ವಿಧಿಯಾಟವೇನು ಬಲ್ಲವರು ಯಾರು?
srinath.jpg

- ಶ್ರೀನಾಥ್ ಭಲ್ಲೆ 

ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ-ಸಂಧ್ಯಾವಂದನೆ ಮುಗಿಸಿ. ಬಿಸಿ ಬಿಸಿ ಕಾಫಿ ಕುಡಿದು ಅಡಿಗೆಗೆ ಇಟ್ಟೆ. ಶ್ಲೋಕಗಳನ್ನು ಹೇಳಿಕೊಳ್ಳುತ್ತ, ಇನ್ನೊಂದು ಕಡೆ ಉಪ್ಪಿಟ್ಟು ಕೆದಕಿ ತಟ್ಟೆಗೆ ಹಾಕಿ ಮಿಕ್ಕಿದ್ದನ್ನ ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟೆ. ತಿಂಡಿ ತಿಂದು ಮುಗಿಸಿ, ಅಡಿಗೆಯನ್ನೂ ಮುಗಿಸಿ ಡಬ್ಬಿ ಪ್ಯಾಕ್ ಮಾಡಿ ಕೆಲಸಕ್ಕೆ ಹೊರಡಲು ಅಣಿಯಾದೆ. ಹೊರಡುವ ಮುನ್ನ ಮಗನ ರೂಮಿನ ಕಡೆ ನೆಡೆದು ಬಾಗಿಲು ಹಾಕಿಕೊಳ್ಳುವಂತೆ ಹೇಳೋಣ ಎಂದೆನಿಸಿದರೂ ಹಾಗೇ ಹೊರನೆಡೆದು ಡೋರ್ ಲಾಕ್ ಮಾಡಿದೆ. ಅವನ ಬಳಿಯೂ ಒಂದು ಕೀ ಇರುವುದರಿಂದ ಪರಾವಲಂಬಿತನವಿಲ್ಲ. ನಿವೃತ್ತಿಯಾಗಲು ಕೆಲವೇ ದಿನಗಳು ಉಳಿದಿರುವ ನಾನು ನಿರುದ್ಯೋಗಿ ಮಗನ ಭವಿಷ್ಯ ನೆನೆದು ನಿಂತಲ್ಲೇ ನಿಂತು ಒಮ್ಮೆ ನಿಟ್ಟುಸಿರುಬಿಟ್ಟೆ. ಹೆಚ್ಚೂ ಕಮ್ಮಿ ಇವಿಷ್ಟೂ ಬಹಳ ದಿನಗಳಿಂದ ನೆಡೆದು ಬಂದ ದಿನಚರಿ.

 

ಮನೆಯಲ್ಲಿ ಮಾತುಕತೆ ಎಲ್ಲವೂ ಅವಳ ಹಿಂದೆಯೇ ನೆಡೆದು ಹೊರಟುಹೋಗಿತ್ತು. ಈಗ ಉಳಿದಿರುವುದು ಹೂ, ಹಾ ಅಷ್ಟೇ ! ಕೆಲವೊಮ್ಮೆ ಅದೂ ಇಲ್ಲ. ಈಚೆಗೆ ಈ ನನ್ನ ಮೌನ ಆಫೀಸಿನಲ್ಲೂ ಮುಂದುವೆರೆದಿರುತ್ತದೆ. ’ಇತ್ತೀಚೆಗೆ ಪಾಪ ಹೀಗೆ ಆಗಿದ್ದಾರೆ. ಮುಂಚೆ ಬಹಳ ಲವಲವಿಕೆಯಿಂದ ಇರುತ್ತಿದ್ದರು’ ಎಂದು ನನ್ನ ಬಗ್ಗೆ ಜನ ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ನನಗದರ ಕಡೆ ಲಕ್ಷ್ಯವೂ ಇರಲಿಲ್ಲ ಅನ್ನಿ. ನಾನಾಯಿತು ನನ್ನ ಕೆಲಸವಾಯಿತು ಅಂತ ಇದ್ದು ಬಿಟ್ಟಿದ್ದೀನಿ. ಕಾಫಿಗೆ ನೆಡೆದಾಗ ಯಾರಾದರೂ ಸಿಕ್ಕರೆ ಮಾತು, ಇಲ್ಲದಿದ್ದರೆ ಅದೇ ಇಲ್ಲ.

