-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
ಇಬ್ಬರು ಹುಡುಗರು ತಮ್ಮ ತಾತನ ಮನೆಯ ಅಂಗಳದ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮೊದಲನೆಯವನು 'ನಮ್ಮ ತಾತನ ಮನೆಯ ಅಂಗಳ ಎಷ್ಟು ದೊಡ್ಡದು ಅಂದರೆ, ಹೊರಗೆ ಗೇಟಿನಿಂದ ಮನೆ ಬಾಗಿಲ ಬಳಿ ಬರಬೇಕಾದರೆ ಅರ್ಧ ಘಂಟೆ ಬೇಕಾಗ್ತಿತ್ತು.' ಎರಡನೆಯವನು ಅದಕ್ಕೆ ಒಂದಿಷ್ಟು ಸೇರಿಸಿ ಹೇಳಿದ "ನಮ್ಮ ತಾತನ ಮನೆ ಅಂಗಳ ಎಷ್ಟು ದೊಡ್ಡದು ಅಂದರೆ, ಸೈಕಲ್ ಮೇಲೆ ಕುಳಿತು ತುಳಿಯೋದಕ್ಕೆ ಶುರು ಮಾಡಿದರೆ ಇಡೀ ದಿನ ಆದ್ರೂ ರೌಂಡ್ ಮುಗೀತಿರಲಿಲ್ಲ". ಅದು ಮಹಾ ಸುಳ್ಳು ಎಂದು ಮೊದಲನೆಯವನಿಗೆ ಅನ್ನಿಸಿ ಹೇಳಿದ "ಸೈಕಲ್ ಸ್ಟಾಂಡ್ ತೆಗೆದು ಓಡಿಸಿದರೆ ರೌಂಡ್ ಬೇಗ ಮುಗೀತಿತ್ತೋ ಕಣೋ" ಅಂತ.
ಸುಳ್ಳು ಹೇಳುವುದೂ ಒಂದು ಕಲೆ... ಕೆಲವರಿಗೆ ಸುಳ್ಳು ಹೇಳಲು ಬರುವುದಿಲ್ಲ ... ಬೇಗ ಸಿಕ್ಕಿಹಾಕಿಕೊಂಡು ಬಿಡ್ತಾರೆ... ಅಂತಹವರನ್ನು ಏನಾದರೂ ಸುಳ್ಳು ಸಾಕ್ಶಿ ಹೇಳಲು ಕೋರ್ಟಿಗೆ ಕರೆದುಕೊಂಡು ಹೋದಲ್ಲಿ, ಅವರಿಗೇ ಜೈಲುವಾಸ ಗ್ಯಾರಂಟಿ... . ಒಮ್ಮೆ ನನಗೆ ಹೀಗೇ ಆಯ್ತು ... ಯಾರದೋ ಮನೆಗೆ ಹೋದೆ ... ಊಟದ ಸಮಯ. ಅವರು 'ಊಟಕ್ಕೇಳಿ' ಅಂದರು. ಹೊಟ್ಟೆ ಚುರುಗುಟ್ಟುತ್ತಿದ್ದರೂ, ಅವರು ಹೇಳಿದ ತಕ್ಷಣ ಊಟಕ್ಕೆ ಎದ್ದೇ ಬಿಡುವುದು ಹೇಗೆ ಅಂತ 'ಇಲ್ಲ ಊಟ ಆಯ್ತು' ಅಂದೆ. ಅದಕ್ಕೆ ಅವರು 'ಅಪರೂಪಕ್ಕೆ ಬಂದಿದ್ದೀರ, ಹೋಗಲಿ, ಒಂದು ಕಪ್ ಚಹಾ ತೆಗೆದುಕೊಳ್ತೀರಾ ? '. ಅದಕ್ಕೆ ನಾನೆಂದೆ 'ಇಲ್ಲ... ಹಸಿದ ಹೊಟ್ಟೆಯಲಿ ಚಹಾ ಕುಡಿದರೆ ನನಗೆ ತಲೆ ಸುತ್ತು ಬರುತ್ತೆ' .... ನಾನು ಬಿಟ್ಟ ರೀಲಿಗೆ ಅವರಿಗೆ ತಲೆ ಸುತ್ತಿ ಬರಲಿಲ್ಲ ಪುಣ್ಯ !
