- ನಸೀಮ್ ಎಂ.ಎಸ್.
"ವಾರ್ತಾಭಾರತಿ" - ಮಂಗಳೂರು ಮತ್ತು ಬೆಂಗಳೂರಿನಿಂದ ಏಕಕಾಲಕ್ಕೆ ಪ್ರಕಟವಾಗುತ್ತಿರುವ ಕನ್ನಡ ದೈನಿಕ. ಅದರ ಸಂಪಾದಕೀಯ ವಿಭಾಗ ಅತ್ಯಂತ ಜನಪ್ರಿಯವಾಗಿದ್ದರೆ 'ಬುಡಬುಡಿಕೆ' ಎಂಬ ಇನ್ನೊಂದು ವಿಭಾಗವೂ ಓದುಗರಿಗೆ ಅಷ್ಟೇ ಅಚ್ಚುಮೆಚ್ಚು. ಖಾರ ಮತ್ತು ನೇರ ಬರವಣಿಗೆಯ ಮೂಲಕ 'ಸತ್ಯ ಎಲ್ಲೆಡೆಗೆ' ಎಂದು ಸಾರುವ ಈ ಪತ್ರಿಕೆ ಹುಬ್ಬಳ್ಳಿಯಿಂದಲೂ ಪ್ರಕಟಗೊಳ್ಳುವ ಹುನ್ನಾರದಲ್ಲಿದೆ. ಪ್ರತಿ ತಿಂಗಳ ಮೊದಲ ಶುಕ್ರವಾರ ಪ್ರಕಟಗೊಳ್ಳುವ 'ಗಲ್ಫ್ ಭಾರತಿ' ಗಲ್ಫ್ ರಾಷ್ಟ್ರಗಳ ಆಗುಹೋಗುಗಳನ್ನು ಬಿಂಬಿಸಿದರೆ ಪ್ರತಿ ಸೊಮವಾರ ಪ್ರಕಟಗೊಳ್ಳುವ ಅದರ "ಓ ಮೆಣಸೇ..." ಎಂಬ ಇನ್ನೊಂದು ಅಂಕಣ ಎಲ್ಲರಿಗೂ ಇಷ್ಟ. ಕಳೆದ ವಾರದಲ್ಲಿ ಖ್ಯಾತರು ನೀಡಿದ ಹೇಳಿಕೆಗಳ ಮುಖ್ಯಾಂಶಗಳೇ ಇದರ ಜೀವಾಳ. ಉತ್ತಮವಾದುದನ್ನು ಆರಿಸಿಕೊಂಡು ಅದಕ್ಕೆ ಅಣಕು ಉತ್ತರ ಅಥವಾ ವ್ಯಾಖ್ಯಾನ ನೀಡುವ ಅಂಕಣ ಓದುಗರನ್ನು ಹಸನ್ಮುಖಿಯಾಗಿಸಲು ಸಹಕಾರಿಯಾಗಿದೆ. ಇದರ ಶ್ರೇಯ ಅಂಕಣದ ಲೇಖಕರಾದ ಪಿ.ಎ. ರೈ ರವರಿಗೆ ಸೇರಬೇಕು.
ಕನ್ನಡ ಧ್ವನಿಯ ಓದುಗಾರರೂ ಇದರಿಂದ ವಂಚಿತರಾಗಬಾರದೆಂದು ಕೆಲವು ಸ್ಯಾಂಪಲ್ಲುಗಳನ್ನು ನೀಡುತ್ತಿದ್ದೇವೆ. ಓದಿ ನೋಡಿ. ತಮ್ಮ ಪ್ರತಿಕ್ರಿಯೆಯನ್ನು ಕೆಳಭಾಗದ ಅಂಕಣದಲ್ಲಿ ಇಂಗ್ಲಿಷ್ / ಕನ್ನಡ ಬರಹಗಳಲ್ಲಿ ನೀಡಬಹುದು.
೧) ಸದಾನಂದಗೌಡರಿಗೆ ಮತಿ ಭ್ರಮಣೆ - ಧರಂಸಿಂಗ್, ಮಾಜಿ ಮುಖ್ಯಮಂತ್ರಿಗಳು
ಅಣಕು: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಲು ಅದು ಮುಖ್ಯ ಅರ್ಹತೆಯಂತೆ!
