- ಪ್ರೇಮಶೇಖರ
cherryprem@gmail.com
ಇದು ಹೀಗೇ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸಿಬಿಡುತ್ತದೆ ಎಂದು ಕನಕಾಳಿಗೆ ಅನಿಸಿದ್ದು ಅವಳ ಗಂಡ ಮಾನಪ್ಪನಿಗೆ ತಿಳಿಯಲಿಲ್ಲ. ತಿಳಿದರೂ ಅದಕ್ಕೆ ಸೊಪ್ಪು ಹಾಕುವ ಜಾಯಮಾನದವನೇನೂ ಅವನಲ್ಲ. ಇದು ಕನಕಾಳಿಗೂ ಗೊತ್ತು. ಹೀಗಾಗಿ ತನ್ನ ಮನಸ್ಸಿಗೆ ಬಂದುದನ್ನು ಅವನಿಗರಿವಾಗದಂತೆ ಕಾರ್ಯರೂಪಕ್ಕಿಳಿಸಲು ಅವಳು ನಿರ್ಧರಿಸಿದಳು. ನಿರ್ಧಾರವನ್ನೇನೋ ತೆಗೆದುಕೊಂಡಳು. ಆದರೆ ಅದನ್ನು ಕಾರ್ಯರೂಪಕ್ಕಿಳಿಸುವುದು ಆ ಕ್ಷಣದಲ್ಲಿ ಅವಳಿಗೆ ಸಾಧ್ಯವಾಗುವಂತಿರಲಿಲ್ಲ. ಜಾಣೆಯಾದ ಅವಳು ತಕ್ಕ ಸಮಯಕ್ಕಾಗಿ ಕಾಯಲೂ ನಿರ್ಧರಿಸಿದಳು. ಈ ಎರಡನೆಯ ನಿರ್ಧಾರ ಇಡೀ ಪ್ರಕರಣವನ್ನು ಹಿಗ್ಗಾಮುಗ್ಗ ಜಗ್ಗಾಡಿಬಿಡುತ್ತದೆ ಎಂದು ಅದೆಷ್ಟು ಜಾಣೆಯಾದರೂ ಆ ಕ್ಷಣದಲ್ಲಿ ಅವಳಿಗೆ ಹೊಳೆಯಲಿಲ್ಲ.
ಎಲ್ಲಾ ಶುರು ಆಗಿದ್ದು ಕನಕಾಳ ಎರಡು ವರ್ಷದ ಮಗಳು ಕೋಳಿ ಕೂಗುವುದಕ್ಕೆ ಮೂರು ತಾಸು ಮೊದಲು ನಿದ್ದೆಯಲ್ಲಿ ಧಢಕ್ಕನೆದ್ದು ಕುಳಿತು ತಾನೆಂದೂ ಕಂಡಿರದಿದ್ದ ತನ್ನ ಮಾವನನ್ನು ಬೈಯುತ್ತಾ ಅಳತೊಡಗಿದಾಗ. "ಮಾವಯ್ಯಾ, ನಿಮಗೆ ತಲೆಗಿಲೆ ಕೆಟ್ಟಿದೆಯಾ? ಇದೇನು ಹುಡುಗಾಟ ನಿಮ್ಮದು?" ಎನ್ನುತ್ತಾ ಮಗು ಅಂದದ್ದನ್ನು ಸರಿಯಾಗಿ ಕೇಳಿಸಿಕೊಳ್ಳದೆ ಅವಳು ತನ್ನನ್ನೇ ಬೈಯುತ್ತಿದ್ದಾಳೆ ಎಂದು ಅರೆನಿದ್ದೆಯಲ್ಲಿದ್ದ ಮಾನಪ್ಪನೂ, ಮಗು ನಿದ್ದೆಯಲ್ಲಿ ಪೇಚಾಡಿಕೊಳ್ಳುತ್ತಿದೆ ಎಂದು ಕನಕಳೂ ಅಂದುಕೊಂಡರು. ಸ್ವಲ್ಪ ಹೊತ್ತಿನಲ್ಲಿ ಮಗು ಧೊಪ್ಪನೆ ಹಾಸಿಗೆಯಲ್ಲುರುಳಿ ನಿರಾಳವಾಗಿ ನಿದ್ದೆಹೋಯಿತು. ಕನಕಳೂ ನಿದ್ದೆ ಹೋದಳು. ಆದರೆ ಮಾನಪ್ಪ ಮಾತ್ರ ಹಾಸಿಗೆಯಲ್ಲಿ ಹೊರಳಾಡತೊಡಗಿದ.
