ಕಳೆದ ವಾರ ದುಬೈಯಲ್ಲಿ ಕಾರ್ಯಕ್ರಮ ನೀಡಲು ಪ್ರಥಮ ಬಾರಿಗೆ ಆಗಮಿಸಿದ್ದ ಅರುಣ್ ಕುಮಾರ್ ಅವರೊಂದಿಗೆ ಕನ್ನಡ ಧ್ವನಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು:
ರಂಗಭೂಮಿ, ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ನಾಗತಿಹಳ್ಳಿ, ಆಲನಹಳ್ಳಿ ಮೊದಲಾದವರ ಒಡನಾಡಿ ಶ್ರೀ ಆರ್. ಟಿ. ಅರುಣ್ ಕುಮಾರ್ ಕೆಲಕಾಲದ ಹಿಂದೆ ಅಪಘಾತವೊಂದರಲ್ಲಿ ಸ್ಮರಣಾಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಪವಾಡಸದೃಷರಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ದುಬೈಯಲ್ಲಿ ಕಾರ್ಯಕ್ರಮ ನೀಡಲು ಪ್ರಥಮ ಬಾರಿಗೆ ಆಗಮಿಸಿದ್ದ ಅರುಣ್ ಕುಮಾರ್ ಅವರೊಂದಿಗೆ ಕನ್ನಡ ಧ್ವನಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು:
-ಸಂದರ್ಶಕರು : ಅರ್ಶದ್ ಹುಸೇನ್ ಎಂ.ಹೆಚ್. , ದುಬೈ.
ಕನ್ನಡ ಧ್ವನಿ :ನಮಸ್ಕಾರಗಳು. ಕನ್ನಡ ಧ್ವನಿ ಸಂದರ್ಶನಕ್ಕೆ ತಮಗೆ ಸ್ವಾಗತ. ಕಳೆದ ವಾರ ದುಬೈಯಲ್ಲಿ ಹಾಗೂ ಅಬುಧಾಬಿಯಲ್ಲಿ ತಾವು ಮೂವರೂ (ಪ್ರಾಣೇಶ್ ಹಾಗೂ ಕಸ್ತೂರಿ ಮೂಲಿಮನಿ) ಉತ್ತಮ ಪ್ರದರ್ಶನ ನೀಡಿ ಇಲ್ಲಿನ ಕನ್ನಡಿಗರನ್ನು ರಂಜಿಸಿದ್ದೀರಿ, ತಮಗೆ ಅಭಿನಂದನೆಗಳು.
ಅರುಣ್ ಕುಮಾರ್: ನಮಸ್ಕಾರಗಳು.
ಕನ್ನಡ ಧ್ವನಿ :ತಮ್ಮ ವೇದಿಕೆಯ ಮೇಲಿನ ಪಯಣದ ಪ್ರಾರಂಭ ಎಂದಿನಿಂದ ಶುರುವಾಯಿತು, ಕ್ರಮಿಸಿದ ಹಾದಿ ಹಾಗೂ ಯಾವುದರಲ್ಲಿ ತಮಗೆ ಯಶಸ್ಸು ಸಿಕ್ಕಿದೆ
ಅರುಣ್ ಕುಮಾರ್: ಸುಮಾರು ೭೮-೭೯ನೇ ಇಸವಿ, ನಾನಾಗ ಐದನೆಯ ತರಗತಿಯಲ್ಲಿದ್ದಿರಬಹುದು. ಆಗಿನಿಂದಲೇ ಸ್ವಲ್ಪ ವಿಭಿನ್ನವಾಗಿ ಸದ್ದು ಅಣಕಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಬೇರೆಯವರು ಅನುಸರಿಸಲಾರದಂತಹ ಸದ್ದುಗಳನ್ನು ನಾನು ಪ್ರಸ್ತುತಪಡಿಸಿದಾಗ ಕೇಳಿದವರು ಬೆರಗಾಗಿರುವುದು ನನಗೆ ಸಂದ ಪ್ರೋತ್ಸಾಹವೆಂದೇ ಸಂತೋಷಗೊಳ್ಳುತ್ತಿದ್ದೆ. ಆ ಬಳಿಕ ೯ನೇ ತರಗತಿಯಲ್ಲಿ ವೃತ್ತಿನಿರತರೊಂದಿಗೆ ಪ್ರಹಸನ, ಅಂದಿನ ದಿನಗಳಲ್ಲಿಯೇ ನಾಟಕವೊಂದನ್ನು ಬರೆದು, ನಿರ್ದೇಶಿಸಿ ನಟಿಸಿದ \\\'ಕುಂಟ ಮಾಸ್ತರ, ತುಂಟ ಹುಡುಗರು\\\' ನಾಟಕಕ್ಕೆ ಎಲ್ಲಾ ರಂಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಸ್ತಿ ಸಿಕ್ಕಿತ್ತು. ಆ ಬಳಿಕ ಪಿ,ಯು.