪ್ರವಾಸಿಗರಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಈ ಸ್ಥಳಗಳ ವ್ಯಾಪ್ತಿಯಲ್ಲಿರುವ ಕಾರುಬಾರನ್ನು ನಡೆಸುತ್ತಿರುವ ಸಂಸ್ಥೆ, ಸರಿಯಾದ ವ್ಯವಸ್ಥೆಗಳನ್ನು ಮಾಡುವುದರಿಂದ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ.









