ಚಂದ್ರಶೇಖರ ಕಂಬಾರರೊಂದಿಗೊಂದು ದಿನ
kambara samvada (28).jpg

               --ಅರ್ಶದ್ ಹುಸೇನ್ ಎಂ.ಹೆಚ್.

ಕಳೆದ ವಾರ ಹಯವದನ ನಾಟಕ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಚಂದ್ರಶೇಖರ ಕಂಬಾರರೊಂದಿಗೆ ನಡೆಸಿದ ಸಂವಾದದ ಕೆಲವು ತುಣುಕುಗಳು :

ತುಂಬಿದ ಕೊಡ ತುಳುಕುವುದಿಲ್ಲವಂತೆ. ಚಿಕ್ಕಪುಟ್ಟ ಸಾಧನೆ ಮಾಡಿದವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದ್ದವರು ಕಂಬಾರರೊಂದಿಗೆ ಕೊಂಚಕಾಲ ಕಳೆದಾಕ್ಷಣ ಈ ಗಾದೆ ವೇದ್ಯವಾಗುವುದು ಖಚಿತ.  ಮೇರುಗಣ್ಯರೊಂದಿಗೆ ಯಾವ ವಿಷಯ ಹೇಗೆ ಮಾತನಾಡಬೇಕೆಂಬ ಅಳುಕಿನಿಂದಲೇ ಹೋಗಿದ್ದ ನಮಗೆ ಕೆಲಕ್ಷಣಗಳಲ್ಲೇ ನಮ್ಮ ಮನೆಯವರಲ್ಲೇ ಒಬ್ಬರಾದ ಅನುಭವ.  ಕಂಬಾರರೂ ಮನಬಿಚ್ಚಿ ಮಾತನಾಡಿದುದರಿಂದ ಈ ಸಂದರ್ಶನಕ್ಕೆ ಆತ್ಮೀಯ ಸಂವಾದ ಎಂದರೇ ಹೆಚ್ಚು ಸೂಕ್ತ. 

ದುಬೈಯ ಕನ್ನಡ ಚಟುವಟಿಕೆಗಳಿಗೆ ಸದಾ  ಪ್ರವರ್ತಕರಾಗಿರುವ ಜನಾಬ್ ಜಫ್ರುಲ್ಲಾ ಖಾನ್ ರವರ ಜೈನ್ ಇಂಟರ್ನಾಶನಲ್ ಹೋಟೆಲ್ ನಲ್ಲಿ ತಂಗಿರುವ ಅವರ ಜೊತೆಯಲ್ಲಿದ್ದ ಶ್ರೀನಿವಾಸ ಕಪ್ಪಣ್ಣ ಹಾಗೂ ಚುಟುಕುಕವಿ ಜರಗನಹಳ್ಳಿ ಶಿವಶಂಕರ್ ಸಹಾ ನಮ್ಮೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡರು.  ಗಲ್ಫ್ ಕನ್ನಡಿಗದ ಸ್ನೇಹಿತರಾದ ಸುಬ್ರಮಣ್ಯ ಮತ್ಥು ಪ್ರಕಾಶರವರು  ಉಪಸ್ಥಿತರಿದ್ದರು .

ಸುಮಾರು ಒಂದು ಘಂಟೆ ಕಾಲ ನಡೆದ ಸಂವಾದ ಅವಿಸ್ಮರಣೀಯವಾಗಿದ್ದು ಅವರೊಂದಿಗಿನ ಮಾತುಕತೆ ಇನ್ನೂ ಕಿವಿಯಲ್ಲಿ ಗುಂಗುಡುತ್ತಿದೆ. ಆ ಸಂವಾದದ ಕೆಲವು ತುಣುಕುಗಳು ಇಂತಿವೆ:

ಗಲ್ಫ್ ಕನ್ನಡಿಗ: ಮಾನ್ಯ ಚಂದ್ರಶೇಖರ ಕಂಬಾರರಿಗೆ ಸುಸ್ವಾಗತ.  ಗಲ್ಫ್ ಕನ್ನಡಿಗ ಹಾಗೂ ದುಬೈಯಲ್ಲಿರುವ ಸಮಸ್ತ ಕನ್ನಡಿಗರ ಪರವಾಗಿ ತಮಗೆ ಸ್ವಾಗತ.
ಚಂದ್ರಶೇಖರ ಕಂಬಾರ: ನಮಸ್ಕಾರ

ಪ್ರಶ್ನೆ: ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಬೇಕೆಂಬ ಬೇಡಿಕೆ ಉತ್ತುಂಗದಲ್ಲಿದೆ. ಸರಿಸುಮಾರು ಸಿಗುವ ಹಂತದಲ್ಲಿದೆ. ಈ ಸ್ಥಾನಮಾನ ದೊರಕುವುದರಿಂದ ಆಗುವ ಪ್ರಯೋಜನಗಳೇನು ಹಾಗೂ ಸಿಗದೇ ಇರುವುದರಿಂದ ಆಗುವ ಅನಾನುಕೂಲತೆಗಳೇನು?

ಚಂ.ಕಂ:  ನಿಜವಾಗಿ ಹೇಳಬೇಕೆಂದರೆ ಶಾಸ್ತ್ರೀಯ ಸ್ಥಾನಮಾನ ದೊರಕುವುದರಿಂದ ಅಂತಹಾ ಪ್ರಯೋಜನವೇನಿಲ್ಲ. ಆದರೆ ನಮ್ಮ ಕನ್ನಡದ ಸಮಕಾಲೀನ ಭಾಷೆಗಳಿಗೆ ಸಿಕ್ಕುರುವಾಗ ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿಬಿಟ್ಟಿದೆ.  ನಮ್ಮದೂ ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಎಂದು ಹೇಳಿಕೊಳ್ಳಲಿಕ್ಕೆ ಅಭಿಮಾನವಾಗುತ್ತದೆ. ಆದರೆ ಈ ವಿಷಯವನ್ನು ಕೇಂದ್ರ ಸರ್ಕಾರ ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳುತ್ತಿರುವುದು ಅತಿ ಅಸಹ್ಯಕರ ಸಂಗತಿ.  ರಾಜಕೀಯ ಒತ್ತಡದಿಂದ ತಂದುಕೊಳ್ಳಬೇಕಾದ ವಿಷಯವಲ್ಲವಿದು.  ಇದು ನಮ್ಮ ನ್ಯಾಯಬದ್ಧ ಹಕ್ಕು.

