ಇಶಾದ್ರಿಯ ಚುಟುಕುಗಳು

ಹಿಂಸೆ ಇಲ್ಲದ ಜಾಗ

ಅರಳಬೇಕು ಆನಂದದಲ್ಲಿ ಮೊಗ
ಸಂತೋಷದಲ್ಲಿ ಕುಣಿಯಬೇಕು ಈ ಜಗ
ಪರಿವರ್ತನೆಯಾದರೆ ಹಿಂಸೆಯ ಮನ
ಎಷ್ಟೊಂದು ಚೆಂದ, ವರ್ತಮಾನಗಳ ದಿನ

ಭಿಕ್ಷುಕರಿಗೆ

ಕೈ ಕಾಲು ಇರುವಾಗ ಗಟ್ಟಿ
ಏಕೆ ಬೇಕು ಇನ್ನೊಬ್ಬರ ರೊಟ್ಟಿ
ಹಂಗು ಬಿಟ್ಟು ಪಡುವುದಾದರೆ ಹೆಮ್ಮೆ
ಬೆವರು ಸುರಿಸಿ ನೋಡಿ ಒಮ್ಮೆ

ದುಬೈ ಬಾಡಿಗೆ

ಸುಂದರ ನಗರ ಸುಂದರ ಬದುಕು
ಆಶಿಸಿ ಬರುತ್ತಾರೆ ದುಬೈಗೆ
ದೂರದ ಬೆಟ್ಟ ನುಣ್ಣಗೆ ಎನ್ನುವುದು ಸತ್ಯ
ನೋಡಿದ ಕೂಡಲೇ ಈ ನಗರದ ಬಾಡಿಗೆ

ಸಂಚಿಕೆ 30 ,ಮೇ ೧೬ ೨೦೦೮

ಅಮ್ಮನ ಋಣ
ಇದ್ದರೂ ಖಾತೆಯಲ್ಲಿ ರೂಪಾಯಿ ಕೋಟಿ
ಆಗದೆಂದೂ ಅಮ್ಮನ ಪ್ರೀತಿಗೆ ಸರಿಸಾಟಿ
ಸುರಿದರೂ ಅವಳ ಪಾದಗಳಿಗಷ್ಟೂ ಹಣ
ತೀರಿಸಲಾರೆ ಎದೆಯ ಹಾಲಿನ ಋಣ
ವಿನಾಶದ ವಿಷ
ಸೋತಿದ್ದಾನೆ ಎಳೆಯದೆ ಸಂಸಾರದ ನೊಗ
ಮದ್ಯಪಾನ ಕೊಟ್ಟಿದೆ ಬಾಳಿಗೆ ದಗಾ
ನೀವೇ ಹೇಳಿ ಈ ಚಟಕ್ಕೆ ಬಿದ್ದು
ಯಾರು ಬಂದಿದ್ದಾರೆ ಗೆದ್ದು?
ವರದಕ್ಷಿಣೆ ಪ್ರಿಯೆ
ಮಗನ ತಲೆಯಾಯಿತು ಬೋಳು
ಅಮ್ಮನ ಗೋಳೇ ಗೋಳು
ದುಃಖ ಮರೆಸಲು ತನ್ನ ಕೈಗೆ ಪೆಗ್ಗು
ಮಗನ ತಲೆಗೆ ಹೊಸಾ ವಿಗ್ಗು

ಸಂಚಿಕೆ 29 ಮೇ 9 2008

ಸಂಬಂಧ
ಇದ್ದರೂ ಒಂದೇ ಸೂರಿನ ಕೆಳಗೆ
ಶಾಂತಿ-ನೆಮ್ಮದಿಯಿಲ್ಲ ಮನೆಯೊಳಗೆ
ಒಡಹುಟ್ಟಿದವರೇ ಹಾಕೊಕೊಂಡಾಗ ಗಂಟುಮುಖ
ಎಲ್ಲಿ ಹುಡುಕಿದರೂ ಸಿಗದು ಮನದ ಸುಖ
ಯೋಗ್ಯ ನಾಯಕ
ಸ್ವಾರ್ಥವೇ ಆಗಿರುವಾಗ ಕಾಯಕ
ಯಾರಿದ್ದಾರೆ ಆರಿಸಲು ಯೋಗ್ಯ ನಾಯಕ?
ಕೊನೆಗೆ ದೊರಕಿಸಿಕೊಟ್ಟರೂ ಮಂತ್ರಿಪಟ್ಟ
ತುಂಬಿಕೊಳ್ಳುತ್ತಾರೆ ಬ್ರಷ್ಟಾಚಾರ ಮೂಗಿನ ಮಟ್ಟ
ದಾಂಪತ್ಯ
ಎಷ್ಟೇ ಇರಲಿ ಜಗಳ ಕಿಟಿಪಿಟಿ
ಅಪ್ಪುಗೆಯಲ್ಲಿ ಸಿಕ್ಕರೆ ಇಬ್ಬರ ತುಟಿ
ಮುಗಿಯಿತು ಕೋಪ, ಅರಳಿತು ಒಲವು
ಪ್ರೇಮಕ್ಕೆ ಮೂಡಿತು ಹೊಸ ಗೆಲುವು.

ಸಂಚಿಕೆ ೧, ೨ ನವೆಂಬರ್ ೨೦೦೭

ನಮ್ಮ ಕನ್ನಡ

ಹಬ್ಬಿಕೊಂಡು ನೆರೆಕರೆಯ ದಾಳಿ
ನಮ್ಮ ಕನ್ನಡವಾಗಿದೆ ದಿವಾಳಿ
ಎನ್ನಡ ಎಕ್ಕಡಗಳ ಗಲಾಟೆಯ ಮಧ್ಯೆ
ನಮಗಂತೂ ಸೊಗಸಾದ ನಿದ್ದೆ

ಮೌಲ್ಯ

ಯಾವುದೇ ಇರಲಿ ಜನಾಂಗ ರಾಷ್ಟ್ರ
ಮಾನವೀಯತೆಯೇ ಸರ್ವ ಶ್ರೇಷ್ಠ
ಬೆಳಗುತ್ತಾ ಹೋದಂತೆ ಅದರ ದೀಪ
ಕರಗಿ ಹೋಗುವುದು ಅಶಾಂತಿಯ ಶಾಪ

ಅಜ್ಜಿ ಕಥೆಗಳು

ಅಜ್ಜಿಗೆ ಆವರಿಸಿದರೂ ಮುದಿತನ
ಆಕೆಯ ಕಥೆಗಳಲ್ಲಿತ್ತು ಸದಾ ಹೊಸತನ
ಇಂದು ಟಿವಿ ಧಾರಾಹಾವಿಗಳ ಸುಗ್ಗಿ
ಅವಳ ಉತ್ಸಾಹವೂ ಹೋಗಿದೆ ಕುಗ್ಗಿ

ಸಂಚಿಕೆ ೧೦, ೦೪ ಜನವರಿ ೨೦೦೮

ಹೊಸ ವರುಷ

ಸಂತೋಷವೇ ಬರಲಿ ಸಾಲು ಸಾಲು
ಇನ್ನೊಬ್ಬರ ತಂಟೆಗೆ ಬೇಡ ನಮ್ಮ ಕಾಲು
ಬಯಸುವ ಎಲ್ಲರ ಸುಖ ನೆಮ್ಮದಿ
ಸಾಧನೆಯಲ್ಲಿ ತರುವ ದೇಶದ ಅಭಿವೃದ್ಧಿ

ಶವಮಂಚ ಹೇಳಿದ್ದು

ಸಾಮ್ರಾಟ ಗೆಲ್ಲಲು ಹೊರಟಾಗ ಪ್ರಪಂಚ
ಎದುರಾಯಿತು ಸಾಗುತ್ತಿರುವ ಶವಮಂಚ
ಅಣಕಿಸಿ ಹೇಳಿತು - ನಿನ್ನ ಬುದ್ಧಿಗೆ ಗ್ರಹಣ
ಶಾಶ್ವತವಲ್ಲ ಕಿರೀಟ, ಕಾದಿದೆ ನಿನಗೂ ಮರಣ

ದುಬೈಯಲ್ಲಿ...

