ದುಬೈ ಕರ್ನಾಟಕ ಸಂಘ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಕಾನ್ಸುಲೇಟ್ ಹಾಲಿನಲ್ಲಿ. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಸೇರಿದ್ದ ಗಣ್ಯವ್ಯಕ್ತಿಗಳೆಲ್ಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಒದಗಿಸಿದರು. ಆಮೇಲೆ ಗಣಪತಿಯ ಪ್ರಾರ್ಥನೆ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಮಲಾ ಉಪಾಧ್ಯಾಯ ಅವರ ವೀಣಾವಾದನ, ರೋಶನಿ ಶನಿಕೊಪ್ಪ ಅವರ ಫ್ಯೂಶನ್ ನೃತ್ಯ, ಅರುಣ ಎಸ್ ಎಂ ನೇತೃತ್ವದ ಸಮೂಹ ಗಾಯನ, ಡಾ ಶಿವರುದ್ರಪ್ಪನವರ ಹಾಡುಗಳನ್ನು ಹಾಡಿ ಅರ್ಪಿಸಿದ ಕವಿನಮನ ಕಾರ್ಯಕ್ರಮ, ಆಕರ್ಷಕ ಮುದ್ದುಕನ್ನಡ ಕಂದಮ್ಮಗಳ ಫೋಟೋ ಸ್ಪರ್ಧೆ, ರಂಜನಿ ಸುರೇಶ್ ನಡೆಸಿಕೊಟ್ಟ ರಸಪ್ರಶ್ನೆ ಕಾರ್ಯಕ್ರಮ, ಮತ್ತು ವಿಶೇಷವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಮೇಶ್ ಅರವಿಂದ್ ಅವರ ಮನರಂಜನೆ ಕಾರ್ಯಕ್ರಮ ಸೊಗಸಾಗಿದ್ದವು. ರಮೇಶ್ ಅರವಿಂದ್ ಕನ್ನಡ ನೃತ್ಯ ಪ್ರತಿಭೆ ಕುಮಾರಿ ಅನೂಷಾ ಉದಯಳನ್ನು ಅಭಿನಂದಿಸಿದರು.
ಸಂಘದ ಅಧ್ಯಕ್ಷ ಶ್ರೀ ಸಿ ಆರ್ ಶೆಟ್ಟಿ, ಪೋಷಕರಾದ ಡಾ. ಯುಸುಫ್, ಹಿರಿಯ ಸಲಹೆಗಾರರಾದ ಶ್ರೀ ಲತೀಫ್, ಉಪಾಧ್ಯಕ್ಷ ಶ್ರೀ ಗಿರೀಶ್ ಶೆಟ್ಟಿ, ಕಾರ್ಯದರ್ಶಿ ಶ್ರೀ ಕೃಷ್ಣರಾಜ್ ತಂತ್ರಿ ಯವರ ನೇತೃತ್ವದಲ್ಲಿ ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪ್ರಾಯೋಜಿಸಿದ ಶ್ರೀ ರವಿ , ಶ್ರೀಮತಿ ಶಶಿ ಶೆಟ್ಟಿ ಮತ್ತು ಶ್ರೀಮತಿ ಪ್ರತಿಮಾ ಶೆಟ್ಟಿಯವರನ್ನೂ ವೇದಿಕೆಗೆ ಆಹ್ವಾನಿಸಿ ಆತ್ಮೀಯವಾಗಿ ಆದರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಜಯಂತ ಶೆಟ್ಟಿ ವಂದಿಸಿದರು.