ಸಿ., ಡಿಗ್ರಿ ಓದುವಾಗ ಸಿನೆಮಾಗಳಲ್ಲಿ, ಅದರಲ್ಲೂ ಇಂಗ್ಲಿಷ್ ಸಿನೇಮಾಗಳಲ್ಲಿ ಬರುವಂತಹ ಶ್ರವಣದೃಶ್ಯಗಳನ್ನು ಅನುಕರಣೆ ಮಾಡುವ ಪ್ರಯತ್ನ ಹೆಚ್ಚಿನ ಶ್ಲಾಘನೆ ಪಡೆಯುತ್ತಿತ್ತು. ಒಮ್ಮೆ \\\'ಚಾಪ್ಲಿನ್ ನೀನು ಅಮರ\\\' ಎಂಬ ಕಿರುನಾಟಕದಲ್ಲಿ ಚಾರ್ಲಿ ಚಾಪ್ಲಿನ್ ಅಭಿನಯವನ್ನು ಯಥಾವತ್ತಾಗಿ ವೇದಿಕೆಯ ಮೇಲೆ ಪ್ರದರ್ಶಿಸಿದಾದ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದೆ. ಹಲವಾರು ಪ್ರಶಸ್ತಿಗಳು ಲಭಿಸಿವೆ. ರಂಗಭೂಮಿಯಲ್ಲಿ ಹಲವು ಪ್ರದರ್ಶನಗಳು, ಅಭಿಯಂತರಂಗ (ತದ್ರೂಪಿ ನಾಟಕ) ದಲ್ಲಿ ದಿಪಾತ್ರ, ರಾಜ್ಯಮಟ್ಟದ ನಾಟದ ಸ್ಪರ್ಧೆ (ಅಂತಿಗೊನೆ), ಸುರೇಶ್ ಆಲನಹಳ್ಳಿಯವರ ನಂದರಾಜ ಪ್ರಹಸನ ಮೊದಲಾದವುಗಳು ಉಲ್ಲೇಖಿಸತಕ್ಕ ಪಾತ್ರಗಳು. ನಾಗತಿಹಳ್ಳಿ ಚಂದ್ರಶೇಖರ್ ಅವರ ಧಾರಾವಾಹಿ- ಕಾವೇರಿ ಯಲ್ಲಿ ನಾಗತಿಹಳ್ಳಿಯವರೊಂದಿಗೆ ಕಾರ್ಯನಿರ್ವಹಿಸುವ ಸೌಭಾಗ್ಯ, ಕೆಂಎಂ ಚೈತನ್ಯರವರ ಹಿಂದಿ ಡಾಕ್ಯುಮೆಂಟರಿಯಲ್ಲಿ ಮುಖ್ಯ ಪಾತ್ರ, ಸಿ. ಬಸವಲಿಂಗಯ್ಯರವರು ನನ್ನನ್ನು ಹುಡುಕಿಕೊಂಡು ಬಂದು ಹಲವು ಬೀದಿನಾಟಕಗಳಿಗೆ ನನ್ನನ್ನು ಬಳಸಿಕೊಂಡಿದ್ದಾರೆ. ರೋಡ್ ವರ್ಕ್ ಎಂಬ ಮಾತಿಲ್ಲದ ನಾಟಕ, ಊ. ಆ .ವ್ಯಾ ಎಂಬ ವಿಶೇಷ ನಾಟಕಗಳಲ್ಲಿ ಭಾಗವಹಿಸಿದ್ದೇನೆ. ಕೊಂಚ ಕಾಲ ಹಿಂದೆ ಅಫಘಾತವೊಂದರಲ್ಲಿ ನನಪಿನ ಶಕ್ತಿ ಕಳೆದುಕೊಂಡು ದೇವರ ದಯೆಯಿಂದ ಎರೆಡು ತಿಂಗಳ ಬಳಿಕ ನೆನಪನ್ನು ಪವಾಡವೆಂಬಂತೆ ಮರಳಿ ಪಡೆದಿದ್ದೇನೆ. ಹಾಗಾಗಿ ಈಗ ಸ್ವಾಸ್ಥ್ಯವನ್ನು ಪರಿಗಣಿಸಿ ಇಂಟೀರಿಯರ್ ಡಿಸೈನ್, ಟೆಕ್ನಿಕಲ್ ರೀಡಿಂಗ್, ಕನ್ನಡದಲ್ಲಿ ಲೇಖನಗಳು ಮೊದಲಾದವನ್ನು ಬರೆಯುತ್ತಿದ್ದೇನೆ. ಹಲವು ಲೇಖನಗಳು ದಾವಣಗೆರೆಯ ಜನತಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿವೆ.
