ನೂರು ವರ್ಷ ತುಂಬಿದ ಟೀ ಬ್ಯಾಗ್
 •    •  
TetleyTea385_351646a.jpg

                                 -ಅರ್ಶದ್ ಹುಸೇನ್ ಎಂ. ಹೆಚ್ 

ನಾವೆಲ್ಲ ಸಾಮಾನ್ಯವಾಗಿ ಬಳಸುತ್ತಿರುವ ಟೀಬ್ಯಾಗ್ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಸುಮಾರು ನೂರು ವರ್ಷ ಹಿಂದೆ ಟೀ ಮಾಡಲು ಸಮಯವಿಲ್ಲದಿದ್ದಾಗ ಕೂಡಲೇ ಟೀ ತಯಾರಿಸಿಕೊಂಡು ಕುಡಿಯಲು ಟೀ ಬ್ಯಾಗ್ ಗಳನ್ನು ತಯಾರಿಸಿದ್ದು ಕೇವಲ ಕಾಕತಾಳೀಯವಾಗಿ ಎಂದರೆ ನಂಬುತ್ತೀರಾ?

೧೯೦೮ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಥೋಮಸ್ ಸಲೈವನ್ ಎಂಬ  ವರ್ತಕ ಟೀಪುಡಿಯನ್ನು ಮಾರಾಟ ಮಾಡುತ್ತಿದ್ದ.  ತನ್ನ ಬಳಿಯಿರುವ ದಾಸ್ತಾನಿನ ಸ್ಯಾಂಪ ತೋರಿಸಲು ಹಿಂದೆ ಕಾಗದದ ತೊಟ್ಟೆಯೊಂದನ್ನು ಬಳಸಲಾಗುತ್ತಿತ್ತು. ಆದರೆ ಕಾಗದದ ಲಕೋಟೆ ಹರಿದು ಟೀಪುಡಿ ಚೆಲ್ಲುತ್ತಿದ್ದುದನ್ನು ತಪ್ಪಿಸಲು ಸಲ್ಲೈವನ್ ಹೊಸ ಮಾರ್ಗವೊಂದನ್ನು ಕಂಡುಕೊಂಡ. ಸುರಕ್ಷತೆಯ ದೃಷ್ಟಿಯಿಂದ ರೇಶ್ಮೆ ಬಟ್ಟೆಯಿಂದ ಮಾಡಿದ ಚಿಕ್ಕ ಲಕೋಟೆಯೊಂದಾರಲ್ಲಿ ಟೀಪುಡಿಯನ್ನು ಹಾಕಿ ಗ್ರಾಹಕರಿಗೆ ಕಳುಹಿಸಿದರೆ ಟೀಪುಡಿ ಸುರಕ್ಷಿತವಾಗಿ ತಲುಪಬಹುದೆಂದು ಲೆಕ್ಕ ಹಾಕಿ ಹಾಗೆಯೇ ಮಾಡಿದ.

ಆದರೆ ಗ್ರಾಹಕರು ಈ ರೇಶ್ಮೆ ಬಟ್ಟೆಯ ಲಕೋಟೆಯನ್ನು ತೆರೆದು ಟೀಪುಡಿಯನ್ನು ಬಿಸಿನೀರಿಗೆ ಹಾಕಿ ಟೀಮಾದಿಕೊಂಡು ಕುಡಿಯುವ ಬದಲು ಇಡಿಯ ರೇಶ್ಮೆಯ ಲಕೋಟೆಯನ್ನೇ ನೀರಿಗೆ ಹಾಕಿಕೊಂಡು ಟೀ ಮಾಡಿಕೊಳ್ಳುತ್ತಿದ್ದರು. 

ಆ ಬಳಿಕ ಈ ವಿಧಾನದಿಂದಲೂ ಟೀ ತಯಾರಿಸಬಹುದೆಂದು ಅರಿತ ಸಲೈವನ್ ತಕ್ಷಣ ತಲೆ ಓಡಿಸಿದ. ಕ್ಷಣಾರ್ಧದಲ್ಲಿ ಟೀ ಮಾಡಿಕೊಳ್ಳಬಹುದೆಂದು ಪ್ರಚಾರ ನೀಡಿ ರೇಶ್ಮೆ ಬಟ್ಟೆಯಲ್ಲಿ ಪ್ಯಾಕ್ ಮಾಡಿದ ಟೀ ಬ್ಯಾಗ್ ಗಳನ್ನೇ ಮಾರಾಟ ಮಾಡಲು ಶುರುಮಾಡಿದ. ಫಲಿತಾಂಶ ಅದ್ಭುತವಾಗಿತ್ತು. ಅಮೇರಿಕನ್ನರು ಬೇರೆ ಟೀಪುಡಿಗಳಿಗಿಂತ ಸಲೈವನ್ ನ ಟೀಪುಡಿಯನ್ನೆ ಹೆಚ್ಚಾಗಿ ಬಳಸಲು ತೊಡಗಿದರು.  ಆ ಬಳಿಕ ನಿಧಾನವಾಗಿ ಬದಲಾವಣೆ ಪಡೆಯುತ್ತಾ ಇಂದಿನ ಸೆಲ್ಯುಲೋಸ್ ಪೇಪರ್ ಟೀಬ್ಯಾಗ್ ರೂಪ ಪಡೆದಿದೆ.

ಆದರೆ ಇದು ಅತಿ ಜನಪ್ರಿಯವಾಗಿರುವುದು ಯೂರೋಪಿನಲ್ಲಿ. ಯೂರೋಪಿನ ನೂರಾಮೂವತ್ತು ಮಿಲಿಯನ್ ಜನರಲ್ಲಿ ಶೇಖಡಾ ತೊಂಭತ್ತಾರು ಜನರು ಟೀ ಬ್ಯಾಗ್ ಅನ್ನೇ ಟೀ ಮಾಡಿಕೊಳ್ಳಲು ಉಪಯೋಗಿಸುತ್ತಾರೆ. ಇತ್ತೀಚೆಗೆ ಭಾರತದಲ್ಲಿಯೂ ಜನಪ್ರಿಯತೆ ಕಂಡುಕೊಳ್ಳುತ್ತಿದೆ. ಯು.ಎಇ.ಯಲ್ಲಂತೂ ಯಾವುದೇ ಚಾದಂಗಡಿಗೆ ಹೋಗಿ ಚಾ ಕೇಳಿದರೆ ಸಾದಾ ಅಥವಾ ಲಿಪ್ಟನ್ ಎಂದು ಕೇಳುತ್ತಾರೆ. ಲಿಪ್ಟನ್ ಎಂದರೆ ಟೀ ಬ್ಯಾಗ್ ಹಾಗಿ ಮಾಡಿದ್ದು ಅಂತ ಅರ್ಥ. ಆ ಟೀ ಲಿಪ್ಟನ್ ಆಗಿರುವ ಅಗತ್ಯವಿಲ್ಲ.

Syndicate

Syndicate content