 

ಎರಡು ವರ್ಷಗಳ ಹಿಂದೆ ಮಗ ಚಿನ್ನದ ಪದಕ ಪಡೆದುಕೊಂಡು ಇಂಜಿನೀರಿಂಗ್ ಪದವೀಧರನಾದಾಗ ಹಿರಿ ಹಿರಿ ಹಿಗ್ಗಿದ್ದೆ. ಚಿನ್ನದ ಪದಕ ಪಡೆಯುವುದು ಅಂದರೆ ಸಾಮಾನ್ಯವೇ? ಹತ್ತು ಹಲವು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ ಹಾಗಾಗಿ ಅವನಿಗೆ ಯಾವುದು ಬೇಕೋ ಅದು ಆಯ್ಕೆ ಮಾಡಿಕೊಳ್ಳಬಹುದು ಎಂದುಕೊಂಡೆ. ಸದಾ ಚೈತನ್ಯದ ಚಿಲುಮೆಯಾಗಿದ್ದ ಅವನು ಇನ್ನೂ ಹೆಚ್ಚು ಓದಲಿ ಎಂದು ಮನ ಬಯಸಿದ್ದೇನೋ ನಿಜ, ಆದರೆ ಅವನು ತಾನು ಮೊದಲು ಕೆಲಸಕ್ಕೆ ಸೇರಿ ನಂತರ ಓದನ್ನು ಸಂಜೆ ಕಾಲೇಜಿನಲ್ಲೋ ಅಥವಾ ಕರೆಸ್ಪಾಂಡನ್ಸ್’ನಲ್ಲೋ ಮಾಡುವ ಇಚ್ಚೆ ತೋರಿದ. ಇನ್ನೆರಡು ವರ್ಷಗಳಲ್ಲಿ ರಿಟೈರ್ ಆಗುವ ನನಗೆ ಆಧಾರ ಸ್ಥಂಭವಾಗುವ ಇಚ್ಚೆ ಅವನದು. ಇದ್ದೊಬ್ಬ ನನಗೆ ಏನು ಖರ್ಚು ಇರುತ್ತೆ ಅಂದುಕೊಂಡರೂ ಅವನ ಮುಂದಿನ ಓದಿಗೆ ಹಣ ಸುರಿಯುವಷ್ಟು ಚೈತನ್ಯ ನನಗಿರಲಿಲ್ಲ.

 

ಅಂದಿನಿಂದ ಕೆಲಸ ಹುಡುಕುತ್ತಲೇ ಇದ್ದಾನೆ. ಇವನ ಓದಿಗೂ ಇವನಿಗೆ ಸಿಗುವ ಕೆಲಸಕ್ಕೂ ಯಾವ ಸಂಬಂಧವೂ ಇರದೇ ಇರುವುದು ಇವನು ಕೆಲಸಕ್ಕೆ ಸೇರದೇ ಇರುವುದಕ್ಕೆ ದೊಡ್ಡ ಕಾರಣ. ಇಷ್ಟು ಹೆಚ್ಚಿನ ಮಾರ್ಕ್ಸ್ ತೆಗೆದುಕೊಂಡೂ ಸಹ ನಾನೇಕೆ ಸೇಲ್ಸ್ ಮ್ಯಾನ್ ಕೆಲಸ ಮಾಡಬೇಕು ಎನ್ನುವ ಹಠ. ಅರ್ಜಿ ಹಾಕಿದರೆ ಅನುಭವ ಕೇಳ್ತಾರೆ. ಕೆಲಸವೇ ಕೊಡದೆ ಇದ್ದರೆ ಇನ್ನು ಅನುಭವದ ಮಾತೆಲ್ಲಿ. ಹಣ ಬಲ, ಜನ ಬಲ ಹಾಗೂ ಜಾತಿ ಬಲವಿಲ್ಲದ ಬಲಹೀನ ನಾನು.

 

ಮೊದ ಮೊದಲು ಬೇಗನೆ ಎದ್ದು ಜಾಗಿಂಗ್ ಇತ್ಯಾದಿ ಮುಗಿಸಿ ನನಗೂ ಅಡಿಗೆ ಮನೆಯಲ್ಲಿ ಸಹಾಯ ಮಾಡುತ್ತ, ನಂತರ ಪೇಪರ್ ನೋಡಿ ಕೆಲಸಕ್ಕೆ ಅರ್ಜಿ ಹಾಕುವುದನ್ನು ಮಾಡುತ್ತಿದ್ದ. ಕ್ರಮೇಣ ನಾನು ಹೋದ ಮೇಲೆ ಏಳುವುದು ನೆಡೆದು ನಂತರ ನನಗೆ ಮಧ್ಯಾನ್ನದ ಊಟದ ಸಮಯ ಬಂದರೂ ಇವನು ಇಲ್ಲಿ ಹಾಸಿಗೆಯಿಂದ ಎದ್ದಿರುತ್ತಿರಲಿಲ್ಲ. ಹಾಗಂತ ನಿದ್ದೆ ಮಾಡುತ್ತಿದ್ದ ಅಂತ ಅಲ್ಲ, ತಾನೆದ್ದು ಏನು ಸಾಧಿಸಬೇಕಿದೆ ಅನ್ನೋ ಜಿಗುಪ್ಸೆ. ಹುಟ್ಟೋ ಸೂರ್ಯ ಹುಟ್ಟುತ್ತಾನೆ ತನ್ನನ್ನೇನು ಕೇಳಿ ಮುಂದುವರೆಯುತ್ತಾನೆಯೇ ಅಂತ. ಅವರವರ ಕೆಲಸದ ಮಧ್ಯೆ ಈ ನಡುವೆ ಸ್ನೇಹಿತರೂ ಕೈಗೆ ಸಿಗುತ್ತಿರಲಿಲ್ಲ.

