ಸ್ವಾತಂತ್ರ್ಯದ ನೆರಳಲ್ಲಿ ಚಿನ್ನದ ಸುಖ
 •    •  
flag.jpg

                                          -ಗೋಪಿನಾಥ ರಾವ್. 

ಈ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಕಳೆ ಕೊಟ್ಟಿರುವುದು ಭಾರತ ಗೆದ್ದ ಒಲಿಂಪಿಕ್ ಚಿನ್ನ. ಸ್ವಲ್ಪ ಮಂದಿಗೆ ಚಿನ್ನ ಗೆದ್ದ ಹುಡುಗನ ಹೆಸರು ಅಭಿನವ್ ಬಿಂದ್ರಾ ಅಂತಲೂ ಗೊತ್ತಿಲ್ಲ. ಬಹುತೇಕ ಮಂದಿಗೆ ಆತನ ಹೆಸರು ಬಿಂದ್ರಾ ಮತ್ತು ಆತ ಗೆದ್ದದ್ದು ಶೂಟಿಂಗ್ ಚಿನ್ನ ಎಂದಷ್ಟೇ ಗೊತ್ತು. ನಿಜವಾದ ಸ್ಪರ್ಧಾ ವಿಭಾಗವಂತೂ ಸುದ್ದಿದಾರರಿಗೆ ಮಾತ್ರ ಗೊತ್ತು. ಆದರೂ ಭಾರತ ಚಿನ್ನ ಗೆದ್ದಿದೆ. ಅಪರೂಪಕ್ಕೆ ಒಮ್ಮೆ ಎಂಬಂತೆ ಭಾರತೀಯನಾಗಿ ಹುಟ್ಟಿದ್ದಕ್ಕೆ ಅಭಿಮಾನ ಪಟ್ಟು ನಾವೂ ಯಾರಿಗೂ ಕಡಿಮೆಯಿಲ್ಲ ಎಂದು ಮನದೊಳಗೇ ಸಂತೋಷಿಸಲು ನಮಗೊಂದು ಅವಕಾಶ ಸಿಕ್ಕಿದೆ. ರಾಜಕಾರಣಿಗಳಿಗೆ ಪ್ರಚಾರಕ್ಕೆ ಹೊಸ ಅವಕಾಶ ಸಿಕ್ಕಿದೆ. ತಮ್ಮ ಸ್ವಂತ ಕಿಸೆಯಿಂದ ಕೊಡುವ ದಿಲ್ದಾರಿಗಳ ಹಾಗೆ ಬಹುಮಾನ ಘೋಷಿಸಿದ್ದಾರೆ (ಹಣ ಕೊಡುತ್ತಾರೋ ಕೈಕೊಡುತ್ತಾರೋ ದೇವರೇ ಬಲ್ಲ) ಅಂತೂ ನಾವೂ ಒಲಿಂಪಿಕ್ ಚಿನ್ನ ಗೆದ್ದಿದ್ದೇವೆ ಅನ್ನುತ್ತಾ ಸಿಹಿ ಹಂಚಿಯೋ ಪಾರ್ಟಿ ನಡೆಸಿಯೋ ನಮಗೆ ನಾವೇ ಅಭಿನಂದಿಸಿಕೊಳ್ಳೋಣ. ಪಟಾಕಿ ಸಿಡಿಸಿ ಆಚರಿಸುವುದಕ್ಕೆ ಮಾತ್ರ ಹೋಗಬೇಡಿ ಬಾಂಬ್ ನಿಗ್ರಹ ದಳದವರು ಮನೆಗೆ ಮುತ್ತಿಗೆ ಹಾಕಿಯಾರು!

