-ವರದಿ : ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ
"ನವ ಸಂವತ್ಸರ ಭೂಮಿಗೆ ಬಂದು
ಕರೆಯುತ್ತಿದೆ ನಮ್ಮನು ಇಂದು"!!!!!
ಎಂದು ರಾಷ್ಟ್ರಕವಿ ಕುವೆಂಪು ಯುಗಾದಿ ಗೀತೆಯಲ್ಲಿ ಹೇಳಿದಂತೆ, ಸಾವಿರಾರು ಕನ್ನಡಿಗರನ್ನು ಕಳಕಳಿಯಿಂದ ಕರೆದಿತ್ತು ಕೆ. ಕೆ. ಎನ್. ಸಿ. ಸರ್ವಧಾರಿ ಸಂವತ್ಸರದ ಯುಗಾದಿ ಆಚರಣೆ ಮೇ 3 ರಂದು ಸನ್ನಿವೇಲ್ ಹಿಂದೂ ದೇವಾಲಯದ ಸಭಾಂಗಣದಲ್ಲಿ. ಮುಂಬಾಗಿಲಿನಲ್ಲಿ ಅಲಂಕೃತವಾದ ಚೈತ್ರಮಾಸವನ್ನು ಸಂಕೇತಿಸುವ ಚಿಗುರೊಡೆದ ಮರಗಿಡಗಳು, ಹೂವು ಮೊಗ್ಗುಗಳು, ಚಿಲಿಪಿಲಿಯ ಹಕ್ಕಿಗಳು ಮತ್ತು ಕಾರಂಜಿಯು ಕೃತಕವಾಗಿ ಸೃಷ್ಟಿಸಿದ ಹಿಂದೂ ದೇವಾಲಯದ ಪ್ರಾಕೃತಿಯಲ್ಲಿ ಕಂಗೊಳಿಸುತ್ತಾ ಅತಿಥಿಗಳನ್ನು ಆದರದಿಂದ ಸ್ವಾಗತಿಸುತ್ತಿತ್ತು. ಈ ಅನಾವರಣವನ್ನು ಸಮಿತಿಯ ಕಲಾಕೃತಿ ವಿಭಾಗದ ಮುಖ್ಯಸ್ಥೆ, ಪದ್ಮಾ ರಾವ್ ಮತ್ತು ಸಂಗಡಿಗರು ಸಂಭ್ರಮದಿಂದ ಸೃಷ್ಠಿಸಿದ್ದರು.
ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಿರ್ವಾಹಕರಾದ ವಿಶ್ವಾನಂದ ಮತ್ತು ಶೈಲಜ ಅವರು, "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ದ. ರಾ. ಬೇಂದ್ರೆಯವರ ಸುಪ್ರಸಿದ್ಧ ಗೀತೆಯ ಪಲ್ಲವಿಯನ್ನು ಹಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾರಂಭಿಸಿದರು. ಸುಮಾರು ನಲವತ್ತು ಕನ್ನಡಕಲಿ ಮಕ್ಕಳು ಒಕ್ಕೊರಲಿಂದ ಸುಶ್ರಾವ್ಯವಾಗಿ ಕನ್ನಡ ಗೀತೆಗಳನ್ನು ಹಾಡಿ ತಾಯಿ ಶಾರದೆಯನ್ನು ಪ್ರಾರ್ಥಿಸಿದರು, ಸಂಧ್ಯಾ ರವೀಂದ್ರನಾಥ್ ಮತ್ತು ಕನ್ನಡಕಲಿ ಶಿಕ್ಷಕಿಯರ ನಿರ್ದೇಶನದಲ್ಲಿ. ನಂತರ ಮತ್ತೊಂದು ಕನ್ನಡ ಗೀತೆ ಹೆಚ್. ಎಸ್. ವೆಂಕಟೇಶ್ ಮೂರ್ತಿ ರಚಿಸಿರುವ "ಕನ್ನಡನಾಡಿನ ಮಕ್ಕಳು ನಾವು" ಇನ್ನೊಂದು ಮಕ್ಕಳ ತಂಡದಿಂದ ಸುಗಮವಾಗಿ ಹೊರಹೊಮ್ಮಿತು, ಲಕ್ಷ್ಮಿ ನಾಗಸಮುದ್ರ ಅವರ ನಿರ್ದೇಶನದಲ್ಲಿ. ಅಷ್ಟರಲ್ಲಿ ಸಭೆ ತುಂಬಿ ಕೃಷ್ಣರೂಪಕ ನೃತ್ಯ ನಾಟಕಕ್ಕೆ ಕಾದು ಕುಳಿತಿತ್ತು. ಕೃಷ್ಣನ ಜನುಮದಿಂದ ಆರಂಭವಾಗಿ, ಅವನ ಆಟ ಪಾಠಗಳ ಲೀಲೆಗಳನ್ನೊಳಗೊಂಡು, ಕಡೆಗೆ ಅಂಗನೆಯರೆಲ್ಲಾ ಅಪ್ಪಿ ಮದ್ದಾಡುವರೆಗೂ ಲೀಲಾಜಾಲವಾಗಿ ನೃತ್ಯದಲ್ಲಿ ತೋರಿಸಿದ ನೃತ್ಯನಾಟಕವನ್ನು ನಿರ್ದೇಶಿಸಿದವರು, ಬೇ ಏರಿಯಾದ ಪರಿಣಿತ ನೃತ್ಯಗಾತಿ-ಪುಷ್ಪಾ ರಾಮಾನುಜಮ್ ಮತ್ತು ಸಂಗೀತ ನಿರ್ದೇಶನ-ಸಂಧ್ಯಾ ಸುಬ್ಬರಾಮು. ಒಟ್ಟು 20ಕ್ಕೂ ಹೆಚ್ಚು ಮಕ್ಕಳು ನರ್ತಿಸಿದರೆ, ಎಂಟು ಜನ ಭಾಮಿನಿಯರು ಸಂಗೀತವನ್ನು ಖುದ್ಧಾಗಿ ಮಧುರವಾಗಿ ಹಾಡಿದರು. ಮಕ್ಕಳಾದ ರಿತ್ವಿಕ್ ನಾರಾಯಣ್ ತಬಲ ವಾದನ, ಮಾಧುರಿಯ ಮಧುರ ವೈಲಿನ್ ವಾದನವು ಸಭಿಕರ ಮನ ಸೂರೆಗೊಳ್ಳುವುದರಲ್ಲಿ ಯಶಸ್ವಿಯಾಯಿತು. ಎಲ್ಲರಿಗೂ ಕೃಷ್ಣನೊಡನೆ ನೃತ್ಯ ಮಾಡುವ ಆಸೆ ಮೂಡಿಸಿತೆಂದರೆ ಅತಿಶಯೋಕ್ತಿ ಎನಿಸುವುದಿಲ್ಲ. ಕೃಷ್ಣರೂಪಕ ಹಾಡುಗಳನ್ನು ಸಂಗೀತ ವಿದುಷಿ ಭ್ರಮರಾ ಸುಬ್ಬರಾಮು ಅವರ ಆಕಾಶವಾಣಿ ಕಾರ್ಯಕ್ರಮದಿಂದ ಆರಿಸಲಾಗಿತ್ತು.
ಯುಗಾದಿ ಕಾರ್ಯಕ್ರಮದ ಪ್ರಾಯೋಜಕರ ಪರಿಚಯ ಪ್ರಿಯಾಂಕ ಅವರು ಮಾಡುವಷ್ಟರಲ್ಲೇ, ತೆರೆಯ ಹಿಂದೆ ಸದ್ದು, ಗದ್ದಲ ಯಾಕೆ ಎಂದು ಯೋಚಿಸುತ್ತಿರುವಾಗಲೇ, ತೆರೆ ಸರಿಸಿ ಮಾತಾಡಲು ಪ್ರಾರಂಭಿಸಿದರು, ಹಾಸ್ಯಕ್ಕೆ ಸವಾಲ್ ನಿರ್ದೇಶಕಿ, ಶರ್ಮಿಳಾ ವಿದ್ಯಾಧರ. ೫ ತಂಡಗಳ ಹಾಸ್ಯದ ಹೊನಲು ಹರಿದಾಗ, ಪ್ರೇಕ್ಷಕರು ವೈದ್ಯನಿಗೆ (ಅಶೋಕ್ ಹಂದಿಗೋಲ್ ತಂಡಕ್ಕೆ) ಮಣೆ ಹಾಕಿದರು, ಅರ್ಥಾತ್ ವೈದ್ಯನ ತಂಡಕ್ಕೆ ವಿಜಯಶ್ರೀ ಒಲಿದಳು. ಅ.