ಕನ್ನಡ ಧ್ವನಿ :ತಮ್ಮ ಪ್ರದರ್ಶನದಲ್ಲಿ ಮನಸೂರೆಗೊಂಡಿದ್ದು ತಮ್ಮ ಅನುಕರಣಾ ವಿದ್ಯೆ. ಸಾಮಾನ್ಯವಾಗಿ ಮಿಮಿಕ್ರಿ ಎಂದರೆ ಸಿನೇಮಾನಟರ ಹಾಗೂ ಪ್ರಾಣಿಪಕ್ಷಿಗಳ ಧ್ವನಿಯನ್ನು ಯಥಾವತ್ತು ನಕಲು ಮಾಡುವುದೆಂದೇ ಜನಸಾಮಾನ್ಯರ ಅಭಿಪ್ರಾಯ. ಆದರೆ ನಿಸರ್ಗದ, ನಮ್ಮ ಅಕ್ಕಪಕ್ಕದ ಸಹಜ ಸಾಮಾನ್ಯ ದೃಶ್ಯಗಳನ್ನೇ ಯಥಾವತ್ತಾಗಿ ಅನುಸರಿಸುವುದು ನಾನಂತೂ ಪ್ರಥಮವಾಗಿ ನೋಡಿ ದಂಗಾಗಿದ್ದೇನೆ. ಇದನ್ನು ಮಿಮಿಕ್ರಿ ಅನ್ನುವುದಕ್ಕಿಂತ ನಿಃಶ್ವಾಸಕಲೆ ಎಂದರೇ ಹೆಚ್ಚು ಸೂಕ್ತ. ಈ ಕಲೆ ತಮಗೆ ಸಿದ್ಧಿಸಿದ್ದು ಹೇಗೆ?
ಅರುಣ್ ಕುಮಾರ್: ಇದನ್ನು ಭಗವಂತನ ಉಡುಗೊರೆ ಎಂದೂ ಹೇಳಬಹುದು. ಚಿಕ್ಕಂದಿನಿದ್ದಾಗಲೇ ಸದ್ದುಗಳನ್ನು ಅನುಸರಿಸುವ ನನ್ನ ಪ್ರತಿಭೆ ಪರೀಕ್ಷಿಸಿದ ವೈದ್ಯರು ಈ ಬಾಲಕನಲ್ಲಿ ಗ್ರಾಹ್ಯಶಕ್ತಿ ಉತ್ತಮವಾಗಿದೆ ಹಾಗೂ ಐ.ಕ್ಯೂ. ಲೆವೆಲ್ ಸಹಾ ಹೆಚ್ಚಿದೆ ಎಂದು ಹೇಳಿದ್ದರು. ಹತ್ತು ವರ್ಷಗಳ ಹಿಂದೆ ನಿರ್ವಹಿಸಿದ ನಾಟಕಗಳ ಡೈಲಾಗುಗಳನ್ನು ಈಗಲೂ ಹೇಳಬಲ್ಲೆ. ಹಲವಾರು ಸಾಫ್ಟ್ ವೇರ್ ಗಳನ್ನೂ ಸ್ವತಃ ಅಭ್ಯಾಸ ಮಾಡಿಕೊಂಡಿದ್ದೇನೆ. ಸತತವಾಗಿ ಒಂದೇ ಧ್ವನಿಯನ್ನು ಅನುಕರಣೆ ಮಾಡುವ ಅಭ್ಯಾಸವನ್ನು ಮಾಡಿಕೊಂಡ ಮೇಲೆಯೇ ಈ ಕಲೆ ಸಿದ್ಧಿಸಿದೆ. ಇದಕ್ಕೆ ಅತ್ಯಂತ ಹೆಚ್ಚಿನ ಸಹನೆ ಹಾಗೂ ಏಕಾಗ್ರತೆ ಮುಖ್ಯ. ಒಂದು ಧ್ವನಿ ಸಿದ್ಧಿಸುವವರೆಗೂ ಸತತವಾಗಿ ಅಭ್ಯಾಸ ಮಾಡುವಷ್ಟು ತಾಳ್ಮೆ ಹಾಗೂ ಸಮಯ ಮುಖ್ಯ. ಒಂದು ಧ್ವನಿ ಸಿದ್ಧಿಸಿದ ಬಳಿಕ ಇನ್ನೊಂದು ಧ್ವನಿಯನ್ನು ಅನುಸರಿಸುತ್ತಾ ಹೋಗಬೇಕು ಹಾಗೂ ಆಗಾಗ ಅಭ್ಯಾಸ ಮಾಡಿಕೊಳ್ಳುತ್ತಲೂ ಇರಬೇಕು. ಕೆಲವು ವರ್ಷಗಳ ಬಳಿಕ ನಮಗೇ ಬೆರಗಾಗುವಂತೆ ಧ್ವನಿ ನಮ್ಮ ಧ್ವನಿಪೆಟ್ಟಿಗೆಯಿಂದ ಹೊರಡುವುದನ್ನು ನಾವೇ ಆಸ್ವಾದಿಸಬೇಕು. ಕಲೆ ಯಾವುದೇ ಇರಲಿ, ಆ ಕಲೆಯನ್ನು ಆರಾಧಿಸದೆ ಅದು ನಮಗೆ ಒಲಿಯುವುದಿಲ್ಲ. ಅದನ್ನು ನೆನಪಿಟ್ಟುಕೊಳ್ಳಬೇಕು.
