-ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೨
ಆದರೆ ಈ ಪರಿಸ್ಥಿತಿ ಎಲ್ಲಿಯವರೆಗೆ?.......???????
ಬದಲಾಗುತ್ತಿರುವ ಈ ಕಾಲದಲ್ಲಿ ದುಬೈ ಮೊದಲಿನಂತೆ ಇದೆಯೇ? ಸುಖ ಶಾಂತಿ, ನೆಮ್ಮದಿ ಅನ್ನುವುದು ಎಲ್ಲರಿಗೂ ದೊರಕುತ್ತಿದೆಯೇ? ಒಂದು ಉನ್ನತ ವರ್ಗಕ್ಕೆ ಇಲ್ಲಿನ ಸುಖ ಶಾಂತಿಗಳು ಸಿಕ್ಕುತ್ತಿದ್ದರೂ ಇತರರಿಗೆ ಅದು ದಿನೇ ದಿನೇ ಮರೀಚಿಕೆಯಾಗುತ್ತಲೇ ಹೋಗುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಇಲ್ಲಿ ಬೆಳೆದು ನಿಂತ ಬಾಡಿಗೆ ಮತ್ತು ಟ್ರಾಫಿಕ್ ಜ್ಯಾಮ್ ಸಮಸ್ಯೆ ಸಾಮಾನ್ಯ ಜನತೆಯ ನೆಮ್ಮದಿಯನ್ನೇ ಕಸಿದುಕೊಂಡಿದೆ. ಆಗ ಇಲ್ಲಿನ ಶೇಖ್ ಜಾಯೆದ್ ರಸ್ತೆ, ಜೆಬೆಲ್ ಆಲಿ, ದೇರಾ, ಮೀಡಿಯಾ ಸಿಟಿ, ಕರಾಮ ಇತ್ಯಾದಿ ಇಷ್ಟೊಂದು ಬೆಳೆದು ನಿಂತಿರಲಿಲ್ಲ. ಉದಾಹರಣೆಗೆ ನಾನು ನೆಲೆ ನಿಂತಿರುವ ಕರಾಮದಲ್ಲಿ ಸಂಜೆಯಾದಂತೆ ಜನಸಂಖ್ಯೆ ವಿರಳವಾಗುತ್ತಿತ್ತು. ರಾತ್ರಿಯಾದಂತೆ ರಸ್ತೆಗಳು ಖಾಲಿ ಖಾಲಿಯಾಗಿರುತ್ತಿದ್ದವು. ಈಗಂತೂ ಎದುರಿನ ರಸ್ತೆ ದಾಟಿ ಬರಲು ಹರಸಾಹಸ ಮಾಡಬೇಕು. ಒಂದು ಸಣ್ಣ ಪಾರ್ಕಿಂಗ್ ದೊರಕಬೇಕಾದರೂ ಎರೆಡು ಮೂರು ಸುತ್ತು ಪ್ರದಕ್ಷಿಣೆ ಹಾಕಬೇಕು. ಅಕ್ಕ ಪಕ್ಕ ಎದ್ದು ನಿಂತ ಕಟ್ಟಡಗಳ ಸಾಲು ಕಂಡು ಬೆಚ್ಚಿ ಬೀಳಬೇಕು. ಆದರೆ ಈ ಕಟ್ಟಡಗಳ ಬಾಡಿಗೆಗಳು ಇಳಿದಿಲ್ಲ. ಅವು ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿವೆ.
