ತರ೦ಗ ’ವಾರ ಪತ್ರಿಕೆಗೆ 25 ರ ಸ೦ಭ್ರಮ......ವಸ೦ತ ವಿಶೇಷ ಸ೦ಚಿಕೆ-2008 ಬಿಡುಗಡೆ
7162.jpg

ಮಣಿಪಾಲದ ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಶ್ರಯದಲ್ಲಿ ಕಳೆದ ಸುಮಾರು 25 ವರುಷಗಳಿ೦ದ ಮುದ್ರಣಗೊ೦ಡು ಕರಾವಳಿಯಲ್ಲಿ ಮನೆ ಮಹಿಳೆಯರ ಪ್ರೀತಿಯ ಹಾಗೂ ಎಲ್ಲರ ಮನೆ ಮಾತಾಗಿರುವ ಪ್ರಸಿದ್ದ ತರ೦ಗವಾರ ಪತ್ರಿಕೆಗೆ ಎಪ್ರಿಲ್ 26ರ೦ದು 25 ವಸ೦ತಗಳನ್ನು ಪೂರೈಸಿದ ರಜತ ಸ೦ಭ್ರಮ’.

ಇದರ ಪ್ರಯುಕ್ತವಾಗಿ ಸರಣಿಯ ಕಾರ್ಯಕ್ರಮದ ಮೊದಲ ಸಮಾರ೦ಭದ ಉದ್ಘಾಟನೆ ಹಾಗೂ ‘25 ವಸ೦ತಗಳು ವಿಶೇಷ ಸ೦ಚಿಕೆ -2008’ ನ್ನು ಬೆ೦ಗಳೂರಿನ ಇನ್ಫೋಸಿಸ್ ಫೌ೦ಡೇಶನ್ಸ್ ಶ್ರೀಮತಿ ಸುಧಾಮೊರ್ತಿಯವರು ಸ೦ಚಿಕೆಯನ್ನು ಅನಾವರಣಗೊಳಿಸಿದರು.

ಅನಾವರಣ ಸಮಾರ೦ಭವು ಮಣಿಪಾಲದ ಸಿ೦ಡಿಕೇಟ್ ಬ್ಯಾ೦ಕ್ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ಕಳೆದ ಶನಿವಾರದ೦ದು ಜರಗಿತು.

ಹಿರಿಯ ಪತ್ರಕರ್ತರಾದ ಸ೦ತೋಷ ಕುಮಾರ್ ಗುಲ್ವಾಡಿ , ಸಾಹಿತಿ ಜಯ೦ತ್ ಕಾಯ್ಕಿಣಿ, ಐಸಿಐಸಿಐ ಬ್ಯಾ೦ಕ್ ಜೋನಲ್ ಹೆಡ್ ಶೇಖರ್ ರಾವ್ ರವರುಗಳು ಸಮಾರ೦ಭದ ಮುಖ್ಯ ಅತಿಥಿಯಾಗಿ ಭಾವಹಿಸಿದ್ದರು.

ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಡಳಿತ ನಿರ್ದೇಶಕರಾದ ಸತೀಶ್ ಪೈ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತರ೦ಗ ವ್ಯವಸ್ಥಾಪಕ ಸ೦ಪಾದಕಿಯಾದ ಶ್ರೀಮತಿ ಸ೦ಧ್ಯಾ ಎಸ್.ಪೈ ಯವರು ಪ್ರಾಸ್ತಾವಿಕ ಹಾಗೂ ತರ೦ಗ ಬೆಳೆದು ಬ೦ದ ಬಗ್ಗೆ ವಿಷಯವನ್ನು ಮ೦ಡಿಸಿದರು.

ಸ೦ಪಾದಕಿ ಶ್ರೀಮತಿ ರಾಜಲಕ್ಷ್ಮೀ ರವರು ಸ್ವಾಗತಿಸಿದರು.ಮ೦ಗಳೂರು ಚೀಫ್ ಬ್ಯೂರೋ ಮನೋಹರ ಪ್ರಸಾದ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ನ೦ತರ ಸ೦ಜೆ 6ರಿ೦ದ 8 ರವರೆಗೆ ಪುತ್ತೂರು ನರಸಿ೦ಹ ನಾಯಕ್ ಮತ್ತು ಬಳಗದಿ೦ದ ನಾದತರ೦ಗವಿಶೇಷ ಸ೦ಗೀತ ಕಾರ್ಯಕ್ರಮ ಜರಗಿತು.

ವರದಿ ವಿವರ( ಉದಯವಾಣಿ)

ಪುಸ್ತಕ ಪುಸ್ತಕವೇ, ಇ ಮಾಧ್ಯಮ `ಇ' ಮಾಧ್ಯಮವೇ... : ಸುಧಾ ಮೂರ್ತಿ

ಉಡುಪಿ, ಎ.೨೬: ಪುಸ್ತಕದ ಓದಿನಲ್ಲಿರುವ ಶಕ್ತಿ ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಬಾರದು. ಪುಸ್ತಕ ಪುಸ್ತಕವೇ, ಇಲೆಕ್ಟ್ರಾನಿಕ್ ಮಾಧ್ಯಮ ಇಲೆಕ್ಟ್ರಾನಿಕ್ ಮಾಧ್ಯಮವೇ ಎಂದು ಬೆಂಗಳೂರು ಇನ್ಪೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾ ಮೂರ್ತಿ ಅವರು ಹೇಳಿದರು.

ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಎ.೨೬ರಂದು ಕನ್ನಡದ ನಂ. ೧ ವಾರಪತ್ರಿಕೆ `ತರಂಗ' ರಜತ ಸಂಭ್ರಮದ ಅಂಗವಾಗಿ ಏರ್ಪಡಿಸಿದ ಸರಣಿ ಕಾರ್ಯಕ್ರಮದ ಮೊದಲ ಸಮಾರಂಭವನ್ನು ಉದ್ಘಾಟಿಸಿ, `ತರಂಗ ವಸಂತ ವಿಶೇಷ-೨೦೦೮'ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದ ಅವರು ಶ್ರೀಮಂತಿಕೆಯ ಒಡವೆ, ಬಂಗ್ಲೆ, ಕಾರು ಕೊಡಿಸುವ ಬದಲು ಮಕ್ಕಳಿಗೆ ಕಡ್ಡಾಯವಾಗಿ ಓದುವ ಹವ್ಯಾಸವನ್ನು ಕಲಿಸಬೇಕಾದುದು ತಾಯಂದಿರ ಕರ್ತವ್ಯ ಎಂದು ಕಿವಿಮಾತು ನುಡಿದರು.

`ತರಂಗ'ಕ್ಕೂ ತಮಗೂ ಬೆಳೆದ ೨೫ ವರ್ಷಗಳ ನಂಟನ್ನು ತೆರೆದಿಟ್ಟ ಅವರು ತನ್ನ ತಂದೆಯವರ ಬರಹಗಳನ್ನು, ಬಳಿಕ ತನ್ನ ಬರಹಗಳನ್ನು ಪ್ರಕಟಿಸಲಾಯಿತು. ಆಗಿನಿಂದ `ತರಂಗ'ದೊಂದಿಗೆ ತಮ್ಮ ಅವಿನಾಭಾವ ಸಂಬಂಧ ಬೆಳೆಯಿತು ಎಂದರು.
ಓದುಗರ ಅಭಿರುಚಿ ಬದಲಾಗುತ್ತ ಇರುತ್ತದೆ. ಹಿಂದೆ ಸಂತೋಷಕುಮಾರ ಗುಲ್ವಾಡಿ, ಈಗ ಸಂಧ್ಯಾ ಪೈ, ಯು.ಬಿ.ರಾಜಲಕ್ಷ್ಮೀಯವರು ಅದೇ ಚೌಕಟ್ಟಿನಲ್ಲಿ ಹೊಸ ಹೊಸ ವಿನ್ಯಾಸಗಳನ್ನು ತರುವ ಮೂಲಕ ಪತ್ರಿಕೆಗೆ ಹೊಸ ಛಾಪು ನೀಡುತ್ತಿರುವುದರಿಂದ ಪತ್ರಿಕೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ರಿಕೆಗಳು ಉಳಿಯುವುದು ಧನಬಲದಿಂದಲ್ಲ, ಓದುಗರಿಂದ ಎಂದ ಸುಧಾ ಮೂರ್ತಿಯವರು ಮತ್ತೊಬ್ಬರ ಮನಸ್ಸನ್ನು ಅರಿತುಕೊಳ್ಳುವ ಜಾಣ್ಮೆ ಪತ್ರಿಕೆಗಳ ಮುಖ್ಯಸ್ಥರಿಗೆ ಅತಿ ಅಗತ್ಯ. ಈ ಕೆಲಸವನ್ನು `ತರಂಗ' ಮಾಡುತ್ತಿದೆ ಎಂದರು.