ಕನ್ನಡ ಧ್ವನಿ :ಮಾತು ಎಲ್ಲರೂ ಆಡುತ್ತಾರೆ (ಮೂಗರೂ ಸಂಜ್ಞಾಭಾಷೆಯ ಮೂಲಕ) ವೇದಿಕೆಯ ಮೇಲೆ ಸಮರ್ಥವಾಗಿ ಮಾತನಾಡಲು ಕೆಲವರಿಗೆ ಮಾತ್ರ ಸಾಧ್ಯ. ಉತ್ತಮ ವಾಗ್ಮಿಯಾಗಲು ತಮ್ಮ ಸಲಹೆ:
ಅರುಣ್ ಕುಮಾರ್: ಇನ್ನೂ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಬೇಕೆಂದರೆ ಟಿ.ವಿ., ಚಲನಚಿತ್ರಗಳನ್ನು ಮಾತ್ರ ಅವಲಿಂಬಸದೆ ಹೆಚ್ಚು ಹೆಚ್ಚು ವೇದಿಕೆಗಳಲ್ಲಿ ನಡೆಯುವ ರಂಗ ಚಟುವಟಿಕೆಗಳನ್ನು, ಬೀದಿ ನಾಟಕಗಳನ್ನು, ಉಪನ್ಯಾಸಗಳನ್ನು, ನಮ್ಮ ಸಾಂಪ್ರದಾಯಿಕ ಪ್ರವಚನಗಳನ್ನು, ಹರಿಕಥೆ, ದೊಡ್ಡಾಟ, ಸಣ್ಣಾಟಗಳು ನೋಡುವುದರ ಮೂಲಕ ಹಾಗು ಅವುಗಳಲ್ಲಿ ಭಾಗವಹಿಸುವುದರ ಮೂಲಕ ಸಾಧ್ಯ. ಇವುಗಳಿಂದ ಸರಿಯಾದ ಶಬ್ದಗಳ ಬಳಕೆ, ಅವುಗಳ ಉಚ್ಚಾರಣೆ ಮತ್ತು ಧ್ವನಿಯ ಏರಿಳಿತಗಳನ್ನು ಚೆನ್ನಾಗಿ ಕಲಿಯಬಹುದು. ಹೆಚ್ಚು ಹೆಚ್ಚು ಪುಸ್ತಕಗಳನ್ನು, ದಿನ ಪತ್ರಿಕೆಗಳನ್ನು ಓದುವುದರಿಂದ ನಮ್ಮ ಶಬ್ದ ಭಂಡಾರವನ್ನು ಹೆಚ್ಚಿಸಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ವೇದಿಕೆಯ ಮೇಲೆ ನಿಂತು ಮಾತನಾಡಲು ಮನಸ್ಸು ಮಾಡಬೇಕಷ್ಟೆ.
ಕನ್ನಡ ಧ್ವನಿ :ಇಂದಿನ ದಿನಗಳಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವುದು ಮಕ್ಕಳಿಗೆ ಎಷ್ಟನೇ ಇಯತ್ತೆಯಿಂದ ಕನ್ನಡ ಕಲಿಸಬೇಕೆನ್ನುವುದು. ಶಿಕ್ಷಣಕ್ಕೆ ಇಂಗ್ಲಿಷ್ ಅನಿವಾರ್ಯ. ಆದರೆ ಹೆತ್ತತಾಯಿಗೆ ಸಮನಾದ ಮಾತೃಭಾಷೆಯನ್ನು ಮರೆಯುವುದೂ ದ್ರೋಹ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಡ ಹೇರುತ್ತಿದ್ದಾರೆಯೇ ಹೊರತು ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಇಲ್ಲ. ಈ ಬಗ್ಗೆ ತಮ್ಮ ಅಭಿಪ್ರಾಯ
ಅರುಣ್ ಕುಮಾರ್: ಇದಕ್ಕೆ ನನ್ನ ಅಭಿಪ್ರಾಯವನ್ನು ಹೇಳಬೇಕೆಂದರೆ ಯಾರು ತಮ್ಮ ಮಾತೃಭಾಷೆಯನ್ನು ವ್ಯವಹಾರಿಕವಾಗಿ, ಗ್ರಾಂಥಿಕವಾಗಿ ಮತ್ತು ವ್ಯಾಕರಣಬದ್ಧವಾಗಿ ತಿಳಿದುಕೊಂಡಿರುವುದಿಲ್ಲವೋ ಅವರು ಬೇರೆ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇಇಲ್ಲ.