- ಗೋಪೀನಾಥ ರಾವ್
ತೆಂಕು ತಿಟ್ಟಿನ ಯಕ್ಷಗಾನ ದುಬೈಯಲ್ಲಿ ಇದೀಗ ವರ್ಷಂಪ್ರತಿ ನಡೆಯುವ ಕಲಾ ಕಾಣಿಕೆಯಾಗಿ ಮೂಡಿ ಬಂದಿದೆ. ತಾಯ್ನಾಡಿನಿಂದ ಪ್ರತಿಭಾವಂತರನ್ನು ಕರೆದುತಂದು ಅವರೊಡನೆ ಒಂದೆರಡು ಕ್ಷಿಪ್ರ ತಾಲೀಮು ನಡೆಸಿ ಅವರ ಅನುಭವದ ಪ್ರಯೋಜನ ಪಡೆದು ಪ್ರದರ್ಶನ ರೂಪಿಸುತ್ತಾ ಬಂದಿರುವ ಯಕ್ಷಮಿತ್ರರು ಬಳಗ ಈ ಬಾರಿ ಕರೆದು ತಂದದ್ದು ಸಿದ್ಧಕಟ್ಟೆ ಚಿನ್ನಪ್ಪ ಶೆಟ್ಟಿ, ಭಾಗವತರಾದ ಜಯಪ್ರಕಾಶ್ ನಿಡುವಣ್ಣಾಯ ಮತ್ತು ಚೆಂಡೆವಾದಕ ಗಣೇಶ ಮಯ್ಯರನ್ನು. ಜೊತೆಗೆ ಬಣ್ಣಗಾರಿಕೆ ಮತ್ತು ವೇಷಕಟ್ಟುವುದಕ್ಕೆ ಇದ್ದವರು ಯಕ್ಷಮಿತ್ರರು ಬಳಗದ ಖಾಯಂ ಅತಿಥಿ ಕಲಾವಿದ ಶ್ರೀ ಪಿ ವಿ ಪರಮೇಶ್.
ಈ ಬಾರಿಯ ಹೊಸ ಆಕರ್ಷಣೆ ಪಾರ್ವತಿ ಪಾತ್ರ ನಿರ್ವಹಿಸಿದ ಮಹಿಳಾ ಪ್ರತಿಭೆ ಶ್ವೇತಾ ಭಟ್. ಯಕ್ಷಗಾನ ಕ್ಷೇತ್ರ ಇಂದಿಗೂ ಮಹಿಳೆಯರಿಗೆ ಸುಲಭ ಪ್ರವೇಶ ಕೊಡುವುದಿಲ್ಲ. ಪ್ರದರ್ಶನಗಳು ರಾತ್ರಿ ಏರ್ಪಡುವುದೇ ಇದರ ಹಿಂದಿರುವ ಬಲವಾದ ಕಾರಣ. ಹಾಗಿದ್ದರೂ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿ ಅತ್ಯಪೂರ್ವ ಸಾಧನೆಗೈದು ದಕ್ಷಯಜ್ಞದ ಪಾರ್ವತಿಯಂಥ ಕ್ಲಿಷ್ಟ ಪಾತ್ರದ ಸಮರ್ಥ ನಿರ್ವಹಣೆ ನಡೆಸಿ ಶ್ವೇತಾ ತನ್ನ ಸಿದ್ಧಿಯನ್ನು ಗಮನಾರ್ಹವಾಗಿ ಶ್ರುತಪಡಿಸಿದರು. ಶಿವನಾಗಿ ಸಿದ್ಧಕಟ್ಟೆ ಮಿಂಚಿದರೆ ದಕ್ಷನಾಗಿ ಕಿಶೋರ್ ಗಟ್ಟಿ ಮತ್ತು ವೀರಭದ್ರನಾಗಿ ಸುಧಾಕರ್ ತುಂಬೆ ಉತ್ತಮ ನಿರ್ವಹಣೆ ತೋರಿದರು.
