- ಶ್ರೀನಾಥ್ ಭಲ್ಲೆ.
ಹೆಸರಿನಲ್ಲೇನಿದೆ ಎಂದು ಕೇಳುವುದು ಬಹಳ ಹಳೆಯ ವಿಚಾರ. ಈ ಮುನ್ನ ನಾನೇ ಹಲವಾರು ಉಲ್ಲೇಖಗಳೊಡನೆ ಈ ವಿಚಾರವನ್ನು ಹೇಳಿದ್ದೆ. ಈಗ ಹೊಸ ರೀತಿಯಲ್ಲಿ ಆ ವಿಚಾರವನ್ನು ರಾಜಕೀಯ ವ್ಯಕ್ತಿಗಳ ಹೆಸರುಗಳ ಮೇಲೆ ಪ್ರಯೋಗ ಮಾಡಿದ್ದೇನೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೆಡ್ಡಿ ಸಹೋದರರಿಂದ ಹಣ ಪಡೆದು ಅವರಿಗೇ ಸೀಟು ಕೊಟ್ಟಿದ್ದಾರೆ ಎಂಬ ಅಪವಾದವನ್ನು ಹೊತ್ತಿರುವ ಬೆನ್ನ ಹಿಂದೆಯೇ, ರೆಡ್ಡಿ ಸಹೋದರರು ಯಡಿಯೂರಪ್ಪ ಅವರ ಹೆಸರನ್ನು 'ರೆಡಿಯೂರಪ್ಪ' ಎಂದು ಬದಲಿಸಿಕೊಳ್ಳುವಂತೆ ಒತ್ತಾಯಪಡಿಸುತ್ತಿದ್ದಾರೆ ಎಂಬ ಇನ್ನೊಂದು ವರದಿ ದಟ್ಟವಾಗಿ ಹರಡಿದೆ.. ಈ ವಿಷಯ ತಿಳಿದು ಪಕ್ಷದ ಕಾರ್ಯಕರ್ತರು 'ರೆಡ್' ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.... ಈ ವಿಷಯವಾಗಿ ಯಡ್ಡಿ ಅವರನ್ನು ಭೇಟಿಯಾಗಿ ಅವರ ಅಭಿಪ್ರಾಯ ತಿಳಿಯಲು ಮೈಕನ್ನು ಅವರ ಬಾಯಲ್ಲಿ ತುರುಕಿದಾಗ, ಅವರು "ಇದೆಲ್ಲ ವಿರೋಧ ಪಕ್ಷದವರ ಸಂಚು. ಮೇಲಾಗಿ ನಿಮ್ಮಲ್ಲಿ ನನ್ನದೊಂದು ಬಿನ್ನಹ. ದಯವಿಟ್ಟು ನನ್ನನ್ನು ಯಡ್ಡಿ ಎಂದು ಕರೆಯಬೇಡಿ. ಪೂರ್ತಿ ಹೆಸರು ಕರೆಯಲಾಗದಿದ್ದಲ್ಲಿ ಚಿಕ್ಕದಾಗಿ BSY ಎಂದರೆ ಸಾಕು" ಎಂದು ಧಡಗುಟ್ಟಿಕೊಂಡು ಹೊರಟು ಹೋದರಂತೆ. BSY is very BUSY.
ಸುಶ್ಮಿತಾ ಸೇನ್, ಐಶ್ವರ್ಯ ರೈ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಇವರುಗಳ ಹೆಸರನ್ನು ಹಲವಾರು ಮಕ್ಕಳಿಗೆ ಇಟ್ಟಿದ್ದಾರೆ. ನಾನು ಕೇಳಿರುವ ಹಾಗೆ ಹೆಚ್ಚಾಗಿ ಯಾವ ರಾಜಕಾರಣಿಯ ಹೆಸರನ್ನು ಯಾವ ಮಕ್ಕಳಿಗೂ ಇಟ್ಟಿಲ್ಲ ಎಂದು ನನ್ನ ಭಾವನೆ. ಹಳ್ಳಿ ಮಕ್ಕಳ ಹೆಸರು ಸಾಮಾನ್ಯವಾಗಿ ಮಾದ, ಕೆಂಚ ಹೀಗೆ ಇಡುವ ರೂಢಿ ಇರುವಾಗ ನಮ್ಮ ಸಿದ್ದಾಪುರದ ಸಿದ್ದವ್ವ ತನ್ನ ಮಗುವಿಗೆ ಅಮೇರಿಕದ "ಬರಾಕ್ ಒಬಾಮ" ಅಂತ ಹೆಸರನ್ನು ಇಟ್ಟಳಂತೆ !!! ಒಮ್ಮೆ, ಹಿಟ್ಟು ಉಣ್ಣೋ ಹೊತ್ತಾಯ್ತು ಅಂತ ಮಗನನ್ನು ಕೂಗಿದಳು ಸಿದ್ದವ್ವ 'ಬರೂ, ಬಾರ್ಲಾ! ' ನಮ್ಮ ಒಬಾಮನ ಸದ್ದೇ ಇಲ್ಲ. ರೇಗಿತು ತಾಯಿಗೆ. ಪೂರ್ತಿ ಹೆಸರನ್ನು ಕಿರುಚಿದಳು 'ಲೇ! ಬರಾಕ್ ಒಬಾಮ, ಬತ್ತೀಯಾ ಇಲ್ವಾ' ... ಮಗ ಬರಾಕ್ ಒಬಾಮ ಕುಂತಲ್ಲಿಂದಲೇ ಕಿರುಚಿದ 'ಬರಕ್ಕಿಲ್ಲ ಓಗಮ್ಮ'
ಅಮೇರಿಕದಲ್ಲಿ RICE ಬೆಲೆ 'RICE' (Condoleezza Rice) ಕಾಲದಲ್ಲಿ RAISE ಆಯ್ತು ಅಂತ ಇತ್ತೀಚೆಗೆ ದೇವೇಗೌಡರು ಹೇಳಿಕೆಕೊಟ್ಟಿದ್ದನ್ನು ಕೇಳಿ 'RICE' ಸಿಟ್ಟಿಗೆದ್ದು ಕೆಂಪಾಗಿ ದೇವೇಗೌಡರ ಮೇಲೆ ಸಿಕ್ಕಾಪಟ್ಟೆ RAISE ಆದರಂತೆ. 'ನನಗೂ ಅದಕ್ಕೂ ಏನ್ರೀ ಸಂಬಂಧ. ಹಾಗಿದ್ರೆ ನಿಮ್ಮ ಕಾಲದಲ್ಲಿ ರಾಗಿಮುದ್ದೆ ಬೆಲೆ ಯಾಕೆ ಏರಲಿಲ್ಲ, ಧರಮ್ ಸಿಂಗ್ ಕಾಲದಲ್ಲಿ ಧರ್ಮ ಯಾಕ್ರೀ ಹೆಚ್ಚಲಿಲ್ಲ' ಅಂತೆಲ್ಲಾ ಕೂಗಾಡಿದರಂತೆ.