ಕನ್ನಡಕ್ಕೆ ಸುಮಾರು ಎರೆಡು ಸಾವಿರ ವರ್ಷಗಳ ಖಚಿತ ಇತಿಹಾಸವಿದೆ. ಗ್ರೀಕ್ ನಾಟಕಗಳಲ್ಲಿ ಕನ್ನಡದ ಪದಗಳು ಬರುತ್ತವೆ, ಮೊಹಿಂಜಾದಾರೋ ಹರಪ್ಪಾ ಸಂಸ್ಕೃತಿಯಲ್ಲಿ ಕನ್ನಡದ ಲಿಪಿ ದೊರಕಿರುವುದರ ಬಗ್ಗೆ ಹಲವು ವಾದ ವಿವಾದಗಳಿವೆ, ಸಾವಿರದೈನೂರು ವರ್ಷಗಳ ಸಾಹಿತ್ಯಿಕ ಇತಿಹಾಸವಿದೆ. ಪ್ರಪಂಚದ ಸಾಹಿತ್ಯಲೋಕದಲ್ಲಿ ಪ್ರಮುಖ ಕೊಡುಗೆ ಇದೆ. ಇಂತಹ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ರಾಜಕೀಯ ಔದಾರ್ಯದಿಂದ ದೊರಕಬೇಕಾದರೆ ಅದರಂತಹ ಅಸಹ್ಯಕರ ಸಂಗತಿ ಇನ್ನೊಂದಿಲ್ಲ. ಇಷ್ಟರಲ್ಲಿಯೇ ಶಾಸ್ತ್ರೀಯ ಸ್ಥಾನಮಾನ ದೊರಕಬೇಕಿತ್ತು. ಈಗ ಕೊಟ್ಟರೂ ತಡವಾದುದಕ್ಕೆ ಅವರು ಕ್ಷಮೆ ಕೇಳಿ ನೀಡಬೇಕು. 

ಪ್ರಶ್ನೆ:  ಇಷ್ಟರಲ್ಲಾಗಲೇ ಸಿಕ್ಕಿರಬೇಕಿತ್ತು ಆದರೆ ಇನ್ನೂ ಹಲವರು ಅಡ್ಡಗಾಲು ಹಾಕುತ್ತಿರುವುದು ಖೇದಕರ
ಚಂ. ಕಂ:  ಇದನ್ನು ನಿರ್ಧರಿಸುವವರು ಯಾರುರಾಜಕಾರಣಿಗಳೋ? ಬುದ್ಧಿಜೀವಿಗಳೊ ಇಲ್ಲಾ ಬೇರೆಯವರೋಇಂತಹ ವಿಷಯ ರಾಜಕೀಯಕ್ಕೆ ಬರಲೇಬಾರದು.  ತಮಿಳಿಗೆ ಸಿಕ್ಕಾಕ್ಷಣ ನಮಗೂ ನ್ಯಾಯವಾಗಿ ದೊರಕಬೇಕಿತ್ತು.

ಪ್ರಶ್ನೆ: ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಸರಕಾರದಿಂದ ಏನಾದರೂ ಸಹಾಯವಾಗಬಹುದೇ?
ಚಂ. ಕಂ:  ಶಾಸ್ತ್ರೀಯ ಸ್ಥಾನಮಾನ ನೀಡುವ ಹಕ್ಕಿರುವುದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರ ಒತ್ತಡ ತರಬಹುದೇ ವಿನಃ ತೀರ್ಮಾನ ತೆಗೆದುಕೊಳ್ಳಲಿಕ್ಕಾಗುವುದಿಲ್ಲ.  ಕೇಂದ್ರ ಸರ್ಕಾರವೇ ವಿವೇಕ ಕಳೆದುಕೊಂಡ ಬಳಿಕ ಇನ್ನೇನು ನಿರೀಕ್ಷಿಸಲು ಸಾಧ್ಯ? ಅದೂ ಅಲ್ಲದೇ ರಾಜಕೀಯ ಒತ್ತಡಗಳಿದ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಬೇಕಾದುದು ಅಸಹ್ಯಕರ. ಸರಕಾರದ ಬೇಧಭಾವದ ನೀತಿ ನನಗಂತೂ ಸಹಿಸಲಿಕ್ಕಾಗುವುದಿಲ್ಲ.

ಪ್ರಶ್ನೆ: ತಾವು ಅನೇಕ ಕೃತಿಗಳನ್ನು ರಚಿಸಿದ್ದೀರಿ. ಹಲವು ಚಲನಚಿತ್ರಗಳಾಗಿವೆ. ಪ್ರಸ್ತುತ ತಮ್ಮ ರಚನೆ ಯಾವ ವಿಷಯದ ಮೇಲಿದೆ?
ಚಂ.ಕಂ: ನಾನೊಬ್ಬ ಬರಹಗಾರ ನಿಜ. ಆದರೆ ನನ್ನ ಕೃತಿಗಳು ಹೆಚ್ಚಿನಾಂಶ ಕಾಲ್ಪನಿಕ.   ಕಾಲ್ಪನಿಕ ಕಥಾವಸ್ತುವಿನಲ್ಲಿ ಸಮಾಜಕ್ಕೊಂದು ಸಂದೇಶ ನೀಡುವ ಪ್ರಯತ್ನ.  ಸಧ್ಯಕ್ಕೆ ಶಿಖರ ಸೂರ್ಯ ಎನ್ನುವ ಕೃತಿ ಮುಕ್ತಾಯದ ಹಂತದಲ್ಲಿದೆ. ಅದರ ಕಥಾವಸ್ತು ಬೇರೆಯೇ ಇದೆ.

