- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಭಾರತ ಮಾತೆ ಆಂಗ್ಲರ ವಸಾಹತುಶಾಹಿ ಆಡಳಿತದ ಭದ್ರ ಮುಷ್ಟಿಯಿಂದ ಬಂಧಮುಕ್ತಗೊಂಡು ಇಂದಿಗೆ ಅರುವತ್ತೊಂದು ಸಂವತ್ಸರಗಳು ಸಂದಿವೆ. ಅಂದರೆ ಬರೋಬರಿ ೨೨೨೮೧ ದಿನಗಳು. ಸ್ವಾತಂತ್ರ್ಯಾನಂತರದ ಈ ದೀರ್ಘ ಪಯಣದ ಹಾದಿಯ ಸಿಂಹಾವಲೋಕನ ಮಾಡಿದಾಗ ಕಂಡುಬರುವುದೇನು? ಅದರಿಂದ ನಮಗೆ ಸಿಗುವ ಸಂತಸವೆಷ್ಟು? ಅಲ್ಲಿ ನಾವು ನೀವುಗಳೆಲ್ಲಾ ವಿಷಾದಪಡಬೇಕಾದ ಸಂಗತಿಗಳೆಷ್ಟು?
ಈ ಮಾತೆ ತನ್ನನ್ನು ಬಂಧಮುಕ್ತಳನ್ನಾಗಿಸುವುದಕ್ಕಾಗಿ ಜೀವದಾನ ಮಾಡಿದ ಸಾವಿರಾರು ಮಕ್ಕಳನ್ನು ನೆನಸಿಕೊಂಡು ಕಣ್ಣೀರಿಡುತ್ತಿರುವಾಗಲೇ, ನಾಡಿನ ಉದ್ದಗಲಕ್ಕೂ ಎಲ್ಲರಿಂದಲೂ ಬಾಪು ಎಂದು ಕರೆಸಿಕೊಂಡು ಜನಪ್ರಿಯನಾಗಿದ್ದ ಆಕೆಯ ನೆಚ್ಚಿನ ಮಗನ ಕೊಲೆ ನಡೆದು ಹೋಗಿತ್ತು. ಆಕೆಯ ಅಂದಿನ ಆ ದುಃಖವನ್ನು ಹಂಚಿಕೊಳ್ಳಲು ಯಾರೂ ಇದ್ದಿರಲಿಲ್ಲ. ಇಂದಿಗೂ ಆಕೆ ತನ್ನ ಆ ಮಗನಿಗಾಗಿ ಅಳುತ್ತಿರಬಹುದು. ಆತನ ಅಗಲಿಕೆಯ ಕೊರಗಿನಿಂದ ಮರುಗುತ್ತಿರಬಹುದು. ಏಕೆಂದರೆ, ಅಂತಹ ಇನ್ನೋರ್ವ ಮಗನಿಗೆ ತಾಯಿಯೆನಿಸಿಕೊಳ್ಳಲು ಆಕೆಗೆ ಅಂದಿನಿಂದ ಇಂದಿನವರೆಗೂ ಸಾಧ್ಯವಾಗಲೇ ಇಲ್ಲ.
