- ಗೋಪೀನಾಥ ರಾವ್
ಕಳೆದ ವಾರ ನಾನು ಬೆಂಗಳೂರಲ್ಲಿದ್ದೆ. ಗಣೇಶನ ಹಬ್ಬ ಕಳೆದು ದುಬೈಗೆ ವಾಪಸ್ ಬರಬೇಕೆಂಬ ಅಪೇಕ್ಷೆಯಿದ್ದರೂ ಹಾಗಾಗುವುದು ಸಾಧ್ಯವಿರಲಿಲ್ಲ. ಗಣೇಶನ ಹಬ್ಬಕ್ಕೆ ಎರಡು ದಿನ ಮೊದಲೇ ಹಿಂತಿರುಗಬೇಕಾಯಿತು.
ಗಣೇಶನ ಹಬ್ಬವಿಲ್ಲದಿದ್ದರೂ ಹಬ್ಬದ ತಯಾರಿ ನೋಡುವ ಅವಕಾಶ ಸಿಕ್ಕಿತ್ತು.ವ್ಯಾಪಾರಸ್ಥರು ಅದಾಗಲೇ ಗಣೇಶನ ಹಬ್ಬದ ಕೊಡುಗೆಗಳನ್ನು ದಿನ ಪತ್ರಿಕೆಗಳಲ್ಲಿ ಕೊಡಲಾರಂಭಿಸಿದ್ದರು. ಅಲ್ಲಲ್ಲಿ "ಗೌರಿ ಗಣೇಶ ಹಬ್ಬದ ಸಲುವಾಗಿ" ಎಂದು ಫಲಕ ತೂಗುಹಾಕಿ ಮಾರಾಟಕ್ಕಿರುವ ದೊಡ್ಡ ಪಟ್ಟಿಗಳನ್ನು ಬೆಲೆ ಕಡಿತದ ಬೆಲೆ ಸಹಿತ ನಮೂದಿಸಿದ್ದರು. ಅಂತೂ ಗಣೇಶನ ಸ್ವಾಗತಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದವು.
ನಮ್ಮಣ್ಣನ ಮನೆಯ ಹತ್ತಿರದಲ್ಲೇ ಒಂದು ಖಾಲಿ ಸೈಟು ಇದೆ. ಅದರ ತುಂಬ ವಿಭಿನ್ನ ಮಾದರಿಯ, ವಿಭಿನ್ನ ಆಕೃತಿಯ ಗಣೇಶನ ಮೂರ್ತಿಗಳು ಅದಾಗಲೇ ಬಂದು ನೆಲೆಸಿದ್ದವು. ಮೂಷಿಕ ವಾಹನ ಸಮೇತ ಮೂರ್ತಿ ಸಾಗಾಟಕ್ಕೆ ಸಿದ್ಧವಾಗಿದ್ದ ಮೂರು ಚಕ್ರದ ಆಟೋ.. ವ್ಯಾಪಾರ ಭರದಿಂದ ಸಾಗಿತ್ತು. ಮತ್ತೂ ಬಂದು ಬಂದು ಕೂರುತ್ತಿದ್ದ ಮೂರ್ತಿಗಳನ್ನು ಒಪ್ಪವಾಗಿರಿಸುತ್ತಿದ್ದ ಯಜಮಾನ. ಇಷ್ಟು ಮೂರ್ತಿಗಳು ಇನ್ನೆರಡುದಿನದಲ್ಲಿ ಮಾರಿ ಹೋಗುತ್ತವೆಯೇ ಎನ್ನುವ ಸಂಶಯ ನನಗೆ. ಹಾಯಾಗಿ ಕೂತಿದ್ದ ಗಣಪನ ಮೂರ್ತಿಗಳು ಮತ್ತು ಅಷ್ಟೇ ಹಾಯಾಗಿದ್ದ ಹೋಲ್ ಸೇಲ್ ಮೂರ್ತಿ ವ್ಯಾಪಾರಿ... ಗಣೇಶನೊಬ್ಬನನ್ನು ಕೂರಿಸಿ ಹೋಮ್ ಡೆಲಿವರಿಗೆ ಸಿದ್ಧನಾಗುತ್ತಿದ್ದ ಆಟೋ ಡ್ರೈವರಿಗೆ ಮೆಲ್ಲಗೆ ಕೇಳಿದೆ "ಇವತ್ತು ಖರೀದಿಸಿದರೆ ಯಾವಾಗ ಡೆಲಿವರಿ ಕೊಡುತ್ತೀಯಪ್ಪಾ?"