ಪ್ರಶ್ನೆ: ತಾವು ಸುಮಾರು ಐವತ್ತು ವರ್ಷಗಳಿಂದ ಬರೆಯುತ್ತಿದ್ದೀರಿ (ಪ್ರಥಮ ಕವನ ಸಂಕಲನ: ಮುಗುಳು - ೧೯೫೮) ತಮ್ಮ ಹಲವಾರು ಕೃತಿಗಳು ಆ ಬಳಿಕ ಪ್ರಕಟವಾಗಿವೆ.  ಪ್ರಸ್ತುತ ಸಿನೇಮಾಕ್ಕಾಗಿ ಆರ್ಟ್ ಫಿಲ್ಮ್ ಅನ್ನುತ್ತೇವಲ್ಲ, ಆ ತರಹದ ಕಥಾವಸ್ತುವುಳ್ಳ ಕಥೆ ಬರೆಯುವ ಯೋಜನೆ ಏನಾದರೂ ಇದೆಯೇ?
ಚಂ. ಕಂ: ಇಲ್ಲ, ಫಿಲ್ಮ್ ನನ್ನ ಮಾಧ್ಯಮ ಅಲ್ಲ. ದೃಶ್ಯ ಮಾಧ್ಯಮವಿದೆಯೆಲ್ಲಾ, ಬಹಳ ಪ್ರಬಲವಾದ ಮಾಧ್ಯಮ. ೧೮೯೫ ರಲ್ಲಿ ಪ್ರಥಮ ಬಾರಿಗೆ ಫಿಲ್ಮ್ ಬಂದಾಗ ಅದರಲ್ಲಿ ರೈಲು ಬರುವ ದೃಶ್ಯವಿತ್ತು. ಜನರು ಆಗ ನಿಜವಾದ ರೈಲು ಬಂದಿದೆ ಎಂದು ತಿಳಿದು ಚಿಲ್ಲಾಪಿಲ್ಲಿಯಾಗಿ ಓಡಿದ್ದರು. ಅದು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಕಲೆಯೇ ನಿಜವಾದ ಜೀವನ ಎನ್ನುವಷ್ಟರಮಟ್ಟಿಗೆ.  ಕಲೆಗೂ ಜೀವನಕ್ಕೂ ಮಧ್ಯ ಒಂದು ಗೆರೆ ಹಾಕದಿದ್ದರೆ  ನಮಗೆ ತೊಂದರೆ ಖಂಡಿತಾ. ಕಲೆ ಎಲ್ಲಿ ಜೀವನ ಎಲ್ಲಿ.  ದುರ್ಯೋಧನ ದ್ರೌಪದಿ ಸೀರೆ ಹರಣ ಮಾಡುವಾಗ ನೋಡುತ್ತಿರುವ ನಾವು ಸುಮ್ಮನಿರುತ್ತೇವೆ. ಅದೇ ದಾರಿಯಲ್ಲಿ ಪಡ್ಡೆ ಹುಡುಗನೊಬ್ಬ ಹುಡುಗಿಯನ್ನು ಚುಡಾಯಿಸಿದರೆ ಸುಮ್ಮನಿರುತ್ತೇವೆಯೇ. ಅದೇ ಕಲೆಗೂ  ಜೀವನಕ್ಕೂ ಒಂದು ವ್ಯತ್ಯಾಸ. 

ಪ್ರಶ್ನೆ: ಇತ್ತೀಚೆಗೆ  ಆರ್ಟ್ ಫಿಲ್ಮ್ ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಗಿರೀಶ್ ಕಾಸರವಳ್ಳಿಯವರ ಒಂದು ಚಿತ್ರಕ್ಕೂ ಅನಿಲ್ ಅಂಬಾನಿ ಹಣ ನೀಡಿದ್ದರೆಂದು ಸುದ್ದಿ.  ಟೀವಿ ಬಂದ ಬಳಿಕ ನಮ್ಮ ಜೀವನವೇ ಬದಲಾಗಿ ಹೋಗಿದೆ.  ಕಲೆಗೆ ಮೊದಲಿನಷ್ಟು ಪ್ರೋತ್ಸಾಹ ಸಿಕ್ಕುತ್ತಿಲ್ಲ. ಹಾಗಾಗಿ ಕಾಸರವಳ್ಳಿಯಂತಹವರಿಗೂ ಅಂಬಾನಿ ಸಹಾಯ ಬೇಕಾಯ್ತು.  ಟೀವಿ ಮಾಧ್ಯಮದ ಭರಾಟೆಯಲ್ಲಿ ಈ ಕಲೆಯ ಉಳಿವು ಹೇಗೆ?
ಚಂ. ಕಂ:  ಬಹಳ ಗಂಭೀರವಾದ ಪ್ರಶ್ನೆ.  ಟೀವಿ ಬಂದ ಮೇಲೆ ತೆರೆಗೂ ನಮಗೂ ಒಂದು ಅಂತರ ಮಾಡಿಟ್ಟುಕೊಂಡಿದ್ದೇವೆಲ್ಲಾ, ಆದರೂ ಕೂಡಾ ಕಲೆಯನ್ನು ನೋಡಿ ಯಾರೂ ಪಾಠ ಕಲಿಯಲಿಲ್ಲ.  ನಾಟಕವೆಂದರೆ ಒಂದು ವೇದಿಕೆ. ಸಮಾಜ ಸುಧಾರಣೆಯ ವೇದಿಕೆ.  ಹಿಂದಿನ ದಿನಗಳಲ್ಲಿ ಹಲವಾರು ಪ್ರಯೋಗಗಳು ನಡೆದವು. ಬೀದಿ ನಾಟಕ ಬಂತು. ಕಮ್ಯೂನಿಷ್ಟ್ ತಂಡಗಳು, ಬಂಗಾಲಿ ತಂಡಗಳು ಅದ್ಭುತ ತಂಡಗಳು ಬಂದವು. ನಮ್ಮ ಶ್ರೀರಂಗರು ನಾಟಕದ ಮೂಲಕ ಸಮಾಜದ ಸಮಸ್ಯೆಗಳನ್ನು ಚರ್ಚೆಗೆ ಗ್ರಾಸವಾಗುವಂತೆ ನೋಡಿಕೊಂಡರು.  ಹಿಂದೆ ಒಂದು ಕ್ಯಾಮೆರಾವನ್ನೂ ಸಹಾ ವಿವರಿಸಬೇಕಾದರೆ ಅದನ್ನು ಬಿಚ್ಚಿ ಪ್ರತಿ ಬಿಡಿಭಾಗವನ್ನು ತೋರಿಸುವಂತೆ ನಾಟಕದ ಪ್ರದರ್ಶನವಾಗುತ್ತಿತ್ತು.  ಹಾಗೇ ಕಲೆಯಿಂದ ನಾವೇನಾದರೂ ಸಾಧಿಸಬಲ್ಲೆವು ಎಂದು ಕೊಂಡೆವು.  ನಮ್ಮಲ್ಲಿ ಹಲವರು, ಲಂಕೇಶ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದೆವು.  