ಜಾರ್ಜ್ ಬುಷ್ ಅವರ ಸುಳ್ಳಿನ ಬಗೆಗಿನ ಜೋಕ್ ನಿಮಗೆಲ್ಲ ಗೊತ್ತಿರ ಬೇಕು .... ಯಾರೋ ಪುಣ್ಯಾತ್ಮ ಸ್ವರ್ಗಕ್ಕೆ ಹೋದರಂತೆ ... ಸ್ವರ್ಗಾಧಿಪತಿಯು ಅವರಿಗೆ ಸ್ವರ್ಗಲೋಕ ತೋರಿಸುತ್ತ ಬರುವಾಗ ಅಲ್ಲಲ್ಲೇ ಚಕ್ರಗಳು ಕಂಡಿತಂತೆ. ಅವು ಏನು ಎಂದು ಪ್ರಶ್ನೆ ಮಾಡಿದ್ದಕ್ಕೆ ಸ್ವರ್ಗಾಧಿಪತಿ ನುಡಿದನಂತೆ 'ಇವು ಸುಳ್ಳಿನ ಚಕ್ರಗಳು. ಇವು ಯಾರ ಚಕ್ರಗಳೋ ಅವರು ಸುಳ್ಳುನುಡಿಯುತ್ತಿದ್ದಂತೆ ಇವು ಒಮ್ಮೆ ಸುತ್ತುತ್ತದೆ. ಗಾಂಧೀಜಿ, ಮದರ್ ತೆರೆಸ ಅವರ ಚಕ್ರಗಳು ಸುತ್ತದೇ ತುಕ್ಕು ಹಿಡಿದಿತ್ತು.' ಅಂತ. ತಕ್ಷಣ ಈತ ಕೇಳಿದನಂತೆ 'ಜಾರ್ಜ್ ಬುಷ್ ಅವರ ಚಕ್ರ ಎಲ್ಲಿ ? '. ಸ್ವರ್ಗಾಧಿಪತಿ ನುಡಿದ 'ಅದು ವಿಪರೀತ ಸುತ್ತುವುದರಿಂದ ನನ್ನ ಟೇಬಲ್ ಮೇಲಿಟ್ಟು ಫ಼್ಯಾನಿನಂತೆ ಬಳಸುತ್ತೇನೆ' ಅಂತ.
ಧರ್ಮರಾಯ ರಣರಂಗದಲ್ಲಿ ಅಶ್ವತ್ತಾಮ ಸತ್ತನೆಂದು ನುಡಿದು ನಂತರ 'ಕುಂಜರ:' ಎಂದು ಹೇಳಿದ್ದಕ್ಕೇ ಅವನಿಗೆ ಒಮ್ಮೆ ನರಕ ದರ್ಶನವಾಯಿತಂತೆ. ಅದು ಸುಳ್ಳಿನ ಪವರ್.
ಹಲವಾರು ಬಾರಿ ಸಂದರ್ಭವು ಸುಳ್ಳಾಡುವಂತೆ ಮಾಡುತ್ತದೆ. ಉದಾಹರಣೆಗೆ ಬಲಭೀಮ ದ್ರೌಪದಿಯ ಕೋರಿಕೆಯನ್ನು ಪೂರೈಸಲು ಸೌಗಂಧಿಕಾ ಪುಷ್ಪವನ್ನು ಅರಸುತ್ತಾ ಸಾಗುತ್ತಾನೆ. ಹಾದಿಗೆ ಅಡ್ಡಲಾಗಿ ವೀರಾಂಜನೇಯ ಮುದಿ ಕಪಿಯಂತೆ ತೋರುತ್ತ ಮಲಗಿದ್ದಾನೆ. ಭೀಮನು ದಾರಿ ಬಿಡೆಂದು ಕೇಳಲು, ತನಗೆ ಶಕ್ತಿಗುಂದಿದೆ, ಕದಲಲು ಆಗುವುದಿಲ್ಲವೆಂದು ತಿಳಿಸಿ ತನ್ನ ಬಾಲವನ್ನು ಸರಿಸಿ ಮುಂದೆ ಹೋಗಲು ಹೇಳುತ್ತಾನೆ. ಅಂದರೆ ಹನುಮಂತನು ಸುಳ್ಳಾಡಿದನೇ ? ಇರಬಹುದು, ಆದರೆ ಉದ್ದೇಶವಿಷ್ಟೇ. ತಾನೇ ಬಲವಂತನೆಂದು ಅಹಂಕಾರಪಡುತ್ತಿದ್ದ ಭೀಮನಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಹಾಗೆ ಮಾಡಿದ್ದು.