"ಹಬ್ಬದ ದಿನಕ್ಕೆ ಮೊದಲು ಡೆಲಿವರಿ ಕೊಡ್ಲೇ ಬೇಕಲ್ಲಾ ಸಾರ್! ಮುಂಜಾನೆ ಐದಕ್ಕೆ ಆರಂಭಿಸಿದರೆ ರಾತ್ರಿ ಎರಡು ಗಂಟೆ ವರೆಗೂ ಡೆಲಿವರಿ ಐತೆ ಸಾರ್..ನೀವು ತೆಗೊಳ್ಳಿ, ಅಡ್ರೆಸ್ ಬರೆದಿಟ್ಟು ಹೋಗಿ ಸಾರ್, ನಾನೇ ಆಮೇಲೆ ಕಾಂಟಕ್ಟ್ ಮಾಡ್ತೀನಿ" ನಕ್ಕು ಅವನಾಡಿದ ಮಾತು ಭರವಸೆ ಹುಟ್ಟಿಸುತ್ತಿತ್ತು.
ಗಣೇಶನ ಭಕ್ತರ ಸಮೂಹ ದೊಡ್ಡದಾಗಿದೆಯೇ ಎನ್ನುವ ಸಂಶಯ ಮೂಡುವಷ್ಟು ಹೊಸ ಹೊಸ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಪೂಜೆಯ ಕಾರ್ಯಕ್ರಮಗಳು ಏರ್ಪಾಡಾಗಿದ್ದುವು. ಚಿಕ್ಕ ಪುಟ್ಟ ಪುಡಾರಿಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಲು, ನೆಲೆ ಗಟ್ಟಿಮಾಡಿಕೊಳ್ಳಲು, ಇನ್ನೊಬ್ಬರ ಪ್ರಭಾವ ಕುಗ್ಗಿಸಲು ಗಣೇಶೋತ್ಸವ ಒಂದು ಸಾಧನವಾಗಿ ಎಲ್ಲೆಲ್ಲೂ ಬೆಳೆದು ಬಂದಿದೆ. ದೊಡ್ಡ ದೊಡ್ಡ ಗಣೇಶೋತ್ಸವದ ಸಾರ್ವಜನಿಕ ವೇದಿಕೆಯಲ್ಲಿ ಭಾಷಣ, ಸನ್ಮಾನ ಇತ್ಯಾದಿಗಳನ್ನು ನಡೆಸಿ ಅವರಿವರನ್ನು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನಾಗಿಸುವ ಕಾರ್ಯಕ್ರಮಗಳು ಹಿಂದೆಂದಿಗಿಂತಲೂ ಅಧಿಕವಾಗಿದೆ. ಡೊನೇಶನ್ನಿಗೆ ಮನೆಗೆ ಬರುವವರ ಗುಂಪುಗಳೂ, ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯೂ ಜಾಸ್ತಿಯಾಗಿದೆ! ಗಣಪತಿ ಬಪ್ಪಾ ಮೋರಿಯಾ!
