ಬೆಂಗಳೂರು - ಬೆಳೆದು ಬಂದ ಹಾದಿ
 •    •  
vidhana soudha.jpg

                             - ಸಂಗ್ರಹ : ಎಮ್.ಎಸ್.ರಾಮಚಂದ್ರ

     ಕರ್ನಾಟಕದ ರಾಜದಾನಿಯಾದ ಬೆಂಗಳೂರು ,ಸುಮಾರು ೭೪೦ ಚದರ ಕಿಲೋಮೀಟರ್ ವಿಸ್ತಾರವಾಗಿ ,ಸುಮಾರು ೬೫ ಲಕ್ಷ ಜನಸಂಖ್ಯೆಯಿಂದ ಕೂಡಿ. ಭಾರತದ ಬೃಹತ್ ಪಟ್ಟಣಗಳಲ್ಲಿ ಒಂದಾಗಿ, ವಾಣಿಜ್ಯ, ಕೈಗಾರಿಕೆ ಮತ್ತು  ಕಂಪ್ಯೂಟರ್ ಸಾಫ಼್ಟ್ ವೇರ್ ಕಂಪನಿಗಳ ಕೇಂದ್ರವಾಗಿ ಬೆಳೆದು ನಿಂತಿದೆ.  ಈ ನಗರದ ಅಸ್ತಿತ್ವ , ದೊರೆತ ಪುರಾವೆಗಳಿಗೆ ಅನುಸಾರವಾಗಿ ,  ಸಾವಿರ ವರುಷಕ್ಕೂ ಹಿಂದಿನದೆಂದು ತಿಳಿದು ಬರುತ್ತದೆ. ಬೆಂಗಳೂರಿಗೆ ಸೇರಿದ  ಬೇಗೂರಿನಲ್ಲಿ ಕಂಡುಬಂದ , ಸುಮಾರು ಸಾವಿರ ವರುಷದ ಹಿಂದಿನ, ಒಂದು ಶಿಲಾಬರಹದಲ್ಲಿ ಈ ಊರಿನ ಹೆಸರಿನ ಮೊದಲ ಉಲ್ಲೇಖನ ಕಂಡು ಬರುತ್ತೆ . ಈ ಶಿಲಾಬರಹದಲ್ಲಿ, ಈ ಪ್ರದೇಶ  ಆಗ "ಗಂಗರ" ಆಳ್ವಿಕೆಗೆ ಒಳಪಟ್ಟಿದ್ದು, ಇಲ್ಲಿ ನಡೆದ ಒಂದು ಯುದ್ದದ ಉಲ್ಲೇಖನವಿದ್ದು , ಈ ಊರಿನ ಹೆಸರನ್ನು "ಬೆಂಗಾವಲು ಊರು " ಎಂದು ನಮೂದಿಸಲಾಗಿದೆ. ಮುಂದೆ ಅದೇ "ಬೆಂಗಳೂರು" ಅಯಿತು. ಈ ಹೆಸರಿನ ಬಗ್ಗೆ ಇರುವ ಇನ್ನೊಂದು ಪ್ರತೀತಿಯಪ್ರಕಾರ, ಹೊಯ್ಸಳ ರಾಜನಾಗಿದ್ದ ವೀರಬಲ್ಲಾಳ ಬೇಟೆಯ ಸಮಯದಲ್ಲಿ ದಾರಿತಪ್ಪಿ , ಹಸಿವು ಬಾಯಾರಿಕೆಯಿಂದ ಅಲೆದಾಡುತ್ತಿದ್ದಾಗ , ಈ ಊರಿನ ಒಬ್ಬ ಬಡ ಹೆಂಗಸು ಅವನಿಗೆ ಸ್ವಲ್ಪ ಬೆಂದ ಕಾಳನ್ನು ಕೊಟ್ಟಳೆಂದೂ , ಅದರಿಂದ ಈ ಊರು "ಬೆಂದ ಕಾಳೂರು" ಎನಿಸಿಕೊಂಡಿತೆಂದೂ ,ಅದು ಕ್ರಮೇಣ "ಬೆಂಗಳೂರು" ಆಯಿತಂತೆ. ಮತ್ತೊಂದು ಪ್ರತೀತಿ ಪ್ರಕಾರ, ಕೆಂಪೇಗೌಡರ ಹೆಂಡತಿ  ಹೆಬ್ಬಾಳ ಕೆರೆಯ ಸಮೀಪದಲ್ಲಿದ್ದ ಹಳೆ ಬೆಂಗಳೂರು ಎಂಬ ಹಳ್ಳಿಯವಳಾದುದರಿಂದ , ಕೆಂಪೇಗೌಡರು ಈ ಊರಿಗೆ ಬೆಂಗಳೂರೆಂದು ಹೆಸರಿಸಿದರಂತೆ.  ಈ ಪ್ರತೀತಿಗಳಿಗೆ ಚರಿತ್ರೆಕಾರರ ಬೆಂಬಲವಿಲ್ಲ.   