ದೂರದ ಮಂದಿಗೆ ಇಲ್ಲಿ "ಸ್ವರ್ಗವಾಸ"
ಬಲ್ಲವರಿಗೇ ಗೊತ್ತು ಇದರ ಸಹವಾಸ
ಕಂಡರೆ ಸಾಕು ಏರುತ್ತಿರುವ ಬಾಡಿಗೆ
ಮರಳಿ ಹೋಗುವ ಅನಿಸುತ್ತಿದೆ ನಾಡಿಗೆ

ಸಂಚಿಕೆ ೧೧, ಜನವರಿ ೧೧, ೨೦೦೮

ಧರ್ಮ ಮತ್ತು ಅಧರ್ಮ

ಬರಿಗೈಯಲ್ಲಿ ಅದು ಬೆಂಕಿಯ ರೂಪ
ಹಣತೆಯಲ್ಲಿಟ್ಟರೆ ಮಿನುಗುವ ದೀಪ
ಧರ್ಮವೂ ಹಾಗೆಯೇ ಶಾಂತಿಯ ಜ್ಯೋತಿ
ಇಲ್ಲವಾದರೆ ದೊಂದಿ ಹಿಡಿದ ಕೋತಿ

ಅಭ್ಯಾಸ ಬಲ

ಗೊತ್ತಿದ್ದೂ ಈ ಪುಢಾರಿಯು ಫಟಿಂಗ
ಆರಿಸಿ ಕಳಿಸುತ್ತೇವೆ ರಾಜಕೀಯ ರಂಗ
ಸುಳ್ಳು ಆಶ್ವಾಸನೆಗಳು ಕೇಳಿ ನಮಗೂ ಅಭ್ಯಾಸ
ತಿಳಿದೂ ಬಿಡಲಾರೆವು ಇವರ ಸಹವಾಸ

ಪ್ರೀತಿ ಬೆಳೆದಾಗ

ಆರಂಭಕ್ಕೆ ಸಾಕು ಪರಸ್ಪರ ನೋಟ
ನಂತರ ಆಡಬಹುದು ಪ್ರೀತಿಯ ಆಟ
ಪಾಲಿಸಬೇಕು ಎಚ್ಚರಿಕೆಯ ಸೂತ್ರ
ಇಲ್ಲಿದಿದ್ದರೆ ಕಷ್ಟ ಹೊಟ್ಟೆಯ ಗಾತ್ರ

ಸಂಚಿಕೆ ೧೨, ಜನವರಿ ೧೮, ೨೦೦೮

ಮೂರು ವರ್ಷ

ಬರೆದೆ ಪ್ರತಿವಾರ ಚುಟುಕುಗಳ ಸಾಲು
ಇದೀಗ ಮೂರುವರ್ಷ, ಬರಲಿಲ್ಲ ಸೋಲು
ನಿಮ್ಮ ಓದುವ ಪ್ರೀತಿಯೇ ನನ್ನ ಬಲ
ಕಡಿಮೆಯಾಗದು ಬರೆಯುವ ಛಲ

ಮಳೆ ಬಂದಾಗ

ಮಳೆಯಲ್ಲಿ ಹುಟ್ಟಿದ ಆ ಪ್ರೇಮ ಸಾಗಿದರೂ ದೂರ
ಏಕೋ ಅಗಲಿ ಹೃದಯವಾಯಿತು ಭಾರ
ಪ್ರತಿ ಮೊದಲ ಮಳೆಗೂ ನನಗೆ ಭೀತಿ
ಕಾಡುತ್ತದೆ ಸತ್ತುಹೋದ ಅವಳ ಪ್ರೀತಿ

ಪರಿಣಾಮ

ತೋರಿಸಿದರೆ ಪ್ರೀತಿಯಲ್ಲಿ ಬೆರಳು
ಮಾಡಿಬಿಡುತ್ತಾರೆ ನಮಗೆ ಮರುಳು
ಉದಾಹರಣೆ : ನಾನು ನಕ್ಕಾಗ ಅವಳೂ ನಕ್ಕಳು
ಪರಿಣಾಮ : ನಮಗೆ ಲಗ್ನವಾಗಿ ಎರಡು ಮಕ್ಕಳು!

ಸಂಚಿಕೆ ೧೩, ಜನವರಿ ೨೫ ೨೦೦೮

ಮಮ್ಮಿಗಳು

ಮಮ್ಮಿಗಳಿಗೆ ಆದರೂ ಶತಮಾನ
ಮಾಡಿಸಲಾಗಲಿಲ್ಲ ಜೀವದಾನ
ವಿಜ್ಞಾನಿ ಅನಿಸಲಿ ಜಾಣ
ಗೆಲ್ಲಿಸಲಾರ ಮರಣ

ಇಂದಿನ ಶಿಕ್ಷಣ

ಪುಸ್ತಕಗಳು ಹೊರಲಾರದ ಮೂಟೆ
ಹೋಮ್ ವರ್ಕು ಎಳೆಯಲಾರದ ರಾಟೆ
ಕಲಿಕೆ ಆಗಿ  ಹೋದರೂ ಶಿಕ್ಷೆ
ಹೆತ್ತವರಿಗೆ ಅಂಕಗಳ ನಿರೀಕ್ಷೆ

ಕಾಲ ಸರಿದಂತೆ

ಸರಿದಂತೆ ಮರಳು ಕಾಲಿನ ಕೆಳಗೆ
ಕ್ಷೀಣಿಸುತ್ತಿದೆ ಆಯಸ್ಸು ನಮ್ಮ ಒಳಗೆ
ಸಂಭ್ರಮದಲ್ಲಿದ್ದೇವೆ ಹುಟ್ಟುಹಬ್ಬದಲ್ಲಿ ನಾವು
ಮುಸಿಮುಸಿ ನಗುತ್ತಿದೆ ಪಕ್ಕದಲ್ಲಿ ಸಾವು

