- ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೧
ಮಾರ್ಚ್ ೧೭ ೧೯೯೪, ನಾನು ಪ್ರಥಮ ಬಾರಿ ದುಬೈಗೆ ಕಾಲಿಟ್ಟೆ. ಇಲ್ಲಿನ ರೀತಿ ರಿವಾಜುಗಳಾಗಲೀ, ಕಾನೂನು ಕಟ್ಟಳೆಗಳಾಗಲೀ, ಆಡಳಿತಾರೂಢ ಸುಲ್ತಾನರ ಹೆಸರಾಗಲೀ ಯಾವುದೂ ನನಗೆ ತಿಳಿದಿರಲಿಲ್ಲ. ಕಾಲೇಜು, ಓದು, ಕ್ರಿಕೆಟ್, ಸಾಹಿತ್ಯವೆಂದು ನಾನು ನನ್ನದೇ ಲೋಕದಲ್ಲಿದ್ದೆ. ಹೀಗಾಗಿ ಇಲ್ಲಿಯ ಪರಿಚಯದ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಅಂದು ನಮ್ಮೂರಿನ ಅನೇಕ ಮಂದಿ ದುಬೈಯಲ್ಲಿದ್ದವರು ಊರಿಗೆ ಬಂದಾಗ ಅವರ ಬದಲಾದ ಜೀವನ ಶೈಲಿಗೆ ಬೆರಗಾಗುತ್ತಿದ್ದೆ. ಅವರು ಕಾರು-ರಿಕ್ಷಾಗಳಲ್ಲಿ ಓಡಾಡುವ ಗತ್ತು, ಮೀನು ಮಾಂಸದಂಗಡಿಯಲ್ಲಿ ಚೆಲ್ಲುವ ಬಿಸಿಬಿಸಿ ನೋಟು, ಮನೆಯಲ್ಲಿ ಆತ್ಮೀಯರಿಗೆ ನೀಡುವ ಔತಣ ಕೂಟ, ಹೆಂಡತಿ ಮಕ್ಕಳೊಂದಿಗೆ ಘಮಘಮ ಸೆಂಟಿನೊಂದಿಗೆ ನೆಂಟರ ಮನೆಗೆ ಹೋಗುವ ಸಡಗರ, ಅಲ್ಲಿ ಅವರಿಗೆ ದೊರೆಯುವ ರಾಜಮರ್ಯಾದೆ, ಮತ್ತೆ ಅವರು ಗಲ್ಫಿಗೆ ಹೊರಟು ನಿಂತಾಗ, ಅಲ್ಲಿ ಸೇರುವ ಜನ, ತನ್ನ ಬಂಧುಗಳ ಕಿಸೆಗೆ ತುರುಕುವ ನೋಟು ಇತ್ಯಾದಿ ಇತ್ಯಾದಿ ಕಂಡಾಗ ಈ ದುಬೈ ಇನ್ನಷ್ಟು ಕುತೂಹಲಕರವಾಗಿ ಕಾಣುತ್ತಿತ್ತು. ಸುಲಭವಾಗಿ ಮಾತು ಶೀಘ್ರದಲ್ಲಿ ಕಾಸು ಮಾಡುವ ರಾಷ್ಟ್ರ ಇದೊಂದೇ ಎಂದು ಲೆಕ್ಕಾಚಾರ ಹಾಕುತ್ತಿದ್ದೆ.
