ಮೊದ್ದುಮಣಿ

ಮೊದ್ದುಮಣಿ - ಪತ್ತೇದಾರಿ ಕಾದಂಬರಿ.

 

ಪ್ರೇಮಶೇಖರ
cherryprem@gmail.com


ಕಪ್ಪು ಮೋಡವೊಂದು ಚಂದ್ರನನ್ನು ಆವರಿಸಿ ಎದುರಿನ ಗಿಡಮರಗಳು ಮಸುಕಾದಾಗ ತಲೆ ಒದರಿ ಎದ್ದುನಿಂತ ರಾಜೀವ.
`ಬಾಲ್ಕನಿಯಲ್ಲಿ ಕೂತು ಕನಸು ಕಂಡದ್ದು ಸಾಕು.  ಒಳಗೆ ಬಂದು ಮಲಗಬಾರದೇ ರಾಜ?' ಎಂದು ಅಕ್ಕ ಇಂದುಮತಿ ಎರಡನೆಯ ಬಾರಿಗೆ ಹೇಳಿ ತಾಸು ಕಳೆದಿತ್ತು.
ಇಪ್ಪತ್ತೊಂದರ ತಮ್ಮನಿಗೆ ಇದು ಕನಸು ಕಾಣುವ ವಯಸ್ಸು ಎಂದವಳು ಬಲ್ಲಳು.  ಆದರೆ ಸಮಯ ರಾತ್ರಿ ಹನ್ನೊಂದು ದಾಟಿದಾಗ ತಮ್ಮ ಹಾಸಿಗೆ ಸೇರಿ ನಿದ್ರಿಸಲಿ ಎಂಬ ಸಹಜ ಕಾಳಜಿ ಅವಳಿಗೆ.
ರಾಜೀವ ಕೋಣೆ ಸೇರಿ ಒಂದು ಲೋಟ ತಣ್ಣನೆಯ ನೀರನ್ನು ಗಂಟಲಿಗಿಳಿಸಿ, ದೀಪವಾರಿಸಿ ಹಾಸಿಗೆ ಸೇರಿದ.  ಕಣ್ಣುಗಳ ಮುಂದೆ ಮತ್ತೆ ತೇಲಿಬಂತು ಆ ಮುಖ.
ರಂಜನಾ!
ವಾರದ ಹಿಂದೆ ಪರಿಚಯವಾದ ಇಪ್ಪತ್ತರ, ಚಂಚಲ ನೇತ್ರಗಳ ಹೆಣ್ಣು.  ಯಾವಾಗಲೂ ತುಟಿಯಂಚಿನಲ್ಲಿ ಕಿರುನಗೆ ಚಿಮ್ಮಿಸುತ್ತಾ, ಒಂದು ಜಡೆಯನ್ನು ಬೆನ್ನ ಹಿಂದೆ, ಇನ್ನೊಂದನ್ನು ಮುಂದೆ ತೂಗಿಸಿಕೊಂಡು ಒಂದುಕ್ಷಣ ಒಂದೆಡೆ ಕೂರದೇ ಅತ್ತಿಂದಿತ್ತ ಜಿಗಿದಾಡುತ್ತಿದ್ದ ಅವಳು ಅವಳು ರಾಜೀವನ ಎದೆಯಲ್ಲಿ ಯಾವುಯಾವುದೋ ಭಾವನೆಗಳನ್ನು ಮೂಡಿಸಿ ಹುಚ್ಚುಹಿಡಿಸಿಬಿಟ್ಟಿದ್ದಳು.
`ಇವಳು ಪಕ್ಕದ ಮನೆಯ ನನ್ನ ಗೆಳತಿ ಸುಲೇಖಾಳ ತಂಗಿ ರಂಜನಾ.  ಮಹಾರಾಣೀ ಕಾಲೇಜಿನಲ್ಲಿ ಫೈನಲ್ ಇಯರ್ ಬಿ ಎಸ್ಸೀ.  ಮುಂದಿನ ವರ್ಷ ಗಂಗೋತ್ರಿಗೆ ಬರ್ತಾಳೆ ನಿನ್ನ ಜ್ಯೂನಿಯರ್ ಆಗಿ' ಎಂದು ಅಕ್ಕ ಇಂದುಮತಿ ಪರಿಚಯಿಸಿದ ಗಳಿಗೆಯಿಂದ ಮೋಡಿಗೊಳಗಾದವನಂತೆ ಅವಳ ಹಿಂದೆ ಮುಂದೆ ಸುತ್ತಿದ್ದ.  ಅವಳನ್ನು ಮಾತಾಡಿಸಲು ನೂರೊಂದು ನೆಪ ಹುಡುಕಿದ್ದ.  ಅವನ ಮಾತುಗಳಿಗೆ ಅವಳದು ಕಿರುನಗೆಯ ಪ್ರತಿಕ್ರಿಯೆ.  ಮುಂದಿದ್ದ ಜಡೆಯನ್ನು ಬೆರಳುಗಳಲ್ಲಿ ತಿರುಗಿಸುತ್ತಾ, ವಾರೆಗಣ್ಣಿನಲ್ಲಿ ನೋಡುತ್ತಾ ಅವನ ಎಲ್ಲಾ ಅಸಂಬದ್ಧ ಪ್ರಶ್ನೆಗಳಿಗೂ ಉತ್ತರ ನೀಡಿದ್ದಳು.
ತನ್ನ ಮೇಲೆ ಅವಳಿಗೆ ಆಸಕ್ತಿ ಮೂಡುತ್ತಿದೆ ಎಂದು ಅವನು ಭಾವಿಸುವಷ್ಟರಲ್ಲಿ ಆಘಾತ ತಟ್ಟಿತ್ತು.  ಈ ಸಂಜೆ ಅವನ ವಿಚಿತ್ರ ಪ್ರಶ್ನೆಗಳ ಬುತ್ತಿ ಬರಿದಾಗಿ ಕೈಹಿಸುಕುತ್ತಾ ನಿಂತಾಗ ಸರ್ರನೆ ಅವನ ಹತ್ತಿರ ಸರಿದಿದ್ದಳು.  ಅತ್ತಿತ್ತ ನೋಡಿ ಅವನ ಕಿವಿಯಲ್ಲಿ ಉಸುರಿದ್ದಳು:
`ನೀವೊಂದು ಮೊದ್ದುಮಣಿ.'
ರಾಜೀವನಿಗೆ ಎತ್ತಿ ಕುಕ್ಕಿದಂತಾಗಿತ್ತು.  ಅವನ ನಾಲಿಗೆಯ ಪಸೆ ಆರಿಹೋಗಿತ್ತು.  ಪೆಚ್ಚಾಗಿ ನಿಂತವನತ್ತ ಕೀಟಲೆಯ ನೋಟ ಒಗೆದು ಜಿಂಕೆಯಂತ ಹಾರಿಹೋಗಿದ್ದಳು.  ಆ ಕ್ಷಣದಿಂದ ರಾಜೀವ ಗರಬಡಿದವನಂತಾಗಿಬಿಟ್ಟಿದ್ದ.
ಮೊದ್ದುಮಣಿ!
ಐದು ವರ್ಷಗಳ ಹಿಂದೆ ಕೊಳ್ಳೇಗಾಲದ ಎಂ. ಜಿ. ಎಸ್. ವಿ. ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದಾಗಿನಿಂದ ಬೆನ್ನು ಹತ್ತಿದ್ದ ಶನಿಪದ ಅದು.  ತರಗತಿಯ ಹುಡುಗಿಯರಿಬ್ಬರು ಅವನ ಬಗ್ಗೆ ಖಾಸಗಿಯಾಗಿ ತಮ್ಮ ತಮ್ಮಲ್ಲೇ ಮಾಡಿಕೊಂಡ ಕಾಮೆಂಟ್ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಅದ್ಯಾವ ಮಾಯದಲ್ಲೋ ಇಡೀ ಕಾಲೇಜಿಗೆ ಹರಡಿಬಿಟ್ಟಿತ್ತು.  ಎರಡು ವರ್ಷಗಳ ನಂತರ ಅವನು ಅರ್ಧ ಕಿ. ಮೀ. ದೂರದ ಮಹದೇಶ್ವರ ಕಾಲೇಜಿನಲ್ಲಿ ಬಿ ಎಸ್ಸೀಗೆ ಸೇರಿದಾಗಲೂ ಅವನ ಬೆನ್ನು ಹತ್ತಿ ಬಂದಿತ್ತು ಆ ಅಡ್ಡಹೆಸರು.
ಅವನೇನೂ ಪೆದ್ದು ಹುಡುಗನಲ್ಲ.  ಮ್ಯಾಥಮ್ಯಾಟಿಕ್ಸ್, ಫಿಸಿಕ್ಸ್‌ನಲ್ಲಿ ನೂರಕ್ಕೆ ನೂರು ಅಂಕ ತೆಗೆಯುತ್ತಿದ್ದ ಮೇಧಾವಿ.  ಅಧ್ಯಾಪಕರಿಗೆ ಅವನೆಂದರೆ ಅಚ್ಚುಮೆಚ್ಚು.  ಗೆಳೆಯರಿಗೆ ಅವನ ಬಗ್ಗೆ ಅಗಾಧ ಅಭಿಮಾನ. 
ಆದರೆ ಕಾಲೇಜಿನ ಹುಡುಗಿಯರಿಗೆ...?
ಅವನು ಅದೇ ಮೊದ್ದುಮಣಿ!
ಐದು ವರ್ಷಗಳನ್ನು ಯಾತನೆಯಿಂದ ಕಳೆದಿದ್ದ.  ಕೀಳರಿಮೆಯಿಂದ ನರಳಿದ್ದ.  ಎರಡುವಾರಗಳ ಹಿಂದೆ ಕೊಳ್ಳೇಗಾಲ ತೊರೆದು ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ ಎಸ್ಸೀಗೆ ಸೇರಿದಾಗ ನೆಮ್ಮದಿಯೆನಿಸಿತ್ತು.
ಆದರೆ ಆದದ್ದೇನು?
ಬೆನ್ನು ಬಿಡದ ಭೇತಾಳನಂತೆ ಆ ಶನಿಪದ ಮೈಸೂರಿಗೂ ಬಂದಿತ್ತು!
`ನನ್ನ ಅಡ್ಡಹೆಸರು ಮೊದ್ದುಮಣಿ ಎಂದು ಅವಳಿಗೆ ಹೇಗೆ ತಿಳಿಯಿತು?  ನನ್ನ ಹಣೆಯ ಮೇಲೆ ಹಾಗೆ ಬರೆದಿದೆಯೇ?'
ಅವನು ತಲೆ ಸಿಡಿದುಹೋಗುವಷ್ಟು ಗಾಢವಾದ ಯೋಚನೆಗೆ ಬಿದ್ದಿದ್ದ.  ವಾರದಿಂದ ಪ್ರಯತ್ನಪೂರ್ವಕವಾಗಿ ದೂರವಿರಿಸಿದ್ದ ಕೀಳರಿಮೆ ಏಕಾ‌ಏಕಿ ಧುತ್ತನೆ ಮೇಲೆದ್ದು ಬಂದು ಅವನನ್ನು ಇಡಿಯಾಗಿ ಅಮರಿಕೊಂಡಿತ್ತು.  ಕೂಡಿಸಿಕೊಂಡಿದ್ದ ಉತ್ಸಾಹ ಜರ್ರನೆ ಇಳಿದುಹೋಗಿತ್ತು.  ಅವನೊಳಗಿನ ಯಾತನೆಯನ್ನು ಅರಿಯದ ಇಂದುಮತಿಗೆ ತಮ್ಮನ ಮುಖದಲ್ಲಿ ಹಠಾತ್ತಾಗಿ ಮೂಡಿದ ಪ್ರೇತಕಳೆ ಅಚ್ಚರಿ ತಂದಿತ್ತು.  ಏನಾಯಿತೆಂದು ಕೇಳಲು ಹಿಂಜರಿಕೆಯಾಗಿ ಸುಮ್ಮನಾಗಿದ್ದಳು.
ಕರ್ಕಶವಾಗಿ ಕೇಳಿಬಂದ ಆಟೋರಿಕ್ಷಾದ ಶಬ್ಧ ರಾಜೀವನ ಯೋಚನಾಲಹರಿಯನ್ನು ಭಂಗಿಸಿತು.  ಫಕ್ಕನೆ ಕಣ್ಣು ತೆರೆದ.
ಈ ಸಮಯದಲ್ಲಿ ಬಂದವರಾರು?
ಹತ್ತಿರಾದ ಆಟೋ ಶಬ್ಧ ನಿಧಾನವಾಗಿ ದೂರಾಯಿತು.
ಅಪರಾತ್ರಿಯಲ್ಲಿ ಆಟೋ ಬಂದದ್ದು ನಮ್ಮ ಮನೆಗಲ್ಲ.  ಪಕ್ಕದ ಸುಲೇಖಾಳ ಮನೆಗೆ.
ಅಶೋಕಪುರಂನಿಂದ ಒಂದು-ಒಂದೂವರೆ ಕಿ. ಮೀ. ದೂರದಲ್ಲಿ ಮಹದೇವಪುರ ಹಳ್ಳಿಯ ಹೊರವಲಯದಲ್ಲಿ ಎಲೆತೋಟಗಳು ಮತ್ತು ತೆಂಗಿನ ತೋಪುಗಳ ನಡುವೆ ಇದ್ದದ್ದು ಹೊಸದಾಗಿ ಕಟ್ಟಿದ ಎರಡೇ ಮನೆಗಳು.  ಒಂದು ತನ್ನಕ್ಕ ಇಂದುಮತಿಯದು.  ಇನ್ನೊಂದು ರಂಜನಾಳ ಅಕ್ಕ ಸುಲೇಖಾಳದು.  ಆಟೋ ನಮ್ಮ ಮನೆಗೆ ಬಂದಿಲ್ಲ ಎಂದರೆ ಅದು ಬಂದಿರುವುದು ಸುಲೇಖಾಳ ಮನೆಗೇ...
ಎರಡು ನಿಮಿಷದಲ್ಲಿ ಆಟೋ ಬಂದ ಹಾದಿಯಲ್ಲೇ ಹಿಂದೆ ಸರಿದುಹೋಯಿತು.  ಅದರ ಕಿವಿ ಇರಿಯುವ ಶಬ್ಧ ನಿಧಾನವಾಗಿ ಕಡಿಮೆಯಾಗಿ ಕರಗಿಹೋಗುತ್ತಿದ್ದಂತೇ ಕೇಳಿಬಂದ ಕೂಗಾಟದಿಂದ ಬೆಚ್ಚಿದ ರಾಜೀವ.
ಆವೇಶದಿಂದ ಕೂಗಿದ ಹೆಣ್ಣುದನಿ!
ಬೀಸುವ ಗಾಳಿಗೆ ತೂಗಿದ ತೆಂಗಿನ ಗರಿಗಳ ಮರಮರ ಸದ್ದಿನಲ್ಲಿ ಕೂಗಾಟ ಅಸ್ಪಷ್ಟವಾಗಿಹೋಯಿತು. 
ಯಾರ ದನಿ ಅದು?
ಕಿವಿಗೊಟ್ಟು ಆಲಿಸಿದವನಿಗೆ ಕೇಳಿಬಂದದ್ದು ನೂರು ಅಡಿ ದೂರದ ಮನೆಯಲ್ಲಿ ಏನೋ ಭಾರವಾಗಿ ಬಿದ್ದ ಶಬ್ದ...  ಕಿವಿ ಇರಿಯುವಂತಹ ಚೀತ್ಕಾರ...
ಧಡಕ್ಕನೆ ಎದ್ದು ಕುಳಿತ ರಾಜೀವ.
ವಿಗ್ರಹವಾಗಿ ಕುಳಿತು ಶಬ್ಧಗಳಿಗಾಗಿ ಆಲಿಸಿದವನನ್ನು ಧೀರ್ಘ ಮೌನ ಅಣಕಿಸಿತು.  ಎದ್ದು ಕೋಣೆಯಿಂದ ಹೊರಬಂದು ಇಂದುಮತಿಯ ಕೋಣೆಯೊಳಗೆ ಇಣುಕಿದ.
ಅವಳ ಹಾಸಿಗೆ ಖಾಲಿ!
ಹಾಲ್‌ಗೆ ಬಂದವನು ಬೋಲ್ಟ್ ಹಾಕಿಲ್ಲದ ಮುಂಬಾಗಿಲು ನೋಡಿ ತಲೆ ತುರಿಸಿಕೊಂಡ. 
ಅಕ್ಕ ಈ ಸಮಯದಲ್ಲಿ ಹೊರಗೆ ಯಾಕೆ ಹೋಗಿದ್ದಾಳೆ?  ಯಾವಾಗ ಹೋದಳು?
ಕೇಳಿಬಂದ ಚೀತ್ಕಾರ ಯಾರದು?
ಕಂಪಿಸುತ್ತಿದ್ದ ಕೈಗಳಿಂದ ಪಿಡಿ ತಿರುವಿ ಮುಂಬಾಗಿಲು ತೆರೆದ. 
ಛಳಿಗಾಳಿ ಭರ್ರನೆ ಒಳನುಗ್ಗಿತು.  ಹಿಂದೆಯೇ ಕೇಳಿಬಂತು ಠಳ್ಳನೆ ಗಾಜು ಒಡೆದ ಶಬ್ಧ!
ಮೆಟ್ಟಲಿಳಿದು ಮಾಸಲು ಬೆಳಕಿನಲ್ಲಿ ಸರಸರನೆ ಹೆಜ್ಜೆ ಹಾಕಿದ.  ನಾಲ್ಕು ಮಾರು ನಡೆಯುವಷ್ಟರಲ್ಲಿ ಸುಲೇಖಾಳ ಮನೆಯ ಮುಂದೆ ಸ್ಕೂಟರೊಂದು ಚಾಲನೆಗೊಂಡ ಶಬ್ಧ ಕೇಳಿಬಂತು.  ಮರುಕ್ಷಣ ಮನೆಯ ಎಡಪಕ್ಕದ ರಸ್ತೆ ಸೀಳಿನಲ್ಲಿ ಗಿಡಮರಗಳಾಚೆ ಸ್ಕೂಟರೊಂದು ದೀಪವಿಲ್ಲದೇ ವೇಗವಾಗಿ ಸಾಗಿಹೋದದ್ದು ಅರಿವಿಗೆ ಬಂತು.  ವಾಹನದಲ್ಲಿದ್ದ ವ್ಯಕ್ತಿ ಯಾರೆಂದು, ಅದು ಗಂಡೋ ಅಥವಾ ಹೆಣ್ಣೋ ಎಂದೂ ಸಹ ಗುರುತಿಸಲು ಅವನಿಂದಾಗಲಿಲ್ಲ.  ಏನೊಂದೂ ಅರ್ಥವಾಗದೇ ಸುಮ್ಮನೇ ನಿಂತ.  ತಲೆ ಕಾರ್ಖಾನೆಯಾಯಿತು.
ಎಡಭಾಗದಲ್ಲಿ ಸರಸರ ಹೆಜ್ಜೆಯ ಶಬ್ಧ ಕೇಳಿ ಬೆಚ್ಚಿ ಸರಕ್ಕನೆ ಅತ್ತ ಹೊರಳಿದ.
ತಲೆತಗ್ಗಿಸಿ ವೇಗವಾಗಿ ಹೆಜ್ಜೆ ಹಾಕಿ ನಡೆದು ಬರುತ್ತಿದ್ದ ಹೆಣ್ಣಿನ ಆಕೃತಿ!
ಕತ್ತಲಲ್ಲಿ ಅದು ಯಾರೆಂದು ತಿಳಿಯುವಂತಿರಲಿಲ್ಲ.  ಅವನನ್ನು ಸಮೀಪಿಸಿದ ಹೆಣ್ಣು ಥಟ್ಟನೆ ನಿಂತು ಸರಕ್ಕನೆ ತಲೆಯೆತ್ತಿತು.
"ರಾಜ... ರಾಜೀವ..."
ಕಂಪಿಸುತ್ತಿದ್ದ ದನಿಯ ಗುರುತು ಹತ್ತಿತು ರಾಜೀವನಿಗೆ.
"ಇಂದೂ, ಇಲ್ಲೇನು ಮಾಡ್ತಿದೀಯ?" ಅವಳ ಭುಜ ಹಿಡಿದು ಅಲುಗಿಸಿದ.
ನೈಟಿಯಲ್ಲಿದ್ದ ಇಂದುಮತಿ ಅವನ ಪಕ್ಕ ಸರಿದಳು.  ಅವನ ಕೈ ಹಿಡಿದು ಬಡಬಡಿಸಿದಳು:
"ರಾಜ... ಅಲ್ಲೇನೋ ನಡೀತಾ ಇದೆ ಕಣೋ."
ಅವಳ ದನಿಯಲ್ಲಿದ್ದ ಗಾಬರಿ, ಹೆದರಿಕೆ ರಾಜೀವನ ಎದೆಯಲ್ಲಿ ಭಯದ ಕಂಪನಗಳನ್ನೆಬ್ಬಿಸಿತು.
"ಎಲ್ಲಿ ಇಂದೂ?...  ಏನು ನಡೀತಾ ಇರೋದು?"
"ಅಲ್ಲಿ... ಲೇಖಾ ಮನೇಲಿ."
"ಅದೇನು ವಿವರವಾಗಿ ಹೇಳು."  ದನಿಯಲ್ಲಿ ಕೃತಕ ಧೈರ್ಯ ಕೂಡಿಸಿಕೊಂಡ.
"ಸ್ವಲ್ಪ ಹೊತ್ತಿಗೆ ಮೊದ್ಲು ಸುಲೇಖಾ ಆಟೋದಲ್ಲಿ ಮನೆಗೆ ಬಂದದ್ದನ್ನ ಕಿಟಕಿಯಿಂದ ನೋಡ್ದೆ.  ಒಂದೆರಡು ನಿಮಿಷಗಳಲ್ಲೇ ಅವ್ಳು ಮನೆಯೊಳಗೆ ಯಾರೊಂದಿಗೋ ಕೂಗಾಡೋ ಶಬ್ಧ ಕೇಳಿಸ್ತು.  ಆಕೆ ಚೀರಿದ್ದೂ ಕೇಳಿ ಗಾಬರಿಯಿಂದ ಎದ್ದು ಹೊರಗೋಡಿ ಬಂದೆ.  ನಾನು ಅವಳ ಮನೇ ಹತ್ರ ಹೋಗೋವಷ್ಟರಲ್ಲಿ ಬೆಡ್‌ರೂಂನ ದೀಪ ಆರಿಹೋಯ್ತು.  ಹಿಂದೇನೇ ಗಾಜು ಒಡೆದ ಶಬ್ಧ ಕೇಳಿಸ್ತು.  ಏನಾಗ್ತಿದೆ ಅಂತ ನಂಗೆ ಅರ್ಥ ಆಗ್ಲಿಲ್ಲ.  ಎರಡು ಮೂರು ಸೆಕೆಂಡ್‌ನಲ್ಲಿ ಮನೇ ಮುಂದುಗಡೆ ಯಾರೋ ಸ್ಕೂಟರ್ ಹತ್ತಿ ಹೊರಟುಹೋದ್ರು.  ನಂಗೆ ಭಯ ಆಯ್ತು.  ಹಿಂದಕ್ಕೆ ಓಡ್ಬಂದೆ."  ಒಂದೇ ಉಸಿರಿನಲ್ಲಿ ಹೇಳಿ ಎದೆ ತುಂಬಾ ಗಾಳಿ ಎಳೆದುಕೊಂಡಳು.  "ನಡೀ ರಾಜ, ಹೋಗಿ ನೋಡೋಣ.  ನಂಗ್ಯಾಕೋ ಭಯ ಆಗ್ತಿದೆ."  ಅವನ ಕೈ ಹಿಡಿದು ಬೇಡಿಕೊಂಡಳು.
"ಸರಿ.  ನಡೀ ನೊಡೋಣ."  ರಾಜೀವ ಮೆಲ್ಲಗೆ ಹೆಜ್ಜೆ ಕಿತ್ತ.
ಸುಲೇಖಾಳ ಮನೆಯ ಮುಂಬಾಗಿಲು ತೆರೆದಿದ್ದುದು ಕತ್ತಲಲ್ಲಿ ಕಂಡುಬಂತು.  ಮೆಟ್ಟಲೇರಿ ನಿಂತ ಇಂದುಮತಿ ಮೆಲ್ಲಗೆ ಕರೆದಳು:
"ಲೇಖಾ...  ಲೇಖಾ..."
ಗೆಳತಿಯ ಪ್ರತಿಕ್ರಿಯೆ ಕೇಳಿಬರಲಿಲ್ಲ.
"ಮಿ. ಸಿದ್ಧಾರ್ಥ."  ದನಿಯೆತ್ತರಿಸಿ ಕರೆದಳು.
ಉತ್ತರವಿಲ್ಲ!
ಅಕ್ಕ ತಮ್ಮ ಇಬ್ಬರೂ ನಿಧಾನವಾಗಿ ಒಳಗೆ ಹೆಜ್ಜೆಯಿಟ್ಟರು.
ಮನೆಯ ಪರಿಚಯ ಚೆನ್ನಾಗಿದ್ದ ಇಂದುಮತಿ ಗೋಡೆಯಲ್ಲಿ ಕೈ ಆಡಿಸಿ ದೀಪದ ಸ್ಚಿಚ್ ಒತ್ತಿದಳು. 
ಹರಡಿಕೊಂಡ ಟ್ಯೂಬ್‌ಲೈಟ್‌ನ ಬೆಳಕಿನಲ್ಲಿ ಡ್ರಾಯಿಂಗ್ ರೂಂನ ಎಲ್ಲ ವಸ್ತುಗಳೂ ನಿಚ್ಚಳವಾಗಿ ಗೋಚರಿಸಿದವು.
ಟಿ ವಿ, ವಿ ಸಿ ಡಿ ಪ್ಲೇಯರ್‌ನ ಕ್ಯಾಬಿನೆಟ್.  ಸೋಫಾ ಸೆಟ್, ಆಕರ್ಷಕ ವಸ್ತುಗಳಿಂದ ತುಂಬಿದ್ದ ಷೋಕೇಸ್.   ಮಧ್ಯದ ಚೌಕಾಕಾರದ ಟೀಪಾಯ್ ಮೇಲಿದ್ದ ಆಕರ್ಷಕ ಚೀನಿ ಹೂದಾನಿ- ಎಲ್ಲವೂ ಇದ್ದಂತೇ ಇದ್ದವು.  ಯಾವುದಕ್ಕೂ ಯಾವ ಹಾನಿಯೂ ತಟ್ಟಿರಲಿಲ್ಲ.  ಯಾವುದೇ ಅಹಿತಕರ ಘಟನೆ ನಡೆದ ಕುರುಹೂ ಅಲ್ಲಿರಲಿಲ್ಲ.
ಅಕ್ಕ ತಮ್ಮ ಪರಸ್ಪರ ಮುಖ ನೋಡಿಕೊಂಡರು.
ಇದ್ದಕ್ಕಿದ್ದಂತೆ ಬೆಚ್ಚಿದವಳಂತೆ ಇಂದುಮತಿ ಪಕ್ಕಕ್ಕೆ ಜಿಗಿದಳು.  ಬೆರಗಿನ ನೋಟ ಹೂಡಿದ ರಾಜೀವನಿಗೆ ಉತ್ತರವಾಗಿ ನೆಲದತ್ತ ಬೆರಳು ಮಾಡಿದಳು.
ಡ್ರಾಯಿಂಗ್ ರೂಂಗೆ ಹೊಂದಿಕೊಂಡಂತಿದ್ದ ಡೈನಿಂಗ್ ಹಾಲ್‌ನ ಕಡೆಯಿಂದ ಹರಿದುಬರುತ್ತಿದ್ದ ಎರಡು ಬೆರಳಿನಷ್ಟು ಅಗಲದ ನೀರಿನ ಸೀಳು ಇಂದುಮತಿಯ ಪಾದವನ್ನು ಸ್ಪರ್ಶಿಸಿ ಅವಳನ್ನು ಬೆಚ್ಚಿಸಿತ್ತು.
ಕುತೂಹಲಕ್ಕೊಳಗಾದ ರಾಜೀವ ನೀರಿನತ್ತಲೇ ಬೆರಗಿನ ನೋಟ ಹೂಡಿದ.  ಬಾಗಿಲತ್ತ ಹರಿದುಹೋಗುತ್ತಿದ್ದ ನೀರಿನತ್ತ ಹೆಜ್ಜೆ ಹಾಕಿ ಕಾಲಿನ ಹೆಬ್ಬೆರಳಿನಿಂದ ಸ್ಪರ್ಶಿಸಿದ.
ತಣ್ಣನೆಯ ನೀರು!
ಅದು ಎಲ್ಲಿಂದ ಬರುತ್ತಿದೆ?  ಮನೆಯ ಯಾವ ನಲ್ಲಿಯಿಂದಲೂ ನೀರು ಬೀಳುವ ಶಬ್ಧ ಕೇಳಿಬರುತ್ತಿಲ್ಲ!
ಕಂಪಿಸುವ ದನಿಯಲ್ಲಿ "ಲೇಖಾ ಲೇಖಾ" ಎಂದು ಕರೆಯುತ್ತಾ ಇಂದುಮತಿ ಒಳನಡೆದು ಡೈನಿಂಗ್ ಹಾಲ್‌ನ ದೀಪ ಹೊತ್ತಿಸಿದಳು.
ಅಲ್ಲಿಯೂ ಎಲ್ಲ ವಸ್ತುಗಳೂ ಇದ್ದಂತೆಯೇ ಇದ್ದವು.  ಯಾವುದಕ್ಕೂ ಯಾವ ಹಾನಿಯೂ ಆಗಿರಲಿಲ್ಲ.
ಡೈನಿಂಗ್ ಹಾಲ್‌ಗೆ ಎಡಪಕ್ಕದಲ್ಲಿದ್ದ ಬೆಡ್‌ರೂಂನಿಂದ ಹೊರಬಂದ ನೀರಿನ ಧಾರೆ ಡೈನಿಂಗ್ ಟೇಬಲ್‌ನ ಕೆಳಗೆ ಎರಡು ಭಾಗವಾಗಿ ಸೀಳಿ ಒಂದು ಬಾತ್‌ರೂಂನತ್ತಲೂ, ಇನ್ನೊಂದು ಸಣ್ಣ ಸೀಳು ಡ್ರಾಯಿಂಗ್ ರೂಂನತ್ತಲೂ ಹರಿದುಹೋಗುತ್ತಿತ್ತು.
ಏಕಾ‌ಏಕಿ ತಲೆಯೆತ್ತಿ ಮೂಗು ಅರಳಿಸಿದ ರಾಜೀವ. 
"ಮೀನಿನ ವಾಸನೆ ಬರ್ತಿದೆ ಅಕ್ಕಾ."  ಅವಳತ್ತ ತಿರುಗಿ ಮೆಲ್ಲಗೆ ಅನುಮಾನದ ದನಿ ಹೊರಡಿಸಿದ.
ಮೂಗು ಅರಳಿಸಿ ವಾಸನೆ ಗ್ರಹಿಸಿದ ಇಂದುಮತಿ ಸಮ್ಮತಿಯಿಂದ ತಲೆಯಾಡಿಸಿದಳು.
"ಹೌದು ರಾಜ.  ನೀರು ಮೀನಿನ ತೊಟ್ಟಿಯಿಂದ ಹೊರಗೆ ಹರಿದು ಬರ್ತಾ ಇರೋ ಹಾಗಿದೆ.  ಬೆಡ್‌ರೂಂನಲ್ಲಿದ್ದ ದೊಡ್ಡ ಅಕ್ವೇರಿಯಂ ಒಡೆದಿರಬೇಕು." 
"ಇರಬೇಕು ಇಂದೂ.  ಗಾಜು ಒಡೆದ ಶಬ್ಧ ನಮಗಿಬ್ಬರಿಗೂ ಕೇಳಿಸಿದೆ."  ಅಕ್ಕನ ಮಾತನ್ನು ಅನುಮೋದಿಸಿದ ರಾಜೀವ.
ಇಂದುಮತಿಯ ಕಣ್ಣುಗಳಲ್ಲಿ ಮತ್ತೆ ಗಾಬರಿ ತುಳುಕಿತು.  ನಿಧಾನವಾಗಿ ಬೆಡ್‌ರೂಂನತ್ತ ನಡೆದಳು.  ರಾಜೀವ ಹಿಂಬಾಲಿಸಿದ. 
ಬೆಡ್‌ರೂಂನ ಬಾಗಿಲಲ್ಲಿ ನೀರು ಕೊಳದಂತೆ ಹರಡಿ ನಿಂತಿತ್ತು.  ಎಡಗೈನಿಂದ ನೈಟಿಯನ್ನು ತುಸು ಮೇಲೆತ್ತಿ ಹಿಡಿದು ಇಂದುಮತಿ ಬೆಡ್‌ರೂಂ ಪ್ರವೇಶಿಸಿದಳು.  ಬಾಗಿಲುವಾಡದ ಪಕ್ಕ ಗೋಡೆಯಲ್ಲಿ ಕೈಯಾಡಿಸಿ ಸ್ವಿಚ್ ಒತ್ತಿದಳು.
ಫಕ್ಕನೆ ಹೊತ್ತಿಕೊಂಡ ಎನರ್ಜಿ ಸೇವರ್ ಲ್ಯಾಂಪ್‌ನ ಮಂದ ಬೆಳಕಿನಲ್ಲಿ ಬೆಡ್‌ರೂಂನೊಳಗಿನ ದೃಶ್ಯವನ್ನು ನೋಡಿ ಇಂದುಮತಿ ಚಟ್ಟನೆ ಚೀರಿದಳು.  ಮೊದ್ದುಮಣಿ ರಾಜೀವ ಚೀರುವುದನ್ನು ಮರೆತ.
ಬಿಳುಪು ಸಲ್ವಾರ್, ಗಾಢ ನೀಲೀ ಕಮೀಜ್‌ನಲ್ಲಿದ್ದ ಸುಲೇಖಾಳ ಶರೀರ ಮೂರು ಮಡಿಕೆಯಾಗಿ ನೆಲದ ಮೇಲೆ ಮುದುರಿಬಿದ್ದಿತ್ತು.  ಅಕ್ವೇರಿಯಂನಿಂದ ಹೊರಟ ನೀರು ಅವಳ ದೇಹವನ್ನು ಪೂರ್ಣವಾಗಿ ತೋಯಿಸಿತ್ತು.  ಅವಳ ತಲೆಯ ಹಿಂಭಾಗದಿಂದ ಹೊರಟ ರಕ್ತದ ಧಾರೆ ನೀರಿನಲ್ಲಿ ಉದ್ದಕ್ಕೆ ಕೆಂಪು ಗೆರೆಯೊಂದನ್ನು ಎಳೆದಿತ್ತು.  ಅರ್ಧದವರೆಗೆ ನೀರು ತುಂಬಿದ್ದ ಬಕೆಟ್ ಒಂದು ಗೋಡೆಯ ಪಕ್ಕದಲ್ಲಿತ್ತು.  ಒಂದೂವರೆ ಅಡಿ ಉದ್ದದ ಭಾರದ ಸತುವಿನ ಹೂದಾನಿ ಅಕ್ವೇರಿಯಂನ ಕೆಳಗೆ ನೆಲದ ಮೇಲೆ ಬಿದ್ದಿತ್ತು...  ನೀರಿನಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್ ಹೂಗಳು...  ಅಲ್ಲಲ್ಲಿ ಸತ್ತು ಬಿದ್ದ ಬಣ್ಣದ ಮೀನುಗಳು...  ಕಡಿಮೆಯಾಗುತ್ತಿದ್ದ ನೀರಿನಲ್ಲಿ ಕೆಲವು ಮೀನುಗಳು ಹೊರಳಾಡುತ್ತಾ ಗಾಳಿಗಾಗಿ ಹೋರಾಟ ನಡೆಸಿದ್ದವು.
"ಇದೇನಾಗಿದೆಯೋ ರಾಜ!"  ದಿಗ್ಭ್ರಮೆಗೊಂಡಿದ್ದ ಇಂದುಮತಿ ತಮ್ಮನ ಮುಂಗೈ ಹಿಡಿದಳು.  ಪ್ರತಿಕ್ರಿಯಿಸಲಾರದಷ್ಟು ಆಘಾತಕ್ಕೊಳಗಾಗಿದ್ದ ರಾಜೀವ ಕೋಣೆಯೊಳಗಿನ ದೃಶ್ಯವನ್ನೇ ಬಿಟ್ಟ ಕಣ್ಣು ಬಿಟ್ಟಂತೇ ನೋಡುತ್ತಾ ನಿಂತಿದ್ದ.
ಹೊರಗೆ ಕಾರ್ ಬಂದ ಸದ್ದಾಯಿತು.
ಅವರಿಬ್ಬರಿಗೂ ಪರಿಸ್ಥಿತಿಯ ಅರಿವು ಪೂರ್ಣವಾಗಿ ತಟ್ಟುವಷ್ಟರಲ್ಲಿ ಸುಲೇಖಾಳ ಗಂಡ ಸಿದ್ಧಾರ್ಥನ ಗಾಬರಿಯ ದನಿ ಹೊರಬಾಗಿಲಲ್ಲಿ ಕೇಳಿಬಂತು.
"ಯಾರು... ಯಾರಿದ್ದೀರಿ ಒಳಗೆ?"
ಹಿಂದೆಯೇ ಟಕಟಕ ಬೂಟುಗಾಲಿನ ಶಬ್ಧ ಮಾಡುತ್ತಾ ವೇಗವಾಗಿ ಒಳಬಂದ ಸಿದ್ಧಾರ್ಥ.  ಇವರಿಬ್ಬರನ್ನೂ ನೋಡಿ ಅಚ್ಚರಿಯಿಂದ ಹುಬ್ಬೇರಿಸಿದ.  ಅವರಿಬ್ಬರ ಮುಖಗಳನ್ನೊಮ್ಮೆ, ನೆಲದ ಮೇಲೆ ಹರಿದಿದ್ದ ನೀರನ್ನೊಮ್ಮೆ ನೋಡಿ ಬೆರಗು ಹತ್ತಿದ ದನಿಯಲ್ಲಿ ಪ್ರಶ್ನಿಸಿದ:
"ಇಂದುಮತಿ!  ನೀವಿಲ್ಲಿ!  ಇಲ್ಲೇನು ನಡೀತಾ ಇದೆ?"
ಚೇತರಿಸಿಕೊಂಡಿದ್ದ ಇಂದುಮತಿ ಬೆಡ್‌ರೂಂನತ್ತ ಬೆರಳು ಮಾಡಿದಳು.  ಆತುರವಾಗಿ ಅತ್ತ ನಡೆದ ಸಿದ್ಧಾರ್ಥ.  ಶೂ ಧರಿಸಿದ್ದ ಕಾಲುಗಳು ಒದ್ದೆ ನೆಲದಲ್ಲಿ ಸರ್ರನೆ ಜಾರಿದವು.  ಕೆಳಗೆ ಉರುಳಲಿದ್ದವನನ್ನು ಅಕ್ಕ ತಮ್ಮ ಇಬ್ಬರೂ ಒಂದೊಂದು ತೋಳು ಹಿಡಿದು ನಿಲ್ಲಿಸಿ ಬೆಡ್‌ರೂಂನ ಬಾಗಿಲತ್ತ ನಡೆಸಿದರು.
ಮುದುರಿಬಿದ್ದಿದ್ದ ಶವದತ್ತ ಅಪನಂಬಿಕೆಯ ನೋಟ ಹೂಡಿದ ಸಿದ್ಧಾರ್ಥ.  ರೆಪ್ಪೆಗಳು ಪಟಪಟನೆ ಬಡಿದುಕೊಂಡವು.
"ಲೇಖಿ... ಲೇಖಿ!  ನನ್ ಹೆಂಡ್ತಿ... ಸತ್‌ಹೋಗಿದ್ದಾಳೆ."  ಭಾರವಾಗಿ ಬಂತು ನೋವಿನ ಉದ್ಗಾರ.
ಮರುಕ್ಷಣ ತನ್ನ ತೋಳುಗಳನ್ನು ಹಿಡಿದಿದ್ದ ಅವರಿಬ್ಬರ ಕೈಗಳನ್ನೂ ರಭಸವಾಗಿ ಝಾಡಿಸಿ ಅವರಿಗೆದುರಾಗಿ ನಿಂತ.  ಸೀಳು ಕಂಠದಲ್ಲಿ ಕೂಗುಹಾಕಿದ:
"ನನ್ ಹೆಂಡ್ತೀನ ಕೊಂದುಬಿಟ್ಟಿದ್ದೀರಿ ನೀವಿಬ್ರೂ."

