ವ್ಯಾಸರಾಯ ಬಲ್ಲಾಳರಿಗೆ ನಮ್ಮ ನಮನ
ballal.jpg

- ಗೋಪೀನಾಥ ರಾವ್

ಕಳೆದ ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆಯವರನ್ನು ಟೆಲಿಫೋನಿನಲ್ಲಿ ಮಾತಾಡಿಸಿದ್ದೆ. 'ನಾನಿಂದು ವ್ಯಾಸರಾಯ ಬಲ್ಲಾಳರಲ್ಲಿಗೆ ಹೋಗುವವನಿದ್ದೇನೆ. ಸಮಯಾವಕಾಶ ಇದ್ದರೆ ಬನ್ನಿ ಒಟ್ಟಿಗೆ ಹೋಗೋಣ' ಅಂದರು. 'ಸರಿ, ಈಗ ಬಂದೆ' ಎಂದು ಅವರೊಂದಿಗೆ ಹೊರಟೆ. ದಾರಿಯಲ್ಲಿ ಶ್ರೀ ಮನೋಹರ್ ಕೂಡ ನಮ್ಮ ಜೊತೆಯಾದರು. ಮೂವರೂ ಸೇರಿ ವ್ಯಾಸರಾಯ ಬಲ್ಲಾಳರ ಮನೆಗೆ ಹೋದೆವು.
ನಗುಮೊಗದ ಬಲ್ಲಾಳರು ನಮ್ಮನ್ನೆದುರುಗೊಂಡರು. 'ಒಂದಲ್ಲ ಒಂದೂರಿನಲ್ಲಿ' ತ್ರೈಮಾಸಿಕ ನಿಯತಕಾಲಿಕದ ಸಿದ್ಧತೆಗಾಗಿ ಕೊಡ್ಲೆಕೆರೆ ಶ್ರೀ ಬಲ್ಲಾಳರ ಮಾರ್ಗದರ್ಶನಕ್ಕಾಗಿ ಬಂದಿದ್ದರು. ನನ್ನನ್ನು ಪರಿಚಯಿಸಿಕೊಡುತ್ತಾ 'ಇವರು ದುಬಾಯಿಯಿಂದ ಕನ್ನಡಧ್ವನಿ ಅಂತರ್ಜಾಲ ತಾಣ ನಡೆಸುತ್ತಿದ್ದಾರೆ' ಎಂದು ಹೇಳಿದರು. 'ಊರು ಬಿಟ್ಟು ಹೊರಗಿದ್ದಾಗ ಕನ್ನಡದಲ್ಲಿ ಆಸಕ್ತಿ ಇರುವವರು ಜಾಗೃತರಾಗುತ್ತಾರೆ. ಅಮೆರಿಕಾದಲ್ಲಿ ನೋಡಿ, ಮುಂಬೈಯಲ್ಲಿ ನೋಡಿ ಅಲ್ಲಿ ನಡೆಯುವಷ್ಟು ಕನ್ನಡ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯುತ್ತಿಲ್ಲ' ಅಂದಿದ್ದರು ಬಲ್ಲಾಳರು.

ಮಾತು ಅವರ ಮುಂದಿನ ಕೃತಿಯ ಕಡೆ ಹೊರಳಿತ್ತು. ಇಂದಿರಾಗಾಂಧಿ ಅಸಾಮಾನ್ಯ ಮಹಿಳೆ. ಅವರ ವ್ಯಕ್ತಿತ್ವವನ್ನು ಹೋಲುವ ಪಾತ್ರ ಚಿತ್ರಣದೊಂದಿಗೆ ಒಂದು ಕಾದಂಬರಿ ಬರೆಯಬೇಕು ಎನ್ನುವ ಆಲೋಚನೆ ಇದೆ, ಆದರೆ ಆರೋಗ್ಯದ ಸಹಕಾರ ಸಿಗುತ್ತಿಲ್ಲ ಎಂದಿದ್ದರು. "ಬರೆದಷ್ಟನ್ನು ಕೊಡಿ, ಧಾರಾವಾಹಿಯಾಗಿ ಪ್ರಕಟಿಸೋಣ" ಎನ್ನುತ್ತ ಮಹಾಬಲಮೂರ್ತಿ ವಿನಂತಿಸಿದಾಗ "ಬರೆಯಲಾಗುತ್ತಿಲ್ಲ" ಎಂದಿದ್ದರು ಬಲ್ಲಾಳರು. "ಬರೆಯುವುದು ಬಿಡಿ, ಮೊನ್ನೆ ಒಬ್ಬರು ತಮ್ಮ ಪುಸ್ತಕ ಓದಿ ಮುನ್ನುಡಿ ಬರೆದುಕೊಡಿ ಅಂದಿದ್ದರು, ಕುಳಿತು ಓದಲೂ ಆಗುತ್ತಿಲ್ಲ ಎಂದು ಹಿಂದೆ ಕಳುಹಿಸಿದ್ದೇನೆ" ಅಂದಿದ್ದರು ಬಲ್ಲಾಳರು.

ಇತ್ತೀಚೆಗಿನ ಕನ್ನಡ ಸಾಹಿತ್ಯದ ಬಗೆಗೆ ಮಾತನಾಡುತ್ತಿದ್ದಾಗ ಬಲ್ಲಾಳರು ಹೇಳಿದ್ದ ಇನ್ನೊಂದು ಮಾತು ನೆನಪಾಗುತ್ತಿದೆ. "ನವ್ಯ ನವೋದಯದ ನಂತರ ಭರವಸೆ ಹುಟ್ಟಿಸಿದ್ದ ಬಂಡಾಯ ದಲಿತ ಸಾಹಿತ್ಯ ಅಲ್ಲಿಗೇ ನಿಂತಿದೆ. ಬೇರೆ ಹೊಸತೇನೂ ಇನ್ನೂ ಆರಂಭವಾಗಿಲ್ಲ, ಕನ್ನಡ ಸಾಹಿತ್ಯ ಇದೀಗ ನಿಂತು ಹೋದ ಹಾಗೆ ಭಾಸವಾಗುತ್ತಿದೆ"

ಅಂತರ್ಜಾಲದ ಬಗೆಗೆ ಕುತೂಹಲದಿಂದ ಮಾತನಾಡಿ "ಇಂದಿನ ಯುವಕರು ಅಂತರ್ಜಾಲದಲ್ಲಿ ಕನ್ನಡ ಬಳಸಿ ಸಾಹಿತ್ಯವನ್ನು ಬೆಳೆಸಿದರೆ ಓದುಗರು ಉಳಿಯುತ್ತಾರೆ. ಜಾಗತೀಕರಣದ ಈ ವೇಳೆಯಲ್ಲಿ ಪುಸ್ತಕಗಳನ್ನು ಹುಡುಕಿಕೊಂಡು ಹೋಗುವಷ್ಟು ಸಮಯ ಯಾರಿಗೆ ಇದೆ ಹೇಳಿ? ಅಂತರ್ಜಾಲ ಈ ಸಮಸ್ಯೆಯನ್ನು ನಿವಾರಿಸಬಲ್ಲುದು"  ಅಂದಿದ್ದರು. ಜೊತೆಗೆ "ತೇಜಸ್ವಿ ಅಂತರ್ಜಾಲದ ಬಗ್ಗೆ ಬಹಳಷ್ಟು ಭರವಸೆ ಮಾತುಗಳನ್ನಾಡುತ್ತಿದ್ದರು" ಎಂದಿದ್ದರು.

ವ್ಯಾಸರಾಯ ಬಲ್ಲಾಳರ ಹೆಸರು ಆಗ ಉಡುಪಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸೂಚಿಸಲ್ಪಟ್ಟಿತ್ತು. ಅದರ ಬಗೆಗೆ ಕೇಳಿದಾಗ "ನನ್ನ ಹೆಸರೂ ಪರಿಗಣನೆಯಲ್ಲಿದೆ ಎಂದು ಗೊತ್ತು, ಆದರೆ ಅದರಲ್ಲಿ ಇನ್ನೆಷ್ಟು ರಾಜಕೀಯ ನಡೆಯಲಿಕ್ಕಿದೆಯೇನೋ" ಅಂದು ನಕ್ಕಿದ್ದರು. ರಾಜಕೀಯ ನಡೆದು ಅವರ ಸ್ಥಾನ ತಪ್ಪಿಹೋಯಿತು, ಆದರೂ ಮೋಹನ ಆಳ್ವರ ನುಡಿಸಿರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೈ ಮಾಡಿ ಕರೆದಿತ್ತು. ಅಂತೂ ಇಂತೂ ಅವರನ್ನು ಆದರಿಸುವ ಒಂದು ಭಾಗ್ಯವನ್ನಾದರೂ ಡಾ ಮೋಹನ್ ಆಳ್ವ  ಕರಾವಳಿ ಜನತೆಗೆ ದೊರಕಿಸಿದ್ದರು.

ವ್ಯಾಸರಾಯರು ಹುಟ್ಟಿದ ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರೇ ಹಿರಿಯ ಮಗ. ಮೆಟ್ರಿಕ್ ವರೆಗೆ ಶಿಕ್ಷಣ. ಉದ್ಯೋಗ ಅರಸಿ ಮುಂಬೈಗೆ ಹೋಗಿ ದೀರ್ಘಕಾಲ ಅಲ್ಲಿ ಉದ್ಯೋಗ ನಿರತ.

