- ಗೋಪೀನಾಥ ರಾವ್
ಅಮ್ಮ ಎಬ್ಬಿಸಿದಾಗ ಯಾರೋ ಏನೋ ಎಲ್ಲಿಯೋ ಎಂದು ತಿಳಿಯಲು ಎರಡು ಮೂರು ನಿಮಿಷ ತಗಲಿತ್ತು. ಎದ್ದು ಕುಳಿತೆ.
ಅಮ್ಮ ಹೆಗಲು ಹಿಡಿದು ಅಲುಗಾಡಿಸಿ ಇಳಿದ ಸ್ವರದಲ್ಲಿ ಹೇಳಿದ್ದಳು. "ನಿನ್ನ ಆ ಡ್ರಾಯಿಂಗ್ ಮಾಸ್ತರರು... ಇದೀಗ ತೀರಿಹೋದರಂತೆ... ಹೋಗಿ ಬಾ..."
ಕಣ್ಣುಜ್ಜಿಕೊಂಡು ಎದ್ದು ವಾಚ್ ನೋಡಿದೆ. ಗಂಟೆ ಮೂರೂವರೆ. ಮೇಲೆಕೆಳಗಾಗಿದ್ದ ಪಂಚೆಯನ್ನು ಬಿಡಿಸಿ ಅಡ್ಡಕ್ಕೆ ಸರಿಯಾಗಿ ಕಟ್ಟಿಕೊಂಡೆ. ಮೇಲೊಂದು ಗೂಟದಲ್ಲಿದ್ದ ಅಂಗಿ ಹಾಕಿಕೊಂಡು ಹೊರಟೆ.
ನಮ್ಮ ಮನೆಯಿಂದ ಮಾಸ್ತರರ ಮನೆಗೆ ಸರಿಯಾಗಿ ಐದು ನಿಮಿಷದ ದಾರಿ. ಪ್ರತಿ ಬಾರಿ ಊರಿಗೆ ಬಂದಾಗಲೂ ಈ ದಾರಿಯಾಗಿ ಅದೆಷ್ಟೋ ಬಾರಿ ಬಂದು ಹೋಗುತ್ತಿದ್ದೆ. ಮುಂಬಯಿಯ ನನ್ನ ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿರುವ ಪೈಂಟಿಂಗ್ ಹವ್ಯಾಸಕ್ಕೆ ಮೂಲ ಕಾರಣಗಳಲ್ಲೊಬ್ಬರು ಈ ಡ್ರಾಯಿಂಗ್ ಮಾಸ್ತರರು. ಮಿಲಿಟರಿಯಲ್ಲಿದ್ದು ನಿವೃತ್ತರಾದ ಮೇಲೆ ನಮ್ಮೂರಿನಲ್ಲಿ ಬಂದು ಸಣ್ಣದೊಂದು ಕಲಾಶಾಲೆ ತೆರೆದು ಡ್ರಾಯಿಂಗ್ ಮಾಸ್ತರ್ ಅನ್ನಿಸಿಕೊಂಡಿದ್ದರು. ರಜೆಯಲ್ಲಿ ಬರುವಾಗ ಹಲವಾರು ಅರ್ಧಂಬರ್ಧ ಪೈಂಟಿಂಗ್ ಗಳನ್ನು ತಂದು ಅವರ ಮುಂದಿಟ್ಟು ತಾಸುಗಟ್ಟಲೆ ಚರ್ಚೆ ನಡೆಸುತ್ತಿದ್ದೆ. ಕೆಲವೊಮ್ಮೆ ಮಾತುಕತೆ ಪೈಂಟಿಂಗ್ ಬಿಟ್ಟು ಮಾರ್ಕ್ಸ್‍ವಾದ, ಜಾಗತೀಕರಣ, ಕೆಂಪುದೀಪದ ಹುಡುಗಿಯರು ಅಂತ ಹಳಿ ತಪ್ಪಿದ್ದೂ ಇದೆ. ನನ್ನ ಪೈಂಟಿಂಗ್, ಅವರ ಪೈಂಟಿಂಗ್‍ಗಳ ಚರ್ಚೆ ನಡುವೆ ಪಿಕಾಸೋನಿಂದ ಹಿಡಿದು ಎಮ್ ಎಫ್ ಹುಸೈನ್ ವರೆಗೆ ಯಾರ್ಯಾರೆಲ್ಲ ಬಂದು ಹೋಗುತ್ತಿದ್ದರು. ಹಲವೊಂದು ಪೈಂಟಿಂಗ್‍ಗಳಿಗೆ ಖಚಿತ ಸ್ವರೂಪ ಬರುತ್ತಿದ್ದವು. ಬಣ್ಣಗಳ ಬೆರಕೆಯಾಗುತ್ತಿದ್ದುವು, ತಲೆಮಾರಿನ ಆಚಾರ ವಿಚಾರ ವಿನಿಮಯವಾಗಿ ಕೆಲವು ವಿಶಿಷ್ಟ ಚಿತ್ರಗಳು ರೂಪುಗೊಳ್ಳುತ್ತಿದ್ದುವು. ಮಾಸ್ತರರ ಅನುಭವದಲ್ಲಿ ನನ್ನ ಮನಸ್ಸಿನ ಲಹರಿಗಳು ಬಣ್ಣಗಳ ಸ್ವಾತಂತ್ರ್ಯ ಪಡೆದು ಚಿತ್ರಗಳಾಗುತ್ತಿದ್ದವು. "ನನ್ನ ಸಹವಾಸದಲ್ಲಿ ನಿನ್ನ ಚಿತ್ರಗಳಿಗೆ ಮೆಚೂರಿಟಿ ಪಡೆದುಕೊಂಡಂತೆ ನನ್ನ ಚಿತ್ರಗಳ ಬಗೆಗೂ ಗಮನಕೊಡು ಮಹರಾಯಾ. ನನ್ನಿಂದ ನೀನು ಕಲಿತುಕೊಂಡರೆ ಸಾಲದು, ನಿನ್ನಿಂದ ನನಗೂ ಏನಾದರೂ ಫಾಯಿದೆ ಸಿಗಬೇಕು" ಎಂದು ಆರಂಭಿಸುತ್ತಿದ್ದ ಮಾಸ್ತರರು ಹಲವು ಬಾರಿ "ನಿನ್ನ ಚಿತ್ರಗಳ ಹಾಗೆ ಯೌವನ, ಲವಲವಿಕೆ ಹೇಗೆ ತುಂಬಿಸಿಕೊಡಬಹುದು ಅನ್ನುವ ರಹಸ್ಯವನ್ನು ನನಗೂ ತಿಳಿಸಬಾರದೇ?" ಎಂದು ಒತ್ತಾಯಿಸುತ್ತಿದ್ದರು. "ಮುಂಬೈಯಲ್ಲಿ ಹಲವಾರು ಕಲಾವಿದರ ಒಡನಾಟದ ನಿನ್ನಲ್ಲಿ ನಾನು ಕಲಿಯುವುದು ಬಹಳಷ್ಟಿದೆ" ಅನ್ನುತ್ತಿದ್ದ ಮಾಸ್ತರರ ಮಾತು ನೆನಪಾಯಿತು.. ನನ್ನ "ತಬ್ಬಲಿಗಳು" ಚಿತ್ರದ ಬಾಲ ಮುದುಡಿದ ನಾಯಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ನಾನು ಚಿತ್ರಗಳ ಮೆಚೂರಿಟಿಗಾಗಿ ಅವರನ್ನು ಅವಲಂಬಿಸಿದ್ದನ್ನು ತಿಳಿದೂ ಏಕಾಯೇಕಿ ಹೀಗೆ ಹೋಗಿಬಿಟ್ಟಿದ್ದರು..
ಮಾಸ್ತರರ ಮನೆಮುಂದೆ ಸಣ್ಣ ಗುಂಪು ಜಮಾಯಿಸಿತ್ತು. ಎಲ್ಲರೂ ಮಾಸ್ತರರ ಶವದೆದುರು ಬಂದು ತಮ್ಮ ಗೌರವ ಅರ್ಪಿಸಿ ಬದಿಯಲ್ಲಿ ಹೋಗಿ ನಿಲ್ಲುತ್ತಿದ್ದರು. ನಾನೂ ಅಂತಿಮ ನಮನ ಸಲ್ಲಿಸಿ ಬದಿಗೆ ಸರಿದು ನಿಂತಿದ್ದೆ. ನನ್ನ ಬಳಿಯಲ್ಲಿ ಮಾಸ್ತರರ ಮಗ ವಾಸು ನಿಂತಿದ್ದ. ತಬ್ಬಲಿಗಳಾದವರು ಮೂಲೆ ಹಿಡಿಯುತ್ತಾರೆ ಎಂದು ಮಾಸ್ತರರು ನನ್ನ ಚಿತ್ರದ ನಾಯಿಯನ್ನು ಆದಷ್ಟು ಮೂಲೆಗೆ ತಳ್ಳುವ ಸೂಚನೆ ನೀಡಿದ್ದು ನೆನಪಾಯಿತು. ಜನ ಸೇರುತ್ತಿದ್ದಂತೆ ನಾನು ಇನ್ನಷ್ಟು ಮೂಲೆಗೆ ಸರಿಯುತ್ತಿದ್ದೆ.