*     *     *

"...ಸುಲೇಖಾ ಆಟೋದಲ್ಲಿ ಬಂದಾಗಿನಿಂದ ಇಲ್ಲೀವರೆಗೆ ನಾ ಕಂಡದ್ದನ್ನೆಲ್ಲಾ ಒಂದೂ ಬಿಡದೇ ಹೇಳಿದ್ದೀನಿ.  ಇದು ಬಿಟ್ರೆ ನಂಗೆ ಇನ್ನೇನೂ ಗೊತ್ತಿಲ್ಲ."  ಕಣ್ಣಿಗೆ ಕರವಸ್ತ್ರ ಒತ್ತಿ ಬಿಕ್ಕಿದಳು ಇಂದುಮತಿ.
"ಶವವನ್ನ ಮೊಟ್ಟಮೊದಲು ನೋಡಿದೋರು ನೀವಿಬ್ಬರು.  ಇದರಿಂದಾಗೀನೇ ನಿಮ್ಮನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಿ ವಿವರ ತಿಳಕೋತಾ ಇದೀನಿ.  ನಿಮಗೆ ತೊಂದ್ರೆ ಕೊಡೋ ಉದ್ದೇಶ ನಂಗಿಲ್ಲ.  ತನಿಖಾಧಿಕಾರಿಯಾದ ನನ್ನ ಜವಾಬ್ದಾರೀನ ಅರ್ಥ ಮಾಡ್ಕೊಂಡು ನಂಗೆ ಸಹಕಾರ ಕೊಡ್ಬೇಕು ನೀವು."  ನೋಟುಬುಕ್ಕಿನಿಂದ ತಲೆಯೆತ್ತಿದ ಸಬ್‌ಇನ್ಸ್‌ಪೆಕ್ಟರ್ ಬಿಳಿಗಿರಿ ಮೃದುದನಿಯಲ್ಲಿ ಹೇಳಿದ.  ಪ್ರತಿಕ್ರಿಯೆಯಾಗಿ ಇಂದುಮತಿಯ ಬಿಕ್ಕುವಿಕೆ ಅಧಿಕವಾಯಿತು.  ಅಧಿಕಾರಿ ಅದೇ ಮೃದುಗಂಭೀರ ದನಿಯಲ್ಲಿ ಮಾತು ಮುಂದುವರೆಸಿದ:
"ನಿಮ್ಮಿಬ್ಬರನ್ನ ಪ್ರಶ್ನೆ ಮಾಡಿದ್ದು ಸಧ್ಯಕ್ಕೆ ಇಷ್ಟು ಸಾಕು.  ಪೋಸ್ಟ್‌ಮಾರ್ಟಂ ಹಾಗೂ ಫೊರೆನ್ಸಿಕ್ ರಿಪೋರ್ಟ್ ಬಂದ ನಂತರ ನಿಮ್ಮನ್ನ ಮತ್ತೆ ಭೇಟಿಯಾಗ್ತೀನಿ.  ಈಗ ಸಮಯ ರಾತ್ರಿ ಎರಡು ಗಂಟೆ ದಾಟಿದೆ.  ನೀವಿಬ್ರೂ ಮನೇಗೆ ಹೋಗಬೋದು.  ನನ್ನ ಅನುಮತಿ ಇಲ್ದೇ ಮೈಸೂರಿನಿಂದ ಹೊರಗೆ ಹೋಗಬಾರದು."
ಕಣ್ಣುಗಳಲ್ಲಿ ಗಾಬರಿ ತುಳುಕಿಸಿದ ರಾಜೀವನ ಭುಜ ತಟ್ಟಿ ನಸುನಕ್ಕು ಹೇಳಿದ:
"ನೀವಿಬ್ರೂ ಈ ಕೊಲೆ ಮಾಡಿದ್ದೀರಿ ಅಂತ ಹೇಳ್ತಾ ಇಲ್ಲ ನಾನು.  ಅಪರಾಧೀನ ಪತ್ತೆ ಹಚ್ಚೋದರಲ್ಲಿ ನಿಮ್ಮಿಬ್ಬರ ಹೇಳಿಕೆ, ಸಹಕಾರ ತುಂಬಾ ಮುಖ್ಯ ನಂಗೆ.  ನಿಮ್ಮನ್ನ ನಾನು ಮತ್ತೆಮತ್ತೆ ಭೇಟಿಯಾಗಬೇಕಾಗುತ್ತೆ.  ಅದರಿಂದಷ್ಟೇ ನೀವು ಮೈಸೂರಿನಲ್ಲೇ ಇರಬೇಕಾದ ಅಗತ್ಯ ನನಗಿದೆ ಅಂತ ಹೇಳ್ತಾ ಇದೀನಿ.  ನೀವಿನ್ನು ಹೊರಡಿ."
ಅಕ್ಕ ತಮ್ಮ ಇಬ್ಬರೂ ಮಾತಿಲ್ಲದೇ ಮೇಲೆದ್ದರು.
ಮನೆಯ ಮೆಟ್ಟಲೇರುತ್ತಿದ್ದಾಗ ಇಂದುಮತಿ ಮತ್ತೆ ಬಿಕ್ಕಿದಳು.
"ಇದೇನಾಗೋಯ್ತೋ ರಾಜ!  ಈಗೇನ್ಮಾಡೋದೋ?  ನಂಗಂತೂ ಏನೂ ತೋಚ್ತಾನೇ ಇಲ್ಲ ಕಣೋ.  ಇವ್ರು ಬೇರೆ ಮನೇಲಿಲ್ಲ."
ರಾಜೀವ ಅವಳ ಭುಜ ತಟ್ಟಿದ.  ತನ್ನೆದೆಯಲ್ಲಿ ಮಡುಗಟ್ಟಿದ್ದ ಆತಂಕವನ್ನು ಮರೆಮಾಡಿ ಧೈರ್ಯದ ಮಾತು ಹೊರಡಿಸಿದ:
"ನೀನೇನೂ ಹೆದರಬೇಡಕ್ಕ.  ನಾವೇನೂ ಕೊಲೆ ಮಾಡಿಲ್ಲವಲ್ಲ?"  ತನ್ನ ಧೈರ್ಯದ ಮಾತುಗಳಿಗೆ ತಾನೇ ಬೆಚ್ಚಿದ.  ಸಾವರಿಸಿಕೊಂಡು ಮೆಲ್ಲಗೆ ಉಸುರಿದ: "ಬೇಕಾದ್ರೆ... ತಕ್ಷಣ ಬನ್ನಿ ಅಂತ ಭಾವಂಗೆ ಫೋನ್ ಮಾಡೋಣ."