ಹೊಸ ಪೀಳಿಗೆ:ಆಕರ್ಷಣೆ
ಪತ್ರಕರ್ತರು ಹೊಸ ತಲೆಮಾರನ್ನು ಆಕರ್ಷಿಸುವ ಪ್ರಯತ್ನ ಮಾಡಬೇಕು. ಹೊಸ ತರುಣ ಮನಸ್ಸುಗಳನ್ನು ಅರ್ಥೈಸಿಕೊಂಡು ಬದಲಾವಣೆಗಳನ್ನು ತರಬೇಕು. ಒಂದು ಕ್ಷಣದಲ್ಲಿ ಹಲವು ಪತ್ರಿಕೆಗಳು ಕಾಣುವಾಗ ಥಟ್ಟನೆ `ತರಂಗ' ಖರೀದಿ ಮಾಡಬೇಕೆಂಬ ಚಿಂತನೆ ಬರಬೇಕು. ಪತ್ರಿಕೆಗಳನ್ನು ಸಮಾಜಮುಖಿಯಾಗಿ ಹೊರತರಬೇಕು ಎಂದು ಕವಿ, ಸಾಹಿತಿ ಜಯಂತ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕರೆ ನೀಡಿದರು.

ಓದು-ಪತ್ರೊಡೆ
ಓದಿನ ರುಚಿ `ಪತ್ರೊಡೆ' ತಿಂದಂತೆ. ರುಚಿಯನ್ನು ಪುಟಗಟ್ಟಲೆ ಬರೆದರೆ ಅರಿವಾಗುತ್ತದೆಯೆ? ಅದೇ ರೀತಿ ಒಳ್ಳೆಯ ಸಾಹಿತ್ಯ, ಕಾವ್ಯ, ಸಂಗೀತವನ್ನು ಆಸ್ವಾದಿಸುವ ರುಚಿ ಮೈಗೂಡಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಹಣ ಗಳಿಸುವ ಯಂತ್ರಗಳನ್ನಾಗಿ ಬೆಳೆಸುವ ಬದಲು ಪರಸ್ಪರ ಪ್ರೀತಿ ವಿಶ್ವಾಸವನ್ನು ಬೆಳೆಸುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ಪುತ್ತೂರು ನರಸಿಂಹ ನಾಯಕ್ ಮತ್ತು ಬಳಗದವರಿಂದ `ನಾದತರಂಗಘಿ' ಕಾರ್ಯಕ್ರಮ ಜರಗಿತು.   

ಕಾಶ್ಮೀರ, ಅಮೆರಿಕಕ್ಕೆ `ತರಂಗ'
ಇನ್ನೋರ್ವ ಮುಖ್ಯ ಅತಿಥಿ, `ತರಂಗ'ದ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿಯವರು ತಾನೊಮ್ಮೆ ಕಾಶ್ಮೀರಕ್ಕೆ ಹೋದಾಗ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ಗಾರ್ಡ್ ಒಬ್ಬ `ತರಂಗ'ದ ಸಂಪಾದಕರೆಂದು ಕೇಳಿ ಸಂತೋಷಪಟ್ಟ. ಕೇವಲ ಕಾಶ್ಮೀರಕ್ಕೆ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡಿಗೂ `ತರಂಗ' ಬೆಳೆಯಿತು ಎಂದರು.

ಆರಂಭದಿಂದ ಪತ್ರಿಕೆಯನ್ನು ಬೆಳೆಸಿದ ರೀತಿಯನ್ನು ವಿವರಿಸಿದ ಗುಲ್ವಾಡಿಯವರು ಟಿ.ಮೋಹನದಾಸ ಪೈ, ಟಿ.ಸತೀಶ್ ಪೈ ಅವರು ನೀಡಿದ ಸಹಕಾರ, ಪ್ರೋತ್ಸಾಹವನ್ನು ಸ್ಮರಿಸಿಕೊಂಡರು. ಪೈ ಬಂಧುಗಳು ನೀಡಿದ ಸಹಕಾರದಿಂದ ಸುಬ್ಬುಲಕ್ಷ್ಮೀ, ಬಿಸ್ಮಿಲ್ಲಾ ಖಾನ್, ಭೀಮಸೇನ್ ಜೋಶಿ, ರವಿಶಂಕರ್, ಗಂಗೂಬಾಯಿ ಹಾನಗಲ್, ಅಮ್ಜದ್ ಆಲಿ ಖಾನ್, ಬೇಂದ್ರೆ, ಮಾಸ್ತಿ, ಆರ್.ಕೆ.ಲಕ್ಷ್ಮಣ್ ಅಂತಹ ಹಿರಿಯರ ಸಂದರ್ಶನ ನಡೆಸುವ ಅವಕಾಶ ದೊರಕಿತು ಎಂದು ಗುಲ್ವಾಡಿ ಹೇಳಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ., ಆಡಳಿತ ನಿರ್ದೇಶಕ ಟಿ.ಸತೀಶ್ ಯು. ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಐಸಿ‌ಐಸಿ‌ಐ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಶೇಖರ ರಾವ್ ಮುಖ್ಯ ಅತಿಥಿಗಳಾಗಿದ್ದರು. `ತರಂಗ'ದ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ ಪ್ರಸ್ತಾವನೆಗೈದರು. ಕಾರ್ಯನಿರ್ವಾಹಕ ಸಂಪಾದಕರಾದ ಯು.ಬಿ.ರಾಜಲಕ್ಷ್ಮೀ ಸ್ವಾಗತಿಸಿ, ಹಿರಿಯ ಉಪಸಂಪಾದಕ ತಿಲಕನಾಥ ಮಂಜೇಶ್ವರ ವಂದಿಸಿದರು. `ಉದಯವಾಣಿ' ಮಂಗಳೂರು ಕಚೇರಿ ಚೀಫ್ ಬ್ಯೂರೋ ಮನೋಹರ ಪ್ರಸಾದ್ ಮತ್ತು ರೆಜಿನಾ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.