ಸ್ಮಶಾನ ಮೌನ ತಾಳಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ಗಂಭೀರ ಸ್ವರವೊಂದು ಕೇಳಿಸಿತ್ತು. "ಯಜಮಾನರ ವಾರೀಸುದಾರರಲ್ಲಿ ಹಿರಿಯರು ಯಾರು?" ಶಬ್ದ ಬಂದ ದಿಕ್ಕಿಗೆ ಎಲ್ಲರಂತೆ ನಾನೂ ನೋಡಿದ್ದೆ. ಎಪ್ಪತ್ತಕ್ಕೂ ಮೇಲಿನ ವಯಸ್ಸನ್ನು ಸಾರಿ ಹೇಳುವ ಸವಕಲು ಶರೀರದ ಮುದುಕರೊಬ್ಬರು ಅಷ್ಟು ಹೇಳಿ ಸೇರಿದ್ದ ಎಲ್ಲರನ್ನೂ ದಿಟ್ಟಿಸಿ ನೋಡುತ್ತಿದ್ದರು. ಎಲ್ಲರೂ ಅವರತ್ತ ನೋಡುತ್ತಿದ್ದಂತೆ "ಯಾರು ಹಿರಿಯರು? ಬೆಳಗಾಗುತ್ತಲೇ ಶವ ಸಂಸ್ಕಾರವಾಗುವ ಹಾಗೆ ವ್ಯವಸ್ಥೆ ಮಾಡೋಣ. ಪರವೂರಿನಿಂದ ಬರುವವರಿದ್ದಾರಾ?" ಅನ್ನುತ್ತ ಇನ್ನೊಂದು ಬಾರಿ ಎಲ್ಲರತ್ತ ದೃಷ್ಟಿ ಹಾಯಿಸಿದರು.
ಅಷ್ಟರಲ್ಲಿ ಯಾರೋ ಒಬ್ಬರು "ಮಾಸ್ತರರ ಮಗ ಅಲ್ಲಿದ್ದಾರೆ" ಎಂದು ನನ್ನ ಬಳಿಯಲ್ಲಿದ್ದ ವಾಸುವನ್ನು ತೋರಿಸುತ್ತಲೇ ನಮ್ಮ ಬಳಿಗೆ ಬಂದರಾತ.
"ನೀವಾ... ನೀವಾ?" ಇಬ್ಬರನ್ನೂ ಉದ್ದೇಶಿಸಿ ಅವರು ಕೇಳಿದಾಕ್ಷಣ ನಾನು ವಾಸುವನ್ನು ತೋರಿಸಿದೆ.
"ಏನೆಲ್ಲ ವ್ಯವಸ್ಥೆ ಮಾಡಿದ್ದೀರಿ? ಏನೆಲ್ಲಾ ಆಗಬೇಕು? ನನ್ನಲ್ಲಿ ಹೇಳಿ, ಇಲ್ಲೇ ನಾಲ್ಕು ರಸ್ತೆಯ ಆಚೆ ಇರುವವ ನಾನು. ಇಂತಹ ಸಮಯದಲ್ಲಿ ಬಂದು ಮನೆಯವರಿಗೆ ನೆರವಾಗುತ್ತೇನೆ. ಹವ್ಯಾಸ ಅನ್ನಿ... ವೃತ್ತಿ ಅನ್ನಿ.. ಸಮಾಜ ಸೇವೆ ಅನ್ನಿ.." ಒಂದು ಒಣನಗೆ ನಕ್ಕು ಮುಂದುವರೆಸಿದರಾತ "ನಮ್ಮ ರೀತಿ ನೀತಿಗೆ ಚ್ಯುತಿ ಬಾರದ ಹಾಗೆ ಯಜಮಾನರನ್ನು ಗೌರವದಿಂದ ಕಳುಹಿಸಿಕೊಡೋಣ.. ಅಲ್ವಾ?" ಎಲ್ಲರಿಗೂ ಕೇಳಿಸುವಷ್ಟು ಜೋರಾಗಿಯೇ ಮಾತನಾಡುತ್ತಿದ್ದ ಅವರ "ಅಲ್ವಾ?" ನನಗಿಷ್ಟವಾಗಿತ್ತು.
"ನಮ್ಮ ಪುರೋಹಿತರಿಗೆ ಹೇಳಿ ಕಳುಹಿಸಿದ್ದೇವೆ. ಬೆಳಿಗ್ಗೆ ಬರುತ್ತೇನೆ ಎಂದಿದ್ದಾರೆ. ವ್ಯವಸ್ಥೆ ಎಲ್ಲ ಮಾಡಲು ಸ್ವಾಮಿ ಎಂಬವರನ್ನು ಕಳುಹಿಸುತ್ತೇನೆ ಅಂದಿದ್ದಾರೆ" ಮಾಸ್ತರರ ಮಗ ಹೇಳಿದಾಗ "ನಾನೆ.. ನಾನೆ ಸ್ವಾಮಿ. ನಾನು ಅದಕ್ಕೇ ಬಂದದ್ದು.. ಎಲ್ಲ ವ್ಯವಸ್ಥೆ ಮಾಡುತ್ತೇನೆ. ಪರವೂರಿನಿಂದ ಯಾರಾದ್ರೂ ಬರುವವರಿದ್ದಾರಾ?" ಕೇಳಿದರು ಸ್ವಾಮಿ.
"ನಮ್ಮಕ್ಕ... ಬೆಂಗಳೂರಿನಿಂದ ಬರಬೇಕು. ಹೊರಟಿದ್ದಾರೆ. ಬೆಳಿಗ್ಗೆ ಹೊತ್ತಿಗೆ ಬಂದಾರು" ವಾಸು ಉತ್ತರಿಸಿದ.
"ಬೆಂಗಳೂರಿನಿಂದ ಬರಲು ಈಗ ಅಸಾಧ್ಯ ಟ್ರಾಫಿಕ್ಕು.. ಒಂದು ನಿಮಿಷ" ಎನ್ನುತ್ತಾ ತಮ್ಮ ಬಗಲಿನ ಕಿಸೆಗೆ ಕೈ ಹಾಕಿ ಮೊಬೈಲ್ ತೆಗೆದು ತಕಪಕನೆ ಯಾವುದೋ ನಂಬರ್ ತಿರುಗಿಸಿ "ಸುರೇಶಾ.. ನೀನೆಲ್ಲಿದ್ದೀ?... ಸರಿ ಸರಿ.. ಪೋಲೀಸು ಬರಲಿ ಆಮೇಲೆ ನೋಡೋಣ.. ಮತ್ತೆ ಇನ್ನೊಂದು ವಿಷಯ.. ಇಲ್ಲಿ ಬೆಂಗಳೂರಿನಿಂದ ಮಗಳು ಬರಲಿಕ್ಕಿದೆಯಂತೆ. ಬೆಂಗಳೂರಿನಿಂದ ರಸ್ತೆ ಬ್ಲಾಕೇನಾದರೂ ಇದೆಯಾ ಕೇಳಿ ಹೇಳು" ಅಂದರು.
"ಇಲ್ನೋಡಿ.. ನಾಳೆ ನಿಮ್ಮಕ್ಕ ಬಂದು ಅಂತಿಮ ದರ್ಶನ ಮಾಡಿದ ಕೂಡಲೆ ಹೊರಡುವ ಹಾಗೆ ವ್ಯವಸ್ಥೆ ಮಾಡೋಣ. ಮತ್ತೆ ಕಾಯುವುದು ಬೇಡ. ನಾಳೆಯ ಒಟ್ಟು ಖರ್ಚು ಸಾವಿರದ ಎಂಟುನೂರು. ಇದರಲ್ಲಿ ಅಂಬುಲೆನ್ಸ್ ಖರ್ಚೂ ಸೇರಿದೆ. ಕ್ಯಾಶ್ ಇಲ್ಲದಿದ್ದರೆ ಚೆಕ್ಕೂ ಆಗಬಹುದು, ನಾಳೆ ನಾನು ಬ್ಯಾಂಕಿನಿಂದ ಹಣ ಪಡೆದುಕೊಳ್ಳುತ್ತೇನೆ. ಮತ್ತೆ ಶವದ ಬಾಯಿಯಲ್ಲಿ ಚಿನ್ನದ ತುಂಡು ಹಾಕುವ ಕ್ರಮ ಕೆಲವರಲ್ಲಿ ಉಂಟು. ನಿಮ್ಮಲ್ಲಿದೆಯಾದರೆ ಅದು ಪ್ರತ್ಯೇಕವಾಗಿ ಕೊಡಬೇಕು. ಸಣ್ಣ ತುಂಡಿಗೂ ಈಗ ಸಾವಿರದಿನ್ನೂರು ಬೇಕು.. ನೀವೇ ಹಾಕಿಕೊಳ್ಳುವುದಾದರೂ ಅಡ್ಡಿಯಿಲ್ಲ" ಸ್ವಾಮಿ ಹೇಳುತ್ತಲೇ ವಾಸು ಹಣ ತರಲು ಒಳಗೆ ಹೋದ.