ಎದುರಿಗೆ ಕುಳಿತ ಐದೂಮುಕ್ಕಾಲು ಅಡಿ ಎತ್ತರದ, ಪುಷ್ಟ ದೇಹದ, ಕಂಗೆಟ್ಟ ಮುಖದ ಸಿದ್ಧಾರ್ಥನನ್ನೇ ನೇರವಾಗಿ ನೋಡಿದ ಸಬ್‌ಇನ್ಸ್‌ಪೆಕ್ಟರ್ ಬಿಳಿಗಿರಿ.
"ಮಿಸ್ಟರ್ ಸಿದ್ಧಾರ್ಥ, ನನಗೆ ಅನ್ನಿಸೋ ಪ್ರಕಾರ ಭಾರದ ಹೂದಾನಿಯಿಂದ ತಲೆಯ ಹಿಂಭಾಗಕ್ಕೆ ಬಿದ್ದ ಏಟು ತಲೆಬುರುಡೆಯ ಎಲುಬನ್ನ ಸೀಳಿದೆ.  ಮೆದುಳಿನಲ್ಲಾದ ರಕ್ತಸ್ರಾವದಿಂದ ಕೆಲವೇ ಕ್ಷಣಗಳಲ್ಲಿ ನಿಮ್ಮ ಹೆಂಡತಿಯ ಸಾವು ಸಂಭವಿಸಿದೆ."  ಮೌನವಾಗಿ ನೋಡುತ್ತಿದ್ದ ಸಿದ್ಧಾರ್ಥನತ್ತ ಒಮ್ಮೆ ಆಳವಾಗಿ ನೋಡಿ ಪ್ರಶ್ನಿಸಿದ:
"ಯಾರು ಕೊಲೆ ಮಾಡಿರಬೋದು ನಿಮ್ಮ ಹೆಂಡ್ತೀನ?"
ಸಿದ್ಧಾರ್ಥ ಬಾಯಿ ತೆರೆದ.  ಕ್ಷಣ ತಡೆದು ಹೇಳಿದ:
"ಈಗ ಹೋದರಲ್ಲಾ ಅವರಿಬ್ಬರೇ."
ಅಧಿಕಾರಿ ಮುಖ ಮುಂದೆ ತಂದ.
"ಯಾರು, ಶ್ರೀಮತಿ ಇಂದುಮತಿ ಜಗನ್ನಾಥ ಮತ್ತವರ ತಮ್ಮ ರಾಜೀವ ಅವರೇ?"
"ಹೌದು ಅವರೇ."
"ಹೇಗೆ ಹೇಳ್ತೀರಿ?"
ಸಿದ್ಧಾರ್ಥ ಉತ್ತರಿಸಲು ತಡವರಿಸಿದ.  ಅಧಿಕಾರಿಯ ಮುಖದಲ್ಲಿ ಕಿರುನಗೆ ಮಿಂಚಿತು.
"ಇರಲಿ.  ನಿಮ್ಮ ಹೆಂಡತಿಯನ್ನ ಕೊಲ್ಲೋದಿಕ್ಕೆ ಅವರಿಗೆ ಯಾವ ಉದ್ದೇಶ ಇದ್ದಿರಬೋದು?"
ಉತ್ತರಿಸಲು ಯತ್ನಿಸಿದ ಸಿದ್ಧಾರ್ಥ ಮತ್ತೆ ತಡವರಿಸಿದ.  ಪಿಳಿಪಿಳಿ ಕಣ್ಣುಬಿಟ್ಟು ತಲೆ ಕೆಳಗೆ ಹಾಕಿದ.
ಬಿಳಿಗಿರಿಗೆ ಅವನ ಮನದ ಗೊಂದಲ ಅರ್ಥವಾಯಿತು.
ಹೆಂಡತಿಯ ದುರ್ಮರಣ ಅವನನ್ನು ಕಂಗೆಡಿಸಿಬಿಟ್ಟಿದೆ.  ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯವನ್ನು ಅವನು ಕಳೆದುಕೊಂಡಿದ್ದಾನೆ.
ಬಿಳಿಗಿರಿ ಸಿದ್ಧಾರ್ಥನ ಉತ್ತರಕ್ಕಾಗಿ ತಾಳ್ಮೆಯಿಂದ ಕಾದ.
"ನಾನು ಇಲ್ಲಿಗೆ ಬಂದಾಗ ಅವರಿಬ್ರೂ ಇಲ್ಲಿದ್ರು.  ನನ್ನ ಹೆಂಡತಿ ಸತ್ತುಬಿದ್ದಿದ್ಲು."
"ಯೆಸ್.  ಅದನ್ನ ಅವರೂ ಹೇಳಿದ್ದಾರೆ.  ಕೂಗಾಟ, ಚೀರಾಟ ಕೇಳಿ ತಾವಿಲ್ಲಿಗೆ ಬಂದದ್ದು ಅಂತ ಹೇಳ್ತಾರೆ."
ಸಿದ್ಧಾರ್ಥ ಮತ್ತೆ ಮೌನವಾದ.
ಅಧಿಕಾರಿ ಮಾತು ಬದಲಿಸಿದ.
"ಕೈತುಂಬಾ ಸಂಬಳ ಬರೋ ಉದ್ಯೋಗ ನಿಮ್ಮದು.  ಪಕ್ಕದ ಜೆ ಪಿ ನಗರದಂಥಾ ಕಡೆ ಎರಡು ಮೂರು ಸೈಟು ಒಟ್ಟಿಗೆ ಖರೀದಿಸಿ ಬಂಗಲೆ ಕಟ್ಟೋ ಸಾಮರ್ಥ್ಯ ಇದೆ ನಿಮಗೆ.  ಹೀಗಿರೋವಾಗ ಊರ ಹೊರಗಿನ ಈ ಹೊಲಮಾಳದಲ್ಲಿ ಬಂದು ಯಾಕೆ ಮನೆ ಕಟ್ಟಿಕೊಂಡ್ರಿ?"
ಸಿದ್ಧಾರ್ಥನ ಕಣ್ಣುಗಳಲ್ಲಿ ಗಲಿಬಿಲಿ ಕಂಡಿತು.  ಕ್ಷಣದಲ್ಲಿ ಚೇತರಿಸಿಕೊಂಡ.
"ಸಿಟಿಯ ಗದ್ದಲ ನಂಗೆ ಹಿಡಿಸೋದಿಲ್ಲ.  ಪ್ರಶಾಂತವಾದ ಸ್ಥಳದಲ್ಲಿ ಗಿಡಮರಗಳ ನಡುವೆ ಮನೆ ಇರಬೇಕು ಅನ್ನೋನು ನಾನು.  ಗೆಳೆಯ ಜಗನ್ನಾಥನದೂ ಅದೇ ಸ್ವಭಾವ.  ಇಬ್ರೂ ಸೇರಿ ಒಂದೇಕರೆ ಹೊಲ ತಗೋಂಡು ಅರ್ಧರ್ಧ ಹಂಚಿಕೊಂಡ್ವಿ.  ನಮ್ಮೆರಡು ಮನೆಗಳನ್ನ ಕಟ್ಟಿ ಇನ್ನೂ ಆರು ತಿಂಗಳು ಆಗಿಲ್ಲ." 
"ಗುಡ್.  ಇಂಥಾ ಕಡೆ ಮನೆ ಮಾಡಬೇಕು ಅಂತ ನನ್ನ ಹೆಂಡ್ತಿ ಸಹಾ ಹೇಳ್ತಾ ಇರ್‍ತಾಳೆ."  ತುಸು ತಡೆದು ಮುಂದುವರೆಸಿದ: "ಇಂಥಾ ಕಡೆ ಕಳ್ಳತನ ಜಾಸ್ತಿ ಅಲ್ಲವಾ?"
"ಇಲ್ಲ ಹಾಗೇನಿಲ್ಲ.  ನಮ್ಮ ಎಚ್ಚರಿಕೇಲಿ ನಾವಿದ್ರೆ ಹಾಗೇನೂ ಆಗೋದಿಲ್ಲ.  ಆ ಕಡೆ ಪಕ್ಕದಲ್ಲೇ ಮಹದೇವಪುರ ಇದೆ.  ಎಡಕ್ಕೆ ಮಾನಂದವಾಡಿ ರಸ್ತೇನಲ್ಲಿ ಯಾವಾಗ್ಲೂ ಸಂಚಾರ ಇರತ್ತೆ."
ಅಧಿಕಾರಿ ಮತ್ತೊಮ್ಮೆ ಏಕಾ‌ಏಕಿ ವಿಷಯ ಬದಲಾಯಿಸಿದ.
"ನಿಮ್ಮ ಹೆಂಡ್ತಿ ಮಡಿಕೇರಿಗೆ ಹೋಗಿದ್ರು ಅಂತ ಶ್ರೀಮತಿ ಜಗನ್ನಾಥ ಹೇಳಿದ್ರು."
"ಹೌದು."  ತಲೆಯಾಡಿಸಿದ ಸಿದ್ಧಾರ್ಥ.
"ಅವರು ಮಡಿಕೇರಿಗೆ ಹೋದದ್ದು ಯಾವಾಗ?"
"ನಿನ್ನೆ ಬೆಳಿಗ್ಗೆ.  ಹಿಂತಿರುಗೋದು ನಾಲ್ಕು ದಿನ ಆಗುತ್ತೆ ಅಂತ ಹೇಳಿದ್ಲು."
"ಯಾಕೆ ಹೋದದ್ದು?"
"ಅವಳ ಕಾಲೇಜ್ ಗೆಳತಿಯೊಬ್ಬಳಿಗೆ ಕ್ಯಾನ್ಸರ್ ಆಗಿ ಆಪರೇಷನ್ ಆಗಿದೆಯಂತೆ.  ನೋಡೋದಿಕ್ಕೆ ಅಂತ ಹೋದ್ಲು."
"ನಾಲ್ಕು ದಿನಗಳಾದ ಮೇಲೆ ಹಿಂತಿರುಗ್ತೀನಿ ಅಂತ ಹೇಳಿ ಹೋದೋರು ಮಾರನೇ ದಿನದ ರಾತ್ರಿಯೇ ವಾಪಸ್ ಬಂದಿದ್ದಾರೆ ಅಲ್ವೇ?"
"ಹೌದು."  ಸಿದ್ಧಾರ್ಥನ ಕಣ್ಣುಗಳು ಕಿರಿದುಗೊಂಡವು.  ದನಿ ಕುಗ್ಗಿತ್ತು.
ಅಧಿಕಾರಿ ನೋಟುಬುಕ್ಕಿನಲ್ಲಿ ಚಕಚಕನೆ ಪೆನ್ ಓಡಿಸಿದ.  ನಿಮಿಷಗಳ ನಂತರ ತಲೆಯೆತ್ತಿ ಪ್ರಶ್ನಿಸಿದ:
"ಈವತ್ತೇ ಹಿಂತಿರುಗ್ತೀನಿ ಅಂತ ಅವರು ನಿಮಗೆ ಫೋನ್ ಮಾಡಿ ತಿಳಿಸಿರಬೇಕಲ್ಲ?"
"ಇಲ್ಲ ತಿಳಿಸ್ಲಿಲ್ಲ.  ಈವತ್ತೇ ಹಿಂತಿರುಗ್ತಾಳೆ ಅಂತ ನಂಗೆ ಗೊತ್ತಿರ್ಲಿಲ್ಲ."
"ಐ ಸೀ!  ನಿಮಗೆ ಸರ್‌ಪ್ರೈಸ್ ಮಾಡೋ ಉದ್ದೇಶ ಅವರಿಗಿದ್ದಿರಬೇಕು."  ಅಧಿಕಾರಿ ಸಿದ್ಧಾರ್ಥನ ಕಣ್ಣುಗಳನ್ನೇ ತೀಕ್ಷ್ಣವಾಗಿ ನಿರುಕಿಸಿದ.
"ಇರಬೋದು.  ನಂಗೆ ಗೊತ್ತಿಲ್ಲ."  ದನಿ ಶಿಥಿಲವಾಗಿತ್ತು.  ತಲೆ ತಗ್ಗಿಸಿದ ಸಿದ್ಧಾರ್ಥ.  ಬಿಳಿಗಿರಿ ಮಾತು ಮುಂದುವರೆಸಿದ:
"ಅವರು ಮನೆ ಸೇರಿದ ಒಂದೆರಡು ನಿಮಿಷಗಳಲ್ಲೇ ಮನೆಯೊಳಗಿಂದ ಕೂಗಾಟ, ಚೀತ್ಕಾರ ಕೇಳಿಬಂತು ಅಂತ ಶ್ರೀಮತಿ ಜಗನ್ನಾಥ ಹೇಳ್ತಾರೆ.  ಅವರ ಮಾತನ್ನ ರಾಜೀವ ಅನುಮೋದಿಸ್ತಾರೆ.  ಇದರರ್ಥ ನಿಮ್ಮ ಹೆಂಡತಿ ಇಲ್ಲಿಗೆ ಬರೋದಕ್ಕೂ ಮುಂಚೆ ಮನೆ ಒಳಗೆ ಯಾರೋ ಇದ್ರು.  ಆ ವ್ಯಕ್ತಿಗೂ ನಿಮ್ಮ ಹೆಂಡತಿಗೂ ವಾಗ್ವಾದ, ಘರ್ಷಣೆ ಆಗಿದೆ.  ಅದು ವಿಪರೀತಕ್ಕೆ ಹೋಗಿ ಆ ವ್ಯಕ್ತಿ ನಿಮ್ಮ ಹೆಂಡತಿ ತಲೆಗೆ ಹೂದಾನಿಯಿಂದ ಹೊಡೆದು ಕೊಂದಿದೆ.  ನಂತರ ಸ್ಕೂಟರ್ ಹತ್ತಿ ಪರಾರಿ ಆಗಿದೆ."
ಸಿದ್ಧಾರ್ಥನ ಮೂಗಿನ ಹೊಳ್ಳೆಗಳು ಅರಳಿಕೊಂಡವು.  ಆವೇಶದಿಂದ ಬುಸುಗುಟ್ಟಿದ:
"ನೀವು ಅವರಿಬ್ಬರ ಮಾತುಗಳನ್ನ ನಂಬಿಬಿಟ್ಟಿದ್ದೀರಿ.  ಆದರೆ ನಾನು ಮೂರ್ಖ ಅಲ್ಲ."
"ಅಂದರೆ ನಾನು ಮೂರ್ಖ ಅಂತಲೇ?"  ಅಧಿಕಾರಿ ನಸುನಕ್ಕ.
ಸಿದ್ಧಾರ್ಥ ತುಟಿ ಕಚ್ಚಿಕೊಂದು ತಲೆ ಕೆಳಗೆ ಹಾಕಿದ.  ತಲೆ ಮೇಲೆತ್ತದೇ ತಗ್ಗಿದ ದನಿಯಲ್ಲಿ ಮಾತು ಹೊರಡಿಸಿದ:
"ನಾನು ಹಾಗೆ ಹೇಳ್ಲಿಲ್ಲ.  ಅವರಿಬ್ಬರ ಮಾತನ್ನ ನಾನು ನಂಬೋದಿಲ್ಲ ಅಂದೆ ಅಷ್ಟೇ.  ಇಂದುಮತಿ ಈ ಸಮಯದಲ್ಲಿ ಎಚ್ಚರವಾಗಿದ್ರು ಅಂತ ನನಗನ್ನಿಸೋದಿಲ್ಲ.  ಆ ಹುಡುಗ ರಾಜೀವ ಪೆದ್ದ.  ನನ್ನ ನಾದಿನಿಯ ಹಿಂದೆ ಬಿದ್ದು ಕಪಿಚೇಷ್ಟೆ ಆಡೋ ಅವಿವೇಕಿ ಅವನು."  ಮಾತು ನಿಲ್ಲಿಸಿ ಉಸಿರೆಳೆದುಕೊಂಡ.  ತನ್ನ ಮಾತುಗಳ ಅಸಂಬದ್ಧತೆಯ ಅರಿವು ತಟ್ಟಿದವನಂತೆ ಮೌನ ತಾಳಿದ.
ಬಿಳಿಗಿರಿ ನಕ್ಕುಬಿಟ್ಟ.  ನಗುತ್ತಲೇ ಪ್ರಶ್ನಿಸಿದ:
"ನಿಮ್ಮ ನಾದಿನಿ ಬಗ್ಗೆ ಹೇಳಿ.  ಏನು ಹೆಸರು?"
ಸಿದ್ಧಾರ್ಥನ ಮುಖ ಕೆಂಪಾಯಿತು.
"ರಂಜನಾ ಅಂತ.  ಅಕ್ಕನ್ನ ನೋಡೋದಿಕ್ಕೆ ಅಂತ ಆಗಾಗ ಇಲ್ಲಿಗೆ ಬರ್ತಾಳೆ."
"ಇರೋದೆಲ್ಲಿ?"
"ಕೃಷ್ಣಮೂರ್ತಿಪುರಂನಲ್ಲಿ.  ನಮ್ಮ ಅತ್ತೆಮಾವನ ಮನೆ ಇರೋದು ಅಲ್ಲೇ."  ಮಾತು ಮುಗಿಸಿ ಮುಂದಿನ ಪ್ರಶ್ನೆಗಾಗಿ ಕಾದವನಂತೆ ತಲೆ ಮೇಲೆತ್ತಿದ.
ಅಧಿಕಾರಿ ಮತ್ತೆ ವಿಷಯಾಂತರಿಸಿದ.
"ನಿಮ್ಮ ಹೆಂಡತಿ ಮನೆ ಸೇರೋದಕ್ಕೂ ಮೊದ್ಲೇ ಇಲ್ಲಿ ಯಾರೋ ಸೇರಿದ್ರು ಅಂತ ನಾನು ಹೇಳ್ತಾ ಇದ್ದೆ.  ಆ ವ್ಯಕ್ತಿ ಕಳ್ಳನೇ ಆಗಿರಬೋದು.  ಮನೇಲಿ ಯಾರೂ ಇಲ್ಲದ್ದನ್ನ ನೋಡಿ ಅವ್ನು ಒಳಗೆ ನುಗ್ಗಿರಬೋದು.  ಆದ್ರೆ ನಿಮ್ಮ ಹೆಂಡತಿಯ ಅನಿರೀಕ್ಷಿತ ಆಗಮನದಿಂದಾಗಿ ಅವನ ಕೆಲಸಕ್ಕೆ ಅಡಚಣೆ ಉಂಟಾಗಿದೆ."  ಮಾತು ನಿಲ್ಲಿಸಿ ಮತ್ತೊಮ್ಮೆ ಸಿದ್ಧಾರ್ಥನ ಕಣ್ಣಲ್ಲಿ ಕಣ್ಣಿಟ್ಟ.
ಸಿದ್ಧಾರ್ಥ ಮೌನ ತಾಳಿದ.  ಬಿಳಿಗಿರಿ ಮುಂದುವರೆಸಿದ:
"ಹಾಗೇ ಆಗಿದೆ ಅಂತ ನಿಖರವಾಗಿ ಹೇಳ್ತಾ ಇಲ್ಲ ನಾನು.  ಹಾಗೆ ಆಗಿರಬೋದು ಅಂತ ಸಧ್ಯಕ್ಕೆ ಊಹೆ ಮಾಡೋಣ.  ನಿಮ್ಮ ಮನೇಲಿ ಏನಾದ್ರೂ ಕಳ್ಳತನ ಆಗಿದೆಯಾ ನೋಡಿ ಹೇಳಿ."  ಮೇಲೆದ್ದ.
ಸಿದ್ಧಾರ್ಥ ನಿಧಾನವಾಗಿ ಮೇಲೆದ್ದು ನಿಂತ.  ಅವನು ಒಂದೊಂದು ಕೋಣೆಗೂ ಹೋಗಿ ಪರಿಶೀಲಿಸಿದಾಗಲೂ ಅಧಿಕಾರಿ ಅವನ ಹಿಂದೆಯೇ ಇದ್ದ.
ಹದಿನೈದು ನಿಮಿಷಗಳ ನಂತರ ಸಿದ್ಧಾರ್ಥ ಮೆಲುದನಿಯಲ್ಲಿ ಹೇಳಿದ:
"ಏನೂ ಕಳುವಾಗಿಲ್ಲ."
"ನಿಖರವಾಗಿ ಹೇಳ್ತೀರಾ?"
"ಹ್ಞೂಂ."  ಸ್ಪಷ್ಟವಾಗಿ ಬಂತು ಉತ್ತರ.
"ಅಂದರೆ ಕೊಲೆಯ ಉದ್ದೇಶ ದರೋಡೆ ಅಲ್ಲ."
ಅಧಿಕಾರಿಯ ಮಾತಿಗೆ ಸಿದ್ಧಾರ್ಥನದು ಮೌನದ ಪ್ರತಿಕ್ರಿಯೆ.  ನಿಮಿಷದ ಮೌನವನ್ನು ಅಧಿಕಾರಿಯೇ ಮುರಿದ.
"ಯಾವುದಾದ್ರೂ ವೈಯುಕ್ತಿಕ ದ್ವೇಷ?"
"ನಂಗೊತ್ತಿಲ್ಲಾ."  ಸಿದ್ಧಾರ್ಥ ಹತಾಶೆಯಿಂದ ಹಣೆಗೆ ಕೈ‌ಒತ್ತಿದ.
ಅವನನ್ನೇ ಒಂದೆರಡು ಕ್ಷಣ ತೀಕ್ಷ್ಣವಾಗಿ ನೋಡಿದ ಬಿಳಿಗಿರಿ ಸ್ಪಷ್ಟವಾಗಿ ಹೇಳಿದ:
"ನಾನು ಸ್ವಲ್ಪ ತನಿಖೆ ನಡೆಸಬೇಕಾಗಿದೆ.  ನೀವು ಡ್ರಾಯಿಂಗ್ ರೂಂನ ಸೋಫಾದಲ್ಲಿ ಕೂತು ರೆಸ್ಟ್ ತಗೋಳಿ.  ನನ್ನ ಅನುಮತಿ ಇಲ್ಲದೇ ನೀವು ಆ ಸ್ಥಳದಿಂದ ಕದಲಕೂಡದು."
ಅಧಿಕಾರಿಯನ್ನೇ ಆತಂಕದಿಂದ ನೋಡಿದ ಸಿದ್ಧಾರ್ಥ.