೨)ಕನ್ನಡ ಅಪಾಯಕಾರಿ ಸ್ಥಿತಿಯಲ್ಲಿದೆ - ಕುಂ. ವೀರಭದ್ರಪ್ಪ, ಸಾಹಿತಿ
ಅಣಕು: ನಿಮ್ಮ ಕೃತಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮೆ ಪ್ರಶಸ್ತಿ ಸಿಗುವ ಮೂಲಕ ಅದು
ಸಾಬೀತಾಯಿತು ಬಿಡಿ
೩)ಸೋನಿಯ ಗಾಂಧಿಗೆ ಪ್ರತಿದಿನ ೫೦ ಸಾವಿರಕ್ಕೂ ಹೆಚ್ಚು ಪತ್ರಗಳು ಬರುತ್ತಿವೆ
ಅಣಕು: ದೇವೇಗೌಡ ಮತ್ತು ಎಂ.ಪಿ.ಪ್ರಕಾಶ್ ಅವರು ಬರೆದ ಪತ್ರಗಳೇ ಅಧಿಕವಂತೆ!
೪)ರೈತರ ಕಲ್ಯಾಣಕ್ಕೆ ಕ್ರಮ - ಪ್ರಧಾನಿ ಮನಮೋಹನ್ ಸಿಂಗ್
ಅಣಕು: ನೇಣು ಹಾಕಿಕೊಳ್ಳುವ ಹಗ್ಗ ಕೊಳ್ಳಲು ಸುಲಭ ದರದಲ್ಲಿ ಸಾಲ ನೀಡುವಿರಾ?
೫)ಇವತ್ತಿನ ರಾಜಕೀಯ ಪರಿಸ್ಥಿತಿ ಪಾದರಸದಂತೆ ಅಸ್ಪಷ್ಟವಾಗಿದೆ - ಎಂ.ಪಿ.ಪ್ರಕಾಶ್
ಅಣಕು: ಕೆಲವು ರಾಜಕಾರಣಿಗಳ ಸ್ಥಿತಿಯಂತೂ ಬೇಲಿಯ ಮೇಲಿನ ಕಪ್ಪೆಯಂತಾಗಿದೆ. ಎತ್ತ
ಹಾರುವರೋ...........
೬)ಸೋನಿಯಾಗಿಂತಲೂ ದೊಡ್ಡ ನಾಯಕಿ ನಾನು - ಮಾಯಾವತಿ, ಉ.ಪ್ರದೇಶ ಮುಖ್ಯಮಂತ್ರಿ
ಅಣಕು: ಅವರ ಭಾರ ಕಂಡವರು ಖಂಡಿತಾ ಒಪ್ಪತಕ್ಕಂತಹ ಮಾತು
೭)ನಮ್ಮದು ವಿಶ್ವಶಾಂತಿ ಪರ್ಯಾಯ - ಸುಗುಣೇಂದ್ರ ತೀರ್ಥ ಸ್ವಾಮೀಜಿ
ಅಣಕು: ಮೊದಲು ಕೃಷ್ಣಮಠದೊಳಗೆ ಶಾಂತಿ ನೆಲೆಸಲಿ
೮) ಭಾರತ ಚರಿತ್ರೆಯನ್ನು ಬೇಕಾಬಿಟ್ಟಿ ತಿರುಚಲಾಗಿದೆ - ಎಂ.ಬಿ.ಪುರಾಣಿಕ್, ಮುಖಂಡ
ಅಣಕು: ತಿರುಚಿದ್ದು ಮಾತ್ರವಲ್ಲ, ೧೦೦೨ ಡಿಸೆಂಬರ್ ೬ರಂದು ಅದನ್ನು ಅಕ್ಷರಶಃ ಧ್ವಂಸ
ಮಾಡಲಾಯಿತು.
೯)ನಮ್ಮ ಜಯಕ್ಕಿಂತ ನಡುವಳಿಕೆಯ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದು ನಿಜಕ್ಕೂ ಬೇಸರ ತಂದಿದೆ - ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ
ಅಣಕು: ಉತ್ತಮ ನಡುವಳಿಕೆಯೇ ಒಂದು ತಂಡದ ನಿಜವಾದ ಜಯ ಎನ್ನುವುದನ್ನು ಇನ್ನಾದರೂ
ತಿಳಿದುಕೊಳ್ಳಿರಿ
೧೦) ಗುಜರಾತ್ ಚುನಾವಣೆಯ ಸೋಲಿಗೆ ಎಲ್ಲರೂ ಹೊಣೆ - ಸೋನಿಯಾ ಗಾಂಧಿ
ಅಣಕು: ಗೆದ್ದಿದ್ದರೆ ನಿಮ್ಮ ಮಗನೇ ಹೊಣೆಯಾಗುತ್ತಿದ್ದ