ಅದುವರೆಗೂ ನಾನು ಬಳಿಯಲ್ಲಿದ್ದದ್ದು ಲಕ್ಷ್ಯಕ್ಕೇ ಇಲ್ಲದಂತೆ ಮಾತನಾಡಿದ್ದ ಸ್ವಾಮಿ ನನ್ನನ್ನು ನೋಡಿ"ನೀವು ಹೇಗೆ ಸಂಬಂಧ?" ಎನ್ನುತ್ತ ನಕ್ಕರು.
"ಸಂಬಂಧ ಇಲ್ಲ, ಗುರುಗಳು" ಅಂದೆ ನಾನು.
"ತಮ್ಮ ಪರಿಚಯ?" ಕೇಳಿದರಾತ.
ನನ್ನ ಹೆಸರು ಚಂದ್ರು, ಮುಂಬೈಯಲ್ಲಿ ಉದ್ಯೋಗ ಎಂದೆಲ್ಲ ಹೇಳಿದೆ ನಾನು.
"ಮತ್ತೆ ಇವರು ಗುರು ಅಂದ್ರಲ್ಲ? ಅದು ಹೇಗೆ?" ಆಶ್ಚರ್ಯದಿಂದ ಕೇಳಿದರಾತ.
"ಇವರ ಹಾಗೆ ನಾನೂ ಪೈಂಟಿಂಗ್ ಮಾಡುತ್ತೇನೆ. ಇವರಿಂದ ಬಹಳಷ್ಟು ಕಲಿತಿದ್ದೇನೆ.. ಇನ್ನೂ ಕಲಿಯುವುದಕ್ಕಿತ್ತು ಅಷ್ಟರೊಳಗೆ...." ಮತ್ತೆ ಮುಂದುವರೆಸಲಾಗಲಿಲ್ಲ ನನಗೆ.
"ಓಹೋ.. ಹೋ ಕಲಾವಿದ ಚಂದ್ರು ಅಂದರೆ ನೀವಾ?... ಕೇಳಿದ್ದೇನೆ ನಿಮ್ಮ ಬಗ್ಗೆ" ಆತ ಮುಂದುವರೆಸುತ್ತಿದ್ದಂತೆ ಅವರ ಮೊಬೈಲ್ ಕಿಣಿಕಿಣಿಸಿತು.
"ಹಲೋ ಹಲೋ... ಹಾಂ... ಬೇಡ ಸುರೇಶಾ. ಪೋಲೀಸು ಬರಲಿ, ಅವರು ಓಕೆ ಹೇಳಿದ ಮೇಲೆ ನಾವು ಮುಟ್ಟೋದು ಅಂತ ಹೇಳಿ ಬಿಡು. ಮೂವತ್ತೈದು ಸಾಯುವ ಪ್ರಾಯ ಅಲ್ಲ. ಹೆಣ್ಣುಹೆಂಗಸು ಬೇರೆ. ನಾಳೆ ಕೋರ್ಟು ಕಚೇರಿ ಅಲೆದಾಟ ಯಾರಿಗೆ ಬೇಕು.. ಉಶಾರಿಲ್ಲದೆ ಇದ್ದದ್ದು ಹೌದಾದರೆ ಡಾಕ್ಟರರು ಒಂದು ಮಾತು ಹೇಳಿದರೆ ಸಾಕು, ಪೋಲೀಸರು ಕಿರಿಕಿರಿ ಮಾಡುವುದಿಲ್ಲ ಅಂತ ಹೇಳಿ ನೀನು ಈಚೆಗೆ ಬಂದು ಬಿಡು, ಇಲ್ಲಾದರೂ ಮೊದಲು ಮುಗಿಸೋಣ" ಫೋನ್ ಕಟ್ ಮಾಡಿ ಮಾತು ಮುಂದುವರೆಸಿದರು.
"ನಿಮ್ಮ ಬಗ್ಗೆ ಕೇಳಿದ್ದೇನೆ. ನಿಮ್ಮಲ್ಲಿ ಮಾತಾಡಲು ಸಿಕ್ಕಿದ್ದು ಬಹಳ ಸಂತೋಷವಾಯಿತು. ಇದಕ್ಕೇ ಹೇಳುವುದು ಯೋಗಾಯೋಗ ಅಂತ. ದೇವರು ನಮ್ಮ ನಿಮ್ಮ ಭೇಟಿಗೆ ಹೇಗೆ ಸಂದರ್ಭ ಒದಗಿಸಿದ ನೋಡಿ" ಅಂತ ಸ್ವಲ್ಪ ದೊಡ್ಡದಾಗಿಯೇ ನಕ್ಕರು ಕೂಡ.
"ಪೈಂಟಿಂಗಿಗೆ ನೀವು ವಸ್ತು ಹೇಗೆ ಆಯ್ದುಕೊಳ್ಳುತ್ತೀರಿ ಎನ್ನುವುದೇ ನನಗೆ ದೊಡ್ಡ ಕುತೂಹಲ. ಅದು ನಿಮ್ಮ ತಲೆಗೆ ಹೇಗೆ ಹೋಗುತ್ತೆ?" ಕೇಳಿದರು ಸ್ವಾಮಿ. ನನಗೆ ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಕೊಡುವ ಸಮಯ ಇದು ಹೌದೋ ಅಲ್ಲವೋ ಅನ್ನುವ ಅನುಮಾನ.
"ಯಜಮಾನರ ಮಗಳು ಬರುವ ವರೆಗೆ ಏನೂ ನಡೆಯುವ ಹಾಗಿಲ್ಲವಲ್ಲ... ಹಾಗೆ ನನಗೆ ನಿಮ್ಮಲ್ಲಿ ವಿಷಯ ತಿಳಿದುಕೊಳ್ಳಲು ಇದೊಂದು ಅವಕಾಶ" ನನ್ನ ಮನಸ್ಸನ್ನು ಲೀಲಾಜಾಲವಾಗಿ ತಿಳಿದವರಂತೆ ಪಟ್ಟನೆ ನುಡಿದಿದ್ದ ಅವರಲ್ಲಿ ಮಾತು ಮುಂದುವರೆಸದೆ ಬೇರೆ ಮಾರ್ಗ ಇಲ್ಲವಾಗಿತ್ತು.
ಹಾಗೆ ಮುಂದರಿದ ನಮ್ಮ ಮಾತುಕತೆ ಪೈಂಟಿಂಗಿನಿಂದ ತೊಡಗಿ ಕ್ಯಾನ್ವಾಸಿನ ಮೇಲೆ ಹರಿದಾಡುವ ಬ್ರಶ್ ನಂತೆ ಎಲ್ಲೆಲ್ಲೋ ಹೋಗಿತ್ತು. ನಡುವೆ ಒಂದೆರಡು ಫೋನ್ ಕರೆ ಬಿಟ್ಟರೆ ನಮ್ಮ ಮಾತುಕತೆ ನಿರಾತಂಕವಾಗಿ ಸಾಗಿತ್ತು.
"ಇನ್ನೊಂದು ಪ್ರಶ್ನೆ. ಈ ವಯಸ್ಸಿನಲ್ಲೂ ಮುದುಕನ ಚಪಲ ನೋಡು ಅನ್ನಿಸಬಹುದು ನಿಮಗೆ.. ಆದರೂ ನನಗೆ ತಿಳಿದುಕೊಳ್ಳುವ ಆತುರ.. ಈ ಪೈಂಟರುಗಳೆಲ್ಲ ಹುಡುಗಿಯರನ್ನು ನಗ್ನವಾಗಿ ಚಿತ್ರಿಸುವುದರಲ್ಲಿ ಏಕೆ ಅಷ್ಟು ಉಮೇದು ತೋರಿಸುತ್ತಾರೆ?" ಸ್ವಾಮಿಯವರು ಕೇಳಿದಾಗ ನಗು ಬಂತು ನನಗೆ. ಜನ ಸಾಮಾನ್ಯರೆಲ್ಲರೂ ಪೈಂಟರುಗಳನ್ನು ತಿಳಿದುಕೊಂಡ ಬಗೆ ಹೇಗೆ ಎನ್ನುವುದಕ್ಕೆ ಇನ್ನೊಂದು ಪುರಾವೆ ಸಿಕ್ಕಿತ್ತು ನನಗೆ! "ನಿಜವಾದ ಆಸಕ್ತಿಯಿಂದ ಕೇಳಿದ್ದು ನಾನು. ನಿಮ್ಮನ್ನೆಲ್ಲ ಗೇಲಿಮಾಡುವುದಕ್ಕಲ್ಲ. ಇಷ್ಟವಿಲ್ಲದಿದ್ದರೆ, ಉತ್ತರಿಸಿ ಎನ್ನುವ ಆಗ್ರಹ ಇಲ್ಲ" ಸ್ವಾಮಿ ಹೇಳಿದಾಗ ಉತ್ತರಿಸದೆ ಬೇರೆ ವಿಧಿಯಿರಲಿಲ್ಲ.