ನಾನು ಬಿ.ಎ.ಯೊಂದಿಗೆ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿಕೊಂಡಾಗ ಬೆಂಗಳೂರಿನ ಒಂದು ಜನಪ್ರಿಯ ಪತ್ರಿಕೆಯು ತನ್ನಲ್ಲಿಗೆ ಆಹ್ವಾನಿಸಿತ್ತು. ಸಂದರ್ಶನಕ್ಕೆ ಹೊರಡುವ ಎರೆಡು ದಿನಗಳ ಮುನ್ನ ದುಬೈಯಿಂದ ಚಿಕ್ಕಪ್ಪ ಕಳಿಸಿದ ವೀಸಾ ತಲುಪಿತ್ತು. ಆಗ ನಾನು ಗೊಂದಲದಲ್ಲಿ ಸಿಲುಕಿಕೊಂಡೆ. ಆದರೂ ಬೆಂಗಳೂರಿಗೆ ತೆರಳಿ ಸಂದರ್ಶನ ನೀಡಿದೆ. ಅವರು ಉದ್ಯೋಗಕ್ಕೆ ಆರಿಸಿ ವೇತನವನ್ನೂ ಸ್ಪಷ್ಟಪಡಿಸಿದರು. ನಾನಾಗ ದುಬೈಯಲ್ಲಿ ದೊರೆಯಲಿರುವ ವೇತನಕ್ಕೂ, ಇಲ್ಲಿಯ ವೇತನಕ್ಕೂ ತಾಳೆ ಹಾಕಿದೆ.
ಇಲ್ಲಿನ ಐದು ತಿಂಗಳ ಸಂಬಳ ಅಲ್ಲಿ ಒಂದೇ ತಿಂಗಳಲ್ಲಿ ಸಿಗುತ್ತಿತ್ತು. ಬರೆಯುವ ಹವ್ಯಾಸವನ್ನು ಅಲ್ಲಿಯೂ ಜೀವಂತವಾಗಿಡಬಹುದೆಂದು ಪತ್ರಿಕೆಯ ಕೊಠಡಿಯಿಂದ ಎದ್ದುಬಂದೆ. ಒಂದು ವಾರದಲ್ಲಿಯೇ ದುಬೈಯ ವಿಮಾನ ಹತ್ತಿದೆ. ದುಬೈಗೆ ಆಗಮಿಸಿದಾಗ ಮುಖ್ಯವಾಗಿ ಎರೆಡು ಸ್ವಪ್ನಗಳನ್ನು ಇಟ್ಟುಕೊಂಡಿದ್ದೆ. ಒಂದು ಸಾಹಿತ್ಯ ಕೃಷಿಯನ್ನು ಹಸಿರಾಗಿಡುವುದು, ಇನ್ನೊಂದು ಕೇವಲ ಐದು ವರ್ಷಗಳಲ್ಲಿ ಐದು ಲಕ್ಷ ಸಂಪಾದಿಸಿ ದುಬೈಗೆ ಗುಡ್ ಬೈ ಅನ್ನುವುದು. ಕಳೆದ ಮಾರ್ಚ್ ಕೈಬೀಸಿ ಹೊರಟು ಹೋದಾಗ ನಾನು ದುಬೈಗೆ ಬಂದು ೧೩ ವರ್ಷಗಳು!
ದಿನಗಳು ಹೇಗೆ ಜಾರಿ ಹೋದವು ಎನ್ನುವುದು ತಿಳಿದೇ ಇಲ್ಲ. ನನ್ನ ಪಂಚವಾರ್ಷಿಕ ಯೋಜನೆಯತ್ತ ಕಣ್ಣು ಹಾಯಿಸಿದರೆ ಅದು ಅಣಕಿಸುತ್ತಲೇ ಇದೆ. ಸಾಹಿತ್ಯ ಕೃಷಿ ಅನ್ನುವುದು ಇಲ್ಲಿನ ತೀವ್ರ ಸೆಖೆಯ್ ಬೇಗೆಗೆ (ಒತ್ತಡಕ್ಕೆ) ಬಾಡಿ ಹೋಗಿದೆ. ಬರೆಯಬೇಕೆಂಬ ಆಸೆಗಳಿದ್ದರೂ, ಅದಕ್ಕೆ ಸಮಯಾವಕಾಶದ ಕೊರತೆ, ಜೊತೆಗೆ ಒಂದಿಷ್ಟು ಉದಾಸೀನ. ಆಸೆ, ಕನಸು, ಜವಾಬ್ದಾರಿ ಇತ್ಯಾದಿಗಳ ಜಂಜಾಟದಲ್ಲಿ ಈ ಮಾಯಾನಗರಿಯನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಮದುವೆ, ಮಕ್ಕಳು, ಭಡ್ತಿಯೆಂದು ಸೇರುತ್ತಲೇ ಹೋದಾಗ ಈ ಮೋಹದಿಂದ ಪಾರಾಗಿ ಹೊರಬರಲು ಸಾಧ್ಯವೂ ಆಗುತ್ತಿಲ್ಲ. ಇನ್ನಷ್ಟು ಗಳಿಸಿಯೇ ಜಾಗ ಖಾಲಿ ಮಾಡುವ ಎಂದಾಗ, ವರ್ಷಗಳು ಉರುಳಿ ಹೋಗುವುದು ತಿಳಿಯುವುದೇ ಇಲ್ಲ. ನೋಡುನೋಡುತ್ತಿದ್ದಂತೆ " ಇಲ್ಲಿ ನೆಲೆ ಇಲ್ಲ, ಊರಿನಲ್ಲಿ ಬೆಲೆ ಇಲ್ಲ" ಎಂದು ಅನ್ನಿಸಿದಾಗ ಯೋಚನೆ, ಚಿಂತೆ, ವಿಮರ್ಶೆ ಆರಂಭವಾಗುತ್ತದೆ. ನಮ್ಮವರ ಜೊತೆ ಅಲ್ಲೊಂದು ಹೊಸ ಬದುಕು ಸಾಗಿಸುವ ಅಂದಾಗ ಅಲ್ಲಿಯವರು ಧೈರ್ಯ ತುಂಬುತ್ತಿಲ್ಲ. "ಸಧ್ಯ ಊರಿನಲ್ಲಿ ಬಂಡವಾಳ ಹಾಕಬೇಡಿ, ನಾವು ಸೋತು ಸುಣ್ಣವಾಗಿರುವುದೇ ಸಾಕು, ಸಾಧ್ಯವಾದರೆ ಇನ್ನೂ ಕೆಲವು ವರ್ಷಗಳನ್ನು ದುಬೈಯಲ್ಲಿಯೇ ದಿನದೂಡಿರಿ" ಎನ್ನುವ ಅವರ ಸಲಹೆಗೆ ಭಯವೂ ಆಗುತ್ತಿದೆ. ಊರಿಗೆ ತೆರಳಿದ ಮಂದಿ ಅಲ್ಲಿ ವ್ಯಾಪಾರ ಆರಂಭಿಸಿ, ಅಲ್ಲಿಯ ಬದುಕಿಗೆ ಒಗ್ಗದೆ ಮತ್ತೆ ಹಿಂತಿರುಗಿ ಬಂದಿರುವುದನ್ನು ನೋಡಿದರೆ ಅವರ ಮಾತು ಕೂಡಾ ನಿಜವೆನ್ನಿಸುತ್ತದೆ. ಏಕೆ ಇರುವ ಒಳ್ಳೆಯ ನೌಕರಿಗೆ ಕೊಡಲಿಯೇಟು ಎಂದು ಮೌನವಾಗುತ್ತೇನೆ.
