ತೇಜಸ್ವಿಯವರ ವೈಚಾರಿಕತೆ ( ಭಾಗ ೫)
ತೇಜಸ್ವಿ

-ಬಿ ಆರ್ ಸತ್ಯನಾರಾಯಣ

ಸಮೂಹ ಮಾಧ್ಯಮಗಳ ರಾಜಕೀಯ

ಇಲ್ಲಿಯೇ ಸಮೂಹ ಮಾಧ್ಯಮಗಳ ಬಗ್ಗೆ ತೇಜಸ್ವಿಯವರಿಗಿದ್ದ ನಿಲುವುಗಳೇನು ಎಂಬುದನ್ನು ಗಮನಿಸಬಹುದಾಗಿದೆ. ಮಾಧ್ಯಮಗಳೂ ಇಂದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಅದಕ್ಕೆ ನಮ್ಮ ವ್ಯವಸ್ಥೆ ಎಷ್ಟು ಕಾರಣವೋ ಸ್ವತಃ ಮಾಧ್ಯಮಗಳೂ ಅಷ್ಟೇ ಕಾರಣ. ತಮಗೆ ಬೇಕಾದವರ, ತಮಗೆ ಬೇಕಾದ ಸರ್ಕಾರಗಳಿಗೆ ಅನುಕೂಲವಾಗುವಂತಹ ಸುದ್ದಿಗಳನ್ನು ಹೆಚ್ಚು ಜನರಿಗೆ ತಲುಪುವಂತೆ ಮುಖಪುಟಗಳಲ್ಲಿ ಮುದ್ರಿಸುವುದು. ತಮಗೆ ಬೇಡವಾದವುಗಳನ್ನು ಇನ್ನೆಲ್ಲೋ ಸಣ್ಣದಾಗಿ ಮುದ್ರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಕನ್ನಡದ ಪ್ರಮುಖ ದಿನಪತ್ರಿಕೆಯೊಂದು ಅದರ ಮಾಲೀಕರು ಸೇರುವ ಪಕ್ಷಗಳೆಲ್ಲವನ್ನು ಒಳ್ಳೆಯ ಪಕ್ಷಗಳೆಂದು, ಅವರು ಬಿಟ್ಟು ಬಂದ ಪಕ್ಷಗಳು ಭ್ರಷ್ಟಪಕ್ಷಗಳು ಎನ್ನುವಂತೆ ಬರೆಯುತ್ತಿರುವುದನ್ನು ನೋಡುತ್ತಿದ್ದೇವೆ. ಆ ಮಹಾನುಭಾವರು ಈಗಾಗಲೇ ನಾಲ್ಕನೇ ಪಕ್ಷದಲ್ಲಿದ್ದಾರೆ. ‘ಅಣ್ಣನ ನೆನಪು’ ಕೃತಿಯಲ್ಲಿ ತೇಜಸ್ವಿ ಬೂಸಾ ಪ್ರಕರಣದ ಉದಾಹರಣೆಯನ್ನು ಕೊಡುತ್ತಾರೆ. ‘ಬಸವಲಿಂಗಪ್ಪನವರ ಮೇಲೆ ದ್ವೇಷವಿದ್ದ ಸುದ್ದಿ ಮಾಧ್ಯಮದ ಸನಾತನಿಗಳೆಲ್ಲಾ ಒಟ್ಟಾಗಿ ಕನ್ನಡ ಚಳುವಳಿಯವರನ್ನು ಸಣ್ಣಪುಟ್ಟ ಸಾಹಿತಿಗಳನ್ನು ಉದ್ರೇಕಿಸಿ ಪತ್ರಿಕೆಗಳ ಮುಖಪುಟದಲ್ಲಿ ಬಸವಲಿಂಗಪ್ಪನವರ ಹೇಳಿಕೆಗಳನ್ನು ಪ್ರಕಟಿಸಿ ಚಿತಾವಣೆ ಆರಂಭಿಸಿದರು. ಕನ್ನಡದ ಎರಡು ಪ್ರಮುಖ ದಿನಪತ್ರಿಕೆಗಳ ಸಂಪಾದಕ ವರ್ಗದವರು ಎಷ್ಟು ವ್ಯವಸ್ಥಿತವಾಗಿ ಈ ಕೆಲಸ ಮಾಡಿದರೆಂದರೆ ಇದರ ವಿರುದ್ದ ಎಲ್ಲೆಲ್ಲೋ ನಡೆದ ಪುಡಿ ಪ್ರತಿಭಟನೆಗಳೆನ್ನೆಲ್ಲಾ ಮುಖಪುಟದಲ್ಲಿ ದಪ್ಪಕ್ಷರದಲ್ಲಿ ಪ್ರಕಟಿಸತೊಡಗಿದರು. ಬಸವಲಿಂಗಪ್ಪನವರ ಪರವಾಗಿ ದೊಡ್ಡ ದೊಡ್ಡ ಸಾಹಿತಿಗಳೆಲ್ಲ ಕೊಟ್ಟ ಹೇಳಿಕೆಗಳನ್ನು, ನಡೆದ ಸಭೆಗಳನ್ನು ಅವರು ಪ್ರಕಟಿಸಲೇ ಇಲ್ಲ.’ ಬೂಸಾ ಪ್ರಕರಣವು ಕುವೆಂಪು ಅವರ ಹೇಳಿಕೆಯಿಂದ ತೀವ್ರವಾಗುವಂತೆ ಮಾಡಿದ್ದ ಪತ್ರಿಕೆಗಳು, ಅದಕ್ಕೆ ಕುವೆಂಪು ನೀಡಿದ್ದ ಸ್ಪಷ್ಟೀಕರಣವನ್ನು ಮಾತ್ರ ಪ್ರಕಟಿಸದೆ, ಪ್ರಕರಣದ ತೀವ್ರತೆ ಇಳಿಮುಖವಾಗದಂತೆ ನೋಡಿಕೊಂಡ ಪ್ರಕರಣವನ್ನು ತೇಜಸ್ವಿ ದಾಖಲಿಸಿದ್ದಾರೆ. ಸ್ವತಃ ತೇಜಸ್ವಿ ಮತ್ತು ಸಮಾನಮನಸ್ಕರು ಬಸವಲಿಂಗಪ್ಪನವರನ್ನು ಬೆಂಬಲಿಸಿ ನೀಡಿದ ಪತ್ರಿಕಾ ಹೇಳಿಕೆಗಳನ್ನು ಹಾಗೂ ನಡೆಸಿದ ಸಭೆಗಳ ವರದಿಯನ್ನು ಯಾವ ಪತ್ರಿಕೆಯೂ ಪ್ರಕಟಿಸಲಿಲ್ಲ. ಈ ಯಾವ ರಾಜಕೀಯವೂ ಗೊತ್ತಿರದ, ಪಿಯುಸಿ ಓದುತ್ತಿದ್ದ ನಮ್ಮ ಮನೋಭಿತ್ತಿಯಲ್ಲಿಯೂ ನಮ್ಮ ಮೇಸ್ಟ್ರು, ಬಸವಲಿಂಗಪ್ಪನವರನ್ನೇ ವಿಲನ್ ಎನ್ನುವಂತೆ ಬಿಂಬಿಸಿದ್ದರು. ಇವೆಲ್ಲದರ ಪರಿಣಾಮ, ಬಸವಲಿಂಗಪ್ಪನವರು ರಾಜಿನಾಮೆ ಕೊಡುವಷ್ಟರ ಮಟ್ಟಿಗೆ ಸನಾತನವಾದಿಗಳು ನೋಡಿಕೊಂಡರು. ಅದಕ್ಕೆ ಅವರು ಬಳಸಿಕೊಂಡಿದ್ದು ದಲಿತ ಮತ್ತು ಶೂದ್ರವರ್ಗದವರನ್ನೇ ಎಂಬುದು ಮಾತ್ರ ವಿಷಾದನೀಯ. ಇಂದು ಮಾಧ್ಯಮಗಳಿಗೆ ಬೇಕಾಗಿರುವುದು ರೋಚಕತೆಯೇ ಹೊರತು ಸಾಮಾಜಿಕ ಸ್ವಾಸ್ತ್ಯವಲ್ಲ. ಕಾವೇರಿ ತೀರ್ಪು ಹೊರಬಿದ್ದಾಗ ಇಂಗ್ಲಿಷ್ ಚಾನೆಲ್ಗಳು ಸಂದರ್ಶಿಸಿದ್ದು ದೆಹಲಿಯವರಿಗೆ ಪರಿಚಿತವಿರುವ ಕನ್ನಡಿಗ ಮುಖಗಳನ್ನೇ ಹೊರತು ಸಮಸ್ಯಗೆ ಸಂಬಂಧಪಟ್ಟವರನ್ನಲ್ಲ. ಗಿರೀಶ್ ಕಾರ್ನಾಡ್ ಆಡಿದ ಮಾತಿಗೆ ಹೆಚ್ಚು ಪ್ರಚಾರವನ್ನು ಆಂಗ್ಲ ಮಾಧ್ಯಮಗಳು ಕೊಟ್ಟರೆ, ನಂತರದ ಘಟನೆಗಳಿಗೆ ಪ್ರಾದೇಶಿಕ ಮಾದ್ಯಮಗಳು ಹೆಚ್ಚು ಒತ್ತು ಕೊಟ್ಟವು. ಮೊನ್ನೆ ಹಾಸನದಲ್ಲಿ ನಡೆದ ಒಂದು ಘಟನೆಯನ್ನು, ಐದಾರು ಜನ ಒಬ್ಬನಿಗೆ ಒದೆಯುತ್ತಿರುವುದನ್ನು ಮತ್ತೆ ಮತ್ತೆ ತೋರಿಸುವುದು, ಸ್ಲೋ ಮೋಷನ್ನಿನಲ್ಲಿ ತೋರಿಸುವುದನ್ನು ಒಂದು ಚಾನೆಲ್ ಮಾಡುತ್ತಿತ್ತು. ಆಧುನಿಕ ತಂತ್ರಜ್ಞಾನದ ಎಲ್ಲಾ ಎಫಕ್ಟ್ಗಳನ್ನು ಬಳಸಿಕೊಂಡು ಸುದ್ದಿಗೆ ರೋಚಕತೆ ಕೊಡುವುದು ಎಷ್ಟು ಸರಿ? ಇತ್ತೀಚಿಗಂತೂ ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಕ್ಯಾಮೆರಾ ತಗೆದುಕೊಂಡು ಹೋಗಿ, ಸನ್ನಿವೇಶ ಸೃಷ್ಟಿ ಮಾಡಿ ಸುದ್ದಿಗಳನ್ನೂ ಸೃಷ್ಟಿ ಮಾಡುತ್ತಿವೆ. ದೂರದರ್ಶನ  ದುರಂತದರ್ಶನನಮ್ಮ ದೇಶದ ರಾಷ್ಟ್ರೀಯ ಚಾನೆಲ್ ದೂರದರ್ಶನ ಒಂದು ದುರಂತ ದರ್ಶನವಾಗುತ್ತಿದೆ. ಖಾಸಗೀ ಚಾನೆಲ್?