ನಾವು ಅನ್ಯಭಾಷೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂದರೆ ಆ ಭಾಷೆಯನ್ನು ಕೇಳಿದಾಗ ನಮ್ಮ ಮನಸ್ಸು ನಮಗೆ ಅರಿವಿಲ್ಲದೆ ತಕ್ಶಣ ನಮ್ಮ ಮಾತೃಭಾಷೆಗೆ ಅನುವಾದ ಮಾಡಿರುತ್ತದೆ. ನಾವು ಅನ್ಯಭಾಷೆಯಲ್ಲಿ ಮಾತನಾಡುವಾಗ ಮೊದಲು ನಮ್ಮ ಮಾತೃಭಾಷೆಯಲ್ಲಿಯೇ ಯೋಚಿಸಿ ತಕ್ಶಣ ನಮ್ಮ ಮನಸ್ಸು ಅನುವಾದ ಮಾಡಿಕೊಟ್ಟ ಶಬ್ದಗಳನ್ನು ಬಳಸುತ್ತೇವೆ. ಇದನ್ನು ಮುಖ್ಯವಾಗಿ ಮಕ್ಕಳ ಪೋಷಕರು ಅರ್ಥಮಾಡಿಕೊಳ್ಳಬೇಕಿದೆ. ನನ್ನ ಅನುಭವದ ಪ್ರಕಾರ ಮನೆಯಲ್ಲಿ ಕನ್ನಡ ಮಾತನಾಡುವ ಶಾಲೆಯಲ್ಲಿ ಎಲ್.ಕೆ.ಜಿ ಯಿಂದಲೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಪರಿಣಾಮಕಾರಿಯಾದ ಇಂಗ್ಲೀಷ್ ಆಗಲಿ ಕನ್ನಡವನ್ನಾಗಲಿ ಬಳಸುವುದನ್ನು ಅಂದರೆ ಮಾತನಾಡುವುದು ಅಥವಾ ಬರೆಯುವುದನ್ನು ನೋಡಿಲ್ಲ. ಇಂದಿನ ದಿನಗಳಲ್ಲಿ ಎಲ್ಲರಿಗೂ ತಮ್ಮ ಮಕ್ಕಳನ್ನು ವೃತ್ತಿಪರ ಅಂದರೆ ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಇತರೆ ಪದವಿಗಳನ್ನು ಓದಿಸಬೇಕೆಂಬ ಹಂಬಲವಿದೆ. ಅವುಗಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮಾತ್ರ ಅಭ್ಯಸಿಸಲೇಬೆಕಾಗಿದೆ. ನಿಜ, ಪದವಿ ಅಧ್ಯಯನ ಮಾಡುವಾಗ ಆತನಿಗೆ ಭಾಷೆ ಚೆನ್ನಾಗಿ ತಿಳಿದಿದ್ದರೆ ಆತ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ. ಆತನಿಗೆ ಇಂಗ್ಲೀಷ್ ಚೆನ್ನಾಗಿ ಅರ್ಥವಾಗಬೇಕಾದರೆ ಮಾತೃಭಾಷೆ ಚೆನ್ನಾಗಿ ಗೊತ್ತಿದ್ದರೆ ಮಾತ್ರ ಸಾಧ್ಯ. ನನ್ನ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ರೌಢಾವಸ್ಥೆ ಬರುವವರೆಗು ತನ್ನ ಮಾತೃ ಭಾಷೆಯ ಮಾಧ್ಯಮದಲ್ಲಿ ಅಭ್ಯಾಸ ಮಾಡಿ (ಏಳನೆ ತರಗತಿಯ ತನಕ) ನಂತರ ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದರೆ ಆತನಿಂದ ವೃತ್ತಿಗೆ, ಮನೆಗೆ, ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ನು ನಿರೀಕ್ಶಿಸಬಹುದು.
ಕನ್ನಡ ಧ್ವನಿ :ತಮ್ಮ ಈ ನಿಃಶ್ವಾಸ ಕಲೆ ತಿಳಿದಿರುವವರು ಹಾಗೂ ಪ್ರದರ್ಶಿಸಬಲ್ಲವರು ಬೆರಳೆಣಿಕೆಯ ಕಲಾವಿದರು ಮಾತ್ರ. ಈ ಕಲೆಯನ್ನು ಸಿದ್ಧಿಸಲು ತಾವು ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದೀರಿ? ಈ ಕಲೆಯನ್ನು ಹೇಗೆ ನಿರ್ವಹಿಸುತ್ತೀರಿ? ಕೊಂಚ ವಿವರ ನೀಡಿ
