ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೨
Satyanarayana

ಕಳೆದ ವಾರದಿಂದ ಮುಂದುವರೆದ ಭಾಗ...

ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು. ಅವರು ತರಗತಿಗೆ ಬಂದ ಮೊದಲ ದಿನವೇ ಮಾನಿಟರ್‌ನನ್ನು ಚುನಾಯಿಸುವ ಕೆಲಸ ಮಾಡಿದರು. ನಾನೂ ಸೇರಿದಂತೆ ಮೂವರು ಚುನಾವಣೆಗೆ ನಿಂತಿದ್ದವು. ಮತದಾನದ ನಂತರ ನಾನು ಇದ್ದ ಅರವತ್ತು ಮತಗಳಲ್ಲಿ ಐವತ್ತಕ್ಕು ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದೆ! ಕೇವಲ ಒಂದೇ ಗಂಟೆಯಲ್ಲಿ ಚುನಾವಣೆ ಮಾಡಿ ಫಲಿತಾಂಶವನ್ನು ಘೋಷಿಸಿದ ವೆಂಕಟಪ್ಪನವರು, ನಾನು ಮಾಡಬೇಕಾದ ಕೆಲಸದ ಪಟ್ಟಿಯನ್ನೂ ಹೇಳಿಬಿಟ್ಟರು. ಅವರು ಆಫೀಸ್ ರೂಮಿನಲ್ಲಿ ಕುಳಿತಿದ್ದಾಗ ಮಾನಿಟರ್ ಎಂದು ಕೂಗಿದೊಡನೆ ಎದ್ದು ಹೋಗಬೇಕಾಗಿತ್ತು. ಅವರು ತರಗತಿಗೆ ಬರುವಷ್ಟರಲ್ಲಿ ಬೋರ್ಡ್ ಒರೆಸಿ, ಸೀಮೆಸುಣ್ಣ ತಂದು ಇಟ್ಟಿರಬೇಕಾಗಿತ್ತು. ಜವಾನ ನಂಜಪ್ಪ ಇರದಿದ್ದಾಗ ಬೆಲ್ ಕೂಡಾ ನಾನೇ ಹೊಡೆಯಬೇಕಾಗಿತ್ತು.

