ಇದನ್ನು ಕಾಂಗ್ರೆಸ್ಸಿನ ಮಹಾಯೋಜನೆ ಎನ್ನಿ, ರಾಜ್ಯ ನಾಯಕರುಗಳಿಲ್ಲದ ದಿವಾಳಿತನದ ಸಾಕ್ಷಿ ಎನ್ನಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಮರ್ಥವಾಗಿ ಹಿನ್ನಡೆಸಿದ ಕೃಷ್ಣರಿಗಿಂತ ಉತ್ತಮ ನಾಯಕರಿಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ ಎಂದೂ ಓದಿಕೊಳ್ಳಬಹುದು) ನಿರ್ಧಾರಕ್ಕೆ ಬಂದಿದೆ. ಆ ಮೂಲಕ ಖರ್ಗೆ, ಸಿದ್ಧರಾಮಯ್ಯ, ಜಾಫರ್ ಶರೀಫ್, ಧರಮ ಸಿಂಗ್, ಜನಾರ್ದನ ಪೂಜಾರಿ ಹಾಗೂ ಇನ್ನಿತರ ನಾಯಕರುಗಳು ಗೆಲ್ಲುವ ಕುದುರೆಗಳಲ್ಲ ಅನ್ನುವುದನ್ನು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದೆ! ಮಂಡ್ಯದ ಗಂಡು ಅಂಬರೀಷ್ ಮಾತ್ರ ತಮ್ಮ ಅಸಮಾಧಾನವನ್ನು ಪಕ್ಷ ಬಿಡುವ ಮೂಲಕ ತೋರಿಸಬಹುದು. ತಮ್ಮ ಸ್ವಂತ ಶಕ್ತಿಯ ಸ್ಪಷ್ಟ ಅರಿವಿರುವ ಉಳಿದ ಕಾಂಗ್ರೆಸಿಗರು ತೆಪ್ಪಗೆ ಬಾಲ ಮಡಚಿ "ಚುನಾವಣೆಯಲ್ಲಿ ಸೋತರೆ ತಲೆ ಕೊಡಲು ಒಬ್ಬಾತ ಸಿಕ್ಕಿದ" ಅನ್ನುವ ಸಮಾಧಾನದ ನಿಟ್ಟುಸಿರು ಬಿಟ್ಟು ಕುಳಿತಿದ್ದಾರೆ!
ಬಿಜೆಪಿಗೆ ಅದಾಗಲೇ ವ್ಯಕ್ತವಾಗಿರುವ ಬೆಂಬಲ ಅವರ ನಾಯಕರ ಪರಸ್ಪರ ಕಚ್ಚಾಟವಿಲ್ಲದಿದ್ದರೆ ಅವರನ್ನು ಬಹುಮತಕ್ಕೇರಿಸುವ ಸ್ಥಿತಿಯಲ್ಲಿದೆ. ದೇವೇಗೌಡರ ಪಕ್ಷ ನಾಯಕತ್ವದ ಉರುಳಿನಲ್ಲಿ ಸಿಕ್ಕುಹಾಕಿಕೊಂಡಿದೆ. ಕೃಷ್ಣ ಬಂದರೆ ನಮಗೇನೂ ತೊಂದರೆಯಿಲ್ಲ ಎಂದಿರುವ ದೇವೇಗೌಡರ ಮಾತು ಬಹುತೇಕ ಸತ್ಯವೇ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸಿಗರಿಗೆ ಪೆಟ್ಟು ಬಿದ್ದದ್ದು ದೇವೇಗೌಡರಿಂದ. ಈ ಬಾರಿಯೂ ಪೆಟ್ಟು ಬೀಳುವುದಿದ್ದರೆ ಅದು ಜಾತ್ಯಾತೀತದಳದಿಂದ ಕಾಂಗ್ರೆಸಿಗೆ ವಿನಹಾ ಕಾಂಗ್ರೆಸಿನಿಂದ ಜಾತ್ಯಾತೀತ ದಳಕ್ಕಲ್ಲ. ದೇವೇಗೌಡರಿಂದ ಬೀಳಬಹುದಾದ ಪೆಟ್ಟನ್ನು ತಪ್ಪಿಸಲೆಂದೇ ಬಂದಿರುವ ಕೃಷ್ಣ ಅದನ್ನು