ಈ ನಾಡನ್ನು ರಾಮರಾಜ್ಯವನ್ನಾಗಿಸುವ ಕನಸನ್ನು ಭಾರತ ಮಾತೆಯ ಮಕ್ಕಳ ಕಣ್ಮನಗಳಲ್ಲಿ ತುಂಬಿ, ಅಧಿಕಾರದ ಚುಕ್ಕಾಣಿ ಹಿಡಿದರು, ಅಂದಿನ ಜನಪ್ರಿಯ ನೇತಾರರು. ಆದರೆ, ದಿನಕಳೆದಂತೆ ಅವರಲ್ಲಿ ಹೆಚ್ಚಿನವರೆಲ್ಲರೂ ನಗರ ಪ್ರದೇಶಗಳಲ್ಲೇ ಇದ್ದುಕೊಂಡು, ಪಾಶ್ಚಾತ್ಯ ಐಷಾರಾಮಿ ಜೀವನ ಶೈಲಿಯತ್ತಲೇ ಒಲವು ತೋರತೊಡಗಿದರು. ದೂರದ ಹಳ್ಳಿಗಳಲ್ಲಿ, ದಿನಕ್ಕರ್ಧ ಹೊತ್ತಿನ ಕೂಳಿಗೂ ಗತಿ ಇಲ್ಲದೆ ಕೊರಗುತ್ತಿದ್ದವರ ಬಗ್ಗೆಯಾಗಲೀ, ಸರಿಯಾದ ಶುಶ್ರೂಷೆ ಕಾಣದೆ ಅನೇಕ ಸೋಂಕು ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದ, ಸಾಯುವಂತೆ ಬದುಕುತ್ತಿದ್ದ ಭಾರತ ಮಾತೆಯ ಕೋಟಿ ಕೋಟಿ ಮಕ್ಕಳತ್ತಲಾಗಲೀ ಯಾರೂ ಗಮನ ಹರಿಸಲೇ ಇಲ್ಲ.
ಆ ಬಡ ಮಕ್ಕಳ ಹೆಸರಿನಲ್ಲಿ ನೂರೆಂಟು ಯೋಜನೆಗಳೇನೋ ರೂಪುಗೊಂಡವು ಸರಿ. ಆದರೆ ಅವು ಕಾರ್ಯರೂಪಕ್ಕೆ ಬಂದಿದೆಯೋ ಇಲ್ಲವೋ ಎಂದು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತವರು ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಹೋಗಲಿಲ್ಲ. ಐದು ವರುಷಗಳಿಗೊಮ್ಮೆ ಚುನಾವಣೆ ನಡೆಸಿದರು. ತಮ್ಮ ಕಾರ್ಯದಕ್ಷತೆಯ, ಯೋಗ್ಯತೆಯ ಪ್ರಚಾರ ಮಾಡುವುದನ್ನು ಬಿಟ್ಟು, ಮದ್ಯ ಮತ್ತು ಹಣವನ್ನು ಬೇಕಾಬಿಟ್ಟಿ ಚೆಲ್ಲಿದ ನಾಯಕರು ಚುನಾವಣೆಯಲ್ಲಿ ಜಯಿಸಿ ಬಂದರು
ಒಂದಷ್ಟು ಜನ ಅಧಿಕಾರದ ಗದ್ದುಗೆಯನ್ನು ಏರಿದರು. ಇನ್ನಷ್ಟು ಜನ ವಿರೋಧ ಪಕ್ಷದಲ್ಲಿ ಕೂತುಕೊಂಡು ಈ ಅಧಿಕಾರಾರೂಢರಾಗಿರುವವರ ಕಾಲೆಳೆಯುವುದರಲ್ಲಿ ನಿರತರಾದರು. ಎರಡೂ ಪಕ್ಷದವರು ಮತದಾರರನ್ನೆ ಮರೆತು ತಮ್ಮ ಒಳಗೊಳಗೇ ಒಡಂಬಡಿಕೆ ಮಾಡಿಕೊಂಡು ಶಾಸನಸಭೆಗಳಲ್ಲಿ ಕಾಲಹರಣ ಮಾಡಿ ಈ ನಾಡಿನ ಬೊಕ್ಕಸದ ದರೋಡೆ ಮಾಡುತ್ತಲೇ ಬಂದರು. ಇತ್ತ ಮತದಾರ ಇವನ್ನೆಲ್ಲಾ ಕಂಡೂ ಕಾಣದಂತೆ, ಆಗಸಕ್ಕೆ ದೃಷ್ಟಿ ನೆಟ್ಟು ಮತ್ತೊಬ್ಬ ಬಾಪುವಿನ ಆಗಮನದ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿರುತ್ತಾನೆ.
