ನನ್ನ ಪ್ರೀತಿಯ ಹೆಡ್ಮಾಸ್ಟರ್
Satyanarayana

                                - ಡಾ. ಬಿ.ಆರ್. ಸತ್ಯನಾರಾಯಣ

 ನಾನು ಎಂಟನೇ ತರಗತಿಗೆ ಅಡ್ಮಿಷನ್ ಆಗುವ ಮೊದಲ ದಿನವೇ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ಐದನೇ ತರಗತಿಗೆ ಕುಂದೂರಿನ ಮಿಡ್ಲಿಸ್ಕೂಲಿಗೆ ಸೇರಿಕೊಳ್ಳುವಾಗಲೇ ನಮ್ಮ ಮನೆಯಿಂದ ಯಾರೂ ಬಂದಿರಲಿಲ್ಲ. ನಾನೇ ಹೋಗಿ ಮೇಸ್ಟರನ್ನು ಕೇಳಿಕೊಂಡು ಅಡ್ಮಿಟ್ ಆಗಿದ್ದೆ. ಅವರು ಹೇಳಿದ ಮೂರೂವರೆ ರೂಪಾಯಿಯನ್ನು ಮನೆಯಲ್ಲಿ ಹೇಳಿ ತೆಗೆದುಕೊಂಡು ಹೋಗಿ ಕಟ್ಟಿದ್ದೆ. ಪ್ರಾಥಮಿಕ ಶಾಲೆಯಿಂದ ಟಿ.ಸಿ.ಯನ್ನು ನಾನೇ ತಂದುಕೊಟ್ಟಿದ್ದೆ. ಇದು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ. ಸಾಮಾನ್ಯವಾಗಿ ಎಲ್ಲರೂ ರೈತವರ್ಗದವರೇ ಆಗಿರುವುದರಿಂದ, ಯಾರಿಗೂ ಬಿಡುವೆಂಬುದೇ ಇರುವುದಿಲ್ಲ. ಸ್ಕೂಲಿಗೆ ಅಡ್ಮಿಷನ್ ಪ್ರಾರಂಭವಾಗುವ ಜೂನ್ ತಿಂಗಳು ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ತಿಂಗಳು. ಆಗಿನ ಮೇಷ್ಟ್ರುಗಳು  ಸ್ಕೂಲಿಗೆ ಸೇರಿಸಿಕೊಳ್ಳುವಲ್ಲಿ ತುಂಬಾ ಉದಾರಿಗಳಾಗಿದ್ದರು. ಈಗಿನ ಪದವಿ ತರಗತಿಯಲ್ಲಿ ಓದುತ್ತಿರುವ ಮಕ್ಕಳ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ನಿರ್ಧಾರ ತಗೆದುಕೊಳ್ಳುವ ಸ್ವಾತಂತ್ರ್ಯ ಕೊಟ್ಟಿಲ್ಲ. ಇದಕ್ಕೆ ಹೋಲಿಸಿದರೆ ನಾವು ಸ್ವಲ್ಪ ಚೆನ್ನಾಗಿಯೇ ಸ್ವತಂತ್ರವನ್ನು ಅನುಭವಿಸಿದ್ದೆವು ಎನ್ನಿಸುತ್ತದೆ. ಮಿಡ್ಲಿಸ್ಕೂಲಿಗೆ ಒಬ್ಬನೇ ಹೋಗಿ ಅಡ್ಮಿಷನ್ ಆದವನಿಗೆ, ಹೈಸ್ಕೂಲಿಗೆ ಅಡ್ಮಿಷನ್ ಆಗಲು ಕಷ್ಟವೇನು? ಸರಿ, ಜೂನ್ ತಿಂಗಳ ಒಂದನೇ ತಾರೀಖಿನಂದೇ ಮಿಡ್ಲಿಸ್ಕೂಲಿಗೆ ಹೋದೆ. ನನ್ನ ಅಜ್ಜಿಯನ್ನು ಪುಸಲಾಯಿಸಿ ಪಡೆದಿದ್ದ ಹಣದಿಂದ, ಹೋಗುವಾಗಲೇ ಒಂದು ಬಿಸ್ಕೆಟ್ ಪ್ಯಾಕೆಟ್ ತಗೆದುಕೊಂಡು ಹೋದೆ. ಹಿಂದಿನ ವರ್ಷದ ವಿದ್ಯಾರ್ಥಿಗಳು ಟಿ.ಸಿ. ತೆಗೆದುಕೊಂಡು ಹೋಗುವಾಗ ಬಿಸ್ಕೆಟ್ ಪ್ಯಾಕೆಟ್, ಬಾಳೆ ಹಣ್ಣು, ಕೊಬ್ಬರಿ ತಂದು ಮಿಡ್ಲಿಸ್ಕೂಲಿನ ಮೇಷ್ಟ್ರುಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೆ! ತೆಗೆದುಕೊಂಡು ಹೋಗಿದ್ದು ಒಂದೇ ಪ್ಯಾಕೆಟ್ ಆಗಿದ್ದರಿಂದ, ಅದನ್ನು ಬೇರೆ ಮೇಷ್ಟ್ರುಗಳಿಗೆ ಕಾಣದಂತೆ ಅಡಗಿಸಿಟ್ಟುಕೊಂಡು ಹೋಗಿ ಹೆಡ್ಮಾಸ್ಟರಿಗೆ ಕೊಟ್ಟಿದ್ದೆ! ಆಗ ಹೆಡ್ಮಾಸ್ಟರಾಗಿದ್ದ ಕೇಶವೇಗೌಡ ಎಂಬುವವರು ತುಂಬಾ ಪ್ರೀತಿಯಿಂದ ಮಾತನಾಡಿಸಿ ಟೀ.ಸಿ. ಬರೆದುಕೊಟ್ಟರು. ಹಾಗೆ ಕೊಡುವಾಗ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂದರೆ ಆರನೂರಕ್ಕೆ ನಾನೂರ ಏಳು ಅಂಕ ಪಡೆದವನು ನೀನಯ್ಯ. ಇನ್ನು ಮುಂದೆಯೂ ಚೆನ್ನಾಗಿ ಓದಬೇಕು ಎಂದು ಹಿತವಚನವನ್ನೂ ಹೇಳಿದರು. ಅವರು ಕೊಟ್ಟ ಟೀ.ಸಿ.ಯನ್ನು ನೋಡುವ, ಓದುವ ವ್ಯವಧಾನವಿಲ್ಲದೆ, ಅಂದೇ ಕುಂದೂರುಮಠದ ಹೈಸ್ಕೂಲಿಗೆ ತಗೆದುಕೊಂಡು ಹೋದೆ. ಆಗ ಶ್ರೀ ವೆಂಕಟಪ್ಪನವರೇ ಹೆಡ್ಮಾಸ್ಟರಾಗಿದ್ದರು. ಕ್ಲರ್ಕ್ ಹೇಳಿದ್ದರಿಂದ ಟೀ.ಸಿ. ಮೇಲೆ ಅವರ ರುಜು ಹಾಕಿಸಲು ಅವರ ಕೊಠಡಿಗೆ ಹೋದೆ. ಅವರಿಗೆ ನನ್ನ ಪರಿಚಯವಿತ್ತು. ಏಕೆಂದರೆ ಅವರು ದಿನಾ ಮೂಡನಹಳ್ಳಿಯಿಂದ ಕುಂದೂರುಮಠಕ್ಕೆ ಹೋಗಿ ಬರುವಾಗ ದಾರಿಯಲ್ಲಿ ಮಿಡ್ಲಿಸ್ಕೂಲಿನ ವಿದ್ಯಾರ್ಥಿಗಳಾದ ನಮಗೆ ಸಿಗುತ್ತಿದ್ದರು. ನಾವೆಲ್ಲಾ ಒಟ್ಟಿಗೇ ಗುಡ್ಮಾರ್ನಿಂಗ್ ಎಂದೋ ಗುಡ್ಈವನಿಂಗ್ ಎಂದೋ ಕಿರುಚಿ ನಮಸ್ಕರಿಸುತ್ತಿದ್ದೆವು. ಆಗಾಗ ಅವರು ನಮ್ಮ ಹೆಸರು, ಓದುತ್ತಿರುವ ತರಗತಿ ಮೊದಲಾದವುಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಪರಿಚಯದಿಂದ ನಸುನಗುತ್ತಲೇ ನನ್ನ ಟೀ.ಸಿ.ಯ ಮೇಲೆ ಕಣ್ಣಾಡಿಸುತ್ತಿದ್ದರು. ಟೀ.ಸಿ.ಯ ಹಿಂಬದಿಯಲ್ಲಿ ಏಳನೇ ತರಗತಿಯಲ್ಲಿ ನಾನು ಪಡೆದ ಅಂಕಗಳನ್ನು ಬರೆಯಲಾಗಿತ್ತು. ಹಾಳೆ ತಿರುಗಿಸಿ ಅದನ್ನು ನೋಡುವಾಗ ಅವರ ಮುಖದಲ್ಲಿ ನನಗೆ ಆಗ ಅರ್ಥೈಸಲಾರದ ಬದಲಾವಣೆಗಳಾದವು. ನಂತರ ಅವರು ಟೀ.ಸಿ. ಬರೆದದ್ದು ಯಾರು? ಎಂದರು. ನಾನು ಹೆಡ್ಮಾಸ್ಟ್ರು ಕೇಶವೇಗೌಡರು ಸಾರ್ ಎಂದೆ. ಅವರು ನನ್ನೆಡೆಗೆ ಟೀ.ಸಿ. ತೋರಿಸುತ್ತಾ, ನೋಡಿಲ್ಲಿ, ಅವರು ತಪ್ಪು ಬರೆದಿದ್ದಾರೆ. ಅಂಕಗಳನ್ನು ಕೂಡಿದಾಗ ನಾನೂರ ಮೂವತ್ತೇಳು ಬರುತ್ತದೆ. ಅವರು ನಾನೂರ ಏಳು ಎಂದು ಬರೆದಿದ್ದಾರೆ. ಆದ್ದರಿಂದ ಈವತ್ತು ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ. ಹೋಗಿ ಇದನ್ನು ಸರಿ ಮಾಡಿಸಿಕೊಂಡು ಬಾ ಎಂದು ಟೀ.ಸಿ.ಯನ್ನು ನನಗೇ ವಾಪಸ್ಸು ಕೊಟ್ಟು ಬಿಟ್ಟರು. ನನಗೋ ಗಾಬರಿ. ಒಂದು ಕ್ಷಣ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲೇ ಇಲ್ಲ. ನಿನ್ನನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದಿಲ್ಲ ಎಂಬುದಷ್ಟೇ ನನ್ನ ತಲೆಯೊಳಗೆ ಹೋಗಿ ಮುಖ ಬಾಡಿ, ಕಣ್ಣೀರು ದುಮ್ಮಿಕ್ಕುವ ಸ್ಥಿತಿಗೆ ತಲುಪಿದ್ದೆ. ಅದನ್ನು ಗಮನಿಸಿದ ಅವರು ಈಗಲೇ ಹೋದರೆ ಇನ್ನೊಂದು ಗಂಟೆಯಲ್ಲಿ ವಾಪಸ್ ಬಂದೇ ಬಿಡುತ್ತೀಯಾ, ಹೋಗು. ಇಂದೇ ಅಡ್ಮಿಷನ್ ಆಗಬಹುದು ಎಂದರು. ಅವರ ಧ್ವನಿ ಹೇಗಿತ್ತೆಂದರೆ, ನನ್ನ ಆಗಿನ ದುಗುಡವೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿ ಮತ್ತೆ ಮಿಡ್ಲಿಸ್ಕೂಲಿನ ಕಡೆಗೆ ನಡೆದೆ. ಆದರೆ ಹೋಗುವ ದಾರಿಯಲ್ಲಿ ಸಿಕ್ಕ ನನ್ನ ಒಬ್ಬ ಮಿತ್ರನಿಂದಾಗಿ ನಾನು ಮಿಡ್ಲಿಸ್ಕೂಲಿಗೆ ಹೋಗದೆ, ಕೇಶವೇಗೌಡರನ್ನು ನೋಡದೆ ಒಂದು ತಪ್ಪನ್ನು ಮಾಡಿದೆ. ಕೇಶವೇಗೌಡರು ಮಾಡಿರುವ ತಪ್ಪಾದರೂ ಏನು? ೪೩೭ರ ಬದಲಿಗೆ ೪೦೭ ಬರೆದಿದ್ದಾರೆ. ಆ ಸೊನ್ನೆ ಇರುವ ಜಾಗದಲ್ಲಿ ಮೂರನ್ನು ಬರೆದರೆ ಆಯಿತು. ಅದಕ್ಕೆ ಅಷ್ಟು ದೂರ ನಡೆದು ಹೋಗಬೇಕೆ ಎಂಬ ಮಿತ್ರನ ಸಲಹೆಯನ್ನು ತ್ರಿಕರಣಪೂರ್ವಕವಾಗಿ ಸ್ವೀಕರಿಸಿ ನಾನೇ ನನ್ನ ಕಯ್ಯಾರೆ ೦ ಯ ಮೇಲೆ ೩ ಎಂದು ತಿದ್ದಿ ತಿದ್ದಿ ಬರೆದುಬಿಟ್ಟೆ!ಮಧ್ಯಾಹ್ನ ಎರಡೂವರೆಯವರೆಗೆ ನನ್ನ ಸನ್ಮಿತ್ರನೊಂದಿಗೆ ಗೋಲಿ ಆಡಿ, ಮತ್ತೆ ಸ್ಕೂಲಿನ ಕಡೆ ಹೋದೆ. ನೇರವಾಗಿ ಹೆಡ್ಮಾಸ್ಟರ ಬಳಿ ಹೋಗಿ ಟೀ.ಸಿ.ಯನ್ನು ತೆಗೆದುಕೊಡುತ್ತಾ ಸಾರ್, ಸರಿ ಮಾಡಿಸಿಕೊಂಡು ಬಂದಿದ್ದೇನೆ ಎಂದೆ. ಅವರು ಅಷ್ಟೇ ಸಮಾಧಾನದಿಂದ, ಮೊದಲಿನಿಂದ ಟೀ.ಸಿ.ಯನ್ನು ನೋಡುತ್ತಾ ಹಾಳೆ ತಿರುಗಿಸಿದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಅವರ ನೋಟ ಭಯಂಕರವಾಯಿತು. ನನ್ನನ್ನೇ ಇರಿಯುವಂತೆ ನೋಡಿದರು. ಅವರು ದೃಷ್ಟಿಯಿಟ್ಟು ನೋಡಿದರೆ ಸಾಕು ಮೇಷ್ಟ್ರುಗಳೇ ಹೆದರುತ್ತಾರೆ ಎಂದು ನನ್ನಣ್ಣ ಆಗಾಗ ಹೇಳುತ್ತಿದ್ದ. ಇದನ್ನು ಯಾರು ತಿದ್ದಿದ್ದು? ಎಂದರು. ನಾನು ಸಾರ್, ಅದು ಕೇಶವೇಗೌಡರು ಎಂದು ಮುಂತಾಗಿ ತೊದಲಿದೆ.