ಸಂಚಿಕೆ ೧೪, ಫೆಬ್ರವರಿ ೦೧, ೨೦೦೮

ದುರಾಶೆ

ನಾಯಿಯೂ ತೋರಿಸುತ್ತದೆ ಋಣ
ಮನುಷ್ಯನಿಗೇ ಕಡಿಮೆ ಈ ಗುಣ
ತಾನು ತಿಂದರೂ ಮನೆಯ ಅನ್ನ
ದುರಾಶೆಯಲ್ಲಿ ಅಲ್ಲಿಗೇ ಹಾಕುತ್ತಾನೆ ಕನ್ನ

ಚಿತ್ರಗಳ ಅದೃಷ್ಟ

ಸುರಿದರೆ ಭರ್ಜರಿ 'ಮುಂಗಾರು ಮಳೆ'
ಇವತ್ತಿನಂತೆ ಬರಬೇಕಾಗಿಲ್ಲ ನಾಳೆ
ಇದ್ದರೂ ಕಥೆ ನಟನೆ ನಿರ್ದೇಶನ
'ಗಾಳಿಪಟ' ಆಗಿಹೋಯಿತು ಪತನ

ನಗು

ಪರ್ವಾಗಿಲ್ಲ ನಗುತ್ತ ಇರಿ ಬಿದ್ದು ಬಿದ್ದು
ನಗು ಹಲವು ಕಾಯಿಲೆಗಳಿಗೆ ಮದ್ದು
ಆದರೆ ನೋಡಿ ಕೊಳ್ಳಿ ಸುತ್ತ ಮುತ್ತ
ಅಂದುಕೊಂಡಾರು ಸರಿಯಾಗಿಲ್ಲ ಚಿತ್ತ

 

ಸಂಚಿಕೆ ೧೫, ೦೮ ಫೆಬ್ರವರಿ ೨೦೦೮

ಮೌಲ್ಯ

ಮೆಟ್ಟಿನಿಂತಾಗ ಪರದೇಶದ ನೆಲೆ
ತಿಳಿಯುವುದು ನಮ್ಮ ದೇಶದ ಬೆಲೆ
ನಮ್ಮವರೂ ಹಾಗೆ, ದೂರವಾದಾಗ ಪ್ರೀತಿ
ಬಳಿಯಲ್ಲಿದ್ದರೆ ಪ್ರತಿಭಾವಂತನೂ ಕೋತಿ

ಮರಳಿ ಬಾ ಬಾಲ್ಯ

ಆ ಅಳು, ಶಾಲೆ, ಹಬ್ಬ ಜಾತ್ರೆ
ಕಣ್ಣುಗಳಲ್ಲಿ ಸದಾ ನೆನಪುಗಳ ಯಾತ್ರೆ
ಯೌವನವೇ ಏಕೆ ಬಾಲ್ಯವನ್ನು ಕೊಂದೆ?
ಕಾಲಚಕ್ರವೇ ನಿಲ್ಲು, ನಡಿ ಒಮ್ಮೆ ಹಿಂದೆ

ಕನಸು ಮತ್ತು ನನ್ನಾಕೆ

ನಾಚಿಕೊಳ್ಳುತ್ತಾರೆ ನನ್ನನ್ನು ಕಂಡು
ಸ್ವಪ್ನದಲ್ಲಿ ಬರುವ ಕನ್ಯೆಯರ ಹಿಂಡು
ಅಪ್ಪಿ ಮುದ್ದಿಸಲು ನನಗೂ ಹೆದರಿಕೆ
ಪಕ್ಕದಲ್ಲಿದ್ದಾಳೆ ನನ್ನವಳು ಹೊಡೆಯುತ್ತ ಗೊರಕೆ

ಸಂಚಿಕೆ ೧೭, ಫೆಬ್ರವರಿ ೨೨, ೨೦೦೮

ಅವರವರ ಭಾಗ್ಯ

ಕೆಲವರಿಗೆ ಕಷ್ಟ ಮೂರು ಹೊತ್ತಿನ ಅನ್ನ
ಇನ್ನು ಕೆಲವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ನಮ್ಮ ಜೊತೆಯಲ್ಲಿಯೇ ಇರುವುದಾದರೂ ಇವರು
ಹಣೆಬರಹದಲ್ಲಿ ಪ್ರತ್ಯೇಕ ಮೊಹರು

ಗಲ್ಫಿನ ಪರಿಸ್ಥಿತಿ

ಅಂದು ಸಂಪಾದಿಸಲು ಇರಲಿಲ್ಲ ಅಡ್ಡಿ
ಈಗ ಸಾಲಕ್ಕೆ ಕಟ್ಟಿ ಸಾಕಾಗಿದೆ ಬಡ್ಡಿ
ಬರಬೇಡಿ ಸ್ವಪ್ನಗಳ ಮೂಟೆ ಹೇರಿಕೊಂಡು
ಪ್ಯಾಂಟು ಕಳಚಿ ಉಳಿಯುವುದು ಬರೇ ಮುಂಡು

ಮರೆಯಾದ ಪ್ರೇಯಸಿಗೆ

ಆಗಿ ಹೋದೆ ಇನ್ನೊಬ್ಬರ ತೋಳಬಂಧಿ
ನನ್ನಂನಂತೂ ಜೀವಂತ ಕೊಂದಿ
ಬಾಳಬೇಕು ದುಃಖದಲ್ಲೂ ನಕ್ಕು
ನೆನಪುಗಳೇ ಉಳಿದಿರುವ ಹಕ್ಕು 

ಸಂಚಿಕೆ ೧೮, ಫೆಬ್ರವರಿ ೨೯, ೨೦೦೮

ಎಲ್ಲರೂ ಉಗ್ರರಲ್ಲ

ಉಗ್ರವಾದಕ್ಕೆ ಕೊಡದಿರಿ ರಕ್ಷೆ
ಯಾರೇ ಆಗಲಿ ಸಿಗಲಿ ಶಿಕ್ಷೆ
ಆದರೆ ಎಲ್ಲರಿಗೂ ಮಾಡದಿರಿ ಬೊಟ್ಟು
ಅದು ತರುವುದು ನೋವು-ಸಿಟ್ಟು

ಮೊದಲ ಬರಹ

ಪತ್ರಿಕೆಯಲಿ ಮೂಡಿದ ಪ್ರಥಮ ಕವನ
ಸಿಕ್ಕಂತೆ ಖುಷಿ, ಮೊದಲ ವೇತನ
ಅದನ್ನು ಓದಿದಷ್ಟೂ ಇನ್ನೂ ಆನಂದ
ಹಳೆಯದಾದಷ್ಟೂ ಹೊಸ ಸುಗಂಧ

ಟ್ರಾಫಿಕ್ ಮತ್ತು ಚುಟುಕುಗಳು

ಹೇಳಬೇಕೇ ನನ್ನ ಚುಟುಕುಗಳಿಗೆ ಪ್ರೇರಣೆ
ಹೆಂಡತಿಯಂತೂ ಖಂಡಿತಾ ಅಲ್ಲ, ದೇವರಾಣೆ
ಆಮೆ ನಡಿಗೆಯಲ್ಲಿ ಸಾಗಿದಾಗ ನನ್ನ ವಾಹನ
ಅಲ್ಲೇ ಹೆರಿಗೆ, ಈ ಚುಟುಕುಗಳ ಜನನ

