ತೇಜಸ್ವಿಯವರ ವೈಚಾರಿಕತೆ ( ಭಾಗ ೨)
ತೇಜಸ್ವಿ

ವ್ಯಕ್ತಿಪೂಜೆ - ವ್ಯಕ್ತಿತ್ವದ ಸಮಾಧಿ:

ಕುಬಿಯದೊಂದು ದುರಂತ ಕಥೆ‘ಕುಬಿ ಮತ್ತು ಇಯಾಲ’ ಕಥೆಯ ಕುಬಿ ಈ ಬಗೆಯ ದುರಂತಕ್ಕೆ ಒಂದು ಉತ್ತಮ ಉದಾಹರಣೆ. ಕುಬಿ ಡಾಕ್ಟರಾಗಿ ಬಂದ ಹೊಸತರಲ್ಲಿ ದ್ವೇಷಿಸುತ್ತಿದ್ದ ರಾಮರಾವ್, ತನ್ನನ್ನು ಗುಣಪಡಿಸಿದರು ಎಂಬ ಕಾರಣಕ್ಕೆ, ಅವರನ್ನು ದೈವತ್ವಕ್ಕೆ ಏರಿಸುತ್ತಾನೆ. ಕುಬಿಯೇ ಹೇಳುವಂತೆ ‘ಕೇವಲ ತನ್ನ ಕರ್ತವ್ಯ ಮತ್ತು ಸಮಯ ಪ್ರಜ್ಞೆ’ಯಿಂದ ರಾಮರಾವ್‍ನನ್ನು ಗುಣಪಡಿಸಿರುತ್ತಾನೆ. ಆದರೆ ರಾಮರಾವ್ ತನ್ನ ಪ್ರತಿ ಹೆಜ್ಜೆಯಲ್ಲೂ ಕುಬಿಯನ್ನು ದೈವತ್ವಕ್ಕೇರಿಸಲು ಪ್ರಯತ್ನಿಸಿ, ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಕುಬಿಯ ಕೈಯಲ್ಲಿ ಔಷಧಿಯನ್ನು ಮುಟ್ಟಿಸಿಕೊಂಡು ಬರಬೇಕೆಂದು ತನ್ನ ಅಮ್ಮನಿಂದ ಆಜ್ಞಪ್ತಳಾಗಿ ಬಂದಿದ್ದ ಇಯಾಲ, ಕುಬಿ ಅದನ್ನು ನಿರಾಕರಿಸಿದಾಗ ನಿರಾಶೆಗೊಳ್ಳುತ್ತಾಳೆ. ಅವಳ ನಿರಾಶೆಗೆ ಕುಬಿಯ ವರ್ತನೆಗಿಂತ, ತನ್ನ ತಾಯಿ ಬಯ್ಯಬಹುದೆಂಬ ಭೀತಿಯೇ ಹೆಚ್ಚು ಕಾರಣವಾಗಿರುತ್ತದೆ. ಆದರೆ ಮಧ್ಯ ಪ್ರವೇಶಿಸಿದ ರಾಮರಾಯನ ಕುತರ್ಕದಿಂದ ಔಷಧಿಯನ್ನು ಮುಟ್ಟಿಕೊಡುತ್ತಾನೆ. ಆಗ ಕುಬಿಗೆ ‘ತಾನೇ ನಂಬದಿರುವ, ತನಗೆ ಶ್ರದ್ಧೆ ಇಲ್ಲದಿರುವ ಒಂದನ್ನು ಮಾಡಲು ಅವನಿಗೆ ವಿಪರೀತ ಮುಜುಗರವಾಯ್ತು. ದುಃಖವೂ ಆಯ್ತು’. ಆದರೆ ರಾಮರಾಯ ಇದನ್ನೊಂದು ಪೂಜಾ ಕರ್ಮವೋ ಎನ್ನುವಂತೆ ಭಕ್ತಿ ಶ್ರದ್ಧೆಗಳಿಂದ ವೀಕ್ಷಿಸುತ್ತಿದ್ದ. ರಾಮರಾಯನ ಈ ಬಗೆಯ ಸ್ವಾಮಿ ನಿಷ್ಠೆಯನ್ನು ಕುಬಿ ಪ್ರತಿ ಹಜ್ಜೆಯಲ್ಲೂ ವಿರೋಧಿಸುತ್ತಾನೆ. ಆದರೆ ರಾಮರಾಯ ‘ನೀವು ಏನು ಬೇಕಾದರೂ ಹೇಳಿ ಸಾರ್, ನನಗೆ ಸತ್ಯ ಏನೆಂದು ಗೊತ್ತಿರುವಾಗ ಏಕೆ ನನಗೆ ಚಿಂತೆ’ ಎಂದು ಆಧ್ಯಾತ್ಮವಾದಿಯಾಗುತ್ತಾನೆ. ಕೊನೆಗೆ ‘ಮಹಾಸತ್ಯನಿಷ್ಠನಾದ ಕುಬಿ ಡಾಕ್ಟರ್ ಎಂದರೆ ದೈಯ್ಯ ಪ್ರೇತ ಪಿಶಾಚಿಗಳೂ ತಗ್ಗಿ ನಡೆಯುತ್ತವೆ!’ ಎಂಬ ಸಾರ್ವತ್ರಿಕ ಅಭಿಪ್ರಾಯ ರೂಪಗೊಳ್ಳುತ್ತದೆ. ರಾಮರಾಯನಂತವರನ್ನು ನೋಡಿದಾಗ ತೇಜಸ್ವಿಗೆ ಮೂಡುವ ‘ಜ್ಞಾನ ತನ್ನೊಡನೆ ಅಜ್ಞಾನವನ್ನೂ ಒಯ್ಯುವುದು ಅದರ ಆನುವಂಶಿಕ ಗುಣವೋ ಅಥವಾ ಇದೊಂದು ಚಾರಿತ್ರಿಕವಾದ ವ್ಯಂಗ್ಯವೋ ಯಾರು ಬಲ್ಲರು!’ ಎಂಬ ಉದ್ಗಾರ ಹಾಗೂ ಕಥೆಯ ಕೊನೆಗೆ ಬರುವ ‘ಕುಬಿ ತಾನು ಯಾವುದನ್ನು ನಂಬದೆ ವಿರೋಧಿಸಿ ತಿರಸ್ಕರಿಸಿದ್ದನೋ ಅದನ್ನೇ ಗೂಢವಾಗಿ ಇನ್ನೊಂದು ಕಡೆಯಿಂದ ಪ್ರತಿಪಾದಿಸುತ್ತಲೂ ಬಂದುದ್ದು ಕಾಲಪುರುಷನ ಅಪಹಾಸ್ಯ. ಇತಿಹಾಸದ ವ್ಯಂಗ್ಯ’ ಎಂಬ ಮಾತುಗಳು ಅರ್ಥಪೂರ್ಣವೆನಿಸುತ್ತವೆ. ಬಹುಶಃ ಬುದ್ಧ, ಮಹಾವೀರ, ಬಸವಣ್ಣ, ಅಂಬೇಡ್ಕರ್ ಇವರೂ ಕೂಡಾ ಇದಕ್ಕೆ ಹೊರತಲ್ಲ.