*     *     *

ಪರಿಶೋಧನೆ ಮುಗಿಸಿ, ಫೋಟೋ ತೆಗೆಸಿ, ಬೆರಳಗುರುತುಗಳಿಗಾಗಿ ಹುಡುಕಾಟ ನಡೆಸಿ, ಶವವನ್ನ ಪೋಸ್ಟ್‌ಮಾರ್ಟಂಗೆ, ಹೂದಾನಿಯನ್ನ ಫೊರೆನ್ಸಿಕ್ ಟೆಸ್ಟ್‌ಗೆ ಕಳಿಸಿ, ಕೊಲೆ ನಡೆದ ಬೆಡ್‌ರೂಮನ್ನ ಸೀಲ್ ಮಾಡಿ, ಇಬ್ಬರು ಪೇದೆಗಳನ್ನ ಅಲ್ಲಿ ಕಾವಲಿರಿಸಿ ಎಸ್ ಐ ಬಿಳಿಗಿರಿ ಹೆಡ್‌ಕಾನ್ಸ್‌ಟೇಬಲ್ ಗೂಳಯ್ಯನೊಡನೆ ಸ್ಟೇಷನ್‌ಗೆ ಹೊರಟಾಗ ಸಮಯ ಬೆಳಗಿನ ಐದು ಗಂಟೆ.
"ಅದೇನು ನಿಮ್ಮ ಕೈನಲ್ಲಿ?"  ಜೀಪ್‌ನಲ್ಲಿ ಕೂರುತ್ತಿದ್ದಂತೇ ಗೂಳಯ್ಯ ಅಧಿಕಾರಿಯ ಕೈನಲ್ಲಿದ್ದ ಪಾಲಿಥೀನ್ ಕವರ್‌ನತ್ತ ಬೆರಳು ಮಾಡಿದ.
"ಆಯಮ್ಮನ ಡೈರಿ.  ಹುಡುಕಾಡೋವಾಗ ಅವಳ ಕೈಚೀಲದಲ್ಲಿ ಸಿಕ್ತು.  ಓದಿದ್ರೆ ಏನಾದ್ರೂ ಸ್ವಾರಸ್ಯಕರವಾದದ್ದು, ನಮಗೆ ಉಪಯೋಗವಾಗುವಂಥಾದ್ದು ಸಿಗಬೋದೇನೋ ಅಂತ ಎತ್ತಿಕೊಂಡಿದ್ದೀನಿ ಅಷ್ಟೇ."
"ನಮಗೆ ಉಪಯೋಗಕ್ಕೆ ಬರೋವಂಥಾದ್ದು ಅಲ್ಲೇನು ಸಿಗುತ್ತೆ?  ಸತ್ತಮೇಲೆ ಸಾಯಿಸಿದವನ ವಿವರಾನ್ನ ಡೈರೀಲಿ ಬರೆದಿದ್ದಾಳಾ?"  ಕೀಟಲೆಯ ದನಿ ಎಳೆದ ಗೂಳಯ್ಯ.
ಗೂಳಯ್ಯನ ಸ್ವಭಾವದ ಪರಿಚಯವಿದ್ದ ಬಿಳಿಗಿರಿ ಅವನ ಮಾತಿನತ್ತ ಗಮನ ನೀಡದೇ ತನ್ನ ಮಾತು ಮುಂದುವರೆಸಿದ:
"ಇದೇನು ವಿಚಿತ್ರ ಗೂಳಯ್ಯ!  ಮನೇಲಿ ಒಂದು ಸಾಮಾನೂ ಕಳುವಾಗಿಲ್ಲ.  ದರೋಡೆಯ ಪ್ರಯತ್ನವೇ ನಡೆದಿಲ್ಲ.  ಆಯಮ್ಮನ ಮೈಮೇಲಿದ್ದ ಆಭರಣಗಳೆಲ್ಲಾ ಹಾಗೇ ಇವೆ.  ಮನೇಗೆ ಬಂದ ಐದಾರು ನಿಮಿಷಗಳಲ್ಲಿ ಕೊಲೆಯಾಗಿಹೋಗಿದ್ದಾಳೆ.  ನಿಂಗೇನನ್ಸುತ್ತೆ ಗೂಳಯ್ಯ?"
ಗೂಳಯ್ಯ ಒಮ್ಮೆ ಕೆಮ್ಮಿ ಕೇಕರಿಸಿ ಬಾಯಿ ತೆರೆದ:
"ಅರ್ಧ ಪತ್ತೇದಾರಿ ಮುಗಿದುಹೋಗಿದೆ ಸಾರ್."
ಬಿಳಿಗಿರಿ ಬೆಚ್ಚಿಬಿದ್ದ.  ಮುಂದಕ್ಕೆ ಬಾಗಿ ಪ್ರಶ್ನೆ ಹಾಕಿದ:
"ಏನಯ್ಯ ಹಾಗಂದ್ರೆ?  ಏನು ಪತ್ತೆ ಮಾಡಿದ್ದೀಯ ನೀನು?"
"ಆಯಮ್ಮನ ಕೊಲೆ ಮಾಡಿರೋದು ಒಂದು ಹೆಂಗ್ಸು ಸಾರ್."
ಅಧಿಕಾರಿ ಹಿಂದಕ್ಕೆ ಒರಗಿದ.
"ಹೇಗಯ್ಯ ಹೇಳ್ತೀಯ?  ಏನಾದ್ರೂ ಸುಳಿವು?"  ಅವನಿಗೆ ನಿರಾಸೆಯದಂತಿತ್ತು.
"ಭಾರೀ ಸುಳಿವು ಸಾರ್.  ಅಂಥಾ ಚೆಂದೊಳ್ಳೀ ಹೆಂಗ್ಸನ್ನ ಕೊಲೆ ಮಾಡೋದಿಕ್ಕೆ ಯಾವ ಗಂಡ್ಸಿಗೆ ಮನಸ್ಸು ಬರ್‍ತದೆ ಸಾರ್?  ಅದಕ್ಕೇ ಹೇಳಿದ್ದು ಅವಳನ್ನ ಕೊಂದದ್ದು ಒಂದು ಹೆಂಗ್ಸು ಅಂತ."
ಬಿಳಿಗಿರಿ ಮುಖ ಸಿಂಡರಿಸಿದ್ದು ಗೂಳಯ್ಯನಿಗೆ ಕತ್ತಲಲ್ಲಿ ಕಾಣಿಸಲಿಲ್ಲ.  ತನ್ನ ಮಾತಿನ ಬಂಡಿ ಓಡಿಸಿದ:
"ಸತ್ತು ಮಲಗಿದ್ರೂ ಅದೆಂಥಾ ಕಳೆ ಸಾರ್ ಆಯಮ್ಮನ ಮುಖದಲ್ಲಿ!"
"ಅಯ್ ಸುಮ್ನಿರಯ್ಯ."  ಬಿಳಿಗಿರಿ ಅಸಹನೆಯಿಂದ ಅರಚಿದ.  ಗೂಳಯ್ಯ ಥಟ್ಟನೆ ಮಾತು ನಿಲ್ಲಿಸಿದವನು ಮೆಲ್ಲಗೆ ಉಸುರಿದ:
"ನನ್ ಮಾತು ಅಂದ್ರೆ ಅಸಡ್ಡೆ ನಿಮ್ಗೆ.  ಇರ್‍ಲಿಬಿಡಿ.  ಇನ್ನು ಬಾಯಿ ತೆರೆಯೋದಿಲ್ಲ ಈ ಗುಲಾಮ."

*     *     *


ತನ್ನ ಊಹೆಯನ್ನೇ ಪುಷ್ಟೀಕರಿಸಿದ ಶವಪರೀಕ್ಷೆಯ ಹಾಗೂ ಫೊರೆನ್ಸಿಕ್ ಟೆಸ್ಟ್‌ಗಳ ವರದಿಗಳನ್ನು ನೋಡಿ ಮೂಗು ಅರಳಿಸಿದ ಬಿಳಿಗಿರಿ.  ಬೆಳಗಿನಿಂದ ತನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಗೂಳಯ್ಯನನ್ನು ಕರೆದು ಮಾತು ತೆಗೆದ.
"ನೋಡು ಗೂಳಯ್ಯ, ಮತ್ತೆ ತಿಕ್ಕಲು ಮಾತು ತೆಗೀದೇ ನಾ ಹೇಳೋದನ್ನ ಗಮನವಿಟ್ಟು ಕೇಳ್ಕೊಂಡು ವಿವೇಕಿ ಥರಾ ಯೋಚಿಸಿ ಉತ್ರ ಕೊಡು."
"ಆಯ್ತು ದೇವ್ರೂ.  ಅದೇನು ಹೇಳಿ ಶಿವಾ?"  ಗೂಳಯ್ಯ ನಾಟಕೀಯವಾಗಿ ಕೈಜೋಡಿಸಿ ನಡುಬಾಗಿಸಿ ನಿಂತ. 
"ನಂಗನ್ಸುತ್ತೆ ಈ ಸಿದ್ಧಾರ್ಥನೇ ಕೊಲೆ ಮಾಡಿರೋದು ಅಂತ.  ನಿಂಗೇನನ್ಸುತ್ತೆ?"
"ಹೇಗೆ ಹೇಳ್ತೀರಿ?  ಕೊಲೆಗೆ ಉಪಯೋಗಿಸಿದ ಹೂದಾನಿ ಮೇಲೆ ಅವನ ಬೆರಳಗುರುತಿಲ್ಲ.  ಕೊಲೆ ನಡೆದ ಮೇಲೆ ಅವನು ಮನೆಗೆ ಬಂದದ್ದು ಅಂತ ಒಂದಲ್ಲ ಎರಡು ಸಾಕ್ಷಿಗಳು ಹೇಳುತ್ವೆ."
"ಅದೇ ಬಂದಿರೋದು ತಾಪತ್ರಯ.  ನೀರಲ್ಲಿ ತೋಯ್ದುಹೋದ ಹೂದಾನಿನಲ್ಲಿ ಬೆರಳ ಗುರುತುಗಳು ಅಳಿಸಿಹೋಗಿವೆ.  ಕೊಲೆಗಾರನೇ ಅಳಿಸಿದ್ದರೂ ಇರಬೋದು.  ಗೋಡೇನಲ್ಲಿ ಸ್ವಿಚ್‌ಗಳ ಮೇಲೆ ಸಿಕ್ಕಿರೋದು ಸಿದ್ಧಾರ್ಥನ, ಆಯಮ್ಮ ಇಂದುಮತಿಯ ಬೆರಳ ಗುರುತುಗಳು ಮಾತ್ರ."  ಕ್ಷಣ ತಡೆದು ಸೇರಿಸಿದ: "ನನ್ನ ಒಳಮನಸ್ಸಿಗೆ ಸಿದ್ಧಾರ್ಥನೇ ಅಪರಾಧಿ ಅಂತ ಅನ್ನಿಸ್ತಾ ಇದೆ.  ಅವನ ಮೇಲೆ ಸ್ವಲ್ಪ ನಿಗಾ ಇಡ್ಬೇಕು ನೋಡು."
ಗೂಳಯ್ಯನ ಪ್ರತಿಕ್ರಿಯೆ ಒಡನೇ ಬಂತು:
"ಹಾಗೆ ನೋಡಿದ್ರೆ ಆಯಮ್ಮ ಇಂದುಮತಿ, ಅವಳ ತಮ್ಮ ರಾಜೀವ ಅವರನ್ನೂ ಸಂಶಯಿಸಬಹುದಲ್ಲವೇ ದೇವ್ರೂ?"
ಬಿಳಿಗಿರಿ ಗೂಳಯ್ಯನ ಮುಖವನ್ನೇ ದಿಟ್ಟಿಸಿದ.  ಅವನು ಮತ್ತೆ ತರಲೆ ತೆಗೆಯುತ್ತಿಲ್ಲವಷ್ಟೇ?
ಗೂಳಯ್ಯ ಮುಂದುವರೆಸಿದ:
"ಇಂಥವರೇ ಕೊಲೆ ಮಾಡಿದ್ದಾರೆ ಅಂತ ಒಬ್ಬ ವ್ಯಕ್ತಿಯ ಹಿಂದೆ ಹೋಗೋದು ಬೇಡ.  ನಿಜವಾದ ಕೊಲೆಗಾರ ತಪ್ಪಿಸಿಕೊಂಡಾನು.  ಅನುಮಾನಕ್ಕೆ ಸಿಕ್ಕಿದ ಎಲ್ಲರ ಬೆನ್ನು ಹತ್ತಿ ಹೋಗೋಣ.  ತನಿಖೆ ನಿಧಾನವಾದ್ರೂ ಪರವಾಗಿಲ್ಲ.  ಸರಿಯಾಗಿ ಹೆಜ್ಜೆ ಹಾಕೋಣ."
ನಲವತ್ತಮೂರರ ಹಿರಿಯ ಹೆಡ್‌ಕಾನ್ಸ್‌ಟೇಬಲ್‌ನಿಂದ ಮೂವತ್ತೆರಡರ ಸಬ್‌ಇನ್ಸ್‌ಪೆಕ್ಟರ್‌ಗೆ ಉಪದೇಶ.  ಗೂಳಯ್ಯ ಹುದ್ದೆಯಲ್ಲಿ ಕಿರಿಯ ನಿಜ.  ಆದರೆ ವಯಸ್ಸಿನಲ್ಲಿ, ಅನುಭವದಲ್ಲಿ ಅವನು ಹಿರಿಯ.  ಅವನು ತಿಕ್ಕಲು ಮಾತು ತೆಗೆದು ತಮಾಷೆಯಾಗಿ ಹರಟಿದರೂ ಅವನು ತೋರಿದ ದಾರಿಯಲ್ಲಿ ಸಾಗಿದರೆ ಅಪರಾಧಿ ಸಿಕ್ಕಿಬೀಳುವುದರಲ್ಲಿ ಸಂಶಯವಿಲ್ಲ.  ಇದು ಬಿಳಿಗಿರಿಗೆ ಒಂದಲ್ಲ ಹಲವಾರು ಬಾರಿ ಅನುಭವಕ್ಕೆ ಬಂದಿತ್ತು.
"ಸರಿ ಗೂಳಯ್ಯ.  ಯಾವ ರೀತಿ ಮುಂದುವರಿಯೋಣ?"  ಕಣ್ಣು ಕಿರಿದುಗೊಳಿಸಿ ಪ್ರಶ್ನಿಸಿದ.  ದನಿಯಲ್ಲಿ ಬಾಲಕನ ವಿಧೇಯತೆ ಇಣುಕಿತ್ತು.
"ಇನ್ನೂ ಶುರೂನೇ ಆಗಿಲ್ಲ.  ಮುಂದುವರಿಯೋ ಮಾತಾಡ್ತಾ ಇದೀರಿ ನೀವು."  ಗೂಳಯ್ಯ ಪಕಪಕನೆ ನಕ್ಕುಬಿಟ್ಟ.
ಬಿಳಿಗಿರಿ ಅವಡುಗಚ್ಚಿದ.
ರಾತ್ರಿಯೆಲ್ಲಾ ನಾನು ನಿದ್ದೆಗೆಟ್ಟು ತಾನು ನಡೆಸಿದ ಕೆಲಸಗಳಿಗೆ ಯಾವ ಅರ್ಥವೂ ಇಲ್ಲ ಅನ್ನುವ ಹಾಗೆ ಹೇಳುತ್ತಾ ಇದ್ದಾನಲ್ಲ ಇವನು!
"ಏನಯ್ಯ ಹಾಗಂದ್ರೆ?  ನಾನೇನೂ ಮಾಡಿಯೇ ಇಲ್ಲ ಅಂತೀಯಾ?"
"ಛೆ ನಾನೆಲ್ಲಿ ಹಾಗಂದೆ?  ನೀವು ಸಖತ್ ಕೆಲ್ಸ ಮಾಡಿದ್ದೀರಿ.  ಆದ್ರೆ ಅದ್ರಿಂದ ಈ ಕೇಸ್‍ಗೆ ಯಾವ ಉಪಯೋಗವೂ ಇಲ್ಲ ಅಂದೆ."
"ಏನು ಹೇಳ್ತಿದೀಯ ಗೂಳಯ್ಯ?"  ಬಿಳಿಗಿರಿಯ ದನಿಯಲ್ಲಿ ಕೋಪ ಇಣುಕಿತ್ತು.
"ಕೋಪ ಮಾಡ್ಕೋಬೇಡಿ ದೇವ್ರೂ.  ಸ್ವಲ್ಪ ನನ್ನ ಮಾತು ಕೇಳಿ ಇಲ್ಲಿ.  ಆಯಮ್ಮನ ಡೈರೀನ ಅಷ್ಟೊಂದು ಮುತುವರ್ಜಿಯಿಂದ ಎತ್ಕೊಂಡು ಬಂದ್ರಲ್ಲ, ಅದನ್ನ ಓದಿದ್ರಾ?"
"ಓ ಇಲ್ಲ ಗೂಳಯ್ಯ.  ಅದನ್ನ ಮರೆತೇಬಿಟ್ಟಿದ್ದೆ."  ಕೆನ್ನೆಯ ಮೇಲೆ ಬೆರಳುಗಳಿಂದ ಬಡಿದುಕೊಂಡ.
"ಸರಿಹೋಯ್ತು ಬಿಡಿ.  ಅದನ್ನ ಮಕಮಲ್ಲಿನ ವಸ್ತ್ರದಲ್ಲಿ ಸುತ್ತಿ ತಿರುಪತಿ ತಿಮ್ಮಪ್ಪನ ಫೋಟೋ ಮುಂದೆ ಇಟ್ಟು ಸಾಂಬ್ರಾಣಿ ಹೊಗೆ ಹಾಕಿ ಅಡ್ಡಬೀಳಿ.  ಲಕ್ಷಣವಾಗಿರತ್ತೆ."
ಬಿಳಿಗಿರಿಗೆ ಅವಮಾನವಾದಂತಾಯಿತು.
"ನೀನು ಓದಿಬಿಟ್ಟಿರುವಿಯೇನು?"  ಕೇಳಿದ.
"ಯಾವಾಗಲೋ ಓದಿಯಾಯ್ತು.  ತಾವು ಮಾವಿನ ಮರದ ತಂಪುನೆರಳಲ್ಲಿ ನಿಂತು ಕೆಂಪಮ್ಮನ ಹೋಟೇಲಿನ ಮಸಾಲೆ ಟೀನ ಆಸ್ವಾದಿಸ್ತಾ ಪ್ರಪಂಚ ಮರೆತಿದ್ದಾಗ ನಿಮ್ಮ ಟೇಬಲ್ ಮೇಲೆ ಅನಾಥವಾಗಿ ಬಿದ್ದಿದ್ದ ಅದರ ಮೇಲೆ ಕನಿಕರ ಮೂಡ್ತು.  ಅಯ್ಯೋ ಪಾಪ ಅಂದ್ಕೊಂಡು ಎತ್ಕೊಂಡು ಓದಿಬಿಟ್ಟೆ."  ಬಿಳಿಗಿರಿ ಪ್ರತಿಕ್ರಿಯಿಸುವ ಮೊದಲೇ ಮುಂದಿನ ಮಾತು ಆರಂಭಿಸಿದ: "ಆ ಮನೇಲಿ ಅಷ್ಟೆಲ್ಲಾ ನೋಡಿದ್ರಲ್ಲಾ, ನೀವು ಕಂಡದ್ದು ಏನು?  ಯಾವ ವಸ್ತುವೂ ಕಳುವಾಗಿಲ್ಲ ಅಂದ್ರಲ್ಲ ಅದು ಸರೀನಾ?"
"ಏನು ಕಳುವಾಗಿರೋದು?"  ಛೇಡಿಸುವ ದನಿಯಲ್ಲಿ ಕೇಳಿದ ಬಿಳಿಗಿರಿ.
"ಒಬ್ಬ ಬೀದೀಲಿ ಹೋಗೋ ದಾಸಯ್ಯ ಈ ಪ್ರಶ್ನೆ ಕೇಳಿದ್ರೆ ಒಪ್ಕೋಬೋದು.  ಕೊಲೆ ತನಿಖೆ ನಡೆಸೋ ಸಬ್‌ಇನ್ಸ್‌ಪೆಕ್ಟರ್ ಬಾಯಲ್ಲಿ ಇಂಥಾ ಮಾತು ಬರಬಾರದು."
"ಅಂದ್ರೆ ಈ ಕೆಲಸಕ್ಕೆ ನಾನು ನಾಲಾಯಕ್ ಅಂತಿದೀಯ?"
"ಛೇ ನಾನೆಲ್ಲಿ ಹಾಗಂದೆ?  ಸ್ವಲ್ಪ ಸರಿಯಾಗಿ ಕಣ್ಣುಬಿಟ್ಟು ನೋಡಿ, ವಿವೇಕಿ ಥರಾ ಯೋಚ್ನೆ ಮಾಡಿ ಅಂದೆ."  ಕಿರುನಗೆ ಮಿಂಚಿಸಿದ.
"ನನ್ನ ಮಾತನ್ನ ನನಗೇ ತಿರುಗಿಸ್ತಿದೀಯ!  ಇರಲಿ.  ನೀನೇನು ಕಂಡುಬಿಟ್ಟೆ ಬೊಗಳು."
"ಗೂಳಯ್ಯ ಮತ್ತೊಮ್ಮೆ ಕೇಕರಿಸಿ ಗಂಟಲು ಸರಿಪಡಿಸಿಕೊಂಡ.
"ಆಯಮ್ಮನ್ನ... ಇಲ್ಲಾ ಆಯಮ್ಮನ ಹೆಣಾನ್ನ ನೋಡಿದ್ರಲ್ಲಾ.  ಅದರ ಮೇಲೆ ಇರಬೇಕಾದ್ದೆಲ್ಲಾ ಇತ್ತಾ?"
"ಮೈಮೇಲೆ ಇರಬೇಕಾದ್ದು ಅಂದ್ರೆ...?  ಎಲ್ಲವೂ ಇತ್ತಲ್ಲ ಗೂಳಯ್ಯ?  ನೆಕ್ಲೇಸ್, ಓಲೆ, ಮೂಗುತಿ, ಕೈಬಳೆ..."
"ಅಯ್ ಬಿಡಿ ದೇವ್ರೂ.  ಅವಳ ಬಟ್ಟೆಬರೆ ಬಗ್ಗೆ ಮಾತಾಡಿ."
ಒಮ್ಮೆ ಕಣ್ಣುಮುಚ್ಚಿ ತೆರೆದ ಬಿಳಿಗಿರಿ.
"ಎಲ್ಲವೂ ಇತ್ತಲ್ಲ ಗೂಳಯ್ಯ?"
"ಸರಿಹೋಯ್ತು ಬಿಡಿ.  ನೋಡಿ ದೇವ್ರೂ, ನನ್ ಹೆಂಡ್ತಿ ಅಪ್ಪಟ ಕೊಳ್ಳೇಗಾಲ ಸೀಮೆಯೋಳು.  ನೂರಕ್ಕೆ ನೂರು ವೀಸೆ ಸಿದ್ದಯ್ಯನಪುರದ ಗರತಿ.  ಅವ್ಳು ಯಾವತ್ತೂ ಆ ಸಲ್ವಾರು ಕಮೀಜು ಅನ್ನೋ ಸಾಬರ ಹೆಂಗಸರ ಬಟ್ಟೇನ ಹಾಕ್ಕೊಂಡಿಲ್ಲ."
"ನನ್ ಹೆಂಡ್ತಿ ಹಾಕ್ಕೋತಾಳೆ."  ಮಾತು ಹೊರಹಾಕಿ ತುಟಿ ಕಚ್ಚಿಕೊಂಡ ಬಿಳಿಗಿರಿ.
"ಸಧ್ಯ ಅದನ್ನಾದರೂ ಗಮನಿಸಿದ್ದೀರಲ್ಲ.  ಇರಲಿ, ಅದರ ಬಗ್ಗೆ ಮಾತಾಡಿ ನಿಮ್ಮ ಪಿತ್ಥ ಕೆದರಿಸೋದಿಲ್ಲ ನಾನು.  ನೇರವಾಗಿ ವಿಷಯಕ್ಕೆ ಬರ್‍ತೀನಿ.  ಆ ಡ್ರೆಸ್‌ನಲ್ಲಿ ಏನಿರತ್ತೆ?  ಕೆಳಗೆ ಲಳಲಳ ಅಲ್ಲಾಡೋ ಬಣ್ಣದ ಹೂವಿನ ದೊಗಳೇ ಪ್ಯಾಂಟ್, ಮೇಲೆ ಹಳ್ಳೀಕಡೆ ಹಳೇಕಾಲದ ಮುದುಕಯ್ಯನೋರು ಹಾಕ್ಕೊಳ್ಳೋವಂಥಾ ಮಂಡೀ ಕೆಳಗೆ ಜೋತಾಡೋ ಕಾಲರ್ ಇಲ್ಲದ ದೊಗಳೆ ಶರ್ಟ್‌ನಂಥದು.  ಅದರ ಜತೆಗೆ ಹೆಗಲ ಮೇಲೆ ಸೊಳ್ಳೇಪರದೆಯಂಥದನ್ನ ಹೊದ್ಕೋತಾರೆ ಅಲ್ವಾ?  ಅದ್ರ ಹೆಸ್ರು ಅದೇನೋ ನಂಗೊತ್ತಿಲ್ಲ."
"ಹೌದು.  ಅದನ್ನ ದುಪಟ್ಟಾ ಅಂತಾರೆ."
"ಏನು ದುಪಟ್ಟಾನೋ.  ನಮ್ಮ ಕಡೆ ದುಪ್ಪಟಿ ಅಂದ್ರೆ ಕಂಬಳಿ, ರಗ್ಗು ಅಂತ.  ಇರಲಿ.  ಆಯಮ್ಮನ ಮೈಮೇಲೆ ಆ ದುಪಟ್ಟಾ ಅನ್ನೋದು ಇತ್ತಾ?"
ಬಿಳಿಗಿರಿ ಕಣ್ಣುಮುಚ್ಚಿ ತೆರೆದ.
"ಹೌದಲ್ಲ ಗೂಳಯ್ಯ?  ಅಂಥದೇನು ಇದ್ದಹಾಗೆ ಕಾಣ್ಲಿಲ್ಲ."
"ಅದ್ಯಾಕೆ ಬಳಸು ಮಾತು ಆಡ್ತೀರಿ?  ಇರಲಿಲ್ಲ ಅನ್ನೋ ನನ್ನ ಮಾತನ್ನ ನೇರವಾಗಿ ಒಪ್ಕೊಳ್ಳೋದಿಕ್ಕೆ ಸಂಕೋಚ ಸಾಹೇಬರಿಗೆ."
"ಹಂಗಲ್ಲ ಗೂಳಯ್ಯಾ, ನಾನು ನೆನಪಿಸ್ಕೊಳ್ಳೋದಿಕ್ಕೆ ಪ್ರಯತ್ನಿಸ್ತಾ ಇದೀನಿ...  ನೀನೇಳೋದು ಸರಿ.  ಆಯಮ್ಮನ ಮೈಮೇಲೆ ದುಪಟ್ಟಾ ಇರ್‍ಲಿಲ್ಲ."
"ಹಾಗೆ ಹೇಳಿ.  ಆ ಮನೇಲಿ ಮಾಯವಾಗಿರೋದು ಅದೇ."  ಗೂಳಯ್ಯ ಬೆರಳೆತ್ತಿದ.
"ಗ್ಯಾರಂಟಿಯಾಗಿ ಹೇಗೆ ಹೇಳ್ತೀಯ?  ಕೆಲವು ಹೆಂಗಸರು ದುಪಟ್ಟಾ ಹಾಕ್ಕೊಳ್ಳೋದಿಲ್ಲ."  ಬಿಳಿಗಿರಿ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.
ಗೂಳಯ್ಯನ ಪಕಪಕನೆ ನಕ್ಕುಬಿಟ್ಟ.
"ರಾತ್ರಿ ಆಯಮ್ಮನ್ನ ಕರಕೊಂಡು ಬಂದ ಆಟೋ ಡ್ರೈವರ್ ಬಾಷಾ ಎರಡು ಕಣ್ಣುಗಳಿಂದ್ಲೂ ನೋಡಿದ್ನಂತೆ, ಆಯಮ್ಮನ್ನ ಹೆಗಲ ಮೇಲೆ ಬಿಳೀ ಬಣ್ಣದ ಸೊಳ್ಳೇಪರದೆ ಹಾರಾಡ್ತಾ ಇದ್ದದ್ದನ್ನ."
"ಅವ್ನು ಯಾವಾಗ ಹೇಳ್ದ ನಿಂಗೆ?"
"ಅರ್ಧ ಗಂಟೆ ಮೊದ್ಲು.  ನೀವು ಇದೇ ಬಾತ್‌ರೂಂನಲ್ಲಿ ರಾಗ ಹಾಡ್ಕೊಂಡು ಮಹಾಮಸ್ತಕಾಭಿಷೇಕಕ್ಕೆ ಇಳಿದಿದ್ದಾಗ ನಾನು ಒಂದು ರೌಂಡ್ ಬಸ್‌ಸ್ಟ್ಯಾಂಡ್ ಕಡೆ ಹೋಗಿದ್ದೆ.  ಅಲ್ಲಿ ಆಟೋ ಸ್ಟ್ಯಾಂಡ್‌ನಲ್ಲಿ ರಾತ್ರಿ ಡ್ಯೂಟೀಲಿದ್ದ ನಮ್ಮ ಟ್ರ್ಯಾಫಿಕ್ ಪೋಲೀಸ್ ಅಕ್ಕಿತಿಮ್ಮನ ಪಾಳ್ಯದ ಸೋಮಣ್ಣನ ಕಡತ ನೋಡ್ದೆ.  ಈಯಮ್ಮ ರಾತ್ರಿ ಹನ್ನೊಂದು ಗಂಟೆ ಐವತ್ತನಾಲ್ಕು ನಿಮಿಷಕ್ಕೆ ಬಾಷಾ ಅನ್ನೋನ ಆಟೋ ಹತ್ತಿದಾಳೆ ಅಂತ ಗೊತ್ತಾಯ್ತು.  ಬಾಷಾನ್ನ ಹಿಡಿದು ಕೇಳ್ದಾಗ ಅವನು ಹೇಳಿದ ವಿಷಯ ಅದು."
"ಅರೆ ಗೂಳಯ್ಯ!  ಪರವಾಗಿಲ್ಲವೇ."  ಬಿಳಿಗಿರಿ ಅಗಲವಾಗಿ ಬಾಯಿ ತೆರೆದ.
"ಆ ಜ಼ೂ ಗಾರ್ಡನ್‌ನಲ್ಲಿರೋ ನೀರುಕುದುರೆ ಥರಾ ಬಾಯಿ ತೆರೀಬೇಡಿ ಅಂತ ದಿನಕ್ಕೆ ಹತ್ತು ಸಲವಾದ್ರೂ ಹೇಳ್ತಾನೆ ಇರ್ತೀನಿ.  ನೀವು ಕೇಳೋದಿಲ್ಲ.  ಇರಲಿ, ಆಯಮ್ಮನ ದುಪಟ್ಟಾ ಗಾಯಬ್ ಆಗಿದೆ.  ಇದು ಪ್ರತ್ಯಕ್ಷ ಆಗಿದೆ."  ಹೇಳುತ್ತಾ ಜೇಬಿನಿಂದ ಕಾಗದದ ಪೊಟ್ಟಣವೊಂದನ್ನು ಹೊರತೆಗೆದು ಬಿಳಿಗಿರಿಯ ಮುಂದೆ ಹಿಡಿದ.
ಕುತೂಹಲಗೊಂಡ ಬಿಳಿಗಿರಿ ಸರಕ್ಕನೆ ಅದನ್ನು ಕಿತ್ತುಕೊಂಡು ಬಿಡಿಸಿದ.
ಎರಡು ಚಿನ್ನದ ಬಳೆಗಳು!
"ಇವು ಯಾರವು?  ಎಲ್ಲಿದ್ವು?"  ಬೆರಗಿನ ದನಿ ಹೊರಡಿಸಿದ.
"ಎರಡ್ನೇ ಪ್ರಶ್ನೆಗೆ ಮೊದ್ಲು ಉತ್ರ ಹೇಳ್ತೀನಿ.  ಇವು ನಂಗೆ ಸಿಕ್ಕಿದ್ದು ಬೆಡ್‌ರೂಂನ ಮೂಲೇಲಿದ್ದ ಟೀಪಾಯ್ ಮೇಲೆ.  ನೀವು ಅಲ್ಲೆಲ್ಲಾ ಹುಡುಕಾಡಿದ್ರಿ.  ಇವು ನಿಮ್ಮ ಕಣ್ಣಿಗೆ ಬೀಳ್ಲಿಲ್ಲ.  ಅದು ಮಾಮೂಲಿ ತಾನೆ?  ಇರಲಿ.  ಈಗ ಮೊದಲ್ನೇ ಪ್ರಶ್ನೆಗೆ ಉತ್ರ.  ಇವು ಯಾರವು ಅಂತ ನಂಗೊತ್ತಿಲ್ಲ.  ಒಂದ್ಮಾತು ಮಾತ್ರ ಗ್ಯಾರಂಟಿಯಾಗಿ ಹೇಳಬಲ್ಲೆ.  ಸತ್ತೋದ ಆಯಮ್ಮನದಂತೂ ಅಲ್ಲ."
"ಅಷ್ಟು ಗ್ಯಾರಂಟಿಯಾಗಿ ಹೇಗಯ್ಯ ಹೇಳ್ತೀಯ?"
"ಸತ್ತವಳ ಕೈಗಳು ಸಪೂರ.  ಈ ಬಳೆಗಳ ಸೈಜು ದೊಡ್ಡದು.  ಇದನ್ನ ಆಯಮ್ಮನ ಕೈಗೆ ಹಾಕಿದ್ರೆ ಸರ್ರನೆ ಕಂಕುಳವರೆಗೂ ಜಾರಿ ಹೋಗ್ತವೆ."
"ಅಂದ್ರೆ ಯಾರೋ ತೋರದ ಮೈನ ಹೆಂಗಸಿನದಿರಬೇಕು ಇವು.  ಅವಳ ಗಂಡನ್ನ ಕೇಳಿದ್ರೆ ಗೊತ್ತಾಗಬೋದು."
"ಅದನ್ನ ಮಾಡಿಯಾಯ್ತು.  ಆವಯ್ಯನಿಗೆ ಗೊತ್ತಿಲ್ಲವಂತೆ."  ಸ್ವಲ್ಪ ತಡೆದು ಹೇಳಿದ: "ಒಂದು ಊಹೆ ಮಾಡಿದ್ದೀನಿ."
"ಏನದು?"
"ಇವು ಆಯಮ್ಮ ಇಂದುಮತಿಯ ಕೈಗೆ ಸರಿಯಾಗಿ ಹೊಂದುತ್ವೆ ಅನ್ಸುತ್ತೆ."
"ಅವಳನ್ನ ವಿಚಾರಿಸಬೇಕಾಗಿತ್ತು."
"ಸರಿಯಾಗಿ ಹೇಳಿದ್ರಿ.  ನೀವು ಮಾಡಬೇಕಾದ ಕೆಲಸ ಸ್ವಾಮೀ ಅದೂ."  ತುಂಟ ನಗೆ ಚಿಮ್ಮಿಸಿ ಮಾತು ಸೇರಿಸಿದ:
"ಎಲ್ಲಾನೂ ನಾನೇ ಮಾಡಿದ್ರೆ ನೀವು ಮಾಡೋದೇನನ್ನ?"
ಬಿಳಿಗಿರಿ ದುರುಗುಟ್ಟಿ ನೋಡಿದ.
ಗೂಳಯ್ಯನ ಮುಖದ ನಗೆ ದೊಡ್ಡದಾಯಿತು.
"ನೋಡಿದ್ರಾ, ಹ್ಯಾಗೆ ಬರುತ್ತೆ ಕೋಪ ನಿಮಗೆ!  ತನಿಖೆ ಕೆಲಸಕ್ಕೆ ನಾನೇ ಮುಂದಾಗಿ ಕೈಹಾಕಿದ್ರೆ ಹೇಗೆ?  ನೀವು ಎಸ್ ಐ ಸಾಹೇಬ್ರು.  ಮುಂದೆ ನಿಂತು ಜನಗಳನ್ನ ಪ್ರಶ್ನೆ ಮಾಡೋರು.  ಜಬರ್ದಸ್ತು ತೋರ್‍ಸೋರು.  ನಂದೇನಿದ್ರೂ ನಿಮ್ಮ ಹಿಂದೆ ಕೈ ಕಟ್ಟಿ ನಿಂತ್ಕೊಳ್ಳೋದು.  ಯಾವನಿಗಾದ್ರೂ ಸ್ವಲ್ಪ ರಿಪೇರಿ ಮಾಡು ಅಂತ ನೀವು ಆಜ್ಞೆ ಕೊಟ್ರೆ ಅದನ್ನ ಶಿರಸಾವಹಿಸಿ ಸ್ಟೇಷನ್‌ನ ನಾಲ್ಕು ಗೋಡೆಗಳ ಒಳಗೇ ನೆರವೇರಿಸಿಬಿಡೋದು."  ವಿಶಾಲವಾಗಿ ನಕ್ಕ.
"ನಿಂದು ಯಾವತ್ತೂ ಇದೇ.  ನಡೀ ಆಯಮ್ಮನ್ನ ಕೇಳಿಬಿಡೋಣ."  ಬಿಳಿಗಿರಿ ಅವಸರಿಸಿದ.
"ನಿಧಾನ ನಿಧಾನ.  ಆತುರ ಬೇಡ.  ಆಯಮ್ಮ ಎಲ್ಲಿಗೂ ಓಡಿಹೋಗೋದಿಲ್ಲ.  ಹೋಗಬೇಡ ಅಂತ ನೀವೇ ಆರ್ಡರ್ ಮಾಡಿದ್ದೀರಲ್ಲ?  ಈಗ ಬೇರೆ ಕೆಲವು ಮುಖ್ಯವಾದ ಕೆಲಸಗಳಿಗೆ ಗಮನ ಕೊಡ್ಬೇಕು ಸಾಹೇಬ್ರು."
"ಸರಿ ಅದೇನು ಹೇಳ್ಬಿಡು.  ಹೇಳು ಅಂತ ಇನ್ನೊಂದ್ಸಲ ಹೇಳಿಸ್ಕೊಳ್ದೇ ಎಲ್ಲಾನೂ ಒಂದೇ ಸಾರಿಗೆ ಹೇಳ್ಬಿಡು."  ಬಿಳಿಗಿರಿ ಅಸಹನೆ ತೋರಿದ.
"ಸರಿ ಸರಿ.  ನನ್ನ ಟೇಪ್ ರೆಕಾರ್ಡರನ್ನ ಆನ್ ಮಾಡ್ತೀನಿ.  ಕೇಳಿಸ್ಕೊಳ್ಳಿ."  ಮತ್ತೊಮ್ಮೆ ಕೇಕರಿಸಿ ಶ್ಲೇಷ್ಮವನ್ನು ಗುಳಕ್ಕನೆ ನುಂಗಿ ಹೇಳತೊಡಗಿದ ಗೂಳಯ್ಯ:
"ನಾವು ಆದಷ್ಟು ಬೇಗ ಪತ್ತೆ ಮಾಡಬೇಕಾಗಿರೋ ವಿಷಯಗಳು ನಾಲ್ಕು.  ಒಂದು- ರಾತ್ರಿ ಒಂಬತ್ತು ಗಂಟೆಯಿಂದ ಹನ್ನೆರಡೂವರೆಯವರೆಗೆ ಸಿದ್ಧಾರ್ಥ ಎಲ್ಲೆಲ್ಲಿದ್ದ ಅಂತ ಪತ್ತೆ ಮಾಡೋದು.  ಆ ತಿರುಗಾಲು ತಿಪ್ಪ ಬಸಲಿಂಗನ್ನ ಆ ಕೆಲಸಕ್ಕೆ ಹಾಕಿ.  ಎರಡು- ಕೊಲೆ ಮಾಡಿದ ವ್ಯಕ್ತಿ ಆಯಮ್ಮನ ದುಪಟ್ಟಾನೇ ಯಾಕೆ ಎತ್ಕೊಂಡು ಹೋದ ಅನ್ನೋದಕ್ಕೆ ಕಾರಣ ಕಂಡುಹಿಡೀಬೇಕು.  ಮೂರು- ಯಶಸ್ವಿಯಾಗಿ ಕೊಲೆ ಮಾಡಿದ ನಂತರ ಅಕ್ವೇರಿಯಂ ಒಡೆದು ಹಾಕೋ ತಿಕ್ಕಲು ಬುದ್ಧಿ ಆ ವ್ಯಕ್ತಿಗೆ ಯಾಕೆ ಬಂತು ಅಂತ ಪತ್ತೆ ಮಾಡ್ಬೇಕು.  ಇವೆರಡನ್ನ ನಾನೇ ಮಾಡ್ತೀನಿ.  ನಾಲ್ಕು- ಇಂದುಮತಿಯ ಕೈಬಳೆಗಳು ಆ ಮನೆಯ ಬೆಡ್‌ರೂಂನೊಳಗೆ ಯಾಕೆ ಹೇಗೆ ಬಂದ್ವು ಅಂತ ತಿಳೀಬೇಕು.  ಅದನ್ನ ನೀವು ಮಾಡಿ."
"ಅದೆಲ್ಲಾ ನಂಗೇ ಗೊತ್ತು.  ನೀನೇನೂ ಹೇಳ್ಬೇಕಾಗಿಲ್ಲ."  ಗೊಣಗಿ ಮೇಲೆದ್ದ ಬಿಳಿಗಿರಿ.