 

ಆಫೀಸಿನಲ್ಲಿ ಕುಳಿತು ಇನ್ನೆರಡು ತಿಂಗಳ ನಂತರ ಕೈಗೆ ಬರುವ ಪೆನ್ಶನ್ ಇತ್ಯಾದಿಗಳ ಬಗ್ಗೆ ನೋಡುತ್ತಿದ್ದೆ. ಎದುರು ಟೇಬಲ್’ನಲ್ಲಿ ಕುಳಿತುಕೊಳ್ಳುವ ಗಿರೀಶ ತಾನು ಮುಗಿಸಿದ ಫೈಲನ್ನು ನನ್ನ ಸಹಿಗಾಗಿ ಟೇಬಲ್ಲಿನ ಮೇಲಿಟ್ಟು ಸಣ್ಣಗೆ ನಸು ನಕ್ಕು ಹೊರಟುಹೋದ. ಸಣ್ಣ ಪ್ರಾಯದ ಹುಡುಗ. ಅವನ ಅಪ್ಪ ನಿವೃತ್ತಿಯಾಗುವುದರೊಳಗೆ ಹರಿಯ ಪಾದ ಸೇರಿದ ಮೇಲೆ ಇವನಿಗೆ ಇಲ್ಲಿ ಕೆಲಸ ದೊರಕಿ ಕೆಲವು ವರ್ಷಗಳಾಗಿವೆ. ತಲೆನೆರತವರ ಮಧ್ಯೆ ಇವನಿಗೆ ಕೆಲಸ ಮಾಡಲು ಕಸಿವಿಸಿ. ಆದರೂ ಹೊಟ್ಟೆಪಾಡಿನ ಮುಂದೆ ಮಿಕ್ಕೆಲ್ಲವೂ ಶೂನ್ಯ.

 

ಫೈಲು ತೆರೆದು ಸಹಿ ಹಾಕಲು ಹೊರಟವನಿಗೆ ಕೈ ಹಾಗೇ ತಡೆಯಿತು. ಕೈಗಳು ಮರಗಟ್ಟಿದವು. ಹಣೆಯ ಮೇಲೆ ಬೆವರಿನ ಹನಿಗಳು ಸಾಲುಗಟ್ಟಿದವು. ರಕ್ತದೊತ್ತಡ ಹೆಚ್ಚಿದೆ ಅನ್ನಿಸಿತು. ಮನಕೆ ಬಂದ ಆಲೋಚನೆ ಅಷ್ಟು ತೀವ್ರವಾಗಿತ್ತು. ತಾನು ಹೀಗೆ ಮಾಡಿದರೆ ಮಗನಿಗೆ ಕೆಲಸ ಸಿಗಬಹುದೆ ? ಹಾಗಂತ ಯಾರೊಡನೆಯೂ ಕೂತು ಮಾತನಾಡುವ ಹಾಗೂ ಇಲ್ಲದ ಪರಿಸ್ಥಿತಿ. ಈ ರೂಲ್ಸಿನಲ್ಲಿ ಏನಾದರೂ ಬದಲಾವಣೆ ತಂದಿದ್ದಾರೆಯೇ ಅಥವಾ ಇಲ್ಲವೇ ಒಂದೂ ತಿಳಿಯದು. ಅದನ್ನೆಲ್ಲ ಪತ್ತೆ ಹಚ್ಚಲು ನನ್ನ ಬಳಿ ಸಮಯವೂ ಇಲ್ಲ. ಫೈಲನ್ನು ಹಾಗೇ ಮುಚ್ಚಿಟ್ಟು ಚೇರಿಗೆ ಒರಗಿದೆ. ಸರಿ ಹೋಗಲಿಲ್ಲ. ಸಾಹೇಬರಿಗೆ ಹೇಳಿ ಮನೆಗೆ ಹೊರಟೆ.

 

ಮುಂದಿನ ಎರಡು ದಿನಗಳು ಬರೀ ಆಲೋಚನೆಯಲ್ಲೇ ಮುಳುಗಿದ್ದೆ. ಮಗನಾದರೂ ಏನಾಯ್ತು ಎಂದು ಕೇಳಲಿಲ್ಲ. ನೋಡಿದರೆ ಏನೋ ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದ್ದಾನೆ ಅಂತ ಅನ್ನಿಸಿದರೂ ನಾನೂ ಕೇಳಲು ಹೋಗಲಿಲ್ಲ !