ಮಗು ಹೇಳಿದ್ದು ಏನೆಂದು ಸರಿಯಾಗಿ ಅರ್ಥವಾಗದಿದ್ದರೂ ಮಗುವಿನ ದನಿ ಮಾತ್ರ ದೊಡ್ಡ ಹೆಂಗಸಿನದರಂತಿತ್ತೆಂದು ಮಾನಪ್ಪನಿಗೆ ತಿಳಿದುಹೋಗಿತ್ತು. ತಾನೇನಾದರೂ ಕನಸು ಗಿನಸು ಕಂಡೆನೇನೋ ಎಂದು ಅರೆಕ್ಷಣ ಅವನಿಗನಿಸಿದರೂ ಅದು ಕನಸಲ್ಲ ಎಂಬುದು ಅಂಗೈ ಹುಣ್ಣಿನಷ್ಟೆ ಸ್ಪಷ್ಟವಾಗಿದ್ದುದನ್ನು ತಿಳಿಯದ ಮೂರ್ಖನೇನೂ ಅವನಾಗಿರಲಿಲ್ಲ. ಅದೇ ಮುಂದಿನ ಎಲ್ಲಾ ತಾಪತ್ರಯಗಳಿಗೂ ಮೂಲವಾಯಿತು.
ಬೆಳಿಗ್ಗೆ ಎದ್ದವನೇ ಹೆಂಡತಿಯನ್ನು ಕೇಳಿದ: "ಅಲ್ಲಾ ಕನಕಾ, ರಾತ್ರಿ ಮಗು ಅದೇನು ಹಾಗೆ ಮಾತಾಡ್ತು? ಸ್ವರ ಬೇರೇ ಹಾಗಿತ್ತಲ್ಲ?"
ಕನಕಳಿಗೆ ಎಲ್ಲವೂ ಮರೆತೇಹೋಗಿತ್ತು. "ಏನ್ರೀ ನಿಮ್ಮದು?" ಅಂದಳು ದೋಸೆ ಮಗುಚುತ್ತಾ. ಗಂಡ ಮತ್ತೆ ಸೊಲ್ಲೆತ್ತದೇ ಹೋದದ್ದದರಿಂದ ಆಶ್ಚರ್ಯಗೊಂಡ ಅವಳು ಹಿಂದೆ ತಿರುಗಿದರೆ ಮಾನಪ್ಪ ಗರಬಡಿದವನಂತೆ ನಿಂತುಬಿಟ್ಟಿದ್ದಾನೆ!
"ಇದ್ಯಾಕ್ರೀ ಹೀಗೆ ನಿಂತ್ಬಿಟ್ಟಿದ್ದೀರಿ?" ಅಂದಳು ಕಣ್ಣರಳಿಸಿ.
"ಅಲ್ಲ... ಅಲ್ಲಾ... ನೀನು ಹೀಗನ್ನಬೋದಾ?" ಮಾನಪ್ಪ ಕಷ್ಟಪಟ್ಟು ಮಾತು ಹೊರಡಿಸಿದ.
ಕನಕ ಬೆಚ್ಚಿದಳು. "ಅಲ್ರೀ, ನಾನೇನಂದೆ ಅಂಥಾದ್ದು?" ಸಣ್ಣಗೆ ದನಿ ಹೊರಡಿಸಿದಳು.
"ಮಗು ಹಾಗಂತಲ್ಲ ಅಂತ ನಾ ಕೇಳಿದ್ದು ನಿಂಗೆ ತಲೆಹರಟೆ ಅನ್ನಿಸ್ತಾ?" ಈಗ ಮಾನಪ್ಪನ ದನಿ ಸ್ಪಷ್ಟವಾಗಿತ್ತು.
"ತಲೆಹರಟೆ! ಇದೇನ್ರೀ ನೀವು ಹೇಳ್ತಾ ಇರೋದು?"
