ಕೂಗದಾದೆ ಏಕೆ ಮುಗ್ಧ ಕುರಿಯೇ....?
472922622.jpg

- ನ್ಯಾ. ಶಿ. ವಿ(ನ್ಯಾ ಶಿ ವಿಶ್ವನಾಥ್)

ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು
ನಿನ್ನ ಆರ್ತನಾದದ ಕೂಗನು
ಕೇಳಿಸಿಕೊಳ್ಳುವವರ್ಯಾರೆಂಬ ಅಸಾಹಯಕತೆಯೇ?
ಅಥವಾ ಮನುಜನ ದುಷ್ಟತನಕೆ
ಅಂತಃಕರಣದಿ ನೀ ಮರುಗಿದ ಪರಿಯೇ...?
ಇಲ್ಲವೇ, ನಿನ್ನೆದುರು ಮೂಕವಾಗಿ ನಿಂತ
ದೇವರೊಡನೆ ಯೋಗಿಯ ತೆರದಿ ಚಿಂತನೆಯೇ..?
ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು

ನಿನ್ನ ಬದುಕನುಳಿಸಿಕೊಳ್ಳಲು
ಆ ದೇವನಿತ್ತ ಅಲ್ಪ ಬಳುವಳಿ ನಿನ್ನ ಕೂಗು
ಅವನಾದರೂ ಎಷ್ಟು ಕ್ರೂರ....?
ತನ್ನದೇ ಸೃಷ್ಟಿಕಲೆಯಲಿ ತಾರತಮ್ಯವ ತೋರಿದವನು
ಕ್ರೌರ್ಯವನ್ನೇ ಸದಾ ವಿಜೃಂಭಿಸಿದವನು
ಮುಗ್ಧತೆಯನ್ನೇ ನಿನ್ನ ಅಸಹಾಯಕತೆಯಂತೆ ಚಿತ್ರಿಸಿದವನು
ನೀನಾದರೂ ಪ್ರತಿಭಟಿಸುವೆ ಯಾವಾಗ....
ಅವನೊಡನೆ, ಮುಗ್ಧತೆಯ ವಿಜೃಂಭಣೆಗೆ?
ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು

ನಿನಗರಿವಿರಲಿ ಸದಾ
ಮುಗ್ಧತೆಯ ಅಸಹಾಯಕತೆಯಲಿ
ದುಷ್ಟತನವು ಎಲ್ಲೆ ಮೀರುವುದು ಎಂದು
ಆತ್ಮರಕ್ಷಣೆಯೊಂದೇ ನಿನ್ನುಳಿವಿಗೆ ದಾರಿ ಎಂದು
ಚಿತ್ರಕಾರನು ಮರೆತು ಚಿತ್ರಿಸಿಹನು
ನಿನ್ನಲಿ ಅಲ್ಪಸ್ವಲ್ಪ ದುಷ್ಟತನಗಳನು
ಬಳಸು ಅದನು ಪ್ರತಿಭಟಿಸಲು ಕ್ರೌರ್‍ಯವನು
ಗಳಿಸಿಕೋ ನೀ ನಿನ್ನ ಬದುಕನು
ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು

     

Syndicate

Syndicate content