"ಕಾಮ ಮನುಷ್ಯನ ಒಂದು ಮುಖ್ಯ ಅಗತ್ಯ. ಹಸಿವು ನಿದ್ದೆಯ ನಂತರದ ಸ್ಥಾನ ಅದಕ್ಕೆ. ಸಂಸ್ಕೃತಿಯ ಹೆಸರಿನಲ್ಲಿ ತಲೆತಲಾಂತರದಿಂದ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಲೇ ಬಂದಿದ್ದೇವೆ. ಅದುಮಿಟ್ಟ ಭಾವನೆಗಳನ್ನು ಕಲಾವಿದರು ಅಭಿವ್ಯಕ್ತ ಪಡಿಸಲು ಹಾತೊರೆಯುತ್ತಾರೆ" ನನಗೆ ತಿಳಿದಷ್ಟನ್ನು ಹೇಳಿದೆ.
"ಒಪ್ಪಿದೆ. ಅದಕ್ಕೇ ಹೇಳುವುದು, ತಿಳಿದವರಲ್ಲಿ ಕೇಳಬೇಕು ಅಂತ" ನನಗೆ ಸರ್ಟಿಫಿಕೇಟು ನೀಡಿ ಸ್ವಾಮಿ ಮುಂದುವರೆಸಿದರು "ನೀವು ವಸ್ತು ಹೇಗೆ ಆಯ್ದುಕೊಳ್ಳುವುದು ಅಂತ ಹೇಳಲೇ ಇಲ್ಲ"
"ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿದ ಯಾವುದೇ ಘಟನೆ ವಸ್ತುವಾಗುತ್ತೆ. ಅದು ಚೌಕಟ್ಟು, ಅದರೊಳಗೆ ನಮ್ಮ ಸೃಜನಶೀಲತೆ, ಬಣ್ಣಗಳ ಮಿಲನ, ಅರ್ಥಗಳ ಕೃಷಿ ಇವು ಚಿತ್ರವಾಗುತ್ತವೆ"
"ಅಷ್ಟೆಲ್ಲ ಅರ್ಥವಾಗುವುದಿಲ್ಲ ನನಗೆ. ಇನ್ನೊಂದು ಹೇಳಿ, ಈ ಪೈಂಟಿಂಗ್‍ಗಳಿಗೆ ಮುಗಿಬಿದ್ದು ದುಡ್ಡು ಸುರಿದು ಕೊಳ್ಳುತ್ತಾರಲ್ಲ? ಅದು ಯಾಕೆ?"
ಈ ಪ್ರಶ್ನೆಗೆ ನನ್ನಲ್ಲೂ ಉತ್ತರ ಇರಲಿಲ್ಲ. ಮೇಲಾಗಿ ಮುದುಕ ನಮ್ಮನ್ನೆಲ್ಲ ಅಳೆಯುತ್ತಿದ್ದಾನೋ ಎನ್ನುವ ಸಂದೇಹ ಬೇರೆ ಬಂದಿತ್ತು ನನಗೆ. "ನಾವು ಮಾರುವವರು ಸ್ವಾಮಿ, ಈ ಪ್ರಶ್ನೆ ಕೊಳ್ಳುವವರನ್ನು ಕೇಳಿ" ಅನ್ನುತ್ತ ಸುಲಭವಾಗಿ ತಪ್ಪಿಸಿಕೊಂಡೆ.
"ಪರವಾಗಿಲ್ಲ ನೀವು" ಮನಸಾರೆ ನಕ್ಕಿದ್ದರು ಸ್ವಾಮಿ.
ಆಷ್ಟರಲ್ಲಿ ಅವರ ಮಿತ್ರ ಸುರೇಶ ಕೂಡ ಬಂದಿದ್ದರು. "ಈಗ ಬಂದೆ" ಅನ್ನುತ್ತ ಅವರೊಡನೆ ಸೇರಿದರು ಸ್ವಾಮಿ. ಇಬ್ಬರೂ ಸೇರಿ ಬೇಕಾದ ಸಿದ್ಧತೆಗಳನ್ನಾರಂಭಿಸಿದರು. ನಿಂತಲ್ಲೇ ಅವರ ಕೈಚಳಕ ನೋಡುತ್ತ ಕುಳಿತಿದ್ದೆ. ಸ್ವಲ್ಪ ಹೊತ್ತು ತೂಕಡಿಸಿದೆನೋ ಎನೋ!
ಮಾಸ್ತರರ ಮಗಳು ಬಂದು ದರ್ಶನ ಪಡೆಯುತ್ತಲೇ ಹೆಣ ಎತ್ತಿ ಚಟ್ಟದ ಮೇಲಿಟ್ಟು ಅಂಬುಲೆನ್ಸಿನಲ್ಲಿಟ್ಟು ಚಿತಾಗಾರಕ್ಕೆ ಹೊರಟಿದ್ದೆವು. ಅಂಬುಲೆನ್ಸಿನ ಹಿಂದೆ ತೆರಳಿದ ಮೊದಲ ವಾಹನದಲ್ಲಿ ಏರಿಕುಳಿತ ಸ್ವಾಮಿ ನನ್ನನ್ನೂ ಕರೆದು ಪಕ್ಕಕ್ಕೆ ಕುಳ್ಳಿರಿಸಿಕೊಂಡರು. "ಚಿತಾಗಾರದಲ್ಲಿ ಒಂದು ಚಿತೆ ಮಾತ್ರ ಇರೋದು. ಇಷ್ಟು ದೊಡ್ಡ ಪಟ್ಟಣ. ಎರಡು ಚಿತೆಯಾದರೂ ಅಗತ್ಯ ಬೇಕು... ನಮ್ಮ ರಾಜಕಾರಣಿಗಳಿಗೆ ಹೇಳಿ ಹೇಳಿ ಸಾಕಾಯಿತು. ನಮಗಿಂತಲೂ ಮೊದಲು ಇನ್ನೊಂದು ಹೆಣ ತಲುಪಿದ್ದರೆ ಅನಾವಶ್ಯ ನಾವು ಕಾಯಬೇಕಾಗುತ್ತದೆ' ಸ್ವಾಮಿ ಮಾತು ಮುಂದುವರೆಸುತ್ತಲೇ ಇದ್ದರು.
ಚಿತಾಗಾರ ತಲುಪುತ್ತಲೇ ಮೂವತ್ತರ ಯುವಕನಂತೆ ಚುರುಕಾದ ಸ್ವಾಮಿ ಕೇವಲ ಐದೇ ನಿಮಿಷದಲ್ಲಿ ಹೆಣ ಚಿತೆಗೇರಿಸಿ ಬಿಟ್ಟಿದ್ದರು. "ಇನ್ನು ಅವರ ಮಗ ಬೆಂಕಿ ಕೊಟ್ಟರೆ ಮುಗಿಯಿತು" ಎಂಬ ಕೃತಾರ್ಥ ಭಾವ ಪ್ರದರ್ಶಿಸಿ ನನ್ನ ಬಳಿಯಲ್ಲಿ ನಿಂತಿದ್ದ ಸ್ವಾಮಿ ನನಗೆ ವಿಶೇಷವಾಗಿ ಕಂಡರು. ಈ ವಯಸ್ಸಿನಲ್ಲೂ ಈ ಕೆಲಸದಲ್ಲೂ ಇಂತಹ ಲವಲವಿಕೆಯೇ!
ಸ್ವಲ್ಪ ಹೊತ್ತಿನಲ್ಲಿ ಮಾಸ್ತರರ ಚಿತೆ ಧಗಧಗನೆ ಉರಿಯಲಾರಂಭಿಸಿತು. ಆಗ ಇನ್ನೊಂದು ಅಂಬುಲೆನ್ಸ್ ಬಂದು ನಿಂತಿತು. "ನೋಡಿ, ಇದನ್ನೇ ಹೇಳಿದ್ದು ನಾನು... ಈಗ ಇವರು ವಿನಾ ಕಾರಣ.. ಒಂದು.. ಒಂದೂವರೆ ಗಂಟೆ ಕಾಯಬೇಕು" ಚಡಪಡಿಸಿದರು ಸ್ವಾಮಿ. ನಮ್ಮ ಅಧಿಕಾರಿಗಳಿಗೆ ಯಾವಾಗ ಅರ್ಥವಾಗುತ್ತೋ ದೇವರೇ ಬಲ್ಲ" ನಿಟ್ಟುಸಿರು ಬಿಟ್ಟರು ಸ್ವಾಮಿ.