ಸಂಚಿಕೆ ೧೯, ಮಾರ್ಚ್ ೦೭, ೨೦೦೮

ಗಲಭೆ ಸಂತಾನ

ಹೊಡೆ, ಬಡಿ, ಕೊಲ್ಲು - ಇವರ ಕಾಯಕ
ಬೆಂಬಲಿಸಲು ಅಲ್ಲಲ್ಲಿ ರಾಜಕಾರಣಿ ನಾಯಕ
ತಾಯಿಯಂದಿರೇ, ಕೊಡದಿರಿ ಇಂತಹ ಜನನ
ಈ ಸಂತಾನ ಮಾನವ ಕುಲಕ್ಕೆ ಅಪಮಾನ

ಕನ್ನಡದ ಉಳಿವು

ನಮ್ಮ ಭಾಷೆಗೆ ನಮಗಿರಬೇಕು ಅಭಿಮಾನ
ಇಲ್ಲದೆ ಹೋದರೆ ಕನ್ನಡ ಉಳಿಯುವುದು ಅನುಮಾನ
ಉದ್ಧಾರಕ್ಕೆ ಸಾಲದು ಈ ಭಾಷಣ - ಮುಷ್ಕರ
ಮಕ್ಕಳ ನಾಲಗೆಯಲ್ಲಿರಬೇಕು ಶುದ್ಧ ಉಚ್ಚಾರ

ಪತ್ನಿಯ ಬೆಂಬಲ

ಬಡತನದಲ್ಲಿ ಮಗುಚಿಕೊಂಡರೆ ದೋಣಿ
ಆಸರೆಯಾಗಬೇಕು ಕೈ ಹಿಡಿದ ರಾಣಿ
ಅವಳ ಸ್ಫೂರ್ತಿ ಬೆಂಬಲಕ್ಕೆ ಆನೆಯ ಬಲ
ಮತ್ತೆ ಮತ್ತೆ ಸೋತರೂ ಎದ್ದೇಳುವ ಛಲ

 

ಸಂಚಿಕೆ ೨, ೯ ನವೆಂಬರ್ ೨೦೦೭

ಈ ದೀಪಾವಳಿಗೆ

ಬರಲಿ ಆನಂದ ಕದ ಬಡಿದು
ಸಾಗಲಿ ಸುಖಶಾಂತಿ, ಕೈ ಹಿಡಿದು
ಮುಗಿಯಲಿ ಬಾಳಿನ ಕೊರಗು
ಮೂಡಲಿ ಹಬ್ಬದಲ್ಲಿ ಹೊಸ ಮೆರುಗು

ವಾಸ್ತವ

ನಿಜ, ಬದುಕು ಅನ್ನುವುದು ಸಂತೆ
ಹೇಳಿ ಯಾರಿಗಿಲ್ಲ ಚಿಂತೆ?
ಹೇಳುವುದು ಸುಲಭ ಕಷ್ಟದಲ್ಲೂ ನಕ್ಕು ಬಿಡಿ
ಅಂತಹವರು ಅಪರೂಪ, ಇದ್ದರೆ ಹೆಕ್ಕಿ ಕೊಡಿ

ರಾಜಕಾರಣಿ ಇದ್ದರೆ

ವಾಚಿಸಲು ಕೊಟ್ಟರು ಹತ್ತಾರು ಸಾಲು
ಓದಿದರು ಕವಿಗಳು ತಮ್ಮ ಪಾಲು
ಓರ್ವ ರಾಜಕಾರಣಿಗೂ ನೀಡಿದರು ಅವಕಾಶ
ಮಾಡಿದ ಕವಿಗೋಷ್ಠಿಯ ಸರ್ವನಾಶ

ಸಂಚಿಕೆ ೨೦, ಮಾರ್ಚ್ ೧೪, ೨೦೦೮

ಅಪ್ಪ ಮತ್ತು ವರದಕ್ಷಿಣೆ

ವರದಕ್ಷಿಣೆಯ ಜ್ವಾಲೆ ನಾಲ್ಕು ಸುತ್ತಲು
ಹಿಡಿದು ಸಾಕಾಗಿದೆ ಗಂಡುಹೆತ್ತವರ ಕಾಲು
ನೋಡಲಾರೆ ಪ್ರಾಯ ಮೀರುತ್ತಿರುವ ಹರೆಯ
ಇದ್ದರೆ ಹೇಳಿ ಕುಂಟ ಕುರುಡ ಅಥವಾ ಮುದಿಯ

ಮರಾಠಿಗರು - ಬಿಹಾರಿಗಳು

ಎಲ್ಲಿ ಹೋಯಿತು ಶಾಂತಿಯ ತೋಟ
ತಾಳಲಾರದೆ ಓಡಿದರು ಮರಾಠಿಗರ ಕಾಟ
ಕಷ್ಟ ಪಡುವ ಮಂದಿಯ ಬೆನ್ನಿಗೆ ಗುದ್ದು
ಹಣ ಸುರಿಯುವವರಿಗೆ ಬರಸೆಳೆದು ಮುದ್ದು

ಒಲಿಸಿಕೊಳ್ಳಬೇಕಾದರೆ...

ನಿನ್ನಂತೆ ಯಾರೂ ಇಲ್ಲ ಸುರ ಸುಂದರಿ
ಬಿಡು ಕೋಪ ತಂದಿರುವೆ ಚಿಕನ್ ತಂದೂರಿ
ಒಲಿಸಿಕೊಳ್ಳಲು ಬೇಕು ಇಂತಹ ಗಿಮಿಕು
ಇಲ್ಲದಿದ್ದರೆ ತಪ್ಪದು ಮನೆಯಾಕೆಯ ಕಿರಿಕು

 

ಸಂಚಿಕೆ ೨೧, ೧೪ ಮಾರ್ಚ್, ೨೦೦೮

ಗಲ್ಫಿನ ಬ್ರಹ್ಮಚಾರಿ

ಊರಿನ ದುಡಿತಕ್ಕೆ ಬಂತು ಕೊಬ್ಬು
ಇಲ್ಲಿ ಗಾಣಕ್ಕೆ ಸಿಲುಕಿದ ಕಬ್ಬು
ಒಂಟಿ ಬಾಳು,ಜೀವನ ರಸ ಸಪ್ಪೆ
ಖರ್ಚು ಕಳೆದು ಉಳಿಯುವುದು ಬರೇ ಸಿಪ್ಪೆ

ಬಂಡವಾಳಶಾಹಿಗಳು

ಇರುವುದಾದರೆ ತಿಮಿಂಗಿಲಗಳ ಮಧ್ಯೆ
ಮಾಡಬಾರದು ಎಚ್ಚರತಪ್ಪಿ ನಿದ್ದೆ
ನೋಡುವುದಿಲ್ಲ ಇವರು ಪಾಪಪುಣ್ಯದ ಮುಖ
ಹಣದ ಮೇಲೆ ಹಣಮಾಡುವುದೇ ಇವರ ಸುಖ