ಈಗ ಟೀವಿ ಬಂದ ಮೇಲೆ, ಅದು ದೊಡ್ಡ ದಳ್ಳಾಳಿ ಎಂದು ನಮಗೆ ಮನವರಿಕೆಯಾಗಿದೆ.  ಯಾವುದೋ ವಸ್ತುವನ್ನು ಯಾರಿಗೋ ಮಾರಾಟ ಮಾಡುವುದರ ಮಧ್ಯೆ ಇರುವ ಒಂದು ದಳ್ಳಾಳಿ. ಟೀವಿ ಮಾರಾಟಮಾಡುವ ಹಾಗೂ ಕೊಳ್ಳುವವರ ನಡುವೆ ಕಲೆಯನ್ನು ತುರುಕುವ ಒಂದು ಪ್ರಬಲ ಮಾಧ್ಯಮ.  ಹಣ್ಣು ಮಾರುವುದಕ್ಕೂ ಒಂದು ಹೆಣ್ಣು ಟೀವಿಯಲ್ಲಿ ಬಂದು ಹೇಳಿದರೇ ನಾವು ಕೊಳ್ಳುವುದು.  ಈ ದಳ್ಳಾಳಿಯ ಮಾತು ಯಾರು ಕೇಳುತ್ತಾರೆ ಎಂದು ಉಪೇಕ್ಷೆ ಮಾಡುವಂತಿಲ್ಲ. ಎಲ್ಲರೂ ಮನರಂಜನೆಗೋಸ್ಕರ ಟೀವಿ ನೋಡುತ್ತಾರೆ. ಇವೆಲ್ಲಾ ತಾತ್ಕಾಲಿಕ. ಜನರು ಹಿಂದಿನಂತೆಯೇ ದಳ್ಳಾಯಿ ಇಲ್ಲದ ನಾಟಕಕ್ಕೆ ಖಂಡಿತಾ ಬರುತ್ತಾರೆ ಎನ್ನುವ ಆಶಾವಾದ ನಮಗಿದೆ. 

ಪ್ರಶ್ನೆ: ಉತ್ತಮ ಪ್ರದರ್ಶನವಿದ್ದರೂ ಜನ ಟೀವಿ ಬಿಟ್ಟು ಬರುವುದಿಲ್ಲ. ಕಳೆದವರ್ಷ ನಾಗಮಂಡಲ ನಾಟಕಕ್ಕೆ ಕ್ರಿಕೆಟ್ ಇದೆ ಎನ್ನುವ ನೆವ ಹೂಡಿ ಹಲವರು ನಾಟಕ ನೋಡಲು ಬಂದಿರಲಿಲ್ಲ. ಟೀವಿಗೆ ಅಷ್ಟೊಂದು ವ್ಯಸನಿಯಾಗಿಬಿಟ್ಟಿದ್ದಾರೆ. ಈ ಬೆಳವಣಿಗೆಯ ನಡುವೆ ಕಲೆಗೆ ಪ್ರೋತ್ಸಾಹ ಹೇಗೆ?
ಚಂ.ಕಂ:  ತಾವು ಹೇಳುತ್ತಿರುವುದು ಸರಿ. ಆದರೆ ಕಲೆಗೆ ಒಳ್ಳೆಯ ದಿನಗಳು ಬಂದೇ ಬರುತ್ತವೆ.  ವಾಪಸ್ ನೀವು ಬರದೇ ಹೋದರೆ ನೀವು ಬರುವಂತೆ ಮಾಡಬೇಕಾದುದು ನಾಟಕ ಕಂಪನಿಗಳ ಜವಾಬ್ದಾರಿ.  ನಮ್ಮ ಕಪ್ಪಣ್ಣನವರು ತುಂಬಾ ಪ್ರಯತ್ನ ಮಾಡುತ್ತಿದ್ದಾರೆ. ನಾವು ಇಲ್ಲಿ ತಪ್ಪಿದ್ದುದೆಲ್ಲಿ ಎಂದರೆ ಸಿನೇಮಾ ಅನುಕರಣೆಯಲ್ಲಿ. ಸಿನೇಮಾ ಅನುಕರಣೆ ನೋಡುವುದಾದರೆ ಜನ ನಾಟಕಕ್ಕೇಕೆ ಬರುತ್ತಾರೆ? ಸಿನೇಮಾವನ್ನೇ ನೋಡಬಹುದಲ್ಲಾ.  ನಾಟಕಕ್ಕೆ ಜನರೇ ಕಡಿಮೆಯಾಗಿಬಿಟ್ಟಿದೆ. ಏಕೆಂದರೆ ಅವರು ನಾಟಕ ರಂಗದ ಕೆಲಸ ಮಾಡುತ್ತಿಲ್ಲ. ಜನಗಳಿಗೆ ಏನು ಬೇಕೋ ಅದನ್ನು ಕೊಡುವ ನಿಟ್ಟಿನಲ್ಲಿ ನಾಟಕದ ನಿಜವಾದ ರಸ ಅರ್ಥ ಕಳೆದುಕೊಂಡುಬಿಟ್ಟಿದೆ.  ಬಾಲಗಂಧರ್ವರ ಒಯ್ಯಾರ ನೋಡಲಿಕ್ಕೆ ಹೆಣ್ಣುಮಕ್ಕಳೇ ಹೆಚ್ಚು ನಾಟಕ ನೋಡಲು ಬರುತ್ತಿದ್ದರಂತೆ. ನಾಟಕ ಹೇಗಿರಬೇಕು ಎಂದರೆ ನಮಗೇನೋ ಹೇಳಲಿಕ್ಕಿದೆ ಬನ್ನಿ ಎಂದು ಹೇಳುವಂತಿರಬೇಕು. ನಾವು ಹೇಳಿದುದನ್ನು ಸಮಾಜ ನೋಡಿ ಆಲಿಸಿ ಸುಧಾರಣೆಗೊಳ್ಳಬೇಕು. ಕೆಲವು ವಿಷಯಗಳು ನಿಮಗೆ ಇಷ್ಟವಾಗದೇ ಇರಬಹುದು. ಮುಂದೆ ಬಂದು ವಿಚಾರ ಮಾಡಲಿಕ್ಕಾಗಿಯೇ ಈ ನಾಟಕ ನಡೆಸಿದ್ದು.  ಆದರೆ ನಾಟಕವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳುವವರು ಮುಂದೆ ಬರಬೇಕು. ಜನರ ಸಾಂಸ್ಕೃತಿಕ ಅಗತ್ಯಗಳಿಗೆ ಪೂರಕವಾಗಿರುವ ನಾಟಕ ಇಂದು ಅತಿ ಅಗತ್ಯವಾಗಿದೆ.  