ಸುಳ್ಳು ಹೇಳಬೇಡ. ಅವರು ತಿದ್ದಿದ್ದರೆ ಅದರ ಕೆಳಗೆ ಸಹಿ ಹಾಕಿ ಕೊಡುತ್ತಿದ್ದರು, ಗೊತ್ತಾ ಎಂದರು.ಸಾರ್ ಅದು... ಅದು... ಅವರು ಚೆನ್ನರಾಯಪಟ್ಟಣಕ್ಕೆ ಹೋಗಲು ಹೊರಟು ನಿಂತಿದ್ದರು. ಅರ್ಜೆಂಟಲ್ಲಿ ಹಾಗೇ ಕೊಟ್ಟಿರಬಹುದು....ಸ್ಟಾಪ್, ಸ್ಟಾಪ್. ಮತ್ತೊಮ್ಮೆ ಸುಳ್ಳು ಹೇಳುತ್ತಿದ್ದೀಯ. ಅಂಕಿಯಲ್ಲಿ ನಾನೂರ ಮುವತ್ತೇಳು ಎಂದು ತಿದ್ದಿದವರು ಅಕ್ಷರದಲ್ಲಿ ಹಾಗೇ ಬಿಟ್ಟಿದ್ದಾರೆ. ನೀನು ಸುಳ್ಳು ಹೇಳುವುದು ನನಗೆ ಗೊತ್ತಾಗುವುದಿಲ್ಲ ಎಂದುಕೊಂಡೆಯಾ! ಭಡವಾ! ನಾಳೆ ಹೋಗಿ, ಅವರಲ್ಲಿ ಇದನ್ನು ಸಂಪೂರ್ಣ ಸರಿ ಮಾಡಿಸಿಕೊಂಡು ಬಾ. ಇಲ್ಲದಿದ್ದಲ್ಲಿ ನಿನಗೆ ಅಡ್ಮಿಷನ್ ಇಲ್ಲ. ಹೋಗು. ಇನ್ನೆಂದೂ ನನ್ನ ಎದುರಿಗೆ ಸುಳ್ಳು ಹೇಳಬೇಡ ಅಂದು ಟೀ.ಸಿಯನ್ನು ನನ್ನ ಕಡೆಗೆ ತಳ್ಳಿದರು. ನಾನು ಅದನ್ನು ಎತ್ತಿಕೊಂಡು ಕತ್ತು ಬಗ್ಗಿಸಿ ಹೊರಗೆ ಬಂದೆ. ಆಗಿನ್ನೂ ನಮಗೆ ಈ ಸ್ಸಾರಿ ಪದ ಪರಿಚಯವಾಗಿರಲಿಲ್ಲ. ಮುಂದೊಂದು ದಿನ ಈ ಸ್ಸಾರಿ ಎಂಬ ಪದ ಒಂದು ವಿಶೇಷ ಸಂದರ್ಭದಲ್ಲಿ ಇದೇ ವೆಂಕಟಪ್ಪನವರಿಂದಲೇ ಪರಿಚಯವೂ ಆಯಿತು!ಮಾರನೆಯ ದಿನ ಮಿಡ್ಲಿಸ್ಕೂಲಿಗೆ ಹೋಗಿ ಕೇಶವೇಗೌಡರನ್ನು ನೋಡಿದೆ. ಅವರು ಟೀ.ಸಿ. ನೋಡಿದವರೆ, ಯಕ್ಷಗಾನದ ದೈತ್ಯಕುಣಿತವನ್ನೇ ಪ್ರಾರಂಭಿಸಿದರು. ನಾನು ಏನೂ ಮಾತನಾಡದೆ ಪಿಳಪಿಳನೆ ಅವರನ್ನೇ ನೋಡುತ್ತಿದ್ದೆ. ಏನಯ್ಯ ಏನೋ ಒಳ್ಳೆ ಮಾರ್ಕ್ಸ್ ತೆಗೆದಿದ್ದೀಯಾ ಅಂದರೆ, ಫೋರ್ಜರಿ ಮಾಡೋಕು ಬರುತ್ತೆ ಅಂತ ತೋರಿಸ್ತಿದ್ದೀಯಾ ಅಂದರು. ಆಗ ನನಗೆ ಫರ್ಜರಿ ಪದದ ಅರ್ಥ ಗೊತ್ತಿರಲಿಲ್ಲ! ಮಾರ್ಕ್ಸ್ ತಿದ್ದಿದ್ದ ಕಡೆ ತೋರುತ್ತಾ ಇದನ್ನು ಯಾರು ತಿದ್ದಿದ್ದು, ಕತ್ತೆ ಭಡವಾ ಎಂದು ಅಬ್ಬರಿಸಿದರು. ನಾನು