ಪ್ರತೀ ವರ್ಷ ಸ್ವಾತಂತ್ರ್ಯ ದಿನ ಬಂದಾಗಲೂ ನಮಗೆ ಸಿಕ್ಕಿದ ಸ್ವಾತಂತ್ರ್ಯ ಹೋದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಜಾಸ್ತಿ ಆಗಿದೆ ಅನ್ನಿಸುತ್ತಿದೆ ನನಗೆ. ಲೋಕಸಭೆಯೊಳಗೆ ಕೋಟಿ ನೋಟುಗಳನ್ನು ಹೊತ್ತು ತಂದು ಪ್ರದರ್ಶಿಸುವಷ್ಟು ಸ್ವಾತಂತ್ರ್ಯ ನಮ್ಮಲ್ಲಿ ಬಿಟ್ಟು ಬೇರೆಲ್ಲಿದೆ ಹೇಳಿ? ನಮ್ಮ ಭಾವಿ ಪ್ರಧಾನ ಮಂತ್ರಿ ಸಂಸತ್ತಿನ ಈ ಅವಹೇಳನವನ್ನು ತಡೆಯುವ ಬದಲು ಅದಕ್ಕೆ ಬೆಂಕಿ ಹಾಕಿ ಪೆಟ್ರೋಲು ಸುರಿದು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಐವತ್ತೋ ನೂರೋ ಲಂಚ ಪಡೆಯುವ ಪೇದೆಗಳನ್ನೋ ಕಾರಕೂನರನ್ನೋ ಹಿಡಿದು ಸಸ್ಪೆಂಡ್ ಮಾಡುವ ನಾವುಗಳು ಕೋಟಿಗಟ್ಟಲೆಯ ಈ ಗಂಭೀರ ಲಂಚ ಪ್ರಕರಣವನ್ನು ತಿಂಗಳಾದರೂ ಗಂಭೀರವಾಗಿ ಪರಿಗಣಿಸುವುದಿಲ್ಲ. "ಅವರು ಕೋಟಿಗಟ್ಟಲೆ ಲಂಚ ತಿಂದಿರುವುದು ನನಗೆ ಗೊತ್ತು, ಸೂಕ್ತ ಸಮಯ ಬಂದಾಗ ಹೇಳುತ್ತೇನೆ" ಎನ್ನುವ ಭಡವ ರಾಜಕಾರಣಿಗಳನ್ನೆಲ್ಲ ಒದ್ದು ಸೆರೆಮನೆಯಲ್ಲಿಟ್ಟು "ಏನೇನೆಲ್ಲ ಗೊತ್ತು? ಈಗ ಬೊಗಳು" ಅನ್ನುವುದಿಲ್ಲ!  ಇನ್ನೂರಕ್ಕೂ ಹೆಚ್ಚು ಮಂದಿ ಮೂರುಹೊತ್ತಿನ ಊಟಕ್ಕಿಲ್ಲದವರಿಂದ "ಇಪ್ಪತ್ತಿಪ್ಪತ್ತು ಲಕ್ಷ ಗಿಫ್ಟ್ ಪಡೆದಿದ್ದೇನೆ" ಎಂದು ಸುಳ್ಳು ಆದಾಯಲೆಕ್ಕ ತೋರಿಸುವ ರಾಜಕಾರಣಿ ನಮ್ಮಲ್ಲಿ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಡುತ್ತಿದ್ದಾರೆ. "ನಮ್ಮ ಸರಕಾರ ಉಳಿಸಿಕೊಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ" ಎಂದು ಸಾರಾಸಗಟು ಸದ್ರಿ ರಾಜ್ಯದ ವಿಧಾನಸಭೆಯ ಅವಹೇಳನ ಮಾಡಿದ ಪಕ್ಷ ನಮ್ಮಲ್ಲಿ ಸರಕಾರ ನಡೆಸುತ್ತಿದೆ! ಅನ್ನ ಬಿಟ್ಟು, ತುಂಡು ಬಟ್ಟೆ ತೊಟ್ಟು ಪೆಟ್ಟು ತಿಂದು ನಮ್ಮ ಹಿರಿಯರು ಪಡೆದ ಸ್ವಾತಂತ್ರ್ಯವನ್ನು ವರ್ಷ ವರ್ಷಕ್ಕೂ ನಮಗೆ ಬೇಕಾದ ಹಾಗೆ ಹೆಚ್ಚಿಸಿಕೊಳ್ಳುತ್ತಿದ್ದೇವೆ!

ಈ ಎಲ್ಲ ಅವಸ್ಥೆಗಳಿಗೆ ಮುಕುಟಪ್ರಾಯವಾಗಿ ನಮ್ಮ ಸುಪ್ರೀಮ್ ಕೋರ್ಟು "ಈ ದೇಶವನ್ನು ಕಾಪಾಡಲು ದೇವರಿಗೂ ಸಾಧ್ಯವಿಲ್ಲ" ಎಂಬ ನುಡಿಮುತ್ತು ಉದುರಿಸಿ ಕೈ ತೊಳೆದುಕೊಳ್ಳುತ್ತದೆ!

ಗೋವಾದಂತಹ ಸೌಂದರ್ಯ ತಾಣಗಳಿಗೆ ಬರುವ ಪ್ರವಾಸಿಗಳಿಗೆ ಬೇಕಾದ ಮಾದಕ ಪದಾರ್ಥಗಳನ್ನು ಪೂರೈಸುವ ಸ್ವತಂತ್ರರು ಹಾಯಾಗಿದ್ದಾರೆ. ಒಂಟಿಯಾಗಿ ಸಿಕ್ಕ ಹುಡುಗಿಯನ್ನು ಬಲಾತ್ಕರಿಸಿ ಕೊಂದು ಹಾಕುವ ಸ್ವತಂತ್ರರೂ ಅಲ್ಲೇ ಇದ್ದಾರೆ. ಬ್ಯಾಂಕಿನಲ್ಲೇ ಖೋಟಾನೋಟು ದಾಸ್ತಾನಿಟ್ಟು ಸ್ವಾತಂತ್ರ್ಯ ಮೆರೆದ ಘಟನೆ ವರದಿಯಾಗಿದೆ. ಅರಾಜಕತೆ, ಲಂಚಾವತಾರ, ಭಯೋತ್ಪಾದನೆ ಜಾತಿರಾಜಕಾರಣ  ಹೀಗೇ ಮುಂದುವರೆದರೆ ರೋಸಿ ಹೋದ ಜನಸಾಮಾನ್ಯರೆಲ್ಲರ ಕೈಯಲ್ಲೂ ಪಿಸ್ತೂಲು ಗನ್ ಬರುವ ದಿನ ದೂರವಿಲ್ಲ..
ಹಾಗೂ
ಭಾರತಕ್ಕೆ ಶೂಟಿಂಗಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಪದಕಗಳು ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ!

ಆದರೂ "ಬೋಲೋ ಭಾರತ್ ಮಾತಾ ಕೀ..." ಎನ್ನುವಾಗ ಎಲ್ಲರೊಂದಿಗೆ "ಜೈ" ಎನ್ನದೇ ಇರಲಾಗುತ್ತದೆಯೇ?

ವಂದನೆಗಳೊಂದಿಗೆ,

ಗೋಪೀನಾಥ ರಾವ್

Syndicate

Syndicate content