ಕಡಲಾಚೆಯ ದುಬೈಯಲ್ಲಿ "ಮಹಾ ಶಿವರಾತ್ರಿ"ಯ ಸಂಭ್ರಮದ ಆಚರಣೆ :
shiva.jpg

   - ನ್ಯಾಮತಿ ಎಸ್. ವಿಶ್ವನಾಥ್. 

  ದುಬ್ಯೆನ ಕನ್ನಡಕೂಟ ಮತ್ತು ಬಸವ ಸಮಿತಿಯಿಂದ ಮಾರ್ಚ್ ೦೬ರಂದು
ದುಬ್ಯೆನ ಕರಾಮ ಸೆಂಟರಿನ ಪಾರ್ಟಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ "ಮಹಾ ಶಿವರಾತ್ರಿ" ಹಬ್ಬದ ಆಚರಣೆಯನ್ನು ಕನ್ನಡಿಗರೆಲ್ಲಾ ಸೇರಿ ಸಂಭ್ರಮ ಸಡಗರಗಳಿಂದ ಆಚರಿಸಿದೆವು.
ಸಮುದ್ರದಾಚೆಯ ಕಾಣದ ನೆಲೆಯಲ್ಲಿ ಹಬ್ಬ ಹರಿದಿನಗಳ ಗೊಡವೆಯೇ ಇಲ್ಲದ,
ಯಾಂತ್ರಿಕ ಬದುಕಿನ ಏಕತಾನತೆಯಲ್ಲೇ ಉಳಿದ ದುಬ್ಯೆನ ಕನ್ನಡಿಗರಿಗೆಲ್ಲಾ, ಹಬ್ಬದಾಚರಣೆಯ ವಾತಾವರಣವನ್ನು ಸೃಷ್ಟಿಸಿ, ವಾರಾಂತ್ಯದ ಗುರುವಾರವನ್ನು ಅರ್ಥಪೂರ್ಣವಾಗಿ ಕಳೆಯುವಂತಹ ಅಮೂಲ್ಯ ಅವಕಾಶವನ್ನು ಒದಗಿಸಿಕೊಟ್ಟ "ಕನ್ನಡ ಕೂಟ" ಮತ್ತು "ಬಸವ ಸಮಿತಿ"ಗೆ ಕನ್ನಡಿಗರ ಅಭಿನಂದನೆಗಳು.

  ಮಹಾಶಿವರಾತ್ರಿಯ ಅರಿವಿಲ್ಲದ ದುಬ್ಯೆ ಟ್ರಾಫಿಕ್, ಎಂದಿನಂತೆಯೇ
ಜಾಮ್ ಆಗಿ, ಜನರ ಆಗಮನ ಕೊಂಚ ತಡವಾಗಿ, ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರುದ್ರಾಭಿಷೇಕ ಪೂಜೆಯು ಪ್ರಾರಂಭವಾಗುವುದು ಕೊಂಚ ತಡವಾದರೂ, ಮನಮೋಹಕವಾಗಿ ಆಚರಿಸಲ್ಪಟ್ಟ ಶಿವಪೂಜೆಯು ನೆರೆದ ಶಿವಭಕ್ತರಿಗೆಲ್ಲಾ ಭಕ್ತಿಯ ಸುಧೆಯನ್ನೇ ಹರಿಸಿತ್ತು. ಎಲ್ಲಾ ಕಾರ್ಯಕ್ರಮಗಳಂತೆ, ಇಲ್ಲಿ ಕೇವಲ ಮನೋರಂಜನೆಗಷ್ಟೇ ಹೆಚ್ಚು ಒತ್ತು ಕೊಡದೆ, ಮಹಾಶಿವರಾತ್ರಿಯ ಎಲ್ಲಾ ಪೂಜಾವಿಧಿಗಳನ್ನು ಸಾವಕಾಶವಾಗಿ, ಸಾಂಗವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಿ ಎಲ್ಲಾ ಮನಗಳು ಶಿವಭಕ್ತಿಯ ಸಿಂಚನದಲ್ಲಿ ಮಿಂದೇಳುವಂತೆ ಮಾಡುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಯಿತು.

  ಕನ್ನಡಕೂಟದ ವತಿಯಿಂದ ಶ್ರೀ ಎಂ.ಎಸ್. ಆರುಣ್ ರವರು ಮತ್ತು ಬಸವ ಸಮಿತಿಯ ವತಿಯಿಂದ ಶ್ರೀ ಮುರುಗೇಶ್ ಗಾಜ್ರೆಯವರು ಮುಂದಾಳತ್ವವಹಿಸಿ ಈ ಕಾರ್ಯಕ್ರಮದ ಪ್ರತಿಯೊಂದು ಪೂಜಾವಿಧಿಗಳಲ್ಲಿ ಹಿರಿಯರಂತೆ ನಿಂತು ಪೂಜೆಯನ್ನು ಸಾಂಗವಾಗಿ ನಡೆಸಿಕೊಟ್ಟರು. ದೇವಸ್ಥಾನಗಳಲ್ಲಿ ಜರಗುವಂತಹ ಮಂತ್ರೋಕ್ತ ಪೂಜಾವಿಧಿಗಳನ್ನೇ ನೆನಪಿಗೆ ತರುವಂತೆ, ಎಲ್ಲಾ ಪೂಜಾವಿಧಿಗಳನ್ನು ಚೊಕ್ಕಟವಾಗಿ ಮತ್ತು ಸಮರ್ಥವಾಗಿ ನಡೆಸಿಕೊಟ್ಟ ಶ್ರೀ ಸಿದ್ದೇಶ್ವರ ಸ್ವಾಮಿಗಳು. ರುದ್ರಾಭಿಷೇಕ ಪೂಜೆಯ ನಂತರ ಪ್ರತಿಯೊಬ್ಬರಿಂದಲೂ ಶಿವಲಿಂಗ ಪೂಜೆಯನ್ನು ಮಾಡಿಸಿ, ನಿಜವಾದ ಅರ್ಥದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದಂತಹ ಪುಳಕವನ್ನಿತ್ತರು. ಪೂಜೆಯ ತರುವಾಯ ಎಲ್ಲರೂ, ಶ್ರೇಷ್ಟತಮವಾದ
ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಭಕ್ತಿಪೂರ್ವಕವಾಗಿ ಸಮರ್ಪಿಸಿದ ನಂತರ
ಎಲ್ಲರೂ ಒಟ್ಟಾಗಿ ಮಹಾಶಿವನ ಸಹಸ್ರನಾಮವನ್ನು ಪಠಿಸುವುದರ ಮೂಲಕ
ಮಹಾಶಿವರಾತ್ರಿಯ ಜಾಗರಣಾ ವ್ರತವನ್ನು ಆಚರಿಸಲು ಪ್ರಾರಂಭಿಸಿದೆವು. ನಂತರ
ಶ್ರೀಮತಿ ಸುಜಾತ ಭೋಜ್, ಶ್ರೀಮತಿ ವಿಜಯಲಕ್ಮಿ, ಶ್ರೀಮತಿ ಉಮಾ ವಿದ್ಯಾಧರ್
ಕುಮಾರಿ ಕಾಂಚನ ಭೋಜ್, ಕುಮಾರಿ ನಿಕಿತ ಶಿವಕುಮಾರ್ ಮತ್ತು
ಕುಮಾರಿ ರೋಶನಿ ಸಾಣಿಕೊಪ್ಪರವರು ಭಕ್ತಿಗೇತೆಗಳನ್ನು ಶುಶ್ರಾವ್ಯವಾಗಿ ಹಾಡುವುದರ ಮೂಲಕ ನೆರೆದವರನ್ನು ಮನೋರಂಜಿಸಿದರು. ನಂತರ ಶ್ರೀಮತಿ ಜ್ಯೋತಿ ಬಡ್ಡಿಯವರ ನೃತ್ಯ ನಿರ್ದೇಶನದಲ್ಲಿ ಮಕ್ಕಳಾದ ಕುಮಾರ ವಿನಾಯಕ ಕೆಂಪವಾಡ, ಕುಮಾರಿ ಶಾಲು, ಕುಮಾರಿ ಪ್ರಗತಿಯವರಿಂದ ನಡೆದ ನೃತ್ಯ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಕುಮಾರಿ ಐಶ್ವರ್ಯ ಗಾಜ್ರೆಯವರ ನೃತ್ಯ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕೊನೆಯದಾಗಿ ಮಹಾಶಿವರಾತ್ರಿಯಲ್ಲಿ ಭಜನಾ ಮಂಡಳಿಗಳಿಂದ ನಡೆಸಲ್ಪಡುವ
ಭಜನಾ ಕಾರ್ಯಕ್ರಮವು ಇತ್ತೀಚೆಗೆ ನಮ್ಮ ಊರುಗಳಲ್ಲಿಯೇ ದುರ್ಲಭವಾಗುತ್ತಿರುವಾಗ, ಶ್ರೀ ರಮಾನಂದ್, ಶ್ರೀ ಸತೀಶ್, ಶ್ರೀ ರಘು ಮತ್ತು ಭಜನಾ ಮಂಡಳಿಯ ಬಳಗದವರು ಈ ದೂರದ ದುಬ್ಯೆನಲ್ಲಿ ಭಜನಾ ಕಾರ್ಯಕ್ರಮವನ್ನು ಮನಮೋಹಕವಾಗಿ ನಡೆಸಿಕೊಟ್ಟು, ನೆರೆದವರೆಲ್ಲರಿಗೂ ಚಕಿತಗೊಳಿಸಿದ್ದಲ್ಲದೆ, ಎಲ್ಲರ ಮನಗಳಲ್ಲಿ ಭಕ್ತಿಸುಧೆಯನ್ನು
ಹರಿಸುವುದರ ಜೊತೆಗೆ ಶಿವಭಕ್ತಿಯ ಭಜನೆಯನ್ನು ಕೇಳಿ ಆನಂದಿಸುವ ಸದವಕಾಶವನ್ನೂ ಮಾಡಿಕೊಟ್ಟರು. ಇದೆಲ್ಲದಕ್ಕೂ ಪೂರಕವೆಂಬಂತೆ ಕೊನೆಯಲ್ಲಿ ರುಚಿಕಟ್ಟಾದ ಶಿವಪ್ರಸಾದದ ವಿನಿಯೋಗವೂ ನಡೆದು, ಮಹಾಶಿವರಾತ್ರಿಯ ಜಾಗರಣಾ ವ್ರತವು ಮುಗಿಯುವ ಹಂತಕ್ಕೆ ತಲುಪಿತ್ತು. ಇದೆಲ್ಲದರ ನಡುವೆ ಕಾಲವು ನಿರಮ್ಮಳವಾಗಿ ಸಾಗಿತ್ತು.