ಹೆಚ್ಚು ಕಮ್ಮಿ ಪ್ರತಿ ದಿನ ನಾವಾಡುವ ಸುಳ್ಳು ಇದು. ಯಾರೋ ಒಬ್ಬರು ಮತ್ತೊಬ್ಬರನ್ನು ಕೇಳ್ತಾರೆ "ಚೆನ್ನಾಗಿದ್ದೀರಾ ? " ಅಂತ. ಅದಕ್ಕೆ 'ಚೆನ್ನಾಗಿದ್ದೀನಿ' ಅಂತೀರ. ಇದು ರೂಢಿ ಮಾತು ಆದರೆ ...ಸುಳ್ಳು!! ಅದರ ಬದಲಿಗೆ ಕೆಟ್ಟ ಮುಖ ಮಾಡಿಕೊಂಡು "ಅಯ್ಯೋ ಇದ್ದೀನ್ರೀ.... ಅನ್ನ ತಿನ್ನೋಕ್ಕಾಗಲ್ಲ Diabetes ... ನಿಲ್ಲೋಕ್ಕಾಗಲ್ಲ Arthritis ... ಕೂರಕ್ಕಾಗಲ್ಲ Piles ... ಎರಡು ವಾರದಿಂದ ಜ್ವರ, ವಾಂತಿ, Menangitis " ಅಂತ ಹೇಳ್ತಾ ಹೋದಿರಿ ಅಂದುಕೊಳ್ಳಿ, ಆ ಇನ್ನೊಬ್ಬರಿಗೆ ನಿಮ್ಮ ಬಗೆಗಿನ ಆಸಕ್ತಿಯೇ ಕುಂದಿ ಮತ್ತೊಂದು ಬಾರಿ ಅವರಪ್ಪನಾಣೆ ನಿಮ್ಮನ್ನ 'ಹೇಗಿದ್ದೀರಿ?' ಅಂತ ಕೇಳೋಲ್ಲ. ನಮಗೇನು ದೊಡ್ಡ ರೋಗವಿದ್ದರೂ 'ಚೆನ್ನಾಗಿದ್ದೀರಾ' ಎಂದು ಕೇಳಿದರೆ 'ಚೆನ್ನಾಗಿದ್ದೀನಿ' ಎಂದು ಹೇಳಿದರೂ ಅದು ಸುಳ್ಳಲ್ಲ.
ವೃತ್ತಿ ಜೀವನದ ಮತ್ತೊಂದು ಸುಳ್ಳು ಅಂದರೆ ಬಯೋಡೇಟಾ. ಪರ್ತಿ ಬಯೋಡೇಟದಲ್ಲೂ ಶೇಕಡ ೨೦ರಷ್ಟು ಸುಳ್ಳು ಇದ್ದೇ ಇರುತ್ತದೆ. ಒಬ್ಬ ಬ್ಯಾಸ್ಕೆಟ್ ಬಾಲ್ ಟೀಮ್ ಕೋಚ್ ಕೆಲಸಕ್ಕೆ ತನ್ನ ಬಯೋಡೇಟಾ ಕಳಿಸಿದ್ದನಂತೆ. ತಾನು ಒಂದು ಟೀಮಿನಲ್ಲಿ ಕೀ ಪ್ಲೇಯರ್ ಆಗಿದ್ದೆನೆಂದು ಅದರಲ್ಲಿ ನಮೂದಿಸಿದ್ದರಿಂದ ಇವನನ್ನು ಇಂಟರ್ವ್ಯೂ'ಗೆ ಕರೆಸಿದರು. ಅವನನ್ನು ಕಂಡ ಕೂಡಲೇ ಇವನು ತನ್ನ ಬಯೋಡೇಟಾ'ದಲ್ಲಿ ಬೊಗಳೆ ಬಿಟ್ಟಿದ್ದನೆ ಎಂದು ಅರಿವಾಗಿ ಹೊರಗೆ ಕಳಿಸಿದರಂತೆ. ಹೇಗೆ ಅಂದಿರಾ? ಅವನಿದ್ದದ್ದು ಕೇವಲ ನಾಲ್ಕು ಅಡಿ ಎತ್ತರ !!