"ನೋಡಿದ್ಯಾ? ಮತ್ತೆ ಹಂಗೇ ಅಂತೀಯಲ್ಲಾ? ನಾನು ಅಂದ್ರೆ ಅಷ್ಟು ಸದರ ನಿಂಗೆ." ಮಾನಪ್ಪ ಅಬ್ಬರಿಸಿದ. ಕನಕಾ ಕಂಗೆಟ್ಟುಹೋದಳು. ಅದೇ ಗಳಿಗೆಗೆ ಸರಿಯಾಗಿ ಮಾನಪ್ಪನ ಅಬ್ಬರಕ್ಕೆ ಮಲಗಿದ್ದ ಮಗು ಬೆಚ್ಚಿ ಕಿಟಾರನೆ ಕಿರುಚಿಕೊಂಡು ಎದ್ದಿತು. ಕನಕ ಅದರತ್ತ ಓಡಿದಳು. ಅವಳು ಮಗುವನ್ನು ಎದೆಗವಚಿಕೊಂಡು ಸಮಾಧಾನಿಸುತ್ತಿರುವಂತೆ ದಟ್ಟ ಸೀಕಲು ವಾಸನೆ ಅಡಿಗೆಮನೆಯಿಂದ ಹೊರಟು ಇಡೀ ಮನೆಯನ್ನು ಆವರಿಸಿಕೊಳ್ಳತೊಡಗಿತು...
ಆ ದಿನ ಮನೆ ಮನೆಯಂತೆ ಇರಲಿಲ್ಲ...
ಅವರಿಬ್ಬರ ಮನಸ್ಸುಗಳೂ ಮನಸ್ಸುಗಳಂತಿರಲಿಲ್ಲ...
ಹಗಲು ಕಳೆದು ರಾತ್ರಿಯಾಗತೊಡಗಿದಂತೆ ಮಧ್ಯಾಹ್ನ ಉಣ್ಣದ ಗಂಡ ರಾತ್ರಿಯೂ ಮುಷ್ಕರ ಹೂಡಬಹುದೆಂಬ ಸೂಚನೆ ಸಿಕ್ಕಿದಾಗಲೇ ಕನಕ ಪರಿಸ್ಥಿತಿ ಹೀಗೇ ಮುಂದುವರೆದರೆ ಬಿಗಡಾಯಿಸಿಬಿಡುತ್ತದೆ ಅಂದುಕೊಂಡದ್ದು. ಗಂಡನಿಗಿಷ್ಟವಾದ ಕೋಳಿ ಸಾರನ್ನು ಮಾಡಿದರೆ ಅದರ ಗಮಗಮ ಅವನ ಮೂಗಿಗಡರಿ ಅವನು ಸೊಗಡಿನ ಕೊತ್ತಿಯಂತೆ ಅಡಿಗೆ ಮನೆಗೆ ನುಗ್ಗುತ್ತಾನೆ ಎಂದು ಅವಳಿಗೆ ಚೆನ್ನಾಗಿ ಗೊತ್ತು. ಅವನಿಗರಿವಾಗದಂತೆ ಕೋಳಿಸಾರು ಮಾಡಬೇಕೆಂದು ನಿರ್ಧರಿಸಿದಳು. ಅವಳು ಜಾಣೆ. ಗಂಡಸಿನ ಹೃದಯಕ್ಕೆ ದಾರಿ ಹೊಟ್ಟೆಯ ಮೂಲಕ ಎಂದವಳು ಬಲ್ಲಳು.