ಈಚೆಗೆ ಹೈಕಮಾಂಡ್ ಅವರನ್ನು ಭೇಟಿಯಾಗಲು ಹೋಗಿದ್ದ ಖರ್ಗೆ ಅವರು ಮುಖ ವಾಪಸ್ಸು ಬರುವಾಗ ಕಪ್ಪಿಟ್ಟಿತ್ತಂತೆ. ಮುಂಚೆಯೂ ಹಾಗೇ ಇತ್ತು ಅಂತ ಕೆಲವರ ಅಂಬೋಣ. ಹೈಕಮಾಂಡ್ ಮಾತನಾಡುವಾಗ "ಖರ್ಗೆ" ಅವರ ಹೆಸರನ್ನು ಹೇಳುವಾಗ ಪದೇ ಪದೇ "ಮಿಸ್ಟರ್. ಕರ್ರಗೆ " ಎಂದು ಹೇಳುತ್ತಿದ್ದುದೇ ಕಾರಣ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ವಿರೋಧ ಪಕ್ಷದಲ್ಲಿ ಪರ್ಮನೆಂಟ್ ಆಗಿ ಕುಳಿತಿರುವ ವಾಟಾಲ್ ನಾಗರಾಜ್ ಅವರ ಹೆಸರನ್ನು ಟೀ.ವಿ ವರದಿಯಲ್ಲಿ "ಪಾತಾಲ್ ನಾಗರಾಜ್" ಎಂದು ನುಡಿದಿದ್ದರಿಂದ ಸಿಡಿದ ವಾಟಾಲ್, ಕ.ರ.ವೇ'ಗೆ ಕರೆ ಮಾಡಿದರಂತೆ. ಕರವೇ ಅವರು ತಾವು ಬೆಂಗಳೂರು ಏರ್ಪೋರ್ಟ್'ಗೆ ಇಟ್ಟಿರುವ ಹೆಸರಿನ ಗಲಾಟೆಯಲ್ಲಿ ಬ್ಯುಸಿ ಇದ್ದೀವಿ. ನಂತರ, ಯಡ್ಡಿ ಎಂಬುದರ ಬದಲಿಗೆ ಆಂಗ್ಲದಲ್ಲಿ BSY ಎಂದು ಕರೆಯಿರಿ ಎಂದು ಕೇಳಿಕೊಂಡಿರುವ ಮುಖ್ಯಮಂತ್ರಿಯ ವಿರುದ್ದ ಘೋಷಣೆ ಮಾಡುವುದಿದೆ. ನಿಮ್ಮ ಟರ್ನ್ ಬರುವವರೆಗೂ ಕಾಯಿರಿ ಎಂದರಂತೆ. ಕರವೇ ನಿನಗಿದು ತರವೇ ?
ಮೊದಲ ಬಾರಿ ಖಾತೆಯ ಹಂಚಿಕೆ ಆದಾಗ ಜಗದೀಶ್ ಶೆಟ್ಟರ್ ಹಾಗಿ ಶಂಕರಲಿಂಗೇಗೌಡ ಅವರುಗಳಿಗೆ ಸಚಿವರ ಸ್ಥಾನ ಸಿಗದೇ ಇದ್ದುದು ಎಲ್ಲರಿಗೂ ತಿಳಿದ ವಿಷಯ. ಆಂಗ್ಲ ಭಾಷಾ ಪತ್ರಿಕೆಯೊಂದು ವರದಿ ಮಾಡಿತಂತೆ ' yeddi pulled shutter on Jagadish Shettar' ಅಂತ. ಯಾವಾಗ ಗಲಾಟೆ ಎದ್ದಿತೋ ತಕ್ಷಣ ಜಗದೀಶರನ್ನು ಹೊಗಳಿ ಅಟ್ಟಕ್ಕೇರಿಸಿ butter ಹಚ್ಚುತ್ತಿದ್ದಾರೆ ಅಂತ ಹೊಸ ಸುದ್ದಿ.
ಇದು ಕೇವಲ ಕಾಲ್ಪನಿಕ. ಒಮ್ಮೆ ನಕ್ಕುಬಿಡಿ ಅಷ್ಟೇ!.