ಮಾಡಲು ವಿಫಲರಾದಲ್ಲಿ ಬಿಜೆಪಿ ಅನಾಯಾಸದ ವಿಜಯ ಗಳಿಸಲಿದೆ. ದೇವೇಗೌಡರನ್ನು ನೆಲಕಚ್ಚಿಸುವಲ್ಲಿ ಕಾಂಗ್ರೆಸ್ ಸಫಲವಾದರೆ ಬಿಜೆಪಿ ವಿಜಯಕ್ಕೆ ಪ್ರಯಾಸ ಪಡಬೇಕಾಗಬಹುದು. ಸ್ಪಷ್ಟ ಬಹುಮತ ದೊರೆಯದಿದ್ದರೂ ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನ ಪಡೆಯುವಲ್ಲಿ ಕಾಂಗ್ರೆಸ್ ಸಫಲವಾದರೆ ಆಡಳಿತ "ಕೈ"ಗೆ ಸಿಕ್ಕಿದ ಹಾಗೆಯೇ. ಆ ಸಂದರ್ಭದಲ್ಲಿ ಬಿಜೆಪಿ ಯಾ ಜಾತ್ಯಾತೀತ ಜನತಾದಳವನ್ನು ಒಡೆದು ಸರಕಾರ ಮಾಡಬಲ್ಲ ಕ್ಷಮತೆ ಇರುವುದಿದ್ದರೆ ಅದು ಎಲ್ಲ ರಾಜಕೀಯ ಪಟ್ಟುಗಳನ್ನು ಅರಿತಿರುವ ಕೃಷ್ಣರಲ್ಲಿ ಮಾತ್ರ.
ಇದ್ದದ್ದರಲ್ಲಿ ಮೆಚ್ಚಬೇಕಾದು ಕೃಷ್ಣ ಅವರ ರಾಜಕೀಯ ದಾಳದಾಟವನ್ನು. ಚುನಾವಣೆ ಗೆದ್ದರೆ ಇನ್ನೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಪ್ರಬಲ ಸ್ಪರ್ಧಿ ಅನ್ನುವುದು ಖಂಡಿತ. ಸೋತರೆ ಕೃಷ್ಣರಿಗೆ ನಷ್ಟವೇನಿಲ್ಲ. ಪ್ರತಿಪಕ್ಷ ನಾಯಕರಾಗಿರಲು ಸಮರ್ಥ ಅಭ್ಯರ್ಥಿಗಳು ಕರ್ನಾಟಕದಲ್ಲೇ ದೊರಕುತ್ತಾರೆ ಎಂಬ ಧೈರ್ಯ ಇರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯಪಾಲ ಹುದ್ದೆಯ ಅನುಭವ ಇರುವ ಕೃಷ್ಣರನ್ನು ಪುನಃ ಎಲ್ಲಾದರೂ ರಾಜ್ಯಪಾಲರಾಗಿ ನಿಯುಕ್ತಿ ಮಾಡಿಯೇ ಮಾಡುತ್ತಾರೆ. ಚುನಾವಣೆ ಗೆಲ್ಲಿಸಲು "ಕೃಷ್ಣ ಕೃಪೆ ಮಾಡೋ" ಎಂದಿರುವ ಕಾಂಗ್ರೆಸ್, ಸೋತರೆ ತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಲು ಕೃಷ್ಣರನ್ನು ಕೇಳುವುದಿಲ್ಲ. ಕಾಂಗ್ರೆಸ್ ಯಾಕೆ ಸೋತಿತು ಎನ್ನುವ ವಿವರಣೆ ನೀಡಲು ನಮಗೆ ಖರ್ಗೆ ಸಾಕಲ್ಲ!
ಅಂತೂ ದೇವೇಗೌಡರಿಗೆ ಕರ್ನಾಟಕದಲ್ಲಿ ಇದಿರಿಲ್ಲ ಅನ್ನುತ್ತಿದ್ದವರು ಇದೀಗ ಬಾಯಿಮುಚ್ಚಿ ಕಣ್ ಕಣ್ ಬಿಟ್ಟು ಕುಳಿತಿದ್ದಾರೆ. ಅಲ್ವಾ?
ಇತೀ ನಿಮ್ಮ ಸಂಗಾತಿ,
ಗೋಪೀನಾಥ ರಾವ್