ಕಾದಂಬರಿಗಳು: ಅನುರಕ್ತೆ, ಆಕಾಶಕ್ಕೊಂದು ಕಂದೀಲು, ವಾತ್ಸಲ್ಯಪಥ, ಹೇಮಂತಗಾನ, ಬಂಡಾಯ, ಉತ್ತರಾಯಣ, ಹೆಜ್ಜೆ ಹಾಗೂ ಹೆಜ್ಜೆಗುರುತು. ಇವುಗಳಲ್ಲಿ ಅನುರಕ್ತೆ ಹಾಗೂ ವಾತ್ಸಲ್ಯಪಥ ಚಲನಚಿತ್ರಗಳಾದವು. ಬಂಡಾಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.
ಸಣ್ಣಕಥೆಗಳು: ಬದುಕಿನ ಆದರ್ಶ, ಕಾಡುಮಲ್ಲಿಗೆ, ಸಂಪಿಗೆ ಹೂ, ಮಂಜರಿ, ತ್ರಿಕಾಲ ಇತ್ಯಾದಿ. ಇವುಗಳಲ್ಲಿ ಕಾಡುಮಲ್ಲಿಗೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಪ್ರವಾಸ ಸಾಹಿತ್ಯ: ನಾನೊಬ್ಬ ಭಾರತೀಯ ಪ್ರವಾಸಿ. ೧೯೮೮. ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ವಿಚಾರ ಸಾಹಿತ್ಯ: ಕಟ್ಟುವೆವು ನಾವು, ಸ್ವಾತಂತ್ರ್ಯಕ್ಕೆ ಐವತ್ತು ವರ್ಷ, ಕಲಾವಿದ ಹೆಬ್ಬಾರರ ರೇಖಾ ಲಾವಣ್ಯ ಇತ್ಯಾದಿ.
ನಾಟಕ: ಗಿಳಿಯು ಪಂಜರದೊಳಿಲ್ಲ, ಮುಳ್ಳೆಲ್ಲಿದೆ ಮಂದಾರ.
ವಿಡಂಬನೆ: ಸಂಗ್ರಹ ಭಾರತಾಯಣ
ಜೀವನ ಚರಿತ್ರೆ: ಕುರ್ಶೇದ್ ನಾರಿಮನ್
ಪ್ರಶಸ್ತಿಗಳು: ೧೯೯೬. ಗದ್ಯಭಾಸ್ಕರ ಪ್ರಸಸ್ಥಿ, ಉಡುಪಿ ಪರ್ಯಾಯ ಮಹೋತ್ಸವ. ೨೦೦೦ ಅನಕೃ ಪ್ರಶಸ್ತಿ. ನಿರಂಜನ ಪ್ರಶಸ್ತಿ ಇತ್ಯಾದಿ.
ಆರು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆ ನಡೆಸಿದ ಕನ್ನಡ ಕುಲಪುತ್ರನೋರ್ವ ಕಣ್ಮರೆಯಾಗಿದ್ದಾರೆ. ಕನ್ನಡಧ್ವನಿ ಬಲ್ಲಾಳರ ದಿವ್ಯ ಆತ್ಮಕ್ಕೆ ಸದ್ಗತಿ ಕೋರುತ್ತದೆ.

(ಈ ಲೇಖನದಲ್ಲಿ ಡಾ. ನಾ ಸೋಮೇಶ್ವರರ ಲೇಖನದಿಂದ ಸ್ವಲ್ಪ ಎರವಲು ಪಡೆದಿದ್ದೇನೆ) 

ವ್ಯಾಸರಾಯ

ವ್ಯಾಸರಾಯ ಬಲ್ಲಾಳರ ಅಗಲಿಕೆಯಿ೦ದ ಕನ್ನಡ ಸಾಹಿತ್ಯಲೋಕದ ಹಿರಿಯಣ್ಣನನ್ನು ಕಳೆದುಕೊ೦ಡ೦ತಾಗಿದೆ.  ಮು೦ಬಯಿಕನ್ನಡಿಗರ ಜೀವನಚಿತ್ರವನ್ನು ಮನೋಜ್ಞವಾಗಿ ಬಿ೦ಬಿಸುತ್ತಿದ್ದ ಅವರ ಶೈಲಿ ಅನನ್ಯ.  ನನ್ನ ಕತೆಯೊ೦ದನ್ನು ಓದಿ ಓದುಗರೊಬ್ಬರು ವ್ಯಾಸರಾಯ ಬಲ್ಲಾಳರು ಬರೆದ ಕತೆಯನ್ನು ಓದಿದ೦ತಾಯಿತು ಎ೦ದ ಮಾತು ನನ್ನ ಮಟ್ಟಿಗೆ ಜೀವನವಿಡೀ ನೆನಪಿಡುವ೦ತಹ ಅಮೂಲ್ಯ ಪ್ರಶಸ್ತಿ. ಅವರ ಚರಣಧೂಳಿಯಷ್ಟೆ ಯೋಗ್ಯತೆ ನನ್ನದೆನ್ನುವ ನಮೃತೆಯೊ೦ದಿಗೆ ಬಲ್ಲಾಳರಿಗೆ ಶ್ರದ್ಧಾ೦ಜಲಿಯನ್ನು ಅರ್ಪಿಸುತ್ತೇನೆ.

 ಮೃಣಾಲಿನಿ ಉದಯ ಕುಮಾರ್

Syndicate

Syndicate content