-ಡಾ. ಬಿ.ಆರ್. ಸತ್ಯನಾರಾಯಣ
ಕಳೆದ ವಾರದಿಂದ ಮುಂದುವರೆದ ಭಾಗ...
ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ಹದಿನೈದು ನಿಮಿಷ ಬಿಟ್ಟುಕೊಂಡು ಬಾ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ಥ್ಯಾಂಕ್ಸ್ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು. ಹೀಗೆ ಒಂದು ದಿನ ಬಿಂದಿಗೆ ಇಟ್ಟು ವಾಪಸ್ಸು ಸ್ಕೂಲಿಗೆ ಹಿಂತಿರುಗದೇ, ಬಿಸಿಲು ಹೆಚ್ಚಾಗಿದ್ದುದ್ದರಿಂದ, ಅಲ್ಲೇ ಸ್ವಲ್ಪ ದೂರದಲ್ಲಿದ್ದ ಮರದ ನೆರಳಿನಲ್ಲಿ ನಿಂತುಕೊಂಡಿದ್ದೆ. ಅವರೇ ಮೊದಲೊಂದು ದಿನ ದೂರ ಮರದ ನೆರಳಿನಲ್ಲಿ ಬೇಕಾದರೆ ನಿಂತಿರು ಎಂದು ಹೇಳಿದ್ದರು, ಕೂಡಾ.ಹಾಗೆ ನಿಂತಿದ್ದರಿಂದ, ಅವರು ಅಲ್ಲಿಂದ ಮುಂದಕ್ಕೆ ಸೂಮಾರು ಐವತ್ತು ಮೀಟರ್ ದೂರವಾದರೂ ಬಿಂದಿಗೆಯನ್ನು ತೆಗೆದುಕೊಂಡು ಹೋಗುತ್ತಾರೆಂದು ನನಗವತ್ತು ತಿಳಿಯಿತು. ಹಾಗೆ ಹೋಗುವ ಮೊದಲು ಅವರು ತಮ್ಮ ಷೂಗಳನ್ನು ತಗೆದು, ಬಿಳಿಯಬಣ್ಣದ (ಅವರು ಯಾವಾಗಲೂ ಬಿಳಿಯ ವಸ್ತ್ರಗಳನ್ನೇ ಧರಿಸುತ್ತಿದ್ದರು.) ಪ್ಯಾಂಟನ್ನು ಬಿಚ್ಚಿ, ಅದನ್ನು ಹೊಂಗೇ ಮರದ ಕೊಂಬೆಗೆ ನೇತುಹಾಕುತ್ತಿದ್ದರು. ನಂತರ ಮತ್ತೆ ಸಾಕ್ಸ್ ತೊಡದೆ ಷೂಗಳನ್ನು ಮಾತ್ರ ಧರಿಸಿ ತಂಬಿಗೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ತಿರುಗಿ ಬಂದು ಷೂ ತಗೆದು, ಪ್ಯಾಂಟ್ ತೊಟ್ಟು ನಂತರ ಸಾಕ್ಸ್, ಷೂ ತೊಟ್ಟುಕೊಂಡು ಬರುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನಾನು ಹೋಗಿ ಖಾಲಿ ಬಿಂದಿಗೆಯನ್ನು ತಗೆದುಕೊಂಡು ಬರುತ್ತಿದ್ದೆ. ಕೆಂಪಗೆ ಸಲಕ್ಷಣವಾಗಿದ್ದ ಅವರು, ಬಿಳಿಯ ಚಡ್ಡಿ, ಷರ್ಟ್, ಷೂಗಳನ್ನು ಮಾತ್ರ ಧರಿಸಿ ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಹೋಗುವುದನ್ನು ಈಗ ಚಿತ್ರಿಸಿಕೊಂಡರೆ ನಗೆ ಬರುವ ಬದಲು ಅಯ್ಯೋ ಎನ್ನಿಸುತ್ತದೆ!ಒಂದು ದಿನ ಹಾಗೆ ಅವರು ವಾಪಸ್ಸು ಬಂದ ಕೆಲವೇ ನಿಮಿಷಗಳಲ್ಲಿ ಮತ್ತೆ ಮಾನಿಟರ್ ಎಂದು ಕೂಗಿದರು. ನಾನು ಒಳಗೆ ಹೋದೊಡನೆ ಬಾಗಿಲನ್ನು ಭದ್ರಪಡಿಸಲು ಹೇಳಿದರು. ನಂತರ ತಮ್ಮ ಪ್ಯಾಂಟನ್ನು ಕಳಚಿ, ನನ್ನ ಕೈಗೆ ಕೊಡುತ್ತಾ ಅದರಲ್ಲಿ ಇರುವೆಗಳು ಸೇರಿಕೊಂಡಿವೆ. ಎಲ್ಲವನ್ನು ಹುಡುಕಿ ತೆಗೆದುಬಿಡು ಎಂದು ಹೇಳುತ್ತಲೇ, ತೊಡೆ, ಕುಂಡಿ, ಸೊಂಟದ ಕಡೆಗೆಲ್ಲಾ ಫಟ್ ಫಟ್ ಎಂದು ಹೊಡೆದುಕೊಳ್ಳುತ್ತಾ ಇರುವೆಗಳ ಸಂಹಾರಕಾರ್ಯದಲ್ಲಿ ನಿರತರಾಗಿದ್ದರು. ನಾನು ಚೆನ್ನಾಗಿ ಕೊಡವಿಕೊಟ್ಟ ಪ್ಯಾಂಟನ್ನು ಮತ್ತೊಮ್ಮೆ ಪರಿಶೀಲಿಸಿ ಹಾಕಿಕೊಂಡರು. ಬಾಗಿಲು ತಗೆದು ನಾನು ಹೊರಟು ನಿಂತಾಗ ನನ್ನನ್ನು ಹತ್ತಿರಕ್ಕೆ ಕರೆದು, ಪ್ರೀತಿಯಿಂದ ತಲೆ ಸವರುತ್ತಾ ಥ್ಯಾಂಕ್ಯೂ ಮೈ ಚೈಲ್ಡ್, ಥ್ಯಾಂಕ್ಯೂ ವೆರಿಮಚ್. ಬಟ್ ಐ ಯಾಮ್ ವೆರಿ ಸಾರಿ. ನಿನ್ನಿಂದ ಈ ಕೆಲಸ ಮಾಡಿಸಿಕೊಂಡಿದ್ದಕ್ಕೆ ಎಂದರು. ನನಗೆ ಏನು ಹೇಳಬೇಕೆಂದು ಗೊತ್ತಿರಲಿಲ್ಲ. ಸುಮ್ಮನೆ ಹೊರಗೆ ಬಂದೆ.