ಆದರೆ ಕೋಳಿಸಾರಿಗೆ ಒಂದೇಒಂದು ಅಡ್ಡಿ. ಆವತ್ತು ಗಾಂಧಿ ಜಯಂತಿಯಾಗಿದ್ದುದರಿಂದ ಕೋಳಿ ಅಂಗಡಿಗಳೆಲ್ಲಾ ಬಾಗಿಲು ಜಡಿದುಕೊಂಡು ಮೌನವಾಗಿ ನಿಂತುಬಿಟ್ಟಿದ್ದವು. ನಾಳೆ ಬೆಳಿಗ್ಗೆ ಬೀದಿ ಕೋಳಿಗಳು ಕೂಗುವ ಮೊದಲೇ ಬೀದಿ ಕೊನೆಯ "ಕೊಕ್ಕೊಕ್ಕೋ ಕೋಳಿ ಸೆಂಟರ್" ತೆರೆದು ಕೋಳಿಗಳು ಅರ್ತನಾದ ಆರಂಭಿಸಿ ತನ್ನನ್ನೆಬ್ಬಿಸಿದೊಡನೇ ಹೋಗಿ ಕೋಳಿ ತಂದು ಗಂಡ ಏಳುವುದರೊಳಗೆ ಗಮಗಮಿಸುವ ಕೋಳಿ ಸಾರು ಇಳಿಸಿಬಿಡಬೇಕೆಂದು ಅವಳು ನಿರ್ಧರಿಸಿದಳು. ತಕ್ಕ ಸಮಯಕ್ಕಾಗಿ ಕಾಯುವುದನ್ನು ಅವಳು ಶಾಲೆಗೆ ಸೇರಿದ ಮೊದಲ ದಿನ ಗಡವ ಸಿದ್ದಲಿಂಗ ಸ್ವಾಮಿ ಚಿವುಟಿದ್ದಕ್ಕೆ ತಾ ಮಾಡಿದ ಕಂಪ್ಲೇಂಟನ್ನು ಮಿಸ್ಸು ಲೆಕ್ಕಕ್ಕೆ ತೆಗೆದುಕೊಳ್ಳದೇಹೋದಾಗಿನಿಂದಲೂ ರೂಢಿ ಮಾಡಿಕೊಂಡಿದ್ದಳು. ಅವಳ ನೆನಪಿನ ಶಕ್ತಿ ಅಗಾಧ.
ಮಾನಪ್ಪ ರಾತ್ರಿಯೂ ಉಣ್ಣಲಿಲ್ಲ. "ಅಲ್ಲಾ ನಾ ಏನು ಮಾಡಿದೆ ಅಂತ ನನ್ ಮೇಲೆ ಈ ಕೋಪ? ನನ್ನ ಮೇಲೆ ಕೋಪ ಆದ್ರೆ ನಿಮ್ಮ ಹೊಟ್ಟೆನ್ಯಾಕೆ ನೋಯಿಸ್ತೀರಿ?" ಅಂತ ಕೇಳಿದರೆ ಅವನು ಮುಸುಕೆಳೆದು ಮಲಗಿಬಿಟ್ಟ. ಕೆಲವು ಗಂಡಸರು ಕೆಲವು ಸಲ ಹೆಂಗಸರಂತಾಗಿಬಿಡುತ್ತಾರೆ. ಆಗ ಅವರ ಸ್ವಭಾವ ಹಠಮಾರಿ ಹೆಂಗಸರಿಗಿಂತಲೂ ಕೆಟ್ಟದ್ದಾಗಿಬಿಡುತ್ತದೆ.
ಆ ರಾತ್ರಿ ಕನಕ ಬೇಸರಿಸಿ ಬೈದುಕೊಂಡ ಹಲವಾರು ಜನರಲ್ಲಿ ನಾಡಿಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮೆಲ್ಲರ ಪ್ರೀತಿಯ ಬಾಪೂಜಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರೂ ಒಬ್ಬರಾಗಿದ್ದರು.
