ಗೋಪೀನಾಥ ರಾವ್
ರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆ ನನ್ನ ಮೇಲೆ ಬಿದ್ದಿತ್ತು. "ಹತ್ತು ಮಂದಿಯನ್ನು ಸೇರಿಸಿ ನಾಟಕ ಮಾಡಿ" ಅಂತ ಪುಕ್ಕಟೆ ಸಲಹೆಯೂ ಸಿಕ್ಕಿತ್ತು.'ಲೋ ಅದೆಲ್ಲಾ ಹೇಳಲು ಸುಲಭ, ವಹಿಸಿಕೊಂಡಿಯೋ, ಮತ್ತೆ ಗೊತ್ತಾಗುತ್ತೆ- ನಾಟಕ ಮುಗಿಯುವಷ್ಟರಲ್ಲಿ ಬಿ ಪಿ ಸುಗರ್ರು ಕಿಡ್ನಿ ಅಂತ ಬೇಡದ್ದೆಲ್ಲಾ ಆರಂಭವಾಗಿರುತ್ತೆ. ಬಜೆಟ್ಟಿದೆಯಲ್ಲ, ತೆಪ್ಪಗೆ ರಂಗಣ್ಣನ ಕರೆದು ಕಾಂಟ್ರಾಕ್ಟ್ ಕೊಟ್ಟು ಬಿಡು" ಅಂದ ನನ್ನ ಸ್ನೇಹಿತ ರಾಜು. ಎಲ್ಲವನ್ನೂ ಕಾಂಟ್ರಾಕ್ಟ್ ಕೊಡುವ ಈ ಕಾಲದಲ್ಲಿ ನಾಟಕ ಆಡಲು ಗೊತ್ತಿಲ್ಲದವರನ್ನೆಲ್ಲ ಒಟ್ಟು ಹಾಕಿ ನನ್ನ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ ಅಂತಲೇ ನಿರ್ಧರಿಸಿದೆ.
"ರಂಗಣ್ಣನ ನಂಬ್ರ ಇದೆಯಾ ನಿನ್ನಲ್ಲಿ?" ಅಂದೆ.
ರಾಜು ನಂಬ್ರ ಕೊಟ್ಟ. ಅವನೆದುರಲ್ಲೇ ಡಯಲ್ ಮಾಡಿದೆ.
"ನಮಸ್ಕಾರ ರಂಗಣ್ಣ ನಾನು ರಾವ್ ದುಬಾಯಿಂದ" ಅಂದೆ
"ಹೋ ಹೋ ಹೋ... ಹೇಗಿದ್ದೀ?.. ಏನು ಅಪರೂಪ.. ಆಚೆ ಹೋದೋವನ ಪತ್ತೆ ಇಲ್ಲ ಈಗೇನು ನೆನಪಾಯಿತು?" ಎಂದ ಆತ.
"ನಾವೆಲ್ಲ ಆರಾಮ ಕಣೋ ನೀವೆಲ್ಲ ಹೇಗಿದ್ದೀರಿ" ಅಂದೆ ನಾನು.
"ನಮ್ಮದೇನು ಬಂತು ಹೇಳು. ಯಾರಾದ್ರೂ ಕರೆದು ಮೂರು ಕಾಸು ಕೊಟ್ಟರೆ ಬಣ್ಣ ಹಾಕೋದು ಇಲ್ಲಾಂದ್ರೆ ಅಂಗಡಿ ವ್ಯಾಪಾರ. ದಿನ ಹೋಗುತ್ತಾ ಇದೆ"
"ರಾಜು ಕೂಡ ಇಲ್ಲಿದ್ದಾನೆ. ನಾಳದು ರಾಜ್ಯೋತ್ಸವಕ್ಕೆ ನಾಟಕ ಬೇಕಾಗಿತ್ತು ಆಗ ನಿನ್ನ ನೆನಪಾಯಿತು. ನಿನ್ನನ್ನು ದುಬಾಯಿಗೆ ಕರೆಸುವ ಅಂತ" ಬೆಣ್ನೆ ಹಚ್ಚಿದೆ ನಾನು.