*     *     *

"ರಾಜಾ, ನಡಿಯಪ್ಪಾ ಲೇಖಾ ಮನೇಗೆ ಹೋಗಿದ್ದು ಬರೋಣ.  ನಂಗೆ ಒಬ್ಳೇ ಹೋಗೋದಿಕ್ಕೆ ಭಯವಾಗುತ್ತೆ."
ಬೆಪ್ಪು ಬಡೆದಂತೆ ಕುಳಿತಿದ್ದ ರಾಜೀವ ಅಕ್ಕನ ಮಾತು ಕೇಳಿ ಮೌನವಾಗಿ ಮೇಲೆದ್ದ.  ಬೆಳಗಿನಿಂದಲೂ ಪಕ್ಕದ ಮನೆಯಲ್ಲಿ ಯಾರ್‍ಯಾರದೋ ಮಾತುಗಳು, ಅಳು ಕೇಳಿ ಅವನಿಗೂ ಕುತೂಹಲವಾಗಿತ್ತು.  ಒಬ್ಬನೇ ಹೋಗಲು ಹಿಂಜರಿಕೆಯಾಗಿ ಸುಮ್ಮನೆ ಕುಳಿತಿದ್ದ.
"ಲೇಖಾನ ಅಪ್ಪ ಅಮ್ಮ ಬಂದಿರೋ ಹಾಗಿದೆ."  ಮನೆಗೆ ಹತ್ತಿರಾದಂತೆ ಪಿಸುಗುಟ್ಟಿದಳು ಇಂದುಮತಿ.  ಹಳೆಯ ಕಪ್ಪು ಅಂಬಾಸಿಡರ್ ಕಾರಿನ ಗುರುತು ರಾಜೀವನಿಗೂ ಹತ್ತಿತ್ತು.
ಮನೆಯೊಳಗಿಂದ ಹೊರಬಂದ ರಂಜನಾಳನ್ನು ಕಂಡು ಚಕ್ಕನೆ ನಿಂತ ರಾಜೀವ.  ಅವಳು ಅವರಿಬ್ಬರತ್ತ ಒಮ್ಮೆ ಶೂನ್ಯ ನೋಟ ಬೀರಿ ಪಕ್ಕದಲ್ಲಿದ್ದ ಒಬ್ಬ ಗಂಡಸು ಮತ್ತು ಪೋಲೀಸ್ ಪೇದೆಯೊಡನೆ ಮೆಲುದನಿಯಲ್ಲಿ ಮಾತಾಡತೊಡಗಿದಳು.  ಇಂದುಮತಿ ಅವಳನ್ನು ಸಮೀಪಿಸಿದಳು.
ರಾಜೀವ ನಿಂತಲ್ಲೇ ನಿಂತ.  ಅಕ್ಕನನ್ನು ಹಿಂಬಾಲಿಸಲು ಯಾಕೋ ಹಿಂಜರಿಕೆಯಾಗಿ ಹಿಂದೆ ತಿರುಗಿದ.
"ಏ ಮೊದ್ದುಮಣಿ."
ಕರೆ ಕೇಳಿ ಗಕ್ಕನೆ ನಿಂತ.
ಅದು ರಂಜನಾಳ ದನಿಯಲ್ಲ!  ಯಾವುದೋ ಗಡಸು ಗಂಡುದನಿ!  ಎಲ್ಲೋ ಕೇಳಿದ ಹಾಗಿದೆ!
ನಾಚಿಕೆಯಿಂದ ಹಿಡಿಯಾಗಿಹೋದ ಶರೀರವನ್ನು ಬಲವಂತವಾಗಿ ಹೊರಳಿಸಿದ.
ಖಾಕಿ ಉಡುಪಿನಲ್ಲಿದ್ದ ಮಿರಿಮಿರಿಗುಟ್ಟುವ ಕಪ್ಪು ದೇಹ, ನರೆಯುತ್ತಿದ್ದ ಗಿರಿಜಾಮೀಸೆಯ ಕೆಳಗೆ ಫಳಕ್ಕನೆ ಮಿನುಗಿದ ಬಿಳುಪು ಹಲ್ಲುಗಳು.  ವ್ಯಕ್ತಿ ಗುರುತಿಗೆ ಸಿಕ್ಕಿದ.
"ಓಹ್ ಗೂಳಮಾವ!"  ಉದ್ಗಾರ ತಾನಾಗಿಯೇ ಹೊರಬಂತು.
ಕೊಳ್ಳೇಗಾಲದ ಶಾಲೆ ಕಾಲೇಜುಗಳಲ್ಲಿ ಪೂರ್ತಿ ಹದಿನೈದು ವರ್ಷಗಳ ಸಹಪಾಠಿ ನಾರಾಯಣನ ಸೋದರಮಾವ ಗೂಳಯ್ಯ.  ನಾರಾಯಣನಿಗೆ ಅವನು ಪ್ರೀತಿಯ ಗೂಳಮಾವ.  ಅದನ್ನು ಕಂಡು ರಾಜೀವನೂ ಹಾಗೇ ಕರೆಯತೊಡಗಿದ್ದ.  ಗೂಳಯ್ಯ ಅವನನ್ನು ಅಕ್ಕರೆಯಿಂದ ಮೊದ್ದುಮಣಿ ಎಂದು ಕೂಗುತ್ತಿದ್ದ.
ಅವನೀಗ ಇಲ್ಲಿ!
ಅಲ್ಲದೇ ನನ್ನ ಅಡ್ಡ ಹೆಸರನ್ನು ಹೀಗೆ ಹೊಸಬರೆದುರು ಜಗಜ್ಜಾಹೀರು ಮಾಡಿಬಿಡುವುದೇ?
ರಾಜೀವ ಅಳುಕುತ್ತಲೇ ಸುತ್ತಲಿದ್ದವರತ್ತ ನೋಡಿದ.
ಅವರೆಲ್ಲರ ಮುಖಗಳಲ್ಲಿ ನಸುನಗೆ ಮಿಂಚಿದಂತಿದೆ!
ಮೊದ್ದುಮಣಿ ಭೂಮಿಗಿಳಿದುಹೋಯಿತು.
ಪ್ರತಿಕ್ರಿಯಿಸಲು ತೋಚದೇ ಬೊಂಬೆಯಂತೆ ನಿಂತವನ ಭುಜ ತಟ್ಟಿದ ಗೂಳಯ್ಯ.
"ಯಾಕಯ್ಯ ಹೆದರಿಬಿಟ್ಟೆ?  ನನ್ ಗುರ್‍ತು ಸಿಗ್ಲಿಲ್ವಾ?"
ದನಿಯಲ್ಲಿ ಅದೇ ಹಳೆಯ ಸಲಿಗೆ, ಪ್ರೀತಿ.
"ಗೂ... ಗೂಳ... ಗೂಳಮಾವ!  ನೀನು ಇಲ್ಲಿ!"  ಬೆರಗಿನ ಪಿಸುಗು ಉದ್ಗಾರ.
"ಹೌದಯ್ಯ ನಾನೇ.  ನಂಗೆ ಮೈಸೂರಿಗೆ ಟ್ರ್ಯಾನ್ಸ್‌ಫರ್ ಆಗಿ ಎರಡು ವರ್ಷ ಆಯ್ತು.  ಮರೆತುಬಿಟ್ಟೆಯಾ?  ಇಲ್ಲೇ ಅಶೋಕಪುರಂ ಪೋಲೀಸ್ ಸ್ಟೇಷನ್‌ನಲ್ಲಿದ್ದೀನಿ."  ಬಿಳುಪು ಹಲ್ಲುಗಳನ್ನು ಮತ್ತೊಮ್ಮೆ ಮಿನುಗಿಸಿದ.
"ಹ್ಞೂಂ ಹ್ಞೂಂ.  ನೆನಪಾಯ್ತು ಗೂಳಮಾವ.  ಮರೆತೇಬಿಟ್ಟಿದ್ದೆ.  ನಗಲು ಪ್ರಯಾಸದ ಪ್ರಯತ್ನ ನಡೆಸಿದ ರಾಜೀವ.
"ನಾನು ನಿನ್ನನ್ನ ನಿನ್ನೆ ರಾತ್ರೀನೇ ನೋಡ್ದೆ ಕಣಯ್ಯ ಮೊದ್ದುಮಣೀ.  ಆದ್ರೆ ಆಗ ನೀನಿದ್ದ ಸ್ಥಿತೀಲಿ ನಿನ್ನನ್ನ ಮಾತಾಡಿಸೋದು ಸರಿಯಲ್ಲ ಅನ್ನಿಸ್ತು."
"ಹೌದು ಗೂಳಮಾವ.  ನಂಗೆ ತುಂಬಾ ಹೆದ್ರಿಕೆ ಆಗ್ಹೋಗಿತ್ತು.  ಇನ್ನೂ ಹೋಗಿಲ್ಲ ಅದು."
"ನಿನ್ನ ಮುಖ ನೋಡಿದ್ರೇ ಅದು ಗೊತ್ತಾಗುತ್ತೆ.  ಇರಲಿ, ನೀನು ಇಲ್ಲಿಗೆ ಯಾವಾಗ ಬಂದೆ ಮೊದ್ದುಮಣಿ?"
`ಯಾರ್‍ಯಾರೋ ಹೊಸಬರ ಎದುರು ಮೊದ್ದುಮಣಿ ಎಂದು ಕರೆದು ನನ್ನನ್ನು ಅವಮಾನಿಸಬೇಡ' ಎಂದು ಹೇಳಬೇಕೆನಿಸಿತು.  ಆದರೆ ಹೇಳಲಾರದೇಹೋದ.
"ಗಂಗೋತ್ರಿಗೆ ಸೇರಿದ್ದೀನಿ ಗೂಳಮಾವ, ಎಂ ಎಸ್ಸೀಗೆ.  ಆರು ತಿಂಗಳು ಹಾಸ್ಟೆಲ್‍ನಲ್ಲಿದ್ದೆ.  ನಮ್ ಭಾವಂಗೆ ಯಾವಾಗ್ಲೂ ಓಡಾಟ.  ಮನೇಲಿ ಅಕ್ಕ ಒಂಟಿಯಾಗಿರ್‍ತಾಳೆ.  ಜತೇಲಿರು ಅಂತ ಭಾವನೇ ಹೇಳಿದ್ರು.  ಹೀಗಾಗಿ ಹಾಸ್ಟೆಲ್ ರೂಂ ಖಾಲಿ ಮಾಡಿ ಇಲ್ಲಿಗೆ ಬಂದ್ಬಿಟ್ಟೆ.  ಎರಡು ವಾರ ಆಯ್ತು ನಾನಿಲ್ಲಿಗೆ ಬಂದು."
"ಒಳ್ಳೇದು ಮಾಡ್ದೆ ಬಿಡು.  ಆ ಗಂಗೋತ್ರಿ ಹಾಸ್ಟೆಲ್‌ನಲ್ಲಿ ನಮ್ಮ ಕೊಳ್ಳೇಗಾಲದ ಹೈಕಳೆಲ್ಲಾ ಒಂದು ಗುಂಪು ಮಾಡ್ಕೊಂಡು ದರಬಾರು ನಡೆಸ್ತಾ ಇವೆ ಅಂತ ಕೇಳಿದ್ದೀನಿ.  ನೀನು ಅವರ ಜತೆ ಸೇರದೇ ಇರೋದೇ ಒಳ್ಳೇದು."
"ಹ್ಞೂಂ ಗೂಳಮಾವ.  ನಂಗೆ ಹಾಸ್ಟೆಲ್ ಇಷ್ಟ ಇಲ್ಲ.  ಅಕ್ಕನ ಮನೇಲಿ ಆರಾಮವಾಗಿದ್ದೀನಿ."
"ಒಳ್ಳೇದು, ಅಲ್ಲೇ ಇದ್ಕೋ.  ಅಕ್ಕನಿಗೆ ಮಗಳೇನಾದ್ರೂ ಇದ್ರೆ ಮದ್ವೆ ಮಾಡ್ಕೋ.  ಮನೇ ಅಳಿಯನಾಗಿ ಅಲ್ಲೇ ಝಾಂಡಾ ಊರಿಬಿಡು."  ಕೇಕೆ ಹಾಕಿದ ಗೂಳಯ್ಯ.
ಮೊದ್ದುಮಣಿಯ ಮುಖ ಕೆಂಪುಕೆಂಪಾಗಿಹೋಯಿತು.
"ಅಯ್ ಹೋಗು ಗೂಳಮಾವ."  ನಾಚಿಕೆಯಿಂದ ತಲೆ ಕೆಳಗೆ ಹಾಕಿದ.
"ಗೂಳಮಾವಾ."
ಮನೆಯೊಳಗಿಂದ ಬಂದ ಕರೆ ಕೇಳಿ ಅಚ್ಚರಿಯಿಂದ ತಲೆಯೆತ್ತಿದ ರಾಜೀವ.  ಗೂಳಯ್ಯ ಲೊಚಗುಟ್ಟಿದ.
"ಎಸ್ ಐ ಕರೀತಾ ಇದಾರೆ.  ನೀನು ಮಾತುಮಾತಿಗೂ ಗೂಳಮಾವ ಗೂಳಮಾವ ಅನ್ನೋದನ್ನ ಅವರು ಕೇಳಿಸಿಕೊಂಡಿದ್ದಾರೆ.  ಇನ್ನು ಜೀವಮಾನ ಪೂರ್ತಿ ನನ್ನನ್ನ ಹಾಗೇ ಕರೀತಾರೆ ಆ ಹುಡುಗುಬುದ್ದಿಯ ಎಸ್ ಐ.  ಇನ್ನು ನಾನು ಕೆಟ್ಟೆ."  ಗೊಣಗುತ್ತಾ ಬಾಗಿಲತ್ತ ನಡೆದ ಗೂಳಯ್ಯ.
ರಾಜೀವನಿಗೆ ಕ್ಷಣಕಾಲ ಏನೂ ಅರ್ಥವಾಗಲಿಲ್ಲ.  ಮರುಕ್ಷಣ ಮನಸ್ಸಿಗೆ ಏನೋ ಒಂದು ರೀತಿಯ ಆನಂದ.  ಎಸ್ ಐ ಜೀವಮಾನಪೂರ್ತಿ ಗೂಳಯ್ಯನನ್ನು ಗೂಳಮಾವಾ ಎಂದು ಕರೆಯುವುದು!  ಅಹ್ಹಾ ಅವನಿಗೆ ಹಾಗೇ ಆಗಬೇಕು!  ಈ ಹೊಸಾ ಜಾಗದಲ್ಲಿ ನನ್ನನ್ನು ಎಲ್ಲರೆದುರಿಗೆ ಮೊದ್ದುಮಣಿ ಎಂದು ಕರೆದುದಕ್ಕೆ ಮಲೆಮಹದೇಶ್ವರ ಸ್ವಾಮಿ ಅವನಿಗೆ ಸರಿಯಾಗಿಯೇ ಮಾಡಿದ.
ನಾಲ್ಕು ಹೆಜ್ಜೆ ಹಿಂದೆ ನಡೆದು ಮಾವಿನ ಮರದ ನೆರಳು ಸೇರಿದ.  ಹಾರಿದ ಪತಂಗವೊಂದರ ಬೆನ್ನು ಹತ್ತಿಹೋದವು ಕಣ್ಣುಗಳು...
ಬೆನ್ನ ಹಿಂದೆ ಹೆಜ್ಜೆ ಸಪ್ಪಳ ಕೇಳಿ ಸರಕ್ಕನೆ ಹಿಂದೆ ತಿರುಗಿದ.
ಮ್ಲಾನಮುಖದ ರಂಜನಾ!
ನಿನ್ನೆ ಸಂಜೆ "ಮೊದ್ದುಮಣಿ" ಎಂದು ಕರೆದು ಕಿಲಿಕಿಲಿ ನಕ್ಕು ಹಾರಿಹೋಗಿದ್ದ ಹುಡುಗಿಯ ಮುಖದಲ್ಲಿ ಈಗ ಶೋಕ ಮಡುಗಟ್ಟಿತ್ತು.  ಕೆಂಪಾಗಿದ್ದ ಕಣ್ಣುಗಳು.  ಕೆನ್ನೆಯ ಮೇಲೆ ಕಣ್ಣೀರು ಹರಿದ ಗುರುತು...
ರಾಜೀವನಿಗೆ `ಅಯ್ಯೋ ಪಾಪ' ಅನಿಸಿತು.  ಸಮಾಧಾನದ ನಾಲ್ಕು ಮಾತುಗಳನ್ನು ಹೇಳಬೇಕೆಂದು ಮನ ತವಕಿಸಿತು.  ಸರಿಯಾದ ಪದಗಳು ಹೊಳೆಯದೇ ಅವಳನ್ನೇ ನೋಡುತ್ತಾ ನಿಂತ.
ರಂಜನಾಳೇ ಮಾತಾಡಿದಳು.
"ರಾಜೀವ... ನಿಮ್ಜೊತೆ ಸ್ವಲ್ಪ ಮಾತಾಡ್ಬೇಕು."
`ಏನು?' ಎಂಬಂತೆ ಕಣ್ಣುಗಳನ್ನು ಅರಳಿಸಿದ ರಾಜೀವ.
"ನಮ್ಮಕ್ಕನ ಶವಾನ್ನ ಮೊದ್ಲು ಕಂಡೋರು ನೀವು ನಿಮ್ಮಕ್ಕ ಅಂತ ತಿಳೀತು."
"ಹ್ಞೂ."  ಭಾರದ ದನಿ ಹೊರಡಿಸಿದ.
"ಅದರ ಬಗ್ಗೆ ನಿಮ್ಮ ಬಾಯಿಂದಾನೇ ಕೇಳಬೇಕು ಅಂತ.  ದಯವಿಟ್ಟು ಹೇಳಿ, ಏನು ನಡೀತು?"  ಗದ್ಗದ ಕಂಠದ ಪ್ರಶ್ನೆ ಬಂತು.
ರಾತ್ರಿಯ ಘಟನೆಗಳನ್ನು, ಕೇಳಿದ ಶಬ್ಧಗಳನ್ನು, ಕಂಡ ನೋಟಗಳನ್ನು ವಿವರವಾಗಿ ಹೇಳಿದ ರಾಜೀವ.
ನಿಮಿಷಗಳ ಕಾಲ ಮೌನವಾದ ರಂಜನಾ ಪ್ರಶ್ನೆ ಹಾಕಿದಳು:
"ಸ್ಕೂಟರ್ ಹತ್ತಿ ಪರಾರಿ ಆದ ವ್ಯಕ್ತಿಯ ಮುಖಾನ್ನ ನೀವು ನೋಡ್ಲಿಲ್ವಾ?"
"ಇಲ್ಲ... ಮುಖ ಇರ್‍ಲಿ ಅದು ಗಂಡೋ ಹೆಣ್ಣೋ ಅಂತ ತಿಳಿಯೋದಕ್ಕೂ ಆಗ್ಲಿಲ್ಲ.  ಮನೆ ಮುಂದೆ ಕತ್ತಲು.  ಒಂದೂ ದೀಪ ಇರ್‍ಲಿಲ್ಲ.  ಚಂದ್ರನ ಬೆಳಕೂ ತೀರಾ ಕ್ಷೀಣವಾಗಿತ್ತು.  ಅಲ್ಲದೇ ನಂಗೂ ಆ ವ್ಯಕ್ತಿಗೂ ನಡುವೆ ಕ್ರೋಟಿನ್ ಗಿಡಗಳು, ಸೀಬೆ, ದಾಳಿಂಬೆ ಮರಗಳಿದ್ವು."
ಅವಳು ಮತ್ತೊಮ್ಮೆ ಯೋಚನೆಗೊಳಗಾದಳು.
ಅಕ್ಕನ ಕೊಲೆಗಾರನ ಸುಳಿವು ಯಾರಿಗೂ ಇಲ್ಲ ಎಂಬ ನೋವು ಅವಳ ಮುಖದಲ್ಲಿ.  ರಾಜೀವನಿಗೆ ಹೇಗೆಹೇಗೋ ಆಯಿತು.  ಹೃದಯದಲ್ಲಿ ಪ್ರೇಮದ ಸೆಲೆ ಚಿಮ್ಮಿಸಿದ್ದ ಹೆಣ್ಣಿನ ಎದೆಯಲ್ಲೀಗ ದುಃಖಸಾಗರ.  ಹುಚ್ಚು ಹಿಡಿಸಿದ್ದ ಸುಂದರ ಮೊಗವೀಗ ಕಳಾಹೀನ.  ರಾಜೀವನಿಗೆ ಹೃದಯ ಹಿಂಡಿದಂತಾಯಿತು.
"ಏನೂ ಯೋಚಿಸ್ಬೇಡಿ ರಂಜನಾ."  ಕಷ್ಟಪಟ್ಟು ಮೂರು ಪದಗಳನ್ನು ಹೊರಡಿಸಿದ.  ಅಷ್ಟಕ್ಕೇ ಅವನಿಗೆ ಸಾಕುಬೇಕಾಯಿತು.
ಅವಳು ಕಣ್ಣುಗಳಿಗೆ ಕರವಸ್ತ್ರ ಒತ್ತಿದಳು.
"ಆಮೇಲೆ ಸಿಗ್ತೀನಿ."  ಮೆಲ್ಲಗೆ ಉಸುರಿ ಹಿಂದೆ ತಿರುಗಿದಳು.  ಬಲಗಾಲನ್ನು ತುಸುವೇ ಎಳೆದುಹಾಕುತ್ತಾ ಹೆಜ್ಜೆ ಸರಿಸಿದಳು.
`ಏನಾಗಿದೆ ಅವಳ ಕಾಲಿಗೆ?'
ಕೇಳಲು ಬಾಯಿ ತೆರೆಯುವಷ್ಟರಲ್ಲಿ ಬಲಬದಿಯಲ್ಲಿ ಸದ್ದಾಯಿತು.  ಬೆಚ್ಚಿ ಅತ್ತ ತಿರುಗಿದ.
ಮೈತುಂಬಾ ಹೂ ಬಿಟ್ಟಿದ್ದ ಕಣಗಿಲೆ ಗಿಡದ ಹಿಂದೆ ಗೂಳಯ್ಯನ ತಲೆ ಕಂಡಿತು.
"ಗೂಳಮಾವ!  ನೀ ಯಾವಾಗ ಬಂದೆ?  ಅಲ್ಲೇನು ಮಾಡ್ತಿದ್ದೆ?"  ಗಾಬರಿಯ ಪ್ರಶ್ನೆ ಹಾಕಿದ.
ಗೂಳಯ್ಯ ನಿಶ್ಶಬ್ಧವಾಗಿ ನಗೆ ಮಿನುಗಿಸುತ್ತಾ ಹತ್ತಿರ ಬಂದ.
"ಪತ್ತೇದಾರೀ ನಡೆಸ್ತಾ ಇದೀನಿ ಕಣಯ್ಯಾ.  ಕೊಲೆಗಾರನ ಸುಳಿವು ಹುಡುಕ್ತಾ ಇದೀನಿ."  ದನಿ ತೆರೆದು ನಕ್ಕ.
"ಇಲ್ಲೇನು ಕಂಡೆ ಗೂಳಮಾವ?"  ಮೊದ್ದುಮಣಿ ಬೆದರಿ ಪ್ರಶ್ನೆ ಹಾಕಿತು.  `ತಾನೂ, ರಂಜನಾಳೂ ಇಬ್ಬರೇ ಮಾತಾಡುತ್ತಾ ನಿಂತಿದ್ದಕ್ಕೆ ಈ ಪೋಲೀಸ್ ಮಾವ ಅಪಾರ್ಥ ಕಲ್ಪಿಸುತ್ತಿಲ್ಲವಷ್ಟೇ?'
ಗೂಳಯ್ಯ ಮತ್ತೊಮ್ಮೆ ನಕ್ಕ.
ಬಾರಯ್ಯ ತೋರಿಸ್ತೀನಿ."  ರಾಜೀವನ ತೋಳು ಹಿಡಿದು ಕಣಗಿಲೆ ಗಿಡಗಳ ನಡುವೆ ನುಸುಳಿ ಹಸಿರು ಹುಲ್ಲಿನ ಲಾನ್‌ನ ಅಂಚಿನಲ್ಲಿ ನಿಂತ.
"ಆ ಕಡೆ ನೋಡಯ್ಯ."  ಕೈ ತೋರಿದ.  ರಾಜೀವನ ಕುತೂಹಲದ ನೋಟ ಅತ್ತ ಹೊರಳಿತು.
ಐವತ್ತು ಅಡಿಗಳ ದೂರದಲ್ಲಿ ಮನೆಯ ಮುಂಭಾಗ.  ಪೋರ್ಟಿಕೋನ ಇಟ್ಟಿಗೆ ಹಾಸಿನ ನೆಲ.  ಲಾನ್‌ನ ಆ ಬದಿಯಲ್ಲಿ ಪೋರ್ಟಿಕೊದಿಂದ ಅನತೀ ದೂರದಲ್ಲಿದ್ದ ಟಾರ್ ರಸ್ತೆಯತ್ತ ಸಾಗಿದ ಹತ್ತಡಿ ಅಗಲದ ಕೆಂಪು ಮಣ್ಣಿನ ಹಾದಿ...
ಕೊಲೆಗಾರನ ಸುಳಿವು ಇಲ್ಲಿ ಏನಿದೆ?
ಮೊದ್ದುಮಣಿ ಪಿಳಿಪಿಳಿ ಕಣ್ಣು ಬಿಟ್ಟಿತು.
ಗೂಳಯ್ಯ ಒಮ್ಮೆ ಕೇಕರಿಸಿ ಬಾಯಿ ತೆರೆದ: "ಇಲ್ಲಿ ಕೇಳಯ್ಯ.  ನೀನು ಹೇಳಿದ್ದೇನು?  ನೀನು ಮನೆ ಹತ್ರ ಬಂದಾಗ ಯಾವುದೋ ವ್ಯಕ್ತಿ ಸ್ಕೂಟರ್ ಹತ್ತಿ ಮಣ್ಣು ಹಾದೀಲಿ ತೂರಿಹೋಯ್ತು ಅಂತ ಅಲ್ವೇ?"
"ಹ್ಞೂಂ."  ತಲೆಯಾಡಿಸಿದ ರಾಜೀವ.
"ಮನೆ ಮುಂದೆ ಇಟ್ಟಿಗೆ ಹಾಸಿನ ನೆಲ.  ಅಲ್ಲಿ ಸ್ಕೂಟರ್ ಚಕ್ರದ ಗುರುತು ಬೀಳೋದಿಲ್ಲ.  ಆದ್ರೆ ಆ ಮಣ್ಣುರಸ್ತೇಲಿ ಚಕ್ರದ ಗುರುತು ಸ್ಪಷ್ಟವಾಗಿ ಬೀಳುತ್ತೆ.  ಆ ಗುರುತಿನಿಂದ ಅದು ಯಾವ ಸ್ಕೂಟರ್ ಅಂತ ಪತ್ತೆ ಮಾಡಬೋದು ಅಲ್ಲವೇ?"
"ಹೌದಲ್ಲ ಗೂಳಮಾವ!  ನಂಗೆ ಇದು ಹೊಳೀಲೇ ಇಲ್ಲ."  ರಾಜೀವ ಕಣ್ಣುಗಳನ್ನು ಅರಳಿಸಿದ.
ಗೂಳಯ್ಯ ಕೈಗಳನ್ನು ಒದರಿದ.
"ನಿಂಗೆ ಹೊಳೆಯೋದಿಲ್ಲ ಅದು.  ನೀನು ಮೊದ್ದುಮಣಿ.  ಹೊಳೆದ್ರೂ ಏನೂ ಪ್ರಯೋಜನ ಇಲ್ಲಾ.  ಯಾಕಂದ್ರೆ ಆ ರಸ್ತೇಲಿ ಯಾವ ಸ್ಕೂಟರ್ ಚಕ್ರದ ಗುರುತೂ ಇಲ್ಲ.  ಅಲ್ಲಿರೋದು ಸಿದ್ಧಾರ್ಥ ಅವರ ಕಾರು ಮತ್ತು ನಮ್ಮ ಪೋಲೀಸ್ ಜೀಪ್‌ನ ಚಕ್ರಗಳ ಗುರುತುಗಳು ಮಾತ್ರ."
"ಹಂಗಂದ್ರೇನು ಗೂಳಮಾವ?"  ರಾಜೀವ ಉದ್ಗಾರ ತೆಗೆದ.
"ಹಂಗಂದ್ರೆ ಹೀಂಗೆ ಮೊದ್ದುಮಣೀ.  ಕೊಲೆಗಾರ ಸ್ಕೂಟರನ್ನ ಮಣ್ಣುರಸ್ತೇಲಿ ಓಡಿಸಿಲ್ಲ.  ಸ್ಕೂಟರ್ ಇಟ್ಟಿಗೆ ಹಾಸಿನ ನೆಲದಿಂದ ನೇರವಾಗಿ ಈ ಲಾನ್ ಮೇಲೆ ಸಾಗಿ ರಸ್ತೆ ಸೇರಿದೆ.  ಹುಲ್ಲಿನ ಮೇಲೆ ಚಕ್ರದ ಗುರುತು ಬೀಳೋದಿಲ್ಲ ಅಲ್ಲವೇ?"
ರಾಜೀವ ಕಣ್ಣು ಮುಚ್ಚಿದ.
ಗೂಳಯ್ಯ ಮುಂದುವರೆಸಿದ:
"ಆ ವ್ಯಕ್ತಿ ತುಂಬಾ ಚಾಲಾಕಿ.  ಮನೇಲಿ ತನ್ನ ಯಾವ ಗುರುತನ್ನೂ ಬಿಟ್ಟಿಲ್ಲ.  ಅವನ ಬೆರಳ ಗುರುತುಗಳೂ ಎಲ್ಲೂ ಇಲ್ಲ.  ಸ್ಕೂಟರ್ ಚಕ್ರದ ಗುರುತುಗಳೂ ಎಲ್ಲೂ ಬೀಳಬಾರದು ಅನ್ನೋ ಎಚ್ಚರಿಕೆ ಆ ವ್ಯಕ್ತಿಗೆ."
ರಾಜೀವ ಮುಚ್ಚಿದ ಕಣ್ಣುಗಳನ್ನು ತೆರೆಯಲಿಲ್ಲ.
ಗೂಳಯ್ಯ ಏಕಾ‌ಏಕಿ ವಿಷಯ ಬದಲಿಸಿದ.
"ಹೇಗಿದೆ ನಿನ್ನ ಹಕ್ಕಿ?"
ಬೆಚ್ಚಿ ಕಣ್ಣು ತೆರೆದ ರಾಜೀವ. 
"ಯಾವ ಹಕ್ಕಿ ಗೂಳಮಾವ?  ನಾನ್ಯಾವ ಹಕ್ಕೀನೂ ಹಿಡಕೊಂಡಿಲ್ಲ."  ಬೆದರಿದ ದನಿ ಹೊರಡಿಸಿದ. 
ಪಕಪಕನೆ ನಕ್ಕುಬಿಟ್ಟ ಗೂಳಯ್ಯ.
"ಏ ಬಕರಾ.  ನನ್ ಜತೇನೇ ಆಟ ಕಟ್ತೀಯಾ?  ನಂಗೆಲ್ಲಾ ಗೊತ್ತು ಕಣೋ."
"ಏನು ಗೂಳಮಾವ ನಿಂಗೆ ಗೊತ್ತಿರೋದು?"  ಮೊದ್ದುಮಣಿಯ ದನಿಯಲ್ಲಿ ಗಾಬರಿ ಇಣುಕಿತ್ತು.  ಹಣೆಯಲ್ಲಿ ಮೂಡಿದ ಬೆವರ ಹನಿಗಳು.
"ಈಗಷ್ಟೇ ಹೋದಳಲ್ಲಾ ಅವಳೇ.  ನೀನು ಅವಳ ಹಿಂದೆ ಬಿದ್ದಿದ್ದೀಯ ಅಂತ ಅವಳ ಭಾವನೇ ರಾತ್ರಿ ಇನ್ಸ್‌ಪೆಕ್ಟರ್‌ಗೆ ಹೇಳ್ದ."
ರಾಜೀವ ಭೂಮಿಗಿಳಿದುಹೋದ.
"ಹಂಗೇನಿಲ್ಲ ಗೂಳಮಾವ."  ತಲೆತಗ್ಗಿಸಿ ಪಿಸುದನಿ ಹೊರಡಿಸಿದ.
"ಹೌದೇ?  ಹಾಗಿದ್ರೆ ಅದೇನು ಗುಟ್ಟಿನ ಮಾತು ಇಲ್ಲಿ?"  ಗೂಳಯ್ಯ ಪಟ್ಟು ಬಿಡಲಿಲ್ಲ.
"ಗುಟ್ಟು ಎಂಥದೂ ಇಲ್ಲ ಗೂಳಮಾವ.  ರಾತ್ರಿ ನಡೆದ ಘಟನೆಗಳ ವಿವರಗಳನ್ನ ಕೇಳ್ತಾ ಇದ್ಲು.  ಸ್ಕೂಟರ್ ಹತ್ತಿ ಹೋದ ವ್ಯಕ್ತೀನ ಗುರುತಿಸೋದಿಕ್ಕೆ ಆಗೋದೇ ಇಲ್ವಾ ಅಂತ ಕೇಳ್ತಾ ಇದ್ಲು."
"ನೀನೇನಂದೆ?"
"ಇಲ್ಲ ಅಂದೆ."
"ಸರಿಯಾಗೇ ಹೇಳ್ದೆ ಬಿಡು.  ಅದಿರ್‍ಲಿ, ಅವ್ಳು ಕಾಲಿಗೆ ನೋವು ಮಾಡ್ಕೊಂಡಿದ್ದಾಳೆ ಗೊತ್ತಾ?"
"ಹ್ಞೂಂ ಗೂಳಮಾವ.  ನಾನೂ ನೋಡ್ದೆ.  ಏನು ಅಂತ ಕೇಳೋಣ ಅನ್ನೋವಷ್ಟರಲ್ಲಿ ನೀನು ಪ್ರತ್ಯಕ್ಷ ಆಗಿಬಿಟ್ಟೆ."
"ಚಿಂತೆ ಬೇಡ.  ಅದೇನು ಅಂತ ನಾನೇ ಹೇಳ್ತೀನಿ.  ನಿನ್ನೆ ಸಂಜೆ ಏಳೂವರೆಯ ಹೊತ್ತಿಗೆ ಅವ್ಳು ಇಲ್ಲಿಗೆ ಬಂದಿದ್ಲಂತೆ, ಭಾವಂಗೆ ಊಟ ಕೊಟ್ಟು ಹೋಗೋದಿಕ್ಕೆ."
ರಾಜೀವನಿಗೆ ಥಟ್ಟನೆ ನೆನಪಾಯಿತು.  ಹಾಗೆ ನಿನ್ನೆ ಸಂಜೆ ಇಲ್ಲಿಗೆ ಬಂದಿದ್ದಾಗಲೇ ಅಲ್ಲವೇ ಅವಳು ತನ್ನನ್ನು `ಮೊದ್ದುಮಣಿ' ಅಂತ ಕರೆದದ್ದು?  ಮುಖ ಕೆಳಗೆ ಹಾಕಿದ.
ಗೂಳಯ್ಯ ಮುಂದುವರೆಸಿದ:
"ಊಟ ಕೊಟ್ಟು ಹಿಂದೆ ಹೋಗೋವಾಗ ಸಣ್ಣ ಅಕ್ಸಿಡೆಂಟ್ ಆಯ್ತಂತೆ."
"ಎಲ್ಲಿ ಗೂಳಮಾವ?  ಎಂಥಾ ಅಕ್ಸಿಡೆಂಟ್?"  ಆತಂಕದ ಪ್ರಶ್ನೆ ಹೊರಬಂತು.
"ಇಲ್ಲೇ ಮಾನಂದವಾಡಿ ರಸ್ತೆಗೆ ತಿರುಗೋವಾಗ ಎದುರಿಗೆ ಬಂದ ಲಾರೀನ ತಪ್ಪಿಸೋದಿಕ್ಕೆ ಹೋಗಿ ರಸ್ತೆ ಪಕ್ಕದ ಬಂಡೆ ಕಡೆ ನುಗ್ಗಿದ್ಲಂತೆ.  ಬಂಡೆಗೂ ಸ್ಕೂಟರ್‌ಗೂ ನಡುವೆ ಕಾಲು ಸಿಕ್ಕಿಹೋಗಿ ಚರ್ಮ, ಮಾಂಸ ಕಿತ್ತುಬಂದಿದೆ."
"ಅಯ್ಯೋ."  ರಾಜೀವ ಬಿಗಿಯಾಗಿ ಕಣ್ಣು ಮುಚ್ಚಿದ.
ಗೂಳಯ್ಯ ಅವನ ಭುಜ ತಟ್ಟಿದ.
"ನೀನು ಅಷ್ಟೇನೂ ಗಾಬರಿಯಾಗೋವಂಥಾ ದೊಡ್ಡ ಗಾಯಗಳೇನೂ ಆಗಿಲ್ವಂತೆ.  ಒಂದುವಾರದಲ್ಲಿ ಅದರ ಗುರುತೂ ಇರೋದಿಲ್ಲ ಅಂತಾಳೆ.  ಅದರಿಂದಾಗಿರೋ ಒಂದೇ ಒಂದು ಕೆಟ್ಟ ಪರಿಣಾಮ ಅಂದ್ರೆ ವಾರದವರೆಗೆ ಅವಳು ಕುಂಟುಗಾಲಲ್ಲಿ ನಡೆದು ನಿನ್ನ ಕೋಮಲ ಹೃದಯದಲ್ಲಿ ಗಂಗೆ ಕಾವೇರಿ ಹರಿಸೋದು."  ನಕ್ಕ.
"ಅಯ್ ಹೋಗು ಗೂಳಮಾವಾ."  ರಾಜೀವ ಹುಸಿಮುನಿಸು ತೋರಿದ.
"ಸರಿ ಹೋಗಿಯೇಬಿಡ್ತೀನಿ.  ಹೋಗೋದಿಕ್ಕೆ ಮೊದ್ಲು ರಾತ್ರಿ ಕೊಲೆಗಾರನ ಸ್ಕೂಟರ್ ಸಾಗಿಹೋದ ಹಾದೀನ ನಿಂಗೆ ತೋರಿಸಿಬಿಡ್ತೀನಿ."
ನಾಲ್ಕು ಹೆಜ್ಜೆ ನಡೆದು ನೆಲದತ್ತ ಬೊಟ್ಟುಮಾಡಿದ.
ಲಾನ್‌ನ ಒಂದು ಅಂಚಿನಿಂದ ಇನ್ನೊಂದು ಅಂಚಿನವರೆಗೆ ನೇರ ಗೆರೆ ಎಳೆದಂತೆ ನಾಲ್ಕು ಇಂಚು ಅಗಲದಲ್ಲಿ ಹಸಿರು ಹುಲ್ಲುಗಳು ಧರಾಶಾಯಿಯಾಗಿದ್ದವು.
ರಾಜೀವ ನೋಡುತ್ತಿದ್ದಂತೇ ಗೂಳಯ್ಯ ಕೆಳಕ್ಕೆ ಬಾಗಿ ಆ ಗೆರೆಯನ್ನನುಸರಿಸಿ ನಡೆದ.  ಹಾಗೆಯೇ ಏಳೆಂಟು ನಿಮಿಷಗಳವರೆಗೆ ನಡುಬಾಗಿಸಿ ನಡೆದ.  ಕಣ್ಣುಗಳು ನೆಲದಲ್ಲಿ ಕೀಲಿಸಿದ್ದವು.  ಒಂದು ಕಡೆ ಥಟ್ಟನೆ ನಿಂತ...  ನೆಲದತ್ತ ಮತ್ತೂ ಬಾಗಿದ...
"ಅಲ್ಲೇನು ಹುಡುಕ್ತಿದೀಯ ಗೂಳಮಾವ?"  ರಾಜೀವನ ಬೆರಗಿನ ಪ್ರಶ್ನೆ.
ಗೂಳಯ್ಯ ತಲೆಯೆತ್ತದೇ ಉತ್ತರಿಸಿದ:
"ಒಂದು ಗೂನುಬೆನ್ನಿನ ಮುದುಕಿ ದಿನಾ ಬೆಳಿಗ್ಗೆ ನಮ್ಮ ಸ್ಟೇಷನ್ ಮುಂದೆ ಹೀಗೆ ನೆಲ ನೋಡ್ತಾ ನಡೆದುಹೋಗ್ತಾಳೆ.  ಅವಳು ನಡೆಯೋ ಹಾಗೆ ನಡೆದ್ರೆ ಹೇಗನ್ನಿಸಬೋದು ಅಂತ ಆ ಥರಾ ನಡೀತಾ ಇದೀನಿ."  ಹೇಳುತ್ತಾ ನೆಟ್ಟಗೆ ನಿಂತ.  ರಾಜೀವನತ್ತ ತಿರುಗಿ ಬಿಡಿಬಿಡಿ ಪದಗಳಲ್ಲಿ ಪ್ರಶ್ನಿಸಿದ:
"ಮೊದ್ದುಮಣಿ, ಸ್ವಲ್ಪ ಸರಿಯಾಗಿ ನೆನಪು ಮಾಡ್ಕೊಂಡು ಹೇಳು.  ಆ ವ್ಯಕ್ತಿ ಸರ್ರನೆ ಹೊರಟುಹೋಯ್ತಾ ಅಥವಾ ಸ್ವಲ್ಪ ದೂರ ಹೋದ ನಂತರ ಒಂದೆರಡು ನಿಮಿಷ ನಿಂತು ಆಮೇಲೆ ಮುಂದೆ ಹೋಯ್ತಾ ಅಂತ."  ಕ್ಷಣ ತಡೆದು ಸೇರಿಸಿದ.  "ಇದು ತುಂಬಾ ಮುಖ್ಯ.  ಸರಿಯಾಗಿ ನೆನಪು ಮಾಡ್ಕೋ."
ಕಣ್ಣುಮುಚ್ಚಿ ಯೋಚಿಸಿದ ರಾಜೀವ.  ನಿಮಿಷದ ನಂತರ ಕಣ್ಣು ತೆರೆದು ಏರುದನಿಯಲ್ಲಿ ಕೂಗು ಹಾಕಿದ:
"ನೆನಪಾಗ್ತಿದೆ ಗೂಳಮಾವಾ..."  ದನಿ ಕುಗ್ಗಿಸಿ ಮುಂದುವರೆಸಿದ.  "...ಆ ಮನುಷ್ಯ ನಂಗೆ ಕಾಣಿಸ್ಲಿಲ್ಲ.  ಆದ್ರೆ ಸ್ಕೂಟರ್ ಸದ್ದು ಮಾತ್ರ ಕೇಳಿಸ್ತಾನೇ ಇತ್ತು.  ಆ ಟಾರ್ ರಸ್ತೆ ತಲುಪೋದಿಕ್ಕೆ ಮುಂಚೆ ಆ ಸ್ಕೂಟರ್ ಸ್ವಲ್ಪ ಹೊತ್ತು ಒಂದೆ ಜಾಗದಲ್ಲಿ ನಿಂತಿತ್ತು.  ನಂತರ ವೇಗ ಹೆಚ್ಚಿಸಿಕೊಂಡು ಹೊರಟುಹೋಯ್ತು ಗೂಳಮಾವ."
"ಥ್ಯಾಂಕ್ ಯೂ ಮೊದ್ದುಮಣೀ."  ಥಟ್ಟನೆ ಉತ್ತರಿಸಿದ ಗೂಳಯ್ಯ ಮತ್ತೆ ಸರ್ರನೆ ನೆಲದತ್ತ ಬಾಗಿದ.  ರಾಜೀವ ನೋಡುತ್ತಿದ್ದಂತೇ ಹಲವಾರು ಹುಲ್ಲಿನ ಎಸಳುಗಳನ್ನು ಕಿತ್ತುಕೊಂಡು ಜೇಬಿನಿಂದ ತೆಗೆದ ಪಾಲಿಥೀನ್ ಚೀಲಕ್ಕೆ ಸೇರಿಸಿದ.  ನಂತರ ನಿಧಾನವಾಗಿ ನೆಟ್ಟಗೆ ನಿಂತ.  ನೀಲಿ ಆಕಾಶದತ್ತ ಮೊಗವೆತ್ತಿ ಮುಗುಳ್ನಕ್ಕ.  ಹಾರುತ್ತಿದ್ದ ಒಂಟಿ ಹದ್ದಿಗೆ ಕೈಯಾಡಿಸಿ ಸಿಳ್ಳು ಹಾಕಿದ.  ಸರಸರನೆ ನಡೆದುಬಂದು ರಾಜೀವನ ಮುಂದೆ ನಿಂತ.
"ಕೊಲೆ ಮಾಡಿದ ವ್ಯಕ್ತಿ ಸುಲೇಖಾನ ದುಪಟ್ಟಾನೆ ಯಾಕೆ ಎತ್ಕೊಂಡು ಹೋದ ಅನ್ನೋದಕ್ಕೆ ಉತ್ತರ ಸಿಕ್ಕಿಬಿಡ್ತು ಕಣಯ್ಯ.  ಯಶಸ್ವಿಯಾಗಿ ಕೊಲೆ ಮಾಡಿದ ಮೇಲೆ ಅಕ್ವೇರಿಯಂ ಒಡೆದುಹಾಕಿದ್ದು ಯಾಕೆ ಅಂತಾನೂ ತಿಳಿದುಹೋಯ್ತು."
"ಏನದು ಗೂಳಮಾವ?"  ರಾಜೀವ ಮೂಗಿನ ಹೊಳ್ಳೆ ಅರಳಿಸಿದ.
ಗೂಳಯ್ಯ ಆಕಾಶಕ್ಕೆ ಮೊಗವೆತ್ತಿದ.
"ಅದನ್ನ ನಿಂಗೆ ಈಗ ಹೇಳಯ್ಯ.  ನಿಂಗಷ್ಟೇ ಅಲ್ಲ ಯಾರಿಗೂ ಹೇಳಲ್ಲ.  ಮುಖ್ಯವಾಗಿ ಇದು ಆ ಹುಡುಗುಬುದ್ಧಿಯ ಎಸ್ ಐ ಗೆ ತಿಳೀಬಾರ್‍ದು.  ಹಿಂದೆಲ್ಲಾ ನಡೆದದ್ದೇನು?  ಕೆಲಸ ನಂದು, ಶಹಭಾಸ್‌ಗಿರಿ ಅವಂಗೆ.  ಹಣ್ಣು ತಿಂದೋನು ಅವ್ನು, ನಂಗೆ ಸಿಕ್ಕಿದ್ದು ಬರೀ ಸಿಪ್ಪೆ.  ಈ ಸಲ ಹಣ್ಣನ್ನೇ ತಿನ್ನಬೇಕು ನಾನು.  ಕೊಲೆಗಾರಂಗೆ ನಾನೇ ಕೋಳ ಹಾಕಬೇಕು.  ಎರಡು ವರ್ಷದಿಂದಾ ತಪ್ಪಿಹೋಗ್ತಾ ಇರೋ ಪ್ರೊಮೋಷನ್ ಈ ಸಲ ಸಿಗ್ಲೇಬೇಕು.  ಸಿಕ್ಕೇ ಸಿಗುತ್ತೆ.  ನಾನು ಸರಿಯಾದ ದಾರೀಲಿ ಸಾಗ್ತಾ ಇದೀನಿ."