ಈ ಭಾರತ ಮಾತೆ ಹೆಮ್ಮೆಪಟ್ಟುಕೊಳ್ಳಬೇಕಾದ ಸಾಧನೆಗಳು ನೂರಾರು ನಡೆದಿರಬಹುದು, ಇಲ್ಲವೆಂದೇನಿಲ್ಲ. ಆದರೆ, ಆಕೆ ನಾಚಿಕೆಯಿಂದ ಮುಖ ಮರೆಸಿಕೊಳ್ಳುವಂತೆ ಮಾಡಿದ ಅವಮಾನಕಾರೀ ಸಂದರ್ಭಗಳು ಅವಕ್ಕಿಂತಲೂ ಹೆಚ್ಚಾಗಿದ್ದವು.
ಮೊದಲ ದಶಕದಲ್ಲಷ್ಟೆ ಈ ನಾಡು ಪ್ರಜಾಪ್ರಭುತ್ವದ ನಿಜರೂಪದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಿತ್ತೆನ್ನಬಹುದು. ಸ್ವಾತಂತ್ರ್ಯಕ್ಕೆ ಮೊದಲು ತಾವೆಲ್ಲರೂ ಒಂದೇ ಮಾತೆಯ ಮಕ್ಕಳು ಎಂದನ್ನುತ್ತಿದ್ದವರು, ನಂತರದ ದಿನಗಳಲ್ಲಿ ಮತ, ಧರ್ಮ, ಜಾತಿ, ಭಾಷೆಗಳ ಆಧಾರದ ಮೇಲೆ ತಮ್ಮ ತಮ್ಮ ನಡುವೆಯೇ ಗೊಡೆಗಳನ್ನು, ಗಡಿರೇಖೆಗಳನ್ನು ರೂಪಿಸಿಕೊಂಡರು. ಇವಕ್ಕೆಲ್ಲಾ ಕುಮ್ಮಕ್ಕು ಕೊಟ್ಟು, ಅಮಾಯಕ ಜನರ ಮನಗಳಲ್ಲಿ ಬೇಧ ಭಾವದ ವಿಷಬೀಜಗಳನ್ನು ಬಿತ್ತಿ, ಪರಸ್ಪರರ ವಿರುದ್ಧ ಎತ್ತಿ ಕಟ್ಟಿದವರು ಈ ಜನಪ್ರಿಯ ನೇತಾರರು.
ರಾಜಕೀಯ ರಾಜ್ಯಭಾರ ಮಾಡಲಷ್ಟೆ ಅವಶ್ಯವಾಗಬೇಕಿತ್ತು. ಆದರೆ, ಅದು ಇಂದು ಪ್ರತಿ ನೇತಾರನೂ ತನ್ನ ತಿಜೋರಿ ತುಂಬಿಕೊಳ್ಳಲು ನೆಚ್ಚಿಕೊಳ್ಳುವ ಸುಲಭದ ವ್ಯವಸಾಯವಾಗಿ ಬಿಟ್ಟಿತು. ಕಾಲ ಕಳೆದಂತೆ, ಭ್ರಷ್ಟಾಚಾರ ಎನ್ನುವುದು ಮಹಾ ಮಾರಿಯಂತೆ ನಾಡಿನ ಉದ್ದಗಲವನ್ನು ವ್ಯಾಪಿಸಿಬಿಟ್ಟಿತು.
ಕಾರ್ಯಾಂಗದಲ್ಲಿ ಆರಂಭವಾಗಿ, ಶಾಸಕಾಂಗದಲ್ಲಿ ನೆಲೆಯೂರಿ ಇದೀಗ ನ್ಯಾಯಾಂಗದತ್ತಲೂ ತನ್ನ ದೀರ್ಘ ಬಾಹುವನ್ನು ಚಾಚುತ್ತಿರುವ ಈ ಭ್ರಷ್ಟಾಚಾರ, ತನಗೆ ಅಂತ್ಯವೇ ಇಲ್ಲವೆನ್ನುವಂತೆ ಬೆಳೆಯುತ್ತಲೇ ಸಾಗಿದೆ. ರಾಜಕೀಯ ಮತ್ತು ಭ್ರಷ್ಟಾಚಾರ ಇವು ತೀರ ಭಿನ್ನ ಅರ್ಥಕೊಡುವ ಬೇರೆ ಬೇರೆ ಪದಗಳಾಗಿದ್ದರೂ, ಈಗ ಅವು ಒಂದಕ್ಕೊಂದು ಪರ್ಯಾಯ ಪದಗಳಾಗಿ ಬಿಟ್ಟಿವೆ.