ಇವತ್ತಿಗೂ ಕರಾಮದಲ್ಲಿ ಫಿಲಿಪ್ಪೀನಿಗಳ ದರ್ಬಾರು. ಒಮ್ಮೆ ಅವರ ಫ್ಲಾಟಿನೊಳಗೆ ಇಣುಕಿ ನೋಡಿದರೆ ಸಾಕು, ಒಂದು ಫ್ಲಾಟನ್ನು ಐದಾರು ಭಾಗಗಳನ್ನಾಗಿ ವಿಭಾಗಿಸಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಬರೆಯ ಒಂದು ಹಾಸಿಗೆ ಹಾಸುವಷ್ಟೇ ಜಾಗದಲ್ಲಿ ಒಂದು ದಂಪತಿಗೆ ಜಾಗ ಬಾಡಿಗೆಗೆ ಕೊಟ್ಟಿದ್ದಾರೆ. ಮಕ್ಕಳಿದ್ದವರಿಗೆ, ಬ್ರಹ್ಮಚಾರಿಗಳಿಗೆ ಸ್ಥಳಾವಕಾಶ ದೊರಕುವುದೇ ಕಡಿಮೆ. ಬ್ಯಾಚೆಲರ್ ಗಳು ಒಂದು ಕೋಣೆಯಲ್ಲಿ ಹತ್ತಾರು ಜನರಂತೆ ಒತ್ತಾಗಿ ವಾಸವಾಗಿದ್ದಾರೆ. ಒಂದೇ ಬಾತ್ ರೂಮಿನಲ್ಲಿ ಒಟ್ಟಿಗೇ ಇಬ್ಬರು ಸ್ನಾನ ಮಾಡುವ ಅವರ ಜೀವನ ಶೈಲಿಗೆ ಆಶ್ಚರ್ಯ ಪಡುವಂತಿಲ್ಲ. ದುಬೈಯಲ್ಲಿ ಬದುಕುವ ಹಲವಾರು ಮಂದಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಏಕೆಂದರೆ ದುಡಿದು ಗಳಿಸಿದ ಹಣ, ಈ ಬಾಡಿಗೆ ಮನೆಗೆ ಸುರಿದರೆ ಅವರ ಕೈಯಲ್ಲಿ ಕ್ರೆಡಿಟ್ ಕಾರ್ಡಿನ ಸಾಲದ ಹೊರತು ಇನ್ನೇನೂ ಉಳಿಯದು! ಹೀಗಾಗಿ ಪರಿಸ್ಥಿತಿಗೆ ಹೇಗಾದರೂ ಒಗ್ಗಿಕೊಳ್ಳಬೇಕು.
ದುಬೈಯಲ್ಲಿ ನಾನು ನೋಡುತ್ತಿದ್ದಂತೆ ಆ ಹಿಂದಿನ ಸವಿ, ಸ್ವಾರಸ್ಯಗಳು ಉಳಿದಿಲ್ಲ. ಎಲ್ಲವನ್ನೂ 'ಕಮರ್ಶಿಯಲ್ ಮೈಂಡ್'ನಲ್ಲಿ ತೂಗಿ ನೋಡುವ ಸರ್ಕಾರ, ಅದರ ಪ್ರಗತಿಯನ್ನು ಶೀಘ್ರದಲ್ಲಿ ಮಾಡಿ ಮುಗಿಸಲು ಹವಣಿಸುತ್ತದೆ. ಅದಕ್ಕೆ ಅವರಿಗೆ ಸಾಮಾನ್ಯ ಜನರ ಅಗತ್ಯವೂ ಬೇಕಿಲ್ಲ. ಗಳಿಸಿದ ಹಣ ಇಲ್ಲೇ ಖರ್ಚು ಮಾಡುವ, ಮೋಡು ಮಾಡುವ ದರ್ಬಾರಿ ಜನಗಳು ಬೇಕಾಗಿದೆ.
ಇಲ್ಲಿ ಇವತ್ತು ಯಾವುದೇ ಜನ ಸಾಮಾನ್ಯನ ಮುಖವನ್ನು ಗಮನವಿಟ್ಟು ನೋಡಿದರೆ ಆತನ ಚಹರೆಯಲ್ಲಿ ಸಮಸ್ಯೆ, ಚಿಂತೆ, ಗೊಂದಲಗಳು ಗೂಡುಕಟ್ಟಿರುವುದು ಗೋಚರಿಸುತ್ತದೆ. ಈ ವ್ಯಥೆ ಕಥೆ ವಿಷಾದವಾಗಲಿ ಅವರು ಊರಿನ ಜನತೆಯ ಬಳಿ ಬಿಟ್ಟು ಕೊಡುವುದಿಲ್ಲ. ಏಕೆಂದರೆ ಆತನಿಗೆ ಇದು ಪ್ರತಿಷ್ಠೆಯ ಪ್ರಶ್ನೆ! ಬದಲಾಗಿ ಇಂತಹ ಮಂದಿ ತಮ್ಮ ಹಳೆಯ ಚಾಳಿಯನ್ನೇ ಪ್ರದರ್ಶಿಸುತ್ತಾರೆ. ಅದ್ಧೂರಿಯ ಮದುವೆ, ಔತಣ ಕೂಟ, ಘಮಘಮ ಸೆಂಟು, ಸೂಟುಕೇಸು, ಕಾರು-ರಿಕ್ಷಾದ ಓಡಾಟ, ಇತ್ಯಾದಿ ಇತ್ಯಾದಿ. ಈ ಮಂದಿ ಮರುಭೂಮಿಯ ವಾಸ್ತವ ಬದುಕನ್ನು ತೆರೆದಿಟ್ಟರೆ ಅರ್ಧದಷ್ಟು ಜನರು (ಮುಖ್ಯವಾಗಿ ಕಾರ್ಮಿಕರು) ಗಲ್ಫ್ ಜೀವನದ ಕುರಿತು ಯೋಚಿಸಲೂ ಹೋಗಲಾರರು.