ನಾನು ಸ್ಸಾರಿ ಎಂಬ ಪದವನ್ನು ಅವತ್ತೇ ಮೊದಲು ಕೇಳಿದ್ದು! ಆದರೆ ಅವರು ನನ್ನ ತಲೆಯನ್ನು ಸವರಿ ಮಾತನಾಡಿಸಿದ್ದು ನನಗೆ ಖುಷಿಯೆನ್ನಿಸಿತ್ತು. ಸುಮಾರು ಹೊತ್ತು ಆಗಾಗ ನನ್ನ ತಲೆಯನ್ನು ನಾನೇ ಸವರಿಕೊಳ್ಳುತ್ತಿದ್ದೆ!ನನ್ನ ಈ ಬಗೆಯ ಕೆಲಸಕ್ಕಾಗಿ ಪ್ರಾರಂಭದಲ್ಲಿ ಬೇರೆ ಹುಡುಗರು ನನ್ನನ್ನು ಚೆಂಬು ಎಂದು ಹೀಗಳೆಯುತ್ತಿದ್ದರು. ಹೀಗೆ ನನ್ನನ್ನು ಚೆಂಬು ಎಂದು ಹೀಗಳೆದವರಿಬ್ಬರನ್ನು, ಗಲಾಟೆ ಮಾಡಿದವರ ಪಟ್ಟಿಯಲ್ಲಿ ಸೇರಿಸಿ ಚೆನ್ನಾಗಿ ಏಟು ಕೊಡಿಸಿದ್ದರಿಂದ, ನಂತರ ಯಾರೂ ಹಾಗೆ ಕರೆಯುವ ಸಾಹಸ ಮಾಡಲಿಲ್ಲ! ಇಪ್ಪತ್ತೈದು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶದ ಶಾಲೆಗಳು ಎದುರಿಸುತ್ತಿದ್ದ ನೂರಾರು ಸಮಸ್ಯೆಗಳಲ್ಲಿ ಟಾಯಿಲೆಟ್ ಸಮಸ್ಯೆ ಒಂದು ಮಾತ್ರ. ಅಂದು ವೆಂಕಟಪ್ಪನವರು ಎದುರಿಸುತ್ತಿದ್ದ ಸಮಸ್ಯೆಯನ್ನು ಎಲ್ಲಾ ಭಾಗದ ಶಾಲೆಗಳ ಬೇರೆ ಬೇರೆ ಉಪಾಧ್ಯಾಯರೂ ಎದುರಿಸಿದ್ದಾರೆ. ಮಹಿಳಾ ಶಿಕ್ಷಕಿಯರ ಮತ್ತು ವಿದ್ಯಾರ್ಥಿನಿಯರ ಕಷ್ಟವನ್ನಂತೂ ಹೇಳುವಂತೆಯೇ ಇಲ್ಲ. ಇಂದೂ ಆ ಸಮಸ್ಯೆ ಪೂರ್ಣವಾಗೇನೂ ತೊಲಗಿಲ್ಲ. ಎಲ್ಲಾ ಶಾಲೆಗಳ ಬಳಿ ಶೌಚಾಲಯಗಳನ್ನು ಸರ್ಕಾರ ನಿರ್ಮಿಸಿದೆಯಾದರೂ ಅದರ ನಿರ್ವಹಣೆ ಮಾತ್ರ ಚಿಂತಾಜನಕವಾಗಿದೆ. ಎಷ್ಟೋ ಶಾಲೆಗಳಲ್ಲಿ ನೀರಿಲ್ಲದೆ, ಇಡೀ ಶೌಚಾಲಯವೇ ತಿಪ್ಪೆಗುಂಡಿ ಆಗಿರುವ ನಿದರ್ಶನಗಳಿವೆ. ಇಂತಹ ಬರ್ಬರವಾದ ಶೈಕ್ಷಣಕ ಪರಿಸರದಿಂದ ಹೇಗೋ ಶಿಕ್ಷಣ ಮುಗಿಸಿ ಹೊರ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾಗಿರುವುದು ಮಾತ್ರ ವಿಪರ್ಯಾಸ!