ದಿನವೂ ಒಂದಷ್ಟು ಕೋಲುಗಳನ್ನು ತಂದು ಮೇಷ್ಟ್ರುಗಳಿಗೆ ಕೊಡಬೇಕಾಗಿತ್ತು! ಅದಕ್ಕಿಂತ ಹೆಚ್ಚಾಗಿ ಪ್ರತಿ ಶನಿವಾರ ಆ ಮನೆಯ ನೆಲವನ್ನು ಸಗಣಿ ಹಾಕಿ ಸಾರಿಸಲು ವ್ಯವಸ್ಥೆ ಮಾಡಬೇಕಾಗಿತ್ತು. ಆ ಮನೆಯ ನೆಲಕ್ಕೆ ಗಾರೆ ಇರಲಿಲ್ಲ. ಹತ್ತು-ಹತ್ತು ಹುಡುಗರ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿನವರು ಒಂದೊಂದು ವಾರ ನೆಲವನ್ನು ಗುಡಿಸಿ ಸಾರಿಸಬೇಕಾಗಿತ್ತು. ಅದರ ಮೇಲುಸ್ತುವಾರಿ ಮಾತ್ರ ನನ್ನದಾಗಿತ್ತು!ವೆಂಕಟಪ್ಪನವರು ಸ್ಟ್ರಿಕ್ಟ್ ಎಂದು ಅಷ್ಟೊಂದು ಹೆಸರಾಗಿದ್ದರೂ ಹುಡುಗರಿಗೆ ಹೊಡೆಯುತ್ತಿದ್ದುದ್ದು ತುಂಬಾ ಕಡಿಮೆ. ಹಾಗೆ ಹೊಡೆಯಲೇ ಬೇಕಾದ ಸಂದರ್ಭದಲ್ಲಿ, ಹುಡುಗರನ್ನು ಬಗ್ಗಿ ನಿಲ್ಲುವಂತೆ ಹೇಳುತ್ತಿದ್ದರು. ಬಗ್ಗಿ ನಿಂತ ಹುಡುಗರ ಕುಂಡಿಯ ಮೇಲೆ ಕೋಲಿನಿಂದ ಹೊಡೆಯುತ್ತಿದ್ದರು. ಹುಡುಗಿಯರಿಗೂ ಅದೇ ಶಿಕ್ಷೆ. ಅವರು ಜೋರಾಗಿ ಹೊಡೆಯುತ್ತಿರಲಿಲ್ಲವಾದರೂ, ಬೇರೆ ಹುಡುಗರ ನಡುವೆ ಹಾಗೆ ಕುಂಡಿ ಬಗ್ಗಿಸಿ ಹೊಡೆಸಿಕೊಳ್ಳುವುದು ಅವಮಾನದ ಸಂಗತಿಯಾಗಿತ್ತು. ಅದೃಷ್ಟವೆಂದರೆ, ನನಗೆ ಅವರಿಂದ ಹೊಡೆಸಿಕೊಳ್ಳುವ ದಿನ ಬರಲೇ ಇಲ್ಲ! ಸ್ವಂತ ಕಟ್ಟಡವೇ ಇಲ್ಲದ ಆ ಸ್ಕೂಲಿನಲ್ಲಿ, ಟಾಯಿಲೆಟ್ ರೂಮ್ ಎಂಬುದು ಅದರ ಹೆಸರನ್ನೂ ಕೇಳಿರದ ವಸ್ತುವಾಗಿತ್ತು. ಸಿಟಿಯವರಾದ ವೆಂಕಟಪ್ಪನವರಿಗೆ ಮಾತ್ರ ಇದರಿಂದ ಬಹಳ ತೊಂದರೆಯಾಗಿತ್ತೆಂದು ಕಾಣುತ್ತದೆ. ಮೂಡನಹಳ್ಳಿಯಲ್ಲಿ ಅವರು ಇಳಿದುಕೊಂಡಿದ್ದ ರೂಮಿನ ಮನೆಯಲ್ಲೂ ಕಕ್ಕಸ್ಸು ರೂಮ್ ಇರಲಿಲ್ಲ. ಆದರೆ ಅದು ಅವರಿಗೆ ಅಷ್ಟೊಂದು ಸಮಸ್ಯೆಯಾಗಿ ಕಂಡಿರಲಿಲ್ಲ. ಕಾರಣ ಅವರ ದಿನಚರಿ ಊರೆಲ್ಲಾ ಮಲಗಿರುವಾಗ, ಅಂದರೆ ಬೆಳಗಿನ ಜಾವ ನಾಲ್ಕೂವರೆ ಐದಕ್ಕೆಲ್ಲಾ ಶುರುವಾಗಿಬಿಡುತ್ತಿತ್ತು. ಊರಿನ ಆಸುಪಾಸಿನಲ್ಲಿದ್ದ ಕೆರೆಗಳಲ್ಲಿ ಆಗ ವರ್ಷವಿಡೀ ನೀರಿರುತ್ತಿದ್ದುದರಿಂದ ಅವರು ಸ್ನಾನಕ್ಕೂ ಆ ಕೆರೆಗಳನ್ನೆ ಆಶ್ರಯಿಸಿದ್ದರು. ಆದರೆ ಯಾವಾಗಲಾದರೊಮ್ಮೆ ಅವರಿಗೆ ಅವೇಳೆಯಲ್ಲಿ, ಅಂದರೆ ಸ್ಕೂಲಿನಲ್ಲಿದ್ದಾಗ ಕಕ್ಕಸ್ಸಿಗೆ ಹೋಗಬೇಕೆಂದರೆ ಮಾತ್ರ ಪೇಚಾಟವಾಗುತ್ತಿತ್ತು. ಅದಕ್ಕೆ ಅವರು ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿದ್ದರು. ಅದಕ್ಕೆ ನನ್ನ ಸಹಕಾರ ಬೇಕಾಗಿತ್ತು ಅಷ್ಟೆ!ಕುಂದೂರುಮಠದ ಹೈಸ್ಕೂಲಿನಿಂದ ಯಾವ ಕಡೆಗಾದರೂ ಸರಿಯೆ, ನೂರಿನ್ನೂರು ಮೀಟರ್ ನಡೆದರೆ ಕುರುಚಲು ಕಾಡು ಸಿಗುತ್ತಿತ್ತು. ಅಲ್ಲಲ್ಲಿ ಹೊಲ ತೋಟಗಳೂ ಇದ್ದವು. ಸ್ಕೂಲಿನ ಉತ್ತರಕ್ಕೆ ಸ್ವಲ್ಪ ಕಣಿವೆ ಎನ್ನಬಹುದಾದ ತಗ್ಗಾದ ಪ್ರದೇಶವಿತ್ತು. ಅಲ್ಲಿ ಕುರುಚಲುಗಿಡಗಳೂ, ಕೆಲವು ದೊಡ್ಡ ಮರಗಳೂ ಯಥೇಚ್ಚವಾಗಿ ಬೆಳೆದಿದ್ದವು. ಅವರು ಮಾನಿಟರ್ ಎಂದು ಕೂಗಿ ಕರೆದಾಗ, ನಾನು ಹೋದರೆ, ಆಗ ಅಲ್ಲಿ ಯಾರೂ ಇರದಿದ್ದರೆ, ಅಂದು ನಾನು ನೀರು ತೆಗೆದುಕೊಂಡು ಹೋಗಬೇಕಾಗಿದೆ ಎಂದು ಸಾಮಾನ್ಯವಾಗಿ ನಾನು ಊಹಿಸುತ್ತಿದ್ದೆ. ಯಾರಾದರೂ ಬೇರೆ ಮೇಷ್ಟ್ರುಗಳಿದ್ದರೆ ಅವರೇ ಬಾಗಿಲಿಗೆ ಬಂದು ನಿಂತು ನನ್ನನ್ನು ಕರೆದು ಹೊರಗೆ ಹೇಳುತ್ತಿದ್ದರು. ಆಗ ನಾನು ಅಲ್ಲಿದ್ದ ಒಂದು ದೊಡ್ಡ ಚೆಂಬು ಅಥವಾ ಸಣ್ಣ ಬಿಂದಿಗೆ (ಸುಮಾರು ಐದಾರು ಲೀಟರ್ ನೀರು ಹಿಡಿಯುವಂಥದ್ದು) ತುಂಬಾ ನೀರು ತುಂಬಿಕೊಂಡು ಅದನ್ನು ತೆಗೆದುಕೊಂಡು ಹೋಗಿ ಆ ದೂರದ ಕಣಿವೆಯಲ್ಲಿದ್ದ ಒಂದು ಹೊಂಗೇಮರದ ಬುಡದಲ್ಲಿ ಇಟ್ಟು ಬರುತ್ತಿದ್ದೆ.

 

(’ನನ್ನ ಹೈಸ್ಕೂಲ್ ದಿನಗಳು’ ಪುಸ್ತಕದ ಆಯ್ದ ಭಾಗಗಳು) 

ಡಾ. ಬಿ.ಆರ್. ಸತ್ಯನಾರಾಯಣ, ಗ್ರಂಥಪಾಲಕರು, ಸುರಾನ ಕಾಲೇಜು

 

ಮುಂದುವರೆಯುವುದು...  

Syndicate

Syndicate content