*     *     *

ರಾಜೀವ ಮನೆ ಸೇರಿದಾಗ ಇಂದುಮತಿ ಹಾಲ್‌ನ ಸೋಫಾದಲ್ಲಿ ಹಣೆಗೆ ಕೈ‌ಒತ್ತಿ ಕುಳಿತಿದ್ದಳು.  ತಮ್ಮನನ್ನು ನೋಡಿದೊಡನೇ ದನಿಯೆತ್ತಿ ಅಳತೊಡಗಿದಳು.  ಗಾಬರಿಗೊಂಡ ರಾಜೀವ ಅವಳ ಭುಜ ಹಿಡಿದ.
"ಏನು ಏನಾಯ್ತಕ್ಕ?  ಯಾಕೆ ಅಳ್ತಿದೀಯ?"
"ರಾಜಾ, ನಾನು ಕಷ್ಟಕ್ಕೆ ಸಿಕ್ಕಿದೀನಿ ಕಣೋ."  ಬಿಕ್ಕುಗಳ ನಡುವೆ ಮಾತು ಹೊರಡಿಸಿದಳು ಇಂದುಮತಿ.
"ಏನಾಯ್ತಕ್ಕಾ?  ಬಿಡಿಸಿ ಹೇಳು."  ಪಕ್ಕ ಕೂತ.
ಇಂದುಮತಿ ಕಣ್ಣೊರೆಸಿಕೊಂಡಳು.
"ನನ್ ಬಳೆಗಳು... ನಿಂಭಾವ ಮದುವೇನಲ್ಲಿ ಮಾಡಿಸಿಕೊಟ್ಟಿದ್ದು,  ನಿನ್ನೆ ಬೆಳಿಗ್ಗೆ ಎಲ್ಲೋ ಕಳಕೊಂಡೆ ಕಣೋ."
ಅವನಿಗೆ ತುಸು ಸಮಾಧಾನವಾಯಿತು.
"ಅದಕ್ಕಾಗಿ ಇಷ್ಟು ಕಂಗೆಟ್ಟುಹೋಗಿದೀಯ?  ರಂಜನಾಳ ಅಕ್ಕನ ಕೊಲೆ ವಿಷಯವೇನೋ ಅಂತ ಹೆದರಿಬಿಟ್ಟಿದ್ದೆ ನಾನು."
"ಅದೇ ಕಣೋ ರಾಜ.  ನನ್ ಬಳೆಗಳು ಲೇಖಾನ ಕೊಲೆ ನಡೆದ ಬೆಡ್‌ರೂಂನಲ್ಲಿದ್ದವಂತೆ.  ಸಬ್ ಇನ್ಸ್‌ಪೆಕ್ಟರ್ ಕೈಗೆ ಅವು ಸಿಕ್ಕಿಬಿಟ್ಟಿವೆ.  ಸ್ವಲ್ಪ ಹೊತ್ತಿನ ಮುಂಚೆ ಏನೇನೋ ಪ್ರಶ್ನೆ ಕೇಳಿ ನನ್ನನ್ನ ಗೋಳಾಡಿಸಿಬಿಟ್ರು.  ನಂಗೆ ಭಯವಾಗುತ್ತೆ ಕಣೋ ರಾಜ."  ಮತ್ತೆ ಬಿಕ್ಕಿದಳು.
ರಾಜೀವನಿಗೆ ಮಾತು ಹೊರಡಲಿಲ್ಲ.  ಅವಳೇ ಮುಂದುವರೆಸಿದಳು:
"ನಿಮ್ಮ ಬಳೆಗಳು ಇಲ್ಲಿಗೆ ಹ್ಯಾಗೆ ಬಂದ್ವು ಅಂತ ಪಟ್ಟು ಹಿಡಿದು ಕೇಳಿದ್ರು ಕಣೋ."  ಬಿಕ್ಕುವಿಕೆ ಅಧಿಕವಾಯಿತು.
"ನೀನೇನಂದೆ?"
"ಏನು ಹೇಳ್ಬೇಕು ಅಂತಾನೇ ನಂಗೆ ಗೊತ್ತಾಗ್ಲಿಲ್ಲ.  ಅಳು ಬಂದ್ಬಿಡ್ತು."  ಮತ್ತೆ ದನಿ ತೆಗೆದು ಅಳತೊಡಗಿದಳು.
ನಿಮಿಷಗಳವರೆಗೆ ಯೋಚನಾಮಗ್ನನಾದ ರಾಜೀವ ತಲೆಯೆತ್ತಿ ಕೇಳಿದ:
"ಅದನ್ನ ನೀನು ಎಲ್ಲಿಟ್ಟಿದ್ದೆ ಅಂತ ನೆನಪಿಸ್ಕೊ."
"ಅದೇ ನೆನಪಾಗ್ತಿಲ್ಲ ರಾಜ.  ನಿನ್ನೆ ಬೆಳಗಿನಿಂದ್ಲೇ ಅವು ಕಾಣ್ತಾ ಇಲ್ಲ.  ಎಲ್ಲಿಟ್ಟಿದ್ದೆ, ಯಾರು ಎತ್ಕೊಂಡು ಹೋದ್ರು ಒಂದೂ ತಿಳೀತಾ ಇಲ್ಲ.  ನಿನ್ನೆಯೆಲ್ಲಾ ಅದ್ರ ಬಗ್ಗೆ ಯೋಚಿಸ್ದೆ.  ರಾತ್ರಿ ಹೊತ್ಗೆ ನಂಗೆ ತಲೆನೋವೇ ಬಂದ್ಬಿಟ್ಟಿತ್ತು ಕಣೋ ರಾಜ."
"ನೋಡಕ್ಕ, ಸಾಮಾನ್ಯವಾಗಿ ನೀನು ಅಡಿಗೆಮನೇನಲ್ಲಿ ಪಾತ್ರೆ ತೊಳೀವಾಗ ಬಳೆಗಳನ್ನ ತೆಗೆದು ಪಕ್ಕದಲ್ಲಿಡ್ತೀಯ.  ಒಂದೊಂದ್ಸಲ ಅದನ್ನ ಮರೆತೇಬಿಡ್ತೀಯ..."
"ಹ್ಞೂಂ ಕಣೋ ರಾಜ, ನೆನಪಾಯ್ತು."  ಸಂತೋಷದಿಂದ ಕೂಗಿದಳು ಇಂದುಮತಿ.  ಅವನ ಕೈ ಹಿಡಿದು ಆತುರಾತುರವಾಗಿ ಹೇಳಿದಳು:  "ನಿನ್ನೆ ಬೆಳಿಗ್ಗೆ ಸಿದ್ಧಾರ್ಥ ಅವರಿಗೆ ಕಾಫಿ ತಗೋಂಡು ಹೋಗಿದ್ದೆ.  ಅಲ್ಲಿ ಅವರ ಕಿಚನ್‌ನಲ್ಲಿ ಕಪ್ಪು ಸಾಸರ್ ತೊಳೀವಾಗ ಬಳೇನ ತೆಗೆದು ಅಲ್ಲೇ ಇಟ್ಟೆ.  ನಂತರ ಮರೆತುಬಿಟ್ಟೆ.  ಅದು ನೆನಪಾಗ್ತಾ ಇರೋದು ಈಗ್ಲೇ."  ಅವಳು ಸಮಾಧಾನದ ಉಸಿರು ಹಾಕಿದಳು.  "ಅದನ್ನ ಈಗ್ಲೇ ಆ ಸಬ್ ಇನ್ಸ್‌ಪೆಕ್ಟರ್‌ಗೆ ಹೇಳ್ಬೇಕು ಕಣೋ ರಾಜ.  ಅವರಿನ್ನೂ ಲೇಖಾ ಮನೇಲೇ ಇದ್ದಾರೆ ಅಂತ ಕಾಣುತ್ತೆ."  ಎದ್ದು ನಿಂತಳು.
"ಇಲ್ಲಕ್ಕ, ಅವರು ಸ್ಟೇಷನ್‌ಗೆ ಹೋಗಿಯಾಯ್ತು."  ಥಟ್ಟನೆ ಹೇಳಿದ ರಾಜೀವ.  ಇಂದುಮತಿಯ ಮುಖ ಕುಂದಿದ್ದನ್ನು ನೋಡಿ ಅವಳ ಮುಂಗೈ ತಟ್ಟಿದ.  "ನೀನೇನೂ ಯೋಚಿಸ್ಬೇಡಾ.  ನಾನೇ ಈಗ್ಲೇ ಸ್ಟೇಷನ್‌ಗೆ ಹೋಗಿ ಹೇಳಿ ಬರ್‍ತೀನಿ."  ಎದ್ದುನಿಂತ.
"ನಾನೂ ಬರ್‍ತೀನಿ ರಾಜ."  ಇಂದುಮತಿ ಆತುರಾತುರವಾಗಿ ಹೇಳಿದಳು.  ಅವನು ತಲೆ ಅಲುಗಿಸಿದ.
"ಬೇಡಕ್ಕಾ, ಸ್ಟೇಷನ್‌ಗೆ ನೀನು ಬರೋದು ಬೇಡ.  ಅಲ್ಲಿಗೆಲ್ಲಾ ಹೆಂಗಸರು ಹೋಗಬಾರ್‍ದು."  ದೊಡ್ಡ ಗಂಡಸಿನಂತೆ ಹೇಳಿದ.
"ನನ್ನ ವೆಹಿಕಲ್ ತಗೋಂಡು ಹೋಗು ರಾಜ" ಎನ್ನುತ್ತಾ ಇಂದುಮತಿ ತನ್ನ ಹೊಚ್ಚ ಹೊಸ ಹೋಂಡಾ ಡಿಯೋದ ಚಾವಿಯನ್ನು ಅವನ ಕೈಲಿತ್ತಳು.