ಪ್ರಶ್ನೆ: ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.  ಹೆಚ್ಚಿನವರು ಬೇರೆ ಕಲೆಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವೇನು

ಚಂ.ಕಂ:  ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದರೆ ಸರಿಯಲ್ಲ. ಈಗಿನ ದಿನಗಳಲ್ಲಿ ಹೆಚ್ಚಿನವರು ಉತ್ತಮ ಕೃತಿಗಳನ್ನು ಕೊಂಡುಕೊಂಡು ಓದುತ್ತಿದ್ದಾರೆ. ಹಿಂದಿಗಿಂತಲೂ ಈಗ ಹೆಚ್ಚು ಸುಲಭದಲ್ಲಿ ಕೃತಿಗಳು ದೊರಕುತ್ತಿವೆ. ನಾನು ನೋಡುತ್ತಾ ಬಂದಿರುವಂತೆ ಮುಂದಿನ ಜನಾಂಗ ಹೆಚ್ಚು ಇ-ಸಾಹಿತ್ಯ ಅಂದರೆ ಕಂಪ್ಯೂಟರ್ ಆಧಾರಿತ ಸಾಹಿತ್ಯವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ.  ನನ್ನ ಮೊಮ್ಮಕ್ಕಳೂ ಎಷ್ಟೊಂದು ಸುಲಲಿತವಾಗಿ ಕಂಪ್ಯೂಟರ್ ಉಪಯೋಗಿಸುತ್ತಾರೆ. ಹಾಗಾಗಿ ಕಾಗದದ ಬದಲಿಗೆ ಕಂಪ್ಯೂಟರ್ ತೆರೆ ಮುಂದಿನ ಜನಾಂಗದ ಸ್ಲೇಟು ಆಗಲಿದೆ. ನಮಗೆ ಕಾಗದ ಪತ್ರ ಕೈಯಿಂದ ಬರೆದರೇ ಸಮಾಧಾನ. ಆದರೆ ಈಗಿನ ಮಕ್ಕಳು ಟಕಟಕ ಕೀಪ್ಯಾಡ್ ಕುಟ್ಟಿ ಪ್ರಿಂಟ್ ತೆಗೆದು ಮುದ್ದಾದ ಅಕ್ಷರ ಕ್ಷಣದಲ್ಲಿ ಮೂಡಿಸುತ್ತಾರೆ. ಈ ಇ-ಸಾಹಿತ್ಯಕ್ಕೆ ಒಂದು ಅಪಾಯ ಇದೆ. ಇದು ಮಾಹಿತಿ ನೀಡಬಹುದೇ ಹೊರತು ಅನುಭೂತಿ ನೀಡಲಾರದು, ಅನುಭವ ನೀಡಲಾರದು.  ಈಗ ಅಮೇರಿಕಾದಲ್ಲಿ ಬೆಸ್ಟ್ ಸೆಲ್ಲರ್ ಬರುತ್ತಿದೆ. ಇಂದಿನ ದಿನಗ ಅಗತ್ಯವನ್ನು ಕಂಡುಕೊಂಡವ ಅದನ್ನು ನೀಡಿ ಹಣಮಾಡಿಕೊಳ್ಳುತ್ತಾನೆ. ಆರು ತಿಂಗಳ ಬಳಿಕ ಬರುವ ಬೆಸ್ಟ್ ಸೆಲ್ಲರ್ ಬೇರೆ.

ಜರಗನಹಳ್ಳಿ ಶಿವಶಂಕರ್: ಇಂದು ಜಾಗತೀಕರಣದ ಮೂಲಕ ಹೆಚ್ಚಿನ ಸಾಹಿತ್ಯ ಪ್ರಾಕಾರಗಳು ಜಗತ್ತಿನಲ್ಲಿ ಸಿಗುತ್ತಿವೆ. ಜಗತ್ತಿನಲ್ಲಿ ಎಲ್ಲಿದ್ದರೂ ತಮ್ಮ ಸಾಹಿತ್ಯವನ್ನು ಜನರು ಪಡೆಯಬಹುದಾಗಿದೆ. ಹಾಗಾಗಿ ಪುಸ್ತಕರೂಪದಲ್ಲಿರುವ ತಮ್ಮ ಕೃತಿಗಳನ್ನು ಇ-ರೂಪಕ್ಕೆ ಇಳಿಸುವುದರಿಂದಲೂ ಹೆಚ್ಚಿನ ಲಾಭವಿದೆ.

