ಸುಮ್ಮನಿದ್ದೆವು ನಾವು...!
 •    •  
ಗೋಪಿನಾಥ್ ರಾವ್

-ಗೋಪೀನಾಥ ರಾವ್

ನಮ್ಮ ನೆರೆಮನೆಯಲ್ಲಿ ಸರಕಾರಿ ಅಧಿಕಾರಿ
ಅಳತೆ ತೂಕದ್ದಲ್ಲ ಮಾತೂ ಅಧಿಕಾರಿ...!
ಅವರ ಮಗಳ ನಾಯಿ ಬೊಗಳು
ಹಗಲು ರಾತ್ರಿ ಶಬ್ದ ಸಂತೆಗಳು
ನೆಮ್ಮದಿಯ ನಿದ್ದೆ ಇಲ್ಲದೆ ತಲೆ ನೋವು
ನೆರೆಮನೆ ತಾನೇ.. ಸುಮ್ಮನಿದ್ದೆವು ನಾವು

ರಂಪಾಟ ಕಿತ್ತಾಟ ಗಂಡ ಹೆಂಡಿರ ಹೋರಾಟ
ಹಚ್ಚಿಟ್ಟು ಕಿಚ್ಚು ಹಚ್ಚಿ ಸಿಗರೇಟು ಆತ ಹೊರಟ
ಮನೆಯಲ್ಲಿ ಮತ್ತೂ ಮುಂದುವರೆವ ಕಿರುಚಾಟ...
ಮತ್ತೆ ಶುರು ಹೊತ್ತುಗೊತ್ತಿಲ್ಲದ ಮಗಳ ಸಂಗೀತ
ಅತ್ತೂ ಕರೆದೂ ಹಾಡುವಾ ನವ ನವೀನ ಘರಾನ
ಜೊತೆಗೆ ನಾಯಿಬೊಗಳಿನ ಯುಗಳ ಗೀತೆಯ ಸಾಥಿ
ನೆರೆಮನೆ ತಾನೇ... ಸುಮ್ಮನಿದ್ದೆವು ನಾವು

ಆಮೇಲೊಂದು ದಿನ ಬೆಳ್ಳಂಬೆಳಗ್ಗೆ
ಆಸಾಮಿ ಬಂದು ಹೇಳಿದರು ಸಂಬಂಧದ ಬಗ್ಗೆ
ಮದುವೆ ಮುಗಿದಾಗಿತ್ತು ಎಲ್ಲಿತ್ತೋ ಹಸೆಮಣೆ
ಆದರೂ ಖುಷಿ ಮನಸು ಮಗಳು ಹೋಗುವಮನೆ
ಬೀಳ್ಕೊಡಲು ಬನ್ನಿ ಆಮಂತ್ರಣ ಹೊಸ ನಮೂನೆ
ಉಡುಗೊರೆ ಬೇಕಿಲ್ಲ, ಇಷ್ಟ ಇದ್ದರೆ ತನ್ನಿ
ನೆರೆಮನೆ ತಾನೇ... ಸುಮ್ಮನಿದ್ದೆವು ನಾವು

ಸದ್ದುಗದ್ದಲವಿಲ್ಲದ್ದು ಎರಡೇವಾರ
ಮುದ್ದು ನಾಯಿಯೊಡನೆ ಮಗಳು ಹಾಜರ
ಕದ್ದು ಕೇಳಿದೆವು ನೋಡುವ ಏನಂತೆ ವಿಷಯ
ಹಿಡಿಸಲಿಲ್ಲವೋ ಹೇಗೆ ಗಂಡನ ಮನೆ ಕಷಾಯ
ಖುಷಿಯಿಂದ ನಾವು ಹೇಳಿದ್ದು ಶುಭ ವಿದಾಯ
ತೊಲಗಿತು ಕಿರಿಕಿರಿ ಅಂದುಕೊಂಡಿದ್ದ ನಮ್ಮ ಪ್ರಾರಬ್ಧ
ತವರಲ್ಲೇ ಮಗಳವಾಸ ಅದು ಅವರ ಸಂಪ್ರದಾಯ!

ನೆರೆಮನೆ ತಾನೇ, ಸುಮ್ಮನಿದ್ದೆವು ನಾವು...!

 

Syndicate

Syndicate content