ನ. ಕೃಷ್ಣರಾಯರ ನೂರನೆ ಜನ್ಮದಿನದ ವರ್ಷದ ಪ್ರಯುಕ್ತ ಕುಸುಮಾ ಅರಕಲ್ಗೂಡ್ ಅವರು ಪವರ್ ಪಾಯಿಂಟ್ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿ, ಕನ್ನಡದ ಉದ್ದಾಮ ಸಾಹಿತಿಗೆ ಗೌರವ ಸಲ್ಲಿಸಿದರು. ಚೈತ್ರ ಮಾಸದ ಆದಿಯಲ್ಲಿ ಬರುವ ಬಣ್ಣ ಬಣ್ಣದ ಹೋಳಿ ಹುಣ್ಣಿಮೆ ಸಂಕೇತವಾಗಿ "ಬಣ್ಣ, ಬಣ್ಣ" ಹಾಡಿಗೆ ಬಣ್ಣ, ಬಣ್ಣದ ಸೀರೆಯನ್ನುಟ್ಟು ನೃತ್ಯ ಪ್ರದರ್ಶಿಸಿದವರು, ರೂಪಾಲಿ ಶಿರ್ಶ್ಯಾಡ್ ತಂಡ. ಎಲ್ಲರ ಬಾಯಲ್ಲೂ "ಆ ಸಂಜೆ ಓಕುಳಿ ಬಣ್ಣ" ಗುಯ್ ಗುಟ್ಟುತಿತ್ತು.
ಸ್ವರ್ಣಸೇತು ವಾರ್ಷಿಕ ಸಂಚಿಕೆ ಹಮ್ಮಿಕೊಂಡಿದ್ದ ಯುಗಾದಿ ಕಥಾಸ್ಪರ್ಧೆಯಲ್ಲಿ ಒಟ್ಟು 12 ಕಥೆಗಳು ಭಾಗವಹಿಸಿ, ಮೂರು ಬಹುಮಾನಗಳು ಕ್ರಮವಾಗಿ, ರವೀಂದ್ರ ವಿಶ್ವನಾಥ್, ಮಂಗಳಾ ಕುಮಾರ್ ಮತ್ತು ಸೌಮ್ಯ ಸಂಕೇತ್ ಅವರಿಗೆ ಲಭಿಸಿತು. ಕಥಾಸ್ಪರ್ಧೆ ತೀರ್ಪುಗಾರರಾಗಿ ಕಥೆಗಾರರಾದ, ಪ್ರೇಮ್ ಶೇಕರ್, ಶ್ರೀನಾಥ್ ಭಲ್ಲೆ ಹಾಗೂ ಬೇ ಏರಿಯಾದ ಪ್ರಭು ನಂದನ್ ಅವರು ಕಾರ್ಯ ವಹಿಸಿದ್ದರು.
ಇಂಡಿಯನ್ ಲಿಟೆರಸಿ ಪ್ರಾಜಕ್ಟ್(ಐ.ಎಲ್.ಪಿ.) ಸಂಸ್ಥೆಯ ಪರಿಚಯದ ಮೂಲಕ, ಅದರ ಅಭಿವೃದ್ಧಿಗೆ ಸಹಾಯ ಕೋರಿದರು ಯುವ ಸಮಿತಿಯ ಮುಖ್ಯಸ್ಥೆ ಅನು ಜಗದೀಶ್ ಮತ್ತು ಸದಸ್ಯ ಸುಭಾಷ್. ಇದಾದ ನಂತರ ತೆರೆಯ ಮೇಲೆ ಬಂದಿದ್ದು "ಬಾರಯ್ಯಾ ಬಾರಯ್ಯ" ಜನಪದ ನೃತ್ಯ, ಉಮಾ ಕಳಸಾಪುರರ ನಿರ್ದೇಶನದಲ್ಲಿ. ಬಾರಯ್ಯ, ಬಾರಯ್ಯ ಸರದಾರ, ಬಂದು ತೋರಯ್ಯ, ತೋರಯ್ಯ "ಪ್ರೀತಿಯಾ" ಅಂದಹಂಗಿತ್ತು ಅರ್ಥದಲ್ಲಿ. ಸಮಿತಿಯ ಯುವತಂಡ ತಮ್ಮ ಕಾರ್ಯ ಚಟುವಟಿಕೆಗಳಾದ, ರಕ್ತದಾನ ಶಿಬಿರ, ಬ್ಯಾಕ್-ಪ್ಯಾಕ್ ಡ್ರೈವ್ಗಳ ಅಭಿವೃದ್ಧಿ, ಹಾಗೂ ಈಸಲ ಹೊಸದಾದ ಪರಿಶುದ್ಧ ಭೂಮಿ ರಕ್ಷಣೆಗೆ (ಗ್ರೀನ್ ಪ್ಲಾನೆಟ್) ಮಾಡಬೇಕಾದ ರೀಸೈಕ್ಲಿಂಗ್ ಮಾಡುವ ವಿಧಾನಗಳನ್ನು ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ಸಮಿತಿಯ ಸದಸ್ಯರಿಗೆ ಮತ್ತು ಸಭಿಕರಿಗೆ ತಿಳಿಸಿದರು. ನಂತರ ವೇದಿಕೆಯ ಮೇಲೆ ಜೋಗಿಗೆ ಮನಸೋತ ಹೆಂಗೆಳೆಯರ ಗುಂಪು