ಪ್ರಶ್ನೆಬೆಂಗಳೂರಿನ ನವಕರ್ನಾಟಕ ಪಬ್ಲಿಕೇಶನ್ ಹಲವು ಉತ್ತಮ ಕನ್ನಡ ಕಲಾಕೃತಿಗಳನ್ನು ಹೊರತರುತ್ತಿದೆ. ಅವುಗಳಲ್ಲಿ ಕೆಲವನ್ನು ಅನಿವಾಸಿ ಕನ್ನಡಿಗರು ತರಿಸಿಕೊಳ್ಳಬೇಕೆಂದು ಕಾಗದ ಬರೆದರೆ ಭಾರತಬಿಟ್ಟು ಹೊರದೇಶಗಳಿಗೆ ಮಾರಾಟ ಮಾಡಲಾಗುವುದಿಲ್ಲ ಎಂಬ ಉತ್ತರ ದೊರಕುತ್ತಿದೆ. ಇದೇಕೆ ಹೀಗೆ?
ಚಂ.ಕಂ: ನವಕರ್ನಾಟಕ ಪಬ್ಲಿಕೇಶನ್ ಅತ್ಯುತ್ತಮ ಕೆಲಸ ಮಾಡುತ್ತಿದೆ.  ಯಾವ ವಿಶ್ವವಿದ್ಯಾಲಯವೂ ಮಾಡುತ್ತಿಲ್ಲದ ಕೆಲಸವನ್ನು ಶ್ಲಾಘನೀಯವಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಕನ್ನಡ ಪುಸ್ತಕಗಳ ಸಂಪಾದಕರನ್ನು ಸಾಕಿ ಕನ್ನಡ ಕೃತಿಗಳನ್ನು ಹೊರತರುತ್ತಿದೆ.   ಅವರ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ.  ಕನ್ನಡಿಗರ ಅಗತ್ಯಗಳನ್ನು ಮನಗಂಡು ಹಲವು ಹೊಸ ಪ್ರಯೋಗಗಳನ್ನು ಹೊರತಂದಿದ್ದಾರೆ.  ನಾನು ಕನ್ನಡ ವಿಶ್ವವಿದ್ಯಾಲದ ಕುಲಪತಿಯಾಗಿ ಮಾಡಲಸಾಧ್ಯವಾದ ಕೆಲಸಗಳನ್ನು ಅವರು ಮಾಡಿ ತೋರಿಸಿದ್ದಾರೆ. ಲಾಭ ಅವರಿಗೆ ಮುಖ್ಯವಲ್ಲ.  ಅಕ್ಯಾಡೆಮಿಗಳು ಅವರನ್ನು ಭೇಟಿಯಾಗಿ ಪುಸ್ತಕಗಳು ಹೇಗೆ ಸಿಗಬಲ್ಲದು ಹಾಗೂ ಕನ್ನಡಿಗರಲ್ಲಿ ಓದುವ ಹವ್ಯಾಸ ಬೆಳೆಸುವ ಬಗ್ಗೆ ಕಾರ್ಯನಿರತರಾಗಬೇಕು.  ಅನಿವಾಸಿಗಳಲ್ಲಿ ಕೆಲವರು ಮುಂದೆಬರಬೇಕು.  ನಿಮ್ಮ ಮಕ್ಕಳು ರಜೆಯಲ್ಲಿ ಊರಿಗೆ ಬಂದಾಗ ಊರಿಗೆ ಕರೆತಂದು ಕನ್ನಡ ನೆಲ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು.  ಅವರು ಮಾನಸಿಕವಾಗಿ ತಾವು ಕನ್ನಡಕ್ಕೆ ಸೇರಿದವರೆಂಬ ಭಾವನೆ ಅವರಲ್ಲಿ ಮೂಡಿಬರುತ್ತದೆ.  ಆ ಮೂಲಕ ಕನ್ನಡದ ಬೆಳವಣಿಗೆ ಸಾಧ್ಯ. ಇನ್ನು ಪುಸ್ತಕಗಳ ಬಗ್ಗೆ ಹೇಳುವುದಾದರೆ ನಿಮ್ಮಲ್ಲಿಂದ ನೇರವಾಗಿ ಯಾರಾದರೂ ಬಂದು ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿಯಾಗಿ ಮುಖತಃ ಮಾತನಾಡಿ ಪುಸ್ತಕಗಳನ್ನು ಏಕೆ ಕಳುಹಿಸುವುದಿಲ್ಲವೆಂದು ಕೇಳಿದರೆ ಒಳಿತು. ನನಗೆ ಈ ಬಗ್ಗೆ ಹೆಚ್ಚು ತಿಳಿದಿಲ್ಲ. ನಾಡಿಗೆ ಬಂದು ನಮ್ಮೊಂದಿಗೆ ಸಂವಾದ ನಡೆಸಿದರೆ ನಿಮಗೆ ನೆರೆವು ನೀಡಲು ನಾವೆಂದೂ ಸಿದ್ಧ

ಪ್ರಶ್ನೆ: ಇಲ್ಲಿನ ನಿವಾಸಿಗಳ ಅತಿದಿನಗಳ ಬೇಡಿಕೆ ಒಂದು ಅನಿವಾಸಿ ಕನ್ನಡಿಗರ ನಿಗಮ. ಈಗ ಬಂದಿರುವ ಸರ್ಕಾರ ಈ ಬಗ್ಗೆ ಭರವಸೆ ನೀಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ:
ಚಂ. ಕಂ:  ಸರ್ಕಾರವನ್ನು ನೆಚ್ಚಿ ಯಾವುದೇ ಕೆಲಸ ಮಾಡಲು ಹೋದರೆ ಅದು ಸಾಧ್ಯವಾಗಬಹುದೆಂಬ ಭರವಸೆ ಬಿಟ್ಟು ಬಿಡಿ. ಸರ್ಕಾರದ ಇಲಾಖೆಯೆಂದರೆ ಮೊದಲು ಟಿ.ಎ. ಬಳಿಕ ಟೆಂಡರ್, ಆಮೇಲೆ ನಿಗಮ, ಸಮಿತಿ  ನಿಯಮಿಸುವುದು ಇವೆಲ್ಲಾ ಆಗಿಹೋಗಿಬರದ ಕೆಲಸಗಳು. ಇದುವರೆಗೆ ಸರ್ಕಾರದ ಯಾವ ಕೆಲಸ ಸುಸೂತ್ರವಾಗಿ ನಡೆದಿದೆ ಹೇಳಿಹಾಗಾಗಿ ನೀವೇ ಸೇರಿ ಖಾಸಗಿಯಾಗಿ ಒಂದು ನಿಗಮ ರಚಿಸಿಕೊಳ್ಳಿ. ನಿಮ್ಮ ನಿಮ್ಮಲ್ಲೇ ಒಂದು ನಿಗಮ ರಚಿಸಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯತತ್ಪರರಾಗಿ. ಸರ್ಕಾರವನ್ನು ನೆಚ್ಚಿಕೊಂಡರೆ ಅಷ್ಟೇ ಬಿಡಿ.

