ರ೦ಗವಲ್ಲಿ
- ಅರುಣ್ ಕುಮಾರ್ ಹೆಚ್ ಎಸ್.
ನನ್ನ ಮನದ೦ಗಳದಲ್ಲಿ ನಗುತಿಹುದು ರ೦ಗವಲ್ಲಿ
ಮೂಡಿಸಿದ ಜಾಣೆ ಎಲ್ಲಿಹಳೊ ಕಾಣೆ.
ತೆ೦ಗು ಗರಿಗಳ ನಡುವೆ ತು೦ಬು ಚ೦ದಿರನ೦ತೆ
ಬೀರುತ್ತ ಬೆಳಕ ಮನದೊಳಗೆ
ತು೦ಬುತ್ತ ಒಲವ ಹರಿಸುತ್ತ ನಲಿವ
ಈ ಬಾಳ ತು೦ಬು ಹೊಳೆಗೆ.
ಸಾವಿರ ಸಾವಿರ ಚಿತ್ತ ಚಿತ್ತಾರ ಮಾಡಿ
ಸವಿಗನಸಿನ ಉಡುಗೊರೆಯಿತ್ತು
ಮರೆಯಾಗಿ ಹೋದಳವಳು
ಕಡಲಿನಾಳದ ಮುತ್ತು.
ಮನದಲ್ಲಿ ಸವಿ ತು೦ಬಿ ಕ೦ಗಳಲಿ ಪ್ರೇಮ ತು೦ಬಿ
ಕಾದಿದ್ದೆನು ನಾ ನಿನ್ನೊಲವ ದು೦ಬಿ
ಮನದಲ್ಲಿ ಕಹಿ ತು೦ಬಿ ಬದುಕಲ್ಲಿ ಕತ್ತಲೆ ತು೦ಬಿ
ದೂರವಾದೆಯಲ್ಲ ನೀ
ಈ ಬಾಳಲ್ಲಿ ವ್ಯಥೆ ತು೦ಬಿ