ಗಳ ಪೈಪೋಟಿಯ ನಡುವೆಯೂ ಅತಿ ಹೆಚ್ಚು ಜನರನ್ನು ಕ್ಷಿಪ್ರಗತಿಯಲ್ಲಿ ತಲಪಬಹುದಾದ ಈ ಪ್ರಬಲ ಮಾಧ್ಯಮ ಇಂದು ಮಾಡುತ್ತಿರುವುದೇನು? ತಿರುಪತಿಯ ಬ್ರಹ್ಮೋತ್ಸವ, ಶೃಂಗೇರಿಯ ಶಿವರಾತ್ರಿ ಆಚರಣೆ, ಶಬರಿಮಲೆಯ ಜ್ಯೋತಿ ದರ್ಶನ, ಮೇಲುಕೋಟೆಯ ವೈರಮುಡಿ ಉತ್ಸವ, ಉಡುಪಿಯ ಪರ್ಯಾಯ ಮೊದಲಾದ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುತ್ತಿರುವುದು. ಇವು ಯಾವೂ ಸಿಗಲಿಲ್ಲ ಎಂದರೆ ಯಾವುದೋ ದೇವಾಲಯದಲ್ಲಿ ನಡೆಯುವ ಅಭಿಷೇಕ ಕಾರ್ಯಕ್ರಮವನ್ನು ಬಿತ್ತರಿಸುವುದು. ಹೋಗಲಿ ಆ ದೇವಾಲಯದ ಸಾಂಸ್ಕೃತಿಕ ಮತ್ತು ಕಲಾತ್ಮಕ ಅಂಶಗಳನ್ನಾದರೂ, ಇತಿಹಾಸವನ್ನಾದರೂ ಹೇಳುತ್ತಾರೆಯೆ? ಅದೂ ಇಲ್ಲ. ಪುರಾಣದ ಕಟ್ಟು ಕತೆಗಳನ್ನು ಪುರೋಹಿತರ ಬಾಯಲ್ಲೇ ಹೇಳಿಸುತ್ತಾರೆ. ಏನೋ ವಿಶೇಷ ಎನ್ನುವಂತೆ ಅಲ್ಲಿನ ಪುರೋಹಿತರುಗಳು ರಾಗವಾಗಿ ಅರ್ಥವಾಗದಂತೆ ಕೂಗುವ ಮಂತ್ರಗಳನ್ನು ಕೇಳಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಮಸ್ಯೆಯಾಗಲೀ, ಕೃಷಿವಿಚಾರವಾಗಲೀ, ಯುವಕರಿಗೆ ಸಂಬಂಧಿಸಿದ ಕಾರ್ಯಕ್ರಮಗಳಾಗಲೀ, ಗ್ರಾಮೀಣ ಜನತೆಯ ಸಮಸ್ಯೆಯಾಗಲೀ ಈ ದೂರದರ್ಶನದವರಿಗೆ ನಿಜವಾಗಿಯೂ ದೂರವಾಗಿಬಿಟ್ಟಿವೆ. ಆದರೆ, ಅದರ ಬೆಂಗಳೂರು ಕೇಂದ್ರದ ನಿರ್ದೇಶಕರು ಮಾತ್ರ ರಾಜ್ಯಪ್ರಶಸ್ತಿಯನ್ನೂ ಪಡೆದುಕೊಂಡು, ತಮಗೆ ಆಗಿದ್ದ ವರ್ಗಾವಣೆಯನ್ನೂ ರದ್ದು ಮಾಡಿಸಿಕೊಂಡು, ದಿನವೊಂದಕ್ಕೆ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಹಸನ್ಮುಖರಾಗಿದ್ದಾರೆ. ನನಗೆ ಆಶ್ಚರ್ಯ ಎನ್ನಿಸುವುದು, ಸಂದರ್ಭ ಸಿಕ್ಕಾಗಲೆಲ್ಲಾ ತೇಜಸ್ವಿ ಮಾಧ್ಯಮಗಳ ಜನ್ಮ ಜಾಲಾಡುತ್ತಿದ್ದರೂ, ಅವರ ಸಂದರ್ಶನಕ್ಕೆ, ಅವರ ಲೇಖನಗಳಿಗೆ ಮಾಧ್ಯಮಗಳು ಮುಗಿ ಬೀಳುತ್ತಿದ್ದುದು ಏಕೆ? ಎಂದು. ಅವರು ವಾಚಕರವಾಣಿಗೆ ಬರೆದ ಪತ್ರಗಳು ಮುಖಪುಟದಲ್ಲಿ ಪ್ರಕಟವಾಗಿಬಿಡುತ್ತಿದ್ದವು. ಬಹುಶಃ ತೇಜಸ್ವಿಯವರ ಮಾತಿನಲ್ಲಿದ್ದ ಸತ್ಯ ಇದಕ್ಕೆ ಕಾರಣವಿರಬಹುದು. ಸತ್ಯವನ್ನು ಮುಚ್ಚಿಡುವುದು ಕಷ್ಟ.