ಅಧಿಕಾರದಲ್ಲಿಉಳಿಯಬೇಕೆಂದರೆ ಏನನ್ನು ಬೇಕಾದರೂ ಮಾಡಬಹುದು. ಯಾರನ್ನು ಬೇಕಾದರೂ ಸಾಯಿಸಿ ಬಿಡಬಹುದು ಎನ್ನುವುದನ್ನು ಅರುವತ್ತರ ದಶಕದಲ್ಲೇ ಈ ರಾಜಕೀಯ ನೇತಾರರು ತೋರಿಸಿಕೊಡಲು ಆರಂಭಿಸಿಬಿಟ್ಟರು. ಅಂದಿನಿಂದ ಇಂದಿನವರೆಗೆ ಜನಪ್ರಿಯ ನೇತಾರರ ಸಂಶಯಾಸ್ಪದವಾದ ಸಾವುಗಳಿಗೆ ಈ ನಾಡಿನಲ್ಲಿ ಕೊನೆಯೇ ಇಲ್ಲದಂತಾಗಿದೆ.
ಕೊಲ್ಲಿಸಿದವರೂ ಕೊನೆಗೆ ಬದುಕಿ ಉಳಿಯುವುದಿಲ್ಲ. ಒಬ್ಬರ ಹಿಂದೊಬ್ಬರು ಬರ್ಬರ ಹತ್ಯೆಗೆ ಬಲಿಯಾಗುತ್ತಲೇ ಬರುತ್ತಿದ್ದಾರೆ. ರಾಜಕೀಯ ಎದುರಾಳಿಯ ಕೊಲೆಮಾಡುವುದೆಂದರೆ, ತನ್ನ ಮೈಮೇಲೆ ಕೂತ ಸೊಳ್ಳೆಯನ್ನು ಹಿಸುಕಿ ಕೊಲ್ಲುದಕ್ಕಿಂತಲೂ ಸುಲಭ ಸಾಧ್ಯವಾಗಿ ಬಿಟ್ಟಿದೆ.
ಅತ್ತ ಪ್ರಜಾಪ್ರಭುತ್ವದ ಮಂದಿರದೊಳಗೇ ದಿನ ಪ್ರತಿದಿನ ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಾ ಸಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ತಮ್ಮ ಖಾಸಗಿ ಸಮಸ್ಯೆಗಳ ಪರಿಹಾರದತ್ತಲಷ್ಟೆ ಗಮನ ಕೊಡುತ್ತಿರುತ್ತಾರೆ. ನಾಯಿಕೊಡೆಗಳಂತೆ ದಿನಕ್ಕೊಂದು ರಾಜಕೀಯ ಪಕ್ಷ ಈ ನಾಡಿನಲ್ಲಿ ಹುಟ್ಟುತ್ತಲೇ ಸಾಗಿದೆ.
ಎಲ್ಲರಿಗೂ ಅಧಿಕಾರದ ಆಸೆಯೇ ವಿನಹ ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಚಿಂತೆ, ಆ ಬಗ್ಗೆ ಚಿಂತನೆ ಯಾರೊಬ್ಬನಿಗೂ ಇಲ್ಲ. ಎಲ್ಲ ರಾಜಕೀಯ ನಾಯಕನಿಗೂ ತನ್ನ ಉತ್ತರಾಧಿಕಾರಿಯಾಗಿ ಮಗ, ಮಗಳು, ಮಡದಿ ಅಥವಾ ಸಹೋದರರನ್ನು ನೇಮಿಸಿ ನಿವೃತ್ತರಾಗಬೇಕೆಂಬುದೇ ಮಹದಾಶೆಯಾಗಿ ಬಿಟ್ಟಿದೆ. ಕೋಟಿಗಟ್ಟಲೆ ಆಸ್ತಿ ಸಂಪಾದಿಸಿ ಗಂಟು ಕಟ್ಟಿ ಇಟ್ಟರೂ, ಮಣ್ಣಿನಮಗ, ರೈತ ಬಂಧು, ಎನ್ನುವ ಬಿರುದುಗಳಿಗೆ ಅಂಟಿಕೊಳ್ಳುವ ಹಂಬಲ ಎಲ್ಲರಿಗೂ ಇದೆ.