ಮತ್ತು ನಾಲ್ಕು ಪುಟಾಣಿಗಳು ಜೋಗಿ ಚಿತ್ರದ ಎಲ್ಲೋ ಜೊಗಪ್ಪ ನಿನ್ನರಮಾನೆ ಹಾಡಿಗೆ ಸ್ಪೂರ್ತಿಯಿಂದ ನೃತ್ಯ ಮಾಡಿದರು ಶೀಲ ಶಂಕರ್ ಅವರ ನಿರ್ದೇಶನದಲ್ಲಿ. ೧೫-ಮಾಜಿ ಕನ್ನಡಕೂಟದ ಅಧ್ಯಕ್ಷರುಗಳಿಗೆ ಈಗಿನ ಕೂಟದ ಅಧ್ಯಕ್ಷರಾದ ಶ್ರೀ ಭವಾನಿ ಕುಮಾರ್ ರವರು, ಅವರ ಕಾರ್ಯನಿರತ ಸೇವೆಯನ್ನು ಸ್ಮರಿಸಿ, ಸನ್ಮಾನಿಸಿ ಫಲಕಗಳನ್ನು ನೀಡಿ ಗೌರವಿಸಿದರು.
ಶೋತೃಗಳು ಅರಸಿ ಅರಸಿ ಎದುರು ನೋಡುತ್ತಿರುವಾಗಲೇ, ತೆರೆಯಮೇಲೆ "ಸ್ವರ ಮಾಧುರಿ" ಶಾಸ್ತ್ರೀಯ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಕಾರ್ಯಕ್ರಮ ತೇಲಿಬಂತು. ಎಂಟು ಜನ ಸಂಗೀತಗಾರ/ಗಾರ್ತಿಯರ ಸಂಗೀತಸುಧೆ ಕೋಗಿಲೆ ಕಂಠಮಾಧುರ್ಯದಿಂದ ನಿರಂತರವಾಗಿ ತೇಲಿ ಬಂದು, ತೀರ್ಪುಗಾರರ ಆಯ್ಕೆಯಲ್ಲಿ ಕ್ರಮವಾಗಿ, ಉಷಾ ಪ್ರಭು, ಅರ್ಚನ ರಾಜೇಶ್ ಮತ್ತು ಸುಬ್ರಹ್ಮಣ್ಯ ಅವರಿಗೆ ಮೊದಲನೆಯ, ಎರಡನೆಯ ಹಾಗೂ ಮೂರನೆಯ ಬಹುಮಾನ ದಕ್ಕಿಸಿಕೊಟ್ಟಿತು. ತೀರ್ಪುಗಾರರ ಸ್ಥಾನದಲ್ಲಿ, ಗಾರ್ಗಿ ಪಂಚಾಂಗಮ್, ನಳಿನಿ ಕೇಶವ್ ಮತ್ತು ಶೇಷಪ್ರಸಾದ್ ಚಿಕ್ಕತ್ತುರ್ ಕಾರ್ಯವಹಿಸಿದ್ದರು. ಅಷ್ಟರಲ್ಲೇ, ಪ್ರೇಕ್ಷಕರಿಗೆ ಬಿಡುವು ಕೊಡುವುದರ ಜೊತೆಗೆ ಹಬ್ಬದೂಟಕ್ಕೆ ಸಮಯ ಕೂಡಿ ಬಂದಿತ್ತು. ದೋಸ ಪ್ಲೇಸ್ ಅವರ ಘಮ ಘಮ ಅಕ್ಕಿರೊಟ್ಟಿ, ದೋಸ, ಮತ್ತು ಒಬ್ಬಟ್ಟಿನ ಊಟ ಎಲ್ಲರನ್ನು ಕೈ ಚಾಚಿ ಕರೆದಿತ್ತು. ಊಟದಿಂದ ಪ್ರಫುಲ್ಲವಾದ ಮನಸ್ಸಿಗೆ ಪಂಡಿತ್ ಹಬೀಬ್ ಖಾನ್ ಅವರ ಶಾಸ್ತ್ರೀಯ ಸಂಗೀತ ಮತ್ತು ಸಿತಾರ್ ವಾದನ ಇನ್ನಷ್ಟು ಮನೋಲ್ಲಾಸ ಹೆಚ್ಚಿಸಿತು. ಸುಮಾರು 30 ಕ್ಕೂ ಹೆಚ್ಚು ಶಿಷ್ಯ, ಶಿಷ್ಯೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗಣೇಶ ಸ್ತುತಿ, ಗಾಯತ್ರಿಮಂತ್ರವನ್ನೊಳಗೊಂಡು ಹಲವಾರು ಗೀತೆಗಳನ್ನು ಹಾಡಿ ಎಲ್ಲರ ಮನಗೆದ್ದರು.