ಪ್ರಶ್ನೆ: ಹಿಂದೆ ನಾವು ಹಲವಾರು ಪುಸ್ತಕಗಳನ್ನು ಊರಿನಿಂದ ತಂದು ಇಲ್ಲಿ ಸಾಹಿತ್ಯ ಪ್ರಚಾರದ ಪ್ರಯತ್ನ ಮಾಡಿದ್ದೆವು. ಸುಮಾರು ಮಟ್ಟಿಗೆ ಯಶಸ್ವಿಯೂ ಆಗಿದ್ದೆವು.  ಈಗ ಯಾರೂ ಆ ಬಗ್ಗೆ ಒಲವು ತೋರುತ್ತಿಲ್ಲ.  ಕನ್ನಡದ ಉಳಿಯುವಿಕೆಗೆ ನಾವು ಇನ್ನೇನು ಮಾಡಬಹುದು?
ಚಂ.ಕಂ:  ನೀವು ಈಗ ಮಾಡುತ್ತಿರುವುದು ಶ್ಲಾಘನೀಯ ಕೆಲಸ.  ನಾಟಕ ಮಾಡಿದ್ದೀರಿ, ನಮ್ಮನ್ನು ಕರೆಸಿಕೊಂಡಿದ್ದೀರಿ, ವೆಬ್ ಸೈಟ್ ನಡೆಸುತ್ತಿದ್ದೀರಿ, ಪತ್ರಿಕೆಗಳಿಗೆ ಬರೆಯುತ್ತಿದ್ದೀರಿ. ಇವೇ ನಿಮ್ಮ ಕಿರಿಯರಿಗೂ ಮಾದರಿಯಾಗುತ್ತದೆ. ಈ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಿ. ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ನೀವು ಮಾಡುತ್ತಿರುವುದನ್ನು ಗಮನಿಸುತ್ತಿರುತ್ತಾರೆ. ಅವರಿಗೂ ನಿಮ್ಮ ಕೆಲಸದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ಹೇಳಿ. ಇದರಿಂದ ಮಕ್ಕಳಿಗೆ ಸ್ವಾಭಾವಿಕವಾಗಿ ಕನ್ನಡದ ಬಗ್ಗೆ ಒಲವು ಬರಲು ಸಾಧ್ಯ.

ಪ್ರಶ್ನೆ: ಹಿಂದೆ ಕುವೆಂಪು ಅವರು ಹೇಳಿದ್ದರು ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು. ಆದರೆ ಇಂದಿನವರು ಕನ್ನಡದೊಂದಿಗೆ ಇಂಗ್ಲಿಷ್ ಬೆರೆಸು, ನಿನ್ನ ಉದ್ಧಾರವಾಗುತ್ತದೆ ಎಂದು. ಕನ್ನಡದ ಪದಗಳ ಪ್ರಯೋಗ ಸಾಧ್ಯವಿದ್ದರೂ ಇಂಗ್ಲಿಷ್ ಪದಗಳನ್ನು ಬಳಸುವುದು ಇಂದಿನ ಭಾಷೆಯ ಪ್ರಯೋಗದಲ್ಲಿದೆ. ಇದರಿಂದಾಗುವ ಅಪಾಯಗಳ ಬಗ್ಗೆ ಕೆಲವು ಮಾತುಗಳನ್ನು ಹೇಳಿ

ಚಂ.ಕಂ: ಕನ್ನಡದಲ್ಲಿ ನಮ್ಮದೇ ಸ್ವಂತ ಪದಗಳಿರುವುದು ಕೇವಲ ಸುಮಾರು ಏಳುನೂರು.  ಉಳಿದವೆಲ್ಲಾ ಬೇರೆ ಭಾಷೆಗಳಿಂದ ಆಮದು ಮಾಡಿಕೊಂಡವಂತಹವು.  ಇಂಗ್ಲಿಷ್ ಭಾಷೆ ಪ್ರಸ್ತುತ ಆಧುನಿಕ ಜಗತ್ತಿಗೆ ಅನಿವಾರ್ಯ.  ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಇವುಗಳಿಗೆ ಪರ್ಯಾಯ ಕನ್ನದ ಪದಗಳಿಲ್ಲ. ಇನ್ಯಾರಾದರೂ ಹೊಸತಾಗಿ ಕಂಡುಹಿಡಿಯಬೇಕಷ್ಟೇ.  ಸರ್ಕಲ್ ಎಂದರೆ ಎಂತಹ ಹಳ್ಳಿಯವನಿಗಾದರೂ ಸುಲಭವಾಗಿ ಒಗ್ಗುವ ಪದ. ಅದೇ ವೃತ್ತ ಎಂದು ಕರೆದರೆ ಕೊಂಚ ಕಷ್ಟಕರ.  ಹಾಗಾಗಿ ಸುಲಭವಾಗಿರುವ ಪದಗಳ ಪ್ರಯೋಗ ತಪ್ಪಲ್ಲ. ಆದರೆ ನಮ್ಮ ಭಾಷೆಯನ್ನೇ ಕೊಂದು ಆರ್ಭಟಿಸುವ ಪ್ರವೃತ್ತಿ ಮಾತ್ರ ಖಂಡನೀಯ. 

ಗ. ಕ:  ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಹೀಗೇ ಮುಂದುವರೆದರೆ ಕನ್ನಡ ಬಲ್ಲ ಕನ್ನಡಿಗರನ್ನು ಹುಡುಕುವುದೇ ಕಷ್ಟವಾಗಬಹುದು. ಈ ಅಪಾಯದಿಂದ ಪಾರಾಗುವುದು ಹೇಗೆ?
ಚಂ. ಕಂ:  ಮೊದಲು ಮಗು ಕಲಿಯುವುದು ತನ್ನ ತಾಯಿ ತಂದೆಯರಿಂದ. ಅವರು ಮನೆಯಲ್ಲಿ ಏನು ಮಾತನಾಡುತ್ತಾರೋ ಅದನ್ನೇ ಮಗುವೂ ಕಲಿಯುತ್ತದೆ. ಅವರೇ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುತ್ತಿದ್ದರೆ ಅದೇ ಭಾಷೆ ಕಲಿಯುತ್ತದೆ.  ಹಾಗಾಗಿ ಮೊದಲು ನಮ್ಮ ಮನೆಗಳಲ್ಲಿ ನಮ್ಮ ಮಾತೃಭಾಷೆಯನ್ನು ಮಾತ್ರ ಮಾತನಾಡುವ ಸಂಕಲ್ಪ ತೊಟ್ಟುಕೊಳ್ಳಬೇಕು. ಆಗ ಮಗುವೂ ಮಾತೃಭಾಷೆಯನ್ನೇ ಕಲಿಯುತ್ತದೆ.  ನೀವು ಜಗತ್ತಿನ ಯಾವುದೇ ಜಾಗದಲ್ಲಿರಲಿ ವರ್ಷಕ್ಕೊಂದು ಬಾರಿ ರಜೆಗೆ ಬಂದಾಗ ನಮ್ಮ ಸಂಸ್ಕೃತಿ ಬಗ್ಗೆ ಮಗುವಿಗೆ ಪರಿಚಯ ತಿಳಿಸಿಕೊಡಿ, ತೋರಿಸಿ ಕೊಡಿ. ಖಂಡಿತಾ ಮಕ್ಕಳು ಕಲಿತೇ ಕಲಿಯುತ್ತಾರೆ.  ಭಾಷೆಯೂ ಉಳಿಯುತ್ತದೆ.