ಅಂದ ಹಾಗೆ ಇಲ್ಲಿ ಯಾರು ಸುಖಿ ಅನ್ನುವುದು ಮುಖ್ಯ ಪ್ರಶ್ನೆ! ಸರಕಾರಿ, ಅರೆ ಸರಕಾರಿ ಮತ್ತು ಅಂತಾರಾಷ್ಟ್ರೀಯ ಸ್ವಾಮ್ಯದ ಸಂಸ್ಥೆಗಳಲ್ಲಿ ದುಡಿಯುವ ಮಂದಿ, ಐಟಿ ಕ್ಷೇತ್ರದಲ್ಲಿ ಪರಿಣಿತನಾಗಿರುವ ಬುದ್ಧಿವಂತ, ವೈದ್ಯ, ಇಂಜಿನಿಯರ್ ಮೊದಲಾದವರು ದೊಡ್ಡ ಅದೃಷ್ಟಶಾಲಿಗಳು. ಇಲ್ಲಿ ಅವರಿಗೆ ಮನೆ, ಕಾರು, ಭತ್ಯೆ, ವಿಮೆಯೆಂದು ಅನೇಕ ಸವಲತ್ತುಗಳನ್ನು ನೀಡುತ್ತಾರೆ. ವಾರಕ್ಕೆ ಎರೆಡು ರಜೆಯ ಜೊತೆ ಮಕ್ಕಳ ವಿದ್ಯಾಭ್ಯಾಸವೂ ಉಚಿತವಾಗಿರುತ್ತದೆ. ಇಲ್ಲಿಯ ನೌಕರಿಗೆ ಶಿಫಾರಸು, ಸುಳ್ಳು ದಾಖಲೆ ಪತ್ರ, ಪರಿಚಯ ಹಾಗೂ ಪ್ರತಿಭೆ ಮುಖ್ಯವೆನಿಸುತ್ತದೆ. ಇಂತಹವರ ಅದೃಷ್ಟದ ನೌಕರಿಯೇ ನಮಗೆ ಫಳ ಫಳ ಹೊಳೆಯುತ್ತದೆ. ಹೇಗೋ ದಕ್ಕಿಸಿಕೊಂಡ ಈ ನೌಕರಿಯೂ ಅತನ ಇಡಿಯ ಬದುಕನ್ನೇ ಬದಲಾಯಿಸಿ ಕೊಡುತ್ತದೆ. ಮ್ಯಾನೇಜರ್ ಆಗಿ ದುಡಿಯುವ ಈ ಭಾಗ್ಯವಂತನ ವಿದ್ಯಾಭ್ಯಾಸ ಹತ್ತನೆಯ ತರಗತಿಯೂ ದಾಟಿರುವುದಿಲ್ಲ. ಅದೇ ಸಂಸ್ಥೆಯಲ್ಲಿ ಇನ್ನೋರ್ವ 'ಗೋಲ್ಡ್ ಮೆಡಲ್' ಇದ್ದರೂ ಆತ, ಈತನ ಕಾಲುಭಾಗ ಸಂಬಳ ದಕ್ಕಿಸಿಕೊಳ್ಳುವಷ್ಟು ಮಾತ್ರ ಸಮರ್ಥನಾಗಿರುತ್ತಾನೆ. ಮುಖ್ಯ ಅಂದರೆ ಇಲ್ಲಿ ಕುದುರೆ ಮತ್ತು ಕತ್ತೆಗಳ ವ್ಯತ್ಯಾಸವೇ ಅರಿವಿಗೆ ಬರುವುದಿಲ್ಲ.