ಹೊಟ್ಟೆ ತುಂಬಿದ, ಮನಸ್ಸು ಹಗುರಾಗಿದ್ದ ಮಗು ನಿದ್ದೆಹೋಯಿತು. ಹೊಟ್ಟೆ ಖಾಲಿಯಾಗಿ ಎದೆ ಭಾರವಾಗಿದ್ದ ಗಂಡ ಹೆಂಡತಿ ಇಬ್ಬರೂ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು. ಅದೆಷ್ಟೋ ಹೊತ್ತಿನ ನಂತರ ಇಬ್ಬರಿಗೂ ಜೊಂಪು ಹತ್ತಿತು ಅನ್ನುತ್ತಿದ್ದಂತೇ ಮಗು ದಢಕ್ಕನೆದ್ದು ಕುಳಿತು "ಮಾವಯ್ಯಾ ನೀವು ತಿಳಿದೋರು, ಹಿರೀಕರು. ಹೀಗೆಲ್ಲಾ ಮಾಡಬ್ಯಾಡಿ. ನಿಂ ದಮ್ಮಯ್ಯಾ ಅಂತೀನಿ" ಎಂದು ಒರಲಿ ಮತ್ತೆ ಧೊಪ್ಪನೆ ಉರುಳಿ ನಿದ್ದೆಹೋಗಿಬಿಟ್ಟಿತು. ಅರೆನಿದ್ದೆಯಲ್ಲಿದ್ದ ಗಂಡ ಹೆಂಡತಿ ಇಬ್ಬರಿಗೂ ತಟ್ಟಿ ಎಬ್ಬಿಸಿದಂತೆ ಎಚ್ಚರವಾಯಿತು. "ಇದ್ಯಾಕೆ ಮಗು ಹೀಗೆ ನಿದ್ದೆಯಲ್ಲಿ ಕನವರಿಸಿಕೊಳ್ಳುತ್ತಲ್ಲಾ?" ಎಂದು ಕನಕ ಅಂದುಕೊಂಡರೆ, "ನಿಮ್ಮ ದಮ್ಮಯ್ಯಾ ಅಂತೀನಿ ಊಟ ಮಾಡಿ" ಎಂದು ಹೆಂಡತಿ ಗೋಗರೆದದ್ದು ನಿಜವಾಗಿಯೋ ಅಥವಾ ನಾನೇನಾದರೂ ಕನಸು ಗಿನಸು ಕಂಡೆನೇನೋ ಎಂದು ಮಾನಪ್ಪ ಅಂದುಕೊಂಡು ಅರ್ಥವಾಗದ ಸಂದಿಗ್ಧಕ್ಕೆ ಬಿದ್ದ. ಖಾಲಿಹೊಟ್ಟೆಯಲ್ಲಿ ಮಲಗಿದರೆ ಹೀಗೇ ಎಂದುಕೊಂಡು ಎದ್ದು ಸೀದಾ ಅಡಿಗೆಮನೆಗೆ ಹೋಗಿ ಒಂದು ಚೊಂಬು ನೀರು ಕುಡಿದ.
ಮಾರನೆಯ ಬೆಳಿಗ್ಗೆ ಕನಕ ಕೋಳಿ ಸಾರನ್ನೇನೋ ಮಾಡಿದಳು. ಮಾಡಿಕೊಂಡು ಕಾದಳು. ಈ ಮಾನಪ್ಪ ಬೆಳಿಗ್ಗೆ ಬಯಲಿಗೆ ಹೋದವನು ಹಿಂತಿರುಗುವಾಗ ಬೀದಿಯ ಮೂಲೆಯಲ್ಲಿದ್ದ ಸಾಕವ್ವನ ತಡಿಕೆಯ ಹೋಟೆಲಿಗೆ ನುಗ್ಗಿ ಹಬೆಯಾಡುತ್ತಿದ್ದ ಹನ್ನೆರಡು ಇಡ್ಲಿಗಳನ್ನು ಗದುಕಿ ಮೇಲೆ ಉದ್ದನೆಯ ಗಾಜಿನ ಲೋಟದ ಕತ್ತಿನವರೆಗೆ ತುಂಬಿದ್ದ ಟೀಯನ್ನು ಸುರಿದುಕೊಂಡ. "ಡರ್ ಡರ್" ಎಂದು ತೇಗುತ್ತಾ, ಹೊಟ್ಟೆ ಮೇಲೆ ಕೈಯಾಡಿಸಿಕೊಳ್ಳುತ್ತಾ ಅವನು ಮನೆಯೊಳಗೆ ನುಗ್ಗಿದಾಗಲೇ ಅವನು ಮಾಡಿದ್ದ ಘನಂದಾರೀ ಕೆಲಸದ ಸುಳಿವು ಕನಕಳಿಗೆ ಹತ್ತಿಬಿಟ್ಟಿತು. ಅವಳ ಪಿತ್ಥ ನೆತ್ತಿಗೇರಿತು. ಸೀದಾ ಅಡಿಗೆಮನೆಗೆ ನುಗ್ಗಿದವಳೇ ಒಲೆಯ ಮೇಲಿದ್ದ ಕೋಳಿಸಾರಿನ ಪಾತ್ರೆಯನ್ನು ಕೆಳಗಿಳಿಸಿ ಅಷ್ಟನ್ನೂ ತಟ್ಟೆಗೆ ಸುರಿದುಕೊಂಡು ನಡುಮನೆಗೆ ಬಂದು ಗೋಡೆಯೊರಗಿ ಕೂತು ತಟ್ಟೆಗೆ ಕೈಹಾಕಿದಳು.