ಪ್ರಶ್ನೆ: ತಮ್ಮ ಅಮೂಲ್ಯ ವೇಳೆಯನ್ನು ನಮಗಾಗಿ ವ್ಯಯಿಸಿದ್ದೀರಿ. ತಮ್ಮ ಎಲ್ಲಾ ಮುಂದಿನ ಯೋಜನೆಗಳಿಗೆ ನಮ್ಮ ಹಾರ್ದಿಕ ಶುಭಾಷಯಗಳು.  ನಮಸ್ಕಾರಗಳು.
ಚಂ. ಕಂ: ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಿ. ನಮ್ಮ ನೆರವು ಏನು ಬೇಕಿದ್ದರೂ ನಾವು ನೀಡಲು ಸಿದ್ಧ.  ಉತ್ಸುಕರು ಕೊಂಡುಹೋಗುವ ಹಾಗಿದ್ದರೆ ಉಚಿತವಾಗಿ ಕನ್ನಡ ಪುಸ್ತಕ, ಸೀಡಿ ಮೊದಲಾದವುಗಳನ್ನು ನೀಡಲು ನಾವು ಸಿದ್ಧ. ಊರಿಗೆ ಬಂದಾಗ ನಮ್ಮನ್ನು ಭೇಟಿಯಾಗಿ.

ನಿಮ್ಮ ಕನ್ನಡ ಚಟುವಟಿಕೆಗಳು ಯಶಸ್ವಿಯಾಗಿ ಮುಂದುವರೆಯಲಿ. ನಮಸ್ಕಾರಗಳು

ಚ೦ದ್ರಶೇಖರ

ಚ೦ದ್ರಶೇಖರ ಕ೦ಬಾರರ ಬಿಚ್ಚುಮಾತುಗಳು ಮೆಚ್ಚುಗೆಯಾಯಿತು. ಉತ್ತಮ ಮಾಹಿತಿ ಕೊಟ್ಟಿದ್ದಾರೆ.  ವಿದೇಶಗಳಲ್ಲಿ ನೆಲಸಿರುವ ಕನ್ನಡಿಗರಿಗಾಗಿ ಸೀಡಿ ಹಾಗೂ ಪುಸ್ತಕಗಳನ್ನು ಉಚಿತವಾಗಿ ನೀಡಲು ಸಿದ್ದವಿರುವ ಅವರ ಔದಾರ್ಯ ಕ೦ಡು ಆಶ್ಚರ್ಯವಾಯಿತು.  ಅನಿವಾಸಿಗಳೆ೦ದರೆ ದುಡ್ಡಿನ ದೊರೆಗಳೆ೦ದು ಭ್ರಮಿಸುವ ವಾತಾವರಣವಿರುವಾಗ, ಅವರ ಅಗತ್ಯಗಳಿಗೆ ಓಗೊಡುವವರೂ ಇದ್ದಾರೆ ಅನ್ನುವುದೇ ನೆಮ್ಮದಿ ನೀಡುತ್ತದೆ.  ನ್ಯೂಜಿಲೇ೦ಡ್ ಕನ್ನಡಕೂಟ ವಿದೇಶದಲ್ಲೆಲ್ಲೂ ಇಲ್ಲದ೦ತಹಾ ಉತ್ತಮ ಮಟ್ಟದ ಕನ್ನಡ ಗ್ರ೦ಥಾಲಯವನ್ನು ಹೊ೦ದಿರುವುದು ಇ೦ತಹ ಸಹಕಾರದಿ೦ದಲೇ.  ಕೂಟವನ್ನು ಸ್ಥಾಪಿಸಿದ ಡಾ.ಲಿ೦ಗಪ್ಪ ಕಲ್ಬುರ್ಗಿಯವರು ಸ್ವ೦ತ ಸ೦ಗ್ರಹದಿ೦ದ ದಾನ ಮಾಡಿದ ಪುಸ್ತಕಗಳಿ೦ದ ಆರ೦ಭವಾದ ಈ ಗ್ರ೦ಥಾಲಯಕ್ಕೆ  ಕರ್ನಾಟಕದ ಹಲವು ಪ್ರತಿಷ್ಟಿತ ಲೇಖಕರು ಉಚಿತವಾಗಿ ಪುಸ್ತಕಗಳನ್ನು ದಾನವಾಗಿ ಕೊಟ್ಟಿದ್ದಾರೆ ಮತ್ತು ಇಲ್ಲಿಗೆ ಭೇಟಿಯಿತ್ತ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆಯವರು ಅಮೂಲ್ಯ ಪುಸ್ತಕಗಳನ್ನು ಕಳಿಸಿಕೊಟ್ಟಿದ್ದಾರೆ.  ಈ ವರ್ಷವೂ ಕರ್ನಾಟಕಕ್ಕೆ ಬೇಟಿಯಿತ್ತ ಶ್ರೀ ಕಲ್ಬುರ್ಗಿಯವರು ಸಾವಿರಾರು ರುಪಾಯಿ ಮೌಲ್ಯದ ಪುಸ್ತಕಗಳನ್ನು ಹಾಗೂ ಮಾರುಕಟ್ಟೆಯಲ್ಲೂ ಲಭ್ಯವಿಲ್ಲದ ಅಪರೂಪದ ಕೃತಿಗಳನ್ನು ಹಲವು ಲೇಖಕರಿ೦ದ ಹಾಗೂ ಸರ್ಕಾರಿ ಮೂಲದಿ೦ದ ಸ೦ಗ್ರಹಿಸಿ ಕೂಟಕ್ಕಾಗಿ ತ೦ದಿದ್ದಾರೆ. ಇ೦ತಹ ಪ್ರಯತ್ನ ಎಲ್ಲಾ ದೇಶಗಳಲ್ಲೂ ನಡೆಯಬೇಕು.  ಬಹುಸ೦ಖ್ಯೆಯಲ್ಲಿ ಕನ್ನಡಿಗರು ವಾಸಿಸುವ ಗಲ್ಫ್ ದೇಶಗಳಲ್ಲಿ ಇದು ಇನ್ನಷ್ಟು ಯಶಸ್ವಿಯಾದೀತು.

ಮೃಣಾಲಿನಿ ಉದಯ ಕುಮಾರ್

Syndicate

Syndicate content