ಕವಿತೆ ಬಂದಳು
Satyanarayana

ಕಥೆ ಬರೆಯಬೇಕೆಂದು ಕುಳಿತಿದ್ದೆ
ಕವಿತೆ ಬಂದಳು.
ತಿದ್ದಿ ತೀಡಿದ ಛಂದೋರೂಪ
ಹಂಸನಡಿಗೆಯ ಪಾದಗತಿ
ಕಣ್ಣಲ್ಲಿ ಸೂರ್ಯರಶ್ಮಿ
ಮುಖದಲ್ಲಿ ಚಂದ್ರಹಾಸ
ಹೀಗೆ
ಕವಿತೆ ಬಂದಳು.

ಕಥೆ ಬರೆಯಬೇಕೆಂದು ಕುಳಿತಿದ್ದೆ
ಕವಿತೆ ಬಂದಳು.
ಗದ್ಯದ ಕಾಠಿಣ್ಯ
ಒಡೆದು ತೋರುವ ಗುಣ, ಗೌಡೀ ವೈದರ್ಭೀ
ಒಂದಕ್ಕೆ ನೂರು ಬರೆಯಬೇಕಾದ ತುರ್ತು
ಇವಾವು ಇಲ್ಲದೆ
ಲಾಲಿತ್ಯಪೂರ್ಣಾವತಾರದ
ಹೆಣ್ಣುಮಗುವಿನಂತೆ
ಕವಿತೆ ಬಂದಳು.

ಹಾಗೆ ನೋಡಿದರೆ
‘ಬರಬೇಡ ಮಗಳೇ’
ಎನ್ನಲು ನಾನಾದರೂ ಯಾರು?
ಭಣ ಭಣ ಜಗತ್ತಿಗೆ ಬೆನ್ನು ಜಾನಿಸುವ
ಮಾತೃಹಸ್ತದ ಅಗತ್ಯ
ಬೇಡವೆಂದರೂ ತಡೆದಾಳೆ?

ಕವಿತೆ ಬಂದಳು
ಕರೆಯದೇ ಬರುವ ಅತಿಥಿಯಂತೆ; ಅಲ್ಲ
ಬಾಳಬಂಡಿಯ ಪಯಣಕೊಂದಿಷ್ಟು
ಹರುಷ ಹೆದೆಸಲು
ದೀಪ ಬೆಳಗಿಸಲು
ಕವಿತೆ ಬಂದಳು

ದೀಪಾವಳಿಯ ಹೊತ್ತಿಗೆ
ನಕ್ಷತ್ರ ಬೆಳಕಿನಲ್ಲಿ
ಕವಿತೆ ಬಂದಳು
ಗಾಳಿಗೆ ಅಲುಗುವ ಬೆಳಕಿನ ಕುಡಿಯಂತೆ
ಬಳುಕುತ್ತಾ
ನನ್ನೊಳಗೆ, ಹೊರಗೆ
ಕವಿತೆ ಬಂದಳು.

 

* ಸತ್ಯನಾರಾಯಣ. ಬಿ.ಆರ್,

ಗ್ರಂಥಪಾಲಕರು, ಸುರಾನ ಕಾಲೇಜು, ಸೌತ್ಎಂಡ್ ರಸ್ತೆ, ಬೆಂಗಳುರು-೦೪ ೯೪೮೦೦೪೩೬೩೫; s

atya_nbr@yahoo.com

Syndicate

Syndicate content