ಸೈ! ಹೆಣ್ಣು ಅಂದರೆ ಹಾಗಿರಬೇಕು.
ಮಾನಪ್ಪನಿಗೆ ಬಾಯಿ ಬಿಟ್ಟುಕೊಂಡು ನೋಡುತ್ತಾ ನಿಂತದ್ದೇ ಬಂತು.
ಥೂ! ಭಂಡ ಗಂಡು ಜನ್ಮ.
ಆ ಭಂಡ ಗಂಡಿಗೆ ಮಧ್ಯಾಹ್ನವೂ ಸಾಕವ್ವನ ಹೋಟೇಲೇ ಗತಿಯಾಯಿತು. ಬೆಳಿಗ್ಗೆ ತಾನೇ ಹಿಡಿದ ದಾರಿಯಲ್ಲವೇ?
ರಾತ್ರಿ...
ಮಗು ಗೋಡೆಯ ಪಕ್ಕ ಉರುಳಿಕೊಂಡದ್ದರಿಂದ ಕನಕ ಹಾಸಿಗೆ ಮಧ್ಯೆ ಮಲಗಿದಳು. ಮಾನಪ್ಪ ಈ ಅಂಚಿನಲ್ಲಿ ಹೆಂಡತಿಗೆ ಬೆನ್ನು ಮಾಡಿ ಮಲಗಿದ. ಈ ರಾತ್ರಿ ನಿನ್ನೆ ರಾತ್ರಿಗಿಂತ ಪರವಾಗಿಲ್ಲ, ಅವನಿಗೆ ಸ್ವಲ್ಪ ನಿದ್ದೆ ಬಂತು. ನಿದ್ದೆಯಲ್ಲಿ ಅದೇನು ಕನಸು ಕಂಡನೋ ಪಕ್ಕಕ್ಕೆ ಹೊರಳಿ ಅಂಗಾತ ಮಲಗಿದ್ದ ಹೆಂಡತಿಯ ಹೊಟ್ಟೆಯ ಮೇಲೆ ಕೈ ಹಾಕಿದ.
ನುಣುಪು ಹೊಟ್ಟೆ...
ಹಾಗೇ ನಿದ್ದೆಗಣ್ಣಿನಲ್ಲಿ ಮೆಲ್ಲಗೆ ಸವರಿದ. ಚಂದ ಅನಿಸಿತು. ಮುನಿದ ಹೆಂಡತಿ ಗುರ್ ಅನ್ನಬಹುದೇನೋ ಎಂದು ಅರೆಕ್ಷಣ ಅನಿಸಿದರೂ ಅವಳೀಗ ನಿದ್ದೆಹೋಗಿದ್ದಾಳೆ ಎಂದುಕೊಂಡು ಧೈರ್ಯ ತಾಳಿದ...
