ಹಿಂದೆ ಹೊರಟವರು
ಗೋಪಿನಾಥ್ ರಾವ್

-ಗೋಪೀನಾಥ ರಾವ್

ಹಾಡು ಹೊಳೆಯ ಹಾಗೆ ಹರಿದಾಗ
ಕಲ್ಲು ಮಣ್ಣು ಕೆಂಪು ಬಣ್ಣ
ಕಸಕಡ್ಡಿ ಎಲ್ಲೆಂದರಲ್ಲಿ ಅಡ್ಡ ಸಿಕ್ಕಿ
ಸಲೀಸು ಸಂಗೀತ ಕೇಳಿದ ಮನಸಿಗೆ
ಹಿಂಸೆಯಾಗುತ್ತದೆ. ಅದು ತಪ್ಪೇ?
ಮಟ್ಟ ಹಾಕಿ ಕೈಯೂರಿ ಕುಳಿತು
ಹೊಟ್ಟೆ ಬಿರಿಯುವ ತನಕ ಸಾವಧಾನದ ಊಟ
ಮಾಡಿದ ಮಂದಿಗೆ
ಒಪ್ಪ ಓಗರವಾಗಿ ಜೋಡಿಸಿದ ಬುಫೆ
ಇನ್ನೊಂದಿರಲಿ ಬಿಡಿ, ದಾರಿ ಖರ್ಚಿಗೆ
ಅನ್ನುವ ಒತ್ತಾಯ ಮಾಡುವವರಿಲ್ಲದೆ ಸಪ್ಪೆ
ತಪ್ಪೇನಿದೆ ಅದರಲ್ಲಿ?

ಮಾಡು ಹೆಂಚಿನ ಮನೆ ಮಣ್ಣಿನ ಗೋಡೆ
ತಂಪು ಬೆಳಿಗ್ಗೆ ಊದುಬತ್ತಿ ಕಂಪು
ಸಂಜೆ ಹಾಕಿದ ಲಬಾನು ಧೂಪ
ದೇಹಕ್ಕೆ ಒಳ್ಳೆಯದು ಎನ್ನುವ ಭೂಪ
ಕೂಪ ಮಂಡೂಕ ಎನ್ನುವ ಹಣೆಪಟ್ಟಿ
ಗಟ್ಟಿ ಕಟ್ಟಿದ ಲಂಗೋಟಿ ಪಾಪ
ಬೀಜ ಬೆಳೆದು ಹೈರಾಣಾಗಿ
ಇದು ನಾಗನ ಶಾಪ ಎಂದು
ಎಂಜಲೆಲೆ ಮೇಲೆ ಸರ್ಕಸ್ಸು ಮಾಡಿದರೆ
ತಪ್ಪೇನಿದೆ ಅದರಲ್ಲಿ?

ಕಾಡು ಕಡಿದು ಬರಡು
ಮಾಡಿ ನಾಳೆಗೆ ಬಿಸಿಲು
ಮಳೆಗಾಳಿ ಚಳಿ ವ್ಯತ್ಯಾಸವಾಗಿ
ಗೂಡಿಲ್ಲದ ಪ್ರಾಣಿ ಪಕ್ಷಿ ಸಂಕುಲ
ಕೇಡು ನಮಗೆ ನಮ್ಮ ಮಕ್ಕಳಿಗೆ ಮಿಕ್ಕುಳಿದವರಿಗೆ
ಎನ್ನುವ ಜನರ ಮುಂದಿನ ಜನಾಂಗ
ಹಾಡು ಹಗಲಲ್ಲೇ ಹಾದಿ ಬೀದಿಗಳಲ್ಲಿ ಹೊಡೆದಾಡುವ
ರಾಜರಿಲ್ಲದ ನಾಡಿನ ದುರ್ಗಂಧ
ವಲಸೆ ಬಂದವರ ಅಟ್ಟಹಾಸ ಮೆಟ್ಟು ಚಪ್ಪಲಿ ಹಾರ
ಗುಟ್ಟಲ್ಲಿ ವ್ಯವಹಾರ ಅಣ್ಣ ತಮ್ಮರ ಜಗಳ
ಕಂಡು ರೋಸಿಹೊಗಿ ಮುಗಿಯಲಿ ಒಮ್ಮೆ ಹಾಳಾದ
ಮನುಜರಿಲ್ಲದ ಮನುಕುಲ ಎಂದರೆ
ತಪ್ಪೇನಿದೆ ಅದರಲ್ಲಿ?

Syndicate

Syndicate content