ಇವತ್ತು ದುಬೈ ನಾಗಾಲೋಟದಲ್ಲಿದೆ. ಇಲ್ಲಿಯ ರಿಯಲ್ ಎಸ್ಟೇಟ್ ಕ್ಷೇತ್ರ ಪ್ರಗತಿಯಲ್ಲಿದೆ. ಸಾವಿರಾರು ಮಂದಿ ಈ ಉದ್ಯೋಗದಲ್ಲೀಗ ಬೆಸೆದುಕೊಂಡಿದ್ದಾರೆ. 'ಬುರ್ಜ್ ದುಬೈ' ಎಂಬ ವಿಶ್ವದ ಅತಿ ಎತ್ತರದ ಕಟ್ಟಡದಿಂದ ಮುಂದುವರಿದು ಮುಂದಿನ ವರ್ಷ ಮೆಟ್ರೋ ರೈಲು ಸಹಾ ದುಬೈಯಲ್ಲಿ ಓಡಾಡಲಿದೆ. ಹಲವಾರು ರಾಷ್ಟ್ರಗಳ ನಾಗರಿಕರು ಈ ರಾಷ್ಟ್ರಕ್ಕೆ ಬಂದು ವ್ಯಾಪಾರ ವಹಿವಾಟು ಆರಂಭಿಸಲಿದ್ದಾರೆ. ದೇಶವನ್ನು ಇನ್ನಷ್ಟು ವೇಗದಲ್ಲಿ ಬೆಳೆಸಲು ಬೆಂಬಲ ನೀಡಲಿದ್ದಾರೆ. ಅಂತೂ ದುಬೈ ಇನ್ನಷ್ಟು ಶ್ರೀಮಂತವಾಗಲಿದೆ.
ಆದರೆ ನಮ್ಮಂತಹ ಮಧ್ಯಮ ವರ್ಗದವರ ಜೀವನ ಹೇಗೆ ಸಾಗಲಿದೆ? ಅವರು 'ಚಲ್ತೀ ಕಾ ನಾಮ್ ಗಾಡಿ'ಯಂತೆ ಸಾಗಬೇಕು. ಬಾಡಿಗೆ, ಶಾಲಾ ಕಾಲೇಜು ಫೀಸು, ಟ್ರಾಫಿಕ್ ಜಾಮ್, ಏರುವ ಬೆಲೆ ಇತ್ಯಾದಿಗಳನ್ನು ನಿಭಾಯಿಸುತ್ತಾ ಹೆಜ್ಜೆ ಇಡಬೇಕು. ಅಥವಾ ಸಂಸಾರವನ್ನು ಕಟ್ಟಿ ಊರಿಗೆ ಹಿಂತಿರುಗಬೇಕು. ಬ್ರಹ್ಮಚಾರಿಗಳಿಗೂ ಇಲ್ಲಿನ ನೌಕರಿಯಲ್ಲಿ ಭದ್ರತೆಯಿಲ್ಲ. ನೆಲೆನಿಲ್ಲಲು ಮನೆ ಇಲ್ಲ ಅನಿಸಿದಾಗ ಅವನೂ ಇದೇ ಯೋಚಿಸಬೇಕು. ಒಟ್ಟಿನಲ್ಲಿ ದುಬೈ ಬೆಳೆದಂತೆ ನಾವು ಬೆಳೆಯಲಾಗಲಿಲ್ಲ. ಏಕೆ ಹೀಗೆ ಅನ್ನುವುದು ನನ್ನಂತೆ ಎಲ್ಲರಿಗೂ ಕಾಡುವ ಪ್ರಶ್ನೆ ಇದು!
(ಈ ಲೇಖನ ಈ ಹಿಂದೆ ವಾರ್ತಾಭಾರತಿಯಲ್ಲಿ ಪ್ರಕಟಗೊಂಡಿದೆ)










Beautiful summation of the
Beautiful summation of the life in Dubai