ದ್ವಿ-ತ್ರಿವಳಿ ಮಕ್ಕಳ ತಾಯಿ - ಮ್ಯಾರಥಾನ್ ಓಟಗಾರ್ತಿ
 •    •  
supermom.jpg

                              -ಅರ್ಶದ್ ಹುಸೇನ್ ಎಂ. ಹೆಚ್.

ಇದೇನೋ ಹೊಸ ಪದ ಪ್ರಯೋಗವಾಗಿದೆಯೆಲ್ಲಾ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಜೆನ್ನಿ ಮಾಸ್ಖೆಯವರು ಜೂನ್ ೧೧-೨೦೦೭ ರಂದು (ಸುಮಾರು ಒಂದು ವರ್ಷದ ಹಿಂದೆ) ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಆರು ಮಕ್ಕಳನ್ನು ಏನೆನ್ನುವುದು? ಇಂಗ್ಲಿಷಿನಲ್ಲಾದರೆ ಸೆಕ್ಟುಪ್ಲೆಟ್ ಎಂಬ ಪದವಿದೆ. ಆದರೆ ಕನ್ನಡದಲ್ಲಿ? ಹಾಗಾಗಿ ದ್ವಿ-ತ್ರಿವಳಿ ಎಂಬ ಪದವನ್ನು ಉಪಯೋಗಿಸಬೇಕಾಯ್ತು. ಅದಿರಲಿ, ಒಂದು ಮಗುವಾದ ಬಳಿಕ ಸಂಪೂರ್ಣವಾಗಿ ಸುಸ್ತಾಗಿ ತಮ್ಮ ಹಿಂದಿನ ಅಭ್ಯಾಸಗಳಿಗೆ ತಿಲಾಂಜಲಿ ನೀಡುವ ತಾಯಂದಿರು ಜೆನ್ನಿಯವರಿಂದ ಕಲಿಯಬೇಕಾದುದು ಬಹಳಷ್ಟಿದೆ.  ಮದುವೆಗೂ ಮೊದಲು ಉತ್ತಮ ಕ್ರೀಡಾಪಟುವಾಗಿದ್ದ ಆಕೆ ಈಗ ೨೬.೨ ಮೈಲು ಮ್ಯಾರಥಾನ್ ರೇಸಿನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಆರು ಮಕ್ಕಳ ತಾಯಿ ರೇಸಿನಲ್ಲಿ?  ಆಕೆಗೆ ಮಕ್ಕಳ ಆರೈಕೆಯಿಂದ ಸಮಯವೆಲ್ಲಿ ಸಿಗುತ್ತದೆ ಎಂದಿರಾ? ಆಕೆಗೂ ಇದೇ ಆತಂಕವಿತ್ತು.  ಆದರೆ ಆರೂ ಮಕ್ಕಳಿಗೆ ತಮ್ಮ ತಾಯಿಗೆ ಅಭ್ಯಾಸ ಮಾಡಲು ಸಮಯ ನೀಡಬೇಕೆಂಬ ಪರಿಜ್ಞಾನ ಹೇಗೆ ಬಂದಿತ್ತೋ ಏನೋ, ಸಂಜೆಕಾಲ ಎಲ್ಲವೂ ಒಟ್ಟಿಗೇ ಮಲಗಿಕೊಳ್ಳುವುದರಿಂದ ತನಗೆ ಅಭ್ಯಾಸ ಮಾಡಿಕೊಳ್ಳಲು ಎರೆಡು ಘಂಟೆ ಸಮಯ ಸಿಗುತ್ತದೆ ಎನ್ನುತ್ತಾರೆ ಜೆನ್ನಿ. 

ಬ್ರಯಾನ್ ಮಾಸ್ಖೆ ಹಾಗೂ ಜೆನ್ನಿ ಮಾಸ್ಖೆ ದಂಪತಿಗಳ ಮಕ್ಕಳಾದ ಸಾವನ್ನಾ, ಕೋಲ್, ಗ್ರಾಂಟ್, ಮೋಲಿ, ಬೈಲಿ ಹಾಗೂ ಬ್ಲೇಕ್ ಒಂದೇ ದಿನ ಹುಟ್ಟಿದ್ದರು.  ಹೆಚ್ಚಿನ ಅವಳಿ ಮಕ್ಕಳಂತೆ ರಾದ್ದಾಂತ ಮಾಡುವುದಾಗಲಿ, ರಚ್ಚೆ ಹಿಡಿಯುವುದಾಗಲಿ ಮಾಡುವುದಿಲ್ಲ ಎಂದು ಮಕ್ಕಳ ಅಜ್ಜ ಅಜ್ಜಿ ಲಾರಾ ಹಾಗೂ ಬಿಲ್ ಮಾಸ್ಖೆಯವರು ಸಂಭ್ರಮದಿಂದ ತಿಳಿಸುತ್ತಾರೆ.

ತಮ್ಮ ಮಕ್ಕಳು ಸೌಮ್ಯವಾಗಿದ್ದು ಸಹಕರಿಸುತ್ತಿರುವುದರಿಂದಲೇ ತಾವು ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಸಾಧ್ಯವಾಗಿದೆ ಎಂದು ಜೆನ್ನಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

ಕಳೆದ ವರ್ಷ ಆರು ಮಕ್ಕಳಿಗೆ ಜನ್ಮ ನೀಡುವ ಹೊತ್ತಿನಲ್ಲಿ ವೈದ್ಯರಿಗೆ ಅತೀವ ಕಷ್ಟಕರವಾಗಿದ್ದು ಜೆನ್ನಿಯವರು ಸರಿಸುಮಾರು ಹೃದಯಾಘಾತದಿಂದ ಕೊಂಚ ಅಂತರದಿಂದ ತಪ್ಪಿಸಿಕೊಂಡಿದ್ದರು.  ಆಗ ಆರು ಮಕ್ಕಳ ಪರಿಪಾಲನೆ ಹೇಗೆ? ಎಂದು ತನಗೆ ಅತಿ ದುಗುಡವಾಗಿತ್ತು. ಆದರೆ ಒಂದು ವರ್ಷದ ಬಳಿಕ ಮ್ಯಾರಥಾನ್ ಓಟದಲ್ಲಿ ಗೆಲುವು ಸಾಧಿಸಬಲ್ಲೆ ಎಂದು ಆಕೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

ಅಂತೆಯೇ ಕಳೆದ ಮೇ ೩೧ ರಂದು ಸ್ಯಾನ್ ಡೀಗೋ ನಗರದಲ್ಲಿ ನಡೆದ ರಾಕ್ ಎನ್ ರೋಲ್ ಮ್ಯಾರಥಾನ್ ನಲ್ಲಿ ಸುಮಾರು ಐದೂವರೆ ಘಂಟೆ ಓಡಿ ೨೬.೨ ಮೈಲಿ ದೂರ ಕ್ರಮಿಸಿಯೇ ಬಿಟ್ಟಿದ್ದಾರೆ. ಆಕೆಯ ಪತಿಯೂ ಜೊತೆಯಲ್ಲಿ ಓಡುತ್ತಿದ್ದುದು ಉತ್ತೇಜನ ನೀಡಿತು ಎಂದು ಆ ಬಳಿಕ ಅವರು ಉದ್ಗರಿಸಿದ್ದಾರೆ.

ಆರು ಮಕ್ಕಳ ಮಹಾತಾಯಿಗೆ ಅಭಿನಂದನೆ ಸಲ್ಲಿಸೋಣ ಅಲ್ಲವೇ.

Syndicate

Syndicate content