- ಅಬ್ದುಲ್ ಹಮೀದ್ ಪಕ್ಕಲಡ್ಕ
(ಪಾದದಡಿಯ ಸ್ವರ್ಗ ಕಥಾಸಂಕಲನದಿಂದ ಆಯ್ದ ಕಥೆ)
ತಂದೆ ಬೆಂಗಳೂರಿಗೆ ಹೊರಡು ಎಂದಾಕ್ಷಣ ತಿಲಕ ತುದಿಗಾಲಿನಲ್ಲಿ ನಿಂತ. ಸದಾ ಚೂಟಿಯಾಗಿರುತ್ತಿದ್ದವನಿಗೆ ತಿರುಗಾಟ ಎಂದರೆ ಪಂಚಪ್ರಾಣ. ಮನೆಯಲ್ಲಿದ್ದಿದ್ದರೆ ಏನಾದರೂ ಮಂಗಚೇಷ್ಟೆ ಮಾಡಿಕೊಂಡು ಎಲ್ಲರ ನೆಮ್ಮದಿ ಕೆಡಿಸುತ್ತಿದ್ದ. ಫೂಲ್ ಮಾಡುವುದೆಂದರೆ ಅವನಿಗಿಷ್ಟ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಹಲವು ಜನರನ್ನು ಫೂಲ್ ಮಾಡಿದ್ದ, ಅದು ಪರಾಕಾಷ್ಠೆಗೂ ಮುಟ್ಟಿತ್ತು.
’ಲೇ ಪೋರಿ, ನನ್ನ ಡ್ರೆಸ್ಸಿಗೆ ಇಸ್ತ್ರಿ ಹಾಕು, ಮತ್ತೆ ನಿನಗೆ ಏನು ತರಲಿ ಹೇಳು’
’ಏನೋ ಮಸ್ಕಾ ಹೊಡೆಯುತ್ತಿದ್ದೀಯಲ್ಲಾ, ಏನು ಬೇಕು ನಿನಗೆ? ಏನು ಹೇಳು’
ತಂಗಿಯ ಕಿವಿ ಹಿಂಡಿ ದೂರ ಎಳೆದುಕೊಂಡು ಹೋದ ತಿಲಕ
ನೋಡು ರಶ್ಮಿ, ನಾನಿವತ್ತು ರಾತ್ರಿ ಬೆಂಗಳೂರಿಗೆ ಅಕ್ಕನ ಮನೆಗೆ ಹೋಗುವುದು ಗೊತ್ತು ತಾನೆ? ಬಸ್ಸಿನಲ್ಲಿ ತುಂಬಾ ಬೋರಾಗುತ್ತದೆ. ಅದಕ್ಕಾಗಿ ಒಂದು ಮೋಜು ಮಾಡುತ್ತೇನೆ. ನಾನು ಅಂಧನ ನಟನೆ ಮಾಡುತ್ತೇನೆ. ನಮ್ಮ ಕಾರಿಂದ ಇಳಿಸಿ ಬಸ್ಸಿನ ಸೀಟಿನಲ್ಲಿ ಕುಳ್ಳರಿಸಿದರೆ ಸಾಕು. ಹುಟ್ಟು ಕುರುಡ ಎಂದರೆ ಜೀವನ ಹೇಗಿರುತ್ತೆ! ಜನ ಹೇಗೆ ಸ್ಪಂದಿಸುತ್ತಾರೆ ನೋಡಬೇಕು, ನನ್ನೊಂದಿಗೆ ಸಹಕರಿಸಿದರೆ ಬರುವಾಗ ನಿನಗೊಂದು ಸೆಲ್ವಾರ್ ಕಮೀಜ್ ತರುತ್ತೇನೆ, ಸರಿಯಾ?’