ಮತ್ತೊಬ್ಬ ತನ್ನ ಬಯೋಡೇಟಾ'ದಲ್ಲಿ ತನಗೆ ಆ ಕೆಲಸದಲ್ಲಿ ಹತ್ತು ವರ್ಷಗಳ ಕಾಲ ಅನುಭವ ಇದೆ ಎಂದು ನಮೂದಿಸಿದ್ದನಂತೆ. ಇಂಟರ್ವ್ಯೂ'ಗೆ ಕರೆಸಿ ಪರಿಶೀಲನೆ ಮಾಡುವಾಗ ಆತ ಕೆಲಸಕ್ಕೆ ಸೇರಿ ಕೇವಲ ಐದು ವರ್ಷ ಮಾತ್ರ ಆಗಿತ್ತಂತೆ. ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಅವನು ನುಡಿದ 'ದಿನಕ್ಕೆ ಎಂಟು ಘಂಟೆಗಳ ಕಾಲ ಕೆಲಸ ಮಾಡಿದರೆ ಐದು ವರ್ಷಗಳ ಕಾಲ ಅನುಭವ ನಿಜ. ಆದರೆ ನಾನು ದುಡಿಯುವುದು ದಿನಕ್ಕೆ ಹದಿನಾರು ಘಂಟೆಗಳು. ಅಂದರೆ ಹತ್ತು ವರ್ಷಗಳು ತಾನೆ ?'. ಸುಳ್ಳಾಡಿದ್ದರೂ ಅದನ್ನು ಸಮರ್ಥಿಸಿಕೊಳ್ಳಲು ಜಾಣ್ಮೆ ಇರಬೇಕು.
ಸುಳ್ಳಾಡಿದಲ್ಲಿ ನಾವೇನು ಮಾತನಾಡಿದ್ದೇವೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದೇ ನಿಜವೇ ನುಡಿದಲ್ಲಿ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.
ಸುಳ್ಳು ಹೇಳುವವರನ್ನು ಪತ್ತೆ ಹಚ್ಚುವುದೂ ಬಹಳ ಸುಲಭ. ಇಂಟರ್ವ್ಯೂ ಮಾಡುವ ಸಮಯದಲ್ಲಿ ಕೆಲವೊಮ್ಮೆ ಇಬ್ಬರು ಅಥವಾ ಮೂರು ಜನ ಕುಳಿತಿರುತ್ತಾರೆ. ಇಬ್ಬರು ಪ್ರಶ್ನೆಗಳನ್ನು ಕೇಳುವಲ್ಲಿ ತೊಡಗಿದ್ದರೆ ಇನ್ನೊಬ್ಬರು (ಸಾಮಾನ್ಯವಾಗಿ ಹೆಣ್ಣು) ಸುಮ್ಮನೆ ನಿಮ್ಮನ್ನೇ ನೋಡುತ್ತಾ ಕುಳಿತಿರುತ್ತಾರೆ. ಏನೂ ಮಾತನಾಡದೆ ಇದ್ದಲ್ಲಿ ಯಾಕೆ ಕುಳಿತುಕೊಳ್ಳುತ್ತಾರೆ ಎಂದು ನಿಮಗೆ ಅನ್ನಿಸಬಹುದು, ಆದರೆ ಅವರೇ ನಿಮ್ಮ ಭವಿಷ್ಯವನ್ನು ನಿರ್ಧರಿಸುವವರು. ನೀವು ನಿಜವನ್ನೇ ನುಡಿಯುತ್ತಿದ್ದೀರೋ ಇಲ್ಲಾ ಸುಳ್ಳಾಡುತ್ತಿದ್ದೀರೋ ಎಂದು ನಿಮ್ಮ ದೇಹದ ಚಲನವಲನಗಳನ್ನು ಗಮನಿಸಿ ಹೇಳಬಲ್ಲವರಾಗಿರುತ್ತಾರೆ. ಮಾತನಾಡಿ ತನ್ನ ಬೇಕು-ಬೇಡಗಳನ್ನು ತಿಳಿಸಲು ಅಶಕ್ಯವಾದ ತನ್ನ ಕೂಸನ್ನು ಅರಿಯಲು ಭಗವಂತನು ಹೆಣ್ಣಿಗೆ ನೀಡಿರುವ ವರದಾನವದು.
