-ಅಬ್ದುಲ್ ಹಮೀದ್ ಪಕ್ಕಲಡ್ಕ
(ಈ ಕಥೆಯನ್ನು ಅವರ ಇತ್ತೀಚಿನ ’ಪಾದದಡಿಯ ಸ್ವರ್ಗ’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ).
ಕೆಲವರಿದ್ದಾರೆ, ಎಲ್ಲಾ ಇದ್ದೂ ಏನೂ ಇಲ್ಲವೆಂದು ಅಳುತ್ತಾರೆ. ಇವರು ಅತೃಪ್ತರು. ಇನ್ನೂ ಕೆಲವರಿದ್ದಾರೆ, ಏನೂ ಇಲ್ಲದಿದ್ದರೂ ಎಲ್ಲ ಇದೆ ಎಂದು ಇದ್ದುದರಲ್ಲಿ ಸಂತೃಪ್ತಿ ಪಡುತ್ತಾರೆ. ನನ್ನ ಬದುಕು ಈ ಎರೆಡೂ ವರ್ಗಗಳಿಗೆ ಸೇರಿಲ್ಲ. ಆದರೂ ನನ್ನದು ಸುಖೀ ಸಂಸಾರ. ಸರ್ಕಾರಿ ನೌಕರನಾದುದರಿಂದ ಲೆಕ್ಕಾಚಾರದ ಜೀವನ. ಎರೆಡು ಮಕ್ಕಳೊಂದಿಗೆ ಹಾಗೂ ಇಚ್ಛೆಯನ್ನು ಅರಿತು ಹೊಂದಿಕೊಂಡು ಹೋಗುವ ಪತ್ನಿಯೊಂದಿಗೆ ಹುಟ್ಟುರಾದ ಬೆಳ್ತಂಗಡಿ ತಾಲ್ಲೂಕಿನ ವೇಣೂರನ್ನು ಬಿಟ್ತು ದೂರದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸರಕಾರಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದೆ.
ನಮ್ಮದು ಸಂತೃಪ್ತ ಸಂಸಾರವಾದರೂ ನಡೆ-ನುಡಿಗಳಲ್ಲಿ ಗಂಡಹೆಂಡಿರಲ್ಲಿ ಸಂಬಂಧಿಕರ ಕುರಿತು ಭಿನಾಭಿಪ್ರಾಯವಿದೆ. ಆಕೆಗೆ ಕುಟುಂಬದವರೆಂದರೆ
ಅತಿಯಾದ ಸಂಭ್ರಮ, ನನಗದು ವಿರುದ್ಧ. ಒಮ್ಮೆ ಎರೆಡು ದಿನ ಸರಕಾರಿ ರಜಾದಿನವಿದ್ದುದರಿಂದ ಬೆಳಿಗ್ಗೆ ತಡವಾಗಿಯೇ ಎದ್ದಿದ್ದೆ. ರಜೆಯನ್ನು ಮ್ಯಾಗಜಿನ್ ಓದುತ್ತಾ, ಹಳೆ ಸಿನೇಮಾ ಸಂಗೀತವನ್ನು ಕೇಳುತ್ತಾ ಕ್ಲಬ್ಬಿನಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಆಡುತ್ತಾ ಕಳೆಯುವುದೆಂದರೆ ನನಗೆ ತುಂಬಾ ಸಂತೋಷ. ರಜೆಯ ಗುಂಗಿನಲ್ಲಿದ್ದಾಗಲೇ ಒಳಗಿನಿಂದ ಹೆಂಡತಿಯ ಪ್ರಥಮ ಬಾಂಬ್ ಸಿಡಿಯಿತು
’ಏನು ಆರಾಮವಾಗಿ ಕುಳಿತು ಪತ್ರಿಕೆ ಓದುತ್ತಿದ್ದೀರಿ? ಎರೆಡು ದಿನ ಆಫೀಸಿಗೆ ರಜೆ ಇದೆ, ಊರಿಗೆ ಹೋಗಿ ನಿಮ್ಮ ತಾಯಿ ಹಾಗೂ ಅಕ್ಕನನ್ನು ನೋಡಿಕೊಂಡು ಬನ್ನಿ, ಹೇಗೂ ಹಬ್ಬ ಬಂತು, ತಾಯಿಗೆ ಸೀರೆ ಕುಪ್ಪಸ ತಂದು ಇಟ್ಟುಕೊಂಡು ಎರೆಡು ತಿಂಗಳಾಯಿತು, ಅದನ್ನೂ ಕೊಟ್ಟು ಬರಬಹುದಲ್ಲಾ.
