ಪ್ರಿಯ ಕನ್ನಡ ಕಲಿಗಳೆ
ಕನ್ನಡ ಕಲಿಯ ಜೂನ್ ಸಂಚಿಕೆ ಇಲ್ಲಿದೆ
ನಿಮ್ಮ ಕನ್ನಡ ಕೂಟ, ಗೆಳೆಯರು, ಮತ್ತು ಆಸಕ್ತರೊಂದಿಗೆ ಈ ಪತ್ರಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳಿ. ಕನ್ನಡ ಕಲಿಗೆ ಕಾವೇರಿ ಮತ್ತು ಕಸ್ತೂರಿ ಎಂಬ ಎರಡು ಗಣಕಗಳು ಬಂದಿವೆ. ಈ ಪುಟ್ಟ ಗಣಕಗಳು ತಾಂತ್ರಿಕ ವಿಸ್ಮಯ ಎನ್ನಬಹುದು. ಮೊದಲ ಐದು ನಿಮಿಷಗಳಲ್ಲೆ ಫೊಟೊ ಸಹಿತ ಕನ್ನಡ ಹಾಡು ತರಗತಿಯ ಚಟುವಟಿಕೆಯನ್ನು ಮುದ್ರಿಸಿಕೊಳ್ಳಲಾಯಿತು. ಇವುಗಳಿಗೆ ವಿವಿಧ ಕನ್ನಡ ತಂತ್ರಾಂಶಗಳನ್ನು ಅಳವಡಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮುಂದಿನ ಗುರಿ. ನಿಮ್ಮ ಸಹಾಯ ಬೇಕು. ಆಸಕ್ತಿ ಇದ್ದರೆ ಸಂಪರ್ಕಿಸಿ. ಶಾಂತ ಸಾಗರ ತೀರದ ಮಾಲಿಬುದಲ್ಲಿ ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿಗಳ ವಿಜೃಂಭಣೆಯ ಕಲರವ ಸಂಭ್ರಮದ ಅಲೆಗಳನ್ನೆ ಉಕ್ಕಿಸಿತ್ತು. ಎಲ್ಲ ಅಧ್ಯಾಯಗಳ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಪಾಲಕರು ಒಂದೆಡೆ ಸೇರಿ ಸಡಗರಿಸಿದ ಕನ್ನಡ ಕಲಿ ದಿನ ಅದಾಗಿತ್ತು. ನಿಮಗಾಗಿ ಇಲ್ಲಿದೆ ಚಿತ್ರವರದಿ. ಬೇಸಿಗೆ ಹತ್ತಿರವಾಗುತ್ತ ಕಾವು ಏರುತ್ತಿದೆ. ಶಾಲೆಗೆ ರಜ! ನಿಜ. ಆದರೆ ಕನ್ನಡ ಕಲಿ ನಿರಂತರ. ನೀರು ಮಜ್ಜಿಗೆ ಕುಡಿದು ಹಾಯಾಗಿ ಮರದಡಿ ನೆರಳಲ್ಲಿ ಒರಗುವ ಈ ಸಮಯದಲ್ಲಿ ಮಾತ್ರ ಆತ್ಮನಿರೀಕ್ಷಣೆಗೆ ಅವಕಾಶ. ಭಾಷೆ ಕಲಿಸುವಲ್ಲಿ ಕೆ.ಟಿ. ಗಟ್ಟಿ ಅವರ ವಿಚಾರಗಳನ್ನು ಓದಿ. ಇವನ್ನು ಈಗಾಗಲೆ ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದೇವೆ? ಕನ್ನಡ ಸಂವಹನಕ್ಕಾಗಿ ಸೀಮಿತ ಸಮಯದ ಈ ವಾತಾವರಣದಲ್ಲಿ ಎಷ್ಟು ಸಾಧ್ಯ? ನಿಮ್ಮ ಅನುಭವ ಪ್ರತಿಕ್ರಿಯೆಗಳು ಬೇಕು. ಈ ಲೇಖನಗಳೊಂದಿಗೆ ಹಲವು ಸ್ವಾರಸ್ಯಕರ ಸುದ್ದಿಗಳನ್ನು ಈ ತುತ್ತೂರಿಯಲ್ಲಿ ಓದಿ. ನಿಮ್ಮ ಅಭಿಪ್ರಾಯ, ವಿಚಾರ, ಸಲಹೆಗಳನ್ನು ಅವಶ್ಯವಾಗಿ ತಿಳಿಸಿ. ಎಂದಿನಂತೆ ನಿಮ್ಮ ಸಲಹೆ ಸೂಚನೆ ಅನಿಸಿಕೆಗಳನ್ನು ಅಪೇಕ್ಷಿಸುತ್ತೇನೆ. ಮುಂದಿನ ಸಂಚಿಕೆಗೆ ನೀವೂ ಒಂದು ಲೇಖನ ಯಾಕೆ ಬರೆಯಬಾರದು? ಬೇಸಿಗೆ ರಜದ ಮಜ ನಿಮ್ಮದಾಗಲಿ!