ಡಾಕ್ಟರ್ ಹಾಗೂ ಲಾಯರ್ ಬಳಿ ಸುಳ್ಳು ಹೇಳಬಾರದು ಅನ್ನೋ ಮಾತನ್ನು ನಾವು ಸಾಕಷ್ಟು ಬರಿ ಕೇಳಿದ್ದೀವಿ. ಯಾರೋ ಇನ್ನೊಬ್ಬರನ್ನು ಕೇಳಿದರಂತೆ 'ಯಾಕೆ ?' ಅಂತ. ಅದಕ್ಕೆ ಅವರು 'ಡಾಕ್ಟರ್ ಬಳಿ ಸುಳ್ಳು ಹೇಳಿದಲ್ಲಿ ನಿಮ್ಮ ಆರೋಗ್ಯಕ್ಕೇ ಅಪಾಯ. ಲಾಯರ್ ಬಳಿ ಸುಳ್ಳು ಹೇಳದಿರಿ ಯಾಕಂದ್ರೆ ಅದು ಅವರ ಕೆಲಸ' ಅಂತ !!
ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಆಗಿದ್ದು ಹೀಗೆ. ಮುಖ್ಯಮಂತ್ರಿಗಳನ್ನುಳಿದು ಮಿಕ್ಕೆಲ್ಲರೂ ತಮ್ಮ ಖರ್ಚಿನಲ್ಲಿ ಸಮ್ಮೇಳನಕ್ಕೆ ಹೋಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇದು ಕೇವಲ ಕಣ್ಣೊರೆಸುವ ಮಾತು ಅನ್ನೋದು ಖರೆ. ಸಮ್ಮೇಳನದ ವೇದಿಕೆ ಮೇಲೆ ಭಾಷಣ ಮಾಡುವಾಗ ಒಬ್ಬ ಹಿರಿಯ ಶಾಸಕರು ನುಡಿದರಂತೆ "ನಮ್ಮನ್ನು ಈ ಸಮ್ಮೇಳನಕ್ಕೆ ಕರೆಸಿಕೊಂಡಿದ್ದಕ್ಕೆ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ" ಅಂತ !!
ಅದೇ ಸಮ್ಮೇಳನದಲ್ಲಿ ನೆಡೆದ ಮತ್ತೊಂದು ಘಟನೆ. ಶನಿವಾರ ರಾತ್ರಿ ಸಮಾರಂಭಕ್ಕೆ ನಟ ಉಪೇಂದ್ರ ಅವರು ಇರಲಿಲ್ಲ. ಅವರು ಸಿಕ್ಕಾಗ 'ಎಲ್ಲಿಗೆ ಹೋಗಿದ್ದಿರಿ. ಯಾಕೆ ಬರಲಿಲ್ಲ' ಎಂದು ಪ್ರಶ್ನೆ ಮಾಡಿದ್ದಕ್ಕೆ 'ಯಾರೋ ಹೇಳಿದರು ನಮ್ಮ ಕಾರ್ಯಕ್ರಮ ರದ್ದಾಗಿದೆ ಅಂತ. ಅದಕ್ಕೆ ನಾನು ಹೋಟಲ್'ನಲ್ಲೇ ಉಳಿದೆ' ಅನ್ನೋದೇ? ನಂಬೋ ಮಾತೇ ? ಬರಿ ಓಳು ...
ಒಮ್ಮೊಮ್ಮೆ ಅನ್ನಿಸುತ್ತೆ, ಈ ರೀತಿ ಸಮಜಾಯಿಶಿ ಕೊಡುವಾಗ ಅವರುಗಳನ್ನು 'ಸುಳ್ಳು ಪತ್ತೆ ಹಚ್ಚುವ ಯಂತ್ರದಲ್ಲಿ' ಪರೀಕ್ಷಿಸಬೇಕು ಅಂತ. ಆದ್ರೆ ಏನು ಮಾಡೋದು...... ಆ ಯಂತ್ರವೇ ಸುಳ್ಳು ಹೇಳಿದರೆ ?










Bahala channagide. Aadre idu
Bahala channagide. Aadre idu olu alla, nijavada abhipraya :) - KRR