ಒಂದು ಅಥವಾ ಎರೆಡು ವರ್ಷಗಳ ರಜೆಯಲ್ಲಿ ಊರಿಗೆ ತೆರಳುವ ನಮ್ಮ ಮಕ್ಕಳೂ ಅಷ್ಟೇ, ಆರಂಭದಲ್ಲಿ ಊರು ಎಂದರೆ ಬೇಜಾರು, ಅಲ್ಲಿ ಬೀಸುವ ಮಳೆ, ಗಾಳಿ, ಸೊಳ್ಳೆಗಳ ಧಾಳಿ, ವಿದ್ಯುತ್ ಇಲ್ಲದ ಕತ್ತಲ ರಾತ್ರಿ ಕಂಡರೆ ಅದೇನೋ ಭಯ, ಬೇಸಿಗೆಯ ಸ್ಥಿತಿ ಇನ್ನಷ್ಟು ಭಿನ್ನ, ಎಸಿ ಇಲ್ಲದ ಮನೆ, ಉರಿಸೆಖೆ, ಬೆವರ ಅಂಟು, ಹೊತ್ತುಗೊತ್ತಿಲ್ಲದೆ ಕೈಕೊಡುವ ಕರೆಂಟು. ಈ ಮಕ್ಕಳು ಕೂಡಾ ಒಮ್ಮೆ ಗಲ್ಫ್ ಜೀವನಕ್ಕೆ ಒಗ್ಗಿಕೊಂಡರೆ ಸಾಕು, ಮತ್ತೆ ಅವರು ಶಾಶ್ವತ ಅನಿವಾಸಿಗಳಾಗಿಯೇ ಇರಬಯಸುತ್ತಾರೆ. ಅವರಿಗೆ ಇಲ್ಲಿಯ ಸಂಸ್ಕೃತಿ-ಶಾಂತಿ ಅಪ್ಯಾಯಮಾನ ಎನಿಸುತ್ತದೆ. ಒಂದು ರೀತಿಯಲ್ಲಿ ಇಲ್ಲಿ ನಮ್ಮೂರಿನ ಹಾಗೆ ಕೋಮುದಳ್ಳುರಿಯಾಗಲಿ, ಭಾಷಾ ದ್ವೇಶವಾಗಲಿ, ಕಳ್ಳತನ ದರೋಡೆಗಳಾಗಲಿ ಕಾಣಿಸದು. ರಾಜಕೀಯ ಪುಢಾರಿಗಳ ಭಾಷಣ, ಪೊಳ್ಳುಭರವಸೆ, ಜಾತ್ರೆ ಜುಲೂಸು, ದೇವರ ಮೆರವಣಿಗೆ, ಬಂದ್ ಮುಷ್ಕರ, ಮಚ್ಚು-ಕತ್ತಿಗಳ ಹೊಡೆದಾಟ, ಭಿಕ್ಷುಕರ ಕಾಟ, ಕುಡುಕರ ಆರ್ಭಟ, ಕಾನೂನಿನ ಅಪಮಾನ ಇತ್ಯಾದಿಗಳು ಹುಡುಕಿದರೂ ಸಿಗದು. ಇವತ್ತು ನೀರಿಲ್ಲ, ಕರೆಂಟಿಲ್ಲ, ರೇಶನ್ ಇಲ್ಲ, ಗ್ಯಾಸ್ ಇಲ್ಲ ಎಂಬ ಕೊರತೆಯ ಪಟ್ಟಿ ಯಾವತ್ತು ಕಾಣಿಸುವುದೇ ಇಲ್ಲ. ಹೀಗಿರುವಾಗ ಈ ಮಾಯನಗರಿಯನ್ನು ತೊರೆದು ಬರುವುದು ಅಷ್ಟು ಸುಲಭವೂ ಅಲ್ಲ.
ವೇತನ ದೊಡ್ಡದಿರಲಿ, ಅಲ್ಪವಾಗಲಿ ಎಲ್ಲರಿಗೂ ಶಾಂತ ಜೀವನ ನಡೆಸುವ ಬಯಕೆ. ಹೀಗಾಗಿ ದುಬೈಗೆ ಕಾಲಿಟ್ಟವರಿಗೆ ಮತ್ತೆ ಹಿಂತಿರುಗೆ ಹೋಗುವ ಮನಸ್ಸೇ ಕಡಿಮೆ.
ಆದರೆ ಈ ಪರಿಸ್ಥಿತಿ ಎಲ್ಲಿಯವರೆಗೆ?.....................???????










I see junk characters
I see junk characters only...you may have to "copy special" as rich text format and then paste it...