ನಿಮ್ಮವ
ವಿಶೇಶ್ವರ ದೀಕ್ಷಿತ
(ಕನ್ನಡ ಕಲಿ ಆವೃತ್ತಿಯನ್ನು ಪ್ರತಿ ತಿಂಗಳು ನೇರವಾಗಿ ಪಡೆಯಲು ಈ ವಿಳಾಸವನ್ನು ಸಂಪರ್ಕಿಸಿ: kannada.kali@yahoo.com
(ತುತ್ತೂರಿಯ ಜೂನ್ ತಿಂಗಳ ಕನ್ನಡ ಕಲಿ ಆವೃತ್ತಿಯನ್ನು ಸಂಪರ್ಕಿಸಿದವರಿಗೆ ಇ ಮೈಲ್ ಮೂಲಕ ಕಳುಹಿಸಿಕೊಡುತ್ತೇವೆ.)









ಕನ್ನಡ ಕಲಿ
ಕನ್ನಡ ಕಲಿ ಪತ್ರಿಕೆಯನ್ನು ನಿಮ್ಮ ಜಾಲತಾಣದಲ್ಲಿ ಸೇರಿಸಿದ್ದಕ್ಕೆ ತುಂಬ ಧನ್ಯವಾದಗಳು. ಅಲ್ಲಲ್ಲಿ ಕನ್ನಡ ಕಲಿ ಅಲ್ಲಲ್ಲಿ ಬೆಳೆಯಲು ಇದು ಚಾಲನೆ ಕೊಡುವುದರಲ್ಲಿ ಸಂದೇಹವಿಲ್ಲ. ಸೂಕ್ತ
ಲೇಖನಗಳನ್ನು ಬರೆಯಲು, ಹೊರನಾಡಿನಲ್ಲಿ ಕನ್ನಡ ಕಲಿ(ಸು)ವಲ್ಲಿ ತಮ್ಮ ಅನುಭವ
ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಮತ್ತು ಸ್ಥಳೀಯ ಕನ್ನಡ ಕಲಿ ಸುದ್ದಿಗಳನ್ನು ಈ
ಮೂಲಕ ಬಿತ್ತರಿಸಲು ಕನ್ನಡಧ್ವನಿ ಓದುಗರಿಗೆ ಮತ್ತೊಮ್ಮೆ ಅಹ್ವಾನ.
samparka: kannadakali at yahoo dot com.
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ
ಕನ್ನಡ ಕಲಿ ದಿನದ ಸು೦ದರ ಚಿತ್ರಗಳನ್ನು ನೋಡಿ ಸ೦ತಸವಾಯಿತು. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಾಶಯಗಳು. ಕನ್ನಡ ಕಲಿ ಪತ್ರಿಕೆಯ ಇಮೇಲ್ ವಿಳಾಸವನ್ನು ಪ್ರಕಟಿಸಿದ್ದಕ್ಕಾಗಿ ಕನ್ನಡಧ್ವನಿಗೆ ಕೃತಜ್ಞತೆಗಳು.
ಮೃಣಾಲಿನಿ ಉದಯ ಕುಮಾರ್