ನನ್ನ ಉತ್ಸಾಹ ಜರ್ರನೆ ಇಳಿಯಿತು. ಪ್ರಯಾಣವೆಂದರೆ ನನಗೆ ಯಾವತ್ತೂ ಅಲರ್ಜಿ. ಈ ರಜೆ ಏಕೆ ಬಂತಪ್ಪಾ ಎಂದು ಬೈದುಕೊಳ್ಳುತ್ತಲೇ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ.
ಎರಡನೇ ಬಾಂಬ್ ಹತ್ತಿರದಲ್ಲಿಯೇ ಸಿಡಿಯಿತು.
’ನಿಮ್ಮ ನಾಟಕ ಸಾಕು ಮಾಡಿ, ಹೊರಡಿ ಸೋಮಾರಿಗಳು ನೀವು"
ತಿರುಗಿದೆ, ಅರ್ಧಾಂಗಿ ನಿಂತಿದ್ದಳು. ಅವಳದ್ದು ಯಾವಾಗಲೂ ಡಬ್ಬಲ್ ಗೇಮ್, ನನ್ನ ತಾಯಿಯನ್ನು ನೋಡಲು ಹೋದರೆ ಹದಿನೇಳು ಕಿ.ಮೀ. ದೂರವಿರುವ ಅವಳ ತೌರುಮನೆಗೂ ಹೋಗಲೇಬೇಕಾಗುತ್ತದೆ. ಎದುರು ಮಾತಾಡಿದರೆ ಸುಖೀ ಸಂಸಾರಕ್ಕೆ ಅಪವಾದ ಬರಬಹುದೆಂದು ಭಾವಿಸಿ ಮನಸ್ಸಿಲ್ಲದ ಮನಸ್ಸಿನಿಂದ ಊರಿಗೆ ಹೊರಟೆ. ಸಾಗರದಿಂದ ವೇಣೂರಿಗೆ ಏಳು ಘಂಟೆಯ ದಾರಿ. ತೀರ್ಥಹಳ್ಳಿಗೆ ಬಂದಾಗ ಬಸ್ ಬ್ರೇಕ್ ವಿಫಲವಾಗಿ ಕಂಭಕ್ಕೆ ಢಿಕ್ಕಿ ಹೊಡೆದು ನಿಂತಿತ್ತು. ಯಾರಿಗೂ ಅಪಾಯವಾಗಿರಲಿಲ್ಲ. ಬೇರೆ ಬಸ್ ಹಿಡಿದು ವೇಣೂರಿಗೆ ತಲುಪಿದಾಗ ಸಂಜೆ ಏಳು ಘಂಟೆ. ವೇಣೂರಿನಿಂದ ಅರಂಬಾಡಿಗೆ ಮೂರು ಕಿಮೀ. ಸಂಜೆಯಾದ ಬಳಿಕ ರಿಕ್ಷಾ ಸಿಗದೇ ಕಾಲ್ನಡಿಗೆಯಲ್ಲಿಯೇ ಸಾಗಬೇಕಾಗುತ್ತದೆ. ಮಣ್ಣಿನ ರಸ್ತೆ, ಇಕ್ಕೆಲಗಳಲ್ಲಿ ಸರ್ಕಾರಿ ಕಾಡು, ಬೃಹತ್ ಮರಗಳು, ದಟ್ಟವಾದ ಪೊದರುಗಳು, ಗೂಬೆ, ನರಿ ನಾಯಿಗಳ ಕರ್ಕಶ ಕೂಗು, ರಸ್ತೆ ದೀಪಗಳಿಲ್ಲ. ಒಂದು ರೀತಿಯ ಭಯದ ವಾತಾವರಣ. ಇಡಿಯ ದಾರಿಯಲ್ಲಿ ಸಿಗುವುದು ಮೂರೇ ಮನೆಗಳು. ಆ ಬಳಿಕ ಸಿಗುವುದು ಒಂದು ಹೊಳೆ, ದಾಟಲು ದೋಣಿ ಬೇಕು. ಈ ಬದಿಯಿಂದ ಜೋರಾಗಿ ಸಿಳ್ಳೆ ಹಾಕಿದರೆ ಮಾತ್ರ ಆ ಕಡೆಯಿಂದ ಯಾರಾದರೂ ದೋಣಿ ತಂದು ನದಿ ದಾಟಿಸುತ್ತಾರೆ. ನದಿ ದಾಟಿದ ಬಳಿಕ ಸಿಗುವ ಪ್ರಥಮ ಮನೆಯೇ ನಮ್ಮದು. ಆದರೆ ಈ ನಿರ್ಜನ ಪ್ರದೇಶದಲ್ಲಿ ಮೂರು ಕಿ.ಮೀ ನಡೆಯಲು ಗಂಡೆದೆ ಬೇಕು. ಇದ್ದಬದ್ದ ಧೈರ್ಯವನ್ನು ಒಗ್ಗೂಡಿಸಿ ಮೂರು ಕಿಮೀ ನಡೆದು ಹೊಳೆಬದಿಗೆ ಬಂದೆ.