ಗಂಗರ ನಂತರ ಈ ಪ್ರದೇಶ ಚೋಳರ ಆಳ್ವಿಕೆಗೆ ಒಳಗಾಗಿ ನಂತರ ಹೊಯ್ಸಳರ ಅಧೀನಕ್ಕೆ ಬಂತು.    ಆಧುನಿಕ ಬೆಂಗಳೂರು ರೂಪಗೊಂಡಿದ್ದು ಹದಿನಾರನೇ ಶತಮಾನದ ಮಧ್ಯದಲ್ಲಿ. ವಿಜಯನಗರ ರಾಜ್ಯದಲ್ಲಿ  ಪಾಳೇಗಾರರಾಗಿದ್ದ ಶ್ರೀ ಕೆಂಪೇಗೌಡರಿಂದ. ಅವರು ಈ ಊರಿನಲ್ಲಿ ೧೫೩೭ರಲ್ಲಿ ಒಂದು ಕೋಟೆಯನ್ನು ಕಟ್ಟಿಸಿ, ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಬೆಂಗಳೂರಿನ ನಾಕು ದಿಕ್ಕಿನಲ್ಲಿ ನಾಲ್ಕು ಗೋಪುರಗಳನು ಕಟ್ಟಿಸಿ ಅವುಗಳನ್ನು ಬೆಂಗಳೂರಿನ ಗಡಿಗಳಾಗಿ ಗುರುತಿಸಿದರು.    

ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಬೆಂಗಳೂರು ಅನೇಕ ಆಡಳಿತಗಳಿಗೆ ಒಳಪಟ್ಟು , ೧೬೩೮ ರಲ್ಲಿ ಬಿಜಾಪುರದ ಅರಸನು ಇದನ್ನು ವಶಪಡಿಸಿಕೊಂಡು ತನ್ನ ಸುಬೇದಾರ ಶಹಜಿ ಬೋಂಸ್ಲೆಗೆ ಜಹಗೀರಾಗಿ ಕೊಟ್ಟ. ೧೬೮೭ರಲ್ಲಿ ಮೊಘಲರು ಬೆಂಗಳೂರನ್ನು ಶಹಜಿಯ ಮಗನಿಂದ ಗೆದ್ದು ಅದನ್ನು ಮೈಸೂರು ಅರಸರಾಗಿದ್ದ ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗೆ ಮಾರಿದರು.    