 

ಮರುದಿನ ಎದ್ದು ಯಥಾ ಪ್ರಕಾರ ದೈನಂದಿನ ಕಾರ್ಯಗಳನ್ನು ಮುಗಿಸಿ ಹೊರಡಲು ಅಣಿಯಾದೆ. ಏನೋ ಒಂದು ರೀತಿಯ ಭಾವನೆಗಳು ಮನವನ್ನು ಮುತ್ತಿತ್ತು. ಸುಮ್ಮನೆ ಬಾಗಿಲು ಜಡಿದು ಹೋಗಲು ಮನಸ್ಸು ಬರಲಿಲ್ಲ. ಕಡೆಗೊಮ್ಮೆ ಹೇಳಿ ಹೋಗೋಣವೆಂದು, ಮಗನ ರೂಮಿನ ಬಾಗಿಲು ಬಡಿದು ’ನಾನು ಹೋಗ್ತಾ ಇದ್ದೀನಿ’ ಅಂತ ಹೇಳಿದೆ. ಅವನೂ ಒಳಗಿನಿಂದಲೇ ’ಆಯ್ತು’ ಎಂದ. ಬೇಗ ಎದ್ದುಬಿಟ್ಟಿದ್ದಾನೆ ಅಂತ ಕಾಣುತ್ತೆ. ಮನದಲ್ಲೇ ದೇವರನ್ನು ಸ್ಮರಿಸಿ ಹೊರಟೆ.

 

-----

 

ಆಫೀಸಿನಲ್ಲಿ ಯಾರೋ ಮಗರಾಯನ ಮುಂದೆ ಹೇಳುತ್ತಿದ್ದರು ’ದಿನವೂ ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಆಫೀಸಿಗೆ ಬರುತ್ತಿದ್ದುದು. ನಾನು ಬಸ್ ಇಳಿದು ಅಲ್ಲೇ ಇದ್ದ ಪೆಟ್ಟಿಗೆ ಅಂಗಡಿಗೆ ಹೋದೆ. ಇವರೂ ಬಸ್ ಇಳಿದು ರೋಡ್ ಕ್ರಾಸ್ ಮಾಡುತ್ತಿದ್ದವರು ಏನು ಯೋಚನೆ ಮಾಡ್ತಿದ್ರೋ ಏನೋ ಗೊತ್ತಿಲ್ಲ. ಆ ಕಡೆಯಿಂದ ಸ್ಪೀಡಾಗಿ ಬರುತ್ತಿದ್ದ ಕಾರನ್ನು ನೋಡಿ ಕೂಡ, ಅದರ ಮುಂದೆ ಹಾದು ಹೋದರು. ಅಷ್ಟೇ! ಎಲ್ಲ ಮಿಂಚಿನ ವೇಗದಲ್ಲಿ ನೆಡೆದುಹೊಯ್ತು. ಛೇ ! ಸ್ಪಾಟ್’ನಲ್ಲೇ ಪಾಪ. ಅನ್ಯಾಯ. ಧೈರ್ಯ ತಂದುಕೊಳ್ಳಪ್ಪ !’.

 

ನೆಡೆದ ಘಟನೆಯಿಂದ ಇನ್ನೂ ಚೇತರಿಸಿಕೊಳ್ಳದ ಮಗರಾಯ ಮನದಲ್ಲೇ ದು:ಖಿಸುತ್ತಿದ್ದ ’ಇವತ್ತು ಫೈನಲ್ ಇಂಟರ್ವ್ಯೂ ಆಯ್ತು. ಮುಂದಿನ ತಿಂಗಳಿನಿಂದ ಕೆಲಸಕ್ಕೆ ಸೇರು ಅಂತ ಅಪಾಯಿಂಟ್ ಮೆಂಟ್ ಲೆಟರ್ ಕೊಟ್ಟಿದ್ದರು. ತನ್ನ ಸ್ನೇಹಿತನ ಸಹಾಯದಿಂದ ಸಿಕ್ಕಿತ್ತು. ಸಿಹಿ ಸುದ್ದಿ ಹೇಳೋಣ ಅಂತ ಅಪ್ಪನ ಆಫೀಸಿಗೇ ಬಂದೆ. ತಾನಾದರೂ ಒಂದು ಮಾತು ಹೀಗಿದೆ ಅಂತ ಮುಂಚೇನೇ ಹೇಳಿದ್ದರೆ ಚೆನ್ನಾಗಿತ್ತು. ಕಡೇ ಪಕ್ಷ ಅವರ ಆತ್ಮಕ್ಕೆ ಶಾಂತಿಯಾದರೂ ಸಿಕ್ಕುತ್ತಿತ್ತು ’..........

 

 

Syndicate

Syndicate content