ಅರುಣ್ ಕುಮಾರ್: ನಾನು ಈ ಕಲೆಯನ್ನು ಪ್ರದರ್ಶಿಸಲು ಆರಂಭಿಸಿದ್ದು ಹುಬ್ಬಳ್ಳಿಯ ಲ್ಯಾಮಿಂಗಟನ್ ಶಾಲೆಯಲ್ಲಿ ಒಂಬತ್ತನೆಯ ತರಗತಿ ಓದುತ್ತಿದ್ದಾಗ (೧೯೭೮-೭೯). ಈ ರೀತಿಯ ಶಬ್ದಗಳನ್ನು ಬಾಯಿಯಿಂದ ಹೊರಡಿಸಬಹುದೆಂದು ಆಗ ಹ್ಯಾಗೆ ಹೊಳೆಯಿತೋ ಗೊತ್ತಿಲ್ಲ. ಕ್ರಮೇಣ ವಾಹನಗಳ ಶಬ್ದಗಳನ್ನಲ್ಲದೆ ಚಿತ್ರನಟರ ಅನುಕರಣೆ ಇಂಗ್ಲೀಷ್ ಚಿತ್ರಗಳ ದೃಶ್ಯಗಳ ಸಂಭಾಷಣೆಗಳನ್ನು ಸೌಂಡ್ ಇಫ಼ೆಕ್ಟ್‌ಗಳೊಂದಿಗೆ ಮಾಡಲಾರಂಬಿಸಿದೆ. ಚಿಕ್ಕವನಿದ್ದಾಗಲೇ ಆರ್ಕೆಸ್ಟ್ರಾದವರು ಕಾರ್ಯಕ್ರಮ ನಿರೂಪಿಸಲು ಅಣಕು ಕಲೆ ಪ್ರದರ್ಶಿಸಲು ಕರೆದುಕೊಂಡು ಹೋಗುತ್ತಿದ್ದರು ಆಗ ಸಂಗೀತದ ಬಗ್ಗೆ ಹೆಚ್ಚು ಆಸಕ್ತಿ ಮೂಡಲಾರಂಬಿಸಿತು ಅಲ್ಲಿದ್ದ ಕೆಲ ಪಕ್ಕವಾದ್ಯಗಳನ್ನು ನುಡಿಸುವುದನ್ನು ಕಲೆತೆ. ಕ್ರಮೇಣ ತಾಳಗಳು, ಶಬ್ದಗಳು ನನ್ನ ತಲೆಯಲ್ಲಿ ಗುಣಿಸುತ್ತಿದ್ದವು ಅವುಗಳನ್ನೂ ಬಾಯಿಯಿಂದ ನುಡಿಸಬಹುದೆಂದು ಅನಿಸಿ ಆ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದೆ. ರಾಜ್ಯದ್ಯಂತ ಹಲವು ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಿಗೆ ಕಾರ್ಯಕ್ರಮ ನೀಡಲು, ಸ್ಪರ್ಧೆಗಳಿಗೆ ತೀರ್ಪುಗಾರನಾಗಿ ಹೋಗುತ್ತಿದ್ದೆ. ಆಗ ಒಬ್ಬ ವೈದ್ಯರ ಪರಿಚಯವಾಯಿತು ಅವರಿಗೆ ನನ್ನ ಬಗ್ಗೆ ವಿಶೇಷ ಒಲವಿತ್ತು ಅವರು ಒಂದೆರಡು ಬಾರಿ ನನ್ನ ಕಾರ್ಯಕ್ರಮಗಳನ್ನು ಗಮನಿಸಿ ಒಂದು ದಿನ ನನ್ನೊಂದಿಗೆ ಚರ್ಚಿಸಲು ಬಂದರು. ಅರುಣ್ ಓದುವ ವಿಷಯದಲ್ಲಿ ಹೇಗಿದ್ದೀಯ ಎಂದು ಕೇಳಿದರು. ಮೊದಲಿನಿಂದಲು ಪ್ರಥಮ ದರ್ಜೆಯಲ್ಲಿ ಪಾಸಾಗುತ್ತ ಬಂದಿದ್ದೇನೆ ನನಗೇನು ಕಷ್ಟ ಅನಿಸುತ್ತಿಲ್ಲ ಎಂದೆ. ಕೆಲವು ವಿಷಯಗಳನ್ನು ಒಂದು ಅಥವಾ ಎರಡು ದಿನಗಳ ಬಿಡುವಿನಲ್ಲಿ ಓದಿ ಒಳ್ಳೆಯ ಅಂಕಗಳನ್ನು ತೆಗೆದು ಪಾಸ್ ಮಾಡಿದ್ದೇನೆ ಎಂದೆ. ಆಗ ಅವರು ಹೇಳಿದ್ದು ‘ ನಿನಗೆ ಗ್ರಹಿಸುವ ಶಕ್ತಿ ಇದೆ ಹಾಗು ಗ್ರಹಿಸಿದ್ದನ್ನು ಪುನರುಚ್ಚಿಸುವ ಕಲೆ ಕರಗತವಾಗಿದೆ’ ಆದ್ದರಿಂದ ಇದು ಸಾಧ್ಯವಾಗಿದೆ. ನೀನು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನಿಡಿದ್ದರೆ ಓದಿನಲ್ಲೂ ಹೆಚ್ಚಿನದನ್ನು ಸಾಧಿಸಬಹುದಿತ್ತು ಎಂದರು. ಆಗ ನನಗರಿವಾಗಿದ್ದು ಯಾಕೆ ನಾನು ನಾಟಕಗಳ ಅದರಲ್ಲೂ ಗ್ರೀಕ್ ನಾಟಕಗಳ ಉದ್ದುದ್ದ ಸಂಭಾಷಣೆಗಳನ್ನು ಒಂದೆರಡು ಬಾರಿ ಓದಿ ಯತಾವತ್ತಾಗಿ ಒಪ್ಪಿಸಿ ನಿರ್ದೇಶಕರುಗಳಿಂದ ಮೆಚ್ಚುಗೆ ಗಳಿಸುತ್ತಿದ್ದೆ ಎಂದು. ನನ್ನ ಸಹಪಾಠಿಗಳು ನನ್ನ ಅಣಕು ಕಾರ್ಯಕ್ರಮವನ್ನು ನೋಡಿ, ಸಂಭಾಷಣೆಗಳನ್ನು ಪಟಪಟ ಒಪ್ಪಿಸುವುದನ್ನು ಕೇಳಿ ಜೆರಾಕ್ಸ್ ಮಷೀನ್ ಅನ್ನುತ್ತಿದ್ದರು ಎಂದು. ಈ ಕಲೆ ದೇವರು ಕರುಣಿಸಿದವರಿಗೆ ಮಾತ್ರ ಸಾಧ್ಯ ಅಂದುಕೊಂಡು ಸುಮ್ಮನಿದ್ದ ನನಗೆ ಈ ವಿಷಯ ತಿಳಿದ ನಂತರ ಮನಸ್ಸು ಮಾಡಿದರೆ ಯಾರು ಬೇಕಾದರು ಕಲಿಯಬಹುದು ಅನ್ನಿಸಿತು ಆಸಕ್ತಿ ಇದ್ದವರಿಗೆ ಕಲಿಸಬಹುದು ಅನ್ನಿಸಿತು. ತಕ್ಷಣ ಕಾರ್ಯಪ್ರವೃತ್ತನಾದೆ. ಇದರ ಬಗ್ಗೆ ತಾಂತ್ರಿಕವಾಗಿ ಯೋಚಿಸಿದಾಗ ಇದು ಕಷ್ಟದ್ದೇನಲ್ಲ ಅನ್ನಿಸಿತು. ಸೋ ಸಿಂಪಲ್!. ನಾವು ಧ್ವನಿವರ್ಧಕದಲ್ಲಿ ಮಾತನಾಡಿದಾಗ ನಮ್ಮ ಧ್ವನಿ ಬಹಳಷ್ಟು ದ್ವಿಗುಣಗೊಂಡು ಕೇಳಿಸುತ್ತದೆ (ಆಂಪ್ಲಿಫ಼ೈ ಆಗುತ್ತದೆ). ಪುಟ್ಟದಾಗಿ ಉಸಿರು ಬಿಟ್ಟರೆ ಬುಸ್ ಅನ್ನುತ್ತದೆ, ನಾಲಿಗೆ ತುಟಿಗಳ ಚಲನೆಯಿಂದ, ದನಿಯ ಏರಿಳಿತಗಳಿಂದ ಉಸಿರಾಟದ ಸಮರ್ಪಕ ನಿಯಂತ್ರಣದಿಂದ ಬೇಕಾದಷ್ಟು ಶಬ್ದಗಳನ್ನು ಹೊರಡಿಸಬಹುದು. ನಮ್ಮ ಸುತ್ತಮುತ್ತಲಿನ ಶಬ್ದಗಳನ್ನು, ಬೇರೆಯವರು ಮಾತನಾಡುವ ಶೈಲಿಯನ್ನು ತದೇಕಚಿತ್ತದಿಂದ ಗಮನಿಸಿ ಅದನ್ನು ಪುನರುಚ್ಚಿಸಲು ಸಾಧ್ಯ. ಹಾಗೆಂದ ಮಾತ್ರಕ್ಕೆ ನಾವು ಎಲ್ಲವುದನ್ನು ಪುನರುಚ್ಚಿಸಲು ಸಾಧ್ಯ ಎಂದು ಹೇಳಲಾಗುವುದಿಲ್ಲ ಏಕೆಂದರೆ ನಮ್ಮ ಮೂಲಧ್ವನಿ ಎಲ್ಲರೀತಿಯ ಶಬ್ದಗಳಿಗೆ ಒಗ್ಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹಳಷ್ಟು ವಿವಿಧ ಶಬ್ದಗಳನ್ನು ಹೊರಡಿಸಲು ಸಾಧ್ಯ ಇದರಲ್ಲಿ ಅನುಮಾನವೇ ಇಲ್ಲ. ಬಹಳ ಮುಖ್ಯವಾಗಿ ಉತ್ತಮ ಗುಣಮಟ್ಟದ ಧ್ವನಿವರ್ಧಕ ಬೇಕು.ಈ ನಿಟ್ಟಿನಲ್ಲಿ ೧೯೯೦ರಲ್ಲಿ ನನ್ನ ವಿದ್ಯಾರ್ಥಿಗಳೊಂದಿಗೆ ಒಂದು ವಿಶೇಷ ಕಾರ್ಯಕ್ರಮವನ್ನು ನೀಡಿ ಸಾಕಷ್ಟು ಪ್ರಶಂಸೆ ಗಳಿಸಿದ್ದೆವು. ನಂತರ ನಾವೆಲ್ಲ ನಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಆ ಪ್ರಯೋಗ ಅಲ್ಲಿಗೆ ನಿಂತು ಹೋಯಿತು. ಇತ್ತೀಚಿಗೆ ಖ್ಯಾತ ರಂಗ ನಿರ್ದೆಶಕ ಸಿ.ಬಸವಲಿಂಗಯ್ಯನವರ ಆಹ್ವಾನದ ಮೇರೆಗೆ ಒಂದೆರಡು ಮಕ್ಕಳ ಶಿಬಿರದಲ್ಲಿ ಪಾಲ್ಗೊಂಡು ಈ ಪ್ರಯೋಗ ಮಾಡುವ ಪ್ರಯತ್ನ ಮಾಡಿದ್ದೇನೆ.
ಕನ್ನಡ ಧ್ವನಿ :ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ತಾವು ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಮೊದಲಿನಂತೇ ಲವಲವಿಕೆಯಿಂದಿರುವುದು ನಮಗೆಲ್ಲಾ ಒಂದು ಮಾದರಿ. ತಮ್ಮ ಮುಂದಿನ ಯೋಜನೆಗಳು ಹಾಗೂ ಜೀವನದ ಮಹತ್ವಾಕಾಂಕ್ಷೆ ಯಾವುದು?