ಶ್ರೀ ವೆಂಕಟಪ್ಪನವರಿಗೆ ನಾನೊಮ್ಮೆ ಸೈಕಲ್ಲಿನಲ್ಲಿ ಲಿಫ್ಟ್ ಕೊಡುವ ಅವಕಾಶ ಬಂದಿತ್ತು. ಕುಂದೂರುಮಠದಿಂದ ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರದ ಒಂದು ಊರು (ಅದರ ಹೆಸರು ನೆನಪಿಗೆ ಬರುತ್ತಿಲ್ಲ). ಅಲ್ಲಿದ್ದ, ವೆಂಕಟಪ್ಪನವರ ಬಂಧುಗಳೊಬ್ಬರು ತೀರಿ ಹೋಗಿದ್ದರು. ಸ್ಕೂಲಿನಲ್ಲಿದ್ದ ಅವರಿಗೆ, ವಿಷಯ ಟೆಲಿಗ್ರಾಂ ಮೂಲಕ ತಿಳಿಯಿತು. ಆದರೆ ಬಸ್‌ಗಳಾಗಲೀ ಬೇರಾವ ವಾಹನಗಳಾಗಲೀ ಇಲ್ಲದ ಆ ಊರಿಗೆ ಹೋಗುವುದು ಹೇಗೆ? ಬಸ್ ಇರಲಿ, ಒಂದು ಒಳ್ಳೆಯ ಜೆಲ್ಲಿ ರಸ್ತೆಯೂ ಇರಲಿಲ್ಲ. ಅವರು ಹೇಗಾದರೂ ಮಾಡಿ ಆ ಊರು ತಲುಪಿದರೆ, ಸಂಜೆ ಅಲ್ಲಿಂದ ಹಾಗೇ ಹಾಸನಕ್ಕೆ ಹೋಗುವುದು, ಎಂಬುದು ಅವರ ಅಭಿಪ್ರಾಯವಾಗಿತ್ತು. ಕೊನೆಗೆ ಪಿ.ಟಿ. ಮೇಷ್ಟ್ರು ಮತ್ತು ನಾನು ಒಂದು ಸೈಕಲ್ಲಿನಲ್ಲಿ ಮತ್ತು ಅವರು ಒಂದು ಸೈಕಲ್ಲಿನಲ್ಲಿ ಅಲ್ಲಿಗೆ ಹೋಗುವುದು. ಅಲ್ಲಿಂದ ವಾಪಸ್ ಬರುವಾಗ ನಾನು ಮತ್ತು ಪಿ.ಟಿ. ಮೇಷ್ಟ್ರು ಎರಡೂ ಸೈಕಲ್‌ಗಳಲ್ಲಿ ವಾಪಸ್ ಬರುವುದು ಎಂದು ತೀರ್ಮಾನವಾಯಿತು. ಇದ್ದುದರಲ್ಲಿಯೇ ಒಂದು ಒಳ್ಳೆಯ ಸೈಕಲ್ಲನ್ನು ಹುಡುಗನೊಬ್ಬನಿಂದ ಹೆಡ್ಮಾಸ್ಟರಿಗೆಂದು ತೆಗೆದುಕೊಳ್ಳಲಾಯಿತು.
ಇನ್ನೊಂದು ಸುಮಾರಾಗಿದ್ದ ಸೈಕಲ್ಲಿನಲ್ಲಿ ಪಿ.ಟಿ. ಮೇಷ್ಟ್ರು ಮತ್ತು ನಾನು ಡಬಲ್ ರೈಡ್‌ನಲ್ಲಿ ಹೊರಟೆವು. ಸೈಕಲ್ ಅಭ್ಯಾಸವೇ ತಪ್ಪಿ ಹೋಗಿದ್ದ ವೆಂಕಟಪ್ಪನವರು ಪ್ರಾರಂಭದಲ್ಲಿ ಕಷ್ಟಪಟ್ಟರೂ ಹೇಗೋ ಸುಧಾರಿಸಿಕೊಂಡು ಸೈಕಲ್ ತುಳಿದು, ಊರನ್ನೂ ತಲುಪಿಬಿಟ್ಟರು. ಆದರೆ ಅವರಿಗೆ ನಮ್ಮನ್ನು ಹಾಗೆಯೇ ಕಳುಹಿಸಲು ಇಷ್ಟವಿರಲಿಲ್ಲ. ಇನ್ನು, ಸಾವು ಸಂಭವಿಸಿರುವ ಅವರ ಬಂಧುಗಳ ಮನೆಯಲ್ಲಿ ತಿನ್ನಲು ಅಪೇಕ್ಷಿಸುವಂತಿಲ್ಲ. ಪಿ.