ಸಲಹೆ

ಸಮಸ್ಯೆಗೆ ಉತ್ತರವಲ್ಲ ಹರಿಯುವ ನೆತ್ತರು
ಹಗೆಯ ಹೃದಯಕ್ಕೆ ಹಚ್ಚಿ ಪ್ರೀತಿಯ ಅತ್ತರು
ಬದಿಗಿಡಿ ಈ ಮಚ್ಚು, ದೊಣ್ಣೆ, ಖಡ್ಗ, ಕತ್ತಿ
ದ್ವೇಷ ಬಿಟ್ಟು ದೇಶ ಕಟ್ಟುವ ಧ್ವನಿ ಎತ್ತಿ

 

ಸಂಚಿಕೆ ೨೨, ೨೮ ಮಾರ್ಚ್, ೨೦೦೮

ರಾಜಕಾರಣಿ

ಕಾಗೆಗೆ ಹೊಲಸೇ ಪ್ರಿಯ
ಅದಕ್ಕೆ ತಿಳಿಯದು ಎಮ್ಮೆಯ ಗಾಯ
ಹೊಟ್ಟೆ ತುಂಬುವುದು ಅದರ ಗುರಿ
ಇದು ರಾಜಕಾರಣಿಯ ಉದಾಹರಣೆಗೆ ಸರಿ

ಪೂರ್ಣ ವಿರಾಮ

ಕೊಟ್ಟರೆ ಪ್ರೀತಿಗೆ ಅಲ್ಪ ವಿರಾಮ
ಹೊರಟುಹೋಗುತ್ತದೆ ಸುಖ ಆರಾಮ
ಹಾಕಿಸಿಕೊಂಡು ಅಕ್ಷತೆಯ ಕಾಳು
ಆರಂಭಿಸಿ ದಾಂಪತ್ಯದ ಹೊಸಬಾಳು

ಅಡುಗೆ ಪತಿ

ಅಂದು ನಿನಗೆ ಹೃದಯವನ್ನು ಕೊಟ್ಟು
ಈಗ ಅರೆಯುತ್ತಿದ್ದೇನೆ ದೋಸೆ ಹಿಟ್ಟು
ತಿಳಿದಿದ್ದರೆ ಈ ರೀತಿಯ ಶಿಕ್ಷೆ
ಕೇಳುತ್ತಿರಲಿಲ್ಲ ಪ್ರೇಮದ ಭಿಕ್ಷೆ

ಸಂಚಿಕೆ ೨೩, ೦೪ ಎಪ್ರಿಲ್, ೨೦೦೮

ಗಲಭೆಯ ದಿನ

ನರಜಾತಿ ನಿನಗೆ ಕಂಡರೆ ದುಷ್ಟ
ಅದು ನಮ್ಮೆಲ್ಲರ ಕುಲಕ್ಕೆ ದುರಾದೃಷ್ಟ
ಯಾವಧರ್ಮವೂ ಬೋಧಿಸಿಲ್ಲ ಕೊಲ್ಲು - ಸುಡು
ಇದು ನಿನ್ನ ಕ್ರೂರತನ, ಸರಿ ಕೊಂದು ಬಿಡು.

ಅಮೆರಿಕಾ ಆಫ್ರಿಕಾ

ಬಿಳಿಯ ನಾರಿಯ ಮಗು ಕಪ್ಪು
ಎಲ್ಲಿ ಆಗಿದೆ ಅನ್ನುತ್ತೀರಾ ತಪ್ಪು?
ಯೌವನದ ಕಾವಿನಲ್ಲಿ ಬೆಂದಾಗ ಕಪ್ಪು ಬಿಳಿ
ಸೃಷ್ಟಿಯಲ್ಲಿ ಸಾಮಾನ್ಯ ಇಂತಹ ತಳಿ

ಅಜ್ಜ ಅಜ್ಜಿ

ಅಜ್ಜ: ಕಣ್ಣಲ್ಲಿ ಕಣ್ಣಿಟ್ಟು ಹೇಳು
ಹೇಗಿತ್ತು ನಾವು ಸವೆದ ಬಾಳು
ಅಜ್ಜಿ: ಇರುವುದಾದರೆ ಜನ್ಮ ಇನ್ನೊಂದು
ವರಿಸಿಕೊಳ್ಳುವೆ ನಿನ್ನನೇ ಬಂದು

ಸಂಚಿಕೆ ೨೪, ೧೧ ಎಪ್ರಿಲ್, ೨೦೦೮

 ಊರಿನ ಮಳೆ

ಋತುಮಾನವಿಲ್ಲದೆ ಸುರಿಯಿತು ಮಳೆ
ನಾಶವಾಯಿತು ಭರವಸೆಯಿಟ್ಟ ಬೆಳೆ
ದೇವನಿಗಿಂತ ವಿಜ್ಞಾನವೇ ಆದರೆ ಮೇಲು
ಎದುರಾಗುವುದು ಇಂತಹ ಸವಾಲು

ಮತಭಿಕ್ಷೆಗೆ

ಆದಂತೆ ಚುನಾವಣೆಯ ಘೋಷಣೆ
ಇನ್ನು ಹಳ್ಳಿ ಹಳ್ಳಿಗೆ ಬರುತ್ತಾರೆ ಪ್ರದಕ್ಷಿಣೆ
ಗೆದ್ದಾಗ ತಿರುಗಿನೋಡಲಿಲ್ಲ ಹಿಂದೆ
ಈಗ -'ಕಾಪಾಡು ಓ ನನ್ನ ತಂದೆ'

ಯುದ್ಧ ಮತ್ತು ಕೈದಿ

ಮುಗಿದ ಬಳಿಕ ಯುದ್ಧ
ತಿಳಿಯುವುದು ಯಾರು ಗೆದ್ದ
ಲಗ್ನವೂ ಹೀಗೇ ಒಂದು ರಣರಂಗ-
ಸೋತರೆ ವಾಸಿ ಇವನಿಗಿಂತ ಮಂಗ!

ಸಂಚಿಕೆ ೨೫, ೧೮ ಎಪ್ರಿಲ್, ೨೦೦೮

ನಮ್ಮ ಭಾರತ

ನಮ್ಮ ಭೂಮಿ ತಾಯಿಗೆ ಸಮಾನ
ಪ್ರಾಣ ಕೊಟ್ಟು ರಕ್ಷಿಸಬಲ್ಲೆವು ಮಾನ
ಮಾತನಾಡದಿರಿ ಆಕೆಯ ಕುರಿತು ಅಗ್ಗ
ನಮ್ಮ ಪಾಲಿಗೆ ಅವಳೇ ಸ್ವರ್ಗ

ಹರೆಯ ಕೈಕೊಟ್ಟಾಗ

ಜಾರುವ ಮೆಟ್ಟಿಲು ಹದಿ ಹರೆಯ
ಬಿದ್ದರೆ ಚೂರಾಗುವುದು ಹೃದಯ
ಇಲ್ಲಿ ಗಾಯದ ಜೊತೆಗೆ ಕೆಸರು
ಊರಿಡೀ ಕೆಟ್ಟು ಹೋದ ಹೆಸರು