ಶ್ರೀರಾಮಸೇನೆಯ ಅಂಬೇಡ್ಕರ್ ಪ್ರೇಮಮೇಲೆ ಅಂಬೇಡ್ಕರ್ ಮಾತು ಬಂದಿದ್ದರಿಂದ ಇಲ್ಲೇ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಬಹುದು. ಇದು ಈಗ ಇಪ್ಪತ್ತು ದಿನಗಳಿಂದ, ಒಬ್ಬ ತೇಜಸ್ವಿ ಓದುಗನಾಗಿ ನನ್ನನ್ನು ಕಾಡುತ್ತಿರುವ ವಿಷಯ. ಈಗ ಬೆಂಗಳೂರಿನಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ‘ಶ್ರೀರಾಮ ಸೇನೆ’ ಎಂಬ ಒಂದು ಸಂಘಟನೆ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿದೆ. ಅದರ ಸಂಸ್ಥಾಪಕ ಪ್ರಮೋದ್ ಮುತಾಲಿಕ್. ಆ ಸಂಘಟನೆಯ ಮುಖ್ಯ ಉದ್ದೇಶವೇ ಭಾರತೀಯ ಸಂಸ್ಕೃತಿ ಹಾಗೂ ಸನಾತನ ಧರ್ಮ ರಕ್ಷಣೆ. ಈಗ ಬೆಂಗಳೂರಿನಲ್ಲಿ ಎಲ್ಲಡೆ ರಾರಾಜಿಸುತ್ತಿರುವ ಬ್ಯಾನರ್‍ಗಳಲ್ಲಿ ಹಿಂದುತ್ವ ಪ್ರತಿಪಾದಕರ ಚಿತ್ರಗಳ ಸಾಲಿನಲ್ಲಿ ಅಂಬೇಡ್ಕರ್ ಅವರ ಚಿತ್ರವೂ ಇದೆ. ಈ ಬ್ಯಾನರ‌ಗಳು ಹೆಚ್ಚು ಹೆಚ್ಚಾಗಿ ಕೊಳಚೆ ಪ್ರದೇಶಗಳ ಆಸುಪಾಸಿನಲ್ಲಿ ಕಂಡುಬರುತ್ತಿವೆ. ಇವುಗಳನ್ನು ನೋಡಿ ದಲಿತ ಹಾಗೂ ಶೋಷಿತ ಸಮುದಾಯ ಸಂತೋಷಪಡಬೇಕೋ ಅಥವಾ ವಿರೋಧಿಸಬೇಕೋ ಎಂಬುದೇ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಹಿಂದುತ್ವ ಪ್ರತಿಪಾದಕರು ಹಾಗೂ ಸಂಘ ಪರಿವಾರದವರು ಅಂಬೇಡ್ಕರ್ ಅವರನ್ನು ಒಬ್ಬ ರಾಷ್ಟ್ರೀಯ ನಾಯಕರನ್ನಾಗಿ ಸ್ವೀಕರಿಸಿದ್ದಾರೆ ಎಂಬ ಕಾರಣಕ್ಕೆ ಸಂತೋಷ ಪಡಬೇಕೆ? ಅಥವಾ ಕೇವಲ ಚಳುವಳಿ, ಪ್ರತಿಭಟನೆ, ಗಲಾಟೆ ಮೊದಲಾದ ಸಮಯದಲ್ಲಿ ಬೇಕಾಗುವ ಮಾನವಸಂಪನ್ಮೂಲಕ್ಕಾಗಿ ದಲಿತರನ್ನು ಶೂದ್ರರನ್ನು ಹಾಗೂ ಶೋಷಿತರನ್ನು ಓಲೈಸುವ ಕುತಂತ್ರಕ್ಕಾಗಿ ಅಂಬೇಡ್ಕರ್ ಅವರಂತಹ ಒಬ್ಬ ನಾಯಕನ ಭಾವಚಿತ್ರವನ್ನು ಬಳಸಿಕೊಳ್ಳುವುದನ್ನು ನೋಡಿ ಪ್ರತಿಭಟಿಸಬೇಕೆ? ಗುಜಾರತಿನಲ್ಲಿ ನಡೆದ ಕೋಮು ದಳ್ಳುರಿಯಲ್ಲಿ ಭಾಗವಹಿಸಿದ್ದವರು ಬಲಿಯಾದವರು ಯಾವುದೇ ಮೇಲ್ಜಾತಿಯ ಜನರಲ್ಲ. ಅವರೆಲ್ಲ ಮುಗ್ಧ ಆಧಿವಾಸಿಗಳು ಹಾಗೂ ಶೋಷಿತವರ್ಗದವರು ಎಂಬ ವಿಚಾರದ ಹಿನ್ನೆಲೆಯಲ್ಲಿ, ಈ ರಾಮಸೇನೆಯ ಕಾರ್ಯಶೈಲಿ ಅನುಮಾನಾಸ್ಪದವಾಗಿ ಕಾಣುತ್ತದೆ.