ಎಲ್ಲರ ರಾಜಕೀಯವೂ ಜಾತ್ಯಾಧಾರಿತ, ಮತಾಧಾರಿತ ಮತ್ತು ಭಾಷಾಧಾರಿತ ಆಗಿದ್ದರೂ, ಪ್ರತಿಯೊಬ್ಬನೂ ಪರರನ್ನು ದೂಷಿಸುತ್ತ ಬರುತ್ತಾನೆಯೇ ವಿನಹ ಆತ್ಮಾವಲೋಕನ ಮಾಡಿಕೊಳ್ಳಲು ತಯಾರಾಗಿಲ್ಲ.
ಒಂದೇ ನಾಣ್ಯದ ಎರಡು ಮುಖಗಳಂತಿರುವ ರಾಜಕೀಯ ಮತ್ತು ಭ್ರಷ್ಟಾಚಾರ, ಶಾಸನ ಸಭೆಗಳಿಂದ ಮಠಗಳೆಡೆಗೆ, ಪ್ರಾರ್ಥನಾ ಮಂದಿರಗಳೆಡೆಗೆ, ಶಾಲಾ ಕಾಲೇಜುಗಳೆಡೆಗೆ ಸಾಗಿ, ಇಂದಿನ ಯುವ ಜನಾಂಗದ ಉಸಿರಿನಲ್ಲಿ ಸೇರಿಕೊಳ್ಳುತಿವೆ.
ಇವಕ್ಕೆಲ್ಲಾ ಕೊನೆ ಹೇಳುವವರು ಯಾರು? ಮುಂದಿನ ಪೀಳಿಗೆಯನ್ನು ಬಡಿದೆಬ್ಬಿಸಿ ಜನಜಾಗೃತಿಗೆ ತಯಾರು ಮಾಡುವವರು ಯಾರು? ಇಡೀ ನಾಡಿನ ಜನ ಒಕ್ಕೊರಲಿಂದ ತಮ್ಮ ನಾಯಕನೆಂದು ಕರೆದು ಹಿಂಬಾಲಿಸಿ ನಡೆಯುವಂತೆ ಮಾಡುವ ಆ ಬಾಪು ಮತ್ತೆ ಹುಟ್ಟಿ ಬಂದಾರೆ?
ಪುನರಪಿ ಜನನಂ ಪುನರಪಿ ಮರಣಂ ಎನ್ನುವುದು ನಿಜವಾದರೆ, ಆ ಮಹಾತ್ಮ ಮತ್ತೆ ಇದೇ ನಾಡಿನಲ್ಲಿ ಹುಟ್ಟಿ ಬರಬಹುದಲ್ಲವೇ? ಬಂದಾರೆ? ಅಲ್ಲಾ, ನಮ್ಮ ನಡುವಿನಿಂದಲೇ ಒಬ್ಬ ಆ ಎತ್ತರಕ್ಕೆ ಏರಿ ಮಹಾತ್ಮನಾದಾನೇ?
ನನ್ನೀ ಪ್ರಶ್ನೆಗಳು ನಿಮ್ಮನ್ನೂ ಕಿಂಚಿತ್ ಚಿಂತನೆಗೆ ಈಡು ಮಾಡುವಲ್ಲಿ ಸಫಲವಾಗಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಜೊತೆಗೂಡಿ ಕಂಡುಕೊಳ್ಳೋಣವೇ? ಅಥವಾ, ಇದು ನಮ್ಮ ಹಣೆ ಬರಹ ಎಂದು ಕಣ್ಮುಚ್ಚಿಕೊಂಡು ಮುಂದುವರೆಯೋಣವೇ?
************************