ಆತ ಹೇಳಿದ್ದು

ಕೊಟ್ಟುಬಿಡು ಹೃದಯದ ಚಾವಿ
ಬಿಸಾಕಿ ಬಿಡುವೆ ಬ್ರಹ್ಮಚಾರಿಯ ಕಾವಿ
ಸಾಗಿಸುವೆ ನಿನ್ನೊಡನೆ ಸಂಸಾರ ರಥ
ಗೆದ್ದು ತೋರಿಸುವೆ ಪ್ರೇಮ ಪಥ

 

ಸಂಚಿಕೆ ೨೭, ಮೇ೨ ೨೦೦೮

ಶುದ್ಧ ಕನ್ನಡ
ಹಾಡಿ ಕುಣಿಯಿರಿ ವೇದೆಕೆಯ ಮೇಲೆ
ನುಡಿಯುತ್ತಾ ಕನ್ನಡದ ಅಕ್ಷರ ಮಾಲೆ
ಸೇರಿಸಿಕೊಂಡು ಅನ್ಯಭಾಷೆ, ಹಾಕದಿರಿ ಕತ್ತರಿ
ನಮ್ಮ ಕನ್ನಡ ನಿಜಕ್ಕೂ ಕಸ್ತೂರಿ


ಬೇಕು ನೆಮ್ಮದಿ
ಬಡಿದಾಟ, ಬ್ರಷ್ಟಾಚಾರದಲ್ಲಿ ನಿಮಗೆಲ್ಲಿ ಸಮಯ?
ಥೂ-ವಾಕರಿಕೆ ಅನಿಸುತ್ತದೆ ನಿಮ್ಮ ರಾಜಕೀಯ
ಬೇಡ ಈ ಅಕ್ಕಿ, ಟಿವಿ, ಸೈಕಲ್ಲು, ಉದ್ಯೋಗ
ಕೊಡಿ ರಾಜ್ಯದಲ್ಲಿ ನೆಮ್ಮದಿಯಾಗಿ ಬಾಳುವ ಭಾಗ್ಯ


ಗುಟ್ಟು ಗುಟ್ಟಾಗಿರಲಿ
ನಿಮ್ಮ ಹೊಸರುಚಿಗೆ ಬಂದರೂ ಬಹುಮಾನ
ಪತ್ನಿಯ ಅಡುಗೆಗೆ ಬೇಡ ಅಪಮಾನ
ಸಾಧಿಸಿ ತೋರಿಸಲು ಹೋದರಂತೂ ಬಿಡಿ
ಶಾಶ್ವತವೇ ಆದೀತು ಸೌಟಿನ ಹಿಡಿ

ಸಂಚಿಕೆ ೩, ನವೆಂಬರ್ ೧೬ ೨೦೦೭

ಧನ ಪಿಶಾಚಿಗಳು

ಧನ ಹೊಳೆಯಾಗಿ ಹರಿದರೂ ಅತೃಪ್ತ
ಇನ್ನಷ್ಟು ಕೊಡು ಅನ್ನುತ್ತಾನೆ ಭಕ್ತ
ಪ್ರಾಣ ಪಕ್ಷಿ ಹಾರುವ ವರೆಗೆ
ತುಂಬದು ಬಯಕೆಯೆಂಬ ಚರಿಗೆ

ಹೊಸ ಮುಖ್ಯಮಂತ್ರಿಗಳಿಗೆ

ತಿಳಿದಿತ್ತು ರಾಜಕೀಯ ಅನ್ನುವುದು ಕುಬುದ್ಧಿ
ನೀವು ಮಾಡಿದ್ದೀರಿ ಎಲ್ಲೆಡೆ ಸುದ್ದಿ
ಕೊನೆಗೆ ನನಸಾಯಿತಲ್ಲ ಕನಸು
ಇನ್ನಾದರೂ ಅಭಿವೃದ್ಧಿಗೆ ಕೊಡಿ ಮನಸು

ವ್ಯತ್ಯಾಸ

ಪ್ರೇಮಕ್ಕೆ ಕೂಡಿ ಬಂದರೆ ಯೋಗ
ಕಲ್ಯಾಣ ಮಂಟಪ ಏರುತ್ತಾರೆ ಬೇಗ
ಹಿಡಿದರೆ ಪ್ರೀತಿ ಪ್ರೇಮಕ್ಕೆ ಗ್ರಹಣ
ಜಿಗುಪ್ಸೆಯಲ್ಲಿ ಎದುರಾಗುತ್ತದೆ ಮರಣ

ಸಂಚಿಕೆ ೪ ನವೆಂಬರ್ ೨೩ ೨೦೦೭

ಮುರಿದ ಮದುವೆ

ಸುಖವಿಲ್ಲವೆಂದು ಜೊತೆಗೆ ಬಾಳಿ

ಯಡ್ಡಿ ಎಸೆದರು ಕೊರಳ ತಾಳಿ

ಇರುವಾಗ ದೇವೆಗೌಡರೆಂಬ ಪುಢಾರಿ

ಇನ್ನು ಬೇಕೇ ಮೈತ್ರಿಯೆಂಬ ಸವಾರಿ?

 

ಅಂಧ ಸಂಸ್ಕಾರ

ಆತ ಸತ್ತ ಮದ್ದಿಗೂ ಇಲ್ಲದೆ ಗತಿ

ಮಕ್ಕಳು ಮಾಡಿದರು ವೈಭವದ ತಿಥಿ

ವ್ಯಯವಾಗುತ್ತಿದ್ದರೆ ಕಾಯಿಲೆಗೆ ಹಣ

ಬಹುಶಃ ಅಪ್ಪ ಆಗುತ್ತಿರಲಿಲ್ಲ ಹೆಣ

 

ಪ್ರೇಮಿಗೆ

ನನ್ನ ಸೋಲು ಬೀಳು ದುಃಖ

ಕಂಡು ನೀನು ಪಡುವುದಾದರೆ ಸುಖ

ಬರಲಿ ನನಗೆ ಇನ್ನಷ್ಟು ಕಷ್ಟ

ಎಲ್ಲವೂ ಸಹಿಸಲು ನನಗಿಷ್ಟ

ಸಂಚಿಕೆ ೬, ೭ ಡಿಸೆಂಬರ್ ೨೦೦೭

ಮೌಲ್ಯ

ತೊಳೆದರೆ ನೀರಲ್ಲಿ ಮಣ್ಣಿನ ಮೂರ್ತಿ

ಕೆಸರಾಗಿ ಕರಗುವುದು ಪೂರ್ತಿ

ದುರಹಂಕಾರವು ಹೀಗೆ ಏರಿದರೆ ತಲೆ

ಅಧಿಪತಿಗೂ ಭಿಕ್ಷುಕನ ಬೆಲೆ

 

ಬಯಕೆಗಳು

ಆಶೆಗಳ ಎಬ್ಬಿಸಿದರೆ ತಟ್ಟಿ

ಮುಗಿಯದು ಬಯಕೆಗಳ ಪಟ್ಟಿ

ಹಿಗ್ಗಿದಂತೆ ಇದರ ಹಸಿವು

ಇರುವ ಸುಖದಲ್ಲೂ ನೋವು

 