"ಇನ್ನು ನಾವು ಹೊರಡೋಣ. ಅವರು ನಾಲ್ಕೈದು ಮಂದಿ ನಿಂತರೆ ಸಾಕು, ಶಾಸ್ತ್ರ ತಲೆಬುರುಡೆ ಸಿಡಿಯುವ ವರೆಗೆ ಯಾರಾದರೂ ನಿಲ್ಲಬೇಕು ಅನ್ನುತ್ತದೆ" ಎನ್ನುತ್ತ ಕಾರನ್ನೇರಿ ಕುಳಿತರು ಸ್ವಾಮಿ. ನಾನೂ ಅವರ ಬಳಿ ಕುಳಿತೆ. "ನನಗೆ ನಿಮ್ಮ ಪೈಂಟಿಂಗು ನೋಡಬೇಕು, ಸಂಜೆ ನಿಮ್ಮಲ್ಲಿಗೆ ಬರುತ್ತೇನೆ... ನೀವು ಲೈಫ್‍ಸ್ಕೆಚ್ ಮಾಡುತ್ತೀರಾ? ನನ್ನದೊಂದು ಸ್ಕೆಚ್ ಮಾಡಿಸೋಣ ಅಂತಲೂ ಆಶೆ ಇದೆ" ನಕ್ಕರು ಸ್ವಾಮಿ.
"ಬನ್ನಿ ಬನ್ನಿ.. ಸ್ಕೆಚ್ ಮಾಡಲು ನಾನು ಐವತ್ತು ಸಾವಿರ ತೆಗೆದುಕೊಳ್ಳುತ್ತೇನೆ.. ನಿಮಗೆ ಸ್ವಲ್ಪ ಡಿಸ್ಕೌಂಟ್ ಮಾಡೋಣ.. ನಾನೂ ನಗೆಯಾಡಿದೆ.
***
ಸಂಜೆ ಮನೆ ಹುಡುಕಿ ಬಂದಿದ್ದರಾತ. ಪೈಂಟಿಂಗುಗಳನ್ನು ನೋಡುತ್ತಾ ಏನೆಲ್ಲ ಮಾತುಕತೆಗಳಾದವು.
"ನನ್ನದೊಂದು ಆಸೆ.. ಬೆಳಗ್ಗೆಯಿಂದ ತಲೆಯಲ್ಲಿ ಲಾಗ ಹಾಕುತ್ತಿದೆ" ಆರಂಭಿಸಿದರು ಸ್ವಾಮಿ. "ಸ್ಮಶಾನ ಸುತ್ತುವ ನನ್ನದೊಂದು ಪೈಂಟಿಂಗ್ ನೀವು ಮಾಡಬೇಕು. ಅದನ್ನು ಮಾರಿ ಬಂದ ಹಣದಲ್ಲಿ ಚಿತಾಗಾರದಲ್ಲಿ ಇನ್ನೊಂದು ಚಿತೆ ಕಟ್ಟಿಸಬೇಕು.. ನನ್ನ ಪೈಂಟಿಂಗ್ ನಿಮ್ಮ ಕೈಯಲ್ಲಿ ಬರೆಸಿದ ಹಾಗೂ ಆಯಿತು, ಜನೋಪಕಾರದ ಕೆಲಸವೂ ಆಯಿತು. ಹೇಗೆ ನನ್ನ ಐಡಿಯಾ?" ಕಣ್ಣ ತುಂಬ ಆಸೆಯ ಹೊಳಪು, ಮುದಿತನದಲ್ಲೂ ಜನೋಪಯೋಗಿ ಕೆಲಸ ತಾನು ಮಾಡಬೇಕೆಂಬ ಅವರ ಹಂಬಲವನ್ನು ಸ್ಪಷ್ಟವಾಗಿ ಸೂಚಿಸುತ್ತಿತ್ತು.
"ನಿಮ್ಮ ಆಸೆ ಹಾಗೆ ಇದ್ದರೆ.. ಮಾಡೋಣವಂತೆ" ಅಂದೆ ನಾನು.
ನನ್ನ ಕೈಗಳನ್ನು ಅವರ ಕೈಗಳಲ್ಲಿ ತೆಗೆದುಕೊಂಡು ಹಣೆಗೊತ್ತಿಕೊಂಡು "ದೊಡ್ಡ ಮನಸ್ಸು ನಿಮ್ಮದು" ಎನ್ನುತ್ತಾ ಬೀಳ್ಕೊಂಡಿದ್ದರಾತ.
***
ಮುಂಬೈಗೆ ಹಿಂತಿರುಗಿ ಬಂದ ಮಾರನೇ ದಿನವೇ ಕ್ಯಾನ್ವಾಸ್ ತೆಗೆದು ಪೈಂಟಿಂಗ್ ನ ಸ್ಕೆಚ್ ಹಾಕ ಹೊರಟೆ. ಸ್ಮಶಾನದ ಹಿನ್ನೆಲೆ, ಕಾಷ್ಟಕ್ಕೆ ಇಟ್ಟು ಸುಡಲು ತಯಾರಾದ ಹೆಣ, ಅತ್ತಿತ್ತ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವ ಜನರು, ಅಲ್ಲೆ ಒಂದಿನಿತು ದೂರದಲ್ಲಿ ನಿಂತು ಕೆಲಸಕಾರ್ಯಗಳನ್ನು ನಿರ್ದೇಶಿಸುತ್ತಿರುವ ಒಬ್ಬ ಮುದುಕ... ಸ್ವಾಮಿ!
ಸರಿಕಾಣಲಿಲ್ಲ.
ನಿಂತು ನಿರ್ದೇಶಿಸುತ್ತಿರುವ ಮುದುಕಸ್ವಾಮಿಯ ಬಳಿಯೇ ಇನ್ನೊಂದು ಕಾಷ್ಟದ ಸ್ಕೆಚ್ ಹಾಕಿದೆ.. ಇವರೂ ಹೋಗಲು ತಯಾರಾಗಿದ್ದಾರೆ ಎಂದು ಸೂಚ್ಯವಾಗಿ ಹೇಳುವಂತೆ... ಅದೂ ಸರಿ ಕಾಣಲಿಲ್ಲ.
ನಿಂತಿದ್ದ ಮುದುಕಸ್ವಾಮಿಯನ್ನು ಅಳಿಸಿ ಸುಡಲು ಸಿದ್ಧವಾಗಿದ್ದ ಕಾಷ್ಟದ ಬಳಿಯೇ ಇನ್ನೊಂದು ಕಾಷ್ಟದ ಸ್ಕೆಚ್ ಬರೆದು ಅದರ ಮೇಲೆ ಮುದುಕಸ್ವಾಮಿ ಕುಳಿತಿರುವ ಹಾಗೆ ಚಿತ್ರಿಸಿದೆ... ಆ ಕಾಷ್ಟವನ್ನೂ ಹೊತ್ತು ಬೆಂಕಿಗಿಡಲು ತಯಾರಾದ ಮಂದಿಯನ್ನೂ ಚಿತ್ರಿಸಿದೆ... ಅದೂ ಸರಿ ಕಾಣಲಿಲ್ಲ.
"ನನಗೆ ವಯಸ್ಸು ಎಪ್ಪತ್ತೆಂಟಾಯಿತು. ಕಾಷ್ಟದ ಮೇಲೆ ಆಗಲೇ ಏರಿ ಕುಳಿತಾಗಿದೆ. ಇನ್ನು ಅಲ್ಲೇ ಮಲಗಬೇಕು ಅಷ್ಟೆ. ಆದರೆ ಕೈಕಾಲು ಗಟ್ಟಿ ಇರುವಷ್ಟು ದಿನ ಯಾರಿಗೂ ಬೇಡವಾದ ಈ ಶವ ಸುಡುವ ಕೆಲಸಕಾರ್ಯಗಳ ಉಸ್ತುವಾರಿ ಮಾಡುತ್ತಾ ಇರೋಣ ಅಂತ..." ಮಾಸ್ತರರ ಮನೆಯಲ್ಲಿ ಸಿಕ್ಕಿದಾಗ ಸ್ವಾಮಿ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದ್ದವು. "ಆದಷ್ಟು ಬೇಗ ಚಿತ್ರ ಬರೆದು ಕಳುಹಿಸಿ. ಮುಂದಿನ ತಿಂಗಳು ಇಲ್ಲೊಂದು ಕಲಾಪ್ರದರ್ಶನವುಂಟು. ಅಲ್ಲಿ ಮಾತಾಡುತ್ತೇನೆ, ಪ್ರದರ್ಶನಕ್ಕಿಟ್ಟು ಯಾರು ಅತೀ ಹೆಚ್ಚಿನ ಬೆಲೆ ಕೊಡುತ್ತಾರೋ ಅವರಿಗೆ ಕೊಟ್ಟು ಬಿಡೋಣ" ಎಂದಿದ್ದರಾತ.