ಕನಕಳಿಗಿನ್ನೂ ನಿದ್ದೆ ಬಂದಿರಲಿಲ್ಲ. ತನ್ನ ಹೊಟ್ಟೆಯ ಮೇಲೆ ಸರಿದಾಡುತ್ತಾ ಹೊಕ್ಕಳ ಕೆಳಗೆ ಮುಲುಮುಲುಗುಟ್ಟಿಸುತ್ತಿದ್ದ ಗಂಡನ ಕೈಯನ್ನು ಹಿಡಿದೆತ್ತಿ ಅತ್ತ ಒಗೆದಳು. "ನಿನ್ನೆಯಿಂದಾ ಒಂದು ಮಾತಿಲ್ಲ. ಈಗ ಬೇಕಾಯ್ತಾ?" ಎಂದು ಸ್ವಲ್ಪ ಜೋರಾಗಿಯೇ ಗೊಣಗಿದಳು. ಮಾನಪ್ಪನಿಗೆ ರಸಭಂಗವೆನಿಸಿದರೂ ಅದಕ್ಕಿಂತಲೂ ಅವಳೆದುರಿಗೆ ತಾನು ಸಣ್ಣವನಾಗಿಬಿಟ್ಟೆನಲ್ಲಾ ಎಂದೆನಿಸಿ ನಾಚಿಕೆಯಾಗಿಬಿಟ್ಟಿತು. ಅವಳಿಗೆ ಮರ್ಮಕ್ಕೆ ತಾಗುವ ಹಾಗೆ ಏನಾದರೂ ಹೇಳಿ ತಾನೇನೂ ಬೇಕೆಂದೇ ಅವಳ ಹೊಟ್ಟೆಯ ಮೇಲೆ ಕೈ ಹಾಕಲಿಲ್ಲ ಎಂದವಳಿಗೆ ಮನವರಿಕೆ ಮಾಡಿಕೊಡಬೇಕೆಂದು ಬಯಸಿ ಅಂಥಾ ಸಮಯಗಳಲ್ಲಿ ಅಂಥಾ (ಭಂಡ) ಗಂಡಸರೆಲ್ಲಾ ಅನ್ನುವಂತೆ "ಹೋಗೇ, ನಂಗೇನೂ ಬ್ಯಾಡ ಆ ನಿನ್ನ ಬಚ್ಚಲು" ಅಂದುಬಿಟ್ಟ. ಕನಕಳಿಗೆ ರೇಗಿಹೋಯಿತು. "ಬಚ್ಚಲಂತೆ ಬಚ್ಚಲು! ದಿನಾ ರಾತ್ರಿ..." ಎಂದು ಮತ್ತೇನೋ ಅವಳು ಹೇಳುವುದರೊಳಗೆ ಮಗು ದಢಕ್ಕನೆದ್ದು ಕೂತು ದೊಡ್ಡ ಹೆಂಗಸಿನ ದನಿಯಲ್ಲಿ "ಅಯ್ಯೋ ಮಾವಯ್ಯಾ, ಬಚ್ಚಲಾಯ್ತಲ್ಲೋ ನನ್ ಬಾಳು! ಬಚ್ಚಲಿಗೆ ಬಿತ್ತಲ್ಲೋ ನನ್ನ ಮಾನಾ" ಎಂದು ಕಲ್ಲು ಕರಗುವಂತೆ ಚೀರಿತು.
ಗಂಡ ಹೆಂಡತಿ ಇಬ್ಬರೂ ಧಡಕ್ಕನೆದ್ದು ಕುಳಿತರು. ಇಬ್ಬರನ್ನೂ ಒಮ್ಮೆ ನೋಡಿದ ಮಗು ಕಣ್ಣುಗಳನ್ನು ಪಿಳಿಪಿಳಿ ಬಿಟ್ಟಿತು. ಮರುಕ್ಷಣ ತನ್ನಮ್ಮನ ತೊಡೆ ಮೇಲೆ ತಳೆಯಿಟ್ಟು ನಿದ್ದೆಹೋಗಿಬಿಟ್ಟಿತು, ಥೇಟ್ ಮಗುವಿನ ಹಾಗೆ. ಮಗುವಿನ ಬೆನ್ನ ಮೇಲೆ ಕೈಯಾಡಿಸತೊಡಗಿದ ಕನಕ ಪಕ್ಕದಲ್ಲಿ ಯಾರೋ ಬಿಕ್ಕಿದಂತಾಗಿ ಸರಕ್ಕನೆ ತಿರುಗಿದಳು. ಅವಳ ಕಣ್ಣುಗಳು ಆಕಾಶದಷ್ಟು ಅಗಲವಾಗಿ ತೆರೆದುಕೊಂಡವು.
ಮಾನಪ್ಪ ಅಳುತ್ತಿದ್ದ!