ಪರಿಣಾಮ

ಮೊದಲು ನಯನಗಳ ಭಾಷೆ

ನಂತರ ಮನಕುದಿಯುವ ಆಶೆ

ಉರಿದರೆ ಹೃದಯದ ಜ್ಯೋತಿ

ಮುಂದೆ ಅವಳೇ ಶ್ರೀಮತಿ

ಸಂಚಿಕೆ ೭, ೧೪ ಡಿಸೆಂಬರ್, ೨೦೦೭

ಸಾಹಿತ್ಯ ಸಮ್ಮೇಳನದಲ್ಲಿ

ಏನಿದೆ ಇಲ್ಲಿ ಬಡ ಕವಿಗಳ ಪಾತ್ರ
ಅವರಿಗೆ ಕೇಳಲು ಭಾಷಣಗಳು ಮಾತ್ರ
ಗಮನಿಸುವವರಿಲ್ಲ ಅವರ ಪಾಡು
ದೊರೆತರೆ ಪುಣ್ಯ ಮೊಸರನ್ನ - ಲಾಡು


ಪ್ರತಿಭೆಯ ಬೆಳಕು

ಪ್ರತಿಭೆ ಅನ್ನುವುದು ಬೆಳಕಿನ ಗೂಡು
ಅದರ ಕಿರಣ ಇಡೀ ನಾಡು
ಕೇಳದು ಅದು ಧರ್ಮ ಜಾತಿ
ಹೋದ ಕಡೆ ಅದರದ್ದೇ ಖ್ಯಾತಿ

ಅವಳ ಹೃದಯ

ಬಡಿದಾಗ ಹೃದಯದ ಕದ
ಮನಸ್ಸಿಗೆ ಚಂಚಲ, ಮುದ
ಕೊನೆಗೆ ಆಗಿಬಿಟ್ಟರಂತೂ ಲಗ್ನ
ಸುಂದರ ಸ್ವಪ್ನಗಳಿಗೆ ವಿಘ್ನ!

ಸಂಚಿಕೆ ೮, ಡಿಸೆಂಬರ್ ೨೧, ೨೦೦೭

ಕವಿ ಮತ್ತು ಸಾಲ

ಸಾಲ ಮಾಡಿ ಪ್ರಕಟಿಸಿದರು ನನ್ನ ಪತಿ
ಸಾಹಿತ್ಯ ಸೇವೆಗಾಗಿ ಮೂರು ಕೃತಿ
ಕಾದರು ಬರುವುದೆಂದು ಪ್ರಶಸ್ತಿ ಪುರಸ್ಕಾರ
ಸೋತು ಮಾರಿದ್ದಾರೆ ನನ್ನ ಒಡವೆ ಬಂಗಾರ

ಗಾಂಧೀಜಿ ಹೇಳಿದ್ದು

ನನ್ನ ತತ್ವಗಳಿಗೆ ಕೊಟ್ಟು ಲೇಪನ
ಮಾಡದಿರಿ ಕುರ್ಚಿಯ ಜೋಪಾನ
ಸೇವೆಗಿಂತ ನಿಮ್ಮ ನಾಲಗೆಯೇ ಉದ್ದ
ಸ್ವಾರ್ಥಕ್ಕಾಗಿ ದೇಶವನ್ನೇ ಮಾರಲು ಸಿದ್ಧ

ಅಂದು ಇಂದು

ಅಂದು ನೀನು ಹೂ, ನಾನು ದುಂಬಿ
ಚೆಲ್ಲುತ್ತಿತ್ತು ಪ್ರೀತಿಯು ತುಂಬಿ
ಈಗ ಪ್ರೀತಿಯಂತೂ ಮಾಯ
ತಲೆತುಂಬ ಲಟ್ಟಣಿಗೆ ಗಾಯ

ಸಂಚಿಕೆ ೯, ೨೮ ಡಿಸೆಂಬರ್ ೨೦೦೭

ಅಹಂ ಹತ್ತಿದಾಗ

ಇಣುಕಿನೋಡಿ ಖಾಲಿ ಗೋರಿಯೊಳಗೆ
ಸಾಧ್ಯವಾದರೆ ಮಲಗಿ ಅದರ ಕೆಳಗೆ
ಏನೂ ಅಲ್ಲ ಆವರಿಸಿದರೆ ಮಣ್ಣು
ತೆರೆಯುವುದು ಅಜ್ಞಾನದ ಕಣ್ಣು

ಅನೈತಿಕ ಸಂಬಂಧ

ಇರಬೇಕಾದರೆ ಸಂಸಾರವು ಚಂದ
ಬೇಡ ಇನ್ನೊಂದು ಸಂಬಂಧ
ಇದು ವ್ಯಕ್ತಿತ್ವಕ್ಕೆ ಮಾತ್ರವಲ್ಲ ಧಕ್ಕೆ
ಇಡೀ ಕುಟುಂಬಕ್ಕೆ ಕಪ್ಪು ಚುಕ್ಕೆ

ಮೂಗುದಾರ

ಲಗ್ನದ ಬಳಿಕ ಹಲವು ರೂಪ
ಕೆಲವರ ಅವಸ್ಥೆ ಬರೇ ಪಾಪ
ಅಂದು ಹಾಕಿಸಿಕೊಳ್ಳುವ ಹೂಹಾರ
ಶಾಶ್ವತವಾಗುವುದು ಮೂಗುದಾರ

ಸಂಪುಟ 4 ಸಂಚಿಕೆ 37, ಜೂನ್ 27, 2008

ಅದೃಷ್ಟ ನಂಬಿಕೊಂಡರೆ

ಅದೃಷ್ಟವಲ್ಲ ಸದಾ ಜೊತೆ
ನಂಬಿ ಕೈಕೊಟ್ಟರೆ ಉರಿಸೀತು ಚಿತೆ
ಬೇಡ ಅಂಕೆಗಳಲ್ಲಿ ಭಾಗ್ಯದ ನಿರೀಕ್ಷೆ
ಸಾಗಲಿ ಶ್ರಮ ಪ್ರಯತ್ನದಲ್ಲೇ ಪರೀಕ್ಷೆ


ಸಾವಿನ ಎದುರು

ಎಷ್ಟೇ ಇರಲಿ ಕಾರುಬಾರು
ಸಾವಿನ ಎರುದಲ್ಲ ದರ್ಬಾರು
ನಿಂತು ಕರೆದರೆ ಮಧ್ಯರಾತ್ರಿಯ ವೇಳೆ
ಅನ್ನುವಂತಿಲ್ಲ ಹೋಗು, ಬಾ ನಾಳೆ

ಗುಣ ಮತ್ತು ಶೃಂಗಾರ

ಹಾಕಿಕೊಳ್ಳಲಿ ರಾಶಿ ಬಂಗಾರ
ಮಾಡಿಕೊಳ್ಳಲಿ ಆಧುನಿಕ ಶೃಂಗಾರ
ಬದಲಾಗದಿದ್ದರೆ ಗುಣ ನಡತೆ
ಹೆಣ್ಣನ್ನು ಸುಂದರವೆನ್ನಲು ಏನು ಅರ್ಹತೆ?