"ತಮಾಶೆ ಮಾಡ್ತ ಇದ್ದೀರೋ ಹೇಗೆ? ನಿನ್ನನ್ನಾದರೂ ನಂಬಿಯೇನು... ರಾಜುವನ್ನಲ್ಲ... ಕೊಡು ಕೊಡೂ ರಾಜುವಿಗೆ" ಅಂದ
ರಾಜು ಸ್ಪೀಕರಿನಲ್ಲಿ ಹಾಕಿ "ಹಲೋ ರಂಗಣ್ಣ ನಿಮಗೆ ದುಬೈಗೆ ಬರುವ ಚಾನ್ಸು ಮಾಡಿದ್ದೇವೆ ಇನ್ನು ಒಪ್ಪಿಕೊಳ್ಳೋದು ಬಿಟ್ಟದ್ದು ನಿಮಗೆ ಬಿಟ್ಟದ್ದು" ಅಂದ.
"ಲೇ ನೀವು ಕರೆದ ಮೇಲೆ ಬರೋದೆ. ಹೇಳಿ ಯಾವಾಗ ಬರಲಿ?"
"ಅದೆಲ್ಲ ಮತ್ತೆ ಪ್ಲಾನ್ ಮಾಡೋಣ. ನಾಟಕ ಯಾವುದೆಲ್ಲ ರೆಡಿ ಇದೆ ಹೇಳಿ"
"ನಾಟಕ - ಪೌರಾಣಿಕದಲ್ಲಿ ಕೀಚಕ ವಧೆ, ದ್ರೌಪದಿ ವಸ್ತ್ರಾಪಹಾರ, ಐತಿಹಾಸಿಕದಲ್ಲಿ ಟಿಪ್ಪು ಸುಲ್ತಾನ, ಸಾಮಾಜಿಕದಲ್ಲಿ ಲಂಚಕಾರಣ. ಯಾವುದು ಬೇಕು ಅಂತ ಒಂದು ವಾರ ಮುಂಚೆ ಹೇಳಬೇಕು"
"ಸರಿ.. ಸರಿ. ರೇಟು ಎಷ್ಟು?"
"ನಿಮ್ಮಲ್ಲಿ ರೇಟು ಏನು ಬಂತು? ಕೊಡಿ... ನಿಮಗೆ ಮನಸ್ಸು ಬಂದದ್ದು ಕೊಡಿ"
"ಹಾಗಲ್ಲ. ಇದು ನಾವಾಡಿಸುವುದಲ್ಲ. ಕಮಿಟಿ ಇದೆ. ರೇಟು ಮೊದಲೇ ಹೇಳಬೇಕು"
"ಹಾಗೋ? ಬರ್ಕೋ, ಕೀಚಕ ವಧೆಗೆ ಐವತ್ತು ಸಾವಿರ"
"ಐವತ್ತು ಸಾವಿರ? ವಧೆಗೆ ಸುಪಾರಿ ರೇಟು ಹೇಳುತ್ತಿದ್ದೀರಲ್ಲ? ಕೊಲ್ಲಲೇ ಬೇಕಿಲ್ಲ, ನೆಲಕ್ಕೆ ಬೀಳಿಸಿದರೆ ಸಾಕು, ಪರದೆ ಎಳೆಯುತ್ತೇವೆ ನಾವು"
"ರಾಜು, ಅದು ನಮ್ಮ ಮಿನಿಮಮ್. ವಸ್ತ್ರಾಪಹಾರಕ್ಕಾದರೆ ಎರಡು ರೇಟಿದೆ."
"ಅದು ಹೇಗೆ?"