ಮಗುವಿನ ಬಾಯಿಂದ ಹೊರಟ ದೊಡ್ಡ ಹೆಂಗಸಿನ ದನಿಯ ಗುರುತು ಅವನಿಗೆ ತಿಳಿದುಹೋಗಿತ್ತು. ತಾನು ಒಂದನೆಯ ತರಗತಿಗೆ ಸೇರಿದ ಮೊದಲ ದಿನ ತನ್ನನ್ನು ಶಾಲೆಯೊಳಗೆ ಕಳಿಸಿ ಹಿಂದೆ ತಿರುತಿರುಗಿ ನೋಡುತ್ತಾ ಮರೆಯಾದ ತನ್ನ ವಿಧವೆ ಅಮ್ಮ ತಾನು ಸಂಜೆ ಶಾಲೆ ಮುಗಿಸಿ ಮನೆಗೆ ಹಿಂತಿರುಗುವಷ್ಟರಲ್ಲಿ ಹೆಣವಾಗಿ ಮಲಗಿದ್ದುದು ಮುಂಜಾನೆಯ ಕನಸಿನಷ್ಟೇ ಸ್ಪಷ್ಟವಾಗಿ ಅವನಿಗೆ ನೆನಪಾಗಿಬಿಟ್ಟಿತ್ತು.
ಆ ನೀರವ ರಾತ್ರಿಯಲ್ಲಿ ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ.
ಕನಕ ಗಂಡನನ್ನೇ ಬಿಟ್ಟಬಾಯಿ ಬಿಟ್ಟಂತೆ ನೋಡುತ್ತಿದ್ದಂತೇ ಮಾನಪ್ಪ ತಲೆಯೆತ್ತಿ ಹೆಂಡತಿಯತ್ತ ದಯನೀಯ ನೋಟ ಬೀರಿದ. ಸರಕ್ಕನೆ ಅವಳತ್ತ ಸರಿದು ಬಾಯಿ ತೆರೆದ: "ಕನಕಾ ಕನಕಾ... ಇವಳಿಗೊಂಚೂರೂ ನೋವಾಗ್ಬಾರ್ದು... ಚೆನ್ನಾಗಿ ನೋಡ್ಕೋಬೇಕು ಇವಳನ್ನ... ನಮ್ಮಮ್ಮನ್ನ... ಉಹ್ಞು ನನ್ ಮಗಳನ್ನ... ಇಲ್ಲ ಇಲ್ಲ ನಮ್ಮನ್ನನ್ನ... ಉ..."
ಕನಕ ಬೆರಗಾದಳು. ತನ್ನ ಮದುವೆಯ ನಿಶ್ಚಿತಾರ್ಥದ ಮರುಬೆಳಗು ಬಾವಿಕಟ್ಟೆಯ ಬಳಿ ಅದ್ಯಾವಳೋ ಅದ್ಯಾವಳಿಗೋ ಪಿಸುಗುಟ್ಟುತ್ತಿದ್ದ ಹಳೆಯ ಸುದ್ದಿಯೊಂದು ಅವಳಿಗೆ ಏಕಾಏಕಿ ನೆನಪಿಗೆ ಬಂದುಬಿಟ್ಟಿತ್ತು...
ಮುನಿಸಿನ ಬೂದು, ಬೆರಳ ಕಂದು, ಹೊಕ್ಕಳ ಬಿಳುಪು, ಬಚ್ಚಲ ಕಪ್ಪು-ಎಲ್ಲವೂ ಕ್ಷಣದಲ್ಲಿ ಅದೆಲ್ಲೋ ಕರಗಿಹೋಗಿ ಮಾಯದಂಥಾ ಮಳೆಯಾಗಿ ಅವಳ ಹೃದಯ ಆರ್ದ್ರವಾಯಿತು. ಅವಳವನನ್ನು ಬರಸೆಳೆದು ತನ್ನೆದೆಗೊತ್ತಿಕೊಳ್ಳುತ್ತಿದ್ದಂತೇ ಅವನೆದೆಯ ಕೂಗುಗಳು ಅವಳೆದೆಯಲ್ಲಿ ಕರಗಿಹೋದವು.
ಒಂದು ಕೈಯಲ್ಲಿ ಮಗುವನ್ನೂ ಮತ್ತೊಂದು ಕೈಯಲ್ಲಿ ಗಂಡನ ಬೆನ್ನನ್ನೂ ಮೃದುವಾಗಿ ತಟ್ಟತೊಡಗಿದಳು ಕನಕ...
ಆ ಗಳಿಗೆಯಲ್ಲಿ ಅವಳು ಇಬ್ಬರಿಗೂ ತಾಯಿ.
--***೦೦೦***--