 ಮೈಸೂರಿನ ಅರಸರು  ಹೈದರಾಲಿಗೆ ಬೆಂಗಳೂರನ್ನು ವಹಿಸಿಕೊಟ್ಟಾಗ , ಬೆಂಗಳೂರಿನ ಜಗತ್ ಪ್ರಸಿದ್ದವಾದ "ಲಾಲ್ ಬಾಗ್" ಉಧ್ಯಾನವನದ ರಚನೆ ಪ್ರಾರಂಭವಾಗಿ ಅವನ ಮಗ ಟಿಪ್ಪೂಸುಲ್ತಾನನ ಕಾಲದಲ್ಲಿ ಪೂರ್ಣಗೊಂಡಿತು. ಟಿಪ್ಪುಸುಲ್ತಾನನನ್ನು , ಬ್ರಿಟೀಷರು  ಸೋಲಿಸಿ ಮೈಸೂರು ದೇಶವನ್ನು ತಮ್ಮ ಸ್ವಾದೀನಕ್ಕೆ ತೆಗೆದುಕೊಂಡಮೇಲೆ , ತಮ್ಮ ಸೈನ್ಯ ಶಿಬಿರವನ್ನು ಬೆಂಗಳೂರಿನ ಉತ್ತರ ಬಾಗದಲ್ಲಿ ನೆಲೆಗೊಳಿಸಿದಾಗ, ಅದು "ಬೆಂಗಳೂರು ಕಂಟೊನ್ಮೆಂಟ್" ಎಂದು ಕರೆಸಿಕೊಂಡಿತು. ಬ್ರಿಟೀಷರು ಕಂಟೋನ್ಮೆಂಟ್ ಜಾಗದ ಆಡಳಿತವನ್ನು  ತಮ್ಮ ವಶದಲ್ಲಿಟ್ಟುಕೊಂಡು ಬೆಂಗಳೂರು ಪೇಟೆಯ ಬಾಗವನ್ನು ಮೈಸೂರು ಅರಸರ ಆಡಳಿತಕ್ಕೆ ಬಿಟ್ಟುಕೊಟ್ಟರು. ಕಂಟೋನ್ಮೆಂಟ್ ಸ್ಥಳ ಅಭಿವೃದ್ದಿಗಾಗಿ, ತಮಿಳುನಾಡಿನಿಂದ ಮತ್ತು ಉತ್ತರದ ರಾಜ್ಯಗಳಿಂದ ಜನಗಳನ್ನು ಕರೆಸಿಕೊಂಡರು. ಹೀಗಾಗಿ ಕಂಟೋನ್ಮೆಂಟ್ ನಲ್ಲಿ ತಮಿಳು ನಾಡಿನಿಂದ ಮತ್ತು ಉತ್ತರ ರಾಜ್ಯಗಳಿಂದ ಬಂದ ಜನ ನೆಲೆಸುವಂತಾಯಿತು.    

 ೧೮೩೧ ರಲ್ಲಿ  ಮೈಸೂರು ರಾಜ್ಯದ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಲಾಯಿತು. ೧೮೬೪ ರಲ್ಲಿ ರೈಲು ಮಾರ್ಗ ಮತ್ತು ಟೆಲೆಗ್ರಾಫ಼್ ವ್ಯವಸ್ಥೆ   ಬೆಂಗಳೂರಿಗೆ ಬಂದು ಇದರ ಪ್ರಾಮುಖ್ಯತೆ ಹೆಚ್ಚಿತು. ಅದೇ ವರ್ಷ "ಅಠಾರ ಕಚೇರಿ" ಕಟ್ಟಡವು ನಿರ್ಮಾಣವಾಗಿ ಸರಕಾರದ ಕಚೇರಿಗಳ ಕೇಂದ್ರವಾಯಿತು. ೧೮೬೭ ರಲ್ಲಿ ಅರಸರ ಬೆಂಗಳೂರು ಅರಮನೆಯ ಕಟ್ಟಡದ ನಿರ್ಮಾಣವಾಯಿತು.    ೧೮೯೮ ರಲ್ಲಿ ಬಂದ ಬಾರಿ ಪ್ಲೇಗ್ ಕಾಯಿಲೆಯು , ಬೆಂಗಳೂರಿನ ಬಹಳ ಜನಗಳನ್ನು ಬಲಿ ತೆಗೆದುಕೊಂಡಿತು.   