ನನ್ನ ಪ್ರೆಂಡು ಸಾರ್ ಎಂದೆ! ಯಾವನಲೆ ಅವನು ನಿನ್ನ ಪ್ರೆಂಡು. ನೆನ್ನೆಯಿನ್ನು ಸ್ಕೂಲಿಗೆ ಹೋಗಿದ್ದೀಯಾ ಅಷ್ಟು ಬೇಗ ಅದ್ಯಾವನಪ್ಪ ನಿನಗೆ ಫ್ರೆಂಡು ಆದವನು....... ನಮ್ಮ ಸ್ಕೂಲಿನಿಂದ ಹೋದವನೇ ಯಾವನೊ ಇರಬೇಕು. ಅವನ್ಯಾರು ಹೇಳು ಅಂದರು. ನಾನು ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಕಂಡು, ಸಾರ್. ಇದೊಂದು ಸಾರಿ ತಪ್ಪಾಗೋತು. ಇನ್ಯಾವತ್ತು ಹಿಂಗೆ ಮಾಡೋದಿಲ್ಲ ಸಾರ್. ಬೇರೆ ಟೀ.ಸಿ. ಕೊಡಿ ಸಾರ್ ಎಂದು ಅಂಗಲಾಚಿದೆ. ಆಗ ಕೇಶವೇಗೌಡರು ನಗುತ್ತಾ ಹಂಗೆ ಬಾ ದಾರಿಗೆ, ಭಡವಾ ಎಂದು ಇನ್ನಷ್ಟು ಹೊತ್ತು ಕಾಯಿಸಿ, ಮತ್ತಷ್ಟು ಬಯ್ದು, ಹೊಸ ಟೀ.ಸಿ. ಬರೆದುಕೊಟ್ಟರು. ಶ್ರೀ ವೆಂಕಟಪ್ಪ ಅವರು ಹೆಡ್ಮಾಸ್ಟರಾಗಿ ಕುಂದೂರುಮಠಕ್ಕೆ ಬರುವಷ್ಟರಲ್ಲಿ ಅಲ್ಲಿಯ ಹೈಸ್ಕೂಲ್ ಅಸ್ತಿತ್ವವನ್ನೇ ಕಳೆದುಕೊಳ್ಳುವುದರಲ್ಲಿತ್ತು. ಅವರು ಬಂದು ಎರಡೇ ವರ್ಷದಲ್ಲಿ ಫಲಿತಾಂಶವನ್ನು ಎರಡಂಕಿ ದಾಟಿಸಿದರು. ಅವರ ಈ ಶ್ರಮದಿಂದಾಗಿ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿದ್ದನ್ನು ಮೊದಲೇ ಹೇಳಿದ್ದೇನೆ. ಅವರು ಮೂಡನಹಳ್ಳಿಯಲ್ಲಿ ಒಂದು ಕೊಠಡಿ ಮಾಡಿಕೊಂಡು ವಾಸ್ತವ್ಯ ಹೂಡಿದ್ದರು. ಅವರ ಸಂಸಾರ ಹಾಸನದಲ್ಲೋ ಸಕಲೇಶಪುರದಲ್ಲೋ ಇತ್ತೆಂದು ಮಾತನಾಡುವುದನ್ನು ಕೇಳಿದ್ದೆ. ದಿನವೂ ಕುಂದೂರು ಮಠಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಾವು ಮಿಡ್ಲಿಸ್ಕೂಲಿಗೆ ಅದೇ ದಾರಿಯಲ್ಲಿ ಹೋಗಿಬರುತ್ತಿದ್ದುದರಿಂದ ನಮಗೂ ಅವರ ಪರಿಚಯ ಅಲ್ಪಸ್ವಲ್ಪ ಆಗಿತ್ತು. ಸಂಜೆ ಹೊತ್ತು ವಾಪಸ್ಸು ಮೂಡನಹಳ್ಳಿಗೆ ಬರುವಾಗ ಮಾತ್ರ ಅವರು ವಿರಾಮವಾಗಿ ವಾಕಿಂಗ್ ಮಾಡಿಕೊಂಡು, ಅಲ್ಲಿಲ್ಲಿ  ನಿಂತು ಕೈಕಾಲು ಆಡಿಸಿಕೊಂಡು ವ್ಯಾಯಾಮ ಮಾಡಿಕೊಂಡು ಬರುತ್ತಿದ್ದರು. ನಾನು ಎಂಟನೇ ತರಗತಿಗೆ ಸೇರುವ ಮೊದಲೇ ಅವರು ತುಂಬಾ ಸ್ಟ್ರಿಕ್ಟ್ ಎಂದು ಹೆಸರುವಾಸಿಯಾಗಿದ್ದರು. ತರಗತಿಯೊಳಗೆ ಮೇಷ್ಟ್ರುಗಳು ಸರಿಯಾಗಿ ಪಾಠ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಹೊರಗೆ ನಿಂತು ಕೇಳಿಸಿಕೊಳ್ಳುತ್ತಿದ್ದರು. ಮೇಷ್ಟ್ರುಗಳನ್ನು ಪ್ರತ್ಯೇಕವಾಗಿ ಕರೆದು ಬಯ್ಯುತ್ತಿದ್ದರು ಎಂದು ಆಗಾಗ ಹುಡುಗರು ಮಾತನಾಡಿಕೊಳ್ಳುತ್ತಿದ್ದರು. ನಾನು ಆ ಸ್ಕೂಲಿಗೆ ಸೇರಿಕೊಂಡಾಗಲೂ ಸ್ವಂತದ್ದು ಎಂಬ ಕಟ್ಟಡ ಇರಲಿಲ್ಲ. ಮಠಕ್ಕೆ ಸೇರಿದ ಮೂರು ಹೆಂಚಿನ ಮನೆಗಳಲ್ಲಿ ಸ್ಕೂಲ್ ಮತ್ತು ಹಾಸ್ಟೆಲ್ ಎರಡೂ ನಡೆಯಬೇಕಾಗಿತ್ತು. ಒಂದು ಮನೆಯ ಹಾಲ್ನಲ್ಲಿ ಹಾಸ್ಟೆಲ್ ಮತ್ತು ಹಿಂಬದಿಯ ಪಡಸಾಲೆಯಲ್ಲಿ ಅಡುಗೆ ಮನೆಯಿತ್ತು. ಅದರಲ್ಲಿ ಬರೋಬ್ಬರಿ ಐವತ್ತು ಜನ ವಿದ್ಯಾರ್ಥಿಗಳಿದ್ದರು! ಅದೇ ಕಟ್ಟಡದ ತೆರೆದ ಜಗುಲಿಯಲ್ಲಿ ಒಂಬತ್ತನೇ ತರಗತಿಗೆ ಪಾಠ ಪ್ರವಚನಗಳು ನಡೆಯುತ್ತಿದ್ದವು. ಹತ್ತನೇ ತರಗತಿ ನಡೆಯುತ್ತಿದ್ದ ಮನೆಯಲ್ಲಿಯೂ ಹಿಂಬದಿಯಲ್ಲಿ ಮಠದ ಕಂಟ್ರಾಕ್ಟರ್ ಅವರ ಆಳುಗಳ ಒಂದು ಸಂಸಾರವಿತ್ತು. ಇನ್ನುಳಿದ ಒಂದು ಮನೆಯ ಪಡಸಾಲೆಯೇ ಆಫೀಸ್ ರೂಂ ಮತ್ತು ಸ್ಟಾಫ್ ರೂಮಾಗಿತ್ತು. ಅದೇ ಮನೆಯ ಹಾಲ್ನಲ್ಲಿ ಎಂಟನೇ ತರಗತಿಯ ಪಾಠಪ್ರವಚನಗಳು ನಡೆಯಬೇಕಾಗಿತ್ತು.

ಮುಂದುವರೆಯುವುದು.... 

 

 

 ಬೆಂಗಳೂರು-04

09964590246

satya_nbr@yahoo.com

Syndicate

Syndicate content