ಮನೆಯಲ್ಲಿ ಗಣೇಶನನ್ನು ಸ್ಥಾಪಿಸುವವರೂ ಹೆಚ್ಚಾಗಿದ್ದಾರೆ. ತಮ್ಮ ಓರಗೆಯವರನ್ನು, ವ್ಯಾಪಾರದ ಬಂಧುಗಳನ್ನು ಕರೆದು ಭವ್ಯ ಗಣೇಶೋತ್ಸವ ಏರ್ಪಡಿಸಿ ತನ್ಮೂಲಕ ಅಭ್ಯುದಯ ಕಾಣುವ ಕಮರ್ಶಿಯಲ್ ಭಕ್ತರು ಅಲ್ಲಲ್ಲಿ ಹುಟ್ಟಿಕೊಂಡಿದ್ದಾರೆ. ನಮ್ಮ ಕೆಲಸ ಮಾಡಿಕೊಳ್ಳಲು ಕತ್ತೆ ಕಾಲು ಹಿಡಿಯಲೂ ಹೇಸದ ಈ ಕಾಲದಲ್ಲಿ ಗಣೇಶನನ್ನು ಕುಳ್ಳಿರಿಸಿ ನಮಸ್ಕಾರ ಹಾಕಲು ಏನು ಸಮಸ್ಯೆ? ಆಫ್ಟರ್ ಆಲ್ ಆತ ನಮ್ಮ ದೇವರು ತಾನೇ!
ರಸ್ತೆ ರಸ್ತೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಹುಟ್ಟಿಕೊಂಡ ಗಣಪ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿ ರೆಡಿಯಾಗಿ ನಿಂತ ಸಣ್ಣ ಪುಟ್ಟ ಹಾಗೂ ದೊಡ್ಡ ದೊಡ್ಡ ಪೆಂಡಾಲಂಗಳು, ಕಂಬ ಕಂಬಕ್ಕೆ ಕಟ್ಟಿ ಬೊಗಳಲು ಸಿದ್ಧವಾಗಿದ್ದ ಮೈಕುಗಳು ಬರಲಿರುವ ವೈಭವದ ನಿರ್ದಿಷ್ಟ ರೂಪ ನೀಡುತ್ತಿದ್ದುವು.
ರಸ್ತೆ ಗಣಪರ ಈ ರೀತಿಯ ವೈಭವದ ನಡುವೆ ಹಲವಾರು ವರ್ಷಗಳಿಂದ ಸಂಪ್ರದಾಯವಾಗಿ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸುವವರು ಬೆಲೆಯೇರಿಕೆಗೆ ತತ್ತರಿಸಿ ಹೋಗಿದ್ದಾರೆ. ಮೂರ್ತಿ ಸೈಜಿನಿಂದ ಹಿಡಿದು ಸಮರ್ಪಣೆಯ ಬಾಳೆ ಹಣ್ಣಿನ ಗೊನೆಯ ವರೆಗಿನ ಎಲ್ಲ ಖರ್ಚಿನ ಬಾಬತ್ತಿನಲ್ಲೂ ಉಳಿತಾಯ ಮಾಡಿ ಗಣಪನನ್ನು ಬೀಳ್ಕೊಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಕಬ್ಬಿನ ಜಲ್ಲೆಯ ಕಟ್ಟ ತರುತ್ತಿದ್ದವರು ಇಂದು ಕಬ್ಬಿನ ಕೋಲು ಎಣಿಸಿ ತರುತ್ತಿದ್ದಾರೆ.
ಮುಂಬರುವ ವರ್ಷಗಳಲ್ಲಿ ಒಂದೇ ಕಬ್ಬಿನ ಜಲ್ಲೆ ತಂದು ಮುರಿಮುರಿದು ಮಾತ್ರೆಗಳಂತೆ ತುಂಡು ಮಾಡಿ ಆರು ಇಂಚಿನ ಗಣೇಶನಿಗೆ ಅರ್ಪಿಸುವ ಸ್ಥಿತಿ ಬರದಿರಲಿ ದೇವ್ರೇ ಅನ್ನುತ್ತ ಪೂಜೆಗೊಳ್ಳಲು ರೆಡಿಯಾಗಿ ಕೂತಿದ್ದ ಗಣಪರನೇಕರನ್ನು ಪ್ರಾರ್ಥಿಸಿ ಹಬ್ಬಕ್ಕೆ ಮೊದಲೇ ವಿಮಾನ ಹತ್ತಿದ್ದೆ.