ಹೊಳೆಯನ್ನು ದಾಟಲು ದೋಣಿಯೇನಾದರೂ ಇದೆಯೇ ಎಂದು ಕಣ್ಣಾಡಿಸಿದೆ. ಪುಣ್ಯಕ್ಕೆ ದೋಣಿ ಹಿಡಿದುಕೊಂಡು ಒಬ್ಬ ವ್ಯಕ್ತಿ ನಿಂತಿದ್ದ.
"ಹೋ ಹಮೀದ್, ಏನು ಮಾರಾಯ, ನನ್ನ ಗುರುರು ಸಿಗಲಿಲ್ಲವೇ?"
ದೋಣಿಯ ಹತ್ತಿರ ಬಂದು ಆತನನ್ನು ದಿಟ್ಟಿಸಿದೆ. ’ಇಥಿಯೋಪಿಯಾ’ದಿಂದ ಈಗ ತಾನೇ ಬಂದಂತಿದ್ದ. ಸಣಕಲು ಜೀವ, ಕುರುಚಲು ಗಡ್ಡ, ಕೆದರಿದ ತಲೆಗೂದಲು, ಹರಿದ ಮಣ್ಣುಮಿಶ್ರಿತ ಲುಂಗಿ, ತೊಳೆಯದೇ ಕಂದುಬಣ್ಣಕ್ಕೆ ತಿರುಗಿದ ಓಬಿರಾಯನ ಕಾಲದ ಅಂಗಿ, ಹರಿದ ಟೊಪ್ಪಿ, ಕಿವಿಯಲ್ಲಿ ಬೀಡಿಯ ತುಂಡು, ಭಾರತ ದೇಶದ ಬಡತನದ ಸಂಪೂರ್ಣ ಸಾಕ್ಷಾತ್ಕಾರವಾಗಿತ್ತು.
"ಏನು ಮಾರಾಯ, ನಾನು ಇಸ್ಮಾಲಿ, ನಿನ್ನ ದೊಡ್ಡಮ್ಮನ ಮಗ"
’ಹೋ, ಇಸ್ಮಾಲಿ, ನೀನಾ, ಇದೇನು ಮಾರಾಯ ನಿನ್ನ ಅವಸ್ಥೆ ಹೀಗೆ?’
ನೆನಪು ಮೂವತ್ತೈದು ವರ್ಷ ಹಿಂದಕ್ಕೆ ಹೋಯಿತು. ದೊಡ್ಡಮ್ಮನ ಮಗ ಇಸ್ಮಾಲಿ ಹಾಗೂ ನನಗೂ ಒಂದೇ ವಯಸ್ಸು. ಬಡತನದ ಕಾರಣ ಐದನೆಯ ತರಗತಿಗೆ ಶಾಲೆಬಿಟ್ಟ ಇಸ್ಮಾಲಿಯನ್ನು ನಾನು ಡಿಗ್ರಿ ಮುಗಿಸುವವರೆಗೂ ಏನಾದರೊಂದು ಕೆಲಸ ಮಾಡುತ್ತಿದ್ದುದನ್ನು ನೋಡುತ್ತಲೇ ಇದ್ದೆ. ಆ ಬಳಿಕ ಸರಕಾರಿ ನೌಕರಿ ದೊರೆತು ಊರೂರು ತಿರುಗಾಡಲು ತೊಡಗಿದ ಬಳಿಕ ಇಸ್ಮಾಲಿ ನನಗೆ ಸಿಕ್ಕಿರಲಿಲ್ಲ. ಸುಮಾರು ಇಪ್ಪತ್ತೈದು ವರ್ಷಗಳ ಬಳಿಕ ಇಂದೇ ಸಿಕ್ಕಿದ್ದ.