ಟಿ. ಮೇಷ್ಟ್ರೇನೋ ಬೇಡ ಬಿಡಿ ಸಾರ್, ನಾವು ಹೋಗುತ್ತೇವೆ. ಅಲ್ಲಿಯೇ ಹೋಗಿ ನಾವು ತಂದಿರುವ ಊಟವನ್ನೇ ಮಾಡುತ್ತೇವೆ ಎಂದರು. ಆದರೆ ವೆಂಕಟಪ್ಪನವರು ಅಂದು ಹೇಳಿದ ಪ್ರತಿಯೊಂದು ಪದಗಳೂ ನನಗೆ ಚೆನ್ನಾಗಿ ನೆನಪಿವೆ. ನಿಮ್ಮದು ಹೇಗೋ ನಡೆಯುತ್ತದೆ ರೀ. ಆದರೆ, ನನಗೆ ನನ್ನ ವಿದ್ಯಾರ್ಥಿಯದೇ ಚಿಂತೆ. ಅಷ್ಟು ದೂರ ನನಗಾಗಿ ಸೈಕಲ್‌ನಲ್ಲಿ ಬಂದಿದ್ದಾನೆ. ಈ ಕಡೆಯಿಂದ ಸೈಕಲ್ ಬೇರೆ ತುಳಿಯಬೇಕು..... ನೀವು ಒಂದು ಕೆಲಸ ಮಾಡಿ. ನಾನು ಹೊಡೆದುಕೊಂಡು ಬಂದ ಸೈಕಲ್ಲನ್ನು ಅವನಿಗೆ ಕೊಟ್ಟು ಬಿಡಿ. ಅದು ತುಳಿಯಲು ಸುಲಭವಾಗಿರುವಂತಿದೆ ಎಂದರು. ತಕ್ಷಣ ಯಾರನ್ನೋ ವಿಚಾರಿಸಿ ಅಲ್ಲಿದ್ದ ಒಂದು ಗೂಡಂಗಡಿಯಿಂದ ನಾಲ್ಕು ಬಾಳೇಹಣ್ಣನ್ನು ತೆಗೆದುಕೊಟ್ಟು, ತಿಂದು ನೀರು ಕುಡಿದು ಹೊರಡಿ ಎಂದು ಹೇಳಿದರು. ಆದರೆ ಬರುವಾಗ, ಆ ಊರಿನಿಂದ ಹೊರಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಪಿ.ಟಿ. ಮೇಷ್ಟ್ರು ನಾನು ಹೊಡೆಯುತ್ತಿದ್ದ ಸೈಕಲ್ಲನ್ನು ತಾವು ತೆಗೆದುಕೊಂಡರು! ನಾನೇನೂ ಮಾತನಾಡುವಂತಿರಲಿಲ್ಲ. ವೆಂಕಟಪ್ಪನವರ ಮಾನವೀಯತೆ, ಶಿಷ್ಯ ಪ್ರೀತಿಯನ್ನು ನಾನು ಹಲವಾರು ಬಾರಿ ಕಂಡಿದ್ದೆ. ಅಂದೂ ಕಂಡೆ. ಆದರೆ ಪಿ.ಟಿ. ಮೇಷ್ಟ್ರುಂತಹ ಧೂರ್ತರೂ ಶಿಕ್ಷಣಕ್ಷೇತ್ರದಲ್ಲಿ ಇದ್ದಾರೆ ಎಂಬ ಸತ್ಯ ಮಾತ್ರ ಅಂದೇ ಗೊತ್ತಾಗಿದ್ದು!
(’ನನ್ನ ಹೈಸ್ಕೂಲ್ ದಿನಗಳು’ ಪುಸ್ತಕದ ಆಯ್ದ ಭಾಗಗಳು)
ಡಾ. ಬಿ.ಆರ್. ಸತ್ಯನಾರಾಯಣ, ಗ್ರಂಥಪಾಲಕರು, ಸುರಾನ ಕಾಲೇಜು,
(ಮುಗಿಯಿತು)