ಸಂಪುಟ 4 ಸಂಚಿಕೆ 40 25 ನೇ ಜುಲೈ 2008

ಕವಿಯನ್ನು ಹೊಗಳಿದಾಗ

ಆಲಿಸಿದರೆ ಸಾಕು ವ್ಹಾ ವ್ಹಾ ರಾಗ
ಕವಿಗೆ ಬಂತು ಸ್ಪೂರ್ತಿಯ ರೋಗ
ಸಿಕ್ಕರೆ ಆಯಿತು ಮೆಚ್ಚುವವರ ಸಹವಾಸ
ಹೆಂಡತಿ ಮಕ್ಕಳಂತೂ ಉಪವಾಸ

ಚಿಕುನ್ ಗುನ್ಯಾ

ಮುಗಿಯದು ಕಾಯಿಲೆಗಳ ಜಾತ್ರೆ
ಕೆಲವು ಕಡೆ ಮಸಣಕ್ಕೂ ಯಾತ್ರೆ
ಏನು ಮಾಡಿದರೂ ಬರುವುದಿಲ್ಲ ಹದ್ದುಬಸ್ತು
ಔಷಧಿ ಕೊಟ್ಟು ಕೊಟ್ಟು ಬೈದರೂ ಸುಸ್ತು

ಪ್ರಭಾವ

ತಿಂದು ನೋಡಿ ಅತ್ತೆ ಮಾಡಿದ ಸಾರು
ಹೆಂಡತಿಗಿಂತ ಅದರಲ್ಲಿ ಖಾರ ಜೋರು
ಕೇಳಿ ಗುಟ್ಟು, ತೆಪ್ಪಗೆ ಕುಳಿತ ಮಾವನಲ್ಲಿ
ಹೇಳುತ್ತಾರೆ ನಿಮ್ಮದು ರಾಜ್ಯ ನಮ್ಮದು ದಿಲ್ಲಿ

ಸಂಪುಟ 4, ಸಂಚಿಕೆ 39, ಜುಲೈ 18, 2008

ಪಕ್ಷಾಂತರಿಗಳು

ಬೇಕಿಲ್ಲ ತತ್ವ-ಪಕ್ಷ-ಮತದಾರ
ಅಥವಾ ಮರ್ಯಾದೆಯ ಸಂಸ್ಕಾರ
ಎಸೆದರೆ ನೋಟುಗಳ ಮಾಲೆ
ಕುಣಿಯಲೂ ಸಿದ್ಧ ಬೆತ್ತಲೆ

ಅಪ್ಪ

ತಲೆಯ ಮೇಲಿತ್ತು ಅವನ ನೆರಳು
ದಾರಿ ತೋರಿಸಿತು ಕಿರು ಬೆರಳು
ಮರೆಯುವುದುಂಟೇ ಆತ ಕೊಟ್ಟ ಅನ್ನ-ಅಕ್ಷರ
ಅಪ್ಪನ ಋಣಕ್ಕೆ ಸಾವಿರ ನಮಸ್ಕಾರ

ಆಧುನಿಕ ನಾರಿ

ಯಾರಿಗೂ ಸಾಟಿಯಲ್ಲ ಹಿಂದಿನ ನಾರಿ
ಹೋರಾಡುತ್ತಿದ್ದಳು ಹಿಡಿದು ಖಡ್ಗ ಕಠಾರಿ
ಇಂದಿನ ನಾರಿಯೂ ಸದಾ ಸಿದ್ಧ
ಗಂಡನ ಜೊತೆ ಮಾಡಲು ಯುದ್ಧ

ಸಂಪುಟ 4, ಸಂಚಿಕೆ 42, 8 ಆಗಸ್ಟ್ 2008

ವಿಜಾತಿ ಮದುವೆ

ಜಾತಿ ಬಿಟ್ಟು ಆಗುವುದಾದರೆ ಲಗ್ನ
ಸುಲಭವಲ್ಲ, ಹತ್ತು ಹಲವು ವಿಘ್ನ
ಸುದ್ದಿಯ ಬೆಂಕಿ ಆರುವವರೆಗೆ ತಣ್ಣಗೆ
ನಡೆಯಲೇಬೇಕು ಕೆಂಡಗಳ ಮೇಲೆ ಮೆಲ್ಲಗೆ

ಆ  ಸಿನೇಮಾದಲ್ಲಿ

ಆಕೆ ಹಣ್ಣು ಹಣ್ಣು ಮುದುಕಿ
ತಿಳಿಯದು ಎಲ್ಲಿಂದ ತಂದರು ಹುಡುಕಿ
ನೈಜ ಪ್ರತಿಭೆಗೆದು ದೇವರು ಹಾಕಿದ ಅಚ್ಚು
ಅವಳ ಎದುರು ನಾಯಕಿಯರೇ ಪೆಚ್ಚು

ದುಬೈ ಸೆಖೆ

ಬದ್ಧ ವೈರಿ ಬೈದ ಹಾಗೆ
ಇಲ್ಲಿಯ ಸೆಖೆಯ ಬೇಗೆ
ಸೂರ್ಯನಿಗೆ ತಿಳಿಯದು ಕಷ್ಟ
ನೆತ್ತಿ ಸುಡುವುದೇ ಆತನಿಗೆ ಇಷ್ಟ

ಸಂಪುಟ ೪ ಸಂಚಿಕೆ ೩೮ ಜುಲೈ ೧೧, ೨೦೦೮

ಕೆ.ಎಫ್.ಸಿ. ಕರ್ನಲ್

ಮುಗಿಸಿದಾಗ ಬಾಳಿನ ಅರವತ್ತನೆಯ ಪುಟ
ಹುಟ್ಟಿತು ಜೀವನದಲ್ಲಿ ಸಾಧಿಸುವ ಹಠ
ಅರೆದ ಮಸಾಲೆ, ಮಿಶ್ರಣಗಳನ್ನು ಗುದ್ದಿ
ಕೆಂಟಕಿ ಹೆಸರಿನಲ್ಲೀಗ ಜಗವೆಲ್ಲ ಪ್ರಸಿದ್ಧಿ

ಸಂಕಷ್ಟ ಬಂದಾಗ

ತೀರಿಸಲು ಇದ್ದರೂ ಹರಕೆಗಳು ಹತ್ತು
ಅದಕ್ಕೆ ಬರಲಿಲ್ಲ ಶುಭಘಳಿಗೆಯ ಹೊತ್ತು
ಒಮ್ಮೆ ಇಳಿದ ಬಳಿಕ ಸಂಕಷ್ಟದ ಭಾರ
ಸುಖದಲ್ಲಿ ನೆನಪುಗಳು ಬಲು ದೂರ

ಇ-ಮೇಲು

ಮುರಿದ ಅಕ್ಷರಗಳಲ್ಲಿ ಕೆಲವು ಸಾಲು
ಕ್ಷಣದಲ್ಲಿ ತಲುಪುತ್ತದೆ ಸಾವಿರಾರು ಮೈಲು
ಅಂಚೆಯವನ ಓಲೆಯೆಂದರೆ ಸವಿಬೆಲ್ಲ
ಆ ರುಚಿ ಇಲ್ಲಿ ಕಾಣಿಸುವುದೇ ಇಲ್ಲ