’ಸರಿ’
ರಾತ್ರಿ ಹತ್ತು ಘಂಟೆಗೆ ಕಾರು ಬೆಂಗಳೂರಿಗೆ ಹೊರಡುವ ಬಸ್ಸಿನ ಬಳಿ ಬಂದು ನಿಂತಿತು. ರಶ್ಮಿ ಕಾರಿನಿಂದಿಳಿದು ಹಿಂಬದಿಯ ಬಾಗಿಲು ತೆರೆದಳು. ತಿಲಕನ ಕಣ್ಣಲ್ಲಿ ದಪ್ಪ ಕಪ್ಪು ಕನ್ನಡಕ, ಬಲಗೈಯಲ್ಲಿ ತಂದೆಯ ವಾಕಿಂಗ್ ಸ್ಟಿಕ್ ಇತ್ತು. ತಿಲಕನನ್ನು ಬಸ್ಸಿಗೆ ಹತ್ತಿಸಿ ಸೀಟ್ ನಂಬರ್ ೧೦ ರಲ್ಲಿ ಕೂರಿಸಿ ಕಿವಿಯಲ್ಲಿ ಏನೋ ಹೇಳಿ ಬಸ್ಸಿನಿಂದಿಳಿದು ಕಾರು ಚಲಾಯಿಸಿಕೊಂಡು ಹಿಂತಿರುಗಿದಳು. ಈಗ ಎಲ್ಲರ ಗಮನ ತಿಲಕನ ಕಡೆಗಿತ್ತು. ಕೆಲವರು ಬಸ್ ಹತ್ತಲು ಸಹಕರಿಸಿದರೆ ಕೆಲವರು ’ ಅಯ್ಯೋ ಪಾಪ ಒಳ್ಳೆ ಹೀರೋ ತರಹ ಸುಂದರನಿದ್ದಾನೆ, ದೈವಲೀಲೆಯೇ ಹಾಗೆ’ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಒಂದಿಷ್ಟು ಅನುಕಂಪ ತೋರಿದರು. ಬಸ್ ಹೊರಡಲು ಕೆಲವೇ ಕ್ಷಣ, ಯಾರೋ ತನ್ನ ಕಾಲನ್ನು ತುಳಿದ ಹಾಗಾಯಿತು.
"ಕ್ಷಮಿಸಿ, ನನ್ನದು ಸೀಟ್ ನಂಬರ್ ೯, ಕಿಟಕಿ ಬದಿ, ದಯವಿಟ್ಟು ತಾವು ಈಚೆಗೆ ಬನ್ನಿ’
ತರುಣಿಯ ಸ್ವರ ಕೇಳಿ ತಿಲಕ ತನ್ನ ಎರಡೂ ಕೈಯನ್ನು ಮುಂದಕ್ಕೆ ಚಾಚಿ ಸೀಟಿಗಾಗಿ ಪರದಾಡಿದ. ಆಗ ಅವನ ಊರುಗೋಲು ಕೆಳಕ್ಕೆ ಬಿತ್ತು. ಅದನ್ನು ಹುಡುಕಾಡುವ ನೆವದಲ್ಲಿ ತೊಡೆಯ ಮೇಲಿದ್ದ ಬ್ಯಾಗ್ ಕೂಡಾ ಕೆಳಕ್ಕೆ ಬಿತ್ತು. ಪುನಃ ಪರದಾಡುವ ನಾಟಕ. ಈ ಪರದಾಟದಲ್ಲಿ ಅವನ ಕೈ ಅವಳ ಬೆನ್ನಿಗೆ ತಾಗಿತು.
’ಕ್ಷಮಿಸಿ, ಸ್ವಲ್ಪ ಸಹಕರಿಸಿ, ನಾನು ಕುರುಡ”
ತರುಣಿ ಆತನ ಕೈ ಹಿಡಿದು ಈಚೆಗಿನ ಸೀಟಿನಲ್ಲಿ ಕೂರಿಸಿ ಆತನ ಊರುಗೋಲು, ಕೈಚೀಲ ಹೆಕ್ಕಿ ಕೊಟ್ಟಳು. ತಿಲಕನ ಮೈಯಲ್ಲಿ ವಿದ್ಯುತ್ ಸಂಚಾರವಾಯಿತು.
’ಧನ್ಯವಾದಗಳು’
’ಪರವಾಗಿಲ್ಲ, ಅಂದ ಹಾಗೆ ನೀವೊಬ್ಬರೇ ರಾತ್ರಿ ಪ್ರಯಾಣ ಮಾಡುತ್ತಿದ್ದೀರಲ್ಲಾ, ಯಾರೂ ಸಂಬಂಧಿಕರಿಲ್ಲವೇ?’
"ಈ ಬಸ್ಸೇ ನನ್ನ ಮನೆ, ನೀವೆಲ್ಲಾ ನನ್ನ ಸಂಬಂಧಿಗಳು’
’ಬಹಳ ಚೆನ್ನಾಗಿ ಮಾತನಾಡುತ್ತೀರಿ, ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮ್ಮ ಎಷ್ಟೋ ದುಃಖಗಳು ಕಡಿಮೆಯಾಗುತ್ತವೆ ಅಲ್ಲವೇ?’
’ ಸಮಸ್ಯೆಗಳನ್ನು ಯಾಕೆ ಗಂಭೀರವಾಗಿ ಪರಿಗಣಿಸಬೇಕು? ನಾವು ಬರುವಾಗ ಏನೂ ತಂದಿಲ್ಲ. ಹೋಗುವಾಗ ಏನನ್ನೂ ಕೊಂಡುಹೋಗುವುದಿಲ್ಲ. ಆದುದರಿಂದ ಕಳಕೊಳ್ಳುವುದಾಗಲೀ ಅಥವಾ ಭರಿಸುವುದಾಗಲೀ ಏನೂ ಇಲ್ಲ. ಸಂಬಂಧಗಳು ನಾವು ಮಾಡಿಕೊಂಡ ತಾತ್ಕಾಲಿಕ ವ್ಯವಸ್ಥೆ ಅಷ್ಟೇ’
’ಇಷ್ಟು ಚಿಕ್ಕ ವಯಸ್ಸಿನಲ್ಲಿ ತುಂಬಾ ತಿಳಿದುಕೊಂಡಿದ್ದೀರಿ’
’ಹುಟ್ಟು ಕುರುಡುತನದಿಂದ ಗಳಿಸಿದ ಪಾಠ ಇದು’
ಪುನಃ ಸ್ವಲ್ಪ ಹೊತ್ತು ಮೌನ. ಬಸ್ಸು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿತ್ತು. ಕಂಡಕ್ಟರ್ ಬಸ್ಸಿನ ಲೈಟು ಆರಿಸಿದ. ’ಸ್ವಲ್ಪ ನನ್ನ ಸೀಟನ್ನು ಹಿಂದಕ್ಕೆ ತಳ್ಳುತ್ತೀರಾ, ನಾನು ಮಲಗಬೇಕು’
ತರುಣಿ ಅವನ ಸೀಟನ್ನು ಹಿಂದಕ್ಕೆ ಒರಗಿಸಿಕೊಟ್ಟಳು. ಅವಳ ಜಡೆ ಅವನ ಮೂಗಿಗೆ ತಾಗಿತ್ತು. ಮಲ್ಲಿಗೆಯ ಕಂಪದೊಂದಿಗೆ ವಿದೇಶೀ ಸೆಂಟಿನ ಘಮಘಮ ಪರಿಮಳ. ತನ್ನ ಚೇಷ್ಟೆಯ ಬಗ್ಗೆ ನಾಳೆ ಅಕ್ಕನಿಗೆ ಹೇಳಿ ಹೇಗೆ ಮಜಾ ಉಡಾಯಿಸಬೇಕೆಂದು ಮನದಲ್ಲಿಯೇ ನೆನೆಸಿ ನಕ್ಕ ತಿಲಕ. ತಂಪಾದ ಗಾಳಿ ಕಿಟಕಿಯಿಂದ ಬೀಸುತ್ತಿತ್ತು. ತಿಲಕನಿಗೆ ಗಾಢ ನಿದ್ದೆ ಆವರಿಸಿತು.
ಎಚ್ಚರವಾದಾಗ ಬಸ್ ಮೆಜೆಸ್ಟಿಕ್ ಸರ್ಕಲ್ ಹತ್ತಿರ ಬಂದು ನಿಂತಿತ್ತು. ತಂದೆ ಅಕ್ಕನಿಗೆ ಕೊಡಲು ನೀಡಿದ್ದ ನೂರು ಗ್ರಾಮಿನ ನೆಕ್ಲೇಸ್, ಖರ್ಚಿಗೆ ನೀಡಿದ್ದ ಹತ್ತು ಸಾವಿರ ರೂಪಾಯಿ ನಗದು ಇರಿಸಿದ್ದ ಬ್ಯಾಗ್ ನೆನಪಾಗಿ ತನ್ನ ಬ್ಯಾಗನ್ನು ತಡಕಾಡಿದ. ಬ್ಯಾಗ್ ಸಿಗಲಿಲ್ಲ. ಪಕ್ಕದಲ್ಲಿದ್ದ ಸೀಟಿನತ್ತ ಕಣ್ಣಾಡಿಸಿದ. ತರುಣಿ ನಾಪತ್ತೆಯಾಗಿದ್ದಳು. ಆದರೆ ಅವಳು ಬಿಟ್ಟು ಹೋದ ವಿದೇಶಿ ಕಂಪು ಮಲ್ಲಿಗೆ ಸುವಾಸನೆ ಮಾತ್ರ ಬಸ್ಸನ್ನು ಆವರಿಸಿತ್ತು.