ಸಿಬಂದಿಗಳಿಗೆ ಸಮ್ಮಾನ
`ತರಂಗ'ದ ಸಮನ್ವಯಕಾರ ಮಾಧವರಾಯ ಪ್ರಭು, ಬೆರಳಚ್ಚುಗಾರರಾದ ವಾರಿಜಾ, ಹಿರಿಯ ಉಪಸಂಪಾದಕ ತಿಲಕನಾಥ ಮಂಜೇಶ್ವರ, ಪ್ರೂಫ್ ರೀಡರ್ ಡಿ.ರಾಮ ಭಟ್, ಕಾರ್ಯನಿರ್ವಾಹಕ ಸಂಪಾದಕಿ ಯು.ಬಿ.ರಾಜಲಕ್ಷ್ಮೀ, ಕಚೇರಿ ಸಹಾಯಕ ದಿವಾಕರ ಸಾಲ್ಯಾನ್, ಪ್ರಸರಣ ವಿಭಾಗದ ಸಲಹೆಗಾರ ಕೃಷ್ಣ ನಾಯರಿ ಅವರನ್ನು ಸಮ್ಮಾನಿಸಲಾಯಿತು. ಇತರ ಸಿಬಂದಿಗಳಾದ ರೇಣುಕಾ, ಜೇಮ್ಸ್‌ವಾಜ್, ಎನ್.ಎಸ್.ಭಟ್, ನರಸಿಂಹ ಆಚಾರ್, ಸುಬ್ರಹ್ಮಣ್ಯ, ಮಂಜುನಾಥ ನಾಯಕ್, ರಮೇಶ್ ನಾಯಕ್, ಶಶಿಕಲಾ ಶೆಟ್ಟಿಗಾರ್, ಜಯರಾಮ ಕಾರಂತ, ರೇವತಿ, ಪ್ರತಿಭಾ, ಗಣಪತಿ ಅವರನ್ನು ಗೌರವಿಸಲಾಯಿತು.

`ತರಂಗ'ಕ್ಕೆ ಮದ್ವೆ ವಯಸ್ಸು...
* `ತರಂಗ'ಕ್ಕೆ ರಜತ ಸಂಭ್ರಮ. ೨೫ ವಯಸ್ಸು ಅಂದರೆ ಮದುವೆ ವಯಸ್ಸು. ಒಳ್ಳೆಯ ಹುಡುಗ ಅಥವ ಹುಡುಗಿಯನ್ನು ಹುಡುಕಬೇಕು ಎಂದವರು ಜಯಂತ್ ಕಾಯ್ಕಿಣಿ.