ಕ್ರೀಡಾ ಸಮಿತಿಯವರು, ಮುಂಬರುವ ಕ್ರೀಡಾದಿನದ ಚಟುವಟಿಕೆಗಳಲ್ಲಿ ಸದಸ್ಯರಿಗೆ ಭಾಗವಹಿಸಲು ಕೇಳಿಕೊಳ್ಳುವುದರ ಮೂಲಕ, ನಡೆಯುವ(ವಾಕಿಂಗ್) ಕ್ಲಬ್ ನಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಲು ಕೋರಿದರು. ಸಮಾರಂಭದ ಕೊನೆಯ ಕಾರ್ಯಕ್ರಮವಾದ "ಯಕ್ಷಗಾನ" ತಂಡವು ಬಣ್ಣ-ಬಣ್ಣದ ವೇಷ-ಭೂಷಣವನ್ನು ಧರಿಸಿ "ಕಂಸವಧೆ" ಯನ್ನು ಯಶಸ್ವಿಯಾಗಿ ನೆರವೇರಿಸಿ ಸಭಿಕರ ಮನಗೆದ್ದರು, ಕೆ. ಜೆ. ಗಣೇಶ್ ಅವರ ಭವ್ಯ ನಿರ್ದೇಶನದಲ್ಲಿ. ಬಾಲಕಿ ಅನಿಶಾ ಉಪಾಧ್ಯ ಯಕ್ಷಗಾನದಲ್ಲಿ ಭಾಗವಹಿಸಿ ನೃತ್ಯಮಾಡಿದ್ದು ಪ್ರಶಂಸನಾರ್ಹವಾಗಿತ್ತು. ಕೂಟದ ಅಧ್ಯಕ್ಷರು, ಶ್ರೀ ಭವಾನಿ ಕುಮಾರ್ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿ, ಎರಡೂ ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಹಾಡಲು ಮಕ್ಕಳನ್ನು ವೇದಿಕೆಯ ಮೇಲೆ ಬರಮಾಡಿಕೊಂಡರು. ಯುಗಾದಿ ಕಾರ್ಯಕ್ರಮವನ್ನು ಅದ್ಭುತವಾಗಿ ನಿರ್ವಹಿಸಿದವರು ವಿಶ್ವಾನಂದ್ ಮತ್ತು ಶೈಲಜ.
"ಯುಗ ಯುಗಾದಿ ಕಳೆದರೂ ಹೊಸ ಯುಗಾದಿ ಬರುತದೆ", ಆದ್ದರಿಂದ ಇಂತಹ ವೈಭವವಾದ ಯುಗಾದಿ ಸಮಾರಂಭ ಮರಳಿ ಬರಲಿದೆ ಎಂಬ ಹೊಸ ಬಗೆ ಆಸೆಯು ನಮ್ಮ, ನಿಮ್ಮನ್ನೆಲ್ಲಾ ನೆಮ್ಮದಿಯಿಂದ ಬಾಳಿಸಲಿ!!!!!
ಕಾರ್ಯಕ್ರಮದ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://picasaweb.google.com/syogish/KKNCYugadi2008?authkey=1FM1T4NSjJk