ಸಿದ್ಧಾರ್ಥನ ಮನೆಯ ಲಾನ್‌ನ ಅಂಚಿನಲ್ಲಿ ಹಾದುಹೋಗುತ್ತಿದ್ದಾಗ ಯಾರೋ ಕೈತಟ್ಟಿದ್ದು ಕೇಳಿಸಿತು.  ವಾಹನದ ವೇಗ ತಗ್ಗಿಸಿ ಪಕ್ಕಕ್ಕೆ ಹೊರಳಿದ ರಾಜೀವ.
ಪೋರ್ಟಿಕೋದಲ್ಲಿ ರಂಜನಾಳ ಪಕ್ಕ ನಿಂತ ಗೂಳಮಾವ, ತುಸು ದೂರದಲ್ಲಿ ಕಾಂಕ್ರೀಟ್ ಕಂಬವನ್ನೊರಗಿ ನಿಂತ ಸಿದ್ಧಾರ್ಥ ಕಾಣಿಸಿದರು.
ಗೂಳಯ್ಯ ಕೈ ಬೀಸಿ ಕರೆದ.  ರಾಜೀವ ವಾಹನವನ್ನು ಅತ್ತ ತಿರುಗಿಸಿದ.
ವಾಹನದಿಂದಿಳಿದು ಸೈಡ್ ಸ್ಟ್ಯಾಂಡ್ ಹಾಕುತ್ತಿದ್ದವನ ಹೆಗಲ ಮೇಲೆ ಕೈ ಬಿತ್ತು.         ಗೂಳಯ್ಯ ವಾಹನದ ಮೇಲೇ ದೃಷ್ಟಿ ನೆಟ್ಟು ಪ್ರಶ್ನೆ ಒಗೆದ:
"ನಿನ್ನೆ ರಾತ್ರಿ ಸುಲೇಖಾರನ್ನ ಕೊಲೆ ಮಾಡಿದ ವ್ಯಕ್ತಿ ಪರಾರಿಯಾಗೋದಿಕ್ಕೆ ಉಪಯೋಗಿಸಿದ್ದು ಈ ಸ್ಕೂಟರ್ ಅಲ್ಲ ಅಂತ ಸಾಬೀತು ಪಡಿಸೋದಿಕ್ಕೆ ನಿನಗೆ ಸಾಧ್ಯವಾಗುತ್ತದೆಯೇ ಹುಡುಗಾ?"  ತುಟಿಯಂಚಿನಲ್ಲೇ ನಕ್ಕ.
ಪ್ರಶ್ನೆಯ ಅರ್ಥ ಹೊಳೆಯಲು ನಿಮಿಷಗಳು ಬೇಕಾದವು ರಾಜೀವನಿಗೆ.
"ಗೂಳಮಾವ!  ನಮ್ಮಕ್ಕನ ಗಾಡಿ ಇದು.  ಅವಳು ಮತ್ತು ನನ್ನ ಹೊರತಾಗಿ ಇದನ್ನ ಬೇರೆ ಯಾರೂ ಮುಟ್ಟೋದಿಲ್ಲ."  ಆತುರಾತುರವಾಗಿ ದನಿ ತೆಗೆದ.
ಗೂಳಯ್ಯನ ಮುಖದಲ್ಲಿ ನಸುನಗೆ ಹಾಗೆಯೇ ಉಳಿದಿತ್ತು.  ರಾಜೀವನ ಮುಖದ ಹತ್ತಿರ ತನ್ನ ಮುಖ ತಂದ.
"ಅಂದರೆ ಸುಲೇಖಾರನ್ನ ಕೊಲೆ ಮಾಡಿದ್ದು ನೀನು ಅಥವಾ ನಿಮ್ಮಕ್ಕ ಅಂತ ಅರ್ಥವೇ ಮೊದ್ದುಮಣೀ?"  ಗೂಳಯ್ಯ ಕೇಕೆ ಹಾಕಿ ನಕ್ಕ.
ರಾಜೀವನಿಗೆ ಪರಿಸ್ಥಿತಿ ತೀರಾ ಅನಿರೀಕ್ಷಿತವಾಗಿತ್ತು.  ಏನು ಹೇಳಬೇಕೆಂದು ತಿಳಿಯದ ಮೊದ್ದುಮಣಿಯ ಮುಖ ಹತಾಷೆಯಿಂದ ರಂಜನಾಳತ್ತ ತಿರುಗಿತು.
ಅವಳ ಮುಖದಲ್ಲಿ ಕಂಡೂ ಕಾಣದಂತಹ ನಗೆಯ ಎಳೆ.
ತಲೆ ತಗ್ಗಿಸಿ ನಿಂತಿದ್ದ ಸಿದ್ಧಾರ್ಥನ ಮುಖಭಾವ ತಿಳಿಯುವಂತಿರಲಿಲ್ಲ.  ತನಗೂ ಈ ಮಾತುಗಳಿಗೂ ಯಾವ ಸಂಬಂಧವೂ ಇಲ್ಲ ಎನ್ನುವಂತೆ ನಿಶ್ಚಲವಾಗಿ ನಿಂತಿದ್ದ ಅವನು.
"ಗೂಳಮಾವಾ!"  ರಾಜೀವ ಗೋಗರೆಯುವ ದನಿ ಎಳೆದ.
ಗೂಳಯ್ಯನ ನಗೆ ದೊಡ್ಡದಾಯಿತು.
"ಹೆದರಿಬಿಟ್ಟೆಯಾ ಮೊದ್ದುಮಣೀ?"  ಮೃದುದನಿಯಲ್ಲಿ ಕೇಳಿ ಒಂದು ಹೆಜ್ಜೆ ಹಿಂದೆ ಸರಿದ.  ಹುಡುಗಾಟವೆಂಬಂತೆ ಇಟ್ಟಿಗೆ ಹಾಸಿನ ಮೇಲೆ ಬಿದ್ದಿದ್ದ ಮೊನಚು ಅಂಚಿನ ಪುಟ್ಟ ಚಪ್ಪಟೆಯಾಕಾರದ ಕಲ್ಲನ್ನು ಬೂಟಿನ ತುದಿಯಿಂದ ಮೇಲಕ್ಕೆ ಚಿಮ್ಮಿಸಿದ.
ಮೇಲಕ್ಕೆ ಎಗರಿದ ಕಲ್ಲು ಬಲಕ್ಕೆ ತುಸು ಹೊರಳಿ ಬಾಣದಂತೆ ಚಿಮ್ಮಿ ರಂಜನಾಳ ಎಡತೋಳನ್ನು ಘರ್ಷಿಸಿ ಸಶಬ್ಧವಾಗಿ ಕೆಳಗೆ ಬಿತ್ತು.
ರಂಜನಾ ನೋವಿನಿಂದ ಚೀತ್ಕರಿಸಿದಳು.  ರಾಜೀವ ಬೆರಗಾಗಿ ನೋಡುತ್ತಿದ್ದಂತೇ ಕಲ್ಲು ತಾಗಿದ ಸ್ಥಳದಲ್ಲಿ ರಕ್ತ ಜಿನುಗತೊಡಗಿತು.
ಅವನಿಗೆ ಅದು ಮತ್ತೊಂದು ಆಘಾತ.  ಸಿದ್ಧಾರ್ಥನತ್ತ ನೋಡಿದ.  ಅವನದು ಅದೇ ನಿಶ್ಚಲತೆ.
ಗೂಳಯ್ಯನ ಮುಖದಲ್ಲಿ ತಪ್ಪಿತಸ್ಥ ಭಾವ.
"ಸಾರೀ... ಸಾರೀ ಮೇಡಂ.  ಏನೋ ಹುಡುಗಾಟಕ್ಕೆ ಅಂತ..."  ಮಾತು ನಿಲ್ಲಿಸಿ ಸರ್ರನೆ ಅವಳ ಪಕ್ಕ ಸರಿದ.  ಜೇಬಿನಿಂದ ಕರವಸ್ತ್ರ ಹೊರತೆಗೆದು ರಕ್ತ ಜಿನುಗುತ್ತಿದೆಡೆ ಒತ್ತಿದ.  ಎಡಗೈ ಮುಂದೆ ತಂದು ಅವಳ ಭುಜ ನೇವರಿಸಿದ.  "ಸಾರೀ ಸಾರೀ" ಎಂದು ಮೆಲುದನಿಯಲ್ಲಿ ಕ್ಷಮೆ ಯಾಚಿಸಿದ.
"ತೆಗೀರಿ ಕೈನ ಅವಳ ಮೈಮೇಲಿಂದ."  ಥಟ್ಟನೆ ಜೀವ ಸಂಚಾರವಾದವನಂತೆ ಸಿದ್ಧಾರ್ಥ ಧಾವಿಸಿ ಬಂದ.  ರಂಜನಾಳ ಭುಜದ ಮೇಲಿದ್ದ ಗೂಳಯ್ಯನ ಕೈಯನ್ನು ರಭಸದಿಂದ ಕಿತ್ತೊಗೆದ.  ಗಾಯದ ಮೇಲೆ ಕರವಸ್ತ್ರ ಒತ್ತಿದ್ದ ಬಲಗೈಯನ್ನು ಗೂಳಯ್ಯ ತಾನಾಗಿಯೇ ತೆಗೆದ.  ಸಿದ್ಧಾರ್ಥನತ್ತ ನೇರವಾಗಿ ನೋಡಿ ಮೆಲ್ಲಗೆ "ಸಾರೀ ಸಾರೀ" ಅಂದ.
"ಹೊರಟ್ಹೋಗಿ ಇಲ್ಲಿಂದ."  ಸಿದ್ಧಾರ್ಥ ಅಬ್ಬರಿಸಿದ.
"ಕೂಲ್ ಡೌನ್ ಭಾವ.  ನಂಗೆ ನೋವು ಮಾಡಿದ ಬಗ್ಗೆ ಅವರಿಗೆ ಪಶ್ಚಾತ್ತಾಪ ಆಗಿದೆ.  ಬೇಕು ಅಂತೇನೂ ಮಾಡ್ಲಿಲ್ಲ ಅವರು."  ರಂಜನಾ ಭಾವನನ್ನು ಸಮಾಧಾನಿಸಲು ಪ್ರಯತ್ನಿಸಿದಳು.  ಗೂಳಯ್ಯ "ಸಾರೀ ಸಾರೀ" ಅನ್ನುತ್ತಲೇ ಇದ್ದ.  ಸಿದ್ಧಾರ್ಥ ಅವನತ್ತ ಮತ್ತೊಮ್ಮೆ ಉರಿನೋಟ ಬೀರಿ ನಾದಿನಿಯ ಭುಜ ಹಿಡಿದು ಮನೆಯೊಳಗೆ ಕರೆದೊಯ್ದ.
ರೂಪಾಯಿಯಷ್ಟು ಅಗಲಕ್ಕೆ ರಕ್ತ ದಟ್ಟವಾಗಿ ಅಂಟಿದ್ದ ಕರವಸ್ತ್ರವನ್ನು ನಿಧಾನವಾಗಿ ಮಡಿಸಿ ಜೇಬಿಗೆ ಸೇರಿಸಿದ ಗೂಳಯ್ಯ.  ರಾಜೀವನತ್ತ ತಿರುಗಿಯೂ ನೋಡದೇ ತನ್ನ ವಾಹನದತ್ತ ವೇಗವಾಗಿ ಹೆಜ್ಜೆ ಹಾಕಿದ.

*     *     *

ತನ್ನಕ್ಕ ಬಳೆಗಳನ್ನು ಸಿದ್ಧಾರ್ಥನ ಮನೆಯ ಕಿಚನ್‌ನಲ್ಲಿ ಬಿಟ್ಟುಬಂದಿದ್ದ ವಿಷಯವನ್ನು ಎಸ್ ಐ ಬಿಳಿಗಿರಿಗೆ ವಿವರವಾಗಿ ಹೇಳಿದ ರಾಜೀವ.  ಮರೆಯುವುದು ಅವಳಿಗೆ ಸಾಮಾನ್ಯ ಎಂದು ಒತ್ತಿ ಹೇಳಿದ.  ಅವಳು ಕಿಚನ್‌ನಲ್ಲಿ ಬಿಟ್ಟು ಬಂದಿದ್ದ ಬಳೆಗಳನ್ನು ಯಾರೋ ಬೆಡ್‌ರೂಂಗೆ ಸಾಗಿಸಿದ್ದಾರೆ ಎಂದು ಹೇಳಿ ಮಾತು ಮುಗಿಸಿದ.
ಮುಖದಲ್ಲಿ ಯಾವ ಪ್ರತಿಕ್ರಿಯೆಯನ್ನೂ ತೋರದೇ ಎಲ್ಲವನ್ನೂ ಮೌನವಾಗಿ ಆಲಿಸಿದ ಬಿಳಿಗಿರಿ ರಾಜೀವನ ಮುಖವನ್ನೇ ನೇರವಾಗಿ ನೋಡಿದ.
ಇಬ್ಬರ ನಡುವೆ ನಿಮಿಷಗಳವರೆಗೆ ಮೌನ ಆವರಿಸಿತು.  ರಾಜೀವ ಹೇಳಬೇಕಾದುದನ್ನೆಲ್ಲಾ ಹೇಳಿದ್ದ.  ಅಧಿಕಾರಿಯ ಪ್ರತಿಕ್ರಿಯೆಗಾಗಿ ಕಾತರದಿಂದ ಕಾದ.  ಬಿಳಿಗಿರಿ ಮೌನ ಮುರಿಯಲಿಲ್ಲ.
ಹೊರಗೆ ಏಕಾ‌ಏಕಿ ಗಲಾಟೆ ಕೇಳಿಬಂತು.  ಹೆಂಗಸಿನ ಜೋರು ಅಳು ಕಿವಿಗಳನ್ನು ಇರಿಯಿತು.  ಬಿಳಿಗಿರಿ ಸರಕ್ಕನೆದ್ದು ಹೊರನಡೆದ.
ಒಂಟಿಯಾಗಿ ಕುಳಿತ ರಾಜೀವ ಕುರ್ಚಿಯಲ್ಲಿ ಮಿಸುಕಾಡಿದ.  ನಿಮಿಷಗಳು ಧೀರ್ಘವೆನಿಸಿದವು.
ಹತ್ತು ನಿಮಿಷಗಳ ನಂತರ ಒಳಬಂದ ಪೇದೆ ಗೊರಗುದನಿಯಲ್ಲಿ ಹೇಳಿದ:
"ಸಾಹೇಬ್ರು ಹೊರಗೆ ಹೋದ್ರು.  ಬರೋದಿಕ್ಕೆ ಒಂದು ಗಂಟೆ ಹಿಡೀಬೋದು.  ನಿಮಗೆ ಬೇರೇನೂ ಕೆಲಸ ಇಲ್ಲದೇ ಇದ್ರೆ ಕಾಯಬೋದು.  ಇಲ್ಲಾ ಅಂದ್ರೆ ನಾಳೆ ಬಂದು ನೋಡಿ.  ಹಾಗಂತ ನಿಮಗೆ ತಿಳಿಸೋದಿಕ್ಕೆ ಹೇಳಿದ್ರು."
"ಇಲ್ಲೇ ಕಾಯ್ತೀನಿ."  ಚುಟುಕಾಗಿ ಹೇಳಿದ ರಾಜೀವ.
ಬಿಳಿಗಿರಿಗಾಗಿ ಕಾದು ಅವನ ಬಾಯಿಂದ ಮೂರು ಮಾತು ಕೇಳುವುದಕ್ಕಿಂತಾ ಮುಖ್ಯವಾದ ಕೆಲಸ ಅವನಿಗೆ ಯಾವುದೂ ಇರಲಿಲ್ಲ.
ಪೇದೆ ಹೊರಟುಹೋದ.
ರಾಜೀವ ಎಡಬಲ ತಿರುಗಿದ.  ಮೇಲೆ ಕೆಳಗೆ ನೋಡಿದ.  ಟೇಬಲ್ ಮೇಲೆ ಅಧಿಕಾರಿ ತೆರೆದಿಟ್ಟಿದ್ದ ಪುಸ್ತಕ ಕಣ್ಣು ಸೆಳೆಯಿತು.  ಮುಂದೆ ಬಾಗಿ ನೋಡಿದ.
ಆಕರ್ಷಕ ಹೆಣ್ಣುಬರಹ!
ಅತ್ತಿತ್ತ ನೋಡಿ ಪುಸ್ತಕವನ್ನು ಮೆಲ್ಲಗೆ ತನ್ನೆಡೆ ಎಳೆದುಕೊಂಡು ಬರಹದ ಮೇಲೆ ಕಣ್ಣಾಡಿಸಿದ.  ಕಣ್ಣುಗಳು ಕಿರಿದುಗೊಂಡವು.
ಕೊಲೆಗೀಡಾದ ಸುಲೇಖಾಳ ಡೈರಿ!
ಒಂದು ಕಡೆ ಕಣ್ಣಿಗೆ ರಾಚಿದ ತನ್ನಕ್ಕನ ಹೆಸರು!
ಕುತೂಹಲಕ್ಕೆ ಸೋತ.
ಸುಲೇಖಾಳ ಡೈರಿ ಕ್ರಮಬದ್ಧವಾಗಿರಲಿಲ್ಲ.  ಎಲ್ಲೋ ಒಂದೊಂದು ದಿನ ಬರೆದಿದ್ದಳು.  ಜನವರಿ ಒಂದರಿಂದ ಅವಳು ಕೊಲೆಯಾದ ಮಾರ್ಚ್ ಹದಿನೆಂಟರವರೆಗೆ ಅವಳು ಡೈರಿ ಬರೆದಿದ್ದುದು ಕೇವಲ ಏಳೆಂಟು ದಿನಗಳು ಮಾತ್ರ.  ಖಾಲೀ ಪುಟಗಳೇ ಅಧಿಕ.
ಬಾಗಿಲತ್ತ ಒಮ್ಮೆ ನೋಡಿ ಆತುರಾತುರವಾಗಿ ಬರಹದ ಮೇಲೆ ಕಣ್ಣಾಡಿಸಿದ.
ಜನವರಿ ೧೨
...ಇತ್ತೀಚೆಗೆ ಇವರ ವರ್ತನೆ ಬದಲಾಗುತ್ತಿದೆಯೆನಿಸುತ್ತಿದೆ.  ನನ್ನ ಬಗ್ಗೆ ಮೊದಲಿನ ಆಸಕ್ತಿ ಇಲ್ಲ.  ಇವರಿಗೆ ಬೇರೊಂದು ಹೆಣ್ಣಿನ ಮೇಲೆ ಗಮನ ಹರಿದಿರಬಹುದೇ?  ಯೋಚಿಸಿದಷ್ಟೂ ನನಗೆ ತಲೆ ಸಿಡಿದಂತಾಗುತ್ತದೆ...  ಸಂಜೆ ಅಮ್ಮ ಬಂದಿದ್ದಳು...
ಜನವರಿ ೩೧
...ನನ್ನ ಅನುಮಾನ ನಿಜವೆನಿಸುತ್ತದೆ... ಇಂದು ಇವರ ಶರಟಿನ ಜೇಬಿನಲ್ಲಿ ಒಂದು ನೀಲೀ ಬಿಂದಿ ಕಂಡೆ.  ನನ್ನದಲ್ಲ ಅದು.  ಯಾರೋ ಬೇರೊಂದು ಹೆಣ್ಣಿನ ಹಣೆಯಿಂದ ಉದುರಿರಬೇಕು...  ಬಹುಷಃ ಅವಳು ಇವರ ಎದೆಗೊರಗಿದ್ದಾಗ?...  ನಾನು ಮೋಸಕ್ಕೊಳಗಾಗುತ್ತಿದ್ದೇನೆಯೇ?
ಫೆಬ್ರವರಿ ೧
...ಯಾರಿರಬಹುದು ಇವರ ಪ್ರೇಯಸಿ?  ಸಹೋದ್ಯೋಗಿ ನಾಗರತ್ನ?  ಕಳೆದ ತಿಂಗಳು ಇವರಿಗೆ ಆರೋಗ್ಯ ಸರಿಯಿಲ್ಲದೇ ಒಂದು ವಾರ ಮನೆಯಲ್ಲೇ ಇದ್ದಾಗ ಅವಳು ದಿನವೂ ಮನೆಗೆ ಬಂದಿದ್ದಳು.  ಆಫೀಸ್ ವಿಷಯ ಮಾತಾಡುವ ನೆಪ...  ಅವರಿಬ್ಬರನ್ನೂ ಒಟ್ಟಾಗಿ ಒಂದೆರಡು ಕಡೆ ನೋಡಿದೆ ಎಂದು ಗೆಳತಿ ಅನಿತಾ ಮೊನ್ನೆ ಹೇಳಿದ್ದಳು.  ಇವರನ್ನು ಕೇಳಿದರೆ ನಿನ್ನದು ಹುಚ್ಚು ಕಲ್ಪನೆ ಎಂದು ಹೇಳಿ ನಕ್ಕುಬಿಟ್ಟರು...  ನನಗೆ ಸಂಶಯ ಬಲಿಯುತ್ತಿದೆ.  ಪಕ್ಕದ ಮನೆಯ ಇಂದುಮತಿಯ ಮೇಲೂ ನನಗೆ ಅನುಮಾನ.  ಅವಳ ಗಂಡ ಬಿಸಿನೆಸ್ ಟೂರ್ ಎಂದು ತಿಂಗಳಿಗೆ ಇಪ್ಪತ್ತು ದಿನ ಮನೆಯಲ್ಲಿರುವುದೇ ಇಲ್ಲ...  ಅವಳ ಕಣ್ಣುಗಳಲ್ಲಿ ಹಸಿವೆಯಿದೆ...  ಇವರ ಜತೆ ಮಾತಾಡುವಾಗ ಅದೇನು ನಗೆ!  ಇವರಿಗೆ ನನ್ನ ಕೈನ ಅಡಿಗೆಗಿಂತಾ ಅವಳು ಮಾಡಿದ್ದೇ ಹೆಚ್ಚು ರುಚಿ.  ಅವಳ ಕಿಚನ್‌ನಲ್ಲಿ ಅವಳ ಪಕ್ಕ ನಿಂತು ಅವಳೊಂದಿಗೆ ಹರಟುತ್ತಾ ಅವಳು ಕೊಟ್ಟ ಕಾಫಿ ಕುಡಿಯುತ್ತಾರೆ... ಇಬ್ಬರೂ ಮಾತಿಗೆ ನಿಂತರೆ ನನ್ನ ಪರಿವೆಯೇ ಇರುವುದಿಲ್ಲ...
ಫೆಬ್ರವರಿ ೮
....ನನ್ನ ಮನದ ಗೊಂದಲವನ್ನು ಯಾರಿಗೆ ಹೇಳಲಿ?  ನಾ ಹೇಳದಿದ್ದರೂ ಅನಿತಾಗೆ ಅದು ತಿಳಿದಂತಿದೆ...  ಇಂದು ರಂಜನಾ ದಿನಪೂರ್ತಿ ನನ್ನೊಂದಿಗಿದ್ದಳು.  `ನಿನ್ನ ಮನದಲ್ಲೇನೋ ಇರುವ ಹಾಗಿದೆಯಲ್ಲಕ್ಕಾ' ಎಂದು ಕಕ್ಕುಲತೆಯಿಂದ ಕೇಳಿದಳು.  ನಾಲಿಗೆಯ ತುದಿಯವರೆಗೆ ಬಂದ ಮಾತನ್ನು ಹೇಳದೇ ತಡೆದೆ...  ಇವರ ಬಗ್ಗೆ ಅವಳಿಗೆ ಅನನ್ಯ ಗೌರವ, ಅಗಾಧ ಅಭಿಮಾನ...  ಅದು ಹಾಗೇ ಉಳಿಯಲಿ...  ನನ್ನೊಳಗಿನ ನೋವನ್ನು ನನ್ನಲ್ಲೇ ಇಟ್ಟುಕೊಳ್ಳುತ್ತೇನೆ...
ಫೆಬ್ರವರಿ ೨೫
ನಿನ್ನೆ ನಾನು ಗೆಳತಿಯರ ಜತೆ ನಾಗರಹೊಳೆಗೆ ಹೋಗಿದ್ದೆ.  ಇಂದು ಬೆಳಿಗ್ಗೆ ಮನೆಗೆ ಹಿಂತಿರುಗಿದಾಗ ನಿನ್ನೆ ರಾತ್ರಿ ಇಲ್ಲಿ ಬೇರೊಬ್ಬಳು ಹೆಣ್ಣು ಇದ್ದಳು ಎಂದು ನನ್ನ ಒಳಮನಸ್ಸಿಗೆ ಅನಿಸತೊಡಗಿತು...