ಎರಡೇ ಬುಕ್ ಓದೂದು
* ಜನರೀಗ ಎರಡೇ ಬುಕ್‌ಗಳನ್ನು ಓದುತ್ತಾರೆ. ಪಾಸ್ ಬುಕ್ ಮತ್ತು ಚೆಕ್ ಬುಕ್.
* ಜಯಂತ್ ಕಾಯ್ಕಿಣಿ ತಂದೆ ಗೌರೀಶ್ ಕಾಯ್ಕಿಣಿಯವರು ದೇವರನ್ನು ನಂಬುತ್ತಿರಲಿಲ್ಲ. ಅವರ ಭಾವಚಿತ್ರಕ್ಕೆ ಹಾರ ಹಾಕಬೇಕೋ ಬೇಡವೋ ಎಂಬ ಚರ್ಚೆಯಾಗಿ ಕೊನೆಗೆ ಹಾಕಲಿಲ್ಲ. ಜಯಂತ್ ಅವರ ಮಗನಿಗೆ ಕಾಶೀದಾರ ಹಾಕಿದ್ದರು. ದಿನಾ ಬಾತ್‌ರೂಮಿನಲ್ಲಿ ದಾರ ಹೋಗ್ತಿದ್ದಾಗ ರಾತ್ರಿ ಕಳಚಿಟ್ಟು ಬೆಳಗ್ಗೆ ಸ್ನಾನವಾದ ಅನಂತರ ಹಾಕಿಕೊ ಎಂದು ಜಯಂತ್ ಸಲಹೆ ನೀಡಿದರು. ಈ ಮಗ ಕಾಶೀದಾರವನ್ನು ಅಜ್ಜನ ಭಾವಚಿತ್ರಕ್ಕೆ ಹಾಕಿದ. ಕೇಳಿದರೆ ಉತ್ತರವೇನಂತೆ ಗೊತ್ತೆ?: `ಚಾರ್ಜ್‌ಗೆ ಇಟ್ಟಿದ್ದೇನೆ'. ಮಕ್ಕಳ ಮನಸ್ಸು ಇಷ್ಟೂ ಅಪ್‌ಡೇಟ್ ಆಗ್ತಿದೆ ಎಂದವರು ಜಯಂತ್ ಕಾಯ್ಕಿಣಿ.

ಮಂಚ ಬಾರದು, ಮಡದಿ ಬಾರಳು...
* `ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು| ಸಂಚಿತಾರ್ಥದ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ' ಎಂಬ ಪುರಂದರದಾಸರ ಪದವನ್ನು ಉಲ್ಲೇಖಿಸಿದ ಸುಧಾ ಮೂರ್ತಿಯವರು ಸಚ್ಚಾರಿತ್ರ್ಯ ಹುಟ್ಟಿಸುವ ಪುಸ್ತಕಕ್ಕಿಂತ ಉತ್ತಮ ಸಂಗಾತಿ ಇನ್ನೊಂದಿಲ್ಲ ಎಂದರು.
* ಮೊದಲು `ತರಂಗ'ದಲ್ಲಿ ಸಂತೋಷಕುಮಾರ್ ಗುಲ್ವಾಡಿಯವರು ಲೇಖಕರ ಭಾವಚಿತ್ರ ಮತ್ತು ವಿಳಾಸವನ್ನು ಪ್ರಕಟಿಸುತ್ತಿದ್ದಾಗ ಅದಕ್ಕಾಗಿ ಬರಹಗಳನ್ನು ಕಳುಹಿಸುತ್ತಿದ್ದೆವು. ಒಂದು ರೀತಿಯಲ್ಲಿ ಆ ಮನಸ್ಸು ಬಾಲಿಶತನ ಎಂದರು ಸುಧಾ ಮೂರ್ತಿ.
* ಮನೇಲಿ ಮಲ್ಕೊಂಡು ಓದುವ ಮಜಾ ಇಲೆಕ್ಟ್ರಾನಿಕ್ ಲ್ಯಾಪ್‌ಟಾಪ್‌ನಲ್ಲಿ ಸಿಗುತ್ತದೆಯೆ? ಲೈಟ್ ಆರಿಸು ಎಂದು ನಾರಾಯಣಮೂರ್ತಿ ಹೇಳ್ಬೇಕ್, ನಾನ್ ಆಗೋದಿಲ್ಲ ಅನ್ಬೇಕ್. ಇಂತಹ ಜಗಳ ಆಗ್ಬೇಕ್ ಎಂದ ಸುಧಾ ಮೂರ್ತಿ ಮಳೆ ಬಂದಾಗ ಮನೇಲಿ ಪುಸ್ತಕ ಓದ್ತಾ ಇರುವುದು ಎಷ್ಟು ಚೆನ್ನ? ವಿದ್ಯುತ್ ಇಲ್ಲದೆಯೂ ಸೂರ್ಯ ಪ್ರಕಾಶದಲ್ಲಿ ಪುಸ್ತಕ ಓದಬಹುದು, ವಿದ್ಯುತ್ ಇಲ್ಲದಿದ್ದರೆ ಇಲೆಕ್ಟ್ರಾನಿಕ್ ಮಾಧ್ಯಮ ಚಾಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಕೃಪೆ: ಜಯಪ್ರಕಾಶ್ ಕಿಣಿ.

Syndicate

Syndicate content