’ಇಸ್ಮಾಲಿ, ಚೆನ್ನಾಗಿದ್ದೀಯಾ?’
ಇಸ್ಮಾಲಿ ಕಣ್ಣಲ್ಲಿ ನೀರು ಹರಿಯತೊಡಗಿತು.
’ಹಮೀದ್ ನನಗೆ ಆರು ಹೆಣ್ಣು ಮೂರು ಗಂಡು ಮಕ್ಕಳು. ನಾಲ್ಕು ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದಿವೆ. ನಾನು ಗುಜರಿ ಕೆಲಸ, ಗೋಣಿ ಮಾರುವ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ ಐವತ್ತು ರೂಪಾಯಿಯೂ ದುಡಿಮೆ ಆಗುವುದಿಲ್ಲ. ನನ್ನ ಹೆಂಡತಿ ಬೀಡಿ ಕಟ್ಟುತ್ತಾಳೆ. ಅವಳ ಆರೋಗ್ಯವೂ ಚೆನ್ನಾಗಿಲ್ಲ. ನನಗೆ ಕ್ಷಯ ರೋಗ ಬೇರೆ. ಈ ಹೆಣ್ಣು ಮಕ್ಕಳನ್ನು ವರದಕ್ಷಿಣೆಯಿಲ್ಲದೆ ಹೇಗೆ ಮದುವೆ ಮಾಡಲಿ?’
ನನ್ನ ಕಣ್ಣು ಮಂಜಾಯಿತು. ಬಾಲ್ಯದಲ್ಲಿ ಇಸ್ಮಾಲಿಯೊಡನೆ ಕಳೆದ ದಿನಗಳು ನೆನಪಾದವು. ಆದಂಬ್ಯಾರಿಯ ದೋಣಿ ಕದ್ದುಕೊಂಡು ಹೋಗಿ ಹೊಳೆಯಲ್ಲಿ ಹಗ್ಗ ಬಿಚ್ಚಿ ಬಿಡುವುದು, ರಾಮ ಭಟ್ಟರ ತೋಟದ ಪೇರಳೆಯನ್ನು ಕದಿಯುವುದು, ಗಾಳ ಹಾಕಿ ಮೀನು ಹಿಡಿಯುವುದು, ಈಜಾಡುವುದು, ರಾತ್ರಿ ಹೊತ್ತು ತಂದೆಯವರಿಗೆ ಗೊತ್ತಾಗದಂತೆ ಕೋವಿ ಎಗರಿಸಿ ಶಿಕಾರಿಗೆ ಹೋಗುವುದು, ಕವಣೆ ಹಿಡಿದು ಬೆಟ್ಟ ತಿರುಗುತ್ತಾ ಹಕ್ಕಿಗಳನ್ನು ಹೊಡೆಯುವುದು. ಒಂದೇ ಎರಡೇ?
’ಇಸ್ಮಾಲಿ, ಹೆದರಬೇಡ, ನಿನ್ನ ಹೆಣ್ಣುಮಕ್ಕಳ ಮದುವೆಗೆ ನಾನು ಸಹಾಯ ಮಾಡುತ್ತೇನೆ’
ಇಸ್ಮಾಲಿ ನನ್ನನ್ನು ದೋಣಿಯಲ್ಲಿ ಕೂರಿಸಿ ಆಚೆ ದಡ ತಲುಪಿಸಿದ. ಬೀಳ್ಕೊಡುವಾಗ
’ಹಮೀದ್ ನೀನು ನನಗೆ ಸಹಾಯ ಮಾಡಬೇಡ, ನನ್ನ ಹೆಂಡತಿ ಮಕ್ಕಳಿಗೆ ಸಹಾಯ ಮಾಡು. ನಾಳೆ ನಮ್ಮ ಮನೆಯಲ್ಲಿ ಮೌಲೂದ್ ಪಾರಾಯಣ ಇದೆ. ನನ್ನ ನಿನ್ನ ಎಲ್ಲಾ ಸಂಬಂಧಿಕರು ಹಾಗೂ ಕುಟುಂಬದವರು ಬರುತ್ತಾರೆ, ನೀನೂ ಖಂಡಿತಾ ಬರಬೇಕು.