  ೧೯೨೨ ರಲ್ಲಿ ಕೃಷ್ನರಾಜ ಒಡೆಯರ್ ರವರ ಆಡಳಿತದ ರಜತ ಮಹೋತ್ಸವದ ಅಂಗವಾಗಿ ಅನೇಕ ಸಾರ್ವಜನಿಕ ಕಟ್ಟಡಗಳು ಮತ್ತು ಉಧ್ಯಾನವನಗಳು ರಚಿತವಾದವು.      ೧೯೪೭ ರಲ್ಲಿ ಭಾರತ ಸ್ವತಂತ್ರವನ್ನು ಗಳಿಸಿದಮೇಲೆ ಬೆಂಗಳೂರು ಅನೇಕ ಬೃಹತ್ ಕೈಗಾರಿಕೆಗಳಿಗೆ ನೆಲೆಯಾಗಿ ಬೆಂಗಳೂರಿನ ವಿಸ್ತೀರ್ಣ ಮತ್ತು ಜನ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು.೧೯೪೯ ರಲ್ಲಿ ಬೆಂಗಳೂರು ನಗರ ಸಭೆ ಮತ್ತು ಬೆಂಗಳೂರು ಕಂಟೊನ್ಮೆಂಟ್ ನಗರ ಸಭೆಗಳು ಒಂದಾಗಿ ಬೆಂಗಳೂರು ಸಿಟಿ ಕಾರ್ಪೊರೇಶನ್ ಆಗಿ ಅದು ಮುಂದೆ ಬೆಂಗಳೂರು ಮಹಾನಗರ ಪಾಲಿಕೆಯೆಂದು ಕರೆಸಿಕೊಂಡಿತು. ೧೯೫೧ ರಲ್ಲಿ, ಮಾನ್ಯ ಕೆಂಗಲ್ ಹನುಮಂತಪ್ಪನವರು ಕರ್ನಾಟಕದ ಮುಖ್ಯ ಮಂತ್ರಿ ಯಾಗಿದ್ದಾಗ ,  " ವಿಧಾನ ಸೌಧ" ದ ನಿರ್ಮಾಣ ಪ್ರಾರಂಬವಾಗಿ ೧೯೫೬ ರಲ್ಲಿ ಸಿದ್ದವಾದಾಗ. ಅಠಾರಾ ಕಚೇರಿಯಿಂದ ಸರ್ಕಾರಿ ಆಫ಼ೀಸುಗಳು ವಿಧಾನಸೌಧಕ್ಕೆ ವರ್ಗಾಯಿಸಲ್ಪಟ್ಟು  ಅಠಾರ ಕಚೇರಿಯು ಹೈ ಕೋರ್ಟ್ ಆಗಿ ಪರಿವರ್ತನೆಗೊಂಡಿತು.  ಬೆಂಗಳೂರಿನ ಹಿತಕರ ವಾತಾವರಣ, ಇಲ್ಲಿಯ ವಿದ್ಯಾಕೇಂದ್ರಗಳು , ಕೈಗಾರಿಕೆಗಳು ಭಾರತದ ಎಲ್ಲೆಡೆಯಿಂದ ಜನ ಬಂದು ಇಲ್ಲಿ ನೆಲಸುವಂತಾಯಿತು. ೧೯೬೦ ರ ದಶಕದಲ್ಲಿ ಜಯನಗರ ಬಡಾವಣೆಯು ಅಭಿವೃದ್ದಿ ಹೊಂದಿವಿಶಾಲವಾದ ರಸ್ತೆಗಳಿಂದ , ಉಧ್ಯಾನವನಗಳಿಂದ ಕೂಡಿ ಭಾರತ ದೇಶದಲ್ಲೇ ಅತ್ಯಂತ  ಸುವ್ಯವಸ್ಥಿತ,ದೊಡ್ಡ ಬಡಾವಣೆಯೆಂಬ ಹೆಗ್ಗಳಿಕೆಯನ್ನು ಪಡೆದಿದೆ.  ೧೯೮೦ ರಿಂದ ಈಚೆಗೆ ಬೆಂಗಳೂರಿನಲ್ಲಿ ನೆಲೆಗೊಂಡ ಕಂಪ್ಯೂಟರ್ ಸಾಫ಼್ಟ್ವೇರ್ ಕಂಪನಿಗಳಿಂದ ಬೆಂಗಳೂರು ಮತ್ತಷ್ಟು ಪ್ರಸಿದ್ಧಿಹೊಂದಿ ವಿದೇಶಿಯರ ಬೇಟಿಗಳು ಹೆಚ್ಚಿದವು. ಇದರಿಂದಾಗಿ ದೊಡ್ಡ ಹೋಟೆಲ್ ಗಳ ನಿರ್ಮಾಣವಾಯಿತು.     

  ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರು , ಸುತ್ತಮುತ್ತಲಿನ ಹಳ್ಳಿಗಳೆಲ್ಲವನ್ನೂ , ಅನೇಕ ಕೆರೆಗಳನ್ನೂ ಕಬಳಿಸುತ್ತಾ ,ಬೃಹದಾಕಾರವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ಆದರೆ ಈ ಬೆಳವಣಿಗೆ ಒಂದು ಕ್ರಮಬದ್ದವಾಗಿರದೆ ಆನೇಕ ತೊಂದರೆಗಳಿಗೆ ಕಾರಣವಾಗಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತವಾಗಿ ಸಂಚಾರಕ್ಕೆ ತೊಂದರೆಯೂ , ವಾತಾವರಣದ ಕಲುಷಣೆಗೆ ಕಾರಣವೂ ಆಗಿದೆ.  ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಯೂ ಉಲ್ಬಣವಾಗಿದೆ. ಕರ್ನಾಟಕ ಸರ್ಕಾರ ಅಲ್ಲಲ್ಲಿ ಫ಼್ಲೈ ಓವರ್ ಗಳನ್ನು ನಿರ್ಮಿಸಿ ಸಂಚಾರದ ತೊಂದರೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಹೊಸದಾಗಿ ಪ್ರಾರಂಭವಾಗಿರುವ "ಮೆಟ್ರೋ ರೈಲ್"  ಯೋಜನೆ ಕಾರ್ಯಗತವಾದಮೇಲೆ ಸಾರ್ವಜನಿಕರ ಸಂಚಾರದ ತೊಂದರೆಗಳನ್ನು ಕಡಿಮೆ ಮಾಡುವುದೆಂದು ಆಶಿಸಲಾಗಿದೆ. ಹೆಚ್ಚಿರುವ ವಿಮಾನಗಳ ಏರಿಳಿತಗಳಿಗೆ ಅನುಕೂಲವಾಗುವಂತೆ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿತವಾಗುತ್ತಿದ್ದು ಅದು ೨೦೦೮ ರ ಮಧ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಸುತ್ತಮುತ್ತಲಿನ ನಗರದ ಬಡಾವಣೆಗಳನ್ನು ಸೇರಿಸಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಯು ೨೦೦೬ ರಲ್ಲಿ "ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ " ಯಾಗಿ ಪರಿವರ್ತನೆಗೊಂಡಿದೆ. ಈ ಸಂಸ್ಥೆ ಇಲ್ಲಿನ ನಾಗರಿಕರ ಆಶೆಗಳಿಗೆ ಸ್ಪಂದಿಸಿ ರಸ್ತೆ, ಕುಡಿಯುವ ನೀರು ಮತ್ತು ಮತ್ತಿತರ ಪ್ರಾಥಮಿಕ ಸೌಕರ್ಯಗಳನ್ನು ಒದಗಿಸಿಕೊಡುತ್ತದೆಂದು ಆಶಿಸೋಣ.      

 

- ಸಂಗ್ರಹಕಾರರು : ಎಮ್.ಎಸ್.ರಾಮಚಂದ್ರ ,  
೨೪, ೨ನೇ ಅಡ್ಡ ರಸ್ತೆ
ಜಿ.ಹೆಚ್. ಲೇ‌ಔಟ್ , 
ಜಯನಗರ ೩ನೇ ಬ್ಲಾಕ್(ಪೂರ್ವ),
ಬೆಂಗಳೂರು.                

 

Such a interesting and

Such a interesting and informative massage that every Bangalorians should know.

Syndicate

Syndicate content