ಎರಡನೇ ಪ್ರಸಂಗ ಭಾರ್ಗವ ವಿಜಯದಲ್ಲಿ ಜಮದಗ್ನಿಯಾಗಿ ಗಿರಿಧರ್ ನಾಯಕ್, ರೇಣುಕೆಯಾಗಿ ಶೇಖರ್ ಉಪ್ಪಿನಂಗಡಿ, ಭಾರ್ಗವನಾಗಿ ಕಿಶೋರ್ ಗಟ್ಟಿ ಹಾಗೂ ಕಾರ್ತವೀರ್ಯನಾಗಿ ಬಾಲಕೃಷ್ಣ ಶೆಟ್ಟಿಗಾರ್ ಗಮನ ಸೆಳೆಯುವ ಪ್ರದರ್ಶನ ನೀಡಿದರು. ಚಿದಾನಂದ ಅವರ ಹಾಸ್ಯ ಪಾತ್ರ ಕೂಡ ವಿಶಿಷ್ಟವಾಗಿತ್ತು.
ಮಧ್ಯಂತರದಲ್ಲಿ ಕಲಾವಿದರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಯೋಜಕರಾಗಿ ಮುಂದೆ ಬಂದು ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಸಹಕಾರವಿತ್ತವರ ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸಿದ್ಧಕಟ್ಟೆ ಚಿನ್ನಪ್ಪ ಶೆಟ್ಟಿಯವರಿಗೆ "ಯಕ್ಷಗಾನ ಕುಲತಿಲಕ" ಬಿರುದು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ಭಾಗವತ ಜಯಪ್ರಕಾಶ್ ನಿಡುವಣ್ಣಾಯರಿಗೆ "ಯಕ್ಷಗಾನ ಭಾಗವತರತ್ನ" ಬಿರುದು ನೀಡಿ ಸನ್ಮಾನಿಸಲಾಯಿತು. ಚೆಂಡೆವಾದಕ ಗಣೇಶ್ ಮಯ್ಯರಿಗೂ ಸನ್ಮಾನವಿತ್ತು ಅಭಿನಂದಿಸಲಾಯಿತು. ದುಬೈ ಯಕ್ಷಮಿತ್ರ ಬಳಗದ ಪ್ರದರ್ಶನಗಳನ್ನು ಶ್ರಮವಹಿಸಿ ನಡೆಸುತ್ತಿರುವ ಇಲ್ಲಿಯ ಕಲಾವಿದರನ್ನು ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕಿವಿ ಹಿಂಡುವ ಚಳಿ, ನಿದ್ದೆಸಮಯ ತಪ್ಪಿ ಮಕ್ಕಳು ಮಾಡುವ ಕಿರಿಕಿರಿಯ ನಡುವೆಯೂ ಐದು ಗಂಟೆ ಯಕ್ಷಗಾನ ಪ್ರದರ್ಶನವನ್ನು ನೋಡಿ ಪ್ರೋತ್ಸಾಹಿಸಿದ ದುಬೈ ನಿವಾಸಿಗಳು ತಾವು ತಮ್ಮ ಸಾಂಸ್ಕೃತಿಕ ಬೇರು ಮರೆತಿಲ್ಲ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಪಡಿಸಿದ್ದಾರೆ.









ದುಬೈ
ದುಬೈ ಕನ್ನಡಿಗರ ಕಲಾಭಿಮಾನ, ಒಗ್ಗಟ್ಟು ಪ್ರಶ೦ಸನೀಯ. ಬಿಡುವಿನ ವೇಳೆಯನ್ನು ಟಿ.ವಿ.ಸೀರಿಯಲ್, ಸಿನೆಮಾಗಳನ್ನಷ್ಟೆ ನೋಡಿ ಕಳೆಯದೆ ಸಾ೦ಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವವರ ಉತ್ಸಾಹವನ್ನು ಕ೦ಡು ಖುಷಿಯಾಯಿತು. ನ್ಯೂಜಿಲ್ಯಾ೦ಡಿನಲ್ಲಿ ಸುಗಮ ಸ೦ಗೀತ, ಹರಿಕಥೆ ಕಾರ್ಯಕ್ರಮಗಳು ಜರುಗಿದ್ದರೂ ಇದುವರೆಗೆ ಯಕ್ಷಗಾನ ನಡೆದಿಲ್ಲ. ದಕ್ಷಿಣ ಕನ್ನಡದವರು ಕಡಿಮೆ ಇರುವ ಕಾರಣದಿ೦ದಿರಬಹುದು. ಇ೦ತಹಾ ಒ೦ದು ಸು೦ದರ ಸ೦ಜೆಯನ್ನು ಅನುಭವಿಸಲು ಸಿಕ್ಕ ನಿಮ್ಮದೇ ಅದೃಷ್ಟ ಸ್ವಾಮೀ.
ಮೃಣಾಲಿನಿ ಉದಯ ಕುಮಾರ್