’ಖಂಡಿತಾ ಬರುತ್ತೇನೆ’ ಎಂದೆ.
ಮನೆಯೊಳಕ್ಕೆ ಬಂದಾಗ ತಾಯಿ ಮತ್ತು ಅಕ್ಕ ಕುಳಿತು ಮಾತನಾಡುತ್ತಿದ್ದರು. ನನ್ನನ್ನು ಕಂಡು ಆಶ್ಚರ್ಯಚಕಿತರಾದರು.
"ಏಕಿಷ್ಟು ತಡವಾಗಿ ಬಂದೆ?" ಅಮ್ಮ ಕೇಳಿದರು.
’ಬಸ್ಸು ಬ್ರ್‍ಏಕ್ ಫೇಲ್ ಆಗಿ ಇಷ್ಟು ತಡವಾಯಿತು ಅಮ್ಮಾ, ಪುಣ್ಯಕ್ಕೆ ಇಸ್ಮಾಲಿ ಸಿಕ್ಕಿದ್ದ, ಅವನೇ ದೋಣಿಯಲ್ಲಿ ನದಿ ದಾಟಿಸಿದ’ ಎಂದೆ.
"ಏನು? ಇಸ್ಮಾಲಿ ಸಿಕ್ಕಿದನೇ? ಅವನು ನಲವತ್ತು ದಿನದ ಹಿಂದೆ ಅದೇ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ನಾಳೆ ಅವನ ನಲವತ್ತನೇ ಪುಣ್ಯತಿಥಿ ಇದೆ. ಅವರ ಮನೆಯಲ್ಲಿ ನಾಳೆ ’ಮೌಲೂದು ಪಾರಾಯಣ’ ಇದೆ"
ನನ್ನ ಇಡೀ ಮೈ ಕಂಪಿಸತೊಡಗಿತು. ಕೈಯಲ್ಲಿನ ಸೀರೆ ರವಿಕೆ ಕೆಳಕ್ಕೆ ಬಿತ್ತು. ಗೋಡೆಯನ್ನಾಧರಿಸಿ ನಿಧಾನವಾಗಿ ಕುಳಿತುಕೊಂಡೆ. ಇಸ್ಮಾಲಿ ಹೇಳಿದ ಒಂದೊಂದು ಮಾತು ಮನಃಪಟಲದ ಮುಂದೆ ಬಂತು.
’ಹಮೀದ್, ನೀನು ನನಗೆ ಸಹಾಯ ಮಾಡಬೇಡ, ನನ್ನ ಹೆಂಡತಿ ಮಕ್ಕಳಿಗೆ ಸಹಾಯ ಮಾಡು’
’ನಾಳೆ ನಮ್ಮ ಮನೆಯಲ್ಲಿ ’ಮೌಲೂದು ಪಾರಾಯಣ’ ಇದೆ, ನನ್ನ ನಿನ್ನ ಸಂಬಂಧಿಕರು ಬರುತ್ತಾರೆ, ನೀನು ಖಂಡಿತಾ ಬರಬೇಕು’
ಹೌದು ಇಸ್ಮಾಲಿ ಹೇಳಿದ್ದು ನಿಜ. ನಾಳೆ ಇಸ್ಮಾಲಿ ಮನೆಯಲ್ಲಿ ’ಮೌಲೂದು ಪಾರಾಯಣ’ ಇದೆ. ಕುಟುಂಬದವರು ನೆರೆಕೆರೆಯವರು ಎಲ್ಲಾ ಬರುತ್ತಾರೆ ಆದರೆ ಇಸ್ಮಾಲಿ ಮಾತ್ರ ಬರುವುದಿಲ್ಲ..