"ದ್ರೌಪದಿ ಪಾತ್ರಕ್ಕೆ ನಮ್ಮ ಹುಡುಗ ಆದ್ರೆ ಅರುವತ್ತು ಸಾವಿರ. ರಿಂಕಿ ಎಂಬ ಕನ್ನಡ ಸಿನೆಮಾ ನಟಿ ಮಾಡಬೇಕಿದ್ದರೆ ಒಂದು ಲಕ್ಷ ಎಕ್ಸ್ಟ್ರಾ"
"ಅದು ಜಾಸ್ತಿಯಾಯಿತು"
"ರಿಂಕಿ ಐವತ್ತು ಸಾವಿರ ಕೇಳುತ್ತಾಳೆ. ಇನ್ನೊಂದು ಕಂಡಿಶನ್ ಇದೆ ಲಕ್ಷ್ಮಿ ಸಿಲ್ಕ್ ಸಾರಿ ಅಂಗಡಿಯವರ ಹತ್ತು ಸಾರಿ ಬೇಕು ಆಮೇಲೆ ಎಲ್ಲ ಸಾರಿ ಆಕೆ ಹೊತ್ತುಕೊಂಡು ಹೋಗುತ್ತಾಳೆ. ಅವರಿಗೊಂದು ಹತ್ತು ಹದಿನೈದು ಸಾವಿರ ಕೊಡಬೇಕು. ಆಅರೆ ನಿಮಗಿದರಲ್ಲಿ ಎರಡು ಜಬರ್ದಸ್ತ್ ಲಾಭ ಇದೆ. ನಾಟಕ ಸೂಪರ್ ಸಕ್ಸೆಸ್. ನಮ್ಮ ದುಶಾಸನ ಪಾತ್ರಧಾರಿ ಕೊನೆಯ ಸೀರೆ ಯ ವರೆಗೂ ಎಲ್ಲ ಎಳೆದು ಹಾಕುತ್ತಾನೆ ಮತ್ತೆ ರಿಂಕಿ ದ್ರೌಪದಿ ಆದರೆ ಆತ ಫೀಸು ಕೂಡ ತೆಗೆದುಕೊಳ್ಳುವುದಿಲ್ಲ.. ಜನ ಹುಚ್ಚೆದ್ದು ಸಿಳ್ಳು ಹಾಕುತ್ತಾರೆ ನೋಡುತ್ತಾ ಇರು.."
"ಹಾಗೆ ಪಬ್ಲಿಕ್ ನಲ್ಲಿ ಸಾರಿ ಎಳೆಯುವುದಕ್ಕೆ ಎಲ್ಲ ಇಲ್ಲಿ ಅನುಮತಿ ಇಲ್ಲ ಅದು ಬೇಡ"
"ಟಿಪ್ಪು ಆಗಬಹುದಾ? ಸೆಟ್ಟಿಂಗು ಖರ್ಚು ಜಾಸ್ತಿ. ಒಂದು ಲಕ್ಷ ಇಪ್ಪತ್ತು ಸಾವರ ಆಗಬಹುದು"
"ಅದು ಜಾಸ್ತಿಯಾಯಿತು. ಲಂಚಕಾರಣಕ್ಕೆ ಎಷ್ಟು?"
"ಲಂಚ ಕಾರಣಕ್ಕೆ ಖರ್ಚು ಕಡಿಮೆ. ಇಪ್ಪತ್ತೈದು ಸಾವಿರ ನಮ್ಮ ರೇಟು. ನಮ್ಮದೇ ಹುಡುಗ ರಾಜಕಾರಿಣಿ ಪಾರ್ಟು ಮಾಡೋದಾದ್ರೆ ಅಷ್ಟೇ ಖರ್ಚು. ಬೇಕಿದ್ರೆ ನಮ್ಮ ಎಮ್ಮೆಲ್ಲೆ ಅತಿಥಿ ಕಲಾವಿದ ಅಂತ ಬರುತ್ತಾರೆ. ನಾಟಕ ಹವ್ಯಾಸ ಅವರದ್ದು. ಖರ್ಚು ಸ್ವಲ್ಪ ಜಾಸ್ತಿಯಾಗುತ್ತೆ... ಒಳ್ಳೇ ಕಲಾವಿದ ಆತ"
"ಜಾಸ್ತಿ ಅಂದರೆ ಎಷ್ಟು?"
"ಇಪ್ಪತ್ತು ಸಾವಿರ.. ಇಪ್ಪತ್ತೈದು ಸಾವಿರ"
"ಹವ್ಯಾಸಿ ಕಲಾವಿದ ಅಂತೀರಿ, ಎಮ್ಮೆಲ್ಲೆ ಅಂತೀರಿ. ಮತ್ತೆ ಇಪ್ಪತ್ತು ಸಾವಿರ ಯಾಕೆ?"
"ನಾಟಕದಲ್ಲಿ ಎರಡು ಸೂಟ್ ಕೇಸ್ ಸೀನ್ ಇದೆ. ನಮ್ಮ ಎಮ್ಮೆಲ್ಲೆ ಅಭ್ಯಾಸ ಬಲ. ಸೂಟ್ ಕೇಸಿನಲ್ಲಿ ಹಣ ನೋಡಿದ್ರೆ ಕೂಡಲೇ ತೆಗೆದು ಪಿ ಎ ಕೈಯಲ್ಲಿ ಕೊಡ್ತಾರೆ. ಮತ್ತೆ ನಾಟಕದ ನಂತರ ಅದನ್ನು ಹಿಂದೆ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ"