ಕುಳಿತಿರುವ ಮುದುಕಸ್ವಾಮಿಯನ್ನು ಒರಸಿ ತೆಗೆದು ಮಲಗಿರುವ ಭಂಗಿಯ ಸ್ಕೆಚ್ ಹಾಕಿದೆ. ಮಲಗಿದ್ದಲ್ಲಿಂದಲೇ ಕೈ ಸ್ವಲ್ಪ ಎತ್ತಿ ಏನನ್ನೋ ನಿರ್ದೇಶಿಸುತ್ತಿರುವಂತೆ ತೋರುಬೆರಳು ಮುಂದಕ್ಕೆ ಮಾಡಿದ ಭಂಗಿ ಚಿತ್ರಿಸಿದೆ.
ಸರಿ ಸುಮಾರು ನೆಮ್ಮದಿಯಾಯಿತು. ಊರ ಮಂದಿಯನ್ನೆಲ್ಲ ಕಾಷ್ಟವೇರಿಸಲು ನೆರವಾಗುವ ಬಹುತೇಕ ತಾನೂ ಕಾಷ್ಟ ಏರಿದ ಸುಡಲು ಸಜ್ಜಾಗಿರುವ ಮುದುಕ... ನನ್ನ ಕಣ್ಮುಂದೆ ಸ್ವಾಮಿ ಬಂದು ಹೋದರು. ಒಮ್ಮೆ ಅವರಿಗೆ ಒಪ್ಪಿಗೆಯಾ ಎಂದು ಕೇಳಿ ಮುಂದುವರೆಯೋಣ ಎನ್ನುತ್ತಿತ್ತು ಮನಸ್ಸು. "ಬೇಗ ಮುಗಿಸಿ ಕಳುಹಿಸಿಕೊಡಿ" ಎಂದದ್ದು ನೆನಪಾಯಿತು. ತನ್ನನ್ನು ಕಾಷ್ಟದಲ್ಲಿ ಕಂಡುಕೊಂಡ ಮುದುಕ ಅದೇ ಚಿತ್ರವನ್ನು ಉತ್ತಮ ಬೆಲೆಗೆ ಮಾರಿಸಿಕೊಡುವಷ್ಟು ಶಕ್ತ!
ಮುಂದಿನ ಹಲವು ದಿನಗಳಲ್ಲಿ ಸಂಜೆ ಬಂದು ಅದೇ ಕೆಲಸ. ಸ್ಮಶಾನ, ಚಿತಾಗಾರ, ಕಾಷ್ಟ, ಸಪ್ಪೆಮುಖದ ಜನರು.. ಹೀಗೆ ಒಂದಾದ ಮೇಲೆ ಒಂದು ಪ್ರದೇಶವನ್ನು ಬಣ್ಣ ತುಂಬಿಸಿ ಮುಗಿಸುತ್ತಾ ಬಂದೆ. ಮುದುಕಸ್ವಾಮಿ ಮತ್ತು ಆತನ ಕಾಷ್ಟ ಮಾತ್ರ ಬಾಕಿ ಉಳಿಯಿತು.
ಮರುದಿನ ಸ್ವಾಮಿ ಫೋನ್ ಮಾಡಿ "ಇಲ್ಲೊಬ್ಬರು ಹೋಟೆಲ್ ಉದ್ಯಮಿ ಇದ್ದಾರೆ. ಯೋಜನೆ ಅವರಿಗೆ ತಿಳಿಸಿದೆ. ಅವರು ನಿಮ್ಮ ಬಗ್ಗೆ ಕೇಳಿದ್ದಾರೆ, ಚಿತ್ರ ಕೊಂಡುಕೊಳ್ಳುವುದಕ್ಕೆ ಅವರು ಒಪ್ಪಿದ್ದಾರೆ. ಆದಷ್ಟು ಬೇಗ ಕಳುಹಿಸಿಕೊಡಿ. ಎರಡನೇ ಚಿತಾಗಾರದ ಕೆಲಸ ಆದಷ್ಟು ಬೇಗ ಆರಂಭಿಸಬೇಕೆಂದಿದ್ದೇನೆ. ಮಳೆಗಾಲದ ಮೊದಲು ಮುಗಿಸದಿದ್ದರೆ ಕಷ್ಟ. ಮಳೆಗಾಲದ ನಂತರವೂ ಕೆಲಸ ಮಾಡಿಸಬಹುದು, ಕಷ್ಟ ಅಂದರೆ ಆಷಾಢದ ಚಳಿಗೆ ಈ ಬಾರಿ ನಾನು ಮೇಲೆ ಬೀಳುತ್ತೇನೋ ಇಲ್ಲವೋ. ನಾನು ಬಿದ್ದುಹೋಗುವ ಮೊದಲು ಚಿತಾಗಾರದಲ್ಲಿ ಎರಡನೇ ಚಿತೆ ರೆಡಿಯಾಗಬೇಕು. ನಾನೇ ಅದರ ಮೊದಲ ಗಿರಾಕಿಯಾದರೂ ಪರವಾ ಇಲ್ಲ ಅಲ್ವಾ?.. ಏನನ್ನುತ್ತೀರಿ" ಎನ್ನುತ್ತಾ ನಕ್ಕಿದ್ದರಾತ.
ಎರಡನೇ ಚಿತಾಗಾರ ಸ್ವಾಮಿಯ ಹಿರಿಯಾಸೆ, ಅದನ್ನು ಆದಷ್ಟು ಬೇಗ ಮುಗಿಸಿಕೊಡಬೇಕು ಎಂದು ಚಿತ್ರದ ಎದುರು ಬಂದು ಕುಳಿತೆ. ಚಿತ್ರದಲ್ಲಿದ್ದ ಮುದುಕಸ್ವಾಮಿ ನಕ್ಕ ಹಾಗಾಯಿತು. ಕಣ್ಣುಜ್ಜಿಕೊಂಡೆ. ಕಾಷ್ಟ ಚಲಿಸಿದ ಹಾಗಾಯಿತು. ಎದ್ದು ಹೋಗಿ ಗಾಳಿ ಬರದ ಹಾಗೆ ಕಿಟಿಕಿ ಬಾಗಿಲು ಮುಚ್ಚಿ ಬಂದೆ. ಮುದುಕಸ್ವಾಮಿ ಕೈ ಎತ್ತಿ ಆಚೀಚೆ ಬೆಟ್ಟು ಮಾಡುತ್ತಿದ್ದಂತಾಯಿತು! ಕಣ್ಣುಮುಚ್ಚಿಕೊಂಡೆ. "ಸಾಯದವರನ್ನು ಕಾಷ್ಟಕ್ಕೇರಿಸುತ್ತಿದ್ದೀಯಾ?" ಎಂದು ಮಾಸ್ತರರು ಹೇಳಿದ ಹಾಗಾಯಿತು!
ಚಿತ್ರ ಮುಗಿಸಲು ಸಾಧ್ಯವಾಗದೆ ಎದ್ದು ಬಂದೆ.
ಸ್ವಾಮಿ ಇನ್ನೊಮ್ಮೆ ಫೋನ್ ಮಾಡಿದ್ದರು. "ನನ್ನ ಚಿತ್ರ ಎಲ್ಲಿವರೆಗೆ ಬಂತು?" ಎಂದರು. "ಮುಕ್ಕಾಲು ಪಾಲು ಮುಗಿದಿದೆ, ಆದರೆ ಇತ್ತೀಚೆಗೆ ಯಾಕೋ ಏನೋ ಏಕಾಗ್ರತೆ ಸಿಗುತ್ತಿಲ್ಲ, ಆದರೂ ಪ್ರಯತ್ನ ಮಾಡಿ ಮುಗಿಸುತ್ತೇನೆ" ಎಂದೆ.
ಮರುದಿನ ಪುನ: ಪ್ರಯತ್ನಿಸಿದೆ. ಹಠ ಹಿಡಿದಿತ್ತು. ಏಕಾಗ್ರತೆ ಭಂಗ ಬರುತ್ತಿದ್ದುದು ಈ ಮುದುಕಸ್ವಾಮಿಯ ಚಿತ್ರದ ಬಳಿಗೆ ಬಂದಾಗ ಮಾತ್ರ. ಸ್ವಾಮಿಯ ಪ್ರತಿಯೊಂದು ಮಾತು, ನಗೆ, ನಡೆ, ನನ್ನ ಕಣ್ಣೆದುರಿಗೆ ಬಂದ ಹಾಗೆ ಭಾಸವಾದಾಗಲೆಲ್ಲ ಏಕಾಗ್ರತೆಗೆ ಭಂಗ ಬರುತ್ತಿತ್ತು. ನಾನೇ ಬಿಡಿಸಿದ ಚಿತ್ರ ನನಗೇ ಈ ರೀತಿ ಭ್ರಮೆ ಹುಟ್ಟಿಸುವುದೆಂದರೆ! ಇದು ಮಾಮೂಲಿ ಚಿತ್ರ, ಮುಗಿಸಿಕೊಟ್ಟರೆ ಹಣ ಸಿಗುತ್ತೆ, ಸ್ವಾಮಿಯ ಆಶೆ ನೆರವೇರುತ್ತೆ, ಸಮಾಜಕ್ಕಾಗಿ ಒಂದು ಒಳ್ಳೆಯ ಕೆಲಸ ಮಾಡಿದುದರಲ್ಲಿ ನನಗೂ ಒಂದು ಪಾಲು ಬರುತ್ತೆ. ಆದ್ದರಿಂದ ಇದನ್ನು ಮುಗಿಸಬೇಕೆಂದು ಹಠ ಹಿಡಿದು ಚಿತ್ರದ ಮುಂದೆ ಹೋಗಿ ಕುಳಿತೆ. ಬಣ್ಣದ ಬ್ರಶ್ ಹತ್ತಿರ ತರುತ್ತಿದ್ದಂತೆ ಮುದುಕಸ್ವಾಮಿ ಚಲಿಸುತ್ತಿರುವಂತೆ ಭಾಸವಾಗಿ ಈ ಚಿತ್ರ ನನಗೆ ಮುಗಿಸಲಸಾಧ್ಯ ಎಂಬ ಭಾವನೆ ಬಂತು. ತದೇಕಚಿತ್ತದಿಂದ ಮುದುಕಸ್ವಾಮಿಯ ಕಣ್ಣುಗಳನ್ನೇ ನೋಡಿದೆ. ಮಾಸ್ತರರ ಮನೆಯಲ್ಲಿ ಅವರು ಮನೆಹಿರಿಯರನ್ನು ಹುಡುಕುತ್ತಿದ್ದಾಗ ಮೊದಲಾಗಿ ನೋಡಿದ್ದ ಅದೇ ಚೈತನ್ಯಪೂರ್ಣ ಕಣ್ಣುಗಳು. ಅದೇ ಸಾವಿಲ್ಲದ ಕಣ್ಣುಗಳು! ಚಲಿಸುವ ಕೈ! ಅಲುಗುವ ತುಟಿ! ಹೊರಡುವ ಧ್ವನಿ! ಇವೆಲ್ಲ ಹೇಗೆ ಚಿತ್ರವಾಗಲು ಸಾಧ್ಯ?
ಸ್ವಾಮಿ ಇನ್ನೂ ಜೀವಂತರಾಗಿದ್ದಾರೆ. ಅವರನ್ನು ಹೇಗೆ ಕಾಷ್ಟದ ಮೇಲೆ ಚಿತ್ರಿಸಲಿ? ಈ ಚಿತ್ರ ಮುಗಿಸಲು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎನಿಸಿತು ನನಗೆ.
ಕಲಾ ಪ್ರದರ್ಶನಕ್ಕೆ ಎರಡು ದಿನ ಬಾಕಿ ಉಳಿದಿರುವಾಗ ಆತ ಪುನ: ಫೋನ್ ಮಾಡಿದರು. "ಚಿತ್ರ ಇನ್ನೂ ಮುಗಿದಿಲ್ಲ" ಎಂದೆ. ಆತ "ಕಲಾ ಪ್ರದರ್ಶನಕ್ಕೆ ಮುಂಬೈಯಿಂದ ಒಬ್ಬರು ಬರುವವರಿದ್ದಾರೆ, ಅವರ ಕೈಯಲ್ಲಿ ಆ ಅಪೂರ್ಣ ಚಿತ್ರ ಕಳುಹಿಸಿ, ಪ್ರದರ್ಶನದಲ್ಲಿಟ್ಟು ಕೊನೆಯದಿನ ಹೊಟೆಲ್ ಉದ್ಯಮಿಗೆ ಮಾರಿ ಹಣ ಪಡೆಯುತ್ತೇವೆ. ಮುಂದೆ ಯಾವಾಗಲಾದರೂ ಈ ಕಡೆಗೆ ನೀವು ಬಂದಾಗ ಪೂರ್ಣಗೊಳಿಸಿಕೊಡಿ" ಎಂದರು.
ಮನಸ್ಸಿಲ್ಲದ ಮನಸ್ಸಿನಿಂದ ಆ ಅಪೂರ್ಣ ಚಿತ್ರವನ್ನು ಕಳುಹಿಸಿಕೊಟ್ಟಿದ್ದೆ.
ಕಲಾ ಪ್ರದರ್ಶನದ ಬಗೆಗೆ, ಕಟ್ಟುತ್ತಿರುವ ಚಿತೆಯ ಪ್ರಗತಿಯ ಬಗೆಗೆ ಫೋನ್ ಮಾಡುತ್ತಿದ್ದರು ಸ್ವಾಮಿ. "ಈಗ ಇಲ್ಲಿಯೂ ನಿಮ್ಮಂತಹ ಕಲಾವಿದರ ಚಿತ್ರಗಳಿಗೆ ಭಾರೀ ಬೇಡಿಕೆ. ಬರೆದದ್ದು ಯಾವುದಾದರೂ ಇದ್ದರೆ ಕಳುಹಿಸಿಕೊಡಿ, ಮಾರಿಸಿ ಕೊಡುತ್ತೇನೆ. ಕಮಿಶನ್ ಕೊಡಬೇಕು" ಅಂತಲೂ ಒಂದು ಬಾರಿ ಹೇಳಿ ನಕ್ಕಿದ್ದರು.
ಸ್ವಾಮಿಯ ಅತ್ಯಂತ ನೆಚ್ಚಿನ ದಿನ ಬಂದಿತ್ತು. "ಬರುವ ಶನಿವಾರ ಎರಡನೇ ಚಿತೆಯ ಉದ್ಘಾಟನೆ. ನಿಮ್ಮ ನಾಲ್ಕಡಿ ಬೈ ಮೂರಡಿ ಚಿತ್ರದ ಪ್ರಭಾವ. ನಾನು ನಿಮಿತ್ತ ಮಾತ್ರ. ಹೊಟೆಲ್ ಉದ್ಯಮಿ ಬರುತ್ತಾರೆ. ನೀವೂ ಬನ್ನಿ" ಎಂದು ಫೋನ್ ಮಾಡಿದ್ದರು. "ಈಗ ರಜೆಯಿಲ್ಲ, ಮುಂದಿನ ರಜೆಯಲ್ಲಿ ಬರುತ್ತೇನೆ" ಅಂದಿದ್ದೆ.
ಇದ್ದಕ್ಕಿದ್ದಂತೆ ಅವರ ಫೋನ್ ಬರುವುದು ನಿಂತು ಹೋಯಿತು. ಕನಿಷ್ಟ ಪಕ್ಷ ಕಾರ್ಯಕ್ರಮ ಹೇಗೆ ನಡೆಯಿತು ಅಂತ ಫೋನ್ ಮಾಡಿಯೇ ಮಾಡುತ್ತಿದ್ದರು. ಅವರು ಕೊಟ್ಟಿದ್ದ ಮೊಬೈಲ್ ನಂಬ್ರ ಸ್ವಿಚ್ ಆಫ್ ಮೆಸೇಜು ಕೊಡುತ್ತಿತ್ತು. ನನಗೆ ಚಡಪಡಿಕೆ. ಅದು ಅವರ ಅಂತಿಮ ಆಸೆಯೇ ಆಗಿತ್ತೆ?... ಅವರ ಬಗ್ಗೆ ಕೇಳೋಣ ಎಂದರೆ ಅವರ ಪರಿಚಯದ ಯಾರೊಬ್ಬರ ಪರಿಚಯ ನನಗಿಲ್ಲ!