(ತೇಜಸ್ವಿಯವರ ವಿಚಾರಧಾರೆಯ ಬಗೆಗೆ ಸತ್ಯನಾರಾಯಣರ ಅವಲೋಕನ ಬರುವ ವಾರ ಕೂಡ ಮುಂದುವರೆಯಲಿದೆ)
ಸತ್ಯನಾರಾಯಣ ಬಿ.ಆರ್.ಗ್ರಂಥಪಾಲಕರು, ಸುರಾನ ಕಾಲೇಜುಸೌತ್ ಎಂಡ್ ರಸ್ತೆ, ಬಸವನಗುಡಿಬೆಂಗಳೂರು - 560 004ದೂರವಾಣಿ: 0 99645 90246ಈ-ಮೇಲ್: satya_nbr@yahoo.com 

ತೇಜಸ್ವಿ

ತೇಜಸ್ವಿ ನಿಧನರಾಗಿ ಇಂದಿಗೆ (ಏಪ್ರಿಲ್ 5) ಒಂದು ವರ್ಷ ಕಳೆಯಿತು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ನಮಗೆ ಭಾವಶೂನ್ಯತೆಯುಂಟಾಗಿಲ್ಲ. ಏಕೆಂದರೆ ಅವರ ಸತ್ವಯುತವಾದ ಸಾಹಿತ್ಯ ನಮ್ಮೊಮದಿಗಿದೆ. ಆ ಸಾಹಿತ್ಯಕ್ಕೆ ಅಸಂಖ್ಯಾತ ೋದುಗರೂ ಇದ್ದಾರೆ. ಜೊತೆಗೆ ಸತ್ಯನಾರಾಯಣ ಅವರಂತಹ ವಿಮರ್ಷಕರೂ ಇದ್ದಾರೆ. ಆದ್ದರಿಂದ ನಮ್ಮ ನಡುವಿಂದ ತೇಜಸ್ವಿ ಮರೆಯಾಗುವುದು ಸಾಧ್ಯವೇ ಇಲ್ಲ. ಈ ಭಾಗದ ಲೇಖನವೂ ಚನ್ನಾಗಿ ಮೂಡಿಬಂದಿದೆ. ಈ ಭಾಗ 5 ಎಂದಿರಬೇಕಿತ್ತು. 4 ಎಂದೇ ಉಳಿದು ಬಿಟ್ಟಿದೆ.

Syndicate

Syndicate content