ಅರುಣ್ ಕುಮಾರ್: ನನ್ನ ತಂದೆ-ತಾಯಿ, ಅತ್ತಿಗೆ-ಅಣ್ಣಂದಿರು, ಬಂಧುಗಳು, ಹಿರಿಯರು ಹಾಗು ಗುರುಗಳ ಆಶೀರ್ವಾದದಿಂದ, ಗೆಳೆಯರ ಮತ್ತು ನನ್ನ ಪತ್ನಿ, ಮಗನ ಶುಭ ಹಾರೈಕೆಯಿಂದ ತೀವ್ರ ಅಪಘಾತಕ್ಕೊಳಗಾದರೂ ಮತ್ತೆ ಬದುಕಿ ಬಂದಿದ್ದೇನೆ. ಈ ಅಪಘಾತ ನನಗೆ ಬಹಳ ದೊಡ್ಡ ಪಾಠ ಕಲಿಸಿದೆ. ವಿದ್ಯೆ, ವಿಶೇಷ ಕಲೆಗಳು ಇದ್ದರೂ ಸೋಂಬೇರಿಯಾಗಿ ಅಲೆಯುತ್ತಿದ್ದರಿಂದಲೋ ಏನೋ ದೇವರು ‘ಇವನಿಗೆ ಏನೆಲ್ಲಾ ದಯಪಾಲಿಸಿದ್ದರೂ ಹೀಗಿದ್ದಾನಲ್ಲ’ ಎಂದು ನನಗೆ ಬುದ್ದಿ ಕಲಿಸಲು ಈ ಘಟನೆ ರೂಪಿಸಿದ್ದನೋ ಏನೋ ಅನಿಸುತ್ತದೆ. ಎಲ್ಲಾಕ್ಕಿಂತ ಹೆಚ್ಚಾಗಿ ನನ್ನ ನೆನೆಪಿನ ಶಕ್ತಿ ತಿರುಗಿ ಬಂದದ್ದು ನನ್ನ ಪುಣ್ಯ. ಇನ್ನು ಗಂಭೀರವಾಗಿ ನನ್ನ ವೃತ್ತಿಯಲ್ಲಿ ತೊಡಗಿಸಿಕೊಂಡು ಇರುವ ಕಲೆಯನ್ನು ಹೆಚ್ಚು ಕರಗತ ಮಾಡಿಕೊಂಡು ಸಮಾಜಮುಖಿಯಾಗಿ ಕಾರ್ಯಪ್ರವೃತ್ತನಾಗಬೇಕು ಎಂದು ಕೊಂಡಿದ್ದೇನೆ. ಅದಕ್ಕೆ ಆರೋಗ್ಯ ಮುಖ್ಯ. ಹೀಗಾಗಿ ಪೂರ್ಣ ಗುಣಮುಖವಾಗುವುದರ ಬಗ್ಗೆ ನನ್ನ ಮೊದಲಿನ ಆದ್ಯತೆ. ನನ್ನ ಗುರಿ ಮುಟ್ಟಲು ಇನ್ನು ಕೆಲವೇ ಓವರ್‌ಗಳು ಬಾಕಿ ಇವೆ. ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಜೋರಾಗಬೇಕಿದೆ. ತೆಂಡುಲ್ಕರ್, ಯುವರಾಜ್ ಸಿಂಗ್, ಧೋನಿ ಶೈಲಿಯಲ್ಲಿ ನನ್ನ ಜೀವನದ ಸ್ಕೋರ್ ಗಳಿಸಬೇಕಿದೆ. ಗಟ್ಟಿ ಮನಸ್ಸು ಮಾಡಿದ್ದೇನೆ. ಯು.ಎ.ಇ. ಕನ್ನಡ ಕೂಟದಂತಹ ಸಂಘಟನೆಗಳಿಂದ, ಬಂಧುಗಳು-ಸ್ನೇಹಿತರುಗಳಿಂದ ಮತ್ತು ನಿಮ್ಮ ಮಾಧ್ಯಮಗಳಿಂದ ಪ್ರೊತ್ಸಾಹದ ಕರತಾಡನಗಳು ಸತತವಾಗಿ ದೊರಕಿದರೆ ಜಯ ಗ್ಯಾರಂಟಿ!
ಕನ್ನಡ ಧ್ವನಿ :ತಮ್ಮ ಅಮೂಲ್ಯ ವೇಳೆಯನ್ನು ನಮಗಾಗಿ ವ್ಯಯಿಸಿದ್ದೀರಿ ಹಾಗೂ ತಮ್ಮ ಅಮೂಲ್ಯ ಅಭಿಪಯ ಮತ್ತು ಸಲಹೆಗಳಿಂದ ಈ ಸಂದರ್ಶನವನ್ನು ಶ್ರೀಮಂತಗೊಳಿಸಿದ್ದೀರಿ. ತಮ್ಮ ಎಲ್ಲಾ ಕಾರ್ಯಗಳಿಗೂ ಆ ಭಗವಂತನು ತನ್ನ ಕೃಪೆ ತೋರಿ ತಮಗೆ ಹೆಚ್ಚಿನ ಆರೋಗ್ಯ ಹಾಗೂ ಯಶಸ್ಸನ್ನು ನೀಡಲಿ. ಧನ್ಯವಾದಗಳು, ನಮಸ್ಕಾರ
ಅರುಣ್ ಕುಮಾರ್: ನಮಸ್ಕಾರ.









idannu open maadidre lekhana
idannu open maadidre lekhana blank ide...dayavittu nodabekagi vinanthi
aatimiyateyinda