***
ರಜೆಯಲ್ಲಿ ಪುನಃ ಊರಿಗೆ ಬಂದಿದ್ದೆ. ಸ್ವಾಮಿ ಹೇಳಿದ್ದ ಹೊಟೆಲ್ ಹುಡುಕುವುದು ಕಷ್ಟವಾಗಲಿಲ್ಲ. ನನ್ನ ಪರಿಚಯ, ವಿವರ ಹೇಳುತ್ತಲೇ ಧಣಿಗೆ ಕರೆಹೋಯಿತು. ಅವರೇ ಖುದ್ದಾಗಿ ಬಂದು ನನ್ನನ್ನು ಅವರ ಕೊಠಡಿಗೆ ಕರೆದುಕೊಂಡು ಹೋದರು. ತನ್ನ ಕಪಾಟು ತೆರೆದು ಕಾಗದದ ಹೊದಿಕೆಯಲ್ಲಿ ಜೋಪಾನವಾಗಿಟ್ಟಿದ್ದ ಪೈಂಟಿಂಗ್ ತೆಗೆದರಾತ. "ಇದು ಅಪೂರ್ಣ ಪೈಂಟಿಂಗ್. ಇದರ ಕಲಾವಿದ ಇನ್ನೊಮ್ಮೆ ಬಂದು ಇದನ್ನು ಪೂರ್ತಿಗೊಳಿಸಿ ಹೋಗುತ್ತಾರೆ" ಅಂದಿದ್ದರು. ಅವರು ತೀರಿಹೋಗಿ ಒಂದು ವರ್ಷವಾಯಿತು. ನೀವು ಬರುವುದಿಲ್ಲವೆಂದೇ ತಿಳಿದಿದ್ದೆ. ಆದರೂ ನೀವು ಬಂದದ್ದು ನೋಡಿದರೆ ಆ ವ್ಯಕ್ತಿಯ ಮಾತಿಗೆ ಏನು ಬೆಲೆಯಿತ್ತು ಎಂಬುದು ತಿಳಿಯುತ್ತೆ. ಇಲ್ಲೇ ಕುರ್ಚಿ ಹಾಕಿ ಕೊಡಲಾ?" ಎಂದರಾತ. ತಲೆಯಲ್ಲಾಡಿಸಿದೆ.
ಅಪೂರ್ಣ ಚಿತ್ರವನ್ನು ತೆಗೆದು ಬೋರ್ಡಿನ ಮೇಲೆ ಇರಿಸಿದೆ. ನಾಲ್ಕೂ ಮೂಲೆಯಲ್ಲಿ ಪಿನ್ ಸಿಕ್ಕಿಸಿದೆ. ನನ್ನ ಬಣ್ಣದ ಟ್ಯೂಬುಗಳನ್ನು ತೆಗೆದಿಟ್ಟು ಸಿದ್ಧ ಪಡಿಸಿಕೊಂಡೆ. ಇನ್ನೇನು ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ಮುದುಕ ಕಣ್ಸನ್ನೆ ಮಾಡಿದ ಹಾಗಾಯಿತು. ಅಷ್ಟರಲ್ಲಿ ಹೋಟೆಲ್ ಯಜಮಾನರು ಬಂದರು. ಸಣ್ಣ ಒಂದು ಲಕೋಟೆ ಕೈಗೆ ನೀಡುತ್ತ "ಚಿತ್ರ ಪೂರ್ಣಗೊಳಿಸಲು ನೀವಿಲ್ಲಿ ಬರುವಾಗ ನಿಮ್ಮ ಕೈಯಲ್ಲಿ ಕೊಡಲು ಹೇಳಿದ್ದರು" ಅಂದರು.
ಲಕೋಟೆ ಅಂಚನ್ನು ಹರಿದು ಒಳಗಿದ್ದ ಪತ್ರ ಕೈಗೆತ್ತಿಕೊಂಡೆ.
"ಚಿತ್ರ ಮುಗಿಸಲು ನೀವು ಬಂದೇ ಬರುತ್ತೀರಿ ಅನ್ನುವ ನಂಬುಗೆ ನನ್ನದು. ನನ್ನ ಚಿತ್ರ ನನಗೆ ತುಂಬ ಹಿಡಿಸಿತು. ನನ್ನ ದೇಹಕ್ಕೆ ಬಣ್ಣ ಹಾಕಲಾಗಲಿಲ್ಲ ಎಂದು ತಿಳಿಸಿ ಚಿತ್ರ ಅಪೂರ್ಣ ಎಂದಿರುವ ನಿಮ್ಮ ಮಾತು ಸರ್ವಥಾ ಸರಿಯಲ್ಲ. ನನ್ನದು ರಂಗಿಲ್ಲದ ಬಾಳುವೆಯೇ. ಹೆಣಗಳ ನಡುವಿನ ಬದುಕಿನಲ್ಲಿ ರಂಗೆಲ್ಲಿಂದ ಸ್ವಾಮಿ? ದಿಕ್ಕಿಲ್ಲದ ನನ್ನನ್ನು ಗೌರವ ಪೂರ್ವಕ ಕಾಷ್ಟಕ್ಕೇರಿಸಿದ್ದೀರಿ. ನನ್ನ ಕಣ್ಣಿನಲ್ಲಿ ಅದೇನು ಶಕ್ತಿ ತುಂಬಿಸಿದ್ದೀರಿ! ನನ್ನ ಮಟ್ಟಿಗೆ ಇದು ಹೀಗೆಯೇ ಪರಿಪೂರ್ಣ ಚಿತ್ರ. ಯಜಮಾನರು ಹಠ ಹಿಡಿದರೆ ಬಣ್ಣ ಹಾಕಿಕೊಡಿ. ಹಣ ನೀಡಿ ನನ್ನನ್ನು ಹೆಣಗಳ ಜೊತೆ ಅಮರರನ್ನಾಗಿಸಿದ ಅವರು ಮತ್ತು ನನ್ನನ್ನು ಕಾಷ್ಟದ ಮೇಲೆ ಜೀವಂತವಾಗಿರಿಸಿದ ನೀವು ಅಭಿನಂದನಾರ್ಹರು. ಧನ್ಯವಾದಗಳು"
ಪತ್ರವನ್ನು ಯಜಮಾನರ ಕೈಗಿತ್ತೆ. ಓದಿ ಅವರ ಕಣ್ಣು ತೇವವಾಯಿತು. "ಅವರ ಇಷ್ಟದಂತೇ ಆಗಲಿ, ಅದಕ್ಕೊಂದು ನಿಮ್ಮ ಅಂಕಿತ ಹಾಕಿಕೊಡಿ, ಸಾಕು" ಅಂದರಾತ.
ಬ್ರಶ್ ಹಿಡಿದು ಚಿಕ್ಕ ಅಂಕಿತ ಬರೆಯಲು ಪ್ರಶಸ್ತ ಜಾಗ ಹುಡುಕುತ್ತಿದ್ದ ನನಗೆ ಮುದುಕಸ್ವಾಮಿಯ ಕಾಲುಗಳ ಬಳಿಯೇ ಸೂಕ್ತ ಅನ್ನಿಸಿತ್ತು.
(ಈ ಕತೆ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ)









ಓದುತ್ತಾ
ಓದುತ್ತಾ ಹೋದ೦ತೆ ಪಾತ್ರಗಳು ಮಾತ್ರವಲ್ಲ ಕಥಾನಾಯಕ ಬರೆದ ಅಪೂರ್ವ ಚಿತ್ರ ಕೂಡ ಕಣ್ಣ ಮು೦ದೆ ಬ೦ದು ನಿ೦ತ೦ತಾಯಿತು. ಅಪೂರ್ಣವಾಗಿದ್ದುಕೊ೦ಡೂ ಪರಿಪೂರ್ಣವಾದ ಚಿತ್ರದ೦ತೆಯೇ ನಮ್ಮೆಲ್ಲರ ಬದುಕೂ ಕೂಡಾ. ನಾವು ಬಯಸಿದ ರ೦ಗನ್ನು ತು೦ಬಲಾಗದಿದ್ದರೂ, ಸಾಧ್ಯವಿದ್ದಷ್ಟು ಸಾರ್ಥಕ ರೀತಿಯಲ್ಲಿ ಬದುಕಿದಲ್ಲಿ ಜೀವನದ ಯಾತ್ರೆಗೊ೦ದು ಅರ್ಥ ಸಿಕ್ಕೀತು. ಕಪ್ಪು, ಬಿಳುಪುಗಳೂ ಬದುಕಿನ ಸಹಜತೆಯನ್ನು ಹೇಳುವ ರ೦ಗುಗಳಲ್ಲವೆ? ನಾಗತಿಹಳ್ಳಿಯವರ ಕಥೆಗಳ೦ತೆಯೇ ಇದೂ ಮನಸ್ಸನ್ನು ಕಲಕುವ, ಬದುಕನ್ನು ಪ್ರೀತಿಸುವ೦ತೆ ಮಾಡುವ ಸು೦ದರ ಕಥೆ.
ಮೃಣಾಲಿನಿ ಉದಯ ಕುಮಾರ್
ನಮಸ್ಕಾರ
ನಮಸ್ಕಾರ ಗೋಪಿನಾಥ್ ಅವರಿಗೆ ಮನ ಮಿಡಿವ ಕಥೆ. ಕಣ್ ತುಂಬಿ ಬಂದಿತು. ವ್ಯಕ್ತಿ ಚಿತ್ರಣ, ಮನೋಭಾವ, ಸತ್ಯತೆ, ಪರೋಪಕಾರ, ಸಾವಿನ ಮನೆಯ ಪರಿಸರಗಳನ್ನೂ ಬಹಳ ಸೊಗಸಾಗಿ ನಿರೂಪಿಸಿದ್ದೀರಿ. ವಂದನೆಗಳು