-ಶ್ರೀನಾಥ್ ಭಲ್ಲೆ
ಹೊತ್ತಿ ಉರಿದಿಹೆ ನೋಡ ಎದೆಯಾಳದ ಬೆಂಕಿ
ನೆರೆಹೊರೆಯರಲ್ಲಿ ಭಿನ್ನಮತದ ವಿಷ್ಯ
ಕಾದಾಡಲು ಸಿದ್ದವಿದೆ ಜಾರ್ಜಿಯಾ-ರಷ್ಯಾ
ಕಾಶ್ಮೀರಕ್ಕಾಗಿ ಕಲಹ ಭಾರತ-ಪಾಕೀಸ್ತಾನದ ನಡುವೆ
ಜೆರುಸೇಲಮ್’ಗಾಗಿ ಜಗಳ ಇಸ್ರೇಲ್-ಪ್ಯಾಲೆಸ್ಟೈನ್ ನಡುವೆ
ಸ್ಥಳವೊಂದೇ ಹೆಸರೆರಡು ಟಕಶಿಮ-ಡೋಕ್ಡೊ ದ್ವೀಪವದು
ಹೊಡೆದಾಡುತಿದೆ ಜಪಾನ್-ದಕ್ಷಿಣಕೊರಿಯ ನಮದು ತಮದೆಂದು
ಚೈನಾದ ದೌರ್ಜನ್ಯದ ದಾಳಿಗೆ ನಡುಗಿಹುದು ಟಿಬೆಟ್ಟು
ಭಿಕ್ಷುಗಳು ಗೋಳಿಡುತಿಹರು ದಾರಿಗಾಣದೆ ಕಂಗೆಟ್ಟು
ಸದ್ದಾಮನ ಸದ್ದಡಗಿಸಿ ಒಸಾಮನ ನೆಲಗುಡಿಸಿ
ಇಳಿಯುತಿಹನು ತಾನು ರಾಷ್ಟ್ರದ ಹಿರಿಮೆಯ ಕಿರಿದಾಗಿಸಿ
ಕ್ಯಾಸ್ಟ್ರೋ ಎಂಬ ರಕ್ಕಸನಿಂದ ದೊರಕಿತು ಕ್ಯೂಬಾಗೆ ಮುಕುತಿ
ಮುಗಾಬೆಯಿಂದ ದೊರಕುವುದೆಂದೋ ಜಿಂಬಾಬ್ವೆಗೆ ಮುಕುತಿ
ಇರಾಕ್ ಹೊತ್ತುರಿಯುತಿರೆ ಹಿಂದೆಯೇ ಸಿದ್ದವಿದೆ ಇರಾನ
ಇಸ್ರೈಲ್ ವಿರುದ್ದ ಹೋರಾಡಲು ಗುರಿಯಿಡುತ ತನ್ನ missileನ
ನೆಡೆದಿಹುದು ಎರಡು ಬಾರಿ ಆಫ಼್ರಿಕದ ಕಾಂಗೋ ಯುದ್ದ
ಲಕ್ಷಾಂತರ ಜನರನ್ನು ಕಬಳಿಸಿದ ಒಳಜಗಳದ ಮಹಾಯುದ್ದ
ಉತ್ತರ ಕೊರಿಯಾ ನಿಲ್ಲಿಸಲಿಲ್ಲ ಅಣ್ವಸ್ತ್ರದ ತಯಾರಿಕೆ
ಹಾಕುತ್ತಿದ್ದರೂ ರಾಷ್ಟ್ರಗಳಾರು ನಿಶಸ್ತ್ರೀಕರಣದ ಬೆದರಿಕೆ
ದಿನ ನಿತ್ಯ ಆಫ಼್ಘಾನೀಸ್ತಾನದಿ ತಾಲೀಬಾನ್ ಹಿಂಸಾಚಾರ
ಹತ್ತಿಕ್ಕಲು ಅತ್ಯಾಚಾರ ಆಸ್ಟ್ರೇಲಿಯಾ ನೀಡಿದೆ ಸಹಕಾರ
ಹರಡಿಹುದು ಎಲ್ಲೆಡೆ ರೋಷ ದ್ವೇಷಗಳ ಜ್ವಾಲೆ
ಕೊನೆಗಾಣುವುದೆಂದೋ ಹತ್ಯಾಕಾಂಡದ ಮಾಲೆ
ನೊಂದು ಬೆಂದು ಬಳಲುತ್ತಿರುವ ಜೀವಗಳಿಗಿಲ್ಲ ಜಾತಿ
ಲೋಕರಕ್ಷಕನಾಗಿ ಅವತರಿಸಿ ಬಂದು ನೀ ನೀಡು ಶಾಂತಿ
ಕಾರ್ಮೋಡಗಳಾ ನಡುವಿನ ಬೆಳಕು ನೀನಾಗಿ ಬಾ
ಕೃಷ್ಣನೋ,ಕ್ರಿಸ್ತನೋ,ಅಲ್ಲನೋ ಆಗಿ ನೀನವತರಿಸಿ ಬಾ
ಎಲ್ಲ ಬಲ್ಲವ ನೀನು, ಬಲ್ಲವರಾರೋ ನಿನ್ನಿಚ್ಚೆ
ದಿನವೊಂದಾದರೂ ನೆಮ್ಮದಿಯಿಂದ ಕಳೆಯಬೇಕೆಂಬುದೇ ನನ್ನಿಚ್ಚೆ









ಕಳಕಳಿಭರಿತ
ಕಳಕಳಿಭರಿತ ಕವನ ಜಗತ್ತಿನಲ್ಲಿ ಎಲ್ಲೆಡೆ ನಡೆಯುತ್ತಿರುವ ಅಮಾನವೀಯ ವಿದ್ಯಮಾನಗಳನ್ನು ತಿಳಿಸುವುದರೊ೦ದಿಗೆ, ಈ ಒಳಜಗಳಗಳ ಪರಿಹಾರಕ್ಕಾಗಿ ಮೊರೆಯಿಡುತ್ತಿರುವ ಮನಗಳ ಅಸಹಾಯಕತೆಯನ್ನು ತೆರೆದಿಟ್ಟಿದೆ. ಶಾ೦ತಿದೂತ ಅವತಾರ ಪುರುಷನ ಆಗಮನಕ್ಕಾಗಿ ಕಾಯುತ್ತಿರುವ ಸಜ್ಜನರ ಕನಸು ನನಸಾಗಿ, ಸೌಹಾರ್ದ ನೆಲಸಲಿ ಎನ್ನುವುದೇ ನನ್ನ ಹಾರೈಕೆ.
ಮೃಣಾಲಿನಿ ಉದಯ ಕುಮಾರ್