ಬೆಲೂನುಗಳ ಮೂಲಕ ಮುನ್ನೂರು ಮೈಲಿ ಹಾರಾಟ ನಡೆಸಲೆತ್ನಿಸಿರುವ ತಿಳಿಗೇಡಿ
chaironbaloons.jpg

                                --ಅರ್ಶದ್ ಹುಸೇನ್ ಎಂ.ಹೆಚ್.

ಮಿಸ್ಟರ್ ಬೀನ್ ಶೃಂಖಲೆ ನೋಡಿದ್ದಿರಲ್ಲ, ಮಗುವೊಂದು ಅಯಾಚಿತವಾಗಿ ಮಿಸ್ಟರ್ ಬೀನ್ ತೆಕ್ಕೆಗೆ ಬಿದ್ದು ಮಗುವಿನಿಂದ ಕಳಚಿಕೊಳ್ಳಲಾಗದೇ ಮನರಂಜನಾ ಕೇಂದ್ರದಲ್ಲಿ ಅನುಭವಿಸುವ ರಗಳೆಯೇ ಇಲ್ಲಿ ಹಾಸ್ಯಕ್ಕೆ ವಸ್ತು. ಕಡೆಯಲ್ಲಿ ಬೆಲೂನುಗಳನ್ನು ಮಗುವಿನ ಗಾಲಿಕುರ್ಚಿಗೆ ಕಟ್ಟಿದಾಗ ಅದು ಎತ್ತರಕ್ಕೆ ಹಾರಿ ಬಳಿಕ ಮಿಸ್ಟರ್ ಬೀನ್ ಪೆನ್ಸಿಲ್ ಒಂದನ್ನು ಬಾಣದಂತೆ ಪ್ರಯೋಗಿಸಿ ಬೆಲೂನು ಒಡೆದು ಮಗುವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಮೆರೆದಿದ್ದು ಚಿತ್ರಕ್ಕೆ ಭರ್ಜರಿ ಯಶಸ್ಸು ತಂದು ನೀಡಿತ್ತು. 

ಈ ಪ್ರಯೋಗವನ್ನು ಕಳೆದ ಇಪ್ಪತ್ತು ವರ್ಷಗಳಿಂದ ಪ್ರಯತ್ನಿಸುತ್ತಿರುವ  ಅಮೇರಿಕದ ಒರೆಗಾನ್ ನಗರದ ಬಳಿಯ ಗ್ರಾಂಟ್ಸ್ ಪಾಸ್ ಎಂಬ ಪಟ್ಟಣದ ನಿವಾಸಿ ಕೆಂಟ್ ಕೋಚ್ ಕಳೆದ ವಾರ ತನ್ನ ಕುರ್ಚಿಗಳಿಗೊಂದಿಷ್ಟು ಬೆಲೂನುಗಳನ್ನು ಕಟ್ಟಿ ಆಗಸಕ್ಕೇರಿಯೇ ಬಿಟ್ಟಿದ್ದ.  ಸುಮ್ಮನೇ ಆಗಸಕ್ಕೇರಿ ಮತ್ತೆ ಇಳಿದಿದ್ದರೆ ವಿಶೇಷ ಏನೂ ಇರುತ್ತಿರಲಿಲ್ಲವೇನೋ, ಆದರೆ ಈತ ಹೊರಟಿರುವುದು ಅಲ್ಲಿಂದ ಮುನ್ನೂರು ಮೈಲಿ ದೂರವಿರುವ ಇಡಾಹೋ ನಗರಕ್ಕೆ, ಅದೂ ಒಬ್ಬಂಟಿಗನಾಗಿ, ಅದೂ ಸೀಟ್ ಬೆಲ್ಟ್ ಕಟ್ಟಿಕೊಳ್ಳದೇ.

ಇಂತಹವನಿಗೆ ತಿಳಿಗೇಡಿಯನ್ನದೇ ಮತ್ತೇನನ್ನಬೇಕು?  ಅಷ್ಟಕ್ಕೂ ಇದು ಇವನ ಮೂರನೆಯ ಪ್ರಯತ್ನ.  ಅವನ ಮೂರನೆಯ ಪ್ರಯತ್ನ ಫಲಪ್ರದವಾಗುತ್ತದೆಯೋ ಇಲ್ಲವೋ ಎಂದು ನಾಳೆ (ಜುಲೈ ೫) ರಂದು ನಿರ್ಧಾರವಾಗುತ್ತದೆ.  ಏಕೆಂದರೆ ಮುನ್ನೂರು ಮೈಲಿಯ ಸಾಧನೆ ಶನಿವಾರ ಸಾಧಿಸುತ್ತೇನೆಂದು ಕೋಚ್ ಈಗಾಗಲೇ ಎಲ್ಲರ ಬಳಿ ಕೊಚ್ಚಿಕೊಂಡಿದ್ದಾನೆ.

ಮೊದಲೆರೆಡು ಬಾರಿ ಅವಹೇಳನೆಗೆ ಒಳಗಾದ ಕೋಚ್ ಈ ಬಾರಿ ಪ್ರಾಯೋಜಕರನ್ನೂ ಗಿಟ್ಟಿಸಿಕೊಂಡಿದ್ದಾನೆ.  ಸುಮಾರು ೧೯೮೨ ರಲ್ಲಿ ಟ್ರಕ್ ಡ್ರೈವರ್ ಲಾರಿ ವಾಲ್ಟರ್ಸ್ ಎಂಬಾತ ಕಿಡಿಗೇಡಿತನಕ್ಕಾಗಿ ಲಾನ್ ಕುರ್ಚಿಯಲ್ಲಿ ಕುಳಿತು ಈ ತರಹ ಲಾಸ್ ಎಂಜಲೀಸ್ ನಗರದ ಮೇಲೆ ಹಾರಾಟ ನಡೆಸಿ ಪೋಲೀಸರಿಂದ ಸಾವಿರದೈನೂರು ಡಾಲರ್ ದಂಡ ಪಡೆದುಕೊಂಡಿದ್ದು ತನ್ನ ಈ ಪ್ರಯತ್ನಕ್ಕೆ ಪ್ರೇರಣೆಯಾಗಿದೆ ಎಂದು ಕೋಚ್ ಹೇಳಿದ್ದಾರೆ.  ಆ ಬಳಿಕ ೨೦೦೬ ರಲ್ಲಿ ಪ್ರಥಮ ಬಾರಿಗೆ ಪ್ರಯತ್ನ ನಡೆಸಿದ ಕೋಚ್ ಕೆಳಕ್ಕಿಳಿಯಲಾಗದೇ ಹಲವು ಬೆಲೂನುಗಳನ್ನು ಪಿಸ್ತೂಲಿನಿಂದ ಒಡೆದು ಕೆಳಕ್ಕಿಳಿಯಬೇಕಾಗಿತ್ತು. ಆದರೆ ಒಡೆಯಬೇಕಾದ ಬೆಲೂನುಗಳಿಗಿಂತಲೂ ಹೆಚ್ಚಿನ ಬೆಲೂನುಗಳನ್ನು ಬುಲೆಟ್ ಒಡೆದದ್ದರಿಂದ ಕೆಳಕ್ಕಿಳಿಯುವ ವೇಗ ಅಧಿಕವಾಗಿ ಪ್ಯಾರಾಚೂಟ್ ಮೂಲಕ ಕೋಚ್ ಕೆಳಕ್ಕಿಳಿದಿದ್ದ. 

ಆ ದಿನ ಕಳೆದುಹೋದ ಲಾನ್ ಕುರ್ಚಿ ಇದುವರೆಗೂ ಸಿಕ್ಕಿಲ್ಲವಂತೆ. ಬಳಿಕ ಇನ್ನೊಂದು ಪ್ರಯತ್ನದಲ್ಲಿ ಕಳೆದ ಕುರ್ಚಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಕೆಂಟ್ ಷೋಷಿಸಿದ್ದ. ಕೆಲವರಿಗೆ ಅದು ಸಿಕ್ಕಿ ಬಹುಮಾನವನ್ನೂ ಗಿಟ್ಟಿಸಿದ್ದರು.

ಕಳೆದವರ್ಷ ಹೀಲಿಯಂ ಅನಿಲ ತುಂಬಿದ ಬೆಲೂನುಗಳ ನೆರವಿನಿಂದ ನೂರ ತೊಂಭತ್ತಮೂರು ಮೈಲಿ ಹಾರಾಟ ನಡೆಸಿದ್ದ ಈ ಭೂಪ.  ಈಗ ಮುನ್ನೂರು ಮೈಲಿ ಹಾರುತ್ತೇನೆಂದು ಕೊಚ್ಚಿಕೊಂಡಿರುವ ಕೋಚ್ ಎನ್.ಬಿ.ಸಿ ಟೀವಿಯಲ್ಲೂ ಕಾಣಿಸಿಕೊಂಡು ನಾಳೆಯ ಪರಾಕ್ರಮದ ಬಗ್ಗೆ ಕೊಚ್ಚಿಕೊಂಡಿದ್ದಾನೆ. ನಾಳೆ (ಜುಲೈ ೫) ಜಂಬಕೊಚ್ಚಿದ ಉತ್ತರಕುಮಾರನ ಪಾಡಾಗುತ್ತದೆಯೋ  ನಿಜವಾಗಿಯೂ ಮುನ್ನೂರು ಮೈಲಿ ಹಾರಲಿದ್ದಾನೆಯೋ ಕಾದು ನೋಡಬೇಕು.

ಕೃಪೆ: http://www.couchballoons.com/

Syndicate

Syndicate content