  ಕುಟುಂಬದವರನ್ನು, ಬಂಧು-ಬಳಗದವರನ್ನು ತೊರೆದು, ಸಾವಿರ ಮೈಲಿಗಳಾಚೆಗೆ
ಯಾವುದೋ ಕಾಣದ ನೆಲೆಗೆ ಬಂದ ಮನಗಳಿಗೆ, ನಮ್ಮದೇ ಸಂಸ್ಕೃತಿಯನ್ನು ನೆನಪಿಸಿಕೊಡುವ ಮೂಲಕ, ನಮ್ಮ ಮನೆಯವರ ಜೊತೆಗೇ ಕೂಡಿ ಹಬ್ಬವನ್ನು ಆಚರಿಸಿದಂತಹ ಅನುಭವವನ್ನು ನೀಡಿದ ಈ ಕಾರ್ಯಕ್ರಮವು ಅಭಿನಂದನಾರ್ಹವಾದುದು. ಮತ್ತು ಈ ಕಾರ್ಯಕ್ರಮವನ್ನು ಜಂಟಿಯಾಗಿ
ಏರ್ಪಡಿಸಿದ್ದ ದುಬ್ಯೆನ "ಕನ್ನಡಕೂಟ"ಕ್ಕೂ ಮತ್ತು "ಬಸವ ಸಮಿತಿ"ಗೂ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು.
ಅರ್ಥಪೂರ್ಣ ಮಂತ್ರಾಕ್ಷರಗಳಿಂದ ರುದ್ರಾಭಿಷೇಕ ಪೂಜೆಯನ್ನು ಸಾಂಗವಾಗಿ ಮತ್ತು ಸಮರ್ಥವಾಗಿ ನೆರವೇರಿಸಿಕೊಟ್ಟ ಶ್ರೀ ಸಿದ್ದೇಶ್ವರ ಸ್ವಾಮಿಗಳು ನೆರೆದಿದ್ದವರೆಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ನಂತರ ಭಕ್ತಿಗೀತೆಗಳನ್ನು ಹಾಡಿದ ಶ್ರೀಮತಿ ಸುಜಾತ ಭೋಜ್, ಶ್ರೀಮತಿ ವಿಜಯಲಕ್ಮಿ, ಶ್ರೀಮತಿ ಉಮಾ ವಿದ್ಯಾಧರ್
ಕುಮಾರಿ ಕಾಂಚನ ಭೋಜ್ ಮತ್ತು ಕುಮಾರಿ ನಿಕಿತ ಶಿವಕುಮಾರ್, ಕುಮಾರಿ ರೋಶನಿ ಸಾಣಿಕೊಪ್ಪರವರಿಗೆ ನಮ್ಮೆಲ್ಲರ ಅಭಿನಂದನೆಗಳು. ನೃತ್ಯ ಪ್ರದರ್ಶನದಿಂದ ನೆರೆದವರೆಲ್ಲರನ್ನು ಬೆರಗುಗೊಳಿಸಿದಂತಹ ಪುಟಾಣಿಗಳೂ ಸಹ ಅಭಿನಂದನಾರ್ಹರು. ಭಜನಾ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದಂತಹ ಶ್ರೀ ಈರಣ್ಣ ಮೂಲೆಮನೆಯವರಿಗೆ ಮತ್ತು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟ ಶ್ರೀ ರಮಾನಂದ್, ಶ್ರೀ ಸತೀಶ್, ಶ್ರೀ ರಘು ಮತ್ತು ಭಜನಾ ಮಂಡಳಿಯ ಎಲ್ಲಾ ಸದಸ್ಯರಿಗೆ ನಮ್ಮ ಅಭಿನಂದನೆಗಳು. ಪೂಜೆಗಾಗಿ ಅಗತ್ಯವಾದ ವಿಶೇಷ ಸಾಮಗ್ರಿಗಳ ಉಸ್ತುವಾರಿಯನ್ನು ನೋಡಿಕೊಂಡಂತಹ ಶ್ರೀ ಬಸವರಾಜ್ ಸಾಲಿಮಠ್ ಮತ್ತು
ಶ್ರೀ ಸಂಗಮೇಶ್ ಬಿಸರಳ್ಳಿಯವರಿಗೂ, ಪ್ರಸಾದದ ಉಸ್ತುವಾರಿಯನ್ನು ನೋಡಿಕೊಂಡಂತಹ ಶ್ರೀ ಮಲ್ಲಿಕಾರ್ಜುನರವರಿಗೂ, ಸಭಾಂಗಣದ ಅಲಂಕಾರದ ಉಸ್ತುವಾರಿಯನ್ನು ನೋಡಿಕೊಂಡಂತಹ ಶ್ರೀ ಮಲ್ಲಿಕಾರ್ಜುನ ಅಂಗಡಿ ಮತ್ತು ಶ್ರೀ ಈರಣ್ಣ ಮೂಲೆಮನೆಯವರಿಗೂ ಮತ್ತು ಧ್ವನಿವರ್ಧಕಗಳನ್ನು ಆಯೋಜಿಸಿದ್ದಂತಹ ಶ್ರೀ ಮಂಜುನಾಥ್ ಮತ್ತು ಶ್ರೀ ವಿದ್ಯಾಧರರವರಿಗೂ  ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು.

  ಈ ಕಾರ್ಯಕ್ರಮವು ಕನ್ನಡಕೂಟ ಯು.ಎ.ಇ ಹಾಗೂ ಬಸವ ಸಮಿತಿ ಯು.ಎ.ಇ
ವತಿಯಿಂದ ಜಂಟಿಯಾಗಿ ಆಚರಿಸಿದ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಇನ್ನು ಮುಂದೆಯೂ ಸಹ ಹೀಗೆಯೇ ಮುಂದುವರೆದು, ಕನ್ನಡಿಗರಿಗೆ ಮೆಚ್ಚುಗೆಯಾಗುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಡಲಿ ಎಂದು ಬಯಸೋಣ.  

 


 

Syndicate

Syndicate content