ನಾಯಕರೇಕೆ ರಿಲವೆಂಟಲ್ಲ?

ತೇಜಸ್ವಿಯವರು ಗಾಂಧಿ, ಬುದ್ಧ, ಬಸವಣ್ಣ, ಲೋಹಿಯಾ ಯಾರೂ ರಿಲವೆಂಟ್ ಆಗಿ ಉಳಿದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಕಂಡು ಸ್ವತಃ ರಾಮದಾಸ್ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆಯಾಯ ವ್ಯಕ್ತಿಗಳು ಆಯಾಯ ಕಾಲಕ್ಕೆ ಸೂಕ್ತವೆನ್ನಬಹುದಾದ ಮಾರ್ಗಗಳನ್ನು ಕಂಡುಕೊಂಡಿರಬಹುದು. ಆಗಂತ ಈಗಲೂ ಅದೇ ಮಾರ್ಗಗಳಲ್ಲಿ ಇವತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊರಡುವುದು ಎಷ್ಟರ ಮಟ್ಟಿಗೆ ಸರಿ. ಇಂದು ಪ್ರತಿಯೊಂದು ಪಂಥದವರೂ, ರಾಜಕಾರಣಿಗಳು ಹೇಳಿದ್ದನ್ನೇ ಹೇಳುತ್ತಾರೆ. ರಾಜಕಾರಣಿಗಳಂತೂ ಬುದ್ಧಜಯಂತಿಗೆ ಹೋದರೆ, ಬುದ್ಧ ಪ್ರಸ್ತುತ ಎನ್ನುತ್ತಾರೆ, ಮಹಾವೀರ ಜಯಂತಿಯಲ್ಲಿ ಪಾಲ್ಗೊಂಡರೆ ಮಹಾವೀರನೇ ಪ್ರಸ್ತುತ ಎನ್ನುತ್ತಾರೆ. ಗಾಂಧಿ ವಿಚಾರಧಾರೆಗಳೇ ಇಂದಿನ ದುಸ್ಥಿತಿಗೆ ಪರಿಹಾರೋಪಾಯ ಎನ್ನುತ್ತಾರೆ. ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯೆ ಇಂದಿನ ಅಶಾಂತಿಗೆ ಮದ್ದು ಎನ್ನುತ್ತಾರೆ. ಹೀಗೆ ಹೇಳುವ ಮಂದಿಯಿಂದಲೇ ಆ ಮಹಾನ್ ಜೀವಗಳು ಇಂದು ರಿಲವೆಂಟ್ ಆಗಿ ಉಳಿದಿಲ್ಲವೇನೋ? ಆದರೂ ಈ ನಾಯಕರುಗಳು, ಅವರ ಪ್ರತಿಮೆಗಳು, ಅವರ ಹೆಸರನಲ್ಲಿ ನಡೆಯುವ ರಾಜಕಾರಣ, ಅವುಗಳಿಂದ ಉಂಟಾಗುವ ಸಂಘರ್ಷಗಳನ್ನು ನೆನೆದಾಗ ತೇಜಸ್ವಿಯವರು ಹೇಳಿದ್ದೇ ಸರಿ ಎಂದು ನನಗನ್ನಿಸುತ್ತದೆ.

(ತೇಜಸ್ವಿಯವರ ವಿಚಾರಧಾರೆಯ ಬಗೆಗೆ ಸತ್ಯನಾರಾಯಣರ ಅವಲೋಕನ ಬರುವ ವಾರ ಕೂಡ ಮುಂದುವರೆಯಲಿದೆ)

ಸತ್ಯನಾರಾಯಣ ಬಿ.ಆರ್.ಗ್ರಂಥಪಾಲಕರು, ಸುರಾನ ಕಾಲೇಜುಸೌತ್ ಎಂಡ್ ರಸ್ತೆ, ಬಸವನಗುಡಿಬೆಂಗಳೂರು - 560 004ದೂರವಾಣಿ: 0 99645 90246ಈ-ಮೇಲ್: